ಮಂಡಲಗಿರಿ ಪ್ರಸನ್ನ-ಸಾವಿಗೆ ಸವಾಲು ಹಾಕಿದ ಗಜಲ್

ಕಾವ್ಯ ಸಂಗಾತಿ

ಮಂಡಲಗಿರಿ ಪ್ರಸನ್ನ-

ಸಾವಿಗೆ ಸವಾಲು ಹಾಕಿದ ಗಜಲ್

ಸಾವಿಗೆ ಸವಾಲು ಹಾಕಿದ ಗಜಲ್

ಈಚೆಗೆ ನಾನು ಓದಿದ ಯುವಕವಿ ಹಾಗೂ ನನ್ನ ಆಪ್ತಮಿತ್ರ ಭೀಮೇಶ ಅವರ ಗಜಲ್ ‘ಎಂದಾದರೂ ಸಮಯವಿದ್ದರೆ ನನ್ನೆಡೆಗೆ ಬಂದುಬಿಡು ಸಾವೆ’ ನನ್ನನ್ನು ಬಹುವಾಗಿ ಕಾಡಿದ ಕವಿತೆ. ಸಾವೆಂದರೆ ಅಪಶಕುನ, ಬಿಡ್ತು ಅನ್ನಿ, ಛೇ ಹೀಗೆ ಬರೆಯಬಾರದಿತ್ತು…..ಎಂಬೆಲ್ಲ ಅಪಸ್ವರಗಳ ನಡುವೆ ಈ ಗಜಲ್ ಸಾವಿಗೆ ಸವಾಲು ಹಾಕಿ ಗೆದ್ದಿದೆ. ಸಾವನ್ನು ಪ್ರೀತಿಸುವವನೆ ಅಪರಾಜಿತ! ಇದನ್ನೇ ನಮ್ಮ ಶರಣರು, ದಾಸರು, ಸೂಫಿಗಳು, ಅನುಭಾವಿಗಳು, ತತ್ವಪದಕಾರರು ಹೇಳಿದ್ದು. ತತ್ವಶಾಸ್ತ್ರದಲ್ಲಿ ಹುಟ್ಟುಸಾವುಗಳ ವಿಸ್ತ್ರುತ ಚರ್ಚೆ ಇದೆ. ಹುಟ್ಟಿದ ದಿನವೆ ಸಾವಿನ ದಿನವೂ ನಿರ್ಧಾರವಾಗಿರುತ್ತದಂತೆ. ಸಾಯುವುದು ಖಚಿತವೆಂದು ಗೊತ್ತಿದ್ದರೂ ಸಾವಿನ ಕುರಿತು ನಮ್ಮಲ್ಲಿ ಮಡಿವಂತಿಕೆ ಇದೆ. ಸಾವೆಂಬುದು ಹೆಗಲಮೇಲೆ ಭೂತದಂತೆ ಹತ್ತಿ ಕೂತ ಸದಾಕಾಲದ ಗಂಟು….
ಭೀಮೇಶ ಅವರ ಈ ಗಜಲ್ ಓದಿ ನಾನು ಅದನ್ನು ತರಹೀ ಗಜಲಾಗಿಸಿ ಇಲ್ಲಿ ಓದುಗರಿಗೆ ನೀಡುತ್ತಿರುವೆ. ತರಹೀ ಗಜಲ್ ರಚನೆಯನ್ನು ಅನೆಕ ಕವಿಗಳು ಇಷ್ಟಪಡುವುದಿಲ್ಲ. ಕಾರಣ ಗಜಲ್ ರಚನೆಯ ಎಲ್ಲ ಪರಿಶ್ರಮ ಮಾಡಿಯೂ ಮೂಲ ಕವಿಯ ಹೆಸರು ನಮೂದಿಸಿ ಶ್ರೇಯಸ್ಸನ್ನು ಆ ಕವಿಗೇಕೆ ಕೊಡಬೇಕು? ಎನ್ನುವ ಭಾವ. ಆದರೆ, ತರಹೀ ಗಜಲ್ ಮಾಡುವುದರಿಂದ ಬೇರೊಬ್ಬರ ಉತ್ತಮ ಗಜಲ್ ಓದಿ, ಅದೇ ಭಾವದಲ್ಲಿ ಸೃಷ್ಟಿಗೊಳ್ಳುವ ತರಹೀ ಗಜಲ್ ಒಂದು ಸವಾಲಿನ ಕೆಲಸ. ಗಮನಾರ್ಹ ಅಂಶವೆಂದರೆ ಮೂಲ ಗಜಲಿನ ಒಂದು ಸಾಲನ್ನು ಹೊರತುಪಡಿಸಿ, ಉಳಿದ ಶೇರ್ ಗಳ ಕಾಫಿಯಾಗಳನ್ನು ಅನಿವಾರ್ಯವಾಗಿ ಬದಲಿಯಾಗಿಸಿ ಸೃಷ್ಟಿಸಬೇಕಾದುದು ತರಹೀ ಗಜಲ್ ನಲ್ಲಿ ಕಡ್ಡಾಯ.
ಮೂಲ ಗಜಲಿನ ಭಾವದಲ್ಲಿ ಬದಲಾಗದೆ ರಚನೆಗೊಳ್ಳುವ ತರಹೀ ಗಜಲ್ ಜೊತೆಗೆ ಕವಿಯ ಗಜಲ್ ಸಾಲು ಹಾಗೂ ಕವಿಯ ಹೆಸರು ನಮೂದಿಸುವುದು ಉರ್ದು ಸಾಹಿತ್ಯದಿಂದ ಬಂದಿರಬಹುದಾದ ಸೌಜನ್ಯಪೂರ್ಣ ಕ್ರಮಗಳಿರಬೇಕು…ನನ್ನ ಈ ತರಹೀ ಗಜಲ್ ನಲ್ಲಿ ನಾನು ‘ತಖಲ್ಲುಸ್’ ಬಳಸಿಲ್ಲ.
ವಂದನೆಗಳು


ಮಂಡಲಗಿರಿ ಪ್ರಸನ್ನ

ತರಹೀ ಗಜಲ್

ಮಿಸ್ರಾ: ಎಂದಾದರೂ ಸಮಯವಿದ್ದರೆ…..
ಕವಿ: ಭೀಮೇಶ ಎಸ್. ಧರೇಪೂರ

ಎಂದಾದರೂ ಸಮಯವಿದ್ದರೆ ನನ್ನೆಡೆಗೆ ಬಂದುಬಿಡು ಸಾವೆ
ಒಂದಿನಿತೂ ಕರುಣೆಯಿದ್ದರೆ ನನ್ನೆಡೆಗೆ ಬಂದುಬಿಡು ಸಾವೆ

ಮನೆಯಂಗಳದಿಂದಲೆ ಹಾದು ಹೋಗುತಿರಬಹುದು ನೀನು
ನಲಿವಿಂದ ಪ್ರೀತಿಯಿದ್ದರೆ ಮನೆಯೆಡೆಗೆ ಬಂದುಬಿಡು ಸಾವೆ

ಬದುಕು ಸಾವಿನ ಅಂತರ ಎಲ್ಲರೂ ಹೇಳುವವರೆ ಜಗದಿ
ಹೃದಯದೊಳು ಒಲವಿದ್ದರೆ ನನ್ನೆಡೆಗೆ ಬಂದುಬಿಡು ಸಾವೆ

ಸಂತೈಸಲಾರೆ ನಾನು ಗೊತ್ತೆನಗೆ ನಿನ್ನ ಅಗಾಧತೆಯ ಗುಣ
ನಿನ್ನೊಳಗಷ್ಟು ಬಲವಿದ್ದರೆ ನನ್ನೆಡೆಗೆ ಬಂದುಬಿಡು ಸಾವೆ

ಸಾವುನೋವ ಕಾರುಬಾರದ ಒಡೆಯ ಇರಬಹುದು ನೀನು
ತುಸುವೆತುಸು ಅವಕಾಶವಿದ್ದರೆ ನನ್ನೆಡೆಗೆ ಬಂದುಬಿಡು ಸಾವೆ


Leave a Reply

Back To Top