ಅಂಕಣ ಸಂಗಾತಿ

ಗಜಲ್ ಲೋಕ

ಚಂಪೂ ಅವರ ಗಜಲ್ ಗಳಲ್ಲಿ ಸಾಮಾಜಿಕ ಕಳಕಳಿ

.

.

ಗಜಲ್ ಪ್ರೀತಿಸುವ, ಪೂಜಿಸುವ ಹೃದಯಗಳಿಗೆ ದಿಲ್ ಸೆ ಆದಾಬ್ ಅರ್ಜ್ ಹೈ..

ಈ ‘ಗಜಲ್’ ಎನ್ನುವ ರಸಗಟ್ಟಿ ಸಹೃದಯಿಯ ಭಾವಾಂತರಗದಲ್ಲಿ ಹರಿಯುತ್ತಿರಲು ಹೃದಯದಲ್ಲೊಂದು ಅಪರಿಮಿತ ಕಂಪನ ಉಂಟಾಗುತ್ತದೆ. ಪ್ರತಿವಾರ ಒಬ್ಬೊಬ್ಬ ಶಾಯರ್ ಕುರಿತು ಬರೆಯುತ್ತ ಗಜಲ್ ಗುಲ್ಜಾರ್ ನಲ್ಲಿ ಅಲೆದಾಡುತ್ತಿರುವೆ. ಆ ಗುಲ್ಜಾರ್ ನಲ್ಲಿ ಅರಳಿದ ಗುಲ್ಶನ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ, ನೀವು ನಿರೀಕ್ಷಿಸುತ್ತಿರುವ ಗಜಲ್ ಬೆಳದಿಂಗಳೊಂದಿಗೆ…

ನಿಶೆಯೆನೋ ಕಾಲದ ದಾಸ

ಸರಿದು ಹೋಗಬಹುದು

ಕಾದು ನೋಡಬೇಕು ದೀಪದ ಪ್ರಯಾಣ

ಎಲ್ಲಿಯವರೆಗೆಂದು”

ವಸೀಮ್ ಬರೇಲ್ವಿ

      ಇಂದು ಮನುಷ್ಯ ತಾನು ವಿಜ್ಞಾನವನ್ನು ಕಂಡು ಹಿಡಿದು ವೈಜ್ಞಾನಿಕ ಯುಗದಲ್ಲಿ ಬದುಕುತ್ತಿದ್ದೇನೆ ಎಂದು ಎಷ್ಟೇ ಹಾರಾಡಿದರೂ ಹಲವು ಬಾರಿ ಸಮಯದ ಮುಂದೆ ಮಂಡಿಯೂರಿ, ತೀರ ಅಸಹಾಯಕತೆಯಿಂದ ಬಳಲಿರುವುದು, ಗೊಣಗಿರುವುದು ನಮ್ಮೆಲ್ಲರಿಗೂ ಅನೇಕ ಬಾರಿ ಅನುಭವ ಆಗಿರಲಿಕ್ಕೆ ಬೇಕು. ಅಂದರೆ ಈ ಸಂಸಾರದಲ್ಲಿ ಯಾವುದೂ ತನ್ನಷ್ಟಕ್ಕೆ ಮುಖಮ್ಮಲ್ ಆಗುವುದಿಲ್ಲ. ಎಲ್ಲವೂ ಅಪರಿಪೂರ್ಣತೆಯ ಗೊಂಚಲುಗಳೆ. ಈ ನೆಲೆಯಲ್ಲಿ ಯೋಚಿಸಿದಾಗ ಮನುಷ್ಯನ ಬದುಕು ಎನ್ನುವುದು ಪೂರ್ಣತೆಯೆಡೆಗೆ ಸಾಗುವ ನಿರಂತರ ಪ್ರಯಾಣ!! ಈ ಪ್ರಯಾಣವು ಶುದ್ಧ ಸಾಹಸದಿಂದ ಕೂಡಿದ್ದು, ಅದನ್ನು ನಾವು ಎಷ್ಟು ಬೇಗನೆ ಅರಿತುಕೊಳ್ಳುತ್ತೇವೆಯೋ ಅಷ್ಟು ಬೇಗ ನಮ್ಮ ಜೀವನವು ಸುಂದರವೂ, ರಸಮಯವೂ ಆಗಲು ಸಾಧ್ಯ. ಇದಕ್ಕೆ ಪ್ರಯಾಣಿಕನು ತಾನು ಸಾಗುವ ಹಾದಿಯಲ್ಲಿ ಕಳೆದುಹೋಗದೆ ಸುಂದರವಾದ ಮಾರ್ಗಗಳನ್ನು ಕಂಡುಹಿಡಿಯಲು, ಆಸ್ವಾದಿಸಲು ಆಗುವುದಿಲ್ಲ. ರಸ್ತೆಯಲ್ಲಿನ ಗುಂಡಿಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಪ್ರಯಾಣವನ್ನು ಆನಂದಿಸಬೇಕು. ಆವಾಗ ಬಾಳಿಗೊಂದು ಅರ್ಥ ಬರುತ್ತದೆ. ಈ ಸುದೀರ್ಘವಾದ ಪಯಣದಲ್ಲಿ ಬದುಕಿಗೆ ತಿರುವು ಕೊಡುವ ಸಾಧನ, ಮಾಧ್ಯಮವೆಂದರೆ ಅದು ಕಲೆ, ಸಾಹಿತ್ಯ, ಸಂಗೀತ ಎಂಬ ಸಾಂಸ್ಕೃತಿಕ ಸಂಗಮ. ಮನುಷ್ಯನ ನೆಮ್ಮದಿ ಅಡಗಿರುವುದೆ ಸಾಂಸ್ಕೃತಿಕ ಲೋಕದಲ್ಲಿ. ಈ ಲೋಕಕ್ಕೆ ಬಣ್ಣ ತುಂಬಿರುವುದೆ ಬರಹವೆಂಬ ಕಾಮನಬಿಲ್ಲು. ಪ್ರತಿ ಭಾಷೆಯಲ್ಲೂ ಇದರದೆ ಪಾರುಪತ್ಯ. ಭಾಷೆಯಲ್ಲಿ ಮಡಿವಂತಿಕೆ ಇರದೆ ಕೊಡು ಕೊಳ್ಳುವಿಕೆಯ ಸೇತುವೆಯಿರುತ್ತದೆ. ಆ ಸೇತುವೆಯ ಫಲವೆ ಅರಬ್ ನಾಡಿನ, ಉರ್ದು ಕಾವ್ಯಗಳ ರಾಣಿ ಗಜಲ್ ಕನ್ನಡ ಸಾರಸ್ವತ ಲೋಕದಲ್ಲಿಂದು ಮನೆಮಾತಾಗಿದ್ದಾಳೆ. ಈ ಗಜಲ್ ಯಾಮಿನಿಯನ್ನು ಪ್ರೀತಿಸದ, ಪೂಜಿಸದ, ಗೌರವಿಸಿದ ಬರಹಗಾರರು ಸಿಗುವುದೇ ವಿರಳ. ಇಂಥಹ ಅಸಂಖ್ಯಾತ ಗಜಲ್ ಚಾಂದನಿಯ ಭಕ್ತರಲ್ಲಿ ಚಂದ್ರಶೇಖರ ಪೂಜಾರ ಅವರೂ ಒಬ್ಬರು!

         ‘ಚಂಪೂ’ ಎಂದೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಶ್ರೀ ಚಂದ್ರಶೇಖರ ಯಲ್ಲಪ್ಪ ಪೂಜಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ೧೯೮೩ ರ ಸೆಪ್ಟೆಂಬರ್ ೦೪ ರಂದು ಜನಿಸಿದರು. ಎಮ್. ಎ., ಬಿ.ಎಡ್ ಪದವಿ ಪಡೆದ ಇವರು, ಪ್ರಸ್ತುತವಾಗಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರದ ಶ್ರೀ ಸಿದ್ಧಲಿಂಗೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೂಕ್ಷ್ಮ ಸಂವೇದನಾಶೀಲರಾದ ಚಂಪೂ ಅವರು ತಮ್ಮ ಶಾಲಾ ದಿನಗಳಿಂದಲೆ ಓದು-ಬರಹದ ಕುರಿತು ಆಸಕ್ತರಾಗಿದ್ದು ಕಥೆ, ಕಾವ್ಯ, ವಿಮರ್ಶೆ, ಲೇಖನ, ಗಜಲ್ …. ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವ ಶ್ರೀಯುತರು ‘ಅನುರಾಗದ ಗೂಡಿನಿಂದ’, ‘ರಕ್ತ ರಾತ್ರಿಗಳು’ ಎಂಬ ಎರಡು ಕವನ ಸಂಕಲನ, ‘ಕೈಗನ್ನಡಿ ವ್ಯಾಕರಣ ಕೃತಿ’, ‘ನಿಮ್ಮ ಪ್ರೀತಿಯ ಕೋತಿಮರಿ’ ಎಂಬ ಎರಡು ವಿಮರ್ಶಾ ಕೃತಿ, ‘ಕನ್ನಡ ಕಣ್ಗಾಡಿ’ ಎಂಬ ವ್ಯಾಕರಣ ಕೃತಿ, ‘ಗಾಲಿಬ್ ನಿನಗೊಂದು ಸಲಾಂ’ ಎನ್ನುವ ಸಂಪಾದಿತ ಕೃತಿ ಹಾಗೂ ‘ಚೆಂಬೆಳಕಿನ ದಾರಿಯಲ್ಲಿ’, ‘ಬೆಳಕ ನಿಚ್ಚಣಿಕೆ’, ಎರಡು ಗಜಲ್ ಸಂಕಲನಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.

       ಅಧ್ಯಯನ, ಅಧ್ಯಾಪನದ ಜೊತೆಗೆ ಸದಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಶ್ರೀ ಚಂದ್ರಶೇಖರ ಪೂಜಾರ ಅವರ ಹಲವು ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರಿಂದ ಮೆಚ್ಚುಗೆಯನ್ನು ಗಳಿಸಿವೆ.‌ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ಸಾರಿದ್ದಾರೆ. ಇವರಿಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೊಂದಿಗೆ ರಾಜ್ಯದ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ.         

         ಮನುಷ್ಯ ಎಲ್ಲವನ್ನೂ ಸಂಶೋಧನೆ, ಅನ್ವೇಷಣೆ ಮಾಡುತ್ತಿದ್ದಾನೆ, ಭಾಗಶಃ ಯಶಸ್ವಿಯಾಗಿದ್ದಾನೆ ಕೂಡ. ಆದರೆ ಪ್ರೀತಿಯನ್ನು ಉತ್ಪತ್ತಿ ಮಾಡುವಲ್ಲಿ ಮಾತ್ರ ಸೋತಿದ್ದಾನೆ. ಈ ಪ್ರೀತಿ ಎನ್ನುವಂತದ್ದು ಹುಟ್ಟುತ್ತದೆಯೆ ಹೊರತು ಹುಟ್ಟಿಸಲಾಗುವುದಿಲ್ಲ. ಇಂಥಹ ಪ್ರೀತಿಯ ವಾಹಕ ರೂಪವೇ ಗಜಲ್. ಪ್ರೀತಿಯನ್ನು ಹೊರತುಪಡಿಸಿ, ಪ್ರೀತಿಯಿಂದ ಬೇರ್ಪಟ್ಟ ಯಾವ ವಸ್ತು, ವಿಷಯವೂ ಈ ಧರಣಿಯಲ್ಲಿ ಇಲ್ಲ. ಇದರಂತೆಯೇ ಗಜಲ್ ನಿಂದಲೂ ಕೂಡ ಯಾವ ವಿಷಯವೂ ಹೊರಗುಳಿದಿಲ್ಲ, ಹೊರಗುಳಿಯಬಾರದು. ಆದರೆ ಎಲ್ಲ ವಿಷಯಗಳಲ್ಲೂ ಪ್ರೀತಿಯ ಸಿಂಚನವನ್ನು ಬಯಸುತ್ತದೆ. ಪ್ರೀತಿಯ ಆಹ್ಲಾದಕರ ಅಭಿವ್ಯಕ್ತಿಯೆ ಗಜಲ್. ಗಜಲ್ ಗೋ ಚಂದ್ರಶೇಖರ ಪೂಜಾರ ಅವರ ಗಜಲ್ ಗಳಲ್ಲಿ ಬರಗೆಟ್ಟ ಬರಗಾಲದ ಹಾಹಾಕಾರ, ಭೂಮಿತಾಯಿಯ ಚೊಚ್ಚಲ ಮಗನ ಮುಂಗಾರು ಮಳೆಯೊಂದಿಗಿನ ಜೂಜು, ತುತ್ತು ಅನ್ನಕ್ಕಾಗಿ ಕಸದ ತೊಟ್ಟಿಗಳನ್ನು ಅರಸುವ ಬಡತನ, ಹತಾಶೆ, ದುಃಖ, ಶೋಷಣೆ, ಅನ್ಯಾಯ, ಅಸಮಾನತೆ…ಮುಪ್ಪರಿಗೊಂಡಿವೆ. ಸಾಮಾಜಿಕ ತುಳಿತಕ್ಕೊಳಗಾಗಿ ಸಾಮಾಜಿಕ ಬದುಕಿನ ಕತ್ತಲೆಯಲ್ಲಿ ಜೀವಿಸುವ ಜನಗಳಿಗೆ ಇವರ ಗಜಲ್ ಗಳು ಭರವಸೆ, ಕನಸು, ನ್ಯಾಯ, ಸುಖ, ಸಂತೋಷದ ಬೆಳಕನ್ನು ನೀಡುವ ಚೈತನ್ಯದಾಯಕವಾಗಿವೆ. ಗಜಲ್ ಗೋ ಚಂಪೂ ಅವರ ಬಹಳಷ್ಟು ಗಜಲ್ ಗಳು ನಮ್ಮ ಜೀವನಕ್ಕೆ ಸಮೀಪವೆನಿಸುತ್ತವೆ. ಇವರು ಬಳಸುವ ಗ್ರಾಮೀಣ ಶಬ್ದಗಳು ಇವರಿಗೆ ಬಡುವ, ಶ್ರಮಿಕ, ಕೂಲಿ ಕಾರ್ಮಿಕರ, ಅಸಹಾಯಕ ಮಹಿಳೆ ಮತ್ತು ರೈತರ ಬಗೆಗಿರುವ ವಿಶೇಷ ಕಾಳಜಿಯನ್ನು ಪ್ರತಿಧ್ವನಿಸುತ್ತಿದೆ. ಅಂತೆಯೇ ಒಕ್ಕಲುತನಕ್ಕೆ ಸಂಬಂಧಿಸಿದಂತೆ ಹಲವಾರು ದೇಸಿ ಸೊಗಡಿನ ಶಬ್ದಗಳು ಇವರ ಅಶಅರ್ ನಲ್ಲಿ ಹೆಪ್ಪುಗಟ್ಟಿವೆ. ವಿಶೇಷವಾಗಿ ಇವರ ಗಜಲ್ ಗಳಲ್ಲಿ ರೂಪಕ, ಉಪಮೆಗಳನ್ನು ಹೇರಳವಾಗಿ ಕಾಣಬಹುದು.

ಎದೆಯ ನೆಲದ ಮೇಲೆ ಕರುಳ ತೆನೆಗಳನು ಹುಲುಸಾಗಿ ಬೆಳೆಸಿದವಳು

ಇಂದು ತುತ್ತಿನ ಚೀಲ ಹಿಡಿದು ತಬ್ಬಲಿಗಳ ತವರಿಗೆ ನಡೆದಿರುವೆ ಹುಜೂರ್”

ರೂಪಕಗಳ ಮೂಲಕ ಹೆಣ್ಣಿನ ಮನದ ರೋದನೆ, ತಾಕಲಾಟಗಳ ನೋವನ್ನು ಈ ಷೇರ್ ದಾಖಲಿಸುತ್ತದೆ. ‘ಕರುಳ ತೆನೆ’ ಎನ್ನುವಂತದ್ದು ಭೂಮಿತಾಯಿಯ ಮೂರ್ತರೂಪ ತಾಯಿಯನ್ನು ಸಂಕೇತಿಸುತ್ತ ಅವಳ ಮಡಿಲ ಮರಿಗಳನ್ನು ಬೆಳೆಸುವಲ್ಲಿ ಅವಳ ತ್ಯಾಗದ ಮನೋಭಾವ ನಮ್ಮ ಕಣ್ಣ ಮುಂದೆ ರಾಚುವಂತೆ ಗಜಲ್ ಗೋ ಚಂಪೂ ಅವರು ಕಟ್ಟಿಕೊಟ್ಟಿದ್ದಾರೆ. ಜನ್ಮದಾತೆಯಾದ ತಾಯಿಯೇ ತನ್ನ ಕರುಳ ಬಳ್ಳಿ ಮಕ್ಕಳ ಜೊತೆ ಮರಣಮೃದಂಗವನ್ನು ಆಲಂಗಿಸುತ್ತಾಳೆ ಎಂದರೆ ಅವಳ ಬದುಕು ಎಷ್ಟು ಯಮಯಾತನೆಯನ್ನು ಅನುಭವಿಸುತ್ತಿತ್ತು ಎಂಬುದು ಹೃದಯವಂತರೆಲ್ಲರಿಗೂ ಅರ್ಥವಾಗುತ್ತದೆ. ಇಲ್ಲಿಯೇ ಚಂಪೂ ಅವರು ಓದುಗರ ಹೃದಯವನ್ನು ತಟ್ಟುತ್ತಾರೆ.

    ಮನುಷ್ಯನ ದೇಹದ ರಚನೆ ತುಂಬಾ ಅದ್ಭುತ ಹಾಗೂ ವಿಸ್ಮಯದಿಂದ ಕೂಡಿದೆ. ಕಣ್ಣುಗಳು ಇಲ್ಲದ, ಕಿವಿ ಕೇಳದ, ಕಾಲುಗಳು ಇಲ್ಲದ, ಕೈಗಳು ಇಲ್ಲದ ಅಸಂಖ್ಯಾತ ಜನರು ಇದ್ದಾರೆ ನಮ್ಮ ಭೂಮಂಡಲದಲ್ಲಿ. ಆದರೆ ‘ಹೊಟ್ಟೆ’ ಇಲ್ಲದ ಮನುಷ್ಯರಿದ್ದಾರೆಯೆ.. ಇರಲಿಕ್ಕಿಲ್ಲ, ಇಲ್ಲವೇ ಇಲ್ಲ. ಹಸಿವಿನ ಗೋರಿ ಹೆಪ್ಪುಗಟ್ಟಿರುವುದೆ ಅಲ್ಲಿ!! ಈ ಹಸಿವು ಸುಖನವರ್ ಚಂದ್ರಶೇಖರ ಪೂಜಾರ ಅವರಿಗೆ ತುಂಬಾನೇ ಕಾಡಿದೆ. ಇದನ್ನು ಅವರ ಷೇರ್ ಒಂದರ ಮೂಲಕ ಗಮನಿಸೋಣ.

ಗೋರಿಯ ಮೇಲಿನ ಹೂವು ಹಸಿವಿನಿಂದ ಸತ್ತವರ ನೆನೆದಿದೆ ಚೋಮ

ತಿಪ್ಪೆ ಸೇರಿದ ಅನ್ನಕ್ಕೆ ಕರಿ ಮುಖದ ಕಣ್ಣು ಕೈ ಚಾಚಿದೆ ಚೋಮ

ಹಸಿವು ಎನ್ನುವುದು ವರ್ಗಭೇದದ ಸೃಷ್ಟಿಕರ್ತ. ಇದಕ್ಕೆ ವಯಸ್ಸಿನ ಸೀಮೆ ಇಲ್ಲ. ಸಂಧರ್ಭಗಳಿಗನುಗುಣವಾಗಿ ವೈವಿಧ್ಯಮಯವಾದ ಸ್ವರೂಪಗಳನ್ನು ತಾಳಿ ಬದುಕನ್ನು ಪರೀಕ್ಷಿಸುತ್ತದೆ. ಈ ಹಸಿವು ಚಂಪೂರವರ ಗಜಲ್ ಗಳಲ್ಲಿ ಬಡವ, ಅಸಹಾಯಕ, ಶೋಷಿತ ಚೋಮನ ರೂಪ ಪಡೆದಿದೆ. ಸಾಮಾನ್ಯವಾಗಿ ಹೊಟ್ಟೆ ತುಂಬಿದವರ ಕೊರಳು ಹಾಗೂ ಮುಡಿಯಲ್ಲಿ ಮೆರೆಯುವ ಹೂವು ಹಸಿದವರಿಗೆ ಉಸಿರು ನಿಂತ ನಂತರವೇ ದಕ್ಕುವುದು ನಮ್ಮ ಸಾಮಾಜಿಕ ವ್ಯವಸ್ಥೆಯ ಪರಮಾವಧಿಗಳಲ್ಲಿ ಒಂದು. ಹಸಿವಿನ ಹಿಂದಿರುವ ಬೆವರಿನ ಸಂಸ್ಕೃತಿಯನ್ನು ಈ ಷೇರ್ ಪ್ರಚುರಪಡಿಸುತ್ತಿದೆ.

      ಈ ಸಂಸಾರದಲ್ಲಿ ಅನ್ನದಿಂದ ವಂಚಿತರಾದವರಿಗಿಂತ ಪ್ರೀತಿಯಿಂದ ವಂಚಿತರಾದವರೆ ಹೆಚ್ಚು. ಇಂಥಹ ಅನುಪಮವಾದ ಪ್ರೀತಿಯನ್ನು ಜಗಕ್ಕೆಲ್ಲ ಹಂಚುತ್ತಿರುವ, ಉಣಬಡಿಸುತ್ತಿರುವ ಗಜಲ್ ಪರಪಂಚದಲ್ಲಿ ಶಾಯರ್ ಚಂದ್ರಶೇಖರ ಪೂಜಾರ ಅವರಿಂದ ಹೆಚ್ಚು ಹೆಚ್ಚು ಗಜಲ್ ಗಳು ರಚನೆಯಾಗಲಿ, ಅವುಗಳು ಸಮಾಜದ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.

ನಂದಿಸಿಬಿಡು ದೀಪಗಳನ್ನು ಈ

ಮಿಥುನದ ಹೊತ್ತಿನಲಿ

ಹೊತ್ತಿ ಉರಿಯುವವರಿಗೇನು ಕೆಲಸ

ಈ ರಸಮಯ ಗಳಿಗೆಯಲ್ಲಿ”

ದಾಗ್ ದೆಹಲ್ವಿ

      ಮನುಷ್ಯನ ಮನಸು ತಳಮಳಗಳ ದಿಬ್ಬಣ. ಶಾಂತಿ, ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ಅಶಅರ್ ನ ಪಾತ್ರ ಅನನ್ಯ. ಇಂಥಹ ಗಜಲ್ ಜನ್ನತ್ ನಲ್ಲಿ ವಿಹರಿಸುತ್ತಿರಲು ಹಲವು ಬಾರಿ ಸಮಯವನ್ನೂ ಶಪಿಸಿದ್ದುಂಟು. ಆದರೂ ಸಮಯದ ಮುಂದೆ ಮಂಡಿಯೂರಲೆ ಬೇಕಲ್ಲವೇ..ಸೋ, ಅನಿವಾರ್ಯವಾಗಿ ಇಂದು ನನಗೆ ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮತ್ತೆ ಮುಂದಿನ ಗುರುವಾರ‌ ತಮ್ಮ ಪ್ರೀತಿಯನ್ನರಸುತ ಬರಲು.. ಹೋಗಿ ಬರುವೆ, ಅಲ್ವಿದಾ….


ರತ್ನರಾಯಮಲ್ಲ

.

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top