ಅಂಕಣ ಸಂಗಾತಿ

ಒಲವ ಧಾರೆ

ರಕ್ತ ಸಂಬಂಧಕ್ಕಿಂತಲೂ ದೊಡ್ಡದು

ಸ್ನೇಹ ಸಂಬಂಧ..

“ನೆಚ್ಚಿ ಹಾಕಿದ ಬಂಡವಾಳ ವಾಣಿಜ್ಯೋದ್ಯಮದ ವ್ಯಾಪಾರವೆಲ್ಲವೂ ನಷ್ಟವಾಗಿ ಹೋಗಿತು, ಬದುಕೇ ಬೇಸರವಾಗಿದೆ ” ಎಂದು ಕೈ ಚೆಲ್ಲಿ ಕುಳಿತಾಗ ಯಾವ ವ್ಯವಹಾರಸ್ಥರು ಆತನ ಕೈ ಹಿಡಿಯುವುದಿಲ್ಲ. ವ್ಯಾಪಾರ ವ್ಯಾಪಾರವೇ ಆಗಿರುತ್ತದೆ..!! “ಹೆದರಬೇಡಿ ಗೆಳೆಯ ನಾನಿದ್ದೇನೆ, ನಿನ್ನ ಜೊತೆ ನಾನಿರುವೆ” ಎಂದು ಬೆನ್ನಿಗೆ ನಿಂತು ಹೆಗಲಿಗೆ ಕೈ ಹಾಕಿ ಕಷ್ಟದಲ್ಲಿಯೂ ಕಣ್ಣೀರು ಒರೆಸಿ, ಪ್ರೀತಿಯ ಸಾಂತ್ವಾನದ ಮಾತುಗಳನ್ನು ಹೇಳುತ್ತಲೇ,  ನಿಮ್ಮ ಬದುಕಿನ ಉನ್ನತಿಯನ್ನು ಬಯಸುವ ಯಾವ ಸಂಬಂಧಿಕರು ಆಗಲಾರರು. ಅದು ಗೆಳೆಯನಿಂದ ಮಾತ್ರ ಸಾಧ್ಯ. ಇಂತಹ ಗೆಳೆತನ ಯಾವ ಸ್ವಾರ್ಥವನ್ನು ಬಯಸುವುದಿಲ್ಲ. ನೋವಿರಲಿ, ನಗುವಿರಲಿ, ಅಳುವಿರಲಿ, ಬದುಕಿನ ಯಾವುದೇ ಕ್ಷಣಗಳಿಗೂ, ಗೆಳೆತನ ಭರವಸೆಯಾಗಿ ನಿಲ್ಲುತ್ತದೆ..!! ಗೆಳತನವೆಂದರೆ ಹಾಗೆ..!  ಅದು ಎಲ್ಲವನ್ನೂ ಮೀರಿದ್ದು. ಧರ್ಮ ಜಾತಿ, ದೇಶ ಭಾಷೆ… ಇದಾವುದು ಅದಕ್ಕೆ ಮುಖ್ಯವಾಗಿರುವುದಿಲ್ಲ. ಅದಕ್ಕೆ ಸ್ನೇಹವೊಂದೆ ಮಾತ್ರ.  ಸ್ನೇಹ ಎಂದರೆ ಸ್ಪಂದನೆಯ ಭಾವನೆಗಳು ಒಂದಾದಾಗ ಸ್ನೇಹ ಗಟ್ಟಿಗೊಳ್ಳುತ್ತದೆ. ಒಬ್ಬರ ಕೊರತೆಗಳನ್ನು ಅಣಕಿಸದೆ, ಇನ್ನೊಬ್ಬರ ಕೊರತೆಗಳನ್ನು ಪ್ರೀತಿಸುವ ಗುಣ ಯಾವ ವ್ಯಕ್ತಿಯಲ್ಲಿ ಇರುತ್ತದೆಯೋ ಆ ವ್ಯಕ್ತಿಯು ಸ್ನೇಹಮಯಿ ಆಗಿರುತ್ತಾನೆ.

ಸಮಯ ಬಂದಾಗ ಕುಟುಂಬದಲ್ಲಿ ತಂದೆ- ತಾಯಿಗಳಿಗೆ, ಸಹೋದರರಿಗೆ, ಹೇಳಿಕೊಳ್ಳಲಾರದ ಭಾವನೆಗಳನ್ನು ಗೆಳೆಯರ ಮುಂದೆ ಹಂಚಿಕೊಳ್ಳುತ್ತೇವೆ. ಗೆಳೆಯ ನಮ್ಮನ್ನು ಸ್ನೇಹಪೂರ್ವಕವಾಗಿ ಸಂತೈಸುತ್ತಾನೆ. ಬಿದ್ದಾಗ ಎಬ್ಬಿಸಿ ನಿಲ್ಲುವ, ಎಡವಿದಾಗ ಆದ ಗಾಯವನ್ನು ಮಾಸಿಸುವ ಬಹುದೊಡ್ಡ ಔಷಧಿ ಎಂದರೆ ಅದು ಸ್ನೇಹ.

ಬಾಲ್ಯದಲ್ಲಿ ಆಟವಾಡುತ್ತಲೇ ಬೆಳೆದ ನಾವುಗಳು. ಸಾಮಾಜಿಕ ಕಟ್ಟುಪಾಡುಗಳನ್ನು, ಧಾರ್ಮಿಕ ಮುಖವಾಡಗಳನ್ನು, ಜಾತಿಯ ಅಡ್ಡ ಗೋಡೆಗಳನ್ನು, ಗೊಡ್ಡು ಶ್ರೀಮಂತಿಕೆಯನ್ನು ಮೈಯಿಗೆ ಕೆಲವು ಸಲ ಮೆತ್ತಿಕೊಂಡು ಗೆಳೆತನದಿಂದ ದೂರವಾದ ಉದಾಹರಣೆಗಳಿವೆ. ಆದರೆ ಅದು ಯಾವತ್ತಿಗೂ ಸ್ನೇಹ ಎನಿಸಿಕೊಳ್ಳುವುದಿಲ್ಲ. ಅದು ಕೇವಲ ವ್ಯಕ್ತಿಗತವಾದ ಸಂಬಂಧವಾಗಿ ಬಿಡುತ್ತದೆ. ಗೆಳತನದಲ್ಲಿ ಯಾವ ಅಡ್ಡ ಗೋಡೆಗಳು ಮಹತ್ವಪಡೆದುಕೊಳ್ಳುವುದಿಲ್ಲ. ಅವೆಲ್ಲವನ್ನು ಕೆಡವಿ, ಪುಡಿ ಮಾಡಿ, ಎಸೆದುಬಿಟ್ಟು ಸ್ನೇಹದ ವಾತ್ಸಲ್ಯವನ್ನು ಹಂಚುವ ಸಂಜೀವಿನಿ ಎಂದರೆ ಅದೇ ಸ್ನೇಹ.

ಯಾವುದಾದರೂ ಸಂತೋಷದಾಯಕ ಸಮಾರಂಭಕ್ಕೆ ಕರೆದಾಗ ಮಾತ್ರ ನಾವು ಹೋಗಬೇಕು. ಆದರೆ ಗೆಳೆತನದಲ್ಲಿ ಕಷ್ಟ ಬಂದಾಗ ಕರೆಯದಿದ್ದರೂ ಆತನ ಕಷ್ಟಗಳಿಗೆ ಸ್ಪಂದಿಸುವ, ಎದೆಗೊಟ್ಟು ನಿಲ್ಲುವ, ಮನ ಬಿಚ್ಚಿ ಸಂತೈಸುವ, ಕೆಲಸ ಮಾಡಿದಾಗಲೇ ಸ್ನೇಹಕ್ಕೊಂದು ಹೊಸ ಅರ್ಥ ಬಂದೀತು.

ನೀರಿಗೆ ಜಿಗಿದಾಗ ಈಜು ಬಾರದೇ ಒದ್ದಾಡಿದಾಗ ದಡಕ್ಕೆ ಸೇರಿಸಿದ, ಮರಕೋತಿಯಾಟವಾಡುವಾಗ ಕಾಲು ಜಾರಿ ಬಿದ್ದಾಗ  ಓಡಿ ಹೋಗಿ ಅವ್ವನನ್ನೋ ಅಪ್ಪನನ್ನೋ ಕರೆದುಕೊಂಡು ಬಂದು ಆಸ್ಪತ್ರೆಗೆ ಕಳುಹಿಸಿದ, ಮಗಳ ಮದುವೆಗೆಂದು ಸಾಲ ಮಾಡುವಾಗ ‘ನಾನಿದ್ದೇನೆ ಚಿಂತೆ ಬೇಡ’ ಎಂದು ಬ್ಯಾಂಕ್ ಗೆ ಬಂದು  ರುಜು ಹಾಕಿದ,  ‘ನಿನಗೊಂದು ನೆಲೆಬೇಕು ಮೊದಲು ಮನೆ ಕಟ್ಟಿಸು’ ಎಂದು ಹುರಿದಿಂಬಿಸಿ ಮನೆ ಮುಗಿಯುವವರೆಗೂ ನಮ್ಮೊಂದಿಗೆ ಸಲಹೆ ಸೂಚನೆ ಕೊಟ್ಟು ಅದನ್ನು  ಪೂರ್ಣವಾಗುವವರೆಗೂ ವಿಚಾರಿಸಿಕೊಂಡ, ಪ್ರೀತಿಸಿದ ಹುಡುಗಿಯೋ ಇಲ್ಲವೇ ಹುಡುಗನೋ ಕೈಕೊಟ್ಟಾಗ ನಮ್ಮೆಲ್ಲಾ ನೋವನ್ನು ಮರೆಸುವಂತೆ ಹಾಸ್ಯ ಮಾಡಿ, ನಗೆಗಡಲಲ್ಲಿ ತೇಲಿಸಿ ನಂತರ ಆತ್ಮಸ್ಥೈರ್ಯ ತುಂಬಿ ಧೈರ್ಯ ಹೇಳಿದ,  ಬದುಕಿನ ಕೊನೆಯ ಹಂತದ ಗಳಿಗೆಗಳಲ್ಲಿ ಅವ್ವನೋ ಇಲ್ಲವೇ ಅಪ್ಪನೋ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಡುವಾಗ ಧೈರ್ಯದ ಮಾತುಗಳನ್ನು ಹೇಳಿ ಆತ್ಮಸ್ಥೈರ್ಯ ತುಂಬುವ, ಸಂಸಾರದಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳಿಗೆ ಪ್ರೀತಿಪೂರ್ವಕವಾಗಿ ಪರಿಹಾರವನ್ನು ಸೂಚಿಸಿ ಬದುಕಿಗೆ ಹೊಸ ಅರ್ಥ ಕಲ್ಪಿಸುವ, ಅಲ್ಲದೆ ನಮಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ಸದಾ ಸಹಾಯ ಮಾಡುತ್ತಾ, ನಮ್ಮ ಗೆಲುವಿನಲ್ಲಿ ತಾವು ನಗೆಯನ್ನು ಬೀರುತ್ತಾ ಅಭಿನಂದನೆಗಳನ್ನು ಸಲ್ಲಿಸುವ…

ಇಂತಹ ಸಾವಿರಾರು ಸಂದರ್ಭದಲ್ಲಿ ಜೊತೆಗಿರುವ  ಬಹುದೊಡ್ಡ ಸಂಬಂಧವೆಂದರೆ ಅದು ಸ್ನೇಹ..!! ಅದೊಂದೇ ಸ್ನೇಹದಿಂದ ಮಾತ್ರ ಇಷ್ಟೆಲ್ಲಾ ಸಾಧ್ಯ..!!

ಗೆಳೆಯ ಅಥವಾ ಗೆಳತಿ ಸಾರ್ವಜನಿಕವಾಗಿ ತಪ್ಪು ಮಾಡಿದಾಗಲೂ ಆತನನ್ನು ಸಮರ್ಥಿಸಿಕೊಂಡು ಅದರಿಂದ ಪಾರು ಮಾಡಿ ಆತನನ್ನೋ ಅವಳನ್ನೋ ತನ್ನ ಮನೆಗೆ ಕರೆದುಕೊಂಡು ಬಂದು ಇಬ್ಬರೇ ಇದ್ದಾಗ ಅವನಿಂದ/ ಅವಳಿಂದ  ಆದ ತಪ್ಪಿಗೆ ಸಾಕಷ್ಟು ಬುದ್ಧಿ ಮಾತುಗಳನ್ನು ಹೇಳಿ ಬದುಕಿಗೆ ಹೊಸ ಅರ್ಥ ಕಲ್ಪಿಸುವ ಜೀವವೆಂದರೆ ಅದು ಗೆಳೆತನ.  ಬದುಕಿನ ಯಾವುದೋ ಸಂಕಟಕ್ಕೆ ಹೃದಯವನ್ನು ತೆರೆದುಕೊಳ್ಳುವ ಮುನ್ನ, ನೋವುಗಳಲ್ಲಿ ಮಲಗಿದ್ದರೂ, ನೋವುಗಳನ್ನು ಮರೆಮಾಚಲು ಕುಡಿತದ ಚಟಕ್ಕೆ ಬಲಿಯಾದಾಗ ಅದರಿಂದ ಮುಕ್ತಗೊಳಿಸಲು ಪ್ರಯತ್ನ ಪಡುವ ಕೆಲವೇ ಕೆಲವು ಸಂಬಂಧಗಳಲ್ಲಿ ಗೆಳೆತನ ಮಾತ್ರ..!! ನಾವು ಏನಾದರೂ ಸೋಲುವುದಿದ್ದರೆ ಅದು ಗೆಳೆತನಕ್ಕೆ ಸೋತು ಬಿಡಬೇಕು. ಗೆಳೆತನದಲ್ಲಿ ನಾವು ಏನಾದರೂ ಬಿಡುವುದಿದ್ದರೇ  ನಮ್ಮ ಹಠಮಾರಿತನವನ್ನು ಬಿಟ್ಟುಬಿಡಬೇಕು. ಇಲ್ಲದೇ ಹೋದರೆ ಸಣ್ಣ ಸಣ್ಣ ಮನಸ್ತಾಪಗಳು ದೊಡ್ಡ ಸಂಬಂಧಗಳನ್ನೇ ಹಾಳು ಮಾಡುತ್ತವೆ. ಯಾವ ರೀತಿ ಸಣ್ಣ ಸಣ್ಣ ರಂಧ್ರಗಳು ಇಡೀ ಮಡಿಕೆಯನ್ನೇ ಉಪಯೋಗಕ್ಕೆ ಬಾರದಂತೆ ಮಾಡುತ್ತವೆಯೋ ಹಾಗೆ…!!  ಹಾಗಾಗಿ ಬದುಕಿನಲ್ಲಿ ಗೆಳೆತನಕ್ಕೆ ವಿಶಿಷ್ಟವಾದ ಸಂಬಂಧವಿದೆ. ಗೆಳೆತನಕ್ಕೆ ಬಡತನ – ಶ್ರೀಮಂತಿಕೆಯ ಭೇದ ಭಾವವಿಲ್ಲ. ಮಹಾಭಾರತದಲ್ಲಿ ಬರುವ ಕರ್ಣ – ದುರ್ಯೋಧನರ ಸ್ನೇಹ ಅತಿರೇಕವಾದುದ್ದು..!! ಹಾಗೆಯೇ ಕೃಷ್ಣ – ಕುಚೇಲರ ನಿರ್ಮಲವಾದ ಸ್ನೇಹ ಮರೆಯಲಾರದು. ಇಂತಹ ಹಲವಾರು ಪಾತ್ರಗಳು ಸ್ನೇಹಕ್ಕಾಗಿ ತಮ್ಮ ರಕ್ತ ಸಂಬಂಧಗಳನ್ನೂ ನಿರ್ಲಕ್ಷಿಸಿ, ಗೆಳೆತನಕ್ಕೆ ಮಹತ್ವ ಕೊಟ್ಟ ಉದಾಹರಣೆಗಳನ್ನು ಪೌರಾಣಿಕ, ಐತಿಹಾಸಿಕ, ಪ್ರಸ್ತುತ ಸನ್ನಿವೇಶಗಳಲ್ಲಿಯೂ ನಾವು ಕಾಣುತ್ತೇವೆ. ಕೆಲವು ಸಂಬಂಧಗಳಿಗೆ ನಿರ್ದಿಷ್ಟವಾದ ಚೌಕಟ್ಟು ಇರುತ್ತದೆ. ಆದರೆ ಗೆಳೆತನಕ್ಕೆ ಚೌಕಟ್ಟು ಇರುವುದೇ ಇಲ್ಲ..!!  ಗೆಳೆತನ ವಿಶಾಲವಾದ, ನಿಜವಾದ, ಆಕಾಶದಷ್ಟು ಶುಭ್ರ. ಭೂಮಿ ಎಷ್ಟು ತಾಳ್ಮೆ. ನಮ್ಮ ಸ್ನೇಹ ಹೇಗಿರಬೇಕೆಂದರೆ ಮೂರನೇಯ ವ್ಯಕ್ತಿಗಳೂ ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಿರಬೇಕು.  ನಮ್ಮ ಸಂಬಂಧ ಗಟ್ಟಿಯಾಗಿರಬೇಕು. ಏನೇ ವ್ಯತ್ಯಾಸಗಳು ಬಂದರೂ ಕುಳಿತುಕೊಂಡು ಬಗೆಹರಿಸಿಕೊಳ್ಳಬೇಕು.

ರಕ್ತ ಸಂಬಂಧಗಳು ಸಂಪತ್ತಿಗೆ ಮಹತ್ವವನ್ನು ನೀಡುತ್ತವೆ. ಆಸ್ತಿ, ಹಣ, ಅಂತಸ್ತು ಎಣಿಸುತ್ತಾ ಎಣಿಸುತ್ತಾ ರಕ್ತ ಸಂಬಂಧವೇ ಗೌಣವಾಗಿ ಬಿಡುತ್ತವೆ. ಇಂಥ ಗೌರವದ ಸಂಬಂಧ ಹೆಚ್ಚು ಕಾಲ ಉಳಿಯಲಾರದು. ಶಾಶ್ವತವಾದ ಸಂಬಂಧವೆಂದರೆ ಅದು ಸ್ನೇಹ..! ಸ್ನೇಹವೆಂದರೆ ತ್ಯಾಗ, ಸ್ನೇಹವೆಂದರೆ ನಿಸ್ವಾರ್ಥ, ಸ್ನೇಹವೆಂದರೆ ಅರ್ಪಣೆ, ಸ್ನೇಹವೆಂದರೆ ಸಮರ್ಪಣೆ…

 ಹಾಗಾಗಿ ರಕ್ತ ಸಂಬಂಧಕ್ಕಿಂತಲೂ ಬಹುದೊಡ್ಡ ಸಂಬಂಧವೆಂದರೆ ಅದು ಗೆಳೆತನ. ಹಾಗಾಗಿ ನಮ್ಮೇಲ್ಲರಿಗೂ ಬದುಕಿಗೊಬ್ಬ ಜೀವ ಜೀವದ ಒಲವನ್ನೇ ಧಾರೆಯಾಗಿ ಹರಿಸುವ ಗೆಳೆಯನೋ ಗೆಳೆತಿಯೋ ಇರಬೇಕು.  ಅಗ ಬದುಕು ಅರ್ಥಪೂರ್ಣವಾದೀತು.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.

Leave a Reply

Back To Top