ಅಂಕಣ ಸಂಗಾತಿ

ಸಿನಿ ಸಂಗಾತಿ

ಅತಿಥಿ

ಕನ್ನಡ ಸಿನಿಮಾ

2002ನೇ ಇಸ್ವಿಯಲ್ಲಿ ಪಿ ಶೇಷಾದ್ರಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ “ಅತಿಥಿ”. ಈ ಚಿತ್ರ ಶ್ರೇಷ್ಠ ಪ್ರಾದೇಶಿಕ ಚಿತ್ರವೆಂಬ ಹೆಗ್ಗಳಿಕೆಗೆ ಭಾಜನವಾಗಿದೆ.

           ಸಮಾಜದ  ಮುಖ್ಯ ವಾಹಿನಿಯಿಂದ   ಬಂಡೆದ್ದ ನಕ್ಸಲನೊಬ್ಬನ ಮನೋ ಭೂಮಿಕೆಯ ಎರಡು ಮುಖಗಳ ದರ್ಶನವನ್ನು ಈ ಚಿತ್ರದಲ್ಲಿ ಕಾಣಬಹುದು.

         ಮಲೆನಾಡಿನ ಹಸಿರು ಬೆಟ್ಟಗಳ ನಡುವಿನ ಒಂದು ಹಳ್ಳಿ. ಆ ಹಳ್ಳಿಯಲ್ಲಿ ಒಬ್ಬ ವೈದ್ಯ (ದತ್ತಣ್ಣ). ಪತ್ನಿ (ಲಕ್ಷ್ಮಿ ಚಂದ್ರಶೇಖರ್ )ಮಗ ಹೊರದೇಶದಲ್ಲಿ ವಾಸವಿರುತ್ತಾನೆ . ವೈದ್ಯರು ಮನೆಯಲ್ಲಿಯೇ ಚಿಕಿತ್ಸಾಲಯವನ್ನು ಹೊಂದಿರುತ್ತಾರೆ, ಹಲವಾರು ರೋಗಿಗಳು ಅವರ ಮನೆಗೆ ಬಂದು ಔಷಧಿ ಪಡೆದು ಹೋಗುತ್ತಿರುತ್ತಾರೆ .ಆ ಊರಿನ ಪೊಲೀಸ್ ಇನ್ಸ್ಪೆಕ್ಟರ್ ಸಹ ವೈದ್ಯರ ಖಾಯಂ ಗಿರಾಕಿ  .  ಅಲ್ಲದೆ ಇಬ್ಬರೇ ವಾಸಿಸುವ ಈ ವೃದ್ಧ ದಂಪತಿಗಳಿಗೆ ಗಾರ್ಡಿಯನ್ ರೀತಿ.

          ಇವರ ಮಧ್ಯೆ ಇವರ ಮನೆಗೆ ಬಂದು ಹೋಗುವ ಪುಟ್ಟ ಹುಡುಗಿ ಪುಟ್ಟಿ (ರಕ್ಷಾ). ಅವಳೊಂದಿಗೆ ಒಂದು ಪುಟ್ಟ ನಾಯಿಮರಿ.

           ಇಂತಿಪ್ಪ ಸಂಸಾರಕ್ಕೆ ನಕ್ಸಲನ ಪ್ರವೇಶ. ಕಾಡಂಚಿನಲ್ಲಿ ಅವನು ಠಿಕಾಣಿ ಹೂಡಿ ಮುಂದೆ ತಾನು ಬಾಂಬ್ ಹಾಕ ಬೇಕೆಂದಿರುವ ಅಣೆಕಟ್ಟಿಗೆ ಮದ್ದು ಗುಂಡುಗಳ ತಯಾರಿಯಲ್ಲಿರುವಾಗ ಗಾಯಗೊಳ್ಳುತ್ತಾನೆ, ಕಾಲು ಕೈಗಳಿಗೆ ಏಟು ಬಿದ್ದು ಗಾಯಗೊಂಡ ಅವನನ್ನು ಸಹಚರಿಗಳು ವೈದ್ಯರ ಮನೆಗೆ ತಂದುಬಿಡುತ್ತಾರೆ .ಬದಲಾಗಿ ವೈದ್ಯರ ಪತ್ನಿಯನ್ನು ಸರೆಹಿಡಿದುಕೊಂಡು ಹೋಗುತ್ತಾರೆ .ಅವನ ಗಾಯಗಳು ವಾಸಿಯಾಗಿ ತಯಾರಾಗುವವರೆಗೂ ಆ ನಕ್ಸಲನು (ಪ್ರಕಾಶ್ ರೈ) ವೈದ್ಯರ ಮನೆಯ ಅತಿಥಿಯಾಗುತ್ತಾನೆ.

             ಹೀಗೆ ಸಾಗುವ ಕಥೆಯಲ್ಲಿ ಸಮಾಜಮುಖಿ ವೈದ್ಯ ಹಾಗೂ ಬಂಡಾಯ ವೆದ್ದ ನಾಯಕನ ಮುಖಾಮುಖಿಯಾಗುತ್ತದೆ.

      ಒರಟಾಗಿ ಹೃದಯವೇ ಇಲ್ಲದಂತೆ ಸದಾ ಗನ್ನೊಂದಿಗೆ ಇರುವ ನಕ್ಸಲನ ಕ್ರೌರ್ಯಕ್ಕೆಪುಟ್ಟಿಯ ನಾಯಿ ಬಲಿಯಾದರೆ ನಾಯಿಮರಿಗಾಗಿ ಹಂಬಲಿಸುವ ಮಗುವನ್ನು ಕಂಡು   ಅವನ ಮನಸ್ಸು ಮುದಗೊಂಡು ಮತ್ತೊಂದು ನಾಯಿಮರಿಯನ್ನೇ ಉಡುಗೊರೆಯಾಗಿ ತರಿಸಿಕೊಟ್ಟು ಬೆರಗು ಮೂಡಿಸುತ್ತಾನೆ.

          ವೈದ್ಯರನ್ನು ಮನೆಯಲ್ಲೇ ಬಂಧಿಯಂತೆ ಮಾಡಿ ಫೋನ್ ಟ್ಯಾಪ್ ಮಾಡುವ ನಕ್ಸಲ ವೈದ್ಯರ ಬೇಡಿಕೆಯಂತೆ ಅವರ ಶ್ರೀಮಂತಿಯಿಂದ ಫೋನ್ ಮಾಡಿಸಿ ಮೃದುವಾಗುತ್ತಾನೆ.

          ತಮ್ಮ ವೃತ್ತಿಧರ್ಮ ಪಾಲಿಸುವ ವೈದ್ಯರು ಈ ಅತಿಥಿಯನ್ನು ಚೆನ್ನಾಗಿಯೇ ಆರೈಕೆ ಮಾಡುತ್ತಾರೆ .ಅವನ ಗಾಯಗಳಿಗೆ ಶುಶ್ರೂಷೆ ನೀಡಿ ಉಪಚರಿಸುತ್ತಾರೆ .ಬಿಗಿಯಾದ ವಾತಾವರಣದಲ್ಲಿರುವ ಇಬ್ಬರೂ ಕೆಲವೊಮ್ಮೆ ಹತ್ತಿರವಾಗುತ್ತಾರೆ.

              ಸದಾ ವೈದ್ಯರ ಚಟುವಟಿಕೆಯ ಮೇಲೆ ಕಣ್ಣಿಡುವ ನಕ್ಸಲ ವೈದ್ಯರು ಜ್ವರ ಪೀಡಿತರಾದಾಗ ಅವರ ಆರೈಕೆಗೆ ಆದ್ಯತೆ ನೀಡುತ್ತಾನೆ. ಮಾತ್ರೆಕೊಟ್ಟು ಅವರನ್ನು ಉಪಚರಿಸಿ ನಮಗೆ ಅಚ್ಚರಿ ಮೂಡಿಸುತ್ತಾನೆ.

          ದಿನವೂ ಇವರ ಮನೆಗೆ ಓಡೋಡಿ ಬರುವ ಪುಟ್ಟಿಯೊಂದಿಗೆ ನಕ್ಸಲ ಮೃದುವಾಗಿ ವರ್ತಿಸುತ್ತಾನೆ ಮಗು ಮನಕ್ಕೆ ಆಕರ್ಷಿತನಾಗುತ್ತಾನೆ .ಮಗುವಿನೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಾನೆ.

      ತನ್ನ ಗಾಯಗಳು ವಾಸಿಯಾಗಿ ಮುಂದಿನ ಕಾರ್ಯ ಸಾಧನೆಗಾಗಿ ವೈದ್ಯರ ಮನೆಯಲ್ಲೇ ತಯಾರಿ ನಡೆಸುತ್ತಾನೆ. ಅವರ ಮುಂದಿನ ಕಾರ್ಯಾಚರಣೆಯ ಜಾಗಕ್ಕೆ ಆ ಮಗು ಹೋಗುವ ಸಂದರ್ಭ ಬರುತ್ತದೆ .ನಾಳಿನ ಆ ಕಾರ್ಯಕ್ರಮಕ್ಕೆ ಹೋಗದಂತೆ ಮಗುವನ್ನು ಅವನು ಆಗ್ರಹಿಸುತ್ತಾನೆ.

         ಈ ಸನ್ನಿವೇಶ ಅವನನ್ನು ವಿಚಲಿತನನ್ನಾಗಿಸುತ್ತದೆ .ಕಾರ್ಯಚರಣೆ ನಡೆಯಬೇಕಾದ ಅಣೆಕಟ್ಟಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುವ ಮಕ್ಕಳಲ್ಲೆಲ್ಲಾ ಅವನಿಗೆ ಆ ಮಗುವಿನ ಮುಖ ಕಂಡು ಬರುತ್ತದೆ .ತೀವ್ರ ಹೋಯ್ದಾಟಕ್ಕೆ ಅವನ ಬೀಳುತ್ತಾನೆ.

ಈ ಹಂತದಲ್ಲಿ ಅವನು ಕಾರ್ಯಾಚರಣೆಯನ್ನು ನಡೆಸುತ್ತಾನೋ ಅಥವಾ ಹಿಂಪಡೆಯುತ್ತಾನೋ  ಎನ್ನುವುದು ಚಿತ್ರದ ಕ್ಲೈಮ್ಯಾಕ್ಸ್.

         ಭಾವಾತೀತನಂತೆ ಒರಟನಂತೆ ಹೊರಗೆ ವರ್ತಿಸುವ ವ್ಯಕ್ತಿಯ ಒಳ ಮನಸ್ಸಿನಲ್ಲಿರುವ  ಆರ್ದ್ರಭಾವದ ಅನಾವರಣವನ್ನು ಈ ಚಿತ್ರದಲ್ಲಿ ಕಾಣಬಹುದು. ಒಂದು ಮನಸ್ಸಿನ ಎರಡು ಮುಖಗಳನ್ನು ಇಲ್ಲಿ ನೋಡಬಹುದಾಗಿದೆ.

            ಪಿ ಶೇಷಾದ್ರಿ ಅವರ ನಿರ್ದೇಶನದಲ್ಲಿ ಏರಿಳಿತಗಳಿಲ್ಲದ ಒಂದು ಸರಳ  ಸಿನಿಮಾವಾಗಿ ಈ ಚಿತ್ರ ಮೂಡಿ ಬಂದಿದೆ. ಸಿನಿಮಾದಲ್ಲಿ ರಕ್ತ ,ಹಿಂಸೆ ಕ್ರೌರ್ಯಗಳಿಗೆ ಅವಕಾಶವಿಲ್ಲ. ಕೇವಲ ಕೆಲವೇ ಪಾತ್ರಗಳಲ್ಲಿ ನಡೆಯುವ ಸಿನಿಮಾ ನಿಧಾನ ಗತಿಯಲ್ಲಿ ಸಾಗುತ್ತದೆ.

          ಹಿನ್ನೆಲೆಯಲ್ಲಿ ಬರುವ “ಯಾರು ಗೆಲ್ಲದ ಯುದ್ಧ “ಮೈಸೂರು ಅನಂತ ಸ್ವಾಮಿ ಅವರ ಧ್ವನಿಯಲ್ಲಿ ಸಂದರ್ಭಿಕವಾಗಿದೆ.

          ಕಥೆ ಚಿತ್ರಕಥೆ ಪಿ ಶೇಷಾದ್ರಿ ಅವರು ಹಾಗೂ ಜೆ.ಎಂ ಪ್ರಹ್ಲಾದ್ ಅವರದ್ದಾಗಿದೆ .ಮಿತ್ರ -ಚಿತ್ರ ನಿರ್ಮಾಣದ ಈ ಚಿತ್ರಕ್ಕೆ ಛಾಯಾಗ್ರಹಣ ಚಂದ್ರುರವರದ್ದಾಗಿದೆ. ಚಿತ್ರದ ಸಂಕಲನ ಕೆಂಪು ರಾಜುರವರದ್ದಾಗಿದೆ . ವಿ ಮನೋಹರ್ ರವರು ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.

      ಇಪ್ಪತ್ತು ವರ್ಷಗಳ ಹಿಂದಿನ ಈ ಚಿತ್ರವನ್ನು ಈಗ ನೋಡುವಾಗ ನಮ್ಮ ಇಂದಿನ ಸಮಾಜ ಮತ್ತಷ್ಟು ಸಂಕೀರ್ಣವಾಯಿತೇನೋ ಎಂದೆನಿಸುತ್ತದೆ. ಹಿಂಸೆ ಕ್ರೌರ್ಯಗಳು ಹಿಂದಿಗಿಂತಲೂ ಇಂದು ಮತ್ತಷ್ಟು ಹೆಚ್ಚಾಯಿತು  ಎಂದು ಅನಿಸುವುದು.!

            ಚಿತ್ರದಲ್ಲಿ ಅತಿಥಿಯ ಮನಸ್ಸಿನ ತೀಕಲಾಟಗಳನ್ನು ಮತ್ತಷ್ಟು ತೀಕ್ಷ್ಣವಾಗಿ ತೋರಿಸಬೇಕಿತ್ತು ಎನಿಸದಿರದು .ಅಷ್ಟು ದೊಡ್ಡ ನಕ್ಸಲನನ್ನು ಹಿಡಿಯಲು ನಡೆಸುವ ಪೊಲೀಸ್ ಕಾರ್ಯಾಚರಣೆ ಯ ಚಿತ್ರಣಕ್ಕೆ ಸ್ವಲ್ಪ ಒತ್ತು ಕೊಡಬೇಕಿತ್ತು. ಆದರೆ ಇಲ್ಲಿ ಶೇಷಾದ್ರಿಯವರಿಗೆ ಅದು ಮುಖ್ಯವಲ್ಲ.

        ವೈದ್ಯ ಹಾಗೂ ಅತಿಥಿಯ ಸಂಘರ್ಷಕ್ಕೆ ಇಲ್ಲಿ ಆದ್ಯತೆ ಇಲ್ಲ .ಅಂತಹ ಭಯೋತ್ಪಾದಕನೊಂದಿಗೆ ಇದ್ದರೂ ವೈದ್ಯರು ವಿಚಲಿತರಾಗದೆ ಸಹಜವಾಗಿರುವಂತೆ ನಡೆದುಕೊಳ್ಳುವುದು ತುಸು ಅಸಹಜವೆನಿಸದಿರದು.

            ಒಟ್ಟಾರೆಯಾಗಿ ಅಂದಿನ ಕಾಲಘಟ್ಟಕ್ಕೆ ಸರಿದು ಈ ಚಿತ್ರವನ್ನು ನೋಡಿದಾಗ ಅದು ಹೆಚ್ಚು ಸಹಜವೆನಿಸಿ, ಮೆಚ್ಚುಗೆ ಪಡೆಯುತ್ತದೆ.

       ಸಿನಿಮಾದಲ್ಲಿ ಪ್ರಕಾಶ್ ರಾಜ್ ಹಾಗು ದತ್ತಣ್ಣ ರವರ ಮನೋಜ್ಞ ಅಭಿನಯವನ್ನು ನೋಡಬಹುದಾಗಿದೆ . ಉಳಿದ ಪಾತ್ರಗಳಿಗೆ ಅವಕಾಶ ಕಮ್ಮಿ. ಪುಟಾಣಿ ರಕ್ಷಾ ಉತ್ತಮ ಅಭಿನಯ ನೀಡಿದ್ದಾಳೆ.

       ರಕ್ತದೋಕುಳಿಯನ್ನು ಚೆಲ್ಲುವ ಇಂದಿನ ಸಿನಿಮಾಗಳ ನಡುವೆ ಅಂದಿನ

ಈ ಸಿನಿಮಾ ವಿಭಿನ್ನವಾಗಿ ನಿಲ್ಲುತ್ತದೆ ..ಯೂಟ್ಯೂಬ್ ನಲ್ಲಿ ಲಭ್ಯವಿದ್ದು ಚಿತ್ರವನ್ನು ಒಮ್ಮೆ ವೀಕ್ಷಿಸಲು ಅಡ್ಡಿಯಿಲ್ಲ.


                                           ಕುಸುಮಾ ಮಂಜುನಾಥ

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

                                             ———————–

Leave a Reply

Back To Top