ಸಾವಿಲ್ಲದ ಶರಣರು ಮಾಲಿಕೆ-ಶರಣೆ  ಗಂಗಾಂಬಿಕೆ‌ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಗಂಗಾಂಬಿಕೆ ಅವರು ಒಬ್ಬ ಶರಣೆ, ಸಮಾಜ ಸುಧಾರಕಿ, ವಚನಕಾರ್ತಿ. ಇವರು ಶ್ರಿ ಗುರು ಬಸವಣ್ಣನವರ ಮೊದಲ ಹೆಂಡತಿ. ಇವರ ವಚನಗಳಲ್ಲಿ ವೈಯಕ್ತಿಕ ಬದುಕಿನ ಅಗಲಿಕೆ, ಅಂತರಂಗದ ಅಭಿವ್ಯಕ್ತಿ, ನೋವು, ದು:ಖ-ದುಮ್ಮಾನಗಳ, ಲಿಂಗನಿಷ್ಟೆಯನ್ನು ತುಂಬಾ ಚೆನ್ನಾಗಿ ಚಿತ್ರಿಸಿ ಬರೆದಿದ್ದಾರೆ.
ಗಂಗಾಂಬಿಕೆ ಅವರ ಅಂಕಿತನಾಮ ‘ ಗಂಗಾಪ್ರಿಯ ಕೂಡಲಸಂಗ’
 ಬಲದೇವ ಬಸವಣ್ಣನವರ ಸ್ವತಃ ಮಾವ ಆಗಿದ್ದವರು(ಬಸವಣ್ಣನವರ ತಾಯಿಯ ಅಣ್ಣ). ಗಂಗಾಂಬಿಕೆ ಅವರು ಕನ್ನಡ, ಕತ್ತಿವರಸೆ, ಸಂಗೀತ, ಬಿಲ್ಲುಗಾರಿಕೆಯನ್ನು ಬಾಲ್ಯದಲ್ಲೇ ಕರಗತ ಮಾಡಿಕೊಂಡಿದ್ದರು.

ಅಲ್ಲಮ ಪ್ರಭುಗಳು ಗಂಗಾಂಬಿಕೆಯ ಬಗ್ಗೆ ಈ  ರೀತಿ ಹೇಳುತ್ತಾರೆ.

ಪತಿಯ ಸೇವಿಸಿ ಲಿಂಗಧ್ಯಾನದಲ್ಲಿಪ್ಪುದು ಅತ್ಯಂತ ಘನ
ಬಸವನ ಸತಿ ಸತಿಯಳಲ್ಲ, ಬಸವನ ಸತಿ ಲೋಕದ ಹೆಣ್ಣಲ್ಲ
ಬಸವನ ಸತಿ ಗುಹೇಶ್ವರ ಲಿಂಗದ ಪ್ರಾಣಲಿಂಗ ಕೇಳಾ ಮಡಿವಾಳಯ್ಯ”

ಕಲ್ಯಾಣದಲ್ಲಿ ಚಳವಳಿಯನ್ನು ಪ್ರಾರಂಭಿಸಿದಾಗ ಹೆಗಲಿಗೆ ಹೆಗಲುಕೊಟ್ಟು ದುಡಿದ ಗಂಗಾಂಬಿಕೆ, ಬಸವಣ್ಣನ ಜೀವನದಲ್ಲಿ ಎಲೆಮರೆಯ ಹೂವಿನಂತಿದ್ದಳು. ಕಲ್ಯಾಣದಲ್ಲಿ ಬಸವಣ್ಣ ಅನೇಕ ಪರೀಕ್ಷೆಗಳನ್ನು, ಸವಾಲುಗಳನ್ನೆದುರಿಸುವ ಸಂದರ್ಭಗಳು ಬರುತ್ತವೆ. ಆ ಸಂದರ್ಭದಲ್ಲೆಲ್ಲಾ ಗಂಗಾಂಬಿಕೆ ಎದೆಗುಂದದೆ ಗಂಡನಿಗೆ ಧೈರ್ಯ ತುಂಬುತ್ತಿದ್ದಳು. ಸಮಸ್ಯೆ ಎಂತಹದೇ ಇದ್ದರೂ ಅದನ್ನು ಬಗೆಹರಿಸುತ್ತಿದ್ದಳೆಂದು ತಿಳಿದುಬರುತ್ತದೆ. ತನ್ನ ಮಗ ಬಾಲಕನಿದ್ದಾಲೇ ಸತ್ತು ಹೋದಾಗ ಎದೆಗುಂದದೆ ಗಂಗಾಂಬಿಕೆ ಚೆನ್ನಬಸವಣ್ಣನನ್ನೇ ತನ್ನ ಮಗನಂತೆ ನೋಡಿಕೊಳ್ಳುತ್ತಾಳೆ. ಅಲ್ಲಮಪ್ರಭುವಿನಂತಹ ಮಹಾ ಸಾಧಕನ ಮಾರ್ಗದರ್ಶನದಲ್ಲಿ ಪಕ್ವವಾದ ಗಂಗಾಂಬಿಕೆಯ ವ್ಯಕ್ತಿತ್ವ
ಬಸವಣ್ಣನ ಸತಿ ಗಂಗಾಂಬಿಕೆಯು ಕೇವಲ ಬಸವಣ್ಣನ ಸತಿ ಮಾತ್ರವಾಗಿರದೆ, ಗುಹೇಶ್ವರಲಿಂಗದ ಪ್ರಾಣಲಿಂಗವಾಗಿದ್ದಾಳೆಂದು ಅಲ್ಲಮಪ್ರಭು ಮಡಿವಾಳ ಮಾಚಿದೇವನಿಗೆ ಹೇಳಿದ್ದಾನೆ. ಗಂಗಾಂಬಿಕೆಯ ವ್ಯಕ್ತಿತ್ವ ಸಾಧನೆ ಬಹುದೊಡ್ಡದೆಂದು ತಿಳಿಯಲಿಕ್ಕೆ ಈ ವಚನವು ಮುಖ್ಯ ಆಕರವಾಗಿದೆ.

ಹರಿಹರನ “ಬಸವರಾಜ ದೇವರ ರಗಳೆ”ಯಲ್ಲಿ ಗಂಗಾಂಬಿಕೆಯ ಪ್ರಸ್ತಾಪವಿದೆ. ಬಸವಣ್ಣನು, ತನ್ನ ಸೋದರಮಾವ ಬಲದೇವನ ಸಲಹೆಯಂತೆ ಕಲ್ಯಾಣಕ್ಕೆ ಬಂದು ಕಾರಣಿಕ ವೃತ್ತಿ ಪ್ರಾರಂಭಿಸುತ್ತಾನೆ. ತನ್ನ ಜಾಣ್ಮೆ ಸಾಧನೆಯಿಂದ ದಂಡನಾಯಕನಾಗುತ್ತನೆ. ಆಮೇಲೆ ಸುಶೀಲೆಯರಪ್ಪ ಗಂಗಾದೇವಿ, ಮಾಯಾದೇವಿಯರನ್ನು ಮದುವೆಯಾಗುತ್ತಾನೆಂದು ಹೇಳಲಾಗಿದೆ. ಹರಿಹರ ಹೇಳಿರುವ ಗಂಗಾದೇವಿಯೇ ಗಂಗಾಂಬಿಕೆಯಾಗಿದ್ದಾಳೆ, ಮಾಯಾದೇವಿಯೇ ನೀಲಾಂಬಿಕೆಯಾಗಿದ್ದಾಳೆ.

ಸಿಂಗಿರಾಜನು ತನ್ನ “ಅಮಲಬಸವ ಚಾರಿತ್ರ”ದಲ್ಲಿ ಶಿವನ ಜಟಾಜೂಟದಲ್ಲಿರುವ ಗಂಗೆ ಭುವಿಗವತರಿಸಿ ಬಸವನ ಪತ್ನಿಯಾದಳೆಂದು ಹೇಳಿದ್ದಾನೆ. ಬಸವಣ್ಣನ ಕೀರ್ತಿಯನ್ನು ಕೇಳಿದ ಬಲದೇವನು, ಭಾಗ್ಯವನ್ನು ಅಪ್ಪಿಕೊಳ್ಳುವಂತೆ ಬಸವಣ್ಣನನ್ನು ಅಪ್ಪಿಕೊಂಡನೆಂದು ಹೇಳಿದ್ದಾನೆ.

“ಗಂಗಾಧರ ಜಟಾಜೂಟದಿಂದಿಳಿದ ಭಾ ಗ್ಯಾಂಗನೆಯ ಭಾಗೀರಥಿನಾಮವೆಸೆವಮಲ ಗಂಗಾಂಬಿಕೆಯನು
ಸುತೆಯ ಸುಕೃತಕೊಪ್ಪಿಸುವೊಲು ಬಸವಂಗೊಪ್ಪಿಸುತ..”
– ಅಮಲ ಬಸವಚಾರಿತ್ರ

ಹೀಗೆ ಸಿಂಗಿರಾಜನು ಬಸವಣ್ಣ-ಗಂಗಾಂಬಿಕೆಯರ ಮದುವೆಯನ್ನು, ಶಿವ-
ಪಾರ್ವತಿಯರಿಗೆ ಹೋಲಿಸಿ, ಪವಾಡಕತೆಗಳನ್ನು ಹೇಳಿದ್ದಾನೆ.

ಭೀಮಕವಿಯ “ಬಸವಪುರಾಣ”ದಲ್ಲಿ, ಬಸವಣ್ಣ ತನ್ನ ಅಳಿಯನಾದರೆ ತಾನು ಧನ್ಯನಾದೆನೆಂದು ಬಲದೇವ ಭಾವಿಸಿರುವುದು ಪ್ರಕಟವಾಗಿದೆ. ಅದೇ ರೀತಿ ಲಕ್ಕಣ್ಣ ದಂಡೇಶನ-“ಶಿವತತ್ವ ಚಿಂತಾಮಣಿ” ಕೃತಿಯಲ್ಲಿ ಇದೇ ವಿಷಯದ ಪ್ರಸ್ತಾಪವಿದೆ. ಕೂಡಲ ಸಂಗಮದಲ್ಲಿದ್ದ ಬಸವಣ್ಣನ ಕೀರ್ತಿವಾರ್ತೆಯನ್ನು ಕೇಳಿದ ಬಲದೇವನು ಬಸವಣ್ಣನಿಗೆ ಪತ್ರ ಬರೆದು, ಕಲ್ಯಾಣಕ್ಕೆ ಕರೆಸಿಕೊಳ್ಳುತ್ತಾನೆ. ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಬಸವಣ್ಣನಿಗೆ ಕೊಟ್ಟು ಲಗ್ನ ಮಾಡುತ್ತಾನೆಂದು ಹೇಳಲಾಗಿದೆ.
ಗಂಗಾಂಬಿಕೆಯವರ ಕೆಲವು ವಚನಗಳನ್ನು ಇಲ್ಲಿ ಅಧ್ಯಯನಕ್ಕೆ ತೆಗೆದುಕೊಳ್ಳಲಾಗಿದೆ.

 ಸಾಂದ್ರವಾಗಿ ಹರಗಣಭಕ್ತಿಯ ಮಾಳನೆಂತೊ ಮಾದಲಾಂಬಿಕಾನಂದನನು? ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯ ನೋಳ್ವನೆಂತೊ ಮಾದರಸನ ಮೋಹದ ಮಗನು? ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ದನೆಂತೊ ಗಂಗಾಪ್ರಿಯ ಕೂಡಲಸಂಗನ ಶರಣ ಚೆನ್ನ?

ಇನ್ನೊಂದು ವಚನ
 ಒಂದು ಹಾಳಭೂಮಿಯ ಹುಲಿಬಂದು
ಎನ್ನ ಎಳಗರುವ ಭಕ್ಷಿಸಿತ್ತಲ್ಲಾ!
ಆ ಹುಲಿ ಹಾಳಿಗೆ ಹೋಗದು.
ಆ ಹುಲಿ ಎಳೆಗರುವ ಕಂಡು ಜನನಿಯಾಯಿತ್ತು.
ಇದನೇನೆಂಬೆ ಗಂಗಾಪ್ರಿಯ ಕೂಡಲಸಂಗಮದೇವಾ ?

 ಗಂಗಾಂಬಿಕಾ    ಸಮಗ್ರ ವಚನ ಸಂಪುಟ. 5.

ಶರಣರ ವಚನಗಳು ಅಧರಕ್ಕೆ ಕಹಿ ಉದರಕ್ಕೆ ಸಿಹಿಯಾಗಿಯೂ ಕಬ್ಬಿಣ ಕಡಲೆಯಾಗಿಯೂ  ಕಾಣುತ್ತವೆ. ಗಂಗಾ0ಬಿಕೆಯವರ  ಒಟ್ಟು ದೊರೆತ   8 ವಚನಗಳಲ್ಲಿ
ಈ ವಚನವು ಅತ್ಯಂತ ಲೌಕಿಕ ಬದುಕಿನ ಅಲೌಕಿಕ ಚಿಂತನೆಯಿಂದ ಕೂಡಿದೆ. ಸಂಜ್ಞೆ   ಸಂಕೇತ ಬೆಡಗನ್ನು ಬಳಸಿದ ಶರಣರು, ಹಲವು ಬಾರಿ ಬೆಡಗು ರೂಪಕ   ಪ್ರತಿಮೆಗಳನ್ನು ಬಳಸಿ ವಚನದ ಅರ್ಥವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಿದ್ದಾರೆ.


ಒಂದು ಹಾಳಭೂಮಿಯ ಹುಲಿಬಂದು-

ಭೂಮಿಯಲ್ಲಿನ ಒಂದು ದುಷ್ಟ ಶಕ್ತಿಯ ಹಾಳು ಪೊದರಿನ ಹುಲಿಯೊಂದು ಬಂದು: ಇಲ್ಲಿ ಭೂಮಿ ಶರೀರ, ಅಲ್ಲಿರುವ ಕೆಟ್ಟ ಕ್ರೂರ  ಶಕ್ತಿ ಭಾವವೆ ಕಾಡು ಹುಲಿ ಅಥವಾ ಹಾಳು ಹುಲಿ. ಮನುಷ್ಯನಲ್ಲಿ ತಾಮಸ ಮತ್ತು ಸಾತ್ವಿಕ ಗುಣಗಳು ಇರುತ್ತವೆ.
ಹುಲಿ ಪಂಚೆಂದ್ರಿಯ ಮೂಲದ ವಿಷಯಗಳ  ಪ್ರತೀಕ. ಹುಲಿ ಇದು ತಾಮಸ ಗುಣ.

ಎನ್ನ ಎಳಗರುವ ಭಕ್ಷಿಸಿತ್ತಲ್ಲಾ! -ಪಂಚೆಂದ್ರಿಯ ವಿಷಯಗಳು ಈ ಶರೀರದ ಸಾತ್ವಿಕ ಭಕ್ತಿ ಗುಣವನ್ನು ತಾಮಸ ಕ್ರೂರ ಗುಣದ ಹುಲಿ ಭಕ್ಷಿಸಿತಲ್ಲಾ ಎಂದು ಗೊಗರೆಯುತ್ತಾಳರೆ ಗಂಗಾಂಬಿಕಾ ತಾಯಿ.

ಆ ಹುಲಿ ಹಾಳಿಗೆ ಹೋಗದು-

ಇಂದ್ರಿಯ ವಾಸನೆಯ ಹುಲಿ ಬೇಟೆಗೆ ಬಂದು ಮತ್ತೆ  ಮರಳಿ ತನ್ನ ಹಾಡ್ಯಿಗೆ (ಪೊದರು ) ಅಥವಾ ಹಾಳಿಗೆ (ಹುಲಿ ಇರುವ ಸ್ಥಳಕ್ಕೆ )
ಮರಳಿ ಹೋಗಲಾರದು. ಬಂದ ಹುಲಿ ಎಳೆಗರವನ್ನು ತಿನ್ನಬೇಕು ಅಥವಾ ತನ್ನ ಮೂಲ ಸ್ವರೂಪವನ್ನು ಬದಲಾಯಿಸಬೇಕು.


ಆ ಹುಲಿ ಎಳೆಗರುವ ಕಂಡು ಜನನಿಯಾಯಿತ್ತು.

-ತಾಮಸ ಗುಣದ ಹಿ೦ಸೆಯ ಪ್ರತೀಕವಾದ ಹುಲಿಯು ಸಾತ್ವಿಕ ಭಕ್ತಿ ಗುಣದ ಎಳೆಗರು ಕಂಡು ತಾನು
ಪರಿವರ್ತನೆಯಾಗಲು ಇಚ್ಚಿಸಿ ಭಕ್ತಿ ಭಾವವ ಪಡೆಯಲು, ಸಾತ್ವಿಕ ಗುಣದ ಜನನಿಯಾಗಬೇಕೆಂದು  ಆಶೆ ಪಟ್ಟಿತು ಎಂದು ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾರೆ ಗಂಗಾಂಬಿಕಾ.

ಪರಿವರ್ತನೆ ಇದು ಸೃಷ್ಟಿಯ  ಸಹಜ  ನಿಯಮ. ವ್ಯಕ್ತಿ ಎಷ್ಟೆ ಕ್ರೂರಿಯಾಗಿದ್ದರೂ ಸಾತ್ವಿಕ ಗುಣದ ಮುಂದೆ  ಪರಿವರ್ತಿತನಾಗಿ ಆ ಭಾವ ಕೂಡಾ ಇನ್ನೊಂದು ಸಾತ್ವಿಕ ಭಕ್ತಿಯ ಜನನಕ್ಕೆ ಕಾರಣವಾಗುತ್ತದೆ.

ಇದನೇನೆಂಬೆ ಗಂಗಾಪ್ರಿಯ ಕೂಡಲಸಂಗಮದೇವಾ ?

-ಇಂತಹ ಪವಾಡ ಪರಿವರ್ತನೆಯನ್ನು ಏನೆ೦ಬೆ  ಎಂದು ತನ್ನ ಆಧ್ಯಾತ್ಮದ ಚೈತನ್ಯಕ್ಕೆ ಪ್ರಶ್ನಿಸುತ್ತಾರೆ.
ಕತ್ತಲಿದ್ದರೆ ಮಾತ್ರ ಬೆಳಕಿಗೆ ಬೆಲೆ ಎನ್ನುವ ಹಾಗೆ ಹುಲಿಯೆಂಬ ಹಿ೦ಸೆಯ ತಾಮಸ ಗುಣವು  ಎಳಗರುವೆಂಬ ಸಾತ್ವಿಕ ಗುಣಕ್ಕೆ ಮಾರು ಹೋಗಿ  ಪರಿವರ್ತಿತವಾಗಿ
ತಾನು ಆ ಸಾತ್ವಿಕ ಗುಣದ ಜನಿತಕ್ಕೆ ತಾಯಿಯಾಗುವ ಹಂಬಲ ವ್ಯಕ್ತವಾಗುತ್ತದೆ.
ಇದು ಉತ್ತಮ ಬೆಡಗಿನ ವಚನ. ಒಬ್ಬ ವ್ಯಕ್ತಿಯ ಬದುಕಿನಲ್ಲಿ ಇಂತಹ ಪ್ರಸಂಗಗಳು ಅನೇಕ ಬರುತ್ತವೆ.
ಬಸವಣ್ಣನವರ ಎಲ್ಲಾ ಕಾರ್ಯಗಳಲ್ಲೂ ಚೈತನ್ಯದಾಯಕ ಸ್ಪೂರ್ತಿಯ ಸೆಲೆಯಾದವಳು. ಈಕೆ ಪತಿಯ ಇಚ್ಛಾನುಸಾರಿಣಿ, ದಾಸೋಹ ನಿರತೆ, ಲಿಂಗನಿಷ್ಠೆಯುಳ್ಳ ಆಧ್ಯಾತ್ಮ ಸಾಧಕಿ. ಇವಳ ವಚನಗಳಲ್ಲಿ ಅಂತರಂಗದ ಅಭಿವ್ಯಕ್ತಿ, ವೈಯಕ್ತಿಕ ಬದುಕಿನ ನೋವು, ಅಗಲಿಕೆ, ದು:ಖ, ದುಮ್ಮಾನಗಳ ಚಿತ್ರಣವಿದೆ.

ಅವಳ ಕಂದ ಬಾಲಸಂಗ ನಿನ್ನ ಕಂದ
ಚನ್ನಲಿಂಗ ಎಂದು ಹೇಳಿದರಮ್ಮಾ
ಎನ್ನ ಒಡೆಯರು ಫಲವಿಲ್ಲದ
ಕಂದನಿರ್ಪನವಳಿಗೆ ಎನಗೆ ಫಲವಿಲ್ಲ
ಕಂದನಿಲ್ಲ ಇದೇನೊ ದು:ಖದಂದುಗ
ಗಂಗಾಪ್ರಿಯ ಕೂಡಲಸಂಗಮದೇವಾ ?

 ಗಂಗಾಂಬಿಕೆಯ ಮಗನು ಬಾಲ್ಯದಲ್ಲಿಯೇ ತೀರಿಕೊಂಡಾಗ ಅಪ್ಪ ಬಸವಣ್ಣನವರು ಮಡದಿ ಗಂಗಾಂಬಿಕೆಗೆ  ಸಾಂತ್ವಾನ  ಹೇಳಿ ನೀಲಾಂಬಿಕೆಯ ಮಗ ಬಾಲ ಸಂಗಾ ನಿನ್ನ ಮಗ ಚೆನ್ನ ಬಸವಣ್ಣನೆಂದು ತಿಳಿದುಕೋ ಎಂದಾಗ ಗಂಗಾಂಬಿಕೆಯು ಈ ಮೇಲಿನ ವಚನವನ್ನು ತನ್ನ ತಂಗಿ ನೀಲಾಂಬಿಕೆಗೆ   ಹೇಳುತ್ತಾಳೆ .
ಕಲ್ಯಾಣವನ್ನು ಬಿಟ್ಟು ಹೋಗುವಾಗ ಮಡಿವಾಳ ಮಾಚಯ್ಯ ಬರುತ್ತಾನೆ, ಹೀಗಾಗಿ ಆತನನ್ನು ಕುರಿತಂತೆ ಒಂದು ವಚನವಿದೆ. ಇನ್ನು ಬಸವಣ್ಣನನ್ನು ಕುರಿತಂತೆ ಒಂದೆರಡು ವಚನಗಳಿವೆ. ಬಸವಣ್ಣನು ಮಾದರಸ-ಮಾದಲಾಂಬಿಕೆಯರ ಮಗನೆಂಬುದು ಈಕೆಯ ವಚನದಿಂದ ಸ್ಪಷ್ಟವಾಗುತ್ತದೆ. ಬಸವಣ್ಣ ಮಾದಾರ ಚೆನ್ನಯ್ಯನ ಮಗನಿರಬಹುದೆ? ಎಂಬಂತಹ ಕೆಲವು ಅರೆವಿದ್ವಾಂಸರ ಸಂಶಯಕ್ಕೆ ಗಂಗಾಂಬಿಕೆಯ ಈ ವಚನ ಸ್ಪಷ್ಟಸಾಕ್ಷಿಯಾಗಿ ನಿಂತುಕೊಂಡಿದೆ.

“ಸಾಂದ್ರವಾಗಿ ಹರಗಣಭಕ್ತಿಯ ಮಾಳ್ವನೆಂತೊ ಮಾದಲಾಂಬಿಕಾನಂದನನು?
ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯನೋಳ್ಪನೆಂತೊ ಮಾದರಸನ ಮೋಹದ ಮಗನು?
ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ವನೆಂತೊ
ಗಂಗಾಪ್ರಿಯ ಕೂಡಲಸಂಗನ ಶರಣಚೆನ್ನ?”

– (ಸ.ವ.ಸಂ.5, ವ-761, ಪುಟ:240, 1993)

    ಕಲ್ಯಾಣ  ಕ್ರಾಂತಿಯ  ನಂತರ ಕಾದ್ರೊಳ್ಳಿ ಯುದ್ಧವಾದ ಮೇಲೆ ಗಂಗಾಂಬಿಕೆ ನೀಲಾಂಬಿಕೆಯ ಮಗ ಬಾಲ ಸಂಗನ ಜೊತೆಗೆ ಮುಗುಟಖಾನ ಹುಬ್ಬಳ್ಳಿಯ ಮಲಪ್ರಭಾ ನದಿಯ ತಟದಲ್ಲಿ ಐಕ್ಯವಾಗಿದ್ದಾಳೆ.

ಆಕರಗಳು
   ಶಿವ ಶರಣೆಯರ ವಚನಗಳು -ವಚನ  ಸಂಪುಟ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ  ಬುಕ್ ಬ್ರಹ್ಮ 21-07-2022  ಡಾ ವಿಜಯಶ್ರೀ ಸಬರದ

—————————————————————————————————

3 thoughts on “ಸಾವಿಲ್ಲದ ಶರಣರು ಮಾಲಿಕೆ-ಶರಣೆ  ಗಂಗಾಂಬಿಕೆ‌ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

  1. ಶರಣೆ ಗಂಗಾಂಬಿಕೆ ಜೀವನ ಚರಿತ್ರೆ,ಸಮಗ್ರ ವಚನ ಸಾಹಿತ್ಯವನ್ನು ಕುರಿತು ವಿವರವಾಗಿ ಬರೆದಿದ್ದಾರೆ .,

Leave a Reply

Back To Top