ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ ಸಂಗಾತಿ

ನೆನಪಿನದೋಣಿಯಲಿ

ನಾನೂ ನಾಗಲಿಂಗಪುಷ್ಪವೂ

ದಿನವೂ ಭೇಟಿಯಾಗುವ,  ಜೊತೆಯಲ್ಲೇ ಇರುವ ವ್ಯಕ್ತಿಗಳ ಸಾಂಗತ್ಯ ಬೀರುವ ಪ್ರಭಾವ ಒಂದು ರೀತಿಯದಾದರೆ ಎಂದೋ ಒಮ್ಮೆ ಬಾಳಿನಲ್ಲಿ ಎದುರಾಗುವ ಕೆಲವು ಅನಿರೀಕ್ಷಿತ ವಸ್ತು ವಿಷಯ ವ್ಯಕ್ತಿಗಳು ಬೀರುವ  ಪ್ರಭಾವದ ವೈಶಿಷ್ಟ್ಯವೇ ಬೇರೆ . ಜೀವನದಲ್ಲಿ ಬಾಲ್ಯವೆಂದರೆ ಹೂವಿನ ಹಾಗೆ ಸ್ನಿಗ್ಧ ಕೋಮಲ ಅನ್ನುತ್ತಾರೆ . ಹಾಗೆ ನನ್ನ ಪಾಲಿಗಂತೂ ಬಾಲ್ಯವೆಂದರೆ ವಿವಿಧ ಹೂಗಳು ಸೇರಿಸಿ ಮಾಡಿದ ಹೂಮಾಲೆಯೇ.

ಹೂವುಗಳು ನನ್ನ ಮನವನ್ನು ಗಾಢವಾಗಿ ಆವರಿಸಿಕೊಂಡಿದೆ ಮನಸಿನ ಭಿತ್ತಿಯ ಮೇಲೆ ಅಳಿಸಲಾಗದ ಚಿತ್ತಾರಗಳಾಗಿವೆ.  

ಎಂದೋ ಒಮ್ಮೆ ನನ್ನ ಕಣ್ಣಿಗೆ ಬೀಳುವ ಈ ನಾಗಲಿಂಗ ಪುಷ್ಪದ ವಿಷಯವನ್ನೇ ನಾನೀಗ ಹೇಳಲು ಹೊರಟಿರುವುದು . ಸ್ವಲ್ಪ ಅಪರೂಪದ ಹೂವಾದ  ಇದು ನನ್ನ ಮನಸ್ಸಿನ ಮೇಲೆ ಬೀರಿರುವ ಗಾಢ ಪರಿಣಾಮ ಮಾತ್ರ ಅಸದಳ, ಅದ್ಭುತ . 

ಈ ಹೂವಿನ ಬಗ್ಗೆ ನನ್ನ ನೆನಪಿನ ಬಂಡಿ ಓಡುವುದಾದರೆ ಮೊಟ್ಟ ಮೊದಲ ನೆನಪು ನಾವು ಚಾಮುಂಡಿಪುರಂ ಮನೆಯಲ್ಲಿದ್ದಾಗ.

ಆಗ ಇನ್ನೂ ಶಾಲೆಗೆ ಸೇರಿರಲಿಲ್ಲ. 4ಅಥವಾ 5 ವರ್ಷದವಳಿರಬಹುದು. ಮನೆಯ ಹತ್ತಿರವಿರುವ ಶಂಕರ ನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಅಕ್ಕಪಕ್ಕದ ಹಿರಿಯ ಗೆಳೆಯ ಗೆಳತಿಯರೊಂದಿಗೆ ಹೋಗುವ ವಾಡಿಕೆ . ಅಲ್ಲಿ 1ದೊಡ್ಡ ನಾಗಲಿಂಗಪುಷ್ಪದ ಮರ  ತುಂಬಾ ಹೂ ಬಿಟ್ಟಿರುತ್ತಿತ್ತು . ಒಮ್ಮೆ ಯಾರೋ ಹೂ ಕೀಳುತ್ತಿದ್ದಾಗ ನನ್ನ ಗೆಳೆಯ ಗೆಳತಿಯರೆಲ್ಲ ಕೇಳಿ ಒಂದೊಂದು ಹೂವು ಪಡೆದರು . ಸ್ವಭಾವತಃ ಸಂಕೋಚ ಸ್ವಭಾವದವಳಾದ ನಾನು ಮುನ್ನುಗ್ಗಿ ಕೇಳಲಿಲ್ಲವೋ ಅಥವಾ ಚಿಕ್ಕವಳೆಂದು ಕೊಡಲಿಲ್ಲವೋ ಅಂತೂ ನನಗೆ ಹೂ ಸಿಗಲಿಲ್ಲ . ಸಪ್ಪೆ ಮೋರೆ ಮಾಡಿ ನಿಂತುಕೊಂಡಿದ್ದ ನನ್ನನ್ನು ಅರ್ಚಕರು ಗಮನಿಸಿ ಹತ್ತಿರ ಕರೆದರು . ದೇವರ ಪೂಜೆಗೆಂದು ಇಟ್ಟಿದ್ದ  2 ನಾಗಲಿಂಗ ಪುಷ್ಫಗಳನ್ನು ದೇವರ ಪಾದದ ಬಳಿ ಇರಿಸಿ ನಂತರ ನನಗೆ ಕೊಟ್ಟರು ಹಾಗೆಯೇ ಪ್ರಸಾದ ರೂಪದಲ್ಲಿ ಕಲ್ಲುಸಕ್ಕರೆಯ ಉಂಡೆಯನ್ನು ಸಹ . ಖುಷಿಯಾಗಿ ಮನೆಗೆ ಬಂದು ಅಣ್ಣನ ಬಳಿ ವಿಷಯ ಹೇಳಿದಾಗ ಅವರು ಹೇಳಿದ್ದು ಜೀವನದಲ್ಲಿ ಏನು ಏನಾದರೂ ಸಿಗದಿದ್ದರೆ ನಿರಾಶೆ ಬೇಸರಪಡಬಾರದು ಅದಕ್ಕಿಂತ ಉತ್ತಮವಾದ್ದನ್ನು ಕೊಡಲೆಂದೇ ದೇವರು ಹಾಗೆ ಮಾಡಿರುತ್ತಾನೆ . ಈಗ ಹೂ ಸಿಗಲಿಲ್ಲ ಎಂದು ಬೇಜಾರಾದೆ ಪ್ರಸಾದದ ರೂಪದಲ್ಲಿ 2 ಹೂ ಹಾಗೂ ಕಲ್ಲುಸಕ್ಕರೆಯನ್ನು ಸಿಕ್ಕಿತಲ್ಲ  ಆ ರೀತಿ ಎಂದರು . ನನಗೆ ಆಗ ಅದು ಸರಿಯಾಗಿ ಅರ್ಥವಾಗಿರಲಿಲ್ಲ . ಆದರೆ ನನ್ನ ಬದುಕಿನಲ್ಲಿ ಆದದ್ದೆಲ್ಲ ಹಾಗೇ… ಮೊದಲು ದೊರೆಯದೆ ನಿರಾಸೆ ನಂತರ ಅದನ್ನು ಮರೆಸುವಂತೆ ತುಂಬಾನೇ ಒಳ್ಳೆಯದಾಗುತ್ತದೆ . ಪ್ರಾಯಶಃ ದೇವರು ಇದನ್ನು ಈ ಘಟನೆಯ ಮೂಲಕ ಸೂಚಿಸಿರಬಹುದು . ನಂತರ ಶಾಲೆಗೆ ಸೇರಿಸಿದಾಗ ಮೊದಲ ದಿನ ದೇವರ ದರ್ಶನ ಪಡೆಯಲು ಅದೇ ದೇವಸ್ಥಾನಕ್ಕೆ ಹೋಗಿದ್ದು ಮತ್ತೆ ಅಲ್ಲಿ ನಾಗಲಿಂಗಪುಷ್ಪದ ಪ್ರಸಾದವೇ ಸಿಕ್ಕಿದ್ದು ನನ್ನ ಅದೃಷ್ಟ . 

ಮುಂದೆ ನನಗೆ ನೆನಪಿಲ್ಲವೋ ಅಥವಾ ಗಮನಿಸಿಲ್ಲವೋ ನಾಗಲಿಂಗಪುಷ್ಪ ನನ್ನ ಕಣ್ಣಿಗೆ ಬಿದ್ದೇ ಇರಲಿಲ್ಲ . ಈಗ 8ಹತ್ತು ವರ್ಷದ ಹಿಂದೆ ಚೆನ್ನೈ ಪ್ರವಾಸ ಹೋದಾಗ ಅಲ್ಲಿಯ 1 ದೇವಸ್ಥಾನದ ತೋಟದಲ್ಲಿ ಮತ್ತೆ ನಾಗಲಿಂಗ ಪುಷ್ಪ ಕಣ್ಣಿಗೆ ಬಿತ್ತು . ಅದು ಕಣ್ಣಿಗೆ ಬೀಳುವ ಮೊದಲೇ ಅದರ ಮಂದಿರ ಸುವಾಸನೆ ನಾಸಿಕಕ್ಕೆ ತಗುಲಿತ್ತು .ಕಳೆದದ್ದೇನೋ ಸಿಕ್ಕಿದಷ್ಟು ತುಂಬಾ ಖುಷಿಯಾಗಿತ್ತು ಅಂದು . ಅದನ್ನೇ ಜೊತೆಯಲ್ಲಿ ಬಂದಿದ್ದ ಗೆಳತಿ ಶಶಿಗೆ ಹೇಳಿ ಸಂತಸಪಟ್ಟಿದ್ದೆ . 

ನಮ್ಮ ಕಚೇರಿಯ ಬಳಿಯಲ್ಲೇ ಇರುವ ಕಾಮಾಕ್ಷಿ ಆಸ್ಪತ್ರೆ ಪಕ್ಕದ ನಗುವ ಉದ್ಯಾನವನದಲ್ಲಿ ಅಡ್ಡಾಡುವ ಒಮ್ಮೆ ನಾಗಲಿಂಗಪುಷ್ಪದ ಮರ ಕಣ್ಣಿಗೆ ಬಿದ್ದಿತ್ತು . ಆಗ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದುದರಿಂದ ನೆನಪಿನ ಬುತ್ತಿಯಲ್ಲಿ ಕಟ್ಟಿಕೊಂಡ ಅಷ್ಟೇ ಅಲ್ಲದೆ ಕ್ಯಾಮಅ ಗ್ಯಾಲರಿಯಲ್ಲೂ ತುಂಬಿಸಿಕೊಂಡಿದ್ದೆ . 

ಮುಂದೆ ಹೊಸನಾಡು ದೇವಿಯ ದರ್ಶನ ಮಾಡುವಾಗ ಅಲ್ಲಿಯೂ ಸಹ ನಾಗಲಿಂಗ ಪುಷ್ಪ ಕಣ್ಮನಗಳಿಗೆ ತಂಪನ್ನಿತ್ತಿತ್ತು. ಮತ್ತೆ ಅದನ್ನು ಕ್ಯಾಮೆರಾದೊಳಗೆ ಬಂಧಿಸಿಟ್ಟೆ ಎಂದು ಬೇರೆ ಹೇಳಬೇಕಿಲ್ಲ ಅಲ್ಲವೇ ?  ಮತ್ತೊಮ್ಮೆ ನಮ್ಮ ಜೀವ ವಿಮಾ ನಿಗಮದ ಚಿತ್ರದುರ್ಗ ಶಾಖೆಯ ಅಂಗಳದಲ್ಲಿ ನಾಗಲಿಂಗ ಪುಷ್ಪದ ಮರ ಕಂಡಿದ್ದೆ.

ತೀರಾ ಇತ್ತೀಚಿನ ಭೇಟಿಯ ಬಗ್ಗೆ ಹೇಳಿಬಿಡುವೆ . ಉದ್ಯೋಗ ನಿಮಿತ್ತ ಅದೆಷ್ಟೋ ಬಾರಿ ನಂಜನಗೂಡು ಮೈಸೂರು ರಸ್ತೆಯಲ್ಲಿ ಓಡಾಡಿದ್ದರೂ  ಮಲ್ಲನಮೂಲೆ ಮಠದ ಭೇಟಿಯ ಸಂದರ್ಭ ಒದಗಿರಲಿಲ್ಲ . ಸಾಹಿತ್ಯ ಸಮಾರಂಭಕ್ಕೆ ಜಾಗ ಹುಡುಕಲು ಹೊರಟಾಗ ಇತ್ತೀಚೆಗೆ ಅಲ್ಲಿಗೆ ಹೋಗುವ ಸುಯೋಗವೇರ್ಪಟ್ಟು ಆ ಮಠದೊಳಗೆ ಕಾಲಿರಿಸಿದ ತಕ್ಷಣವೇ ನನ್ನ ಚಿರಪರಿಚಿತ ನಾಗಲಿಂಗ ಪುಷ್ಪದ ಪರಿಮಳ ಸ್ವಾಗತಿಸಿತ್ತು . ಅಲ್ಲಿ ದೇವರ ಲಿಂಗದ ಮೇಲೆ ಹಾಗೂ ಫೋಟೋಗಳ ಮೇಲೆಲ್ಲಾ ನಾಗಲಿಂಗ ಪುಷ್ಪ  ವಿರಾಜಿಸಿತ್ತು.  ಮಠದ ಹಿಂದಿನ ಬಾಗಿಲು ತೆಗೆದು ಸೋಪಾನಕಟ್ಟೆ ನದೀತೀರ ಎಲ್ಲಾ ಸುತ್ತಾಡಿ ಬಂದರೂ ನಾಗಲಿಂಗಪುಷ್ಪ ಮರದ ದರ್ಶನ ಮಾತ್ರ ಆಗಲಿಲ್ಲ . ನನಗಂತೂ ಕುತೂಹಲ ತಡೆಯಲಾಗದೆ ಅಲ್ಲಿದ್ದವರನ್ನ ವಿಚಾರಿಸಿದಾಗ ಪಕ್ಕದ ಇನ್ನೊಂದು ಬಾಗಿಲ ಬೀಗ ತೆಗೆದರು. ಅಲ್ಲಿದ್ದ ತೋಟದಲ್ಲಿ ಐದಾರು ನಾಗಲಿಂಗಪುಷ್ಪದ ಮರಗಳು . ನೋಡಲೇ ಎಷ್ಟೊಂದು ಸಂಭ್ರಮವಾಗಿತ್ತು . 

ಶಿವಲಿಂಗದ ಆಕಾರದ ಮೇಲೆ ನಾಗರ ಹೆಡೆ ಹರಡಿಕೊಂಡಂತಿರುವ ಆಕಾರದ ಈ ಪುಷ್ಪ ತೆಳು ಕೆಂಪು ಬಣ್ಣದ್ದು . ಕಮಲದ ಹೂವಿನ ಬಣ್ಣ ಎನ್ನಬಹುದು.  ಅದರಂತೆಯೇ ದಪ್ಪ ತೊಟ್ಟು .ಮಂದವಾದ ಸುವಾಸನೆ 1ರೀತಿ ವಿಶಿಷ್ಟವಾಗಿದೆ . ಪಕಳೆಗಳು ಅಷ್ಟೆ ತುಂಬಾ ತೆಳುವಾಗಿರದೆ ಸ್ವಲ್ಪ ದಪ್ಪವಾಗಿದ್ದು ತೀರಾ ಸುಕೋಮಲವಲ್ಲ, ಬೇಗನೆ ಬಾಡುವುದಿಲ್ಲ . ಶಿವ ಲಿಂಗದ ಆಕಾರ ತೆಳು ಹಳದಿ ಬಣ್ಣದಲ್ಲಿದ್ದು ಕುಸುಮಗಳಿರುತ್ತವೆ. ದೇವರ ಪೂಜೆಗೆ ಅದರಲ್ಲೂ ಶಿವನ ಪೂಜೆಗೆ ತುಂಬಾ ಶ್ರೇಷ್ಠ ಎಂದು ಪ್ರತೀತಿ .  

ಕಾಕತಾಳೀಯವೋ ಮೂಢನಂಬಿಕೆಯೋ ಅಥವಾ ನನ್ನ ಸುಪ್ತ ಮನಸ್ಸಿನ ಗ್ರಹಿಕೆಯೋ ನಾಗಲಿಂಗ ಪುಷ್ಪದ ದರ್ಶನ  ಅಚಾನಕ್ಕಾಗಿ ಆದಾಗಲೆಲ್ಲಾ ಬಾಳಿನಲ್ಲಿ ಏನಾದರೂ ಒಂದು ಒಳ್ಳೆಯ ಘಟನೆ ಸಂಭವಿಸುತ್ತದೆ . ನನ್ನ ಪಾಲಿಗೆ ನಾಗಲಿಂಗಪುಷ್ಪ ಅದೃಷ್ಟದ ಹೂ. 

ಹೀಗೆ ನನ್ನ ಬಾಲ್ಯದ ನೆನಪುಗಳೊಂದಿಗೆ ಬೆಸುಗೆಯಾಗಿ ಭಾವನಾತ್ಮಕ ಅನುಭೂತಿ ತರುವ ಈ ಲೌಕಿಕ ಪುಷ್ಪದ ಅದ್ಭುತ ಭೇಟಿ ಗಳಿಗಾಗಿ ಕಾಯುವುದೇ 1 ರೀತಿಯ  

ಸೊಗ . ಈ ಅದ್ಭುತ ಸುಖದ ಕ್ಷಣಗಳ ಪ್ರತೀಕ್ಷೆ ಬಾಳಿನುದ್ದಕ್ಕೂ ಇದ್ದೇ ಇರುತ್ತದೆ .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು

About The Author

Leave a Reply

You cannot copy content of this page

Scroll to Top