‘ಈಗ’ ಎಂಬ ಮೂರು ಕಥೆಗಳ ಚೊಂಚಲಗಳ ಸಿನೆಮಾ

ಲೇಖನ

‘ಈಗ’ ಎಂಬ ಮೂರು ಕಥೆಗಳ ಚೊಂಚಲಗಳ ಸಿನೆಮಾ

ಕೆ.ಶಿವು.ಲಕ್ಕಣ್ಣವರ

‘ಈಗ’ ಎಂಬ ಮೂರು ಕಥೆಗಳ ಚೊಂಚಲಗಳ ಸಿನೆಮಾಕ್ಕಾಗಿ ‘ಉಲ್ಟಾ ಪಟ್ಟಿ’ ಖ್ಯಾತಿಯ ಎನ್.ಎಸ್.ಶಂಕರ್ ಅವರ ಪಯಣಾನುಭವವೂ..! —

ಎನ್.ಎಸ್.ಶಂಕರ್ ಅವರು ಮೂಲತಃ ಪಿ.ಲಂಕೇಶ್ ಅವರ ಶಿಷ್ಯರೆಂದೇ ನಾನು ತಿಳಿಕೊಂಡಿದ್ದೇನೆ. ಅವರು ಲೇಖಕರು. ಅಲ್ಲದೇ ಪತ್ರಕರ್ತರು..!

ಇಂತಹ ಈ ಲೇಖಕ ಮತ್ತು ಪತ್ರಕರ್ತ ಎನ್.ಎಸ್.ಶಂಕರ್ ಅವರು ‘ಸುದ್ದಿ ಸಂಗಾತಿ’ ಮತ್ತು ‘ಮುಂಗಾರು’ ಪತ್ರಿಕೆಯ ಸಂಸ್ಥಾಪಕರೂ ಕೂಡ ಹೌದು..!

ಅವರು ‘ಪಜಾವಾಣಿ’, ಅಲ್ಲದೇ ‘ಲಂಕೇಶ್ ಪತ್ರಿಕೆ’ಯ’ ವರದಿಗಾರರಾಗಿಯೂ ಕೆಲಸ ಮಾಡಿದವರು. ಅಂತಹ ಅನುಭವಿ ಎನ್.ಎಸ್.ಶಂಕರ್ ಅವರು ಪಿ.ಲಂಕೇಶ್ ರ ‘ಮುಟ್ಟಿಸಿಕೊಂಡವರು’ ಕಥೆಯನ್ನು ಕಿರುಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆಯನ್ನು ಇಟ್ಟವರು. ಅವರ ‘ಮಾನಸೋಲ್ಲಾಸ’ ಕಿರುಚಿತ್ರವು ಅಂತರಾಷ್ಟ್ರೀಯವಾಗಿ ಸದ್ದು ಮಾಡಿತ್ತು..!

ಅಲ್ಲದೇ ರಮೇಶ ಅರವಿಂದ್ ಅವರ ಅಭಿನಯದ ‘ಉಲ್ಟಾ ಪಲ್ಟಾ’ ಸಿನೆಮಾವೂ ಬಹು ಚರ್ಚಿತ ಮತ್ತು ಸಾಕಷ್ಟು ಪ್ರಶಸ್ತಿಗಳನ್ನು ಪಡೆದ ಸಿನಿಮಾವೂ ಹೌದು ನನ್ನ ಪ್ರಕಾರ..!

‘ಅರಸು ಯುಗ’, ‘ಚಂಚಲೆ’ ಇನ್ನೂ ಮುಂತಾದ ಕೃತಿಗಳು ಬಹು ಪ್ರಖ್ಯಾತಿಯನ್ನು ಪಡೆದಿದ್ದವು. ಸಮಕಾಲೀನ ಘಟನಾವಳಿಗಳು ಕುರಿತಂತೆ ಬರೆದ ಬರಹವಾದ ‘ಉಸಾಭರಿ’ಯು ಪ್ರಖ್ಯಾತಿಯನ್ನೂ ಪಡೆದಿತ್ತು..!

ಇಂತಹ ಎನ್.ಎಸ್.ಶಂಕರ್ ಅವರ ‘ಈಗ’ ಸಿನೆಮಾಕ್ಕಾಗಿನ ಈ ಒಂದು ಪ್ರವಾಸಾನುಭವೂ ಒಂದು ಕಿರು ಚಿತ್ರವಾಗಬಹುದೂ..! —

ಅದನ್ನು ಅವರ ಮಾತಿನಲ್ಲಿಯೇ ಕೇಳಿರಿ…

ಒಂದು ಕಿರು ಪ್ರವಾಸ..!

………………………………

ಮಧ್ಯಾಹ್ನ ನಾವು- ಅಂದರೆ ನಾನು ಮತ್ತು ನಮ್ಮ ಕಲಾ ನಿರ್ದೇಶಕ ದಿವಾಕರ್- ವಿಶ್ವಖ್ಯಾತಿಯ ಕಲಾವಿದ ಕೆ.ಟಿ. ಶಿವಪ್ರಸಾದರ ಮನೆಯಲ್ಲಿ ಅವರ ಎದುರು ಕೂತಿದ್ದೆವು. ಶಿವಪ್ರಸಾದ್ ನನಗಿಂತ ಸಾಕಷ್ಟು ಹಿರಿಯರಾದರೂ ನನಗೆ ಏಕವಚನದ ಗೆಳೆಯ. ನಾವು ಅಂದು ಶನಿವಾರ ಅಕ್ಟೋಬರ್ 15ರಂದು ಬೆಳಗ್ಗೆ ಬೆಂಗಳೂರು ಬಿಟ್ಟು ನಮ್ಮ ಕಥಾವಸ್ತು ಸಂಬಂಧ ಸಂಶೋಧನೆ ಹಾಗೂ ಶೂಟಿಂಗ್ ಲೊಕೇಶನ್ ಅಂತಿಮಗೊಳಿಸಲು ಮಂಗಳೂರು ದಿಕ್ಕು ಹಿಡಿದಿದ್ದೆವು. ಹಾದಿ ಮಧ್ಯೆ ಈ ಕಲಾವಿದನನ್ನು ಭೇಟಿ ಮಾಡಿಕೊಂಡೇ ಹೋದರಾಯಿತೆಂದು ಹಾಸನದಲ್ಲಿ ಅವರ ಮನೆ ಹೊಕ್ಕಿದ್ದೆವು. ನಾನು ಮತ್ತು ಕೇಟಿ ಭೇಟಿ ಮಾಡಿ ದಶಕದ ಮೇಲೇ ಆಗಿತ್ತೇನೋ. ಇಬ್ಬರಿಗೂ ಖುಷಿ. ಶಿವಪ್ರಸಾದ್ ತಮ್ಮ ಮುಂಬಯಿ ದಿನಗಳನ್ನು ಮೆಲುಕು ಹಾಕುತ್ತಿದ್ದರು. ಅವರೊಮ್ಮೆ ಉಸ್ತಾದ್ ಬಿಸ್ಮಿಲ್ಲಾ ಖಾನರ ಶಹನಾಯಿ ಕಛೇರಿಗೆ ಹೋಗಿದ್ದರಂತೆ. ತನ್ಮಯರಾಗಿ ಶಹನಾಯಿ ನುಡಿಸುತ್ತಿದ್ದ ಉಸ್ತಾದ್ ಬಿಸ್ಮಿಲ್ಲಾ ಇದ್ದಕ್ಕಿದ್ದಂತೆ ಕಛೇರಿ ನಿಲ್ಲಿಸಿ ಸಹ ವಾದ್ಯಗಾರರ ಕಡೆ ಕೈ ಮಾಡಿ ಅವರ ನುಡಿಸಾಣಿಕೆಯನ್ನೂ ನಿಲ್ಲಿಸಿದರು. ಸನಿಹದಲ್ಲೆಲ್ಲೋ ಹಕ್ಕಿ ಉಲಿತ. ಬಿಸ್ಮಿಲ್ಲಾ ಖಾನ್ ಕೈ ಸನ್ನೆ ಮಾಡಿ ‘ಆಪ್ನೇ ವೋ ಸುನಾ? ಮುಝ್ ಸೆ ಭೀ ಅಚ್ಛಾ ಹೈ’ ಅಂದರು! (ನಿಮಗೆ ಅದು ಕೇಳಿಸಿತೇ? ನನಗಿಂತ ಅದೇ ಚಂದ’)…
ಇದನ್ನು ಹೇಳುತ್ತ ಹೇಳುತ್ತ ಶಿವಪ್ರಸಾದ್ ಭಾವುಕರಾದರು. ಅವರಿಗೆ ಅರಿವಿಲ್ಲದೆ ಅವರ ಕಣ್ಣಂಚಿನಲ್ಲಿ ನೀರಾಡಿತು!….
ಶಿವಪ್ರಸಾದ್ ಹಾಗೂ ನನ್ನ ಗೆಳೆತನಕ್ಕೆ ಸುಮಾರು ನಾಲ್ಕು ದಶಕಗಳ ಇತಿಹಾಸವಿದೆ. ಇಬ್ಬರೂ ಒಟ್ಟಿಗೇ ನಮ್ಮ ಕಾಲದ ಏಳುಬೀಳುಗಳನ್ನು ಹತ್ತಿರದಿಂದ ಕಂಡಿದ್ದೇವೆ; ಇತಿಹಾಸಕ್ಕೆ ಸಾಕ್ಷಿಯಾಗಿದ್ದೇವೆ. ಆದರೆ ಇಷ್ಟೂ ಕಾಲದಲ್ಲಿ ಅವರು ಹೀಗೆ ಭಾವುಕರಾದದ್ದನ್ನು ನಾನು ಎಂದೂ ಕಂಡಿರಲಿಲ್ಲ…
‘ಥೋ, ಕಣ್ಣಲ್ಲಿ ನೀರೇ ಬಂದುಬಿಡ್ತು ಮಾರಾಯ’ ಅಂತ ಉದ್ಗರಿಸಿದರು!
ಸಾಕಷ್ಟು ಹರಟಿ, ಅವರ ಹೊಸ ಪೇಂಟಿಂಗುಗಳನ್ನು ನೋಡಿ, ಅವರ ಶ್ರೀಮತಿ ಸುವರ್ಣರ ಕೈಯಡುಗೆ ಸವಿದು ಹೊರಡುವಾಗ ಶ್ರೀಮತಿ ಸುವರ್ಣ ತಾವು ಈಚೆಗೆ ಬರೆದ ಕಾದಂಬರಿಯ ಪ್ರತಿ ಕೊಟ್ಟು ಕಳಿಸಿದರು.
ರಾತ್ರಿಯೇ ಮಂಗಳೂರು ತಲುಪಿ ನಿದ್ದೆಗೆ ಶರಣಾದೆವು.

ಮಾರನೆ ಬೆಳಗ್ಗೆ ಹಲವರನ್ನು ಭೇಟಿ ಮಾಡುವುದಿತ್ತು. ನಮ್ಮ ಸಮೂಹ ಬಂಡವಾಳದ ಸಿನಿಮಾ ‘ಈಗ…’ ಮೂರು ಕತೆಗಳ ಗೊಂಚಲು ತಾನೇ? ಅದರಲ್ಲಿ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್ ಬರೆದ ‘ರ‌್ಯಾಗಿಂಗ್’ ಕೂಡ ಒಂದು. (ಆ ಕತೆಗೆ ನಾನು ಸಿನಿಮಾದಲ್ಲಿ ‘ಡಿಸೆಂಬರ್ 6’ ಅಂತ ಮರುನಾಮಕರಣ ಮಾಡಿರುವೆ) ಆ ಕತೆ- ಬಾಬರಿ ಮಸೀದಿ ಧ್ವಂಸವಾದ ದಿನ, ಕರಾವಳಿಯ ಒಂದು ಪುಟ್ಟ ಪಟ್ಟಣದಲ್ಲಿ ಏನು ನಡೆಯಿತು ಎಂಬುದನ್ನು ಶೋಧಿಸುತ್ತದೆ. ಅದಕ್ಕಾಗಿ ನಾನು ಸ್ಥಳೀಯರ ಅನುಭವಗಳನ್ನು ಪ್ರತ್ಯಕ್ಷ ಕೇಳಬೇಕಾಗಿತ್ತು. ಆ ಅನುಭವಗಳ ಹಿಂದಿನ ಆತಂಕ, ತಳಮಳಗಳನ್ನು ಅರಿಯಬೇಕಿತ್ತು. ಭಾರತದ ಇತಿಹಾಸವನ್ನು ಶಾಶ್ವತವಾಗಿ ಬದಲಿಸಿದ ವಿದ್ಯಮಾನವೊಂದರ ನೆಲಮಟ್ಟದ ಪರಿಣಾಮಗಳನ್ನು ಅರಿಯಬೇಕಿತ್ತು… ಬೆಳಗ್ಗೆಯಿಂದಲೇ ಹಲವಾರು ಗೆಳೆಯರು ಒಬ್ಬೊಬ್ಬರಾಗಿ ನಮ್ಮ ಹೋಟೆಲ್ ರೂಮಿಗೆ ಬಂದಿಳಿದರು. ಲೇಖಕ ಹಾಗೂ ಹಿರಿಯ ಪತ್ರಕರ್ತ ಮಹಮ್ಮದ್ ಕುಳಾಯಿ ತಮ್ಮಿಬ್ಬರು ಮೊಮ್ಮಕ್ಕಳೊಂದಿಗೆ ಬಂದರು. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು ತರಾತುರಿಯಲ್ಲಿ ಹೊರಡುವಷ್ಟರಲ್ಲಿ ನಮ್ಮ ‘ಕತೆಗಾರ’- ಅರ್ಥಾತ್ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್ ಪಡುಬಿದ್ರಿಯಿಂದ ಬಂದರು. ತುಸು ಹೊತ್ತಿಗೆ ರಂಗಕರ್ಮಿ ಚಂದ್ರಹಾಸ ಉಲ್ಲಾಳ ಬಂದರು. ಅವರ ಹಿಂದೆಯೇ ‘ಈದಿನ’ ಪೋರ್ಟಲ್ಲಿನ ಉಮರ್ ಬಂದರು. ಚಂದ್ರಹಾಸ ಉಲ್ಲಾಳರ ಮುಖಾಂತರ ನಮಗೆ ಸ್ಥಳೀಯ ರಂಗಕಲಾವಿದರ ಸಂಪರ್ಕ ಬೇಕಾಗಿತ್ತು. ಇವರೆಲ್ಲರೊಂದಿಗೆ ಚರ್ಚಿಸುತ್ತಿರುವಾಗ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ (ಅಬ್ದುಲ್ ಮುನೀರ್) ತಮ್ಮೊಬ್ಬ ಗೆಳೆಯರೊಂದಿಗೆ ಬಂದರು. ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟದಲ್ಲಿ ಕಂಠಮಟ್ಟ ಮುಳುಗಿರುವ ಮುನೀರ್ ಅತೀವ ಒತ್ತಡದಲ್ಲಿದ್ದರು. ಅವರು 18ಕ್ಕೆ ಟೋಲ್ ಗೇಟ್ ಮುತ್ತಿಗೆ ಕಾರ್ಯಕ್ರಮ ಘೋಷಿಸಿದ್ದರು. ಆ ಹಿನ್ನೆಲೆಯಲ್ಲಿ ಹಿಂದಿನ ರಾತ್ರಿ 3 ಗಂಟೆವರೆಗೆ ಪೊಲೀಸರು ಈ ಹೋರಾಟಗಾರರ ಮನೆಗಳ ಮೇಲೆ ದಾಳಿ ಮಾಡಿ, ಮರುದಿನ ಪೊಲೀಸ್ ಠಾಣೆಗೆ ಬರುವಂತೆ ಹಾಗೂ ಮುತ್ತಿಗೆ ಕಾರ್ಯಕ್ರಮ ಕೈ ಬಿಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಹೋಗುವಂತೆ ತಾಕೀತು ಮಾಡಿದ್ದರು! ಆದರೆ ಯಾವ ಕಾರಣಕ್ಕೂ ತಮ್ಮ ಕಾರ್ಯಕ್ರಮ ಕೈ ಬಿಡಲು ತಯಾರಿರದಿದ್ದ ಮುನೀರ್, ಠಾಣೆ ಕಡೆ ತಲೆಯೇ ಹಾಕಿರಲಿಲ್ಲ. ಹಾಗಾಗಿ ಯಾವ ಗಳಿಗೆ ಬೇಕಾದರೂ ಅವರನ್ನು ಬಂಧಿಸುವ ಆತಂಕವಿತ್ತು. ಇವರು ಕೂಡ ಬ್ಯಾಗಿಗೆ ಬಟ್ಟೆಗಳನ್ನು ತುರುಕಿಕೊಂಡು ಸಜ್ಜಾಗಿಯೇ ಬಂದಿದ್ದರು! ಅಂಥ ಒತ್ತಡದಲ್ಲೂ ನಮ್ಮೊಂದಿಗೆ ನಿರುಮ್ಮಳವಾಗಿ ಕೂತು ಮೂವತ್ತು ವರ್ಷ ಹಿಂದಿನ ಕತೆಗಳನ್ನು ಮೆಲುಕು ಹಾಕಿದರು…

ಅಂತೂ ಇವರೆಲ್ಲರೊಂದಿಗೆ ಮಾತುಕತೆ ಮುಗಿಸಿದ ಮೇಲೆ ಪಿ. ಮಹಮ್ಮದ್ ತಾವು ಕತೆ ಬರೆಯುವಾಗ ತಮ್ಮ ಕಣ್ಣ ಮುಂದಿದ್ದ ಮನೆ, ಓಣಿ ಇತ್ಯಾದಿಗಳನ್ನು ನಮಗೆ ಮನದಟ್ಟು ಮಾಡಿಸಲೆಂದು ಒಂದು ಸುತ್ತು ಅಲ್ಲಿ ಇಲ್ಲಿ ಸುತ್ತಾಡಿಸಿದರು. ಮತ್ತೆ ಊಟ ಮಾಡಿದೆವು.
ವಾರ್ತಾಭಾರತಿ ನಿರ್ವಾಹಕ ಸಂಪಾದಕ ಬಿ.ಎಂ. ಬಷೀರರನ್ನು ಕಾಣಲು ಬರುವುದಾಗಿ ನಾನು ಒಪ್ಪಿಕೊಂಡಿದ್ದೆ. ಮಹಮ್ಮದರ ಜೊತೆ ಪತ್ರಿಕಾಲಯಕ್ಕೆ ಹೋಗಿ ಬಷೀರರ ಜೊತೆ ಒಂದಷ್ಟು ಹರಟಿಯಾಯಿತು. ನನಗೆ ಈವರೆಗೆ ಡಿಸೆಂಬರ್ 6ರ ಘಟನಾವಳಿಗಳ ಮುಸ್ಲಿಂ ಆವೃತ್ತಿ ಮಾತ್ರ ಸಿಕ್ಕಿತ್ತು. ಇನ್ನೊಂದು ಬದಿಯ ವಿವರಣೆಯನ್ನೂ ಕೇಳುವುದು ನನ್ನ ಚಿತ್ರಕಥೆಗೆ ಅತ್ಯವಶ್ಯವಾಗಿತ್ತು. ಈ ಕಥಾನಕ- ದೃಷ್ಟಿದೋಷದ ಒಮ್ಮುಖ ನೋಟವಾಗುವುದು ನನಗೆ ಬೇಕಿರಲಿಲ್ಲ. ಆ ಅಂಧಕಾರದ ಚರಿತೆಯಲ್ಲೇ ಬೆಳಕಿಂಡಿಗಳಿಗಾಗಿ ಮನಸ್ಸು ತಡಕುತ್ತಿತ್ತು…. ಅದಕ್ಕಾಗಿ ಬಷೀರರ ನೆರವು ಕೋರಿದೆ. ಅವರು ತಮ್ಮ ವರದಿಗಾರರಿಗೆ ಹೇಳಿ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಮಂಗಳೂರಿಗೆ ಹೋದ ಮೇಲೆ ಸಮುದ್ರದಂಡೆ ಕಾಣದೆ ಮರಳುವುದುಂಟೇ? ಸಂಜೆ ಪಣಂಬೂರು ಬೀಚಿಗೆ ತೆರಳಿ ಅಡ್ಡಾಡಿ ಬಂದೆವು.

ಮಾರನೇ ಬೆಳಗ್ಗೆ ವಾರ್ತಾಭಾರತಿ ಮಂಗಳೂರು ಬ್ಯೋರೋ ಮುಖ್ಯಸ್ಥ ಪುಷ್ಪರಾಜ್ ಮೂಲಕ ಬಜಂಗದಳದ ಮುಖಂಡ ರಾಜಗೋಪಾಲ ರೈ ಅವರ ಭೇಟಿಯಾಯಿತು. ಆದರೆ ಅವರ ಮನಸ್ಸಿನಲ್ಲಿ ಅದೇನು ಅನುಮಾನಗಳಿದ್ದವೋ, ನಮ್ಮ ಮುಂದೆ ರೈ ಏನೂ ಹೇಳಬಯಸಲಿಲ್ಲ! ಅವರ ‘ಅಸಹಕಾರದಿಂದ’ ನಮ್ಮಷ್ಟೇ ನಿರಾಸೆಗೊಂಡ ಪುಷ್ಪರಾಜ್ ನಮ್ಮನ್ನು ಹಿಂದೂ ಯುವ ಸೇನೆಯ ಎಂಜಿ ಹೆಗಡೆಯವರ ಬಳಿ ಕರೆದೊಯ್ದರು. ಹೆಗಡೆಯವರು ಮುಂಚೆ ಆರೆಸ್ಸೆಸ್ಸಿನ ಒಡಲಲ್ಲೇ ಇದ್ದು ಈಗ ಸಿಡಿದು ಹೊರಬಂದಿದ್ದರು. ಬಾಬರಿ ಮಸೀದಿ ಗುಮ್ಮಟದ ಮೇಲೆ ಹತ್ತಿದ್ದ ಮಂಗಳೂರಿನ ಹುಡುಗರೆಲ್ಲ ಇವರ ಸಹಚರರೇ ಅಂತೆ. ಒಂದು ತಾಸಿಗೂ ಮಿಕ್ಕಿ ನಮ್ಮೊಂದಿಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡರು….

ಅವರಿಂದ ಬೀಳ್ಕೊಂಡು ಸುರತ್ಕಲ್ ಮತ್ತು ಕಾಟಿಪಳ್ಳ ಪ್ರದೇಶಗಳಲ್ಲಿ ಒಂದು ಸುತ್ತು ಹೊಡೆದು ಮತ್ತೆ ಚಿಕ್ಕಮಗಳೂರಿನ ಕೊಪ್ಪದ ಹಾದಿ ಹಿಡಿದೆವು. ಲಂಕೇಶರ ಮನೋಜ್ಞ ಕತೆ ‘ಮುಟ್ಟಿಸಿಕೊಂಡವನು’ ಚಿತ್ರೀಕರಣ ಮಾಡಲು ನಾನು ಆರಿಸಿಕೊಂಡ ತಾಣ- ಕೊಪ್ಪ. ನಾನು ಉಲ್ಟಾ ಪಲ್ಟಾ ಚಿತ್ರಿಸಿದ್ದೂ ಇದೇ ಊರಿನಲ್ಲಿ. ಹಾಗಾಗಿ ಸಂಜೆ ಕೊಪ್ಪ ಪಟ್ಟಣ ಸಮೀಪವಾದಂತೆ ನನ್ನಲ್ಲೇನೋ ಹುರುಪು- ನಮ್ಮೂರು ಬಂತು ಎಂಬ ಸಂಭ್ರಮ! I felt nostalgic! ಹಾಗೆ ನೋಡಿದರೆ ಈಗ ಕೊಪ್ಪ ಗುರುತೇ ಸಿಗದಷ್ಟು ಬದಲಾಗಿಹೋಗಿದೆ. ಇಪ್ಪತ್ತೈದು ವರ್ಷಗಳಾದುವಲ್ಲ?!

ಉಲ್ಟಾ ಪಲ್ಟಾ ಸಮಯದಲ್ಲಿ ನಮ್ಮ ತಂಡಕ್ಕೆ ಆಸರೆ ನೀಡಿದ್ದು ಚಿಟ್ಟೆಮಕ್ಕಿಯ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಒಡೆಯರೂ ಅರ್ಚಕರೂ ಆದ- ರವೀಂದ್ರ ಪಟವರ್ಧನ್. ಮೊದಲಿಗೆ ಅವರನ್ನು ಕಂಡೆವು.

ಮರುದಿನ ನಮಗೆ ಬೇಕಾದ ಲೊಕೇಶನ್ ಗಳೆಲ್ಲವನ್ನೂ ಸ್ಥಳೀಯ ಮಿತ್ರ ಹರೀಶ್ ಕುಟ್ಟಯವರೊಂದಿಗೆ ಜಾಲಾಡಿದೆವು. ಕೊಪ್ಪ ಈಗಲೂ ನಮಗೆ ಹಳೆ ಆತಿಥ್ಯ ನೀಡಲು ಸನ್ನದ್ಧವಾಗಿದ್ದಂತೆ ನಮಗೆ ಭಾಸವಾಯಿತು…

ಒಟ್ಟು ಪ್ರವಾಸ ಮುಗಿಸಿ ಮಂಗಳವಾರ 18ರ ನಡುರಾತ್ರಿ ಒಂದು ಗಂಟೆಗೆ ಬೆಂಗಳೂರಿನ ಮನೆ ತಲುಪಿದೆ.

ಉಲ್ಟಾ ಪಲ್ಟಾ ಬಾವಿ

ನಾವು ಉಲ್ಟಾ ಪಲ್ಟಾ ಚಿತ್ರೀಕರಣ ಮುಗಿಸಿ ಹೊರಡುವಾಗ ನಮಗೆ ಅಷ್ಟೂ ದಿನ ಒದಗಿಸಿದ್ದ ಸೌಕರ್ಯಗಳಿಗೆ ಪ್ರತಿಯಾಗಿ ಪಟವರ್ಧನರ ಕೈಗೆ ಒಂದಷ್ಟು ಹಣ ನೀಡಿ ಬಂದಿದ್ದೆವು. ಆ ಹಣದಲ್ಲಿ ಅವರು ದೇವಾಲಯದ ಆವರಣದಲ್ಲೇ ಒಂದು ಬಾವಿ ತೋಡಿಸಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ‘ಉಲ್ಟಾ ಪಲ್ಟಾ ಬಾವಿ’ ಅಂತ ನಾಮಕರಣ ಮಾಡಿದ್ದಾರೆ!
ಉಲ್ಟಾ ಪಲ್ಟಾ- ಎಲ್ಲೆಲ್ಲೋ ನೆನಪುಗಳನ್ನು ಉಳಿಸಿದೆ!


ಮೂಲ ಲೇಖಕ — ಎನ್.ಎಸ್.ಶಂಕರ್

ನಕಲು ಮಾಡಿದವರು — ಕೆ.ಶಿವು.ಲಕ್ಕಣ್ಣವರ

Leave a Reply

Back To Top