ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಮಧುವಣಗಿತ್ತಿ

ಮುಡಿ ತುಂಬ ಮುಡಿದಿಹಳು ಮೊಗ್ಗು ಹೂಮಾಲೆ/
ಕಿವಿಗಳಲಿ ತೂಗುತಿವೆ ಹೊನ್ನ ಜುಮ್ಕದ ಓಲೆ//
ಮುಂದಲೆಯ ತುಂಬಾ ಹರಳುಗಳ ನೆತ್ತಿಬೊಟ್ಟು/
ನಾಚಿ ಹಿಡಿದಳು ಪದಕದ ಸರವ ಕಾಮನೆಯ ದೃಷ್ಟಿ ನೆಟ್ಟು//
ಜರಿಯ ವಿನ್ಯಾಸದಲಿ ಮೆರುಗಿನ ರವಕೆ/
ಸಿಂಗಾರಿ ಗಲ್ಲದಲಿ ಕಪ್ಪು ದೃಷ್ಟಿಯ ಚುಕ್ಕೆ//
ಮುತ್ತು ಮಣಿಗಳ ನತ್ತು ಏರಿದೆ ಕೆನ್ನೆಗೆ ಮತ್ತು/
ಒನಪುವಯ್ಯಾರದಿ ರಂಗೇರಿದೆ ನಾರಿಯ ಗತ್ತು//
ಗಲ್ಲೆನುತ ಕೈ ಬಳೆಯು ಬೆರಳಲಿ ರತ್ನದುಂಗುರವು/
ಕಾಲ್ಗೆಜ್ಜೆ ಕಾಲುಂಗುರಗಳೆ ಪಾದಗಳಿಗಂದವು//
ವಂಕಿ ಡಾಬಲಿ ಕಣ್ಸೆಳೆವ ಕೆಂಪು ರೇಷ್ಮೆಯ ಸೀರೆ/
ಕುಂಕುಮ ಹೂಹಾರ ಬಂಗಾರದಿ ಸರ್ವಾಲಂಕಾರ ಭೂಷಿತೆ ನೀರೆ//
ಮಧುಮತಿಗೆ ಕಾಸಿನಸರ ವಜ್ರದೊಡವೆಗಳ ಓರಣ/
ಲಾವಣ್ಯವತಿಯ ಮನದಲ್ಲಿ ರಾಜಿಪ ರಮಣ //
ಚಿನ್ನ ಮುತ್ತು ಹಾರಗಳೊಡೆ ಮಾಂಗಲ್ಯ ಕತ್ತಿಗೆ ಶೋಭೆಯಂತೆ/
ಕೆಂದುಟಿಯ ನಗು ನವಜೀವನದ ಶುಭಾರಂಭಕೆ ದಿವ್ಯಾಭರಣವಂತೆ//
ಶಾಲಿನಿ ಕೆಮ್ಮಣ್ಣು
