ಗಜಲ್ ಕುರಿತು ಒಂದಿಷ್ಟು ಮಾತು

ಲೇಖನ ಸಂಗಾತಿ

 ಗಜಲ್ ಕುರಿತು ಒಂದಿಷ್ಟು ಮಾತು

ಅನಸೂಯ ಜಹಗೀರದಾರ

ಗಜಲ್* ಒಂದು ಅರಬ್ಬಿ ಪದ. ಹೃದಯದ ವೃತ್ತಾಂತ

ಅರುಹುವುದು ಮತ್ತು ಪ್ರೇಮ, ಮೋಹ, ಅನುರಾಗ ವಿದ್ಯಮಾನಗಳ ಹೇಳಿಕೆ ಅದೂ ಪಿಸುಮಾತಿನಲ್ಲಿ ಎಂಬುದು ಇದರ ಪಾರಿಭಾಷಿಕ ಅರ್ಥವಾಗಿದೆ. ಗಜಲ್ ಕಾವ್ಯ ಉರ್ದು ಭಾಷೆಯಲ್ಲಿ ವಿಪುಲವಾಗಿ ಬೆಳೆದು ಅಪಾರ ಜನಮನ್ನಣೆ, ಜನಾನುರಾಗ ಗಳಿಸಿದ್ದು ಈಗ ಹಲವು ಭಾಷೆಗಳಲ್ಲಿ ಇದರ ಹರವು ಬಿತ್ತರಗೊಂಡಿದೆ.

ಪ್ರೀತಿ, ಮೋಹ, ವಿರಹ, ಅನುರಾಗ, ವಿಪ್ರಲಂಭ, ಕಳಕಳಿ, ಅಂತಃಕರಣ, ವಾತ್ಸಲ್ಯ, ದಯೆ, ಅನುಕಂಪ, ರೋಷ, ಹತಾಶೆ, ನೋವು, ಕರುಣೆ, ಹೀಗೆ ನವರಸಗಳಲ್ಲಿ ಅದ್ದಿದ, ಏಳು ಬಣ್ಣಗಳಲ್ಲಿ ಮಿಂದ, ಹಲವಾರು ವಿಷ ಮತ್ತು ಅಮೃತಗಳನ್ನು ಮೆದ್ದ ಮನವು ಎದೆಯ ನುಡಿಗಳನ್ನು ಅಕ್ಕರ ರೂಪದಲ್ಲಿ ಭಾವ ಲಯದೊಂದಿಗೆ ಹಾಡುಗಬ್ಬವಾಗಿ ಗಜಲ್ ನಲ್ಲಿ ಅಭಿವ್ಯಕ್ತಗೊಳಿಸುವ ಸುಂದರ ಪ್ರಕಾರದ ಕಾವ್ಯವಾಗಿದೆ.

ಆಧ್ಯಾತ್ಮ, ತಾಧ್ಯಾತ್ಮ, ಸೂಫಿ ಸತ್ವ, ದೇಸೀ ಸತ್ವ, ಮೊದಲಾದ ಆತ್ಮಿಕ ನಂಟಿನ ವಿಚಾರಗಳನ್ನೊಳಗೊಂಡ ಗಜಲ್ ಕಾವ್ಯ ಪ್ರಕಾರವು ಲೌಕಿಕವಾದ ರಸಾನುಭೂತಿ ಹೇಳುತ್ತ ಅಲೌಕಿಕವಾದ ಅನುಭಾವದ ಅನುಭೂತಿ ಮಿಂದು ಸಂತುಷ್ಟಗೊಳ್ಳು ಸಂತೃಪ್ತಿಹೊಂದುವ ಸುಕೂನಿನ ಮೆಹಸೂಸ ಆಗಿದೆ.

ಗಜಲ್

****

ಕಾತರದಿಂದ ನೋಡುವ ಕಣ್ಗಳಿನ್ನೂ ತಣಿದಿಲ್ಲ ನೀ ಎದ್ದು ಹೋಗದಿರು

ಹೃದಯದ ಪಿಸುಮಾತು

ಇನ್ನೂ ಅರುಹಿಲ್ಲ ನೀ ಎದ್ದು ಹೋಗದಿರು.

ಹೋಗುವ ಅವಸರವಿಟ್ಟುಕೊಂಡು ನನ್ನ ಬಳಿ ಬರದಿರು

ಸುದೀರ್ಘ ಮಾತುಗಳಿನ್ನೂ ಮುಗಿದಿಲ್ಲ ನೀ ಎದ್ದು ಹೋಗದಿರು.

ಮೆಹಫಿಲ್ ಸಜ್ಜಾಗಿದೆ ರಂಗು ರಂಗಿನ ಗೋಡೆ ಏನನ್ನೋ ಹೇಳುತಿವೆ

ಕನಸಿನ ಕತೆಯಿನ್ನೂ ಶುರುವಾಗಿಲ್ಲ ನೀ ಎದ್ದು ಹೋಗದಿರು.

ಮೋಂಬತ್ತಿ ಉರಿಯುತ್ತಿದೆ ಸುತ್ತ ಬೆಳಕು ಪಸರಿಸುತ್ತಿದೆ

ಪ್ರಣಯದ ಮೇಣವಿನ್ನೂ ಕರಗಿಲ್ಲ ನೀ ಎದ್ದು ಹೋಗದಿರು.

ಸಮಯದ ಬಂಧಿಯಾಗಿದ್ದಾರೆ ಈ ದುನಿಯಾದ ಜನರು

ನಮ್ಮಿಬ್ಬರ ಕ್ಷಣಗಳಿನ್ನೂ ಸಾಕಾರಗೊಂಡಿಲ್ಲ ನೀ ಎದ್ದು ಹೋಗದಿರು.

ನಿನ್ನೆಗಳು ಬೇಕಿಲ್ಲ ನಾಳೆಗಳ ಅರಿವಿಲ್ಲ ಇಂದು ಮಾತ್ರ ನಮ್ಮದು

ಪ್ರೀತಿಯ ಪಲಕುಗಳ ರಾಗ ಆರಂಭಿಸಿಲ್ಲ ನೀ ಎದ್ದು ಹೋಗದಿರು.

ಎಲ್ಲರೂ ಹೋಗುವರೆ ಒಂದಲ್ಲ ಒಂದು ದಿನ ಜಗದ ಸತ್ಯವದು ಅನು

ಈ ಗಳಿಗೆ ಈ ಸಮಯವಿನ್ನೂ ಪೂರ್ಣಗೊಂಡಿಲ್ಲ ನೀ ಎದ್ದು ಹೋಗದಿರು.

ಅನಸೂಯ #ಜಹಗೀರದಾರ.

ಮೇಲಿನ ಈ ಗಝಲ್ ನಲ್ಲಿ…ತಣಿದಿಲ್ಲ ಅರುಹಿಲ್ಲ ಮುಗಿದಿಲ್ಲ ಶುರುವಾಗಿಲ್ಲ ಕರಗಿಲ್ಲ ಸಾಕಾರಗೊಂಡಿಲ್ಲ ಆರಂಭಿಸಿಲ್ಲ, ಪೂರ್ಣಗೊಂಡಿಲ್ಲ

ಕಾಫಿಯಾಗಳು

ನೀ ಎದ್ದು ಹೋಗದಿರು.

ಈ ಗಜಲಿನ ರದೀಫ್.

ಇದು ಮುರದ್ಧಫ ಮುಸಲ್ ಸಿಲ್ ಗಜಲ್

ಅಂದರೆ ಕಾಫಿಯಾ ಮತ್ತು ರದೀಫ ಸಹಿತ

ಪ್ರಿಯ ನಿಗೆ ವಿನಂತಿ ಅಥವಾ ನಿವೇದನೆ ಭಾವದ ಅದನ್ನೇ ಮುಂದುವರೆಸಿ ಮುಗಿಸುವ ಗಜಲ್.(ಒಂದೇ ಭಾವ ಬೆಳವಣಿಗೆಯ ಗಜಲ್ )

ಮತ್ಲಾ ಬಹಳ ಸ್ಟ್ರಾಂಗ್ ಇದ್ದು ಮುಂದುವರೆಸುವ ಸಕ್ಷಮತೆ ಇರಬೇಕು.ಮಕ್ತಾ ಕೂಡ ಸ್ಟ್ರಾಂಗ್ ಇದ್ದು ಭಾವ ತೀವ್ರತೆ ಅಥವಾ ಅಲೌಕಿಕ ಅನುಭೂತಿ ಮಾಡಿಸಿ ತಿಳಿಸಿ ಸಹೃದಯರನ್ನು ಬಹುವಾಗಿ ಕಾಡಬೇಕು..ಗಜಲ್ ನಲ್ಲಿ ಮಕ್ತಾ ಮತ್ತು ಮತ್ಲಾ ಎಷ್ಟು ಕಾಡಬೇಕೆಂದರೆ ಮತ್ತೊಂದು ಗಜಲ್ ಗೆ ಅದು ಪ್ರೇರಣೆಯಾಗಬೇಕು. ಇಷ್ಟಾದರೂ ಇರಲೇಬೇಕು.ಎಲ್ಲ ಮಿಶ್ರಾಗಳು ಸಶಕ್ತವಾಗಿದ್ದಲ್ಲಿ ಇನ್ನೂ ಶ್ರೇಷ್ಠ…!

ಗಜಲ್ ನಲ್ಲಿ ಪ್ರತಿ ಮಿಶ್ರಾ (ಪ್ರತಿ ಸಾಲು) ಸ್ವತಂತ್ರವಾಗಿ ಇರಬೇಕು.ಅಥವಾ ಪೂರ್ಣಗೊಂಡಿರಬೇಕು.

ಅರ್ಥಾತ್ ಒಂದು ಕ್ರಿಯಾಪದದೊಂದಿಗಿನ ವಾಕ್ಯವಾಗಿರಬೇಕು.

ಪ್ರತಿ ಮಿಶ್ರಾಗಳು ಒಂದಕ್ಕೊಂದು ಪೂರಕ ಇಲ್ಲವೆ ಪ್ರಶ್ನೋತ್ತರದ ರೀತಿ ಅಥವಾ ವೈರುಧ್ಯ ತಿಳಿಸುವ ರೀತಿ ಸಂವಾದ  ರೂಪದಲ್ಲಿ ಇರಬೇಕು.ಇದೇ ಅನುಸಂಧಾನ.ಪಿಸುಮಾತು ಸಂಭಾಷಣೆ ಆಗಿದೆ.ಪ್ರತಿ ಮಿಶ್ರಾ ಸ್ವತಂತ್ರ ಅರ್ಥ ಕೊಟ್ಡಲ್ಲಿ ಇನ್ನೂ ಶ್ರೇಷ್ಠ…!

ಮಕ್ತಾದ ತಖಲ್ಲುಸ್ ನ್ನು ಅಥವಾ ಕವಿಯ ಕಾವ್ಯನಾಮವನ್ನು ಅರ್ಥಪೂರ್ಣ ಬಳಸಿಕೊಳ್ಳಬೇಕು..

ಯಾವ ಸಾಲುಗಳು ಅಪೂರ್ಣಗೊಳ್ಳಬಾರದು ಎಂಬುದಿದೆ.

ದ್ವಿಪದಿಯ ಸಾಲುಗಳು ಸಾಧ್ಯವಾದಷ್ಟು ಪರಸ್ಪರ ಸಮವಾಗಿರಬೇಕು..

ಇದು ಗಜಲ್ ನ ಲಕ್ಷಣ..

ಬಾಹ್ಯ ಲಕ್ಷಣ ಅಥವಾ ಆಕೃತಿ ಲಕ್ಷಣ

ಅಂತರಂಗ ಅಥವಾ ಹೂರಣ ವಸ್ತು ವಿಷಯ ಭಾವ ಮತ್ತೇ ಇದೆ.

೧೯ ಪ್ರಕಾರದ ಗಜಲ್ ಗಳಿವೆ. ಅವು ವಿಷಯವಸ್ತುವಿಗೆ ಸಂಬಂಧಿಸಿದವುಗಳು.

ಪ್ರಮುಖವಾಗಿ ನಾನು ತಿಳಿಸಿರುವೆ


ಅನಸೂಯ ಜಹಗೀರದಾರ

Leave a Reply

Back To Top