ಅಂಕಣ ಸಂಗಾತಿ

ಪ್ರಸ್ತುತ

ಬೆಂದಕಾಳೂರ ಬದುಕು

    ಮೊನ್ನೆ ಬೆಂಗಳೂರಲ್ಲಿ ಹತ್ತು ದಿನ ಇರುವ ಪ್ರಸಂಗ ಬಂತು . ಹತ್ತು ದಿನಗಳಲ್ಲಿ ಬೆಂಗಳೂರನ್ನು ಹತ್ತಿರದಿಂದ ನನಗೆ ನಿಲುಕಿದಷ್ಟು ಅಳೆದೆ , ದಕ್ಕಿದಷ್ಟನ್ನು ಹಿಡಿದು ಆ ಸಮಯದಲ್ಲಿ ಅನಿಸಿದ್ದು , ಬರೆಯಬೇಕೆನಿಸಿದ್ದು ನಮ್ಮವರಾದ ನಿಮ್ಮ ಮುಂದೆ .

     ಮಗನ ಮನೆ ಎಲೆಕ್ಟ್ರಾನಿಕ್ಸಿಟಿಯ  ಅಪಾರ್ಟ್ಮೆಂಟನಲ್ಲಿ .ಅಲ್ಲಿ ಬಿಸಿಲೇ ಇಲ್ಲ ಸುತ್ತಲೂ ಕಾಣುತಿದ್ದ ಬಿಸಿಲು ನಮ್ಮನೆ ಹತ್ತಿರ ಬರುವುದನ್ನು ತಡೆಯಲು ಸುತ್ತಲೂ ಹತ್ತಿಪ್ಪತ್ತು ಮಹಡಿಗಳ ಅಪಾರ್ಟ್ಮೆಂಟ್ಸ್, ಸೋ ಕಾಣುವ ಬಿಸಿಲನ್ನು ಬಾಚಿಕೊಳ್ಳಲೂ ಆಗದಂತಹ ವಾತಾವರಣ. ನಮ್ಮ ಇಡೀ ಮನೆಗಳ ಗುಚ್ಛಕ್ಕೇ ಈ ಪರಿಸ್ಥಿತಿ . ಮನಸು ಬಿಸಿಲು ಬೇಕೇಬೇಕು ಅನಿಸಿದರೆ ಐದಾರು ಮಹಡಿ ಏರಿ ಹೋಗಬೇಕು . ನಾನೇನು ಎಂಟ್ಹತ್ತು ದಿನ ಇದ್ದುಬರುವಾಕೆ , ಮಗನಸಂಸಾರ , ಮತ್ತು ಅಲ್ಲಿರುವ ಅನೇಕ ಫ್ಯಾಮಿಲಿ ಬಿಸಿಲು ಬಡಿಸಿಕೊಳ್ಳದೇ ಬೆಂಡಾದಂತಹವರ ಬದುಕಿನ ಬಗೆಗೆ ಮರುಕವೆನಿಸುತ್ತದೆ. ನಮ್ಮ ದೇಹಕ್ಕೆ ಅವಶ್ಯವಾದಡಿ ವಿಟಮಿನ್  ಸಿಗುವುದೇ ಬಿಸಿಲಿನಿಂದ ಅದರಿಂದ ಅವರು ವಂಚಿತರು . ಕೆಲಸಕ್ಕೆ ಹೋಗುವವರು ಓ ಕೆ . ಮನೇಲಿರುವವರು ಪಾಪ .

ಬಿಸಿಲಿಗೆ ತಣ್ಣನೆಗಾಳಿ ,ತಂಪಾದ ನೀರು ಎಷ್ಡು ಹಿತ ಎನಿಸುತ್ತದೆ ಎಂದರೆ  ಆಕ್ಷಣಕ್ಕೆ ಅದೇಸ್ವರ್ಗ . ಹಾಗೇ ಚಳಿಗಾಲಕ್ಕೆ ಎಳೆಬಿಸಿಲು . ಅದಿಲ್ಲ ಅಲ್ಲಿ ಅನೇಕರಿಗೆ .

    ಮಾಲ್ ಗೆಹೋದಾಗ …

   ಮೋರ್ ದಿಪಾರ್ಟ್ಮೆಂಟಲ್  ಮಾಲ್ ಗೆ ಹೋದಾಗ ಬಹುತೇಕ ಮಹಿಳೆಯರು ಝೀರೋಸೇಫ್    ( ನಾಟ್ ಝೀರೋಸೈಜ್)  ಆಗಿದ್ರು . ತಾವು ತೆಗೆದುಕೊಂಡ ಸಾಮಾನುಗಳು ಸ್ವಲ್ಪವೇ ಇದ್ರೂ ಹಿದುಕೊಂಡು ಕೆಳಗಿಳಿಯಲು ಆಗದೇ (ಅಭ್ಯಾಸವೂ ಇರಬಹುದು )ಲಿಫ್ಟ್ಗಾಗಿ ಕಾಯುತಿದ್ರು . ಮನೇಲಿದ್ದು ರುಚಿರುಚಿ ಕರಿದು ,ಹುರಿದು,  ತರಿಸಿ ಕುಳಿತು ಟಿವಿ ನೋಡುತ್ತಾ ತಿನ್ನುವುದು , ಹೊರಗೆ ಬಂದ್ರೆ ಕಾರು , ಆಫೀಸ್ನಲ್ಲಿ , ಮಾಲ್ ನಲ್ಲು ಎ ಸಿ  . ಬೆವರುಬಾರದು ,ಮೈಅಲುಗದು . ಹೀಗಾಗಿ ಆಲ್ಮೋಷ್ಟ್  ಹೆಂಗಸರು ಊದಿಕೊಂಡಂತಾಗಿದ್ರು .ಆಗ ಹೊಳೆದ ವಚನ

ಹಸಿವಿಲ್ಲದೇ ಬಿಸಿ ಇಲ್ಲದ ಊಟ

ನಿಸ್ಸಾರದ ಕ್ಷೀಣ ನೋಟ

ಹುಟ್ಟಿದುದರರ್ಥ ಉದ್ದೇಶವೇ ಗೊತ್ತಿಲ್ಲದ

ಪಾಪದವರ ಕಂಡು ಮರುಗಿದೆನೋಡಾ

ಗುರುದೇವಾ ಅವರಿಗರಿವಿಸು .

     ಬದುಕು ಬಂದಂತೆ ಬದುಕಬೇಕು ನಿಜ . ನಾವೂ ಒಂಚೂರು ಬದುಕ ಬಿಸಿಲಿಗೆ (ಚಟುವಟಿಕೆಗೆ) ತೆರೆದುಕೊಳ್ಳಬೇಕಲ್ಲ. ಅತಿಯಾದ ಐಷಾರಾಮಿಯೂ ರೋಗದಾಲಯ.

ಬದುಕಿಗೆ ತನ್ನದೇ ಆದ ಓ0ದು ನಿಯಮವಿದೆ . ಶ್ರಮಪಟ್ಟರೇ ಜೀರ್ಣವಾಗುವುದು. ಬೆವರಿಳಿಸಿದರೇ ಕೊಬ್ಬುಕರಗುವುದು . ನಕ್ಕರೇ ನರಗಳು ಸಡಿಲಗೊಳ್ಳುವವು.  ಹೀಗೇ ನಿದ್ದೆಗೊಂದು ರಾತ್ರಿ , ಕೆಲಸಕೆಂದೇ ಹಗಲು . ವಯಸಿರುವಾಗ ಸೋಮಾರಿಯಾದರೆ ಮುಪ್ಪಿಗೂ ಮೊದಲೇಮೇಲೆ…

   “ ಇಲ್ಲಿ ಲೆಕ್ಕ ಹಾಕಿದರೆ ಹದಿಮೂರು ಪೈಸೆಗೆ ಒಂದುಲೀ ನೀರು . ಮನೆ ಬಾಡಿಗೆಯ ಕಾಲುಭಾಗ ವಾಟರ್ ಬಿಲ್ಲು , ಕಾಲುಭಾಗ ಕರೆಂಟ್ ಬಿಲ್ಲು ನೋಡಮ್ಮ” ಎಂದ ಮಗ. ನಮ್ಮ ಹುನಗುಂದಕ್ಕೆ ಇನ್ನು ವಾಟರ್  ಮೀಟರ್ ಬಂದಿಲ್ಲ ಸೋ ಎಷ್ಟೋ ಸಲ ನೀರು ಬಂದು ಟ್ಯಾಂಕ್  ತುಂಬಿ ಹರಿದು ವಾಲ್ ಆಫ್ ಮಾಡಿದ್ದು ನೆನಪಾಯ್ತು . ಶುದ್ಧ ಗಾಳಿಗೊಂದು ಸೆಂಟರ್ ,  ಶುದ್ಧ ನಗುವಿಗೊಂದು ಸೆಂಟರ್.

ಅಲ್ಲಿ ಗಾಳಿಗೇ ಒಣಗಬೇಕು ಬಟ್ಟೆ , ಕುಳಿತಲ್ಲೇ ಹಸಿಯಬೇಕುಹೊಟ್ಟೆ.

ಎಲ್ಲದಕ್ಕೂ ಪರ್ಯಾಯ ವ್ಯವಸ್ಥೆ.     ಅಪ್ಪ ಅಮ್ಮ ಕೆಲಸಕ್ಕೆ ಹೋದಾಗ ಬೇಬಿಕೇರ್ನಲ್ಲಿ ಬೆಳೆವ ಮಕ್ಕಳು ಬೊಂಬೆಯೊಂದಿಗೆ ಆಟವಾಡಡುತ್ತಾ ಅದರೊಂದಿಗೇ ಮಾತನಾಡುತ್ತಾರೆ . ಅದಕ್ಕೇ ಬಹುಶಃ ದೊಡ್ಡನಗರಗಳಲ್ಲಿ ಟೆಡ್ಡಿಬೇರ್ ( ಬೊಂಬೆ)  ಹೆಚ್ಚು ಮಾರಾಟವಾಗಬಹುದು . ಮಣ್ಣು ಮುಟ್ಟದ ಕೈಗಳ ಆಟವೇನಿದ್ದರೂ ಮೊಬೈಲ್ನಲ್ಲೇ . ಅಲ್ಲಿ ಮಕ್ಕಳು ಕೀಲಿ ಕೊಡಬಹುದಾದ ಬೊಂಬೆಗಳು .

“ ಹೇಗಮ್ಮದ್ರಾಕ್ಷಿ? ಬಾರಿ ಹಣ್ಣು ಹೇಗೆ “ ಎನ್ನುತ್ತಾ ನಾಲ್ಕು ಹಣ್ಣು ತಿಂದು ನೋಡಿ ತೆಗೆದುಕೊಂಡು , ಇನ್ನೊಂದೆರಡು ಹಾಕು ಎಂದು ಜೋರು ಮಾಡಿ ತರುವ ನಮ್ಮೂರು ,  ನಾಲ್ಕುದ್ರಾಕ್ಷಿ, ಒಂದು ಈರುಳ್ಳಿ ತೆಗೆದುಕೊಂಡರೂ ಅವರು ಹೇಳಿದಷ್ಟು ಬಿಲ್ ಪೇ ಮಾಡಿಬರುವ ಬೆಂಗಳೂರು .     ತೂಕಮಾಡಿದರೆ ನಮ್ಮೂರ ತೂಕವೇ ಹೆಚ್ಚು ಅದಕ್ಕೇ ಬೇಂದ್ರೆ ಅಜ್ಜ ಹೇಳಿದ್ದು“ ನಮ್ಮೂರ ನಮಗ ಪಾಡ , ಯಾತಕವ್ವ ಹುಬ್ಬಳ್ಳಿ ಧಾರವಾಡ …”

     sಅಲ್ಲಿ ಯಾರೂ ಯಾರಿಗೂ ಬೇಡ .ʼಚಿನ್ನಾರಿಮುತ್ತʼ ಚಿತ್ರಕ್ಕೆ ಹೆಚ್ ಎಸ್ ವೆಂಕಟೇಶಮೂರ್ತಿ ಬರೆದ     “ಇಲ್ಲಿ ಎಷ್ಟೊಂದ್ ಮನೆ ಇಲ್ಲಿ ಎಲ್ಲಿ ನಮ್ಮನೆ ? ಇಲ್ಲಿ ಎಷ್ಟೊಂದ್ ಜನ ಇಲ್ಲಿ ಯಾರು ನಮ್ಮೋರು?” ಹಾಡುನೆನಪಾಯ್ತು.  ಸದಾ ಬೆನ್ನಿಗೊಂದು ಬ್ಯಾಗು , ಮುಖಕ್ಕೊಂದು ಮಾಸ್ಕ್,  ತಲೆಗೊಂದು ಹೆಲ್ಮೆಟ್  ಹಾಕ್ಕೊಂಡು ಓಡಿದ್ದೇ ಓಡಿದ್ದು .  ಹೊಟ್ಟಪಾಡಿಗೆ .ಏನೆಲ್ಲ ಪಾಟಲು ಪಡಬೇಕು. ಅಲ್ಲಿಯವರಿಗೆ ಅದುಕಾಮನ್ . ನಮಗೆ ಅವರು ಪಾಪ .

ಅವರಂತೆ ಅವರಿರಲಿ  ,ನಮ್ಮಂತೆ ನಾವಿರುವಾ. ಏನಂತೀರಿ ?


                                                 ನಿಂಗಮ್ಮಭಾವಿಕಟ್ಟಿ

ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ  ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ

One thought on “

  1. ಅದ್ಭುತ ನಗರ ಜೀವನ ಚಿತ್ರಣ…. ನಾವೇ ಧನ್ಯರು ಎನ್ನಲು ಇನ್ನೇನು ಬೇಕು….

Leave a Reply

Back To Top