ಅಂಕಣ ಸಂಗಾತಿ

ಗಜಲ್ ಲೋಕ

ಪ್ರಕಾಶ ಜಾಲಳ್ಳಿಯವರ

ಗಜಲ್ ಗಳಲ್ಲಿ ಪ್ರಕಾಶಮಯ ಬೆಳಕು

ನಮಸ್ಕಾರಗಳು ಗಜಲ್ ಪ್ರೀತಿಸುತ್ತಿರುವ ಮನಸುಗಳಿಗೆ…

‘ಗಜಲ್’ ಎನ್ನುವ ಪದವು ಸಹೃದಯಿಯ ಕಿವಿಯ ದೇಹಲಿಜ್ ದಾಟುತ್ತಲೇ ಹೃದಯದಲ್ಲೊಂದು ಅಪರಿಮಿತ ಯೂನಿಕ್ ಕಂಪನ ಉಂಟಾಗುತ್ತದೆ. ವಾರ, ವಾರ ಒಬ್ಬೊಬ್ಬ ಗಜಲ್ ಗೋ ಅವರ ಬಗ್ಗೆ ಬರೆಯುತ್ತ ಗಜಲ್ ಗುಲ್ಜಾರ್ ನಲ್ಲಿ ವಿಹರಿಸುತ್ತಿರುವೆ. ಆ ಗುಲ್ಜಾರ್ ನ ಲತೆಯೊಂದಿಗೆ ತಮ್ಮ ಮುಂದೆ ಬರುತಿದ್ದೇನೆ, ತಾವು ನಿರೀಕ್ಷಿಸುತ್ತಿರುವ ಗಜಲ್ ಬೆಳದಿಂಗಳೊಂದಿಗೆ…

ಯಾರು ಬರುತ್ತಾರೆ ಇಲ್ಲಿ ಯಾರೋ ಬಂದಿರಬಹುದು

ನನ್ನ ಬಾಗಿಲನ್ನು ಗಾಳಿಯೇ ಅಲುಗಾಡಿಸಿರಬಹುದು”

ಕೈಫ್ ಭೋಪಾಲಿ”

          ‘ಬದಲಾವಣೆ’ ಎನ್ನುವ ಆಪದ್ಭಾಂಧವನ/ ಬಾಂಧವಳ ನಿರೀಕ್ಷೆ, ಕನವರಿಕೆಯಿಂದ ಬಾಳಲ್ಲಿ, ಸಮಾಜದಲ್ಲಿ ‘ಪರಿವರ್ತನೆ’ಯ ತಂಬೆಲರು ಬೀಸಬಹುದು, ಬೀಸಲಿಯೆಂದು ಬಯಸದ ವ್ಯಕ್ತಿಗಳು ಸಮಾಜದಲ್ಲಿ ಸಿಗುವುದು ಅಪರೂಪ. ಇದರಿಂದಾಗಿಯೇ ಉಪದೇಶ ಎನ್ನುವ ‘ರಕ್ತಬೀಜ’ ನಮ್ಮನ್ನೆಲ್ಲ ಆವರಿಸಿದ್ದು, ವಯಸ್ಸು ಬುದ್ದಿವಂತಿಕೆಯನ್ನು ಹೊತ್ತು ತರುತ್ತದೆ ಎಂಬ ಪರಿಚಿತ ಸಿದ್ಧಾಂತಕ್ಕೆ ಮೊರೆ ಹೋಗಿದ್ದೇವೆ. ಆದರೆ ಸಿದ್ಧಾಂತಕ್ಕಿಂತ ಉದಾಹರಣೆ ಜಗತ್ತನ್ನು ಹೆಚ್ಚು ಬದಲಿಸುತ್ತದೆ ಎಂಬುದನ್ನೆ ಮರೆಯುತಿದ್ದೇವೆ. ಈ ಕಾರಣಕ್ಕಾಗಿಯೇ “ಒಂದು ಸಿದ್ಧಾಂತವು ಸ್ವತಃ ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ” ಎಂಬ ಫ್ರೆಂಚ್ ತತ್ವಜ್ಞಾನಿ ಸಿಮೊನ್ ವೇಲ್ ಅವರ ಮಾತು ಇಂದು ಹೆಚ್ಚು ಆಪ್ತವೆನಿಸುತ್ತದೆ. ಇಂದು ನಮಗೆ ಬೇಕಾಗಿರುವುದು ಶ್ರಮದಾಯಕ ಜೀವನದ ಸಿದ್ಧಾಂತ. ಈ ನೆಲೆಯಲ್ಲಿ ಕಾವ್ಯ ಉಪದೇಶ, ಸಿದ್ದಾಂತಗಳ ಭಾರದಲ್ಲಿ ನಲುಗದೆ ಮನಸುಗಳನ್ನು ಚೇತೋಹಾರಿಯಾಗಿ ಇಡಬೇಕಾಗಿದೆ. ಅಮೇರಿಕನ್ ಕವಿ ಜೋಸೆಫ್ ಬ್ರಾಡ್ಸಕೀ ಯವರು ಕಾವ್ಯ ಕುರಿತು ಈ ರೀತಿಯಲ್ಲಿ ಹೇಳಿದ್ದಾರೆ. “For the poet the credo or doctrine is not the point of arrival but is, on the contrary, the point of departure for the metaphysical journey.” ಇಲ್ಲಿ ಕವಿಗೆ ನಂಬಿಕೆ ಅಥವಾ ಸಿದ್ಧಾಂತ ಮುಖ್ಯವಾಗದೆ ತತ್ವ ಮೀಮಾಂಸೆ ಪ್ರಸ್ತುತವಾಗಬೇಕು. ಕಾವ್ಯದ ಹಲವು ಸವ್ಯಸಾಚಿ ಮುಖಗಳಲ್ಲಿ ‘ಗಜಲ್’ ಎಂಬುದು ಭಾವಸಂಜೀವಿನಿಯಾಗಿದೆ. ಇದು ಉಸ್ತಾದ್ ಆಗಿರುವುದಕ್ಕಿಂತ ಹಮ್ ಸಫರ್ ಆಗಿರುವುದೆ ಹೆಚ್ಚು. ಅಂತೆಯೇ ಗಜಲ್ ಇಂದು ಜನಮಾನಸದಲ್ಲಿ ಬೇರೂರಿದ್ದು ಹಲವರ ಮನಸ್ಸಿನ ಪಿಸುಮಾತಾಗಿದೆ. ಇದರಲ್ಲಿ ಗಜಲ್ ಗೋ ಡಾ. ಪ್ರಕಾಶ ಬುದ್ದಿನ್ನಿ ಜಾಲಹಳ್ಳಿ ಅವರೂ ಒಬ್ಬರು.

        ಡಾ. ಪ್ರಕಾಶ ಬುದ್ದಿನ್ನಿ ಜಾಲಹಳ್ಳಿ ಹಳ್ಳಿಗಾಡಿನ ಪ್ರತಿಭೆ. ಇವರು ೧೯೮೫ ಮೇ ೦೩ ರಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಶ್ರೀ ಶಾಂತಪ್ಪ ಬುದ್ದಿನ್ನಿ ಹಾಗೂ ಶ್ರೀಮತಿ ಶ್ರೀದೇವಿ ದಂಪತಿಗಳ ಜ್ಯೇಷ್ಠ ಪುತ್ರರಾಗಿ ಜನಿಸಿದರು. ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಪಿ.ಯು.ಸಿ ಶಿಕ್ಷಣವನ್ನು ಜಾಲಹಳ್ಳಿಯ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು. ನಂತರ ಬಿ.ಎ. ಪದವಿಯನ್ನು ರಾಯಚೂರಿನ ಎಲ್.ವಿ.ಡಿ. ಕಾಲೇಜಿನಲ್ಲಿ ಪೂರೈಸಿದರು. ಮುಂದೆ ೨೦೦೮ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಚಿನ್ನದ ಪದಕದೊಂದಿಗೆ, ೨೦೦೯ ರಲ್ಲಿ ನಂದಿನಿ ಬಿ.ಇಡಿ ಕಾಲೇಜಿನಿಂದ ಬಿ.ಇಡಿ ಪದವಿಯನ್ನು ಪೂರೈಸಿದರು. ಮುಂದೆ ೨೦೧೩ರಲ್ಲಿ “ಚಂದ್ರಶೇಖರ ಕಂಬಾರರ ಶಿಖರಸೂರ್ಯ ಕಾದಂಬರಿಯ ಕಥನಕ್ರಮ” ಎಂಬ ವಿಷಯ ಕುರಿತು ಡಾ. ವಿಕ್ರಮ ವಿಸಾಜಿಯವರ ಮಾರ್ಗದರ್ಶನದಲ್ಲಿ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಎಂ.ಫಿಲ್. ಪದವಿಯನ್ನು, ೨೦೧೯ ರಲ್ಲಿ ಬೆಳಗಾವಿಯ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವಿದ್ಯಾಸಂಗಮದ ಡಾ. ವೈ ಬಿ ಹಿಮ್ಮಡಿಯವರ ಮಾರ್ಗದರ್ಶನದಲ್ಲಿ “ಬರಗೂರು ರಾಮಚಂದ್ರಪ್ಪ ಅವರ ವೈಚಾರಿಕ ಸಾಹಿತ್ಯ’ ಎಂಬ ವಿಷಯ ಕುರಿತು ಮಹಾಪ್ರಬಂಧವನ್ನು ಸಲ್ಲಿಸಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಸಾಹಿತ್ಯ, ಸಂಶೋಧನೆ, ಅಧ್ಯಾಪನದಲ್ಲಿ ತೊಡಗಿಸಿಕೊಂಡಿರುವ ಇವರು ಹಲವು ಕಡೆ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿ ಅಪಾರ ವಿಧ್ಯಾರ್ಥಿಗಳ ಮನಸ್ಸನ್ನು ಗೆದ್ದಿದ್ದಾರೆ. ಶ್ರೀಯುತರು ಪ್ರಸ್ತುತವಾಗಿ  ರಾಯಚೂರು ಜಿಲ್ಲೆಯ ದೇವದುರ್ಗದ ಜ್ಞಾನ ಜ್ಯೋತಿ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

     ಬಾಲ್ಯದಿಂದಲೂ ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ಶ್ರೀಯುತರು ಪಿಯುಸಿ ಓದುತ್ತಿರುವಾಗಲೇ ಸಾಹಿತ್ಯದ ಕಡೆ ಹೆಚ್ಚಿನ ಆಸಕ್ತಿಯನ್ನು ವಹಿಸಿದ್ದರು. ಕಾಲೇಜಿನಲ್ಲಿ ಪ್ರಕಟಿಸುತ್ತಿದ್ದ ಪತ್ರಿಕೆಗಾಗಿ ಕವಿತೆಯೊಂದನ್ನು ಬರೆದು ಅಧಿಕೃತವಾಗಿ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸಿದ್ದಾರೆ. ಇವರ ಗಜಲ್ ಜೊತೆಗೆ ಲೇಖನ, ಕಾವ್ಯ, ಶಾಯಿರಿ, ಹೈಕು ರಚನೆಯಲ್ಲಿ ತೊಡಗಿಸಿಕೊಂಡಿದ್ದು ಹಲವಾರು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವುಗಳಲ್ಲಿ ‘ನಲವತ್ತು ಗಜಲ್‍ಗಳು’ ಹಾಗೂ

‘ದೀಪ ಹಚ್ಚಿಟ್ಟ ರಾತ್ರಿ’ ಎಂಬ ಎರಡು ಗಜಲ್ ಸಂಕಲನಗಳನ್ನು ಹಾಗೂ ‘ಹೊಸ ವಸಂತದ ಕನಸುಗಳು’, ‘ಹೆದ್ದೊರೆ ನಾಡಿನ ಶಿವಯೋಗಿ’, ‘ಪರಮಪೂಜ್ಯ ಶ್ರೀ ಷ.ಬ್ರ. ವಿದ್ಯಾಮಾನ್ಯ ಶಿವಾಭಿನವ ಶಿವಾಚಾರ್ಯ ಮಹಾಸ್ವಾಮಿಗಳ ಅಭಿನಂದನ ಗ್ರಂಥ’, ‘ನನ್ನ ಏಳ್ಗೆಗೆ ನಾನೇ ಶಿಲ್ಪಿ’, (ಪಿ.ಸಿ. ಯಿಂದ ಪಿ.ಎಸ್.ಐ. ವರೆಗಿನ ಸೊಂದಪ್ಪನವರ ಪೊಲೀಸ್ ಜೀವನ ಕಥನ)… ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಇದರೊಂದಿಗೆ ಇವರ ಹಲವಾರು ಬಿಡಿ ಲೇಖನಗಳು ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಹಾಗೂ ಸಂಪುಟಗಳಲ್ಲಿಯೂ ಪ್ರಕಟಗೊಂಡಿವೆ.

       ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ಪ್ರಕಾಶ ಬುದ್ದಿನ್ನಿಯವರ ಕೆಲವು ಗಜಲ್‍ಗಳು ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಎ. ಎರಡನೇಯ ಸೆಮಿಸ್ಟರ್ ಬೇಸಿಕ್ ಕನ್ನಡ (೨೦೧೫-೧೮ ರ ಅವಧಿಗೆ) ಪಠ್ಯದಲ್ಲಿ ಸೇರಿವೆ. ನಿತ್ಯೋತ್ಸವ ಸಮಾಜ ಮತ್ತು ಸಾಂಸ್ಕೃತಿಕ ಸಂಘ (ರಿ) ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ೨೦೨೧ ರಲ್ಲಿ ಕನ್ನಡಸಿರಿ ನಿತ್ಯೋತ್ಸವ ಪ್ರಶಸ್ತಿ ದೊರಕಿದೆ. ಇದರೊಂದಿಗೆ ನಾಡಿನ ಹಲವು ಸಂಘ ಸಂಸ್ಥೆಗಳು ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ.

         ‘ಗಜಲ್’ ಎಂದರೆ ಎದೆ ಝಲ್ ಎನ್ನಿಸುವ ಪ್ರಸಂಗವನ್ನೂ ಕಲ್ಪವೃಕ್ಷ ಕಾಮಧೇನುವಿನಂತೆ ಮಾರ್ಪಡಿಸುವ ಅದಮ್ಯ ಚೈತನ್ಯ. ಇಂಥಹ ಚೇತನ ಹೊಂದಿರುವ ಸುಖನವರ್ ಅವರಿಂದ ರಚನೆಗೊಂಡ ಅಶಅರ್ ಮನದ ಬೇಗುದಿಗೆ ಬೀಗ ಹಾಕಿ ಶಾಂತಿಯ ತಪೋವನವನ್ನೆ ನಮ್ಮ ಮುಂದೆ ತೆರೆದಿಟ್ಟು, ಉಲ್ಲಾಸದ ಮೂಡ್ ಅನ್ನು ನಮ್ಮಲ್ಲಿ ತುಂಬುತ್ತದೆ. ಉದ್ವೇಗದ, ರಕ್ತದೊತ್ತಡದ, ಭೋಗ ಸಂಸ್ಕೃತಿಯ ಶಮನಕ್ಕೆ ಗಜಲ್ ಗಳು ಅಲ್ಲಾವುದ್ದೀನನ ಅದ್ಭುತ ದ್ವೀಪಗಳಾಗಿವೆ. ಗಜಲ್ ಗೋ ಪ್ರಕಾಶ್ ಜಾಲಹಳ್ಳಿ ಅವರ ಗಜಲ್ ಗಳಲ್ಲಿ ಒಂದು ಅನಂತ ನಿರೀಕ್ಷೆ, ನಾಳೆಯ ಬಗ್ಗೆ ಕನಸುಗಳು, ವಿಷಾದ, ಧರ್ಮ, ದೇವರುಗಳ ಬಗ್ಗೆ ಒಂದು ರೀತಿಯ ವೈಚಾರಿಕ ಸಿನಿಕತನ, ಮಾತು ಮೌನಗಳ ನಡುವಣ ಗೊಂದಲ, ದಯೆ, ಕರುಣೆ, ಮಾನವೀಯ ಮೌಲ್ಯಗಳ ಬಗ್ಗೆ ಕಳವಳ, ಸಾಮಾಜಿಕ ವ್ಯವಸ್ಥೆಯ ವಿಹ್ವಲತೆ ನಮ್ಮನ್ನು ತಟ್ಟನೆ ತಾಕಿ ಬಿಡುತ್ತವೆ. ಇದರೊಂದಿಗೆ ಕತ್ತಲಿನ ಕಾಡಿಗೆ ಬಣ್ಣದ ನೀರವ ಮೌನದಲ್ಲಿ ಧ್ಯಾನಸ್ಥ ಹಣತೆಗಳ ಪಿಸುಮಾತಿನಂತೆಯೇ ಇವರ ಗಜಲ್ ಗಳು ತಮ್ಮ ಅನುಭವದ ಪ್ರಮಾಣಿಕತೆಯಿಂದ, ತಂತಿ ಮೀಟಿದ ನೋವ ತಡೆಯಲಾರದೆ ಮಿಡಿವ ವೀಣೆಯಂತೆ, ನಿಶ್ಶಬ್ದ ರಾತ್ರಿಯ ಮೆಲು ನಿಟ್ಟುಸಿರಿನ ಆರ್ತತೆಯಂತೆ ನಮ್ಮ ಮನ ತಟ್ಟುತ್ತವೆ.

ಬೆಳಕ ಸಾಲು ಬಿತ್ತಲು ಲೋಕದ ಕತ್ತಲಿಗೆ ಹಚ್ಚಬೇಕಿದೆ ಹಣತೆ

ಅನುಮಾನದ ಹುತ್ತಗಳಿಗೆ ನಂಬಿಕೆ ತೊಡಿಸಲು ನೆಚ್ಚಬೇಕಿದೆ ಹಣತೆ‘’

ಈ ಮೇಲಿನ ಷೇರ್ ನಲ್ಲಿ ಸಿಟ್ಟು, ಆಕ್ರೋಶ, ಮೌನ, ಶಾಂತಿ, ಸಮಾಧಾನ ಎಲ್ಲವೂ ಮಿಸುಕಾಡುತ್ತಿವೆ. ಮಬ್ಬು ದಾರಿಯಲ್ಲಿ ಬೆಳಕನ್ನರಸುತ್ತಿರುವ ಎಲ್ಲ ಯುವ ಮನಗಳ ಪ್ರತೀಕದಂತೆ ಈ ಗಜಲ್ ಮೂಡಿಬಂದಿದೆ. ಇಲ್ಲಿಯ ‘ಹಣತೆ’ ಎಂಬ ರದೀಫ್ ಆಶಾಕಿರಣದ ಹೊಂಗನಸನ್ನು ಪ್ರತಿಧ್ವನಿಸುತ್ತದೆ. ಇಲ್ಲಿ ಬಳಕೆಯಾಗಿರುವ ‘ಕತ್ತಲು’ ಕೇವಲ ಬಾಹ್ಯ ಪ್ರಪಂಚಕ್ಕೆ ಸಂಬಂಧಿಸಿರದೆ ಮನುಕುಲದ ಅಂಧಕಾರವನ್ನು ಧ್ವನಿಸುವುದರ ಜೊತೆಗೆ ಮನುಷ್ಯನ ಕಲುಷಿತ ಭಾವನೆಗಳನ್ನೂ ನೈರ್ಮಲಿಕರಣಗೊಳಿಸುವಲ್ಲಿ ಮುನ್ನೆಲೆಗೆ ಬರುತ್ತದೆ.

ನೀ ಬರುವೆಯೆಂದು ಕಾದೆ ನೀನು ಬರಲಿಲ್ಲ ದೀಪ ಹಚ್ಚಿಟ್ಟ ರಾತ್ರಿ

ನನ್ನೆದೆಯ ಬಾನಿನಲ್ಲಿ ನೀನು ಚಿತ್ತಾರವಾಗಲಿಲ್ಲ ದೀಪ ಹಚ್ಚಿಟ್ಟ ರಾತ್ರಿ

ಕಳೆದುಕೊಂಡ ಭಾವ, ಶೂನ್ಯತೆ, ದಿಕ್ಕಿಲ್ಲದ ಮೌನ ಯಾತನೆಯನ್ನು ಮೇಲಿನ ಷೇರ್ ಅರುಹುತ್ತದೆ. ಪ್ರೇಮಿಗಳ ಮಿಲನವೇ ಪ್ರೀತಿಯನ್ನು ಮುಖಮ್ಮಲ್ ಆಗಿಸುತ್ತದೆ. ಆದಾಗ್ಯೂ ಪ್ರೀತಿಯಲ್ಲಿ ಕನವರಿಕೆ, ವಿರಹ ವೇದನೆ, ಭಗ್ನಗೊಂಡ ಹೃದಯ, ಮೆದು ಕನಸುಗಳ ಆಲಿಂಗನ, ಕಾಯುತ್ತ ಪ್ರೀತಿಸುವುದು, ಪ್ರೀತಿಸುತ್ತ ಕಾಯಿಸುವುದು… ಇವೆಲ್ಲ ಪ್ರೇಮದ ಪಂಚಮವೇದ ಭಾವವನ್ನು ಸಾಕಾರಗೊಳಿಸುತ್ತವೆ. ಇಲ್ಲಿ ಗಜಲ್ ಗೋ ಪ್ರಕಾಶ್ ಅವರು ಪ್ರೇಮಿಗಳ ಮನೋಪಲ್ಲಟದ ನಾಡಿಮಿಡಿತವನ್ನು ಸಶಕ್ತವಾಗಿಯೇ ದಾಖಲಿಸಿದ್ದಾರೆ.

        ಭಾರವಾದ ಮನಸುಗಳು ಜೀವನ ಪ್ರೀತಿಯನ್ನು ಕಳೆದುಕೊಂಡಿರಲು ಗಜಲ್ ಜನ್ನತ್ ಬಾಳಿನ ಷೇರ್ ಗೆ ವಜನ್ ಬರಲು ರಿದಂ ಕೂಡಿಸಬೇಕಿದೆ. ಈ ದಿಸೆಯಲ್ಲಿ ಕನ್ನಡ ಗಜಲ್ ಪರಂಪರೆ ಮಾರ್ಗವೊಂದನ್ನು ಸೃಷ್ಟಿಸಲಿ, ಶಾಯರ್ ಶ್ರೀ ಪ್ರಕಾಶ ಜಾಲಹಳ್ಳಿ ಅವರಿಂದ ಗಜಲ್ ಲೋಕ ಮತ್ತಷ್ಟು ಮೊಗೆದಷ್ಟೂ ಪ್ರಕಾಶಗೊಳ್ಳಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.

ಬದುಕುವ ಬಯಕೆ ತಾಳಲೆ ಅಥವಾ ಸಾವಿಗೆ ಮುಖಾಮಾಖಿಯಾಗಲೆ

ಪ್ರೀತಿಯಲ್ಲಿ ಏನಾಗುತ್ತದೆಂದು ಯೋಚಿಸುತ್ತಾ ಸಲಹೆ ನೀಡುತ್ತಾ ಹೋಗು”

ಹಫೀಜಾ ಜಾಲಂಧರಿ

      ಚಿಂತೆಯ ಚಿತೆಯಿಂದ ನೆಮ್ಮದಿಯ ಕಡೆಗೆ ಮನಸು ಹೊರಳಬೇಕೆಂದರೆ ನಮ್ಮನ್ನು ನಾವು ಗಜಲ್ ದುನಿಯಾದಲ್ಲಿ  ಮೈಮರೆಯುವುದು. ಹಾಗಂತ ಹೆಚ್ಚು ಕಾಲ ಮೈಮರೆಯುವಂತಿಲ್ಲ. ಕಾರಣ, ಕಾಲದ ಸರಪಳಿಯನ್ನು ಕಡೆಗಣಿಸುವಂತಿಲ್ಲ. ಅನಿವಾರ್ಯವಾಗಿ ಇಂದು ನನಗೆ ಇಲ್ಲಿಂದ ಹೋಗಲೆಬೇಕಿದೆ, ಮತ್ತೆ ಮುಂದಿನ ಗುರುವಾರ‌ ತಮ್ಮ ಪ್ರೀತಿಯನ್ನರಸುತ ಬರಲು.. ಹೋಗಿ ಬರುವೆ, ಅಲ್ವಿದಾ….


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top