ಅಂಕಣ ಸಂಗಾತಿ
ಸಕಾಲ
ಮತ್ತೆ ಮರಳಿ ಬಾರದಂತಹ ಅವಸ್ಥೆ!
ಮತ್ತೆ ಮರಳಿ ಬಾರದಂತಹ ಅವಸ್ಥೆ!
ಎಳೆ ಮಗು ತಾಯಿ ಎದೆಹಾಲು ಕುಡಿಯಲು ಕಷ್ಟ ಪಡುತ್ತಿತ್ತು.ಬಿಟ್ಟು ಬಿಟ್ಟು ಬರುವ ಜ್ವರ ಬೇರೆ, ನಿಶಕ್ತಿ,ಹೊಟ್ಟೆಗೆ ಆಹಾರವಿಲ್ಲದೆ, ತನಗೇನಾಗುತ್ತಿದೆ ಎಂಬುದನ್ನು ಹೇಳಲು ಆಗದೆ ಮೂಕ ವೇದನೆ ಮಗುವಿನದು.ತಾಯಿ ಅವರಿವರು ಹೇಳಿರುವ ಎಲ್ಲ ಔಷಧಿ ಮಾಡಿದರೂ ಮಗುವಿನ ಆರೋಗ್ಯದಲ್ಲಿ ಬದಲಾವಣೆ ಕಾಣದಿದ್ದಾಗ,ವೈದ್ಯಕೀಯ ಚಿಕಿತ್ಸೆ ಕೊಡಿಸಲು ಮನಸ್ಸು ಮಾಡದೆ ಮೂಡನಂಬಿಕೆಯಲಿ ಯಾವುದೋ ಮಾಟ ಮಂತ್ರವಾದಿಗಳಿಗೆ ಹಣ ಸುರಿದು.ಕೋಳಿ,ಕುರಿ ಬಲಿ ನೀಡಿ, ಮಗುವನ್ನು ಬುರುಡೆಯೆದುರು ಮಲಗಿಸಿದರು, ದೀಪ ಆರದಂತೆ ಕಾಯ್ವ ಪಣತೊಟ್ಟು,ಹನಿ ಹನಿ ನೀರ ಬಾಯಲ್ಲಿ ಹಾಕುತ್ತ ಅಗೋಚರ ಶಕ್ತಿ ಬಂದು ಕಾಪಾಡುತ್ತೆ ಎಂಬ ಚಿತ್ತದಲಿ ಮೈಮರೆತರು. ಆದರೆ ಮಗು ದಿನದಿಂದ ದಿನಕ್ಕೆ ಕೃಶವಾಗಿ ಉಸಿರಚಲ್ಲಿರುವುದು ಗಮನಕ್ಕೆ ಬಂದಿರಲಿಲ್ಲ. ಮಗು ಕೈಕಾಲು ಅಲ್ಲಾಡಿಸದಿದ್ದಾಗ ಹೆದರಿ ಡಾಕ್ಟರ್ ಬಳಿ ಕರೆತಂದಾಗ ಮಗು ಶವವಾಗಿತ್ತು. ಆಗ ಅತ್ತೇನು ಪ್ರಯೋಜನ? ಬದುಕಿಸುವ ಹಾದಿ ಕಣ್ಮುಂದಿದ್ದರೂ ಕಾಪಾಡದೆ ಕಣ್ಣೀರಿಟ್ಟರೆ ಏನು ಲಾಭ? ವಿಧಿಯಾಟವೆಂದು,ಆ ಮಗುವಿನ ಆಯಸ್ಸು ಇಷ್ಟೇ ಎಂದು ಮರುಗುವುದು ಸಾಮಾನ್ಯವಾದ ಮಾತು.
ಸಾವಿನ ಅರಿವು ಉಂಟಾಗುವುದು ಬಾಲ್ಯದಲ್ಲಿ.೦೧ ರಿಂದ ೦೪ ವರ್ಷದ ಮಕ್ಕಳಲ್ಲಿ ಹಲವು ರೀತಿಯ ಭಯಗಳು ಕಂಡುಬರುತ್ತವೆ.ಕತ್ತಲೇ ಕಂಡರೆ ಭಯ. ತನ್ನ ನೆರಳು ತಾನು ಕಂಡರೆ ಭಯ ದೆವ್ವ-ಪಿಶಾಚಿಗಳ ಭಯ, ಹೆತ್ತವರಿಂದ ದೂರವಾದೇನೆಂಬ ಹೆದರಿಕೆ, ಯಾರಾದರೂ ಹಿಡಿದ ಕೈ ಬಿಟ್ಟು ದೂರ ಸರಿದರೆ ತಕ್ಷಣ ಚೀರುವುದು,ಭಯಪಡುವುದು,ಒಂಟಿತನಕೆ ಸಂಕಟ ಪಡುವುದು ಕಂಡು ಬರುತ್ತವೆ.ಕ್ರಮೇಣ ಹಂತಹಂತ ವಾಗಿ ಮಕ್ಕಳು ಇಂಥ ಭಯಗಳಿಂದ ಹೊರಬರುತ್ತಾರೆ.
ಅವರಲ್ಲಿ ಧೈರ್ಯ ಸಾಹಸ ಜಾಗೃತಗೊಂಡು ಇವುಗಳಿಂದ ದೂರಸರಿಯುತ್ತಾರೆ. ಇಷ್ಟೆಲ್ಲಾ ಭಯಗಳಿದ್ದರೂ ‘ಸಾವಿನ ಭಯ ಚಿಕ್ಕಮಕ್ಕಳಲ್ಲಿ ಕಂಡುಬರುವುದು ಬಲು ಕಡಿಮೆ,ಇದರ ಬಗ್ಗೆ ಅವರಿಗೆ ತಿಳುವಳಿಕೆ ಸಾಮರ್ಥ್ಯ ಕಡಿಮೆ. ಸಾವು ‘ಮತ್ತೆ ಮರಳಿ ಬಾರದಂತಹ ಅವಸ್ಥೆ’ ಎಂಬ ತಿಳಿವು ಅವರಿಗಿರದಿರುವುದೇ ಇದಕ್ಕೆ ಪ್ರಮುಖ ಕಾರಣ.
ನಮ್ಮ ವಾಹನಕ್ಕೆ ಅಪಘಾತವಾಗುವುದಿಲ್ಲ ಎಂದು ದೃಢವಾಗಿ ನಂಬಿರುತ್ತೇವೆ. ಬೇರೆಯವರಿಗೆ ಕೋವಿಡ್ ಬಂದು ಸಾಯಬಹುದು ಎಂದು ಒಪ್ಪಿದರೂ, ನಮಗೆ ಕೋವಿಡ್ ಬರಲು ಸಾಧ್ಯವಿಲ್ಲ ಎಂಬುದು ನಮ್ಮ ದೃಢವಾದ ನಂಬಿಕೆ! ಮನೋವೈಜ್ಞಾನಿಕವಾಗಿಯೂ ಈ ನಂಬಿಕೆ ಜೀವಿಸಲು ಬಹುಮುಖ್ಯವೆಂದು. “ಸಿಗ್ಮಂಡ್ ಫ್ರಾಯ್ಡ್” ಪ್ರಕಾರ ‘ನಮಗೆ ಯಾರಿಗೂ ನಮ್ಮ ಸಾವಿನಲ್ಲಿ ನಂಬಿಕೆಯೇ ಇಲ್ಲ’. ಅಂದರೆ ನಾವು ಸಾಯುವುದನ್ನು ಕಲ್ಪಿಸಿಕೊಳ್ಳಲು ಮನುಷ್ಯರಿಗೆ ಸಾಧ್ಯವಿಲ್ಲ. ಒಂದೊಮ್ಮೆ ನಾವು ಹಾಗೆ ಕಲ್ಪಿಸಿಕೊಳ್ಳಲು ಪ್ರಯತ್ನಿಸಿದರೆ, ನಾವಿನ್ನೂ ನಮ್ಮ ಸಾವಿನ ವೀಕ್ಷಕರೇ ಆಗಿರುತ್ತೇವಷ್ಟೇ. ಅದು ಸಂಭವುಸುವುದಿಲ್ಲ. ಉದಾ. ಮೂರು ಅಂತಸ್ತಿನ ಕಟ್ಟಡ ಭೂಕಂಪನಕ್ಕೆ ಒಳಗಾದಾಗ ಕಟ್ಟಡದ ಬಹತೇಕ ವಾಸಿಗಳು ಮೃತಪಟ್ಟರೂ ಹಸುಗೂಸು ಬದುಕುಳಿದ ನೈಜತೆಗೆ ಕನ್ನಡಿ ಬೇಡ.
“ನೀನು ಯಾವಲ್ಲಿಂದ ಬಂದಿ? ಬಂದಾಗ ಏನೇನು ತಂದಿ? ಎಂದ ಸಾಲು ನನ್ನ ಗುರುಗಳಾದ ದಿವಂಗತ ಡಾ.ಮೋಹನ್ ಕುರುಡಗಿ ರಚಿತ ಪದ್ಯದ ಸಾಲುಗಳು… ಸಾವು ಅಗೋಚರ,ಅಘೋಷ. ಅದಕ್ಕೆ ಸಮಯದ ನಿರ್ಬಂಧವಿಲ್ಲ.ಯಾವಾಗ,ಹೇಗೆ ಬೇಕಾದರೂ ಸಂಭವಿಸುವ ಅದ್ಭುತವಾದ ಶಕ್ತಿ. ಮಿಸೈಲ್ ಮ್ಯಾನ್ ನಮ್ಮ ಹೆಮ್ಮೆಯ ರಾಷ್ಟ್ರಪತಿಗಳು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರ ಸಾವು ಸಂಭವಿಸಿದ್ದು ಪಾಠ ಮಾಡುತ್ತಿರುವಾಗಲೇ ಎಂಬುದನ್ನು ಗಮನಿಸಿದರೆ ಸಾಕು. ಇಂತಹ ಸಾವುಗಳಿಗೆ ಸಾಕಷ್ಟು ನಿದರ್ಶನಗಳು ಕಾಣಸಿಗುತ್ತವೆ.
ಇದೆನಪ್ಪಾ ಬರಿ ಸಾವಿನ ಸುತ್ತ ಗಿರಗ್ಲಟಗೆ ಹೊಡಿತಿದ್ದಿನಿ ಅನ್ನಿಸಬಹುದು,ಎಷ್ಟು ಸಾವುಗಳು ಅನೇಕರ ಜೀವನಕ್ಕೆ ಬೆಳಗು ನೀಡಿರುವ ಉದಾ.ತಮಗೆಲ್ಲ ಗೊತ್ತಿದೆ.ಎಷ್ಟೋ ಮಂದಿ ಜೀವಂತವಿರುವಾಗಲೇ ದೇಹದಾನ ಮಾಡುತ್ತಿರುವ ಉದಾ.ಗಳಿಗೆ ಕೊರತೆಯಿಲ್ಲ.ಇಷ್ಟೆಲ್ಲ ಗೊತ್ತಿದ್ದರೂ, ಧೂಮಪಾನ, ಗುಟಕಾ,ಕುಡಿತದ ಚಟಗಳಿಂದ ಮುಕ್ತ ರಾಗಲು ಬಯಸದಿರುವುದೇ ವಿಪರ್ಯಾಸ.ಗೊತ್ತಿದ್ದು ಕಣ್ಮುಚ್ಚಿ ಅಪ್ಪಿಕೊಳ್ಳುವವರ ಮನಸ್ಥಿತಿ ಒಂದೆಡೆಯಾದರೆ,ಇನ್ನೂ ಬಾಳಿ ಬದುಕಬೇಕಾದವರ ಸಾವು ಕರಗಿಸಿಕೊಳ್ಳಲು ಆಗದೆ ಹೃದಯ ಸ್ಥಂಭನಕ್ಕೆ ಒಳಗಾದವರ ಸಂಖ್ಯೆಗೆ ಬರವಿಲ್ಲ.
ಸುಪ್ತ ಮನಸ್ಸಿನಲ್ಲಿ ನಮಗಿರುವ ಗಟ್ಟಿ ಭರವಸೆ ‘ನಾನು ಅಮರ’ ಎನ್ನುವುದು‘ಸಾವು’ ಎಂಬುದು ಹೆಚ್ಚಿನವರಿಗೆ ಭಯ ಯಾವಾಗಲಾದರೊಮ್ಮೆ ತಂದರೂ ಕೆಲವರಿಗೆ ಅದು ಅತಿಭಯವಾಗಿ ಎರಗುತ್ತದೆ. ಇಲ್ಲಿ ‘ಸಾವು’ ಸಮಸ್ಯೆ ಎನ್ನುವುದಕ್ಕಿಂತ, ‘ಸಾವಿನ ಭಯ’ವೇ ಸಮಸ್ಯೆ ಎನ್ನುವುದು ಗಮನಾರ್ಹ.ಕೋವಿಡ ಸಮಯ ನೆನಪಾದರೆ ಬರಿ ಕೋರೊನಾ ಹೆಸರೆ ಸಾಕಿತ್ತು.ಇದಕ್ಕೆ ಮನೋವಿಜ್ಞಾನ ಇದನ್ನು ‘ತೆನಟೋಫೋಬಿಯಾ’ ಎಂದು ಕರೆಯುತ್ತದೆ.
‘ಸಾವಿನ ಭಯ’ ಎಂದು ಮನೋವೈದ್ಯರ ಬಳಿ ಬರುವ ಬಹಳಷ್ಟು ಜನ ಹೇಳುವುದು ‘ನನಗೆ ಏನಾದರೂ ಆದರೆ ಪರವಾಗಿಲ್ಲ ಡಾಕ್ಟ್ರೇ, ಆದರೆ ನನ್ನ ಚಿಕ್ಕ ಮಕ್ಕಳು ನಾನಿಲ್ಲದೆ ಹೇಗಿರುತ್ತಾರೋ ಎಂಬ ಚಿಂತೆ’. ಭಯದಲ್ಲಿ ಅವರು ಮತ್ತೆ ಮತ್ತೆ ತಮ್ಮ ಸಾವಿನ ಅನಂತರದಲ್ಲಿ ತಮ್ಮ ಮಕ್ಕಳು ಕಷ್ಟಪಡುವುದನ್ನು, ಚಿತ್ರಿಸಿಕೊಳ್ಳುವುದು ಸಾಮಾನ್ಯ. ವೃದ್ಧಾಪ್ಯದಲ್ಲಿ ಸಾವಿನ ಭಯದ ರೀತಿ ಬದಲಾಗುತ್ತದೆ.
ವೈಜ್ಞಾನಿಕವಾಗಿ ನಾವು ಸಾವನ್ನು ಕುರಿತು ಯೋಚಿಸುವ ರೀತಿ, ದೈನಂದಿನ ಬದುಕಿನಲ್ಲಿ ಧೋರಣೆ ಮತ್ತು ನಡವಳಿಕೆಯನ್ನು ನಿರ್ಧರಿಸುತ್ತದೆ.೨೦೧೬ ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಸಾವಿನ ಭಯ, ಸೇಡು ಮತ್ತು ರಾಜಕೀಯ ಹಿಂಸೆಯ ಮನೋಭಾವವನ್ನು ಹೆಚ್ಚಿಸಿದ್ದು ಕಂಡುಬಂತು. ನೋವು ಮತ್ತ ಸಾವು ಎರಡರ ಬಗೆಗೂ ಪ್ರತ್ಯೇಕವಾಗಿ ಯೋಚಿಸಿ, ರಾಜಕೀಯ ಸಂಘರ್ಷಗಳ ಪರಿಹಾರ ಸೂಚಿಸಲು ಹೇಳಲಾಯಿತು. ಸಾವಿನ ಬಗ್ಗೆ ಕೇಂದ್ರೀಕರಿಸಿದ ಜನರು ಸೂಚಿಸಿದ ಮೊದಲ ಪರಿಹಾರ ಮಿಲಿಟರಿ ಕಾರ್ಯಾಚರಣೆ. ಸಾವಿನ ಭಯ, ಇತರ ಆತ್ಮೀಯರ ಸಾವಿನ ಶೋಕದ ಪ್ರಕ್ರಿಯೆಯನ್ನೂ ಸಂಕೀರ್ಣವಾಗಿಸುತ್ತದೆ.ಮತ್ತೆ ಮತ್ತೆ ಅಪಾಯಕ್ಕೆ ಇಡಾಗುವುದು ಮೃತ್ಯುಭಯವನ್ನು ಕಡಿಮೆಯಾಗಿಸುವ ಬದಲು ಹೆಚ್ಚಿಸಲೂಬಹುದು. ದೈಹಿಕ ಆರೋಗ್ಯ ನಿರೀಕ್ಷೆಯಂತೆ ಮೃತ್ಯುಭಯವನ್ನು ಕಡಿಮೆ ಮಾಡುತ್ತದೆ.ಅದೆಷ್ಟೋ ಜನ ಮೃಂತ್ಯುಂಜಯ ಹೋಮ ಮಾಡಿ ಒಂದಿಷ್ಟು ಸಮಾಧಾನ, ಮತ್ತೊಬ್ಬರ ಬಳಿ ಆತಂಕಗಳನ್ನು ಹೇಳಿಕೊಳ್ಳುವುದು. ಇದರಿಂದಾಗಿ ಸಾಮಾಜಿಕವಾಗಿ ಬೆರೆಯುವುದು ಈ ಭಯವನ್ನು ತಡೆಯುತ್ತದೆ. ವೃದ್ಧಾಪ್ಯದಲ್ಲಿರುವ ಹಿರಿಯರು ತಮ್ಮ ನಂತರದ ಪೀಳಿಗೆಯ ಕಿರಿಯರಿಗೆ ಮಾರ್ಗದರ್ಶನ ಮಾಡುವುದು, ತಮ್ಮ ಜೀವನದ ಹಿಂದಿನ ದಿನಗಳನ್ನು ಯಾವುದೇ ಪಶ್ಚಾತ್ತಾಪಗಳಿರದೆ ನೋಡುವ ಕಲೆಯನ್ನು ಕಲಿಸುವ ಅವಕಾಶ ತೆರೆಯುತ್ತದೆ. ಇದು ಸಾವನ್ನು ‘ಸಹಜ ಹಂತ’ ಎಂದು ಸ್ವೀಕರಿಸುವುದನ್ನು ಸಾಧ್ಯವಾಗಿಸುತ್ತದೆ. ಬದುಕಿಗೊಂದು ಅರ್ಥವನ್ನು ಹುಡುಕಿಕೊಳ್ಳುವುದು ಸಾವಿನ ಭಯವನ್ನು ಕಡಿಮೆಯಾಗಿಸುವುದಷ್ಟೇ ಅಲ್ಲ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸಾವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಎಷ್ಟೋ ಯುವಕರು/ಯುವತಿಯರು ಕ್ಷುಲ್ಲಕ ಕಾರಣಗಳಿಗಾಗಿ ತಮ್ಮ ಜೀವನವನ್ನು ಅನಾಯಾಸವಾಗಿ ಕೊನೆಗಾಣಿಸಿಕೊಂಡು ಹೆತ್ತವರ ಒಡಲಿಗೆ ಕೊಳ್ಳಿಯಿಡುವರು.ಇಲ್ಲಾ ಹೆತ್ತವರ ಎದೆ ಸೀಳುವ ಹಂತಕರಿಗೇನು ಬರವಿಲ್ಲ.ಎಲ್ಲ ನೆವಗಳು ಈ ಜವರಾಯನ ಆಗಮನದ ಸೂಚನೆಗಳು.ಸಾವನ್ನು ಗೆಲ್ಲಲು ಸತಿಸಾವಿತ್ರಿಯಂತೂ ಅಲ್ಲ, ಮಾರ್ಕಾಂಡೇಯನಂತೂ ಅಲ್ಲ.ಹೀಗಿರುವಾಗ ಗೆಲ್ಲುವ ವುದು ಯಾರನ್ನು? ತಡೆಗಟ್ಟಲು ಸಾಧ್ಯತೆ ಇದ್ದಿದ್ದರೆ,ಮನುಷ್ಯ ಅದನ್ನು ಕಂಡುಹಿಡಿದು ಬಿಡುತ್ತಿದ್ದ. ಕೋಣನ ಮೇಲೆ ಯಮನ ಆಗಮನ ಕೈಯಲ್ಲಿ ಯಮಪಾಶ ಕಾಲ್ಪನಿಕವಾದರೂ ಉಹಿಸಿಕೊಳ್ಳುವ ಸುಲಭ ಮಾರ್ಗ.
ಮಾರ್ಕ್ ಟ್ವೈನ್ ಹೇಳಿದ ಮಾತು: ‘ಸಾವಿನ ಭಯವೆಂದರೆ,ಅದು ಹುಟ್ಟುವುದು ಬದುಕಲು ಹೆದರುವುದರಿಂದ. ಪೂರ್ಣವಾಗಿ ಬದುಕುವ ವ್ಯಕ್ತಿ ಯಾವ ಸಮಯದಲ್ಲಿಯೂ ಸಾಯಲು ಸಿದ್ಧನಾಗಿರುತ್ತಾನೆ!’ ನಿಮ್ಮ ಕಲ್ಪನೆಯ ಅರ್ಥಪೂರ್ಣ ಬದುಕು ಯಾವುದೇ ಆಗಲಿ, ಅದನ್ನು ಸ್ವೀಕರಿಸುವ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದಷ್ಟು ಮನಸ್ಸು ಎಂದೋ ಬರುವ ಜವರಾಯನ ಇಂದೇ ಬರಮಾಡಿಕೊಂಡರೆ ಬದುಕಿಗೆಂತ ಬೆಲೆ? ಉಸಿರಾಡುವಷ್ಟು ಗಳಿಗೆ ಜೀವನದ ಎಲ್ಲ ಸಂಘರ್ಷಕ್ಕೆ ನಮ್ಮನ್ನು ತೆರೆದುಕೊಳ್ಳಬೇಕು.ಬರುವುದನ್ನು ಎದೆಗೊಟ್ಟು ಸ್ವೀಕರಿಸಬೇಕು.ಪ್ರಕೃತಿಯ ಒಳಗುಟ್ಟು ಪಂಚಭೂತಗಳಿಂದ ಉದ್ಭವಿಸಿದ ಈ ದೇಹ ಪುನಃ ಪಂಚಭೂತಗಳಲ್ಲಿಯೇ ಲೀನವಾಗುವುದು ಖಚಿತವೆಂಬ ಸತ್ಯ ಗೋಚರಿಸಿದರೂ,ನಾನು ಅಮರನೆಂದು ಕೂಡಿಡುವ ಸಂಪತ್ತು ಇನ್ನಾರಪಾಲಾಗಿ ವಿಜೃಂಭಿಸುವುದೆಂಬ ವಾಸ್ತವ ಒಪ್ಪಿಕೊಳ್ಳಲಾಗದ ಈ ಪುಟ್ಟ ಮನಸ್ಸಿಗೆ ಸಾಂತ್ವಾನ ಹೇಳುವವರಾರು?
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ
ತುಂಬಾ ಆತ್ಮವಿಶ್ವಾಸದ ನುಡಿಗಳು ಆತ್ಮದ ಬೆಸುಗೆಗೆ ಕಾಲಘಟ್ಟದ ಕ್ಷಣಗಳ ಪ್ರಸ್ತುತತೆಗೆ ತೆರೆದುಕೊಳ್ಳಬೇಕಾದ ಹೃನ್ಮನದ ನುಡಿಗಳಿಗೆ ಅಭಿನಂಧನೆಗಳು
ಸಾವಿನ ಮರ್ಮ ತಿಳಿದವರಿಲೋ ಮನುಜ
ಬರುವಾಗ ಬರಿಗೈ
ಹೋಗುವಾಗ ಬರಿಗೈ
ಇರುವಾಗ ಇರಬೇಕು ಕೊಡುವ ಕೈ….. ಉತ್ತಮ ಲೇಖನ ಶಿವಲೀಲಾ ಮೇಡಂ
ಪ್ರತಿಯೊಬ್ಬರಿಗೂ ಭಯ ತೊರೆದು ಬದುಕಬೇಕೆಂಬ ಹಂಬಲ ಮೂಡಿಸುವ ಲೇಖನ ಚೆನ್ನಾಗಿದೆ ಮೇಡಂ
ಸತ್ಯದ ನುಡಿಗಳು ಬಹಳ ಸುಂದರವಾಗಿ ಮೂಡಿ ಬಂದಿದೆ ರೀ ಮೇಡಂ.ಅಭಿನಂದನೆಗಳು
ಭಯದ ಮುಸುಕು ಸರಿಸಿ ಬದುಕ ಬೇಕು.ಸುಂದರ ಲೇಖನ