ಕಾವ್ಯ ಸಂಗಾತಿ
ಡಿಸೆಕ್ಷನ್ ಹಾಲ್
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಅಂಗವಿಚ್ಛೇದನ ಸಭಾಂಗಣ
ಅದಕ್ಕಾಗಿ ಹತ್ತು ಹನ್ನೆರಡು
ಉದ್ದುದ್ದ ಸ್ಟೀಲ್ ಟೇಬಲ್ಲು
ಎಲ್ಲದರ ಮೇಲೊಂದೊಂದು
ಅರ್ಧಂಬರ್ಧ ಕೊಯ್ದ ಹೆಣ
ಹೊಮ್ಮುವ ಫಾರ್ಮಲಿನ್
ಗಾಢ ಘಾಟು ವಾಸನೆ
ಆದರೆ ಇದಲ್ಲ ಅನಾಟಮಿ ಹಾಲ್!
ಒಂದೊಂದು ಟೇಬಲ್ಲಿಗು
ವಿವಿಧ ವಿಮರ್ಶಕರ ಗುಂಪು
ಒಂದು ಕಡೆ ಕಾವ್ಯದ
ಕೈ ಕಾಲು ತರಿದು
ತಲೆಯನ್ನೂ ಅಡ್ಡಡ್ಡ ಸೀಳಿ
ಹೆಣದ ಒಂದೊಂದೆ ಸ್ನಾಯು
ಖಂಡ ಖಂಡ ಸೀಳಿ ತೆಗೆದು
ಮೈಮನದ ದುರ್ಬೀನಿಗೆ ಒಡ್ಡಿ
ನಂತರ ಅಲ್ಲೊಂದು ನರ
ಇಲ್ಲೊಂದು ಅಪಧಮನಿ
ಮತ್ತೊಂದು ಅಭಿಧಮನಿ
ಎಳೆದೆಳೆದು ಕಣ್ಣಲ್ಲಿ ಅರೆದು
ಮತ್ತೆಮತ್ತೆ ಅರೆದು ಕುಡಿದು
ಇಚ್ಛಾನುಸಾರ ಬಿತ್ತರಿಸಿ
ಆ ವಿಮರ್ಶೆಗೆ ಜಗತ್ಪ್ರಸಿದ್ಧಿ!
ಹೀಗೆ
ಒಂದು ಕಡೆ ಕಥೆ ಕಾದಂಬರಿ
ಛೇದನ
ಇನ್ನೊಂದರಲ್ಲಿ ವಿಮರ್ಶೆ
ಗ್ರಂಥವನ್ನೇ ಕೊಯ್ದು ವಿಮರ್ಶೆ
ಹಾಗೆ
ಟೇಬಲ್ಲಿಗೊಂದೊಂದು ವೈವಿಧ್ಯ
ಅನಾಟಮಿ ಥರ
ಇಲ್ಲಿಯು ಎಲ್ಲ ಕುಯ್ಯುವ ಮೊದಲೆ
ನಿರ್ಜೀವ ಹೆಣ!
ಮತ್ತು ಫಾರ್ಮಲಿನ್ನಿನ ಗಾಢ ಘಾಟು!
ಮನಸ್ಸಿನ ದುರ್ಬೀನು ಸಾಹಿತ್ಯದ ಆಳ ಉದ್ದಗಲಗಳನ್ನಳೆಯುತ್ತಿದೆ
ಚನ್ನಾಗಿದೆ