ಕಾವ್ಯ ಸಂಗಾತಿ
ಏನ ಮಾಡಲಿ ಹೇಳು
ವಿನಯಚಂದ್ರ
ಚಾಚಿರುವ ನಿನ್ನ ಕೈಯ
ಹಿಡಿಯಲೇ ಬಿಡಲೇ
ಹರಿವು ಕಡಿಮೆಯಾಗಿ ದಡದಲಿ ಹೂಳು
ತುಂಬಿರುವ ಹೊಳೆ
ನಾಲ್ಕು ಹೆಜ್ಜೆ ದಾಟಿದರೆ
ತಿಳಿನೀರ ತೊರೆ
ಇದಾವ ಹಿರಿದೆಂದು ದಾಟುವ ಉತ್ಸಾಹದಲಿ
ನಡೆದು ಬಿಟ್ಟಿದ್ದೇನೆ
ಕಲ್ಲುಗಳ ಕೊರಕಿನಲಿ
ಸಿಲುಕಿದೆ ಪಾದ, ಹೊರಳಿದಷ್ಟೂ ಗೀರು ಗಾಯ
ಹೆಜ್ಜೆಯೆತ್ತಿಡಲಾರದೆ ಪರಿತಪಿಸುತ್ತಿರುವೆ
ಮುಂದಡಿಯಿರಲಿ, ಹಿಂದಡಿಯಿಡಲೂ ಸಿಗದ ಅವಕಾಶ
ಅದೆಲ್ಲಿಂದಲೋ ರೆಕ್ಕೆ ಪಟಪಟಿಸುತ್ತ
ಹಗುರಾಗಿ ಹಾರಿ ಬಂದಿಹೆ ನೀನು
ಆಗಸದಲ್ಲೆ ನಿಂತು ಕೈಯ ಚಾಚಿರುವೆ
ಹಿಡಿಯಲೇ ಬಿಡಲೇ
ನನ್ನ ಭಾರವ ಹೊತ್ತು ಹಾರಬಲ್ಲೆಯಾ ನೀನು
ಹಾರುವ ನಿನ್ನನೂ
ನೆಲಕಪ್ಪಳಿಸಿಬಿಡುವೆನೇ ನಾನು..
ಕದ ತಟ್ಟುವುದು ವಿಧಿ
ಕದ ತೆರೆಯುವುದು ವಿಧಿ
ಕೊರಕಲಲಿ ಕಾಲ ಸಿಲುಕಿಸಿರುವುದು ವಿಧಿ
ನಾನೇನು ಮಾಡಲಿ ಹೇಳು ನೀನು
ಚಾಚಿರುವ ಕೈ ಹಿಡಿಯಲೇಬೇಕಾದ ಕವಿತೆ.
ಧನ್ಯವಾದ ಸರ್