ಪ್ರಬಂಧ ಸಂಗಾತಿ
ನೀರಿನಾಟವಯ್ಯಾ..
ಜ್ಯೋತಿ ಡಿ.ಬೊಮ್ಮಾ
ನೀರಿನಾಟವಯ್ಯಾ…
ಮಂಗಳನ ಅಂಗಳದಲ್ಲಿ ನೀರಿರುವ ವಿಷಯ ಓದಿ ಮಂಗಳ ಗ್ರಹದಲ್ಲಿ ವಾಸ ಮಾಡುವ ಕಾಲ ದೂರವಿಲ್ಲ ಎನಿಸಿತು. ಸದ್ಯಕ್ಕಂತೂ ಭೂಮಿ ಮಾತ್ರ ಮನುಷ್ಯರಿಗೆ ಪ್ರಾಣಿಗಳಿಗೆ ವಾಸಿಸಲು ಯೋಗ್ಯವಿದೆ. ಅನ್ಯಗ್ರಹಗಳಲ್ಲಿ ಮಂಗಳ ಗ್ರಹದಲ್ಲಿ ಮಾತ್ರ ನೀರು ಇರಬಹುದು ಎಂಬ ಅನುಮಾನ ದೃಢ ಪಡುತ್ತಿದೆ.ಮತ್ತೇನು..! ನೀರಿದ್ದಲ್ಲಿ ಜನ ಜಾನುವಾರಗಳ ವಾಸ ಪ್ರಾರಂಭವಾಗುತ್ತದೆ. ಈಗ ನಮ್ಮವರು ಹೊರ ದೇಶಗಳಲ್ಲಿ ನೆಲೆ ಕಂಡುಕೊಂಡಂತೆ ಮುಂದೊಮ್ಮೆ ಭೂಮಿ ಯಂತಿರುವ ಇನ್ನೊಂದು ಗ್ರಹದಲ್ಲಿ ವಾಸಿಸಬಹುದು. ಅಲ್ಲಿಗೆ ತೆರಳಲು ವಿಮಾನಗಳಂತೆ ರಾಕೆಟ್ ಇರಬಹುದು. ಆ ಗ್ರಹಗಳು ಪ್ರವಾಸಿ ತಾಣಗಳಾಗಬಹುದು , ಅಲ್ಲಿಯೂ ಜನ ಜನ ಜನ…
ಹೀಗೆ ಆಲೋಚನೆ ಎತ್ತೆತ್ತಲೋ ಸಾಗುತಿತ್ತು. ಕರೆಂಟ್ ಕೈ ಕೊಟ್ಟು ಮನೆಯ ಟ್ಯಾಂಕ್ ನಲ್ಲಿ ನೀರು ಮುಗಿದು ಇಡೀ ಮನೆಯಲ್ಲೆ ಒಂದು ಹನಿ ನೀರಿರದೆ ಕೈ ಮುಂದಿಟ್ಟುಕೊಂಡು ಮಾಡಲೇನು ತೋಚದೆ ಸುಮ್ಮನೆ ಕುಳಿತಿದ್ದಾಗ, ಭೂಮಿಯ ಮೇಲೆ ಕುಳಿತು ಅನ್ಯ ಗ್ರಹದ ಯೋಚನೆಯಲ್ಲಿ ತೊಡಗಿದೆ.
ನನಗೆ ನೀರಿನ ಮೇಲೆ ಅತೀ ವ್ಯಾಮೋಹ. ನೀರಿರದಿದ್ದರೆ ದಿಗಿಲುಗೊಳ್ಳುತ್ತೆನೆ.ಮನೆಯಲ್ಲಿ ಟ್ಯಾಂಕ್ ನಲ್ಲಿ ಅಥವಾ ಕುಡಿಯಲು ಸದಾ ಸಂಗ್ರಹಿಸಿ ಇಡಲು ಪ್ರಯತ್ನಿಸುತ್ತಿರುತ್ತೆನೆ. ಮನೆಯಲ್ಲಿ ನಾನು ನೀರಿನ ವಿಷಯದಲ್ಲಿ ಪರದಾಡುವದು ನೋಡಿ ಅಸಮಾಧಾನಗೊಂಡರೂ ನೀರಿನ ಕುರಿತು ನನಗಿರುವ ಆಸಕ್ತಿ ಹೋಗಲಾಡಿಸಲಾಗದು. ಈಗ ಮೊದಲಿನಂತೆ ಕರೆಂಟ್ ಕೂಡಾ ಜಾಸ್ತಿ ಹೋಗುವದಿಲ್ಲ. ಆದರೂ ಕರೆಂಟ್ ಹೋಗಿ ಟ್ಯಾಂಕ್ ನಲ್ಲಿ ನೀರು ಮುಗಿದರೆ ಹೇಗೆ ಎಂಬ ಆತಂಕ ಸದಾ ಕಾಡುತ್ತದೆ. ಮುನ್ನೆಚ್ಚರಿಕೆಯಾಗಿ ಒಂದು ಚಿಕ್ಕ ಬ್ಯಾರೆಲ್ನಲ್ಲಿ ಸದಾ ನೀರು ತುಂಬಿಸಿ ಇಟ್ಟಿರುತ್ತೆನೆ.
ಈಗ ನೀರಿನ ಸೌಲಭ್ಯ ಎಷ್ಟೆ ಅನುಕೂಲವಾಗಿದ್ದರೂ ಚಿಕ್ಕಂದಿನಲ್ಲಿ ನೀರಿಗಾಗಿ ಅನುಭಸಿದ ಪರಿಪಾಟಲು ಮರೆಯಲಾಗದು. ಮುವತ್ತು ನಲವತ್ತು ವರ್ಷದ ಹಿಂದಿನ ಪಿಳಿಗೆ ನೀರಿನ ಕೊರತೆ ಅನುಭವಿಸಿದವರೆ.
ಆಗ ಈಗಿನಂತೆ ಕೊಳವೆ ಬಾವಿಗಳಿರಲಿಲ್ಲ. ಕೆಲ ಪಟ್ಟಣಗಳಲ್ಲಿ ನಲ್ಲಿಯ ವ್ಯವಸ್ಥೆ ಇದ್ದರೂ ಹಳ್ಳಿಗಳಲ್ಲಿ ನೀರಿನ ಬವಣೆ ಹೇಳತೀರದು. ನಾವೆಲ್ಲ ಚಿಕ್ಕವರಿದ್ದಾಗ ರಜೆಗಳಲ್ಲಿ ಮತ್ತು ಹಬ್ಬಗಳಿಗೆ ನಮ್ಮ ಅಜ್ಜಿಯ ಊರಿಗೆ ಹೋಗುತಿದ್ಧವು. ಕರ್ನಾಟಕದ ಮುಕುಟವಾದ ಬೀದರ ಜಿಲ್ಲೆಯ ಉತ್ತರಕ್ಕೆ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಂತಿರುವ ಔರಾದ ಗ್ರಾಮ ಸದಾ ನೀರಿನ ಅಭಾವದಿಂದ ಬಳಲುತಿತ್ತು. ಊರಿನ ಜನರೆಲ್ಲ ನೀರಿಗಾಗಿ ಪಡುವ ಪಡಿಪಾಟಲು ಅಷ್ಟಿಟ್ಟಲ್ಲ. ( ಅಲ್ಲಿ ಈಗಲೂ ನಿರೀನ ಬವಣೆ ತೀರಿಲ್ಲ ). ನೀರು ತುಂಬುವ ಕೆಲಸ ಅಲ್ಲಿನ ಜನರ ದಿನದ ಬಹುಭಾಗ ನುಂಗುತಿತ್ತು.ಅಂತರ್ಜಲ ಮಟ್ಟ ಕಡಿಮೆ ಇರುವ ಪ್ರದೇಶವದು. ಭಾವಿಗಳು ಅಲ್ಲೊಂದು ಇಲ್ಲೊಂದು ಇದ್ದವು. ನಮ್ಮ ಮನೆಯಲ್ಲಿ ನಮ್ಮ ಅಜ್ಜನ ತಮ್ಮ ನಸುಕಿನಲ್ಲಿ ಎದ್ದು ಎತ್ತುಗಳ ಮೇಲೆ ದೂರದ ಬಾವಿಯಿಂದ ನೀರು ತರುತಿದ್ದರು. ಆ ಎತ್ತು ಒಂದು ಸಲಕ್ಕೆ ನಾಲ್ಕು ಕೊಡ ನೀರು ಹೊರುತಿತ್ತು. ಕೊಡಗಳನ್ನು ಇಡಲು ಕಬ್ಬಿಣದ ಬುಟ್ಟಿಯಾಕಾರದ ವಸ್ತುಗಳು ಎತ್ತಿನ ಬೆನ್ನಿನಿಂದ ಇಕ್ಕೆಲಗಳಲ್ಲೂ ಇಳಿಬಿಟ್ಟು ಅದರಲ್ಲಿ ಕೊಡಗಳನ್ನು ಇಡುತಿದ್ದರು.ನಸುಕಿನಲ್ಲಿ ದೂರದ ಬಾವಿಯಿಂದ ಮನೆಗೆ ಎಳೆಂಟು ಸಲ ಎಡತಾಕಿದಾಗ ಮನೆಯಲ್ಲಿ ಕುಡಿಯಲು ಉಪಯೊಇಗಿಸಲು ನೀರು ಕಾಣಬೇಕಿತ್ತು.ಎಂದಾದರೂ ಅಪ್ಪಿತಪ್ಪಿ ಎತ್ತೋ ಅಥವಾ ನಮ್ಮ ಅಜ್ಜನೋ ನೀರು ತರಲು ನೀರಾಕರಿಸಿದರೇ ಅವತ್ತು ಮನೆಯಲ್ಲೆಲ್ಲ ನೀರಿಗಾಗಿ ಹಾಹಾಕಾರ.ಆದರೆ ಆವಾಗ ನೀರು ತುಂಬಿಸುವ ಕೆಲಸ ತಾಪತ್ರಯದಲ್ಲೂ ಒಂದು ಹಬ್ಬದಂತೆ ಅನಿಸುತಿತ್ತು ನಮಗೆ. ನೀರು ತುಂಬುವ ಕೆಲಸದಲ್ಲಿ ಮನೆಯವರೆಲ್ಲ ಭಾಗಿಯಾಗುತಿದ್ದರು. ನೀರೆಂದರೆ ಅಷ್ಟೊಂದು ಅಮುಲ್ಯವಾಗಿತ್ತು. ಬೇಸಿಗೆಯಲ್ಲಿ ಊರಿನ ಭಾವಿಗಳೆಲ್ಲ ನೀರಿಲ್ಲದೆ ಒಣಗಿ ನೀರನ್ನರಸುತ್ತ ದೂರದೂರದ ಭಾವಿಗಳಿಗೆ ತೆರಳುತಿದ್ದರು. ಭಾವಿಯಲ್ಲಿ ಕೊಡ ಮುಳುಗುವಷ್ಟು ನೀರಿರದೆ ಜನ ನೇರವಾಗಿ ಬಾವಿಯಲ್ಲಿ ಇಳಿದು ಚಂಬಿನಿಂದ ನೀರು ಮೊಗೆದು ಕೊಡಕ್ಕೆ ತುಂಬುತಿದ್ದರು.ಭಾವಿಯ ಮೇಲೆ ಇರುವವರು ಹಗ್ಗದಿಂದ ಕೊಡ ಮೆಲಕ್ಕೆ ಎತ್ತುತಿದ್ದರು.
ನಾವೆಲ್ಲ ಚಿಕ್ಕವರು ಭಾವಿಯ ಮೇಲೆ ಕುಳಿತು ಒಳಗಿನ ಕೌತುಕ ನೋಡುತ್ತ ಕುಳಿತಿರುತಿದ್ದವು. ಕೆಸರು ಮಣ್ಣು ಮಿಶ್ರಿತ ನೀರು ಸ್ವಲ್ಪ ಸಮಯ ಕೊಡದಲ್ಲಿ ಕಲಕದೆ ಹಾಗೆ ಇಟ್ಟರೆ ಮೇಲೆ ತಿಳಿಯಾಗಿ ನಿಂತ ನೀರು ಕುಡಿಯಲು ಅಡುಗೆ ಮಾಡಲು ಉಪಯೋಗಿಸುತಿದ್ದರು. ಆಗೆಲ್ಲ ಅಂತಹ ನೀರು ಕುಡಿದ ನಮಗೆ ಈಗಿನ ಫಿಲ್ಟರ್ ನೀರು ಸಹ ಶುದ್ಧ ಎನಿಸದು.
ಹಾಗೆ ನೀರಿನ ಬವಣೆಯೊಂದಿಗೆ ಜೀವನ ಸಾಗುತಿತ್ತು.ನಂತರ ಮನೆಮನೆಗೂ ನಲ್ಲಿಯ ಸೌಲಭ್ಯ ಬಂದಿತು.ಭಾವಿಯಿಂದ ನೀರು ತರುವ ತಾಪತ್ರಯ ದೂರವಾಯಿತು. ನಲ್ಲಿಯಿಂದ ಕೊಡಗಳನ್ನು ತುಂಬಿಸಿ ಗಂಡಸರು ಭುಜದ ಮೇಲೆ ಹೆಂಗಸರು ಸೊಂಟದ ಮೇಲೆ ಕೊಡಗಳನ್ನಿಟ್ಟುಕೊಂಡು ನೀರು ತರುವ ದೃಶ್ಯ ಅತೀ ಸಾಮಾನ್ಯ ಎನಿಸುತಿತ್ತು. ಶಾಲೆಯಿಂದ ಮನೆಗೆ ಬಂದ ಮೇಲೆ ನಲ್ಲಿಯಿಂದ ನೀರು ತಂದು ಮನೆಯಲ್ಲಿ ತುಂಬುವದು ನನ್ನಿಷ್ಟದ ಕೆಲಸವಾಗಿತ್ತು. ನಲ್ಲಿಯಿಂದ ನೀರು ತರಲು ಬರುವ ಹೆಂಗಳೆಯರಿಗೆ ಅದು ಮನ ಹಗುರಗೊಳಿಸುವ ಸ್ಥಳ.ತಮ್ಮ ದೈನಂದಿನ ಬವಣೆಗಳನ್ನು ಖುಷಿಯನ್ನು ಒಬ್ಬರಿಗೊಬ್ರು ಹೇಳಿಕೊಂಡು ನಿರಾಳವಾಗುವ ಅಥವಾ ನೀರಿಗಾಗಿ ಜಗಳವಾಡುವ ದೃಶ್ಯ ಗಳು ಸಾಮಾನ್ಯವಾಗಿ ಘಟಿಸುತಿದ್ದವು.ಕೆಲವರು ಮನೆಯಲ್ಲಿ ನೀರಿನ ಅವಶ್ಯಕತೆ ಇರದಿದ್ದರೂ ಇಂತಹ ಪುರಾಣಗಳಲ್ಲಿ ಭಾಗಿಯಾಗುವದಕ್ದಕಾದರೂ ನೀರು ತರಲು ಬರುತಿದ್ದರು.ಅದಕ್ಕೆ ಇರಬಹುದು ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೇ ಎಂಬ ಗಾದೆ ಮಾತು ಸೃಷ್ಟಿಯಾದದ್ದು. ಚಿಕ್ಕವಳಿದ್ದಾಗ ಭಾರದ ಕೊಡಗಳನ್ನೆತ್ತಿ ನೀರು ತರುತಿದ್ದ ನನಗೆ ಈಗ ಒಂದು ಚಿಕ್ಕ ಕೊಡವನ್ನು ಎತ್ತಲಾಗದು.ಅಧುನಿಕತೆ ಅಷ್ಟೊಂದು ಸೋಮಾರಿಯನ್ನಾಗಿಸಿದೆ.
ನಮ್ಮ ಮನಗೆ ಕೊಳವೆ ಬಾವಿ ಬಂದದ್ದು ನಾನು ಡಿಗ್ರಿ ಓದುವಾಗ.ಆಗ ನಮಗೆ ಕೊಡಗಳನ್ನೆತ್ತಿ ನೀರು ತುಂಬುವ ತಾಪತ್ರಯ ತಪ್ಪಿತು.ಕೊಳವೆ ಬಾವಿಯ ನೀರು ಮೇಲೆ ನಿರಿನ ಟ್ಯಾಂಕಿಗೇರಿಸಲು ಸ್ವಿಚ್ ಅದುಮುವದೊಂದೆ ನೀರು ತುಂಬುವ ಕೆಲಸ. ಬಚ್ಚಲು , ಅಡುಗೆ ಮನೆ ಕಂಪೌಂಡ್ ಎಲ್ಲೆಂದರಲ್ಲಿ ಇರುವ ನಲ್ಲಿ ತಿರುವಿದರೆ ಸಾಕು ನೀರಿನ ಧಾರೆ. ಈಗೀನ ಮಕ್ಕಳಿಗೆ ನೀರಿನ ಅಭಾವದ ಅನುಭವವಿಲ್ಲ.ಕೊಡಗಳನ್ನೆತ್ತಿ ನೀರು ತುಂಬುವದು ಉಹಿಸಲು ಆಗದು ಅವರಿಗೆ. ಬಟನ್ ಒತ್ತಿದರೆ ಫ್ಷ್ಲಷ್ ಆಗುವ, ತಿರುವಿದರೆ ನೀರು ಸುರಿಯುವ ಸೌಲಭ್ಯ ವಿರುವ ಅವರು ಕುಡಿಯಲು ಮಾತ್ರ ಅರ್ದ ಗ್ಲಾಸ್ ನೀರನ್ನೆತ್ತಲು ಯೊಗ್ಯರು ಅಷ್ಟೆ.
ನಮ್ಮ ಹಬ್ಬಗಳಲ್ಲಿ ನೀರು ತುಂಬುವದನ್ನು ಒಂದು ಹಬ್ಬದಂತೆ ಆಚರಿಸಲಾಗುತ್ತದೆ . ಹಬ್ಬದ ಮುನ್ನ ದಿನ ನೀರು ತುಂಬುವ ಹಬ್ಬ. ಆಗೆಲ್ಲ ನೀರು ತುಂಬುವದು ಎಂದರೆ ಹಬ್ಬವೇ ಸರಿ .ಮನೆಯಲ್ಲಿನ
ನೀರು ತುಂಬಿಸುವ ಪಾತ್ರೆಗಳನ್ನೆಲ್ಲ ತೊಳೆದು ಅದರಲ್ಲಿ ನೀರು ಶೇಖರಿಸಿಟ್ಟುಕೊಂಡರೆ ಹಬ್ಬದ ಖಳೆ ಮನೆಯನ್ನು ಆವರಿಸುತಿತ್ತು.ಈಗ ನೀರು ತುಂಬುವ ಹಬ್ಬ ಎಂದರೆ ಚಿಕ್ಕದಾದ ತಂಬಿಗೆಯಲ್ಲೋ , ಲೋಟದಲ್ಲೋ ಟ್ಯಾಂಕ್ ನಲ್ಲಿರುವ ನೀರು ತುಂಬಿ ಜಗಲಿಯಲ್ಲಿಟ್ಟು ಪೂಜಿಸಿದದರೆ ನೀರು ತುಂಬಿಸುವ ಹಬ್ಬ ಸಂಪನ್ನ. ದೊಡ್ಡ ಪಟ್ಟಣಗಳಲ್ಲಿ ಪ್ಲ್ಯಾಟ್ ಗಳಲ್ಲಿ ವಾಸಿಸುವರು ಅಡುಗೆಗೂ ಪೂಜೆಗೂ ಎಲ್ಲದಕ್ಕೂ ಬಳಸುವದು ಟ್ಯಾಂಕ್ ನೀರನ್ನೆ. ಎರಡು ಬಕೆಟ್ ಬಿಟ್ಟರೆ ನೀರನ್ನು ಸಂಗ್ರಹಿಸಿಡಲು ಮತ್ತೊಂದು ಪಾತ್ರೆ ಕಾಣದು.ಇಡಲು ಸ್ಥಳ ಇದ್ದರೆ ತಾನೆ..
ಈಗ ಯಾರ ಮನೆಯಲ್ಲೂ ನೀರು ತುಂಬಿಡುವ ಪಾತ್ರೆಗಳಿಲ್ಲ.ಕುಡಿಯಲು ತುಂಬಿಡುವ ಹಿತ್ತಾಳೆ ಅಥವಾ ಸ್ಟಿಲ್ ಪಾತ್ರೆಗಳು ಕಾಣೆಯಾಗಿವೆ.ನೇರವಾಗಿ ವಾಟರ್ ಫಿಲ್ಟರ್ ನಿಂದ ಗ್ಲಾಸಿಗೆ ಬಗ್ಗಿಸಿ ಕೊಂಡು ಕುಡಿಯುವದಷ್ಟೆ.ಅಷ್ಟನ್ನೂ ಮಾಡಲಾಗದೆ ಬಾಟಲ್ ಗಳಲ್ಲಿ ತುಂಬಿಸಿಟ್ಟು ನೇರವಾಗಿ ಬಾಟಲ್ ಬಾಯಿಗಿಟ್ಟರೆ ಮುಗಿಯಿತು, ಮತ್ತೆಕೇ ಬೇಕಾಗುತ್ತವೆ ಪಾತ್ರೆಗಳು. ಕರೆಂಟ್ ಏನಾದರೂ ಕೈಕೊಟ್ಟಾಗ ಆಗ ಅನುಭವಿಸಬೇಕಾಗುತ್ತದೆ ಫಜೀತಿ. ಟ್ಯಾಂಕ್ ನಲ್ಲಿಯ ನೀರು ಪೂರ್ಣ ಖಾಲಿಯಾಗಿ ಒಂದು ಕೊಡ ನೀರು ದಕ್ಕದ ಪರಿಸ್ಥಿತಿ, ಅಕ್ಕಪಕ್ಕದವರು ಬೆಳ್ಳಿ ಬಂಗಾರ ಬೇಕಾದರೆ ಎರವಲು ಕೊಟ್ಟಾರು , ಒಂದು ಕೊಡ ನೀರು ಕೊಡಲಾರರು.ಅಂತಹ ಸಂದರ್ಬದಲ್ಲಿ ಬಾತ್ ರೂಮಿಗೆ ಹೋಗುವ ಅವಸರವಾದರಂತೂ ಆ ಪರಿಸ್ಥಿತಿ ಉಹಿಸಲು ಅಸಾಧ್ಯ. ಈ ಆತಂಕದಿಂದ ನಾನು ಸದಾ ಒಂದು ಚಿಕ್ಕ ಬ್ಯಾರೆಲ್ ನೀರು ಸಂಗ್ರಹಿಸಿ ಇಟ್ಟಿರುತ್ತೆನೆ.ಬೋರ್ವೆಲ್ ಕೆಟ್ಟಾಗಲೋ ಕರೆಂಟ್ ಕೈಕೊಟ್ಟಾಗಲೋ ಸಂಗ್ರಹಿಸಿಟ್ಟ ನೀರು ಮುಗಿದು ಫಜೀತಿ ಅನುಭವಿಸಿದ್ದಿದೆ.ಆಗ ನಾವು ಚಿಕ್ಕವರಿದ್ದಾಗ ಮನೆ ತುಂಬಾ ಸಂಗ್ರಹಿಸಿಟ್ಟುಕೊಳ್ಳುವ ನೀರಿನ ನೆನಪಾಗುತ್ತದೆ.
ಸಮಯಕ್ಕೆ ಸರಿಯಾಗಿ ದೊರಕದ ನೀರಿನಿಂದ ಎಷ್ಟೊ ಅವಘಡಗಳು ಸಂಭವಿಸುತ್ತವೆ.ಬಹುಮಹಡಿ ಕಟ್ಟಡದಲ್ಲಿ ವಾಸಿಸುವ ನಮ್ಮ ಸಂಭಂಧಿಕರೊಬ್ಬರು ಅಡುಗೆ ಮಾಡುವಾಗ ಉದ್ದ ತೋಳಿನ ನೈಟಿ ಧರಿಸಿ ಅಡುಗೆ ಮಾಡುತಿದ್ದರಂತೆ.ತೋಳಿಗೆ ಗ್ಯಾಸಿನ್ ಉರಿ ತಗುಲಿ ಅದು ಮೇಲಕ್ಕೆ ಆವರಿಸಿ ಕೊಳ್ಳ ತೊಡಗಿತು. ಗಾಬರಿಯಿಂದ ನೀರಿಗಾಗಿ ನಲ್ಲಿ ತಿರುಗಿಸಿದರೆ ಟ್ಯಾಂಕ್ ನಲ್ಲಿ ನೀರು ಮುಗಿದಿದ್ದವು.ಬಾತ್ ರೂಮ್ ನಲ್ಲೂ ಹನಿ ನೀರಿರಲಿಲ್ಲ.ಇಷ್ಟರಲ್ಲಿ ಬೆಂಕಿ ಇಡೀ ಬಟ್ಟೆ ಆವರಿಸಿ ಮೈಸುಟ್ಟು ಬಿಟ್ಟಿತು.ಇದರಿಂದ ಸಾವೂ ಸಂಭವಿಸಿತು. ಎಷ್ಟೋ ಜನ ನೀರಿಟ್ಟುಕೊಳ್ಳದೆ ಊಟ ಮಾಡುವಾಗ ಬಿಕ್ಖಳಿಗೆ ಹತ್ತಿ ನೀರು ತರುವಷ್ಟರಲ್ಲೆ ಸಾವು ಸಂಭವಿಸಿದ ಉದಾ ಗಳುಂಟು.
ದೂರದೂರದಿಂದ ನೀರನ್ನು ಹೊತ್ತು ತಂದು ಸಂಗ್ರಹಿಟ್ಟುಕೊಳ್ಳುತಿದ್ದ ನಾವು ಈಗ ಕೈ ಬೆರಳೊತ್ತಿದ್ದರೆ ಸಿಗುವ ನೀರಿನ ಪ್ರಾಮುಖ್ಯತೆ ಅರಿಯುತ್ತಿಲ್ಲ. ಮಕ್ಕಳಿಗಂತೂ ನಿರಿನ ಮಿತವ್ಯಯದ ಅರಿವೇ ಇಲ್ಲ.. ಭೂಮಿಯ ಮೂರು ಭಾಗ ನೀರಿನಿಂದ ಅವೃತ್ತವಾದರೂ ಕುಡಿಯಲು ಬಳಸಲು ಯೋಗ್ಯವಿಲ್ಲ. ಮುಂದೊಮ್ಮೆ ಭೂಲೋಕದ ಕುಡಿಯುವ ನೀರೆಲ್ಲ ಮುಗಿದು ಮಂಗಳ ಗ್ರಹಕ್ಕೆ ವಲಸೆ ಹೋಗಬೇಕಾಗಬಹುದೇನೋ…
——————————–
ಜ್ಯೋತಿ ಡಿ.ಬೊಮ್ಮಾ.
ಇನ್ನೂ ಕೆಲವು ಹಳ್ಳಿಗಳಲ್ಲಿ ನೀರಿಗಾಗಿ ನೀರೆಯರು ಪರದಾಡುವುದನ್ನು ನೋಡಿದರೆ ಅಯ್ಯೋ ಅನಿಸುತ್ತದೆ.