ಅಂಕಣ ಸಂಗಾತಿ

ನಂಬಿಕೆಯ ಸುತ್ತ

ಸೂತಕ, ಅಂಧಶ್ರದ್ಧೆ ಮೌಢ್ಯತೆ

ಧಿಕ್ಕರಿಸಿದ ವಚನಕಾರರು

ಡಾ.ದಾನಮ್ಮಝಳಕಿ

ಸೂತಕ, ಅಂಧಶ್ರದ್ಧೆ ಮೌಢ್ಯತೆ ದಿಕ್ಕರಿಸಿದ ವಚನಕಾರರು ಎಂಬ ವಿಷಯದ ಬಗ್ಗೆ  ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಶರಣರ ಆಶಯಗಳನ್ನು ಮುಖಾಮುಖಿಯಾಗಿಸಲು ಬಯಸುತ್ತೇನೆ.

ಪ್ರಾರಂಭದಲ್ಲಿ ಸೂತಕ, ಅಂಧಶ್ರದ್ಧೆ, ಮೌಡ್ಯತೆ ಎಂದರೇನು? ಇವು ಏಕೆ, ಹೇಗೆ ಹುಟ್ಟಿದವು? ಇದರಿಂದ ಹೇಗೆ ಸಾಮಾನ್ಯ ಜನರು ಶೋಷಣೆಗೆ ಒಳಗಾದರು? ವಚನಕಾರರು ಹೇಗೆ ಇಂಥಹ ಮೌಢ್ಯತೆಯನ್ನು ತಿರಸ್ಕರಿಸಿ, ವೈಜ್ಞಾನಿಕ ನೆಲೆಗಟ್ಟಿನಲ್ಲಿರುವ ವೈಚಾರಿಕತೆಗೆ ನಾಂದಿಯಾದರು ಎಂಬೆಲ್ಲ ವಿಚಾರಗಳ ಮುಖಾಮುಖಿಯಾಗಿಸಿ, ಚರ್ಚಿಸಲು ಬಯಸುತ್ತೇನೆ.

ಮೌಢ್ಯತೆಯಿಂದ ನಂಬುವ ನಂಬಿಕೆಗಳೇ, ಅಂಧಶ್ರದ್ಧೆ, ಮೌಢ್ಯತೆ ಎಂದು ಹೇಳಬಹುದು. ಸೂತಕಗಳು ಮೌಢ್ಯತೆಯ ಭಾಗಗಳಾಗಿವೆ.  ಅವುಗಳಿಗೆ ಯಾವುದೇ ವೈಜ್ಞಾನಿಕ ಕಾರಣಗಳು ಇರುವುದಿಲ್ಲ, ಅವು ಮಾನವನ ನಂಬಿಕೆಗಳ ಲಾಭದಿಂದ ಮನುಷ್ಯನನ್ನು ಭಾವನಾತ್ಮಕವಾಗಿ ಶೋಷಣೆ ಮಾಡುತ್ತಿರುವ ಪ್ರಮುಖ ಸಾಧನಗಳು ಎಂದು ಹೇಳಬಹುದು. ಆದಿಮಾನವ ಕಾಲಾನುಕ್ರಮದಲ್ಲಿ ವೈಚಾರಿಕತೆಯನ್ನು ಬೆಳೆಸಿಕೊಂಡ ಆ ಹಂತದಲ್ಲಿ ನಿಸರ್ಗದ ಆಗುಹೋಗುಗಳು ಅಂದರೆ ಮಳೆ, ಪ್ರವಾಹ, ಗುಡುಗು ಸಿಡಿಲು ಭೂಕಂಪ, ಜ್ವಾಲಾಮುಖಿಗಳಿಗೆ ಭಯಬೀತಿಯನ್ನು ಹೊಂದುತ್ತಿದ್ದ, ಇವುಗಳಿಗೆ ಹೆದರಿ, ನಿಸರ್ಗದ ಪ್ರಮುಖ ವಸ್ತುಗಳಾದ ಕಲ್ಲು, ಮಣ್ಣು, ಮಳೆ ಇತ್ಯಾದಿಗಳಿಗೆ ಭಯ ಭಕ್ತಿ ತೋರಿಸಲು ಪ್ರಾರಂಭಿಸಿದ. ಇವುಗಳ ಹಿಂದಿನ ಚೈತನ್ಯದ ಅರಿವು ಆತನಿಗೆ ಇರಲಿಲ್ಲ. ಇಂತಹ ವೇಳೆಯಲ್ಲಿ ಕೆಲವು ಅಂದಿನ ಸಬಲರಾದ ಜನ ಅಂದರೆ ಇಂದಿನ ಮೇಲ್ವರ್ಗದ  ಜನರು ಈ ಭಯವನ್ನು ಬಳಸಿ, ಅಂಧಶ್ರದ್ಧೆ ಭಿತ್ತಿ, ಜನರನ್ನು ಮೌಢ್ಯತೆಗೆ ತಳ್ಳಿ, ಶೋ಼ಷಣೆ ಪ್ರಾರಂಭಿಸಿದರು ಹೀಗೆ ಮೌಢ್ಯತೆಯ ಉಗಮವನ್ನು ಗುರುತಿಸಬಹುದು.  ಅಂಧಶ್ರದ್ಧೆ, ಮೌಢ್ಯತೆಗೆ ಪರಿಹಾರವಾಗಿ ಸೂತಕಗಳನ್ನು ತಂದು, ಇನ್ನೊಂದು ವಿಧದ ಶೋಷಣೆಯನ್ನೂ ಕಾಣಬಹುದಾಗಿದೆ.   ಅದರಲ್ಲೂ ಭಾರತೀಯರಲ್ಲಿ ಮೂಢಾಚರಣೆ ಅಂಧಶ್ರದ್ಧೆಗಳು ವಿಪರೀತ. ಏಕೆಂದರೆ ದೇವರು ಮತ್ತು ಧರ್ಮದ ವಿಷಯದಲ್ಲಿ ಬಹಳ ಮುಗ್ಧತೆಯಿಂದ ನಂಬುತ್ತಾರೆ. ಸರಳವಾಗಿ ಹೇಳುವುದಾದರೆ ಮೌಢ್ಯವಾಗಿ ಆಚರಿಸಿಕೊಂಡು ಬರುವುದು ಸಂಪ್ರದಾಯವಾಯಿತು. ಅದರೊಂದಿಗೆ ಒಂದೇ ನಾಣ್ಯದ ಎರಡು ಮುಖಗಳಂತೆ ಸೂತಕಗಳು ಸಹ ಸೇರಿಕೊಂಡಿವೆ.   ಹೀಗೆ ಅಂಧಶ್ರದ್ಧೆ ಹಾಗೂ ಮೂಢನಂಬಿಕೆಗಳು, ಸೂತಕಗಳು ಬೆಳೆಯುತ್ತಾ ಬೆಳೆಯುತ್ತಾ ಸಂಪ್ರದಾಯಗಳಾದವು.

ಇನ್ನು ಜಗತ್ತಿನಲ್ಲಿ ಇತರ ಧರ್ಮದಲ್ಲಿ ಸಹ ಈ ಮೌಢ್ಯತೆಯ ಪರಮಾವಧಿಯನ್ನು ಕಾಣಬಹುದಾಗಿದೆ ಉದಾ: ಪಾಶ್ಚಿಮಾತ್ಯರಲ್ಲಿಯ ಪಾಪಕ್ಷಮಾ ಪತ್ರವನ್ನು  ಉದಾಹರಿಸಬಹುದು. ಪಾಶ್ಚಿಮಾತ್ಯದಲ್ಲಿ ಕ್ಯಾಥೋಲಿಕರಲ್ಲಿ ಎಷ್ಟೇ ಪಾಪ ಮಾಡಿದರೂ ಪೋಪನ ಹತ್ತಿರ ಹೋಗಿ ಹಣ ಕೊಟ್ಟು ಪಾಪಕ್ಷಮಾ ಪತ್ರ ಪಡೆದರೆ ಎಲ್ಲ ಪಾಪವು ವಿಮುಕ್ತವಾಗುವುದು ಎಂಬ ಆಚರಣೆಯನ್ನೂ ಸಹ ಕಾಣಬಹುದಾಗಿದೆ ಅಂದರೆ ಈ ಮೌಢ್ಯತೆ, ಅಂಧಶ್ರದ್ಧೆ ಎಂಬುದು ಜಗತ್ತಿನ ಎಲ್ಲ ಧರ್ಮದಲ್ಲಿಯೂ ಇರುವುದನ್ನು ಕಾಣಬಹುದಾಗಿದೆ. ಆದರೆ ಇಡೀ ಜಗತ್ತಿನಲ್ಲಿ ಮೌಢ್ಯತೆ, ಅಂಧಶ್ರದ್ಧೆ ಹಾಗೂ ಸೂತಕಗಳನ್ನು ಕಿತ್ತೊಗೆದು ವೈಜ್ಞಾನಿಕ, ವೈಚಾರಿಕ ತಳಹದಿಯ ಮೇಲೆ ಧರ್ಮ ಕಟ್ಟಿದವರಲ್ಲಿ ಶರಣರೇ ಮೊಟ್ಟಮೊದಲಿಗರು ಎನ್ನುವುದರಲ್ಲಿ ಸಂಶಯವೇ ಇಲ್ಲ.

ಆದ್ದರಿಂದಲೇ ಫ ಗು ಹಳಕಟ್ಟಿಯವರು ವಚನಗಳನ್ನು ಪ್ರಿಂಟ್‌ ಮಾಡಿಸಬೇಕೆಂದು ಮಂಗಳೂರು ಪ್ರಸ್‌ ಗೆ ಹೋದಾಗ ಕ್ರೈಸ್ತ ಮಿಶನರಿಗಳು ಅದನ್ನು ಮಾಡಲು ನಿರಾಕರಿಸಿದ್ದನ್ನು ಇತಿಹಾಸದ ಪುಟದಲ್ಲಿ ಕಾಣಬಹುದಾಗಿದೆ.

  ವಿಚಾರಿಸದೇ ನಂಬುವುದು ಮೂಢನಂಬಿಕೆ. ಮೂಢನಂಬಿಕೆಗಳಲ್ಲಿ ಒಂದು ವ್ಯಕ್ತಿಗತ ಮೂಢನಂಬಿಕೆ ಇನ್ನೊಂದು ಸಾಮೂಹಿಕ ಮೂಢನಂಬಿಕೆ ಎಂದು ವಿಂಗಡಿಸಬಹುದು. ವ್ಯಕ್ತಿಗತ ಮೂಢನಂಬಿಕೆಗಳು ತನ್ನನ್ನು ಮತ್ತು ತನ್ನ ನಂಬಿದವರನ್ನು ಘಾಸಿಸಿದರೆ ಸಾಮೂಹಿಕ ಮೂಢನಂಬಿಕೆಗಳಾದ ಪ್ರಾಣಿಬಲಿ, ಮಡೆಸ್ನಾನ, ಮುಂತಾದ ಸಾಮೂಹಿಕವಾಗಿ ಆಚರಿಸುವ ಮೂಢನಂಬಿಕೆಗಳು ಇಡೀ ಸಮಾಜವನ್ನೇ ಘಾಸಿಸುತ್ತವೆ. ಬಹಳಷ್ಟು ಮೂಢನಂಬಿಕೆಗಳು ಹುಟ್ಟಿಕೊಂಡಿದ್ದೇ ದೇವರು ಮತ್ತು ಧರ್ಮದ ಹೆಸರಿನಲ್ಲಿ. ದೇವರು ಮತ್ತು ಧರ್ಮವನ್ನು ಸರಿಯಾಗಿ ತಿಳಿದುಕೊಂಡರೆ ನಮ್ಮ ಎಲ್ಲಾ ಮೂಢನಂಬಿಕೆ ಅಂಧಶ್ರದ್ಧೆಗಳು ಹುಸಿ ಎಂಬುದು ಸ್ಪಷ್ಟವಾಗುತ್ತದೆ. ದೇವಾಲಯ, ವೈದಿಕ ಆಚರಣೆಗಳನ್ನು ಕಿತ್ತೊಗೆಯಲು ಬಸವಾದಿ  ಶರಣರು ದೇಹವೇ ದೇಗುಲವನ್ನು ಮಾಡಿಕೊಳ್ಳುವ ಪರಿ ಅದ್ಭುತ

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ

ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ

ಕೂಡಲಸಂಗಮದೇವಾ ಕೇಳಯ್ಯಾ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ,

ಇಲ್ಲಿ ತನ್ನ ದೇಹವನ್ನು ದೇವಾಲಯ ಮಾಡಿ ಅದಕ್ಕೆ ಪರಿಹಾರ ನೀಡಲು ಪ್ರಯತ್ನಿಸಲಾಗಿದೆ. ದೇವಾಲಯಗಳ ಹಾಗೂ ಅದರ ಪುರೋಹಿತತ್ವವನ್ನು ಒಪ್ಪಿದವರಲ್ಲಿ ಜಾತಿವಾದಿಗಳು ಮತ್ತು ಬಂಡವಾಳಶಾಹಿಗಳು ಪ್ರಮುಖರಾಗಿದ್ದಾರೆ. ಇವರು ಸಮಾನರಾಗಿ ಬೆರೆಯಲು ಒಪ್ಪದಿದ್ದಾಗ ಅವರನ್ನು ವಿರೋಧಿಸಿ ಶರಣರು ಬಂಡಾಯ ಸಾರಿದರು. ದೇವಾಲಯದ ಸುತ್ತಮುತ್ತ ಗಟ್ಟಿಕೊಂಡಿದ್ದ ಜಾತಿವಾದ ಮತ್ತು ಬಂಡವಾಳಶಾಹಿತ್ವಗಳ ಬೇರುಗಳನ್ನು ಅಲುಗಾಡುವಂತೆ ಮಾಡುವಲ್ಲಿ ಶರಣರ ಪ್ರಯತ್ನ ತುಂಬ ಪ್ರಾಮುಖ್ಯತೆಯನ್ನು ಗಳಿಸುತ್ತದೆ. ಎಲ್ಲರಿಗೂ ಸಮಾನವಾಗಿ ಪ್ರವೇಶವಿಲ್ಲದ ದೇವಾಲಯಗಳನ್ನು ಶರಣರು ವಿರೋಧಿಸಿದರು. ವೈದಿಕ ಆಚರಣೆಗಳನ್ನು, ನಾಗರ ಪಂಚಮಿ, ಮೂರ್ತಿ ಪೂಜೆ, ಇತ್ಯಾದಿಗಳನ್ನು ಖಂಡಿಸುತ್ತಾ

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು;

ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ!

ಉಂಬ ಜಂಗಮ ಬಂದಡೆ ನಡೆಯೆಂಬರು;

ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ!

ನಮ್ಮ ಕೂಡಲಸಂಗನ ಶರಣರ ಕಂಡು

ಉದಾಸೀನವ ಮಾಡಿದಡೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ

ಕಲ್ಲು ನಾಗರ ಮೂರ್ತಿಗೆ ಹಾಲನ್ನು ಎರೆಯುವ ನಾವು, ನಿಜವಾದ ಹಾವನ್ನು ಕಂಡೊಡನೆ ಅದನ್ನು ಕೊಲ್ಲಲು ಪ್ರಯತ್ನಿಸುತ್ತೇವೆ. ಯಾರಾದರೂ ನಮ್ಮ ಮನೆಗೆ ಹಸಿವು ಎಂದು ಬಂದಾಗ ಅವರಿಗೆ ಅನ್ನ ಹಾಕದೇ,  ಉಣ್ಣದ ಲಿಂಗಕ್ಕೆ ನೇವೇದ್ಯ ಹಿಡಿಯುತ್ತೇವೆ. ಎಂಬ ಅಂಶಗಳನ್ನು ತಿಳಿಸುತ್ತಾ  ದಯವೇ ಧರ್ಮದ ಮೂಲವಯ್ಯ ಎಂಬುದನ್ನು ಸ್ಪಷ್ಟಪಡಿಸಿ ಮೌಢ್ಯತೆಯನ್ನು ಕಿತ್ತೊಗೆಯಲು ಪ್ರಯತ್ನಿಸಿದರು.

ಬಸವಣ್ಣನು ಕೆಳವರ್ಗದ ಮತ್ತು ಮೇಲ್ವರ್ಗದ ಮೌಢ್ಯ ದೈವಾರಾಧನೆಗಳನ್ನು ವಿರೋಧಿಸಿದದರು. ಅದರ ಬದಲಾಗಿ ಇಷ್ಟಲಿಂಗಾರಾಧನೆಗೆ ಕರೆ ನೀಡಿದರು. ಇಲ್ಲಿ ಬಸವಣ್ಣನವರು ಕೆಳವರ್ಗದವರನ್ನು ಅಪ್ಪಿಕೊಳ್ಳುತ್ತಾ, ಅವರನ್ನು ಮೇಲೆತ್ತುವ ಕೆಲಸ ಮಾಡಿದರು. ಪುರೋಹಿತಶಾಹಿಗಳು ಸಾಮಾನ್ಯ ಜನರನ್ನು ಅಜ್ಞಾನದಲ್ಲಿಟ್ಟು, ದೇವರು ಮತ್ತು ಧರ್ಮದ ಹೆಸರಿನಲ್ಲಿ ಮುಗ್ಧ ಜನರನ್ನು ಶೋಷಣೆ ಮಾಡುತ್ತ ತಮ್ಮ ಹೊಟ್ಟೆ ಹೊರೆಯುತ್ತಿದ್ದುದನ್ನು ಕಂಡ ಗುರು ಬಸವಣ್ಣನವರು ವೈಚಾರಿಕ, ವೈಜ್ಞಾನಿಕವಿಲ್ಲದ ಧರ್ಮ ಮಾನವನಿಗೆ ನೆಮ್ಮದಿಯನ್ನು ಕೊಡಲಾರದೆಂದು ತಿಳಿದು, ಇದಕ್ಕೆಲ್ಲ ಏಕೈಕ ಪರಿಹಾರ ಭಕ್ತ-ದೇವನ ನಡುವೆ ಇದ್ದ ಪೂಜಾರಿ ಪುರೋಹಿತರ ಸಂಪರ್ಕವನ್ನು ತಪ್ಪಿಸಿ ನೇರವಾಗಿ ಪೂಜಿಸಲು ಇಷ್ಟಲಿಂಗವನ್ನು ಕೊಟ್ಟು ಅಂಧಶ್ರದ್ಧೆಗೆ ಕಡಿವಾಣ ಹಾಕಿದರು.

ಕಲ್ಲು ದೇವರು ದೇವರಲ್ಲ,

ಮಣ್ಣು ದೇವರು ದೇವರಲ್ಲ,

ಮರ ದೇವರು ದೇವರಲ್ಲ,

ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ,

ಸೇತುಬಂಧ, ರಾಮೇಶ್ವರ,ಕಾಶಿ,

ಗೋಕರ್ಣ, ಕೇದಾರ ಮೊದಲಾದ ಪುಣ್ಯತೀರ್ಥ ಕ್ಷೇತ್ರಗಳಲ್ಲಿಹ ದೇವರು ದೇವರಲ್ಲ.

ತನ್ನತಾನಾರೆಂದು ತಿಳಿದೆಡೆ ತಾನೇ

ದೇವನೋಡಾ” ಅಪ್ರಮಾಣ ಕೂಡಲಸಂಗಮದೇವಾ..

~ ಬಸವಣ್ಣ

ನಾವು ದೇವರನ್ನು ಗುಡಿ ಗುಂಡಾರ, ಗಣಪತಿ, ತೀರ್ಥಸ್ಥಳದಲ್ಲಿ ಹುಡುಕಿಕೊಂಡು, ವೈದಿಕರಿಗೆ ದಕ್ಷಿಣೆ ಇಟ್ಟು ಅವರು ಹೇಳಿದ ಎಲ್ಲ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ಹೋಗುವುದನ್ನು ಖಂಡಿಸಿ, ದೇವರು ಕಲ್ಲಿನಲ್ಲಿ,ಮಣ್ಣಿನಲ್ಲಿ(ಗಣಪತಿ), ಮರ (ಅರಳಿ ಮರ ಸುತ್ತುವುದು), ಪಂಚಲೋಹ, ಗೋಕರ್ಣ, ಕೇದಾರಿಯಲ್ಲಿ ಇಲ್ಲ. ತನ್ನ ಅರಿವಿನ ಮೂಲಕ ತನ್ನಲ್ಲಡಗಿದ ಚೈತನ್ಯವನ್ನು ತಿಳಿಯಬೇಕು ಎಂದು ಎಚ್ಚರಿಸಿದರು

ಆದರೆ ಲಿಂಗವಂತರಾದ ನಾವು ಮಾಡಿದ್ದೇನೆ? ಸ್ವಕಲ್ಯಾಣದ ಜೊತೆಜೊತೆಗೆ ಜಗತ್ತಿನ ಉದ್ಧಾರದ ಕಲ್ಪನೆಯನ್ನು ಇಟ್ಟ ಕೊಟ್ಟ ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸಿ, ಗುರು ಲಿಂಗ ಜಂಗಮರನ್ನು ಆರಾಧಿಸಲು ಅರಿಯದೇ, ( ಇಲ್ಲಿ ಗುರು ಎಂದರೆ ವ್ಯಕ್ತಿಯಲ್ಲ, ಲಿಂಗವೆಂದರೆ ವಸ್ತುವಲ್ಲ, ಜಂಗಮ ಎಂದರೆ ಜಾತಿಯಲ್ಲ )  ಮತ್ತೆ ಬೇರೆ ಲಿಂಗಗಳೆಂದು ಭ್ರಾಂತಿಯಿಂದ ಇದಿರಿಟ್ಟು ಪೂಜಿಸುವ ನಂದಿ ವೀರಭದ್ರ ದೇವರೆಂದು ಪೂಜಿಸುತ್ತ, ಕೈಯಲ್ಲಿ ಬೆಣ್ಣೆ ಇದ್ದು ತುಪ್ಪಕ್ಕೆ ಹುಡುಕುವಂತೆ, ಗುಡಿ ಗುಂಡಾರಗಳನ್ನು ತಿರುಗಿ, ಕಾಶಿ ಕೇದಾರ ಶ್ರೀಶೈಲಕ್ಕೆ ಹೋಗಿ ಮೋಕ್ಷ ಪಡೆಯುತ್ತೇನೆಂದು ಹೇಳುವುದು ಮೂಢಾಚರಣೆಯಲ್ಲವೇ?

ಶರಣರು ಮೂಢನಂಬಿಕೆಗಳಿಗೆ ಆಸ್ಪದ ಕೊಟ್ಟವರಲ್ಲ. ಆದರೆ ಸಮಾಜದಲ್ಲಿ ಮೂಢನಂಬಿಕೆಗಳು ಮೊದಲಿನಿಂದಲೂ ಬೇರು ಬಿಟ್ಟಿವೆ. ಆದಿ ಮಾನವರನ್ನು ಮೊದಲು ಮಾಡಿ ಇಂದಿನ ಆಧುನಿಕ ಯುಗದ ಮಾನವರ ವರೆಗೆ ಬೆಳೆದು ಬಂದ ಸಮಾಜದಲ್ಲಿ ಈ ಮೂಢನಂಬಿಕೆಗಳು ಸಾಗಿಯೇ ಬಂದಿವೆ. ಪ್ರತಿ ದಿನ ಭವಿಶ್ಯವಾದಿಗಳು ತಮ್ಮ ಭವಿಷ್ಯವಾಣಿ ನುಡಿಯುತ್ತಾ ಅನೇಕರನ್ನು ಶೋಷಿಸಿದ್ದನ್ನು ಕಾಣುತ್ತೇವೆ, ತಮ್ಮ ಭವಿಷ್ಯವೇ ತಿಳಿಯದ ಜನ ಬೇರೆಯವರ ಭವಿಷ್ಯ ಹೇಳಿ ಶೋಷಣೆ ಮಾಡುತ್ತಿರುತ್ತಾರೆ. ರಾಹುಕಾಲ, ಗುಳಿಕ ಕಾಲ ಎಂದು ಹೇಳಿ ಹಾದಿ ತಪ್ಪಿಸುವ ಕಾರ್ಯ ಮಾಡುತ್ತಿರುತ್ತಾರೆ. ಹಾಗಾದರೆ ಆಲೋಚಿಸಿ, ರಾಹು ಕಾಲದಲ್ಲಿ ಹೊರಡುವ ಎಲ್ಲ ವಾಹನಗಳಿಗೆ ಅಪಘಾತ ಉಂಟಾಗಬೇಕಾಗಿತ್ತು ಆದರೆ ಹಾಗಾಗುವದದಿಲ್ಲ . ಇಲ್ಲಿಯವರಗೆ ಅಪಘಾತಕ್ಕೆ ರಾಹುಕಾಲ ಕಾರಣ ಎಂದು ಯಾವ ತಜ್ಞರೂ ವರದಿ ನೀಡಿಲ್ಲ. ಇದು ಕೇವಲ ಕಪೋಕಲ್ಪಿತವಾದದ್ದು. ಇದು ಜನರನ್ನು ಮೌಢ್ಯತೆಗೆ ತಳ್ಳುವ ರೀತಿ ಮಾತ್ರ. ಮುಹೊರ್ತ ದೋಷ  -ದುರಿತ ಎನ್ನುವುದಿಲ್ಲ ಎಂಬುದನ್ನು  ಈ ವಚನದ ಮೂಲಕ ಸ್ಪಷ್ಟವಾಗಿ ತಿಳಿಯಬಹುದಾಗಿದೆ

ಲಗ್ನವೆಲ್ಲಿಯದೋ ವಿಘ್ನವೆಲ್ಲಿಯದೋ ಸಂಗಯ್ಯ.

ದೋಷವೆಲ್ಲಿಯದೋ ದುರಿತವೆಲ್ಲಿಯದೋ ಸಂಗಯ್ಯ.

ನಿಮ್ಮ ನೆನೆವಂಗೆ ಭವಕರ್ಮವೆಲ್ಲಿಯದೋ ಕೂಡಲಸಂಗಯ್ಯ.

ಶುಭ ಅಶುಭ ಎಂಬುವುದಿಲ್ಲ, ದೋಷ ದುರಿತ ಅಥವಾ ಕಾಟ ಎಂಬುದಿಲ್ಲ ದೋಷಕ್ಕೆ ಅರ್ಥವಿಲ್ಲದ ಪರಿಹಾರ ಹೇಳುವುದು, ಜನನ ದೋಷ,ಮರಣ ದೋಷ,ಜಾತಕ ದೋಷ, ಸರ್ಪ ದೋಷ, ದೇವರ ಕಾಟ, ಶನಿಕಾಟ,  ಇವೆಲ್ಲ ಧಾರ್ಮಿಕ ಭ್ರಷ್ಠಚಾರಗಳಾಗಿವೆ. ಮೌಡ್ಯತೆಯ ಪರಮಾವಧಿಗಳಾಗಿವೆ.  ಅರಿವಿನ ಹಾದಿಯಲ್ಲಿ ಭವಕರ್ಮಗಳೇ ಇಲ್ಲ ಎಂದಿದ್ದಾರೆ ನಮ್ಮ ಶರಣರು.  ಹೀಗೆ ಹೇಳುವ ಮೂಲಕ ವೈಚಾರಿಕ ಕ್ರಾಂತಿಯನ್ನೇ ಮಾಡಿದ್ದಾರೆ.

ಪ್ರತಿ ದಿನ ಬೆಳಗಾದರೆ ಟಿ. ವಿ. ಮಾಧ್ಯಮದವರು ಇಂತಹ ಮೌಢ್ಯವನ್ನು ಬೆಳೆಸುತ್ತಿರುವುದನ್ನು ನೋಡುತ್ತಿದ್ದೇವೆ. ಇಂದಿನ ವಿಜ್ಞಾನ ಯುಗದಲ್ಲಿ ಎಷ್ಟೋ ಜನರು ಮುಹೂರ್ತ ನೋಡಿಯೇ ತಮ್ಮ ಕಾರ್ಯಗಳಲ್ಲಿ ತೊಡಗುತ್ತಾರೆ, ವಿವಾಹಗಳನ್ನು ಮಾಡುತ್ತಾರೆ. ಹಾಗಾದರೆ ಹೀಗೆ ಮಾಡಿದವರಲ್ಲಿ ಏಕೆ  ವಿವಾಹ ವಿಚ್ಚೇದನೆ ಆಗಬೇಕು?   ಅವರ ಮೌಢ್ಯಕ್ಕೆ ಅಂತ್ಯ ಇಲ್ಲ. ಅದಕ್ಕೆ ನಮ್ಮ ಶರಣರು

ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ,

ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ,

ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,

ನಾಳಿನ ದಿನಕಿಂದಿನದಿನಲೇಸೆಂದು ಹೇಳಿರಯ್ಯಾ

ಕೂಡಲಸಂಗಮ ದೇವನ ಪೂಜಿಸಿದ ಫಲ ನಿಮ್ಮದಯ್ಯಾ.

ವಿಶ್ವಗುರು ಬಸವಣ್ಣನವರು

ಭಗವಂತನ ಪೂಜೆಗೆ  ಶ್ರದ್ಧೆ – ನಿಷ್ಠೆಯೇ ಪ್ರಾಮುಖ್ಯವಾಗಬೇಕೇ ಹೊರತು, ಪೂಜಿಸುವ ಸಮಯ, ಕಾಲ, ನಕ್ಷತ್ರ ತಿಥಿ ಮುಖ್ಯವಲ್ಲ. ಯಾರಾದರೂ ಭಗವಂತನನ್ನು ಪೂಜಿಸುವ ಸಮಯ ಕೇಳಿದಾಗ ನಾವು ರಾಶಿಗಳನ್ನು ನೋಡದೇ, ಚಂದ್ರಬಲ, ತಾರಾಬಲಗಳನ್ನು ನೋಡದೇ, ನಾಳೆ ನಾಡಿದ್ದು ಎನ್ನದೇ, ತತ್ಕ್ಷಣವೇ ಶ್ರೇಷ್ಠ ಎನ್ನಬೇಕು ಎನ್ನುವುದನ್ನು ಈ ವಚನ ಅರ್ಥೈಸುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಸರ್ವರೂ ತಿಥಿ ನಕ್ಷತ್ರ ರಾಶಿಗಳನ್ನು ನೋಡಿಯೇ ಪೂಜಾದಿ ಕ್ರಿಯೆಗಳನ್ನು ಮಾಡುತ್ತಾರೆ. ಮನಸ್ಸಿನಲ್ಲಿ ಭಕ್ತಿ, ಶ್ರದ್ಧೆ, ನಿಷ್ಠೆಗಳನ್ನು ಇಟ್ಟುಕೊಂಡು ನಾವು ಯಾವ ಸಮಯದಲ್ಲಾದರೂ ಭಗವಂತನ ಆರಾಧನೆ ಮಾಡಬಹುದು. ರಾಶಿಕೂಟ, ಋಣಸಂಬಂಧ, ಚಂದ್ರಬಲ, ತಾರಾಬಲವಿದ್ದಂತೆ , ನಾಳೆ ಎಂದು ಎನದೇ ಇಂದಿನ ದಿನವೇ ಉತ್ತಮ ಎಂದು ತಿಳಿದು ಕಾರ್ಯ ಮಾಡಬೇಕು ಅದಕ್ಕಾಗಿ ಮುಹೋರ್ತದ ಅವಶ್ಯಕತೆಯಿಲ್ಲ ಎಂಬುದನ್ನು ನೇರವಾಗಿ ಶರಣರು ಹೇಳುತ್ತಾರೆ ಹಾಗೂ ನುಡಿದಂತೆ ನಡೆದು ತೋರಿದ್ದಾರೆ. ಅದಕ್ಕಾಗಿಯೇ ಇನ್ನೊಂದು ಕಡೆ ಶರಣ ನಿದ್ರೆಗೈದಡೆ ಜಪ ಕಾಣಿರೋ, ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ ಎಂದಿದ್ದನ್ನು ಸಹ ನೆನೆಪಿಸಿಕೊಳ್ಳಬಹುದು.

ಇನ್ನೊಂದ ಅಂಧಶ್ರದ್ಧೆ ಎಂದರೆ ವಾಸ್ತು,

ವಾಸ್ತು ನೋಡಿ ಮನೆ ಕಟ್ಟುವವರ ಸಂಖ್ಯೆಯೂ ಬೆಳೆಯುತ್ತಲಿದೆ, ಇತ್ತೀಚಿಗೆ ವಾಸ್ತು ಹೇಳುವವರ ಸಾವು ಹೇಗಾಯಿತು ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಎಷ್ಟೋ ಜನರಿಗೆ ವಾಸ್ತು ಹೆಸರಿನಲ್ಲಿ ಮನೆಯನ್ನು ಕೆಡುಹಿಕಟ್ಟಲು ಹೇಳಿದ್ದುಂಡು, ಅಂತರಂಗ ಶುದ್ಧಿಯಿಲ್ಲದೇ, ಬಹಿರಂಗದಲ್ಲಿ ಏನೇನೋ ನಂಬಿ, ವಾಸ್ತು ಹಿಂದೆ ಬಿದ್ದವರನ್ನೂ ನೋಡುತ್ತಿದ್ದೇವೆ. ಇದು ಮೌಢ್ಯವಲ್ಲವೇ, ಅಂಧಶ್ರದ್ದೇ ಅಲ್ಲವೇ?

ನಮ್ಮ ದೇಶದ ವಾಸ್ತು ….ಇಲ್ಲಿ ಉದಾಹರಣೆಯಾಗಿ ಹೇಳಬಹುದುನಮ್ಮ ವಚನಕಾರರು ಯಾವುದೇ ವಾಸ್ತು, ಭವಿಷ್ಯ, ಜೋತಿಷ್ಯಗಳನ್ನು ನಂಬದೇ ಕಾಯಕ ದಾಸೋಹದಲ್ಲಿ ನಿಷ್ಠೆ ಇಟ್ಟು ಬದುಕಲು ಕಲಿಸಿದರು ಇದರ ಮೂಲಕ ಅಂತರಂಗದ ಬೆಳಗನ್ನು ತೋರಿಸಿದರು.

ಬೆಕ್ಕು ಎದುರು ಅಡ್ಡ ಹಾಯ್ದು ಹೋದರೆ ಕೆಲವರಿಗೆ ತಾವು ಹಮ್ಮಿಕೊಂಡ ಕಾರ್ಯ ಸಾಧಿಸುವದಿಲ್ಲವೆಂಬ ನಂಬಿಕೆ. ಹಲ್ಲಿ ಲೊಚಗುಟ್ಟಿದರೆ ಕೆಲವೊಮ್ಮೆ ಶುಭ, ಕೆಲವೊಮ್ಮೆ ಅಶುಭವೆಂದು ಜನ ಭಾವಿಸುವರು. ಕೆಲವರಿಗೆ ಗರುಡ ಶಿಲೆಯ ಉಂಗುರ ಮಂಗಲಕರ ಮತ್ತು ಕೆಲವರಿಗೆ ನೀಲ, ಪುಷ್ಪರಾಗಗಳ ಉಂಗುರಗಳು ಮಂಗಲಕರ. ಮುಂಜಾನೆ ಹೊರಗಡೆ ಹೊರಟಾಗ ಎದುರಿಗೆ ಹಜಾಮನೊಬ್ಬ ಭೇಟಿಯಾದರೆ ಅದು ಅಶುಭ. ಈಗಲೂ ಕೆಲವು ಕಡೆ ಎದ್ದ ಕೂಡಲೇ ಕ್ಷೌರಿಕನನ್ನು ನೋಡುವುದು ಅಶುಭ ಎಂದೇ ಭಾವಿಸುತ್ತಿರುವದನ್ನು ಕಾಣಬಹುದು.  ಆದರೆ ಅದೇ ಕುರುಬ ತನ್ನ ಕುರಿಯೊಂದಿಗೆ ಭೇಟಿಯಾದರೆ ಶುಭವೆಂದು ಜನ ಭಾವಿಸಿದ್ದಾರೆ.ಇಂತಹ ಅನೇಕ ಮೌಢ್ಯತೆಯನ್ನು ಕಿತ್ತೊಗೆಯಲು ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ವಲಯದಲ್ಲಿ ಇಟ್ಟುಕೊಳ್ಳುವ ಮೂಲಕ ಹಾಗೂ

 ಅಪ್ಪನು ನಮ್ಮ ಮಾದಾರ ಚೆನ್ನಯ್ಯ,

ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,

ಚಿಕ್ಕಯ್ಯ ನೆಮ್ಮಯ್ಯ ಕಾಣಯ್ಯ,

ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,

ಎನ್ನನೇತಕ್ಕರಿುರಿ, ಕೂಡಲಸಂಗಯ್ಯಾ

ಎನ್ನುವ ಮೂಲಕ ಜಾತಿ ಪಾತಿಗಳನ್ನು ಕಿತ್ತೊಗೆದು ಮೌಢ್ಯತೆಗೆ ತಿಲಾಂಜಲಿ ಹಾಡಿದರು. ಸಮಾನತೆಯ ಹರಿಕಾರರಾದರು. ಅವರು ಕೇವಲ ಬೋಧಿಸಲಿಲ್ಲ ಅದರಂತೆ ನಡೆದು ತೋರಿಸಿದರು.

ಈ ನಂಬಿಕೆಗಳು ಪ್ರಾದೇಶಿಕವಾಗಿ ಬೇರೆ ಬೇರೆಯಾಗಿವೆ. ವಿಜಾಪೂರ ಜಿಲ್ಲೆಯ ಕೆಲಭಾಗದಲ್ಲಿ ಚಾಣಕ್ಕಿ ಒದರಿದರೆ ಅಶುಭವೆಂದೂ ಯಾರ ಮನೆ ಹತ್ತಿರ ಒದರುವುದೋ ಆ ಮನೆಯಲ್ಲಿ ಯಾರಾದರೂ ಮರಣ ಹೊಂದುವರೆಂಬ ನಂಬಿಕೆ ಇದೆ. ಆದರೆ ಕೋಲಾರದ ಭಾಗದಲ್ಲಿ ಚಾಣಕ್ಕಿ ಒದರಿದರೆ ಶುಭವೆಂಬ ನಂಬಿಕೆ ಇದೆ. ಒಂದೇ ಹಕ್ಕಿ ಒದರಿದರೆ ಒಂದು ಕಡೆ ಶುಭ ;  ಇನ್ನೊಂದು ಕಡೆ ಅಶುಭ ಎನ್ನುವುದನ್ನು ಕಂಡಾಗ ಜನ ಮೂಢನಂಬಿಕೆಗಳನ್ನು ನಂಬುವುದೇ ಮೂರ್ಖತನ ಎಂಬ ಭಾವನೆ ಬೆಳೆಯದೇ ಇರಲಾರದು. ಆದಾಗ್ಯೂ ಅನೇಕ ಜನ ಈ ಮೂಢನಂಬಿಕೆಗಳಿಂದ ಹೊರತಾಗಿಲ್ಲ. ಇದು ಇಂದಿನ ಕಾಲದ ಸ್ಥಿತಿ. ಇನ್ನು ಬಸವಾದಿ ಶರಣರು ಇದ್ದ ಕಾಲದ ಸ್ಥಿತಿಯು ಹೇಗಿರಬೇಕು ಎಂದು ವಿಚಾರ ಮಾಡಿದರೆ, ಇಂದಿನಕ್ಕಿಂತ ಅಂದು ಕೆಟ್ಟ ಪರಿಸ್ಥಿತಿ ಇತ್ತು ಎಂಬುದೇ ಉತ್ತರವಾಗುತ್ತದೆ.

                        ಈ ಮೂಢನಂಬಿಕೆಗಳು ಮೌಢತೆಯಿಂದ ಆಚರಣೆಯಲ್ಲಿ ಬಂದವು. ಈ ನಂಬಿಕೆಗಳು ಜನರ ಅಜ್ಞಾನದಿಂದ ಹಾಗೂ ಅಸಹಾಯಕ ಸ್ಥಿತಿಯಿಂದ ಬಳಕೆಯಲ್ಲಿ ಬಂದಿರಬೇಕೆನಿಸುತ್ತದೆ. ಯಾಕೆಂದರೆ ಮನುಷ್ಯ ತನ್ನ ಶಕ್ತಿಗಿಂತ ಮಿಗಿಲಾದ ಶಕ್ತಿಗೆ ಅಂಜುತ್ತಾನೆ. ಈ ಭಯವು ಭಕ್ತಿಗೆ, ಮೂಢನಂಬಿಕೆಗೆ ಕಾರಣವಾಗುತ್ತದೆ. ಆ ಭಕ್ತಿಯ ಆವೇಶದಲ್ಲಿ ಏನು ಆರಾಧಿಸಬೇಕು ; ಏನನ್ನು ನಂಬಬೇಕು ಎಂಬುದು ಮನಷ್ಯನಿಗೆ ಸರಿಯಾಗಿ ಹೊಳೆಯಲಾರದು. ಹೀಗಾಗಿಯೇ ಹಾವು ಪೂಜಿಸುವುದು, ಹೊಳೆ ಪೂಜಿಸುವುದು ಬೆಳೆದು ಬಂದಿರಬೇಕು. ಅರಿಯದ ಆಚರಣೆಯೇ ಮೂಢನಂಬಿಕೆ. ಕೆಲವೊಮ್ಮೆ ಅಸಹಾಯಕ ಸ್ಥಿತಿಯಲ್ಲಿದ್ದಾಗ ಮನುಷ್ಯ ಇನ್ನೊಬ್ಬರ ಸಲಹೆಯನ್ನು ಕೇಳುತ್ತಾನೆ. ಅವರು ಯಾವುದಾದರೂ ಮಾರ್ಗವನ್ನು, ಉಪಾಯವನ್ನು ಹೇಳಿದರೆ ತಕ್ಷಣಕ್ಕೆ ಅದನ್ನು ನಂಬಿ ಬಿಡುವ ಪ್ರವೃತ್ತಿ ಮನುಷ್ಯನಲ್ಲಿ ಸಹಜವಾಗಿಯೇ ಇದೆ. ಹಾಗಾಗಿಯೇ ಮೂಢನಂಬಿಕೆಗಳು ಬೆಳೆದು ಬರುತ್ತವೆ.

ಒಟ್ಟಿನಲ್ಲಿ ಮೂಢನಂಬಿಕೆಗಳು ಜನರ ಅಸಹಾಯಕತೆಯಿಂದ ಹಾಗೂ ಅಜ್ಞಾನದಿಂದ ಹುಟ್ಟಿಕೊಂಡಿರುತ್ತವೆ. ‘ಒಬ್ಬ ವ್ಯಕ್ತಿಗೋ ಅಥವಾ ಒಂದು ಜನಾಂಗಕ್ಕೋ ಇರುವ ಅವೈಜ್ಞಾನಿಕ ನಂಬಿಕೆಗಳು, ಅಭ್ಯಾಸಗಳು, ಕಲ್ಪನೆಗಳು ಮುಂತಾದವುಗಳನ್ನು ಅಂಧಃಶ್ರದ್ಧೆಗಳು ಎಂದು ಕರೆಯಬಹುದು.[3]

ʼ           ಶುಭ ಕಾರ್ಯಕ್ಕೆಂದು ಹೊರಟಾಗ ಎದುರಾಗುವ ವಸ್ತುಗಳನ್ನು ಈಗಿನಂತೆಯೇ ವಚನಕಾರರ ಕಾಲದಲ್ಲಿಯೂ ಶುಭಾಶುಭ ಸೂಚಕವೆಂದು ಜನರು ನಂಬುತ್ತಿದ್ದರು. ಅಂಗೈ ನವೆಯಾಗುವುದು ಶುಭ ಸೂಚನೆಯೆಂದೂ ಗಂಡಸಿನ ಎಡಗಣ್ಣು ಅದರುವದು ಅಶುಭ ಶಕುನವೆಂದೂ ನಂಬಲಾಗುತ್ತಿತ್ತು. ಬಾಲಗ ಬಲಗಣ್ಣು ನಾರಿಗೆ ಎಡಗಣ್ಣು ಹಾರಬಾರದೆಂಬ ನಂಬಿಕೆ ಇತ್ತು.  ವಚನಕಾರರು ತಮ್ಮ ಕಾಲದಲ್ಲಿದ್ದ ಮೂಢನಂಬಿಕೆಗಳನ್ನು ಖಂಡಿಸಿದರು. ಒಳ್ಳೆ ಕಾರ್ಯ ಮಾಡುವುದೇ ಶುಭ, ಕೆಟ್ಟ ಕೆಲಸ ಮಾಡುವುದೇ ಅಶುಭವೆಂದು ವಚನಕಾರರು ನಂಬಿದ್ದರು.

ಶುಭಕ್ಕೆ ವಿಘ್ನವಲ್ಲದೆ ಅಶುಭಕ್ಕೆ ವಿಘ್ನವೆ ಅಯ್ಯಾ?

ಅಭಿಮಾನಿಗೆ ಅಂಜಿಕೆಯಲ್ಲದೆ ಅಪಮಾನಿಗೆ ಅಂಜಿಕೆಯೆ ಅಯ್ಯಾ?

ಶುಭಾಶುಭ ಶಿವಾರ್ಪಣವೆಂದು ನಂಬು ಮನವೆ,

ಕಪಿಲಸಿದ್ಧಮಲ್ಲೇಂದ್ರನಾಲಯದಲ್ಲಿ. [2]

ಮನುಷ್ಯ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಎಲ್ಲಾ ಸಮಯ ಒಳ್ಳೆಯದಿರುವಾಗ ಒಳ್ಳೆಯ ಕೆಲಸಕ್ಕೆ ಮಹೋರ್ತವೆಂಬುವದೆಲ್ಲಿ? ಶುಭವಾಗಲಿ, ಅಶುಭವಾಗಲಿ ಎಲ್ಲವೂ ಪರಮಾತ್ಮನಿಗೆ ಅರ್ಪಿಸಿದಾಗ ಭಯದ ಮಾತೆಲ್ಲಿ ಬರುವುದು ಎಂಬುದಾಗಿ ಶರಣರು ಪರಿಭವಿಸುತ್ತಾರೆ. ಸಿದ್ಧರಾಮನು ಒಳ್ಳೆಯ ಕಾರ್ಯ ಮಾಡುವುದೇ ಶುಭವೆಂದು ಹೇಳಿದ್ದಾನೆ. ಯಾಕೆಂದರೆ ವಚನಕಾರರ ಕಾಲದಲ್ಲಿ ಯಜಮಾನಿಕೆ ಯುಳ್ಳವರು, ಅಜ್ಞಾನಿಗಳನ್ನು ಇನ್ನಷ್ಟು ಅಜ್ಞಾನದಲ್ಲಿಯೇ ಇಟ್ಟು, ಅವರ ಶ್ರಮದ ಫಲವನ್ನು ಕೆಲವರು ಅನಾಮತ್ತಾಗಿ ಎತ್ತಿ ಹಾಕುತ್ತಿದ್ದರು.  ಅಂದಿನ ಕಾಲದಲ್ಲಿ ದಾರಿದ್ರ್ಯಕ್ಕೆ ಪೂರ್ವಜನ್ಮದ ಕರ್ಮವೇ ಕಾರಣವೆಂದು ಹೇಳುತ್ತಿದ್ದರು. ದಾರಿದ್ರ್ಯ ನಿವಾರಣೆಗಾಗಿ ಯತ್ನಿಸುವದು ದೇವರಿಚ್ಛೆಗೆ ವಿರೋಧವಾಗಿ ವರ್ತಿಸಿದಂತೆ ಎಂದು ನಂಬಿಸುತ್ತಿದ್ದರು.  ಪೂರ್ವಜನ್ಮದ ಪಾಪದ ಫಲವನ್ನು ಈ ಜನ್ಮದಲ್ಲಿ ಅನುಭವಿಸಬೇಕು. ಎಂದು ಬೋಧಿಸುತ್ತಿದ್ದರು.  ಆದುದರಿಂದ ಇದ್ದುದರಲ್ಲಿಯೇ ಬಿದ್ದು ಒದ್ದಾಡಿದರೂ ಸುಖವನ್ನೇ ಕಾಣಬೇಕು ಎಂಬ ಬೋಧನೆಯನ್ನು ಮಾಡುವುದರ ಮೂಲಕ ಮೌಢ್ಯತೆಯನ್ನು ಭಿತ್ತುತ್ತಿದ್ದರು. ಜೊತೆಗೆ ಈ ಕುರುಡು ನಂಬಿಕೆಗಳನ್ನು ಭ್ರಾಮಕ ವಾಡಿಕೆಗಳನ್ನು ಪುರಾಣಗಳು ಅಡಗೂಲಜ್ಜಿ ಕತೆಗಳಲ್ಲಿ ಅನಂತ ದೇವ-ದೇವತೆಗಳ ಮೂಲಕ, ಅಂತ್ರ-ತಂತ್ರಗ-ಮಂತ್ರಗಳಲ್ಲಿ ಶ್ರದ್ಧೆಯನ್ನು ಇನ್ನೂ ಆಳವಾಗಿ ಬೆಳೆಯಿಸಲಾಗುತ್ತಿತ್ತು. ಇವುಗಳ ಜೇಡರ ಜಾಲದಲ್ಲಿ ಸಿಕ್ಕ ಈ ನೊಣಗಳು ಎಂದೆಂದೂ ಇವುಗಳಿಂದ ಬಿಡುಗಡೆಯ ಪಡೆಯದಂತೆ ಮಾಡಿದ್ದರು.  ಶರಣರು ಮನುಷ್ಯರನ್ನು ಸಾಮಾಜಿಕ ಅಂಧಶ್ರದ್ಧೆಯ ಅನಿಷ್ಟದಿಂದ ಪಾರು ಮಾಡಲು ಪ್ರಯತ್ನಪಟ್ಟರು.

ಸಮಾಜ ಸುಧಾರಣೆಯಾಗಬೇಕು. ಧಾರ್ಮಿಕ ಸುಧಾರಣೆಯಾಗಬೇಕು. ಮೂಢನಂಬಿಕೆಗಳು, ಅಂಧಃ ಶ್ರದ್ಧೆಗಳು, ಕಂದಾಚಾರಗಳು ನಿವಾರಣೆಯಾಗಬೇಕು ಎಂದು ಗುರು ಬಸವಣ್ಣನವರು ಹೇಳುತ್ತಾರೆ.

ನೀರು ಕಂಡಲ್ಲಿ ಮುಳುಗುವರಯ್ಯ

ಮರವ ಕಂಡಲ್ಲಿ ಸುತ್ತುವರಯ್ಯ

ಬತ್ತುವ ಜಲವ ಒಣಗುವ ಮರವ

ಮೆಚ್ಚಿದವರು ನಿಮ್ಮನೆತ್ತಬಲ್ಲರು

ಕೂಡಲ ಸಂಗಮದೇವಾ

ಬಸವಣ್ಣನವರು ತಮ್ಮ ಕಾಲದಲ್ಲಿ ವೈದಿಕರು ಮಾಡುತ್ತಿದ್ದ ಭಕ್ತಿ, ಪೂಜೆ, ಧ್ಯಾನ, ಸಾಧನೆ, ಪ್ರಾರ್ಥನೆ ಎಲ್ಲವೂ ಬೂಟಾಟಿಕೆ, ಕಪಟವೆಂದು, ಶುಷ್ಕಾಚಾರಗಳೆಂದು ಖಂಡಿಸಿದರು. ಇದರಿಂದ ಕೆಲವು ವಿಚಾರವಾದಿ ವೈದಿಕರು ಪರಿವರ್ತನೆಗೊಂಡದ್ದೂ ಉಂಟು.

‘ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರಗೋಷ್ಠಿ’ ಎಂದು ಶರಣರು ವೇದ, ಶಾಸ್ತ್ರ, ಪುರಾಣಗಳನ್ನು ಖಂಡಿಸುತ್ತಾರೆ. ಅಲ್ಲಮಪ್ರಭುದೇವರು ಈ ಮಾತುಗಳನ್ನು ತುಂಬ ಸ್ಪಷ್ಟವಾಗಿ ಹೇಳಿದ್ದಾರೆ ;

324

ವೇದ ವೇದಿಸಲರಿಯದೆ ಕೆಟ್ಟವು,

ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು,

ಪುರಾಣ ಪೂರೈಸಲರಿಯದೆ ಕೆಟ್ಟವು,

ಹಿರಿಯರು ತಮ್ಮ ತಾವರಿಯದೆ ಕೆಟ್ಟರು,

ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು,

ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ? /೩೨೪ [1]

ಇದೇ ಅಭಿಪ್ರಾಯವನ್ನು ಅಕ್ಕಮಹಾದೇವಿ “ವೇದಾಶಾಸ್ತ್ರಾಗಮ ಪುರಾಣಂಗಳೆಂಬವು ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿ ಭೋ!” ಎನ್ನುತ್ತಾಳೆ. ವೇದ ವಿರೋಧವಾದ ಇಂತಹ ಇನ್ನೂ ಅನೇಕ ಮಾತುಗಳನ್ನು ವಚನಕಾರರು ಹೇಳಿದ್ದಾರೆ.

“ಶಾಸ್ತ್ರವೆಂಬುದು ಹೋತಿಂಗೆ ಮಾರಿ, ವೇದವೆಂಬುದು ನಿಮಗೆ ತಿಳಿಯದು” ಎಂದು ಗುರು ಬಸವಣ್ಣ ವೇದಾದಿ ಗ್ರಂಥಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದು, ಸಾಮಾಜಿಕ ಕಂಟಕಗಳನ್ನು ನಿವಾರಿಸುವ ಸಲುವಾಗಿಯೇ ಎಂಬುದನ್ನು ನಾವು ಗಮನಿಸಬೇಕು.

ಆದಿ ಪುರಾಣ ಅಸುರರಿಗೆ ಮಾರಿ,

ವೇದಪುರಾಣ ಹೋತಿಂಗೆ ಮಾರಿ,

ರಾಮಪುರಾಣ ರಕ್ಕಸರಿಗೆ ಮಾರಿ,

ಭಾರತಪುರಾಣ ಗೋತ್ರಕ್ಕೆ ಮಾರಿ.

ಎಲ್ಲಾ ಪುರಾಣ ಕರ್ಮಕ್ಕೆ ಮೊದಲು,

ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ

ಕೂಡಲಸಂಗಮದೇವಾ. – ಸವಸ೧/೫೭೧ [1]

ವೇದ ಪುರಾಣಗಳನ್ನು ಬಸವಣ್ಣ ಕೇವಲ ವಿರೋಧಿಸುವದಕ್ಕಾಗಿ ವಿರೋಧಿಸಲಿಲ್ಲ; ಸಕಾರಣದಿಂದಲೇ ಖಂಡಿಸುತ್ತಾರೆ.. ‘ಪುರಾಣವೆಂಬುದು ಪುಂಡರಗೋಷ್ಠಿ, ಸುಳ್ಳರ ಸಂತೆ’ ಎಂದು ಅಕ್ಕ ಮತ್ತು ಅಲ್ಲಮ ಹೀಯಾಳಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಕಲ್ಪನೆಗೂ ಮೀರಿದ ಭೇದಗಳನ್ನು, ಅಸಮಾನತೆಗಳನ್ನು, ಧರ್ಮದ ಹೆಸರಲ್ಲಿ ಸೃಷ್ಟಿಸಿ ಸಮಾಜದ ಕಣ್ಣಿಗೆ ಕಾರಣವಾದವರನ್ನು ಬೆರಳಿಟ್ಟು ತೋರಿಸಿ, ವೇದಾಗಮ, ಪುರಾಣ, ಶಾಸ್ತ್ರಗಳ ಪ್ರಾವೀಣ್ಯವನ್ನು ಅಲ್ಲಗಳೆದು ಯಜ್ಞ, ಹೋಮ, ಹವನಾದಿ ಕರ್ಮಗಳ ಢಾಂಬಿಕತನವನ್ನು ವಿಡಂಬಿಸಿ ಬಸವಣ್ಣ ಹೊಸ ದಾರಿಯನ್ನು ತೋರಿದ್ದಾನೆ.

. ಶರಣರ ಈ ವೈಚಾರಿಕ ನಿಲುವು ಇಂದಿನ ವೈಜ್ಞಾನಿಕ ಯುಗದ ಆಧುನಿಕರಲ್ಲಿಯೂ ಬಹುಮಟ್ಟಿಗೆ ಸಾಧ್ಯವಾಗಿಲ್ಲ. ಮಂಗಳವಾರ, ಶನಿವಾರ ಎಂದು ಕೆಲ ದಿನಗಳನ್ನು ಅಶುಭವೆಂದು ಭಾವಿಸಿ ಬಹಿಷ್ಕರಿಸಿದ ವಾಸ್ತವ ನಮ್ಮ ಮುಂದಿದೆ. ರಾಹುಕಾಲ, ಗುಳಿಕಾಲಗಳನ್ನು ಚಾಚೂ ತಪ್ಪದೇ ಪಾಲಿಸುವವರು, ಮನೆಯಿಂದ ಹೊರಡುವಾಗ ಶಕುನಗಳಿಗಾಗಿ ಕಾಯುವವರು, ಗ್ರಹಣದ ನಂತರ ನದಿಯಲ್ಲಿ ಮುಳುಗುವವರೂ ನಮ್ಮಲ್ಲಿ ಇನ್ನೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವಿಚಾರವಂತರಲ್ಲಿಯೂ ಇದ್ದಾರೆ. ವಿಜ್ಞಾನಿಗಳಲ್ಲಿಯೂ ಇದ್ದಾರೆ. ಬಸವಣ್ಣನವರು ಮೂಢನಂಬಿಕೆಗಳನ್ನು ನಂಬಲಿಲ್ಲ. ಪ್ರಾಣಿಬಲಿಯನ್ನು ವಿರೋಧಿಸಿದರು. ದೇವರನ್ನು ಮೆಚ್ಚಿಸಲು ಪ್ರಾಣಿಬಲಿ ಬೇಕಾಗಿಲ್ಲ ಎಂದು ಹೇಳಿದ ಬಸವಣ್ಣನವರು ದೇವರನ್ನು ಒಲಿಸಿಕೊಳ್ಳಲು ಪರಿಶುದ್ಧವಾದ ನಂಬಿಕೆಯೊಂದೇ ಸಾಕು ಎಂದು ಹೇಳುತ್ತಾರೆ ; ದಯವೇ ಧರ್ಮದ ಮೂಲವಯ್ಯನೆಂದು ಹೇಳುವ ಮೂಲಕ ಸಕಲ ಪ್ರಾಣಿಗಳಲಿ ದಯೆ ತೋರುವ ಸಂದೇಶವನ್ನು ನೀಡುತ್ತಾರೆ.

ಶರಣರು ಜನರ ಮನದಲ್ಲಿದ್ದ ಕೀಳರಿಮೆಯನ್ನು  ದೂರ ಮಾಡಿದರು. ಬಸವಣ್ಣನವರು ತಮ್ಮ ಕಾಲದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಂದರ್ಭದ ಹಿನ್ನೆಲೆಯಲ್ಲಿ ಇಷ್ಟಲಿಂಗವನ್ನು ಆರಾಧಿಸಿ, ಅಸಂಖ್ಯಾತ ದೇವರು ಮತ್ತು ಅಸಂಖ್ಯಾತ ಅಂಧಾಚರಣೆಗಳನ್ನು ಪ್ರತಿಭಟಿಸಿ, ಸಾಮಾನ್ಯ ಜನರು ಆರ್ಥಿಕವಾಗಿ, ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಶೋಷಣೆಗೆ ಈಡಾಗುವುದನ್ನು ತಪ್ಪಿಸಿದರು. ಜನರಲ್ಲಿ ಬದುಕುವ ಆತ್ಮವಿಶ್ವಾಸ ತುಂಬಿದರು.. ತನ್ನ ಕಣ್ಣಿಗೆ ಕಂಡ ಯಾವುದೇ ವೈಚಾರಿಕ ನೆಲೆಗಟ್ಟಿಲ್ಲದ ಆಚರಣೆಗಳನ್ನು, ಅರಿವಿನ ಒರೆಗಲ್ಲಿಗೆ ಹಚ್ಚಿ ಉಜ್ಜುವ ಪ್ರಯತ್ನ ಬಸವಣ್ಣನವರದು. ಈ ಮೂಲಕ ಸಮಾಜದ ಉನ್ನತ ಸ್ತರದಲ್ಲಿದ್ದವರ ಅಹಂಕಾರ ಹಾಗೂ ಕೆಳವರ್ಗದ ಜನರಲ್ಲಿದ್ದ ಅಜ್ಞಾನ ಇವೆರಡನ್ನು ಹೋಗಲಾಡಿಸಿದರು.

ಹಾವಾಡಿಗನು ಮೂಕೊರತಿಯು: ತನ್ನ ಕೈಯಲ್ಲಿ ಹಾವು,

ಮಗನ ಮದುವೆಗೆ ಶಕುನವ ನೋಡಹೋಹಾಗ

ಇದಿರಲೊಬ್ಬ ಮೂಕೊರತಿಯ ಹಾವಡಿಗನ ಕಂಡು,

ಶಕುನ ಹೊಲ್ಲೆಂಬ ಚದುರನ ನೋಡಾ.

ತನ್ನ ಸತಿ ಮೂಕೊರತಿ, ತನ್ನ ಕೈಯಲ್ಲಿ ಹಾವು,

ತಾನು ಮೂಕೊರೆಯ.

ತನ್ನ ಭಿನ್ನವನರಿಯದೆ ಅನ್ಯರನೆಂಬ

ಕುನ್ನಿಯನೇನೆಂಬೆ ಕೂಡಲಸಂಗಮದೇವಾ 105

ಹಾವಾಡಿಗನೊಬ್ಬ ತನ್ನ ಮಗನ ಮದುವೆಗೆ ಶಕುನ ನೋಡಲು ಹೊರಟಾಗ ಎದುರು ಬಂದ ಇನ್ನೊಬ್ಬ ಹಾವಾಡಿಗನನ್ನು ಕಂಡು ಅಪಶಕುನವಾಯಿತೆಂದು ತಿರುಗಿ ಹೋಗುತ್ತಾನೆ. ತಾನು ಒಬ್ಬ ಹಾವಾಡಿಗ ಎಂಬುದನ್ನು ತನ್ನ ಕೈಯಲ್ಲಿಯೂ ಹಾವು ಇದೆ ಎಂಬ ಕಲ್ಪನೆ ಇಲ್ಲದೆ ಎದುರು ಬೇರೆಯೊಬ್ಬ (ತನ್ನ ವೇಷದವನೆ) ಭೇಟಿಯಾದುದು ಅಪಶಕುನವೆಂದು ಬಗೆದಿದ್ದಾನೆ. ಇಂಥ ಮೂಢನಂಬಿಕೆಗಳು ಜನರಲ್ಲಿ ಸಹಜವಾಗಿ ರೂಢಿಗತವಾಗಿವೆ.

ಶರಣರು ವೇದಗಳನ್ನಷ್ಟೇ ಅಲ್ಲ ಬಹುದೇವತಾ ಉಪಾಸನೆಯನ್ನು ಅಲ್ಲಗಳೆಯುತ್ತಾರೆ. ಭಕ್ತಿ ಏಕಮುಖವಾಗಬೇಕು. ಅಂತರ್ಮುಖಿಯಾಗಬೇಕು. ಕ್ಷುದ್ರ ಬಯಕೆಗಳಿಗಾಗಿ ಗುಡಿ-ಗುಂಡಾರಗಳಲ್ಲಿರುವ ಯಾವಾವುದೋ ದೇವರುಗಳನ್ನು ಪೂಜಿಸುತ್ತಾ ಅದನ್ನು ವ್ಯಾಪಾರದ ಮಟ್ಟಕ್ಕಿಳಿಸಬಾರದು ಎಂಬ ವಿಚಾರ ಶರಣರದ್ದಾಗಿತ್ತು.

ಆದರೆ ಜನಸಾಮಾನ್ಯರು ‘ಮಡಕೆ ದೈವ, ಮಾರಿ ದೈವ, ಬೀದಿಯ ಕಲ್ಲು ದೇವ’ ಎಂಬ ಕಾಲಿಡಲು ಸಾಧ್ಯವಾಗದಷ್ಟು ದೈವಗಳನ್ನು ಸೃಷ್ಟಿಸಿಕೊಂಡಿರುವದನ್ನು, ತೀರ್ಥಕ್ಷೇತ್ರಗಳಿಗೆ ತಿರುಗುವದನ್ನು ಕಂಡು ಅನುಕಂಪ ಪಡುತ್ತಾರೆ. ಅವರಲ್ಲಿ ನಿಜವಾದ ದೈವತ್ವದ ಕಲ್ಪನೆಯನ್ನು ಮೂಡಿಸಿ ವಿಚಾರಶೀಲತೆಯ ಕಡೆಗೆ ಅವರ ಅರಿವನ್ನು, ಅನುಭವವನ್ನು ತಿರುಗಿಸುವ ಸಾಮೂಹಿಕ ಪ್ರಯತ್ನವನ್ನು ಶರಣರು ಕೈಗೊಳ್ಳುತ್ತಾರೆ. ಸಮಾಜದಲ್ಲಿ ಈಗಲೂ ಕೂಡಾ ಮಾರಿ ಮಸಣಿಗಳು ಕಾಡುತ್ತವೆ. ಅವುಗಳ ಕಾಟದಿಂದ ಮುಕ್ತರಾಗಬೇಕೆಂದುಕೊಂಡ ಜನ ಏನೇನೋ ಮಾಡಿ, ಆ ದೈವಗಳನ್ನು ತೃಪ್ತಗೊಳಿಸುವ ಸಲುವಾಗಿ

ಹಿಂಸೆ, ರಕ್ತಪಾತ ಮಾಡುತ್ತಾರೆ. ಈ ಮೂಢನಂಬಿಕೆಗಳು ಇಂದಿಗೂ ಜನರಲ್ಲಿವೆ. ಬಸವಣ್ಣನವರು ತನ್ನ ಕಾಲದಲ್ಲಿ ಜನ ನಂಬಿದ ಮಾರಿ ಮಸಣಿಯ ಕುರಿತು ಹೀಗೆ ಹೇಳಿದ್ದಾನೆ.

ಮಾರಿ ಮಸಣಿಯೆಂಬುವ ಬೇರಿಲ್ಲ ಕಾಣಿರೋ ! ಮಾರಿಯೆಂಬುದೇನು

ಕಂಗಳು ತಪ್ಪಿ ನೋಡಿದರೆ ಮಾರಿ ನಾಲಿಗೆ ತಪ್ಪಿ ನುಡಿದರೆ ಮಾರಿ

ನಮ್ಮ ಕೂಡಲ ಸಂಗಮದೇವ ನೆನಹ ಮರೆದರೆ ಮಾರಿ !

ಮಾರಿ ಮಸಣಿಯೆಂಬವು ಬೇರೆ ಇಲ್ಲ. ನಮ್ಮ ನೋಡುವ ದೃಷ್ಟಿಯಲ್ಲಿ ದೋಷವುಂಟಾದರೆ, ಆಡುವ ಮಾತು ತಪ್ಪಿ ಹೋದರೆ ಅಲ್ಲಿಯೇ ಮಾರಿ ಇದೆ. ‘ದೇವನನ್ನು ಮರೆತರೆ ಮಾರಿಯನ್ನು ಆಹ್ವಾನಿಸಿದಂತೆ’ ಎಂದು ಹೇಳಿ, ಸರಿಯಾದ ನಡೆ-ನುಡಿಯಿಲ್ಲದವರಿಗೆ ತನ್ನ ತಪ್ಪೇ ತನಗೆ ಮಾರಿಯಾಗುತ್ತದೆ ಎಂಬುದನ್ನು ವಚನಕಾರರು ತಿಳಿಸಿದ್ದಾರೆ.

ಉದಾಹರಣೆಗೆ

          ವೈದಿಕ ಶೋಷಣೆಯನ್ನು ತಡೆಯಲು ಶರಣರು ಇಷ್ಟಲಿಂಗದ ಪರಿಕಲ್ಪನೆ ಹಾಗೂ ಮೂರ್ತಿ ಪೂಜೆ ಖಂಡಿಸಿ, ಸ್ಥಾವರ ಲಿಂಗ ಪೂಜೆಯನ್ನು ನಿರಾಕರಿಸಿದ ಬಗೆಯನ್ನು ಈ ಕೆಳಗಿನ ವಚನಗಳ ಮೂಲಕ ಸ್ಪಷ್ಟವಾಗಿ ತಿಳಿಯಬಹುದು

1.        ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆಯಡಿಯಾಗಿ ಬೀಳುವ, ಲೊಟ್ಟೆ ಮೂಳನ ಕಂಡಡೆ, ಮೆಟ್ಟಿದ ಎಡಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆಯೆಂದಾತ, ನಮ್ಮ ಅಂಬಿಕರ ಚೌಡಯ್ಯನುII

2.        ಉಡಿಯ ಲಿಂಗವ ಬಿಟ್ಟು ಗುಡಿಯ ಲಿಂಗಕ್ಕೆ ಶರಣೆಂಬ ಮತಿಭ್ರಷ್ಟರನೇನೆಂಬೆನಯ್ಯ ಕಲಿದೇವರದೇವಾ?

3.        ಕಲ್ಲ ಮನೆಯ ಮಾಡಿ, ಕಲ್ಲ ದೇವರ ಮಾಡಿ, ಆ ಕಲ್ಲು ಕಲ್ಲಮೇಲೆ ಕಡೆದರೆ, ದೇವರೆತ್ತ ಹೋದನೋ? ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕನರಕ ಗುಹೇಶ್ವರಾ II

ಈ ಎಲ್ಲ ವಚನಗಳು ಮೌಢ್ಯಾಚಾರಣೆಯನ್ನು, ಸ್ಥಾವರ ಲಿಂಗವನ್ನು, ವೈದಿಕ ಆಚರಣೆಗಳನ್ನು  ತಿರಸ್ಕರಿಸುತ್ತವೆ

ಹಿರಿಯರ ಸ್ವಾಮಿಗಳ ಗದ್ದುಗೆ ಪಾದುಕೆ ಕಂಥೆ ಕಮಂಡಲ ಪೂಜಿಸುವುದು, ಕೆಲವು ಕಿರುಕುಳ ದೈವಗಳಾದ ಮಾರಿ-ಮಸಣೆಯ ನಂಬುವುದು, ಸ್ವರ್ಗ-ನರಕಗಳನ್ನು ನಂಬುವುದು, ಶೀಲ, ವೃತ, ನೇಮಾದಿಗಳನ್ನು ಮಾಡುವುದು, ದಿಕ್ಕು-ದಿನ, ಶುಭ-ಅಶುಭ, ರಾಹುಕಾಲ-ಗುಳಿಕಾಲ-ಯಮಗಂಡಕಾಲ, ವಾರತಿಥಿ-ಮಹೂರ್ತವನ್ನು ನೋಡುವುದು, ಪಂಚಾಂಗ ಕೇಳುವುದು, ಪಂಚಾಭೀಷೇಕ ಮಾಡಿಸುವುದು, ರುದ್ರ ಓದಿಸುವುದು, ಅಮವಾಸ್ಯೆ, ಹುಣ್ಣೆಮೆಗಳೆಂದು ಆಚರಿಸುವುದು, ಹೋಮಯಜ್ಞ ಮಾಡುವುದು, ಕರಿದಾರ ಚೀಟಿ ಯಂತ್ರ ತಂತ್ರಗಳನ್ನು ಬಳಸುವುದು, ಮುಟ್ಟು ಮೈಲಿಗೆಯ ಪಂಚಸೂತಕಗಳನ್ನು ಆಚರಿಸುವುದು.  ಇಷ್ಟ ಲಿಂಗವ ಪೂಜಿಸುವುದನ್ನು ಬಿಟ್ಟು,   ಸೋಮವಾರ, ಶ್ರಾವಣ ಸೋಮವಾರ, ಮಾಘ ಮಾಸ, ಚತುರ್ದಶಿ ಏಕಾದಶಿ ಎಂದು ಉಪವಾಸ ಮಾಡುವುದು, ಶಿವರಾತ್ರಿ ಎಂದು ಜಾಗರಣೆ ಮಾಡುವುದು, ಅನ್ಯ ಮಣಿಮಾಲೆ ನಂದಿ ಉಂಗುರ ನಾಗಮಂಡಲ ಮೊದಲಾದ ಭವಿಮುದ್ರೆಯನ್ನು ಧರಿಸುವುದು, ಇವಾವನ್ನು ನಾವು ಬಿಟ್ಟಿಲ್ಲ ಎಂದ ಮೇಲೆ ನಮ್ಮಲ್ಲಿ ಮೂಢನಂಬಿಕೆ, ಅಂಧಶ್ರದ್ಧೆ ಹೋಗುವುದಾದರೂ ಹೇಗೆ? ಲಿಂಗವಂತರಾದ ನಾವು ಏನನ್ನು ಆಚರಿಸಬಾರದು ಎನ್ನುವುದನ್ನು ಬಸವಾದಿ ಶರಣರ ಅನುಭಾವದ ಕೆಲವು ವಚನಗಳಲ್ಲಿ ನೋಡಬಹುದು

ಉತ್ತರ ಕರ್ನಾಟಕದಲ್ಲಿ ಇರುವ ಇನ್ನೊಂದು ಅಂಧಶ್ರದ್ಧೆ, ಮೂಢನಂಬಿಕೆ ಎಂದರೆ, ದೇವದಾಸಿ ಪದ್ಧತಿ. ಈ ಪದ್ಧತಿಯ ಮೂಲಕ ಕೆಳಜಾತಿಯ ಹೆಣ್ಣು ಮಕ್ಕಳನ್ನು ದೇವದಾಸಿಯರನ್ನಾಗಿ ಮಾಡುವ ದುಷ್ಟ ಪದ್ಧತಿ ಜಾರಿಯಲ್ಲಿರುವುದು ಅಮಾನವೀಯತೆಯ ಪ್ರತಿರೂಪವಾಗಿದೆ. ಅಲ್ಲದೇ ಸತಿ ಪದ್ಧತಿಯಂತಹ ಮೌಢ್ಯಾಚರಣೆಗಳು ಸಹ ಜಾರಿಯಲ್ಲಿರುವುದನ್ನು ಇತಿಹಾಸದ ಪುಟಗಳಲ್ಲಿ ನೋಡಿದ್ದೇವೆ

ಇಂತಹ ಅನೇಕ ಆಚರಣೆಗಳನ್ನು ವಚನಕಾರರು ಖಂಡಿಸಿ ಹೆಣ್ಣು ಗಂಡು ಸಮಾನರು ಎಂದು ಸಾರಿ ಸಾರಿ ಹೇಳಿದ್ದಾರೆ.

ಹೀಗೆ ವಚನಕಾರರು ನಿರಂತರವಾಗಿ ಸಮಾಜದಲ್ಲಿ ಜಿಡ್ಡುಗಟ್ಟಿದ್ದ ಅನಿಷ್ಟ ಸಂಪ್ರದಾಯಗಳನ್ನೂ, ಮೂಢನಂಬಿಕೆಗಳನ್ನೂ ನಿರಾಕರಿಸುವುದು ಮಾತ್ರವಲ್ಲ ; ಸಶಕ್ತವಾಗಿ ಪ್ರತಿಭಟಿಸಿದ್ದಾರೆ.

ಇನ್ನು ಸೂತಕಗಳ ಬಗ್ಗೆ ಹೇಳಬೇಕೆಂದರೆ, ಈಗಾಗಲೇ ಹೇಳಿದಂತೆ, ಸೂತಕಗಳು ಅಂಧಶ್ರದ್ಧೆ ಹಾಗೂ ಮೌಢ್ಯತೆಯ ಭಾಗಗಳು. ಸೂತಕಗಳನ್ನು ಕಷ್ಟಗಳ ಪರಿಹಾರ ಎಂದು ವೈದಿಕರು ತಂದ ಶೋಷಣೆಯ ಇನ್ನೊಂದು ಮುಖ ಎನ್ನಬಹುದು.

ಸೂತಕ ಎಂದರೆ ಹೊಲೆ, ಮೈಲಿಗೆ , ಉತ್ತರ ಕರ್ನಾಟಕದಲ್ಲಿ ಮುರ್ಚಟಿಕೆ, ಎಂಬರ್ಥಗಳಿವೆ. ಕೆಲವು ಸಮುದಾಯಗಳಲ್ಲಿ ಹುಟ್ಟು-ಸಾವು ಎರಡೂ ಸೂತಕಗಳೇ. ಹಾಗೆಯೇ ಹೆಣ್ಣು ಋತುಮತಿಯಾದರೆ ಅದೂ ಸೂತಕವೇ.

ಸೂತಕಗಳು ಅಂಧ ಶ್ರದ್ಧೆ ಹಾಗೂ ಮೌಢ್ಯತೆಯ ಭಾಗವಾಗಿವೆ.ಇವು ಪೀಳಿಗೆಯಿಂದ ಪೀಳಿಗೆಗೆ ಸಂಪ್ರದಾಯಕವಾಗಿ ಮೌಢ್ಯತೆಯಿಂದ ಬೆಳೆದು ಬಂದಿರುವುದನ್ನು ಕಾಣಿತ್ತೇವೆ. ಸೂತಕಗಳು ಜನನ, ಜಾತಿ, ಲಿಂಗ,ಕುಲ ಆಧರಿತವಾಗಿ ಮಾನವರಲ್ಲಿ ಭಿನ್ನತೆ ಸೃಷ್ಠಿಸಿ, ಅಮಾನವೀಯತೆಯನ್ನು ಪೋಷಿಸುವ ಹಾಗೂ ಶೋಷಣೆಯ ಮಾಡುವ  ಸಾಧನಗಳಾಗಿವೆ ಎನ್ನಬಹುದು.  ಇಂತಹ ಸೂತಕಗಳನ್ನು ಚನ್ನಬಸವಣ್ಣನವರು ಅನೇಕ ವಚನಗಳಲ್ಲಿ  ಪ್ರಸ್ತಾಪ ಮಾಡಿದ್ದಾರೆ.  ಜನನ ಸೂತಕ, ಕುಲಸೂತಕ, ರಜಃಸೂತಕ, ಎಂಜಲ ಸೂತಕ, ಪ್ರೇತ ಸೂತಕ , ಜಾತಿ ಸೂತಕ, ಇತ್ಯಾದಿ ಸೂತಕಗಳನ್ನು ವಿರೋಧಿಸಿದ್ದಾರೆ.  ಮಿಕ್ಕ ವಚನಕಾರರೂ ಸಹ ಸೂತಕದ ಬಗ್ಗೆ ಪ್ರಸ್ತಾಪ ಮಾಡಿ, ಖಂಡಿಸಿದ್ದನ್ನು ಕಾಣಬಹುದಾಗಿದೆ.

ದಲಿತನಾದ ಮಾದಾರ ದೂಳಯ್ಯನಿಗೆ ಸೂತಕದ ಶೋಷಣೆಯಿಂದ ಮುಕ್ತ ಮಾರ್ಗ ಅಗೋಚರವಾದರೂ ಆಧ್ಯಾತ್ಮದ ನೆಲೆಯ ಮೂಲಕ ಪರಿಹಾರ ಕಾಣುತ್ತಾನೆ.  ಶಿವನನ್ನೇ ಪ್ರಶ್ನಿಸಿ ದೇಹ ಮತ್ತು ಪ್ರಾಣ ಸೂತಕಗಳ ಬಗ್ಗೆ ಸಾರಿ ಹೇಳಿದ ಶರಣನಾಗಿದ್ದ. ಜಾತಿ ಹಾಗೂ ಸೂತಕಗಳೆಂಬ ಪೆಡಂಭೂತಗಳು ಮಹಿಳೆಯರನ್ನು ಬೆಂಬಿಡದೆ ಕಾಡಿವೆ. ಜನನ ಹಾಗೂ  ಮರಣ ದೈವದತ್ತವಾದದ್ದು. ಅದಕ್ಕೆ ಯಾವುದೇ ಸೂತಕ ಅಂಟಿಸಬೇಕಾಗಿಲ್ಲ ಎಂದು ನಮ್ಮ ಶರಣರು ಹೇಳುತ್ತಾರೆ.    ಸೂತಕವೆನ್ನುವುದು ಕೆಳ ವರ್ಗ ಶೋಷಣೆಯ ಪರಮಾವಧಿ. ಸಮಾಜದಲ್ಲಿ ಉರಿವ ಕೆಂಡದಂತೆ. ನಮ್ಮನ್ನು ದಹಿಸುತ್ತಲೇ ಇರುತ್ತವೆ.

ಬ್ರಾಹ್ಮಣನಿಗೆ 10ದಿನ ಕ್ಷತ್ರಿಯನಿಗೆ 12ದಿನ, ವೈಶ್ಯನಿಗೆ 15ದಿನ, ಶೂದ್ರನಿಗೆ 30ದಿನ, ಸಾವಿನ ಸೂತಕಗಳು  ಇದ್ದು ಹೀಗೆ ಸೂತಕಗಳಲ್ಲಿಯೂ ತಾರತಮ್ಯ ಕಾಣಬಹುದಾಗಿದೆ. ಬೇರೆಯವರ ಮನೆಗೂ ಹೋಗುವಂತಿಲ್ಲ ಒಂದು ರೀತಿಯಲ್ಲಿ ಸಾಮಾಜಕ ಬಹಿಷ್ಕಾರವಾಗಿ ಕಂಡು ಬರುತ್ತದೆ. ಈ ರೀತಿ ಸೂತಕಗಳು  ಮೌಢ್ಯತೆಯ ಪರಮಾವಧಿಯಾಗಿವೆ.

            ಮನುಷ್ಯ ಜನ್ಮವನ್ನೇ ಕರ್ಮದ ಹಂಗಿನಲ್ಲಿಟ್ಟು, ಸೂತಕದ ಮೂಲಕ ಹೆಣ್ಣ̧ನ್ನು ಹೊಲೆತನದ ಸಂಕೋಲೆಯಲ್ಲಿ ಬಂಧಿಸಿ ಮೈಲಿಗೆಯಾಗಿ ನೋಡುತ್ತಾ ವ್ಯವಸ್ಥಿತವಾಗಿ ಶ್ರೇಣೀಕೃತ ಸಮಾಜದ ಹುಟ್ಟಿಗೆ ಕಾರಣರಾದ ವೈದಿಕರು ಶೋಷಣೆಯ ಪರಮಾವಧಿಯನ್ನೇ ಮೀರಿದ್ದನ್ನು ಕಾಣಬಹುದಾಗಿದೆ. ಆದರೆ ಶರಣ ಧರ್ಮದಲ್ಲಿ ಇಂತಹ ಸೂತಕಗಳನ್ನು ವಿರೋಧಿಸಲಾಗಿದೆ. ದೇಹಕ್ಕಂಟಿದ ಯಾವುದೇ ನೈಸರ್ಗಿಕ ಸಹಜ ಸಂಗತಿಗಳನ್ನು, ಸಹಜ ಪ್ರಕೃತಿದತ್ತ ಕ್ರಿಯೆಗಳನ್ನು ಅವರು ಸೂತಕಗಳೆಂದು ಭಾವಿಸಿಲ್ಲ. ಹೆಣ್ಣಿನ ಸರ್ವ ಸಂಕೋಲೆಗಳನ್ನು ಬಿಡಿಸಿದವರಲ್ಲಿ ಶರಣರು ಜಗತ್ತಿನಲ್ಲಿಯೇ ಪ್ರಪ್ರಥಮರು.

ಉತ್ಪತ್ಯ ಪಿಂಡವೆಲ್ಲಕ್ಕೂ ಜನನವೊಂದೆ ಭೇದ

ಲಯವಹ ಘಟಕ್ಕೆ ಹಲವು ತೆರನುಂಟು

ಹಲವು ತೆರದ ಲಯವ ಬಲ್ಲಡೆ

ಬೇರೊಂದು ಕುಲ ಹೊಲೆ ಸೂತಕವುಂಟೆ?

ಬಂದ ಯೋನಿಯ ಹೊಂದುವ ಘಟದ ಉಭಯ ಸಂದಿಯಲ್ಲಿ ಸಿಕ್ಕದೆ

ನಿಂದ ನಿಜವೆ ತಾನಾದವಂಗೆ

ಬೇರೊಂದು ಇಲ್ಲಾ ಎಂದೆ ಕಾಮಧೂಮ ಧೂಲೇಶ್ವರಾ

ಎಂದು ಮಾದಾರ ಧೂಳಯ್ಯನವರು ಕುಲಹೊಲೆಸೂತಕದ ಭ್ರಮೆಗಳನ್ನು ಸಾರಾಸಗಟಾಗಿ ವೈಜ್ಞಾನಿಕ ತರ್ಕಶುದ್ಧಿಯಲ್ಲಿ ತಿರಸ್ಕರಿಸಿದ್ದಾರೆ.

ಹುಟ್ಟಿನ ಸಹಜಸ್ಥಿತಿ ಒಂದೇ ಎಂದು ಹೇಳುತ್ತಲೇ ಸಾವಿಗೆ ಸಂಬಂಧಿಸುವ ಹಲವು ಸಂಭವನೀಯತೆಗಳ ಬಗ್ಗೆ ಹೇಳಿದ್ದಾರೆ. ಹಾಗೆಯೇ ಬದುಕಿನಲ್ಲಿ ಇರಬೇಕಾದ ನಿಜ ಯಾವುದು ಎಂಬುದನ್ನು ಕುರಿತು ಧೂಳಯ್ಯ ನಡೆಸಿರುವ ಜಿಜ್ಞಾಸೆ ನಿಜವಾದ ಧರ್ಮ ಚಿಂತನೆಯಾಗಿದೆ..

ಅಂಗಲಿಂಗವೆಂಬನ್ನಕ್ಕರ ಕಾಯದ ಸೂತಕ

ಪ್ರಾಣಲಿಂಗವೆಂಬನ್ನಕ್ಕರ ಅರಸುವುದೇ ಜನನ ಸೂತಕ

ಮರೆವುದೆ ಮರಣ ಸೂತಕ

ಸೂತಕವ ಹಿಂಗಿ ಅಜಾತನಾಗಬಲ್ಲಡೆ

ಆತಂಗೆ ಏತರ ಬಂಧವೂ ಇಲ್ಲ ಕಾಮಧೂಮ ಧೂಳೇಶ್ವರಾ

ಎಂದು ಇದೇ ಮಾದಾರ ಧೂಳಯ್ಯ ಹೇಳುತ್ತಾನೆ. ಇಲ್ಲಿ ಜನನ ಮರಣ ಕಾಯ ಸಂಬಂಧದ ಸೂತಕ ನಂಬಿಕೆಗಳನ್ನು ಬೇರೆ ಪರ್ಯಾಯ ಬಗೆಯಲ್ಲಿ ಅರ್ಥೈಸುತ್ತಾ ಈ ಬಂಧನಗಳನ್ನು ಕಳೆದುಕೊಂಡ ಶರಣತ್ವದಲ್ಲಿ ಯಾವ ಸೂತಕಪಾತಕಗಳೂ ಇರುವುದಿಲ್ಲವೆಂಬುದು ಧೂಳಯ್ಯನರ ಚಿಂತನೆ. ಅಂಗಸೂತಕ ಪ್ರಾಣಸೂತಕಗಳನ್ನು ಕಳೆದುಕೊಳ್ಳುವುದೆಂದರೆ ಕಾಯವನ್ನು ಕಾಯಕಸಂಬಂಧಿಯಾಗಿಸುತ್ತಾ ಕಾಯವನ್ನೇ ಕೈಲಾಸವಾಗಿಸುವ ಪರಿಕ್ರಮ.

ಈ ದಾರಿಯನ್ನು ಬಿಟ್ಟು ‘ಕಂಗಳ ಸೂತಕದಿಂದ ಕಾಣಿಸಿಕೊಂಬುದು, ಮನದ ಸೂತಕದಿಂದ ನೆನೆಯಿಸಿಕೊಂಬುದು, ಕಾಯದ ಸೂತಕದಿಂದ ಮುಟ್ಟಿಸಿಕೊಂಬುದು ಈ ಮೂರರ ಸೂತಕದಲ್ಲಿ ಗಾರಾಗುತ್ತಾ ಮೀರಿ ಕಾಬ ಅರಿವು ಸೂರೆಯೇ?’ – ಎಂದು ಧೂಳಯ್ಯ ಪ್ರಶ್ನಿಸುತ್ತಾನೆ. ಕಣ್ಣು ಮನ ಕಾಯಗಳು ಮೈಲಿಗೆ (ಸೂತಕ) ಗೊಳಗಾದರೆ ಬದುಕು ಜಿಡ್ಡು ಮೆತ್ತಿದ ಕನ್ನಡಿಯ ಪ್ರತಿಫಲನದಂತೆ; ಬಂದುದನರಿಯದೆ ಕುರುಹಿನ ಹಾವಸೆಯಲ್ಲಿ ಮರೆದು ಒರಗುವ ಪರಿ.

ಮಾನವೀಯತೆಯ ಮೂಲ ಆಶಯಗಳನ್ನು ಹೊಂದಿದ ಶರಣರು ಅಂದಿನ ಸೂತಕಗಳ ಒಳ ಸೂಕ್ಷ್ಮಗಳಿಂದ ಶೋಷಣೆಯಿಂದ ಬೇಸತ್ತಿದ್ದರು. ಶ್ರೇಣೀಕೃತ ಧರ್ಮಗಳ ನೆಲೆಗಳನ್ನು ತೂಗಿ ನೋಡಿ ಸೂತಕಗಳ ಕೊಳೆ ನಿರ್ಮೂಲನವಾಗಬೇಕು. ಹೊಸದನ್ನು ನಿರ್ಮಿಸಬೇಕು, ಸಮಸಮಾಜವನ್ನು ಕಟ್ಟಬೇಕೆಂದ ಆಶಯವನ್ನು ಶರಣರು ಹೊಂದಿದ್ದರು.

ಜಾತಿ ಸೂತಕ:

ಜಾತಿಯ ಆಧಾರಿತ, ಕೆಳ ಜಾತಿ, ಅಸ್ಪಶ್ಯತೆ ಎಂದು ಜಾತಿ ಸೂತಕಗಳನ್ನು ಸಹ ಆಚರಣೆಯಲ್ಲಿರುವುದನ್ನು ಕಂಡಿದ್ದೇವೆ. ಜಾತಿ ಹುಟ್ಟಿನಿಂದ ಬರುವುದಲ್ಲ. ಒಂದು ವೇಳೆ ಹೊಲೆ ಪದವನ್ನು ಬಳಸುವುದಾದರೆ,  ಅದು ಜಾತಿ ಹೊಲೆ ಅಲ್ಲ. ಹುಟ್ಟಿನಿಂದ ಬಂದ ಹೊಲೆ. ಹಾಗೆ ನೋಡಿದರೆ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹೊಲೆಯ. ಬಸವಣ್ಣನವರು ಹೀಗೆ ಹೇಳಿದ್ದಾರೆ

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ

ಜಲ-ಬಿಂದುವಿನ ವ್ಯವಹಾರ ಒಂದೇ,

ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ.

ಏನನೋದಿ, ಏನ ಕೇಳಿ, ಏನು ಫಲ

ಕುಲಜನೆಂಬುದಕ್ಕೆ ಆವುದು ದೃಷ್ಟ

ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ

ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ಎಂದುದಾಗಿ,

ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,

ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.

ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ

ಇದು ಕಾರಣ ಕೂಡಲಸಂಗಮದೇವಾ,

ಲಿಂಗಸ್ಥಲವನರಿದವನೆ ಕುಲಜನು. / 1397

. “ಹೊಲೆ ಗಂಡನಲ್ಲದೆ ಪಿಂಡ ನೆಲೆಗೆ ಆಶ್ರಯವಿಲ್ಲ ಹೊಲೆನಿಂದು ಪಿಂಡವಾಗಿ ಆ ಹೊಲೆ ಪಿಂಡವೇ ಬಲಿತು ಹೊಲೆ ದೇಹವಾಗುತ್ತದೆ. ಪಿಂಡದಿಂದುದಿಸಿ ಬಂದ ದೇಹದ ಹೊಲೆತನವನ್ನು ಕಳೆದುಕೊಂಡರೆ ಮಾತ್ರ ಆಗ ಆ ವ್ಯಕ್ತಿ ಕುಲಜನಾಗುತ್ತಾನೆ”.

ಇದಕ್ಕೆ ಸಂಬೋಳಿ ನಾಗಿದೇವನ ಬದುಕೇ ಉದಾಹರಣೆ. ಹೊಲೆ ಜಾತಿಯವನಾದ ನಾಗಿ ದೇವನು ಪ್ರಭುತ್ವ ವಹಿಸಿದ ಕೆಲಸವೆಂದು “ಸಂಭೋಳಿ ಸಂಭೋಳಿ ಎಂದು ಕೂಗುವ ಕೆಲಸ ಮಾಡುತ್ತಿದ್ದ. ಸಂಭೋಳಿ ಎಂದರೆ ದೂರ ಹೋಗಿ ದೂರ ಹೋಗಿ ಎಂದು ಈ ವೃತ್ತಿಯನ್ನು ನಿಲ್ಲಿಸಿದವರು ಶರಣರಾಗಿದ್ದರು. ಕುಲ ಜಾತಿಯ ಸೂತಕದಲ್ಲಿ ದಲಿತರು ಊರಲ್ಲಿ ಬರುತ್ತಿದ್ದಾರೆ ದೂರ ಹೋಗಿ ದೂರ ಹೋಗಿ ಎನ್ನುವ ಘೋಷಣೆಯ ವೃತ್ತಿ ಇದನ್ನು ಜಾತಿ ಸೂತಕ ಅರ್ಥದ ನೆಲೆಯಲ್ಲಿ ಕುಲ ಸೂತಕವೆಂದು ಬಿಂಬಿಸಲಾಗಿದೆ. ಶೋಷಣೆ ಮತ್ತು ಧಮನ ನೀತಿ ರೂಢಿಸಿ ಮೇಲ್ವರ್ಗದಿಂದ ನಡೆದ ಅಟ್ಟಹಾಸವಾಗಿದೆ. ಇದನ್ನು ಖಂಡಿಸಿದ ಶರಣರು ಕುಲ ಸೂತಕ ನೆಲೆಯಲ್ಲಿ ಮಾತನಾಡಲು ಪ್ರಾರಂಭಿಸಿದರು.

ಮಾನವ ಕುಲವೊಂದೇ ಎಂಬ ದಿವ್ಯ ಸಂದೇಶವನ್ನು ನೀಡುವ ಮೂಲಕ ಜಾತಿ ಶ್ರೇಣೀಕೃತ ವ್ಯಸ್ಥೆಯನ್ನು ದಿಕ್ಕರಿಸಿದವರು ಶರಣರು

2) ಜನನ ಸೂತಕ: ಕಾಕತಾಳೀಯ ಘಟನೆಗಳನ್ನು ಜೋಡಿಸಿ ಸೂತಕದ ಹೆಸರಿನ ಮೂಲಕ ಶೋಷಣೆ ಮಾಡುವ ಪದ್ಧತೆಯನ್ನು ಕಾಣಬಹುದಾಗಿತ್ತು. ಉದಾಹರಣೆಗೆ ಮಗು ಹುಟ್ಟಿದ ತಕ್ಷಣ ತಂದೆ ಅಥವಾ ತಾಯಿ ಮರಣ ಹೊಂದಿದರೆ ಅದಕ್ಕೆ ಸೂತಕದಲ್ಲಿ ಹುಟ್ಟಿದೆ ಎಂಬ ಹಣೆಪಟ್ಟಿಯ ಮೂಲಕ ಶೋಷಣೆಯ ಆಚರಣೆಗಳನ್ನು ಕಾಣಬಹುದಾಗಿದೆ. ಮಗು ಹುಟ್ಟಿದ ನಂತರ ತಂದೆ ಮಾವ, ಅತ್ತೆ ಇಂತಿಷ್ಟು ದಿನ ನೋಡಬಾರದು ಎಂಬ ಸೂತಕಗಳನ್ನು ಈ ಸೂತಕದಡಿಯಲ್ಲಿ ಆಚರಿಸುತ್ತಿದ್ದುದು ಕಂಡುಬರುತ್ತದೆ. ಇಂತಹ ಸೂತಕಗಳನ್ನು ಶರಣರು ತಿರಸ್ಕರಿಸುತ್ತಾರೆ.

3) ರಜ ಸೂತಕ:

ರಸಜ್ವಲೆಯಾದವಳನ್ನು ಆಕೆ ಮುಟ್ಟಿದುದನ್ನು ಮುಟ್ಟಬಾರದು. ಅವಳ ನೈಸರ್ಗಿಕ ಋತುಮತಿ ಕಾಲವಧಿಯಲ್ಲಿ ಅವಳನ್ನು ಮನೆಯಿಂದ ಊರಿನಿಂದ ಹೊರಗಟ್ಟುವುದು, ಕೆಲವು ಜಾತಿಗಳಲ್ಲಿ ಈಗಲೂ ಸಹ ರಸಜ್ವಲೆಯಾದವಳನ್ನು ೫ ದಿನ ಅಥವಾ ೯ ದಿನ ಅಡುಗೆ ಮನೆಯಿಂದ ದೂರವಿಟ್ಟು, ಬೇರೆ ಕೊಠಡಿಯಲ್ಲಿ ಅವಳನ್ನು ಕೂಡಿಟ್ಟಿರುವ ಘಟನೆಗಳನ್ನು ಸೂತಕದ ಭಾಗವಾಗಿ ಕಾಣಬಹದಾಗಿದೆ. ವೈಜ್ಞಾನಿಕವಾಗಿ, ಜೈವಿಕವಾಗಿ ಬಂದಿರುವ ಸ್ತ್ರೀ ಗುಣವು ಪ್ರಕೃತಿ ದತ್ತವಾದ ಗುಣಕ್ಕೆ ಸೂತಕದ ಕರಿಛಾಯೆಯನ್ನು ಹಾಕಿದರು.  ಇದರ ಅರಿವಿಲ್ಲದೆ  ಹೆಣ್ಣು ಋತುಮತಿ ಕಾಲದಲ್ಲಿ ನಿರಂತರವಾಗಿ ಶೋಷಿತಳಾಗುತ್ತಿದ್ದಳು.

ಮಡಿವಂತಿಕೆಯ ಅಂದಿನ ಸಮಾಜದಲ್ಲಿ ಸೂತಕಗಳಿಂದ ಸ್ತ್ರೀಯರಿಗೆ ನೋವಾಗುತ್ತಿತ್ತು. ಸೂತಕ ಎನ್ನುವುದು ಶ್ರಾದ್ದದ ಹಾಗೆ. ಆಂತರಿಕ ಅರ್ಥಗಳಿಗೆ ಯಾವುದೇ ಪ್ರತಿಫಲವಿರಲಿಲ್ಲ. ಮಹಿಳೆಯರು ರಸಜ್ವ್ಜಲೆಯಾದಾಗ ಅವರನ್ನು ಬೇರೆಯೇ ಕೂರಿಸುವಂತಹ ಆಚರಣೆ ಇನ್ನೂ ಕೆಲ ಜನಾಂಗಗಳಲ್ಲಿದೆ. ಮುಟ್ಟಾಗುವುದು ಎಂದರೆ ಪೀಡೆ ಆಕೆಗೆ ಸೂತಕವಂಟಿಕೊಂಡಿರುತ್ತದೆ. ಆಕೆಯನ್ನು ಮನೆಯವರು ಮುಟ್ಟಿಕೊಳ್ಳುವಂತಿಲ್ಲ, ಸ್ನಾನ ಮಾಡುವಂತಿಲ್ಲ, ಯಾರಾದರೂ ಮುಟ್ಟಿದರೆ ಕೆಡುಕಾಗುತ್ತದೆ ಎಂಬ ನಂಬಿಕೆ ಬಲವಾಗಿದೆ. ಈ ಸೂತಕದ ಹಲ್ಲೆಯು ಸ್ತ್ರೀಯನ್ನು ಶೋಷಿಸುವ ಹಂತವಾಗಿದೆ. ಕೆಲವು ಜನಾಂಗದಲ್ಲಿ ಮುಟ್ಟು ಮತ್ತು ಹೆರಿಗೆಯಾದಾಗ ಮನೆಯಲ್ಲಿರಿಸಿಕೊಳ್ಳದೆ, ಊರ ಹೊರಗೆ ಮರದ ಕೆಳಗೆ, ಆಕೆಯನ್ನು ಇರಿಸಲಾಗುತ್ತದೆ. ಇಂತಹ ಕಠೋರ ಶೋಷಣೆಯನ್ನು ಸೂತಕದ ಭಾಗವಾಗಿ ನೋಡಬಹುದಾಗಿದೆ. ಹೀಗಾಗಿ ಅಂದು ಸಮಾಜದಲ್ಲಿ ಅವಳನ್ನು ಅಸ್ಪೃಶ್ಯಳಂತೆ ಕಾಣಲಾಯಿತು. ಇದನ್ನು ಖಂಡಿಸಿದ ಶರಣರು ಅವಳಿಗೆ ಆಗುವ ಶೋಷಣೆಯನ್ನು ಅಸಾಹಕತೆಯನ್ನು ಮನಗಂಡು ಅಂದು ಸ್ತ್ರೀಯರನ್ನು ರಕ್ಷಣೆ ಮಾಡಿದಂತವರಲ್ಲಿ ಶರಣರೇ ಪ್ರಮುಖರಾಗಿದ್ದರು.

ಮೊಲೆ ಮೂಡಿ ಬಂದರೆ ಹೆಣ್ಣೆಂಬರು

ಗಡ್ಡ ಮೀಸೆ ಬಂದರೆ ಗಂಡೆಂಬರು

ನಡುವೆ ಸುಳಿವ ಆತ್ಮನು ಗಂಡೂ ಅಲ್ಲ, ಹೆಣ್ಣೂ ಅಲ್ಲ

ಕಾಣಾ ರಾಮನಾಥ

ಈ ವಚನದ ಪ್ರಕಾರ ದಾಸಿಮಯ್ಯ ಹೇಳುವುದು ಗಂಡು ಮತ್ತು ಹೆಣ್ಣು ಅಂದರೆ ಕೇವಲ ದೈಹಿಕ ವ್ಯತ್ಯಾಸ ಮತ್ತು ಕಣ್ಣಿಗೆ ಕಾಣುವ ಬಹಿರಂಗ ನೋಟ..ಅಂತರಂಗದಲ್ಲಿ ಆತ್ಮ ಎಂಬುದು ಒಂದು ಇದೆಯಲ್ಲ,ಅದು ಗಂಡೂ ಅಲ್ಲ,ಹೆಣ್ಣೂ ಅಲ್ಲ

ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ.

ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ.

ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ.

ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ!

ಈ ವಚನದಲ್ಲಿ ಅಲ್ಲಮ,ನಮ್ಮ ಮನದೊಳಗಿನ ಮಾಯೆಗೆ ಕಡಿವಾಣ ಹಾಕಿ ಮನಸ್ಸು ಶುದ್ಧ ವಾಗಿಸಿಕೊಳ್ಳಿ ಅನಂತರ ನಾವು ಕಾಣುವುದೆಲ್ಲದರಲ್ಲಿ ಒಳಿತನ್ನು ಕಾಣುತ್ತೇವೆ ಎಂದು ಶರಣರಿಗೆ ಎಚ್ಚರಿಕೆ ನೀಡಿದ ಹಾಗಿದೆ …

ಹೆಣ್ಣು ಹೆಣ್ಣಲ್ಲ; ಹೆಣ್ಣು ರಕ್ಕಸಿಯಲ್ಲ

ಹೆಣ್ಣು ಸ್ವತ: ಕಪಿಲ ಸಿದ್ಧಮಲ್ಲಿಕಾರ್ಜುನ

ಎನ್ನುವ ಶರಣ ಸಿದ್ಧರಾಮನ ವಚನದಲ್ಲಿ ಹೆಣ್ಣಲ್ಲಿ ಅಡಗಿರುವ ಸುಪ್ತ ಪ್ರತಿಭೆ; ಸಾಧನೆಗಳ ಅಂಶವನ್ನು ಕಂಡುಕೊಂಡು ಮಹಿಳೆಯನ್ನು ಭಗವಂತನ ಎತ್ತರಕ್ಕೆ ಒಯ್ದರು. ಶರಣರ ಚಳುವಳಿಯಲ್ಲಿ ಮೂಲಭೂತ ಅಂಶಗಳೆಂದರೆ, ಮಹಿಳಾ ಸ್ವಾತಂತ್ಯ್ರ ಹಾಗೂ ಅಸ್ಪೃಶ್ಯ ನಿರ್ಮೂಲನೆ ಮತ್ತು ಸಮತಾವಾದದ ಸಮಾಜ ನಿರ್ಮಾಣದ ಗುರಿ ಎಂದೆನ್ನಬಹುದು.

ಶರಣರು ಮಹಿಳೆಗೆ ದುಡಿದು ತಿನ್ನುವ ಹಕ್ಕನ್ನು ಕಲ್ಪಿಸಿ ಸಮಾಜದಲ್ಲಿ ಸಮಾನತೆಯನ್ನು ನೀಡಿದರು. ಸಾವಿರಾರು ವರ್ಷಗಳಿಂದ ಹಾಕಲ್ಪಟ್ಟ ಬಂಧನಗಳ ಸಂಕೋಲೆಯನ್ನು ಶರಣರು ಕಿತ್ತೆಸೆದರು. ಇನ್ನು ಅಧ್ಯಾತ್ಮಿಕ ಜೀವನದಲ್ಲಿ ಹೆಣ್ಣು-ಪುರಷನಷ್ಟೇ ಸಮಾನಳು. ಹೆಣ್ಣು ಶೂದ್ರಳೆನ್ನುವ ಸಂಪ್ರದಾಯಸ್ಥರ ವಾಕ್ಯವನ್ನು ಶರಣರು ಹುಸಿಗೊಳಿಸಿದರು. ಇದರ ಪರಿಣಾಮವಾಗಿ ಹೆಣ್ಣು-ಗಂಡು ಎಂಬ ಭೇದ ಮುಕ್ತವಾದ ಸಮಾಜ ನಿರ್ಮಾಣವಾಯಿತು.

4) ಪ್ರೇತ ಸೂತಕ: ಅತೃಪ್ತ  ಆತ್ಮಗಳು ಎಂದು ಆತ್ಮದ ಬಗ್ಗೆ ಕಥೆ ಕಟ್ಟುತ್ತಾ ಅವುಗಳನ್ನು ತೃಪ್ತಿ ಪಡಿಸಲು ಹೋಮ ಹವನ ಮಾಡಬೇಕು ಸೂತಕದ ಛಾಯೆ ತಡೆಯಬೇಕು ಎಂದೆಲ್ಲಾ ಆಚರಣೆಗಳಿರುವನ್ನು ಕಾಣಬಹುದಾಗಿದೆ. ಈಗಲೂ  ಉ.ಕನ್ನಡ ಹಾಗೂ ದ ಕನ್ನಡ ಉದಾ ಕುಂದಾಪುರದಲ್ಲಿ ಭೂತಾರಾಧನೆ ಇರುವುದನ್ನು ಕಾಣಬಹುದಾಗಿದೆ ಇದು ಪ್ರೇತ ಸೂತಕದ ಭಾಗ.  ಅಲ್ಲದೇ, ಸತ್ತವರ ಮನೆಯವರನ್ನು ಮುಟ್ಟಬಾರದು, ಮೈಲಿಗೆ ಅಂಟಿಕೊಳ್ಳುತ್ತದೆ ಎಂಬ ವಾದವಿದೆ. . ನೋವಿನ ವೇಳೆಯಲ್ಲಿ ಈ ಪ್ರೇತ ಸೂತಕ ಮನೆಯ ಜನರಿಗೆ ಸಂಬಂಧಿಕರಿಗೆ ಭಾವನಾತ್ಮಕವಾಗಿ ಬಹಳಷ್ಟು ತೊಂದರೆ, ಈ ಪ್ರೇತ ಸೂತಕದ ಮೂಲಕ ನಡೆಯುತ್ತಿತ್ತು. ಆದರೆ ಲಿಂಗವಂತ ಧರ್ಮದಲ್ಲಿ  ಮರಣವೇ ಮಹಾನವಮಿ. ಪುನರ್ಜನ್ಮ ಎಂಬುದಿಲ್ಲ, ಸ್ವರ್ಗ ನರಕಗಳೆಂಬುದಿಲ್ಲ.

5) ಎಂಜಲು ಸೂತಕ:

ಮಡೆಸ್ನಾನ ಅಂದರೆ ವೈದಿಕರು ಉಂಡ ಎಲೆಯ ಮೇಲೆ ಉರುಳು ಸೇವೆಯನ್ನು ಮಾಡಿ ಪಾಪ ಕಳೆದುಕೊಳ್ಳುವ ಆಚರಣೆ ಹಾಗೂ ಅಮವಾಸೆ, ಹುಣ್ಣಿಮೆ, ಮಲ್ಲಯ್ಯ ಹೀಗೆ ಅನೇಕ ಪೂಜಾ ವೇಳೆಯಲ್ಲಿ ಸ್ವಾಮಿಗಳು ಮನೆಯಲ್ಲಿ ಊಟ ಮಾಡುವವರೆಗೆ ಆಹಾರವನ್ನು ಯಾರೂ ಎಂಜಲು ಮಾಡುವಂತಿಲ್ಲ, ಹಾಗೆ ಮಾಡಿದರೆ ಸ್ವಾಮಿಗಳಿಂದ ಅವರಿಗೆ ಶಾಪ ತಟ್ಟುತ್ತದೆ ಎಂಬ ನಂಬಿಕೆಗಳೆಲ್ಲ ಎಂಜಲು ಸೂತಕದಲ್ಲಿ ಬರುತ್ತದೆ. ಇಂತಹ ಅನೇಕ ಪದ್ಧತಿಗಳನ್ನು ವಿಭಿನ್ನ ಪ್ರದೇಶದಲ್ಲಿ ವಿಭಿನ್ನ ರೀತಿಯಲ್ಲಿ ಇರುವುದನ್ನು ಕಾಣಬಹುದಾಗಿದೆ.  ಶರಣರು ಇಂತಹ ಸಾಂಪ್ರದಾಯಿಕ ಪದ್ಧತಿಯನ್ನು ಇಡಿಯಾಗಿ ಖಂಡಿಸಿದ್ದಾರೆ.  ಶರಣರು ಆಹಾರವನ್ನು ಪ್ರಸಾದ  ಎಂದರು. ಆಹಾರಕ್ಕೆ ಅತ್ಯಂತ ಗೌರವ ಸೂಚಿಸಿದರು. ದುಡಿಯದೇ ಆಹಾರ ತಿನ್ನುವುದನ್ನು ನಿರ್ದಾಕ್ಣ್ಯಣ್ಯವಾಗಿ ಖಂಡಿಸಿದರು. ದಾಸೋಹ ಕಲ್ಪನೆಯ ಮೂಲಕ ಜಗತ್ತಿನಲ್ಲಿ ಹಸಿವನ್ನು ಬಡಿದೊಡಿಸಿದವರು. ಸಾಮೂಹಿಕ ಭೋಜನೆಯನ್ನು ಪ್ರೋತ್ಸಾಹಿಸಿದರು. ಇಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯವನ್ನು ಅಂದು ನಮ್ಮ ಶರಣರು ಮಾಡಿ ತೋರಿಸಿದರು.

6) ಸಾವಿನ ಸೂತಕ: ಸಾವಿನ ಸೂತಕದಲ್ಲಿ ಯಾವುದೇ ಶುಭ ಕಾರ್ಯಮಾಡುವಂತಿಲ್ಲ ಮನುಷ್ಯನ ಹುಟ್ಟು ಸಾವು ಯಾವಾಗ ಸಂಭವಿಸುತ್ತದೆ ಎನ್ನುವುದು ಅನಿರೀಕ್ಷಿತ.  ಇಂತಹ ಅನಿರೀಕ್ಷಿತ ಘಟನೆಗಳಿಗೆ ಸೂತಕಗಳ ಕರಿಛಾಯೆಯನ್ನು ಹೊದಿಸಿ, ಸತ್ತ ವೇಳೆ ಸರಿಯಾಗಿಲ್ಲ ಸೂತಕವಿದೆ ಒಂದು ತಿಂಗಳು ಮನೆ ಬಿಡಬೇಕು ಅಥವಾ ಪ್ರತಿ ತಿಂಗಳು ಇಂತಹ ದಿನದಲ್ಲಿ ಮನೆ ಬಿಡಬೇಕು, ಪೂಜೆ, ಯಜ್ಞ ಯಗಾದಿ ಮಾಡಿಸಬೇಕು ಎಂದು ಹೇಳುತ್ತಾ ಸಾವಿನ ಸೂತಕದ ಆಚರಣೆ ಮಾಡುವದನ್ನು ಕಂಡಿದ್ದೇವೆ.  ನಮ್ಮ ಮನೆಯ ಒಂದು ಘಟನೆಯನ್ನೇ ಇಲ್ಲಿ ಉದಾಹರಿಸಬೇಕೆಂದರೆ,

ನಮ್ಮ ತಾಯಿ ತೀರಿಕೊಂಡಾಗ……

೧. ಹಿರೇಮಠ ಹಾಗೂ ಮಠಪತಿ ಸ್ವಾಮಿಗಳ ತಾಯಿಯ ಶವದ ಮೇಲೆ ಪಾದವಿಟ್ಟು ಮಂಗಳಾರತಿ ಮಾಡಿದ ಬಗೆ  ಅಮಾನವೀಯತೆಯಿಂದ ಕೂಡಿತ್ತು.

2 ಮಂಗಳಾರತಿಯ ವೇಳೆಯಲ್ಲಿ ಎಲ್ಲ ಬೀಗರಿಂದ ದಕ್ಷಿಣೆ ಪಡೆದ ಪದ್ಧತಿ….

3 ದೈವದಾಗ ಅಥವಾ ಲಿಂಗದಾಗ ತೆಗೆದುಕೊಳ್ಳುವಾಗ ಪೂಜೆಯ ನಂತರ ದಕ್ಷಿಣೆಗಾಗಿ ಮಾಡಿದ ಪರಿ…..

     4.ಪಂಚಕದಲ್ಲಿ ತೀರಿಹೋಗಿದ್ದರಿಂದ ಇಷ್ಟು ದಿನ ಮನೆ ಬಿಡಬೇಕು ಅಥವಾ ಪ್ರತಿ ತಿಂಗಳು ಈ ದಿನಾಂಕದಂದು ಮನೆ ಭೀಢಭೇಕು ಎಂಬ ವೈದಿಕರ ನುಡಿಗಳುಹೀಗೆ ಇತ್ಯಾದಿ ಉದಾಹರಣೆಗಳು ಶೋಷಣೆಯ ಮತ್ತೊಂದು ಉದಾಹರಣೆ ಎನ್ನಬಹುದು.

ಆದರೆ ಶರಣರು ಸರಳ ಜೀವನದ ಮೂಲಕ ತತ್ವಗಳನ್ನು ಪಸರಿಸಿದರು. ಕೆಳ ವರ್ಗದ ಶ್ರಮಿಕರಿಗೆ ಹೊರೆಯಾಗುವ ಸಾವಿನ ಸೂತಕಗಳನ್ನು ಖಂಡಿಸಿರು. 

ಜನನ ಸೂತಕ, ಕುಲ ಸೂತಕ, ರಜಃಸೂತಕ, ಎಂಜಲ ಸೂತಕ, ಹಾಗೂ ಪ್ರೇತ ಸೂತಕ, ಈ ಪಂಚಸೂತಕಗಳು ಶರಣರಿಗೆ. ಇಲ್ಲವೆಂದು ವಿಶ್ವಗುರು ಬಸವಣ್ಣನವರೇ  ಈ ಕೆಳಗಿನ ವಚನಗಳಲ್ಲಿ ಹೇಳುವುದನ್ನು ನಾವೆಲ್ಲ ನೋಡಿದ್ದೇವೆ.

ಜನನಸೂತಕ, ಕುಲಸೂತಕ, ರಜಃಸೂತಕ, ಎಂಜಲಸೂತಕ, ಪ್ರೇತಸೂತಕ

ಎಂಬಿವಾದಿಯಾದ ಸರ್ವಸೂತಕಂಗಳು

ಅಂಗಲಿಂಗ ಸಂಬಂಧಿಗಳಾದ ಲಿಂಗಭಕ್ತರಿಗಿಲ್ಲ ನೋಡಾ, ಅದೆಂತೆಂದೊಡೆ;

ಆದಿಬಿಂದುರ್ಭವೇದ್ಬೀಜಂ ಬೀಜಮಧ್ಯಸ್ಥಿತಂ ಕುಲಂ

ಬೀಜಂ ನಾಸ್ತಿ ಕುಲಂ ನಾಸ್ತಿ ತಸ್ಮೈ ಶಿವಕುಲಂ ಭವೇತ್ ಎಂದುದಾಗಿ

ಪೂರ್ವಾಚಾರವನಳಿದು ಪುನರ್ಜಾತನಾಗಿ,

ಅಂಗದ ಮೇಲೆ ಲಿಂಗಸಾಹಿತ್ಯನಾದ ಭಕ್ತಂಗೆ

ಜನನಸೂತಕವೆಂಬುದೆ ಪಾತಕ ನೋಡಾ.

ಶಿವಭಕ್ತರಾದ ಬಳಿಕ ಭವಿನೇಮಸ್ತರ ಕಳೆದು

ಶಿವಕುಲವೆ ಕುಲವಾದ ಭಕ್ತರಿಗೆ ಕುಲಸೂತಕವೆಂಬುದೆ ಪಾತಕ ನೋಡಾ.

ಗುರುಪಾದತೀರ್ಥ, ಲಿಂಗಪಾದತೀರ್ಥ, ಜಂಗಮಪಾದತೀರ್ಥ ಆದಿಯಾದ

ಲಿಂಗೋದಕ, ಪಾದೋದಕ, ಪ್ರಸಾದೋದಕ ಎಂಬ ತ್ರಿವಿಧೋದಕದಲ್ಲಿ

ಸರ್ವಪಾಕಪ್ರಯತ್ನ, ನಾನಾ ಕ್ರಿಯಾವಿಧಾನ, ಸ್ನಾನಪಾನಂಗಳಿಂದ

ಬಾಹ್ಯಾಭ್ಯಂತರಂ ಶುಚಿಯಾದ, ಶುದ್ಧನಿರ್ಮಲದೇಹಿಯಾದ ಭಕ್ತಂಗೆ ರಜಃಸೂತಕವೆಂಬುದೆ ಪಾತಕ ನೋಡಾ.

ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಯುಕ್ತವಾದ ಸದಾಸನ್ನಹಿತ ಭಕ್ತಂಗೆ

ಎಂಜಲಸೂತಕವೆಂಬುದೆ ಪಾತಕ ನೋಡಾ.

ಗುರುವಿನಿಂ ಜನನ, ಚರಲಿಂಗದಿಂ ಸ್ಥಿತಿ,

ಪರಮಪಾವನ ಘನಮಹಾಲಿಂಗದೊಳೈಕ್ಯ. ಅದೆಂತೆಂದೊಡೆ;

ಸದ್ಗುರೋಃ ಪಾಣಿಜಾತಸ್ಯ ಸ್ಥಿತೇ ಸದ್ಭಕ್ತಸಂಗಿನಾಂ

ಲೀಯತೇ ಚ ಮಹಾಲಿಂಗೀ ವೀರಶೈವೋತ್ತಮೋತ್ತಮಂ ಎಂದುದಾಗಿ,

ನಿಜಲಿಂಗೈಕ್ಯವಾದ ಸದ್ಭಕ್ತಂಗೆ

ಪ್ರೇತಸೂತಕವೆಂಬುದೆ ಪಾತಕ ನೋಡಾ.

ಇಂತೀ ಪಂಚಸೂತಕವನುಳ್ಳ ಪಾತಕಂಗಳ

ಪಂಚಾಚಾರಯುಕ್ತನಾದ ಸದ್ಭಕ್ತಂಗೆ ಕಲ್ಪಿಸುವ

ಪಂಚಮಹಾಪಾತಕರ ಅಘೋರ ನರಕದಲ್ಲಿಕ್ಕುವ ಕೂಡಲಸಂಗಯ್ಯ. / 657  ಹೇಳುವರು.

ವೈದಿಕ ಧರ್ಮದಲ್ಲಿ ಇಂದಿಗೂ ಪಂಚಸೂತಕಗಳ ಆಚರಣೆಯ ನೆಪದಲ್ಲಿ ದಲಿತರ,  ದುಃಖಿತರ, ಸ್ತ್ರೀಯರ ಶೋಷಣೆಯಾಗುವುದನ್ನು ಗುರುತಿಸಿದ ಶರಣರು, ಈ ಸೂತಕಗಳನ್ನೇ ನಿರಾಕರಿಸಿದರು.

ಪ್ರೇತಸೂತಕ ಬಿಡದು, ರಜಸ್ಸೂತಕ ಬಿಡದು, ಎಂಜಲುಸೂತಕ ಬಿಡದು,

ಭ್ರಾಂತುಸೂತಕ ಬಿಡದು, ವರ್ಣಸೂತಕ ಬಿಡದು,

ಇವರೆಂತು ಭಕ್ತರಹರು?

ಹೂಸಿ ಹುಂಡನ ಮಾಡಿದಲ್ಲಿ, ಬಾಯಿಗೆ ಬೆಲ್ಲವ ತೊಡೆದಲ್ಲಿ

ಸದ್ಗುರು ಲಿಂಗವು ಮೂಗ ಕೊಯ್ಯದೆ ಮಾಬನೆ?

ಕಾಡು ಕಿಚ್ಚಿನ ಕೈಯಲ್ಲಿ ಕರಡದ ಹುಲ್ಲ ಕೊಯ್ಸಿದಂತಿರಬೇಕು ಭಕ್ತಿ.

ಹಿಂದೆ ಮೆದೆಯಿಲ್ಲ, ಮುಂದೆ ಹುಲ್ಲಿಲ್ಲ.

ಇದು ಕಾರಣ ಕೂಡಲಚೆನ್ನಸಂಗನ ಭಕ್ತಿಸ್ಥಲ

ನಿಮ್ಮ ಶರಣಂಗಲ್ಲದೆ ಅಳವಡುದು- ೩/೧೧೯[1]

ಈ ವಚನವನ್ನು ತೀವ್ರವಾದ ಆಧ್ಯಾತ್ಮಿಕ ಭ್ರಮೆಗಳಿಗೆ ಸೀಮಿತಗೊಳಿಸದೇ ಲೋಕಪರವಾಗಿ ವಿವೇಚಿಸಿದರೆ, ಭಕ್ತನಾದವನಿಗೆ ಜಾತಿಗಳಿಲ್ಲ; ಭೂತಪ್ರೇತಗಳ ಕುರಿತು ನಂಬುಗೆಗಳಿಲ್ಲ; ಕೋಪ ಅಸೂಯೆಯಾದಿ ತಾಪಗಳಿಲ್ಲ (ರಜಸ್ಸು) ಎಂಜಲೆಂಬ ಬೇಧದ ಭಾವವಿಲ್ಲ; ಭ್ರಾಂತುಗಳಿಲ್ಲ ವರ್ಣಾಶ್ರಮಗಳಿಲ್ಲ. ಈ ಕೊಳಕುಗಳನ್ನು ಅವನು ಅನಂತರದ ಪರಂಪರೆಗೆ ಹಸ್ತಾಂತರಿಸುವುದಿಲ್ಲ. ಈ ವಚನದ ಮಾತುಗಳಿಂದ ನಮಗೆ ತಿಳಿಯುವುದೇನೆಂದರೆ ಸಮಾಜದ ಕೊಳಕನ್ನು ಹಾಗೂ ವ್ಯಕ್ತಿಯಲ್ಲಿರುವ ಕೊಳಕನ್ನೂ ಒಮ್ಮೆಗೇ ಶುದ್ಧೀಕರಿಸುವ ಪರಿಚಾರಕನಂತೆಯೂ ಭಕ್ತ ಕಾಣತೊಡಗುತ್ತಾನೆ. ಇಷ್ಟು ಶುದ್ಧಿಯಾದರೆ ನಮ್ಮೆದುರಿಗೆ ಇರುವ ಈ ಮಾನವ ಲೋಕ ಒಂದು ನಿತ್ಯನೂತನ ಪ್ರಪಂಚವಾಗಿ ಪುನರ್ರಚನೆಯಾಗಲೇ ಬೇಕಲ್ಲವೆ? ಆದ್ದರಿಂದ ಖಂಡಿತವಾಗಿಯೂ ಭಕ್ತನಾದವನು ಪರಿಶುದ್ಧ ಸಮಾಜ ಕಟ್ಟಬಲ್ಲ, ಸೂತಕಗಳನ್ನು ಮೆಟ್ಟಿ ನಿಲ್ಲಬಲ್ಲ ಎಂಬುದು ಇದರ ಅರ್ಥ

            ಶ್ರೇಣಿಕೃತ ಅಂದಿನ ಸಮಾಜದಲ್ಲಿ ಸೂತಕಗಳಿಂದ ಸ್ತ್ರೀಯರಿಗೆ ನೋವಾಗುತ್ತಿತ್ತು, ಆದರೆ ಲಿಂಗವಂತರಲ್ಲಿ ತಾಯಿಯ ಗರ್ಭದಲ್ಲಿರುವ ಮಗುವಿಗೆ ಲಿಂಗಧಾರಣೆ ಮಾಡುವ ಮೂಲಕ ಸೂತಕವಿಲ.ಕುಲ ಸೂತಕ, ಜನನ ಸೂತಕ, ಮರಣ ಸೂತಕ, ಮಹಿಳೆಯರು ರಜ ಸೂತಕ. ಜಾತಿ ಸೂತಕ ಇವುಗಳನ್ನು ಶರಣರು ನಿರಾಕರಿಸಿದರು. ಕಾಯಕ ದಾಸೋಹದ ಮೂಲಕ ಬದುಕಿ, ನಮ್ಮ ಅರಿವನ್ನು, ಚೈತನ್ಯವನ್ನು ಕಾಣಬೇಕು ಎಂದು ತಿಳಿಸಿದರು.

            ಒಟ್ಟಾರೆಯಾಗಿ  ಅಂಧಶ್ರದ್ಧೆ, ಮೌಢ್ಯತೆ ಹಾಗೂ ಸೂತಕಗಳು ಜನಸಾಮಾನ್ಯರನ್ನು ಶೋಷಣೆ ಮಾಡುತ್ತಾ, ವೈಧಿಕರ ಅಟ್ಟಹಾಸದಿಂದ ಜೀವನವನ್ನು ದುರ್ಬಲಗೊಳಿಸಿದ್ದವು. ವೈಚಾರಿಕತೆಗೆ ತಡೆಯೊಡ್ಡಿದ್ದವು. ಇಂತಹ ಸ್ಥಿತಿಯಿಂದ ದುರ್ಬಲರನ್ನು, ಧಮನಿತರನ್ನು, ಮಹಿಳೆಯರನ್ನು, ಬಡವರನ್ನು, ಹೀಗೆ ಒಟ್ಟಾರೆ ಅಂಚಿನಲ್ಲಿರುವ ಎಲ್ಲ ಜನರನ್ನು ಮೇಲೆತ್ತುವ ಹಾಗೂ  ಸ್ವಾಭಿಮಾನದಿಂದ ಬದುಕುವ ಮತ್ತು ಅರಿವನ್ನು , ಚೈತನ್ಯವನ್ನು ಕಾಣುವ ಮಾರ್ಗ ಒದಗಿಸಿದವರೆಂದರೆ ನಮ್ಮ ವಚನಕಾರರು ಎಂದು ಹೇಳಬಹುದು. ವಚನಕಾರರು ವೈಚಾರಿಕ ಕ್ರಾಂತಿಯೊಂದಿಗೆ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ರಾಂತಿಗೆ ನಾಂದಿಯಾದರು. ಆದ್ದರಿಂದ ಶರಣರ ತತ್ವಗಳು ಇಂದಿಗೂ, ನಾಳೆಗೂ ಎಂದೆಂದಿಗೂ ಚಿರಂತನ. ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು


ಡಾ.ದಾನಮ್ಮ ಝಳಕಿ

Leave a Reply

Back To Top