ವಚನ ಸಂಗಾತಿ
ಬಿ.ಜಿ.ಚೈತ್ರಾ ತಿಪ್ಪೇಸ್ವಾಮಿ
ʼಬಸವೇಶ್ವರರ ವಚನಗಳುʼ

ಶತಮಾನದ ಶ್ರೇಷ್ಠ ವಚನಕಾರರು ಸಮಾಜ ಸುಧಾರಕರು ಜಗಜ್ಯೋತಿ ಎಂದೇ ಹೆಸರಾದ ಬಸವೇಶ್ವರರ ವಚನಗಳ ರೂಪದಲ್ಲಿರುವ ತತ್ವ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಕಾಯಕವೇ ಕೈಲಾಸ ಎಂದು ಇಡೀ ಜಗತ್ತಿಗೆ ಕಾಯಕದ ಮಹತ್ವ ಸಾರಿದರು ಯಾವ ಕೆಲಸವಾದರೂ ಶ್ರದ್ಧಾ ಭಕ್ತಿಯಿಂದ ಮಾಡಿ ಕಾಯಕದಲ್ಲಿ ಕೈಲಾಸ ಕಾಣಬೇಕೆಂದರು. ಕಾಯಕದಿಂದ ಬಂದ ಸಂಪಾದನೆ ಸಂತೋಷ ತರುತ್ತದೆ. ಮನಸ್ಸಿಗೆ ತೃಪ್ತಿ ನೀಡುತ್ತದೆ. ಮಾಡುವ ಕೆಲಸ ಸಣ್ಣದಿರಲಿ ದೊಡ್ಡದಿರಲಿ ಅದರ ಬಗ್ಗೆ ಗೌರವ ಇರಬೇಕು ಎನ್ನುವ ಬಸವೇಶ್ವರರ ದೃಷ್ಟಿಕೋನವು ಎಲ್ಲಾ ಕಾಲಕ್ಕೂ ಅನ್ವಯಿಸುವ ಸಂದೇಶ.

ಸಮಾಜದ ಮೇಲು ಕೀಲು ಮೂಢನಂಬಿಕೆಗಳನ್ನು ತಮ್ಮ ವಚನಗಳಲ್ಲಿ ಖಂಡಿಸಿ ಮಾನವ ಕುಲವೊಂದೇ ಉತ್ತಮ ಎಂದು ತಿಳಿಸಿ ನೆಲ,ಜಲ ,ಗಾಳಿ ಎಲ್ಲರಿಗೂ ಒಂದೇ ಇರುವಾಗ ಮೇಲು ಕೀಳು ಎಂಬ ಜಾತಿ ಪದ್ಧತಿಯನ್ನು ವಿರೋಧಿಸಿದ ವಿಶ್ವ ಚೇತನ ಬಸವಣ್ಣನವರ ವಿಚಾರಧಾರೆಗಳನ್ನು ಎಲ್ಲರೂ ತಿಳಿದುಕೊಂಡು ಅಳವಡಿಸಿಕೊಂಡರೆ ಸಮ ಸಮಾಜದ ಕನಸು ಸಾಕಾರವಾಗುತ್ತದೆ. ಇವ ನಮ್ಮವ ಇವ ನಮ್ಮವ ಎಂಬ ಭಾವ ಎಲ್ಲರಲ್ಲಿ ಮೂಡಿದಾಗ ಇಡೀ ವಿಶ್ವವೇ ಒಂದು ಕುಟುಂಬದಂತಾಗುತ್ತದೆ. ಸಂಘರ್ಷಗಳು ಹಾಗೂ ಅದರ ಹೆಸರಿನಲ್ಲಿ ನಡೆಯುವ ಸಾವು ನೋವುಗಳಿಗೆ ಬಸವೇಶ್ವರರ ವಚನಾಮೃತಗಳ ಸಾರವೇ ದಿವ್ಯ ಔಷಧಿ ಆಗಬೇಕು. ಮನುಷ್ಯ ಮನುಷ್ಯರ ನಡುವೆ ಪ್ರೀತಿ ಬಾಂಧವ್ಯ ಬೆಳೆಯಲು ಬಸವೇಶ್ವರರ ಬೋಧನೆಗಳನ್ನು ಎಲ್ಲರೂ ಅರಿತಾಗ ಸಾಧ್ಯವಾಗುತ್ತದೆ. ಅಷ್ಟು ಹಿಂದೆಯೇ ಬಸವೇಶ್ವರರು ಇಂತಹ ಕರಾಳ ಪದ್ಧತಿಗಳ ಬಗ್ಗೆ ಅಂದಿನ ಕಾಲದಲ್ಲೇ ಧ್ವನಿಯೆತ್ತಿ ವಚನಗಳ ರೂಪದಲ್ಲಿ ಬೋಧನೆ ಮಾಡಿರುವುದನ್ನು ಕಂಡಾಗ ಅವರು ಮಹಾನ್ ಮಾನವತಾವಾದಿಯಾಗಿ ಸರ್ವಕಾಲಕ್ಕೂ ಸಲ್ಲುತ್ತಾರೆ.
ಬಸವೇಶ್ವರರ ಮತ್ತೊಂದು ಪ್ರಮುಖ ಬೋಧನೆ ಭಕ್ತಿ ಮಾರ್ಗ. ಬರಿ ಬೂಟಾಟಿಗಾಗಿ ತೋರಿಕೆ ಭಕ್ತಿ ಪ್ರದರ್ಶನ ಮಾಡದೆ ದೇಹವೇ ದೇಗುಲ ಎಂದು ಭಾವಿಸಿ ತನು ಮನ ಶುದ್ಧರಾಗಿ ಸತ್ಯ ಪ್ರಾಮಾಣಿಕತೆಯಿಂದ ಬಾಳಬೇಕು. ದೇವರ ಆರಾಧನೆ ಮಾಡಬೇಕು. ಮನುಷ್ಯ ಯಾವಾಗಲೂ ದೇವರ ನಾಮಸ್ಮರಣೆಯಲ್ಲಿ ಒಳಿತನ್ನು ಕಾಣಬೇಕು. ಆಡಂಬರಕ್ಕಿಂತ ಸರಳ ಭಕ್ತಿ ಪೂರ್ವಕವಾದ ಆಚರಣೆಗಳು, ಶುದ್ಧವಾದ ಮಾತು, ಪರಿಶುದ್ಧವಾದ ಮನಸ್ಸು, ವಿನಯ ಸಂಪನ್ನತೆಯಿಂದ ನಾವು ದೇವರನ್ನು ಮೆಚ್ಚಿಸಲು ಸಾಧ್ಯ ಎಂಬ ಅರಿವನ್ನು ಮೂಡಿಸಿದ ಭಕ್ತಿ ಭಂಡಾರಿ ಬಸವಣ್ಣನವರ ಮಾತು ಇಂದಿಗೂ ಎಂದೆಂದಿಗೂ ನಮಗೆ ಆದರ್ಶವಲ್ಲದೇ ಮತ್ತೇನಿದೆ..
ಪ್ರತಿಯೊಬ್ಬ ವ್ಯಕ್ತಿ ಮೇಲೇರಲು ಸಮಾನ ಅವಕಾಶವಿರುವ ಜಾತಿ ರಹಿತ ಸಮಾಜವು ಬೇಕು ಎಂದು ನಂಬಿದ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ವಿವಿಧ ಸಾಮಾಜಿಕ ಆರ್ಥಿಕ ಹಿನ್ನೆಲೆಯುಳ್ಳ ಪುರುಷರು ಮತ್ತು ಮಹಿಳೆಯರು ಸಮಾನತೆಯಿಂದ ಅಭಿಪ್ರಾಯ ಹಂಚಿಕೊಳ್ಳುವ ಮುಕ್ತ ವೇದಿಕೆ ಒದಗಿಸಿದರು ಆಧ್ಯಾತ್ಮಿಕ ಮತ್ತು ಸಾಮಾನ್ಯ ಜೀವನದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾ ನಡೆಯುತ್ತಿದ್ದ ವಿಚಾರ ಮಂಥನಗಳು ಸಾಮಾಜಿಕ ಕ್ರಾಂತಿಗೆ ಕಾರಣವಾಗಿದ್ದವು. ಅನುಭವ ಮಂಟಪವೆಂಬ ಸಮಾನಮನಸ್ಕ ಶರಣ ಶರಣೆಯರ ಸಮೂಹ ವಚನ ಸಾಹಿತ್ಯವೆಂಬ ವಿಶಿಷ್ಟ ಭಂಡಾರವನ್ನೇ ಈ ಲೋಕಕ್ಕೆ ಕೊಡುಗೆಯಾಗಿ ನೀಡಿತು. ಸರಳ ಭಾಷೆಯ ಮೂಲಕ ನಿತ್ಯ ಜೀವನದ ಸೂತ್ರಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ನೇರವಾಗಿ ಜೀವನ ಸಂದೇಶಗಳನ್ನು ತಲುಪಿಸಲು ನೆರವಾದ ವಚನಗಳು ಅದ್ಭುತವಾದ ಪದ್ಯಗಳು. ಈ ಪ್ರಪಂಚದಲ್ಲಿ ವಚನ ಸಾಹಿತ್ಯಕ್ಕಿಂತ ಸಮನಾದ ಸಾಹಿತ್ಯ ಬೇರೊಂದಿಲ್ಲ. ಎಲ್ಲಾ ಶರಣರ ಜೀವನಾನುಭವದ ನುಡಿಸಂದೇಶಗಳೇ ಇಂದಿಗೂ ವಚನಗಳು ರೂಪದಲ್ಲಿ ನಮಗೆ ದಾರಿದೀಪವಾಗಿ ಎಲ್ಲಾ ಕಾಲಕ್ಕೂ ಸಲ್ಲುತ್ತವೆ.
ದಯವೇ ಧರ್ಮದ ಮೂಲವಯ್ಯ ಎಂದ ಬಸವಣ್ಣನವರು ಸಕಲ ಪ್ರಾಣಿಗಳಲ್ಲಿ ದಯೆಯಿರಬೇಕು. ಪ್ರಾಣಿ ಬಲಿಯನ್ನು ಕೂಡ ಅಂದಿನ ದಿನಮಾನಗಳಲ್ಲಿ ಅವರು ಧಿಕ್ಕರಿಸಿ ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಬೇಕೆಂದು ಉಪದೇಶ ಮಾಡಿದರು. ಮನುಜನ ಅಂತರಂಗ ಶುದ್ದಿ ಬಹಿರಂಗ ಶುದ್ದಿಯ ಬಗ್ಗೆ ತಿಳಿಸಿದ ಬಸವಣ್ಣನವರು ಸುಳ್ಳು, ಕೋಪ, ನಿಂದನೆ, ಹೊಗಳಿಕೆ, ಹಂಗಿಸುವುದರ ಬಗ್ಗೆ ನೀಡಿದ ತಿಳುವಳಿಕೆ ಇಂದು ನಾವೆಲ್ಲರೂ ಅನುಸರಿಸುವಂತದ್ದು.ಬಾಹ್ಯ ಶುಚಿತ್ವ ದಂತೆಯೇ ಅಂತರಂಗವನ್ನು ನಾವು ಶುಚಿಯಾಗಿಟ್ಟಕೊಂಡು ಬದುಕುವುದು ಉತ್ತಮ ಎಂದು ಸಾರಿದ ಬಸವಣ್ಣನವರ ಸಂದೇಶ ಇಂದಿಗೂ ನಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಮನುಷ್ಯ ಹಣ ಸಂಪಾದನೆ ಮಾಡಿ ಕೂಡಿಟ್ಟು ಶ್ರೀಮಂತನಾಗುವುದಕ್ಕಿಂತ ದಾಸೋಹ ಮಾಡಬೇಕು. ಹೀಗೆ ಜಗಜ್ಯೋತಿ ಬಸವೇಶ್ವರರ ಸಾಮಾಜಿಕ ಕ್ರಾಂತಿಯ ಹತ್ತು ಹಲವು ತತ್ವಗಳನ್ನು ಮನುಷ್ಯರು ಸರ್ವಕಾಲಕ್ಕೂ ತಿಳಿದುಕೊಳ್ಳಬೇಕಾದ ಒಂದು ವಿಚಾರವಾಗಿದೆ.ಹೀಗೆ ಬಸವೇಶ್ವರರು 12ನೇ ಶತಮಾನದಲ್ಲಿ ಬೋಧಿಸಿದ ಉಪದೇಶಗಳು 21ನೇ ಶತಮಾನಕ್ಕೂ ಪ್ರಸ್ತುತವಾಗಿವೆ. ಶರಣರ ವಚನಾಮೃತದ ನುಡಿಗಳು ನಿತ್ಯ ನೂತನವಾಗಿವೆ. ನಮ್ಮನ್ನು ನಾವು ಉತ್ತಮ ಮನುಜರಾಗಿ ರೂಪಿಸಿಕೊಳ್ಳಲು ಈ ವಚನಗಳು ಅದ್ಭುತವಾದ ಕೊಡುಗೆಗಳಾಗಿವೆ.ಸಾಮಾಜಿಕ ಕ್ರಾಂತಿಯೋಗಿಯಾದ ಬಸವಣ್ಣನವರ ಬದುಕೇ ನಮಗೊಂದು ಆದರ್ಶ. ಜಗಜ್ಯೋತಿ ಬಸವೇಶ್ವರರಾದಿಯಾಗಿ ಸರ್ವ ಶರಣರ ವಚನಗಳು ಬಾಳಿನ ಬೆಳಕಾಗಿ ದಾರಿ ತೋರುತ್ತವೆ. ಶ್ರೇಷ್ಠ ಆಲೊಚನೆಗಳಿಂದ ಸರ್ವರಿಗೂ ಒಳಿತಾಗುವ ಗುಣಗಳೊಂದಿಗೆ ಬದುಕಿದ ಬಸವೇಶ್ವರರ ಜೀವನ ಸಂದೇಶಗಳು ಅಂದು ಇಂದು ಮುಂದು ಎಂದಿಗೂ ಜೀವಂತವಾಗಿರುತ್ತವೆ.
ಬಿ.ಜಿ. ಚೈತ್ರ ತಿಪ್ಪೇಸ್ವಾಮಿ.
