ಡಾ.ಮಲ್ಲಿನಾಥ ತಳವಾರ ಅವರ ಗಜಲ್ ಲೋಕದ ಮಲ್ಲಿಗೆ ಕಂಪು

ಪುಸ್ತಕ ಸಂಗಾತಿ

ಡಾ.ಮಲ್ಲಿನಾಥ ತಳವಾರ ಅವರ ಗಜಲ್ ಲೋಕದ ಮಲ್ಲಿಗೆ ಕಂಪು

ಮಲ್ಲಿಗೆ ಸಿಂಚನ

 ಡಾ.ಮಲ್ಲಿನಾಥ ತಳವಾರ ಅವರ ಗಜಲ್ ಲೋಕದ ಮಲ್ಲಿಗೆ ಕಂಪು

ಗಜಲ್ ಬರೆಯುತ್ತೇನೆ ನಾನು ನನ್ನನ್ನು ನಾ ಅರಿಯಲು ಗಾಲಿಬ್

ನನ್ನೊಳಗಿನ ಮಲ್ಲಿಯ ಜೊತೆ ಪ್ರಪಂಚವನ್ನು ಮರೆಯಲು ಗಾಲಿಬ್”

        ಕನ್ನಡದಲ್ಲಿ ಈಚೆಗೆ ಗಜಲ್ ಚಿಂತನೆಯನ್ನು ಒಂದು ಧ್ಯಾನದಂತೆ ಮಾಡುತ್ತಿರುವವರು ಗಜಲ್ ಕವಿ, ವಿಮರ್ಶಕ ಡಾ. ಮಲ್ಲಿನಾಥ ತಳವಾರ ಅವರು. ಶಾಂತರಸ, ಮುಕ್ತಾಯಕ್ಕ ಅವರಂತಹ ಹಿರಿಯರಿಂದಲೇ ಗಜಲ್ ಮೀಮಾಂಸೆ, ಗಜಲ್‌ ಕುರಿತ ಚಿಂತನೆ ಆರಂಭವಾಗಿದೆ. ಇಂದು ಗಜಲ್ ಸಾಹಿತ್ಯದ ಹಿರಿಯರಾಗಿರುವ ಸಿದ್ದರಾಮ ಹೊನ್ಕಲ್, ಚಿದಾನಂದ ಸಾಲಿ ಗಿರಿಶ ಜಕಾಪುರೆ , ಸಿದ್ದರಾಮ ಹಿರೇಮಠ, ಹೈತೋ, ಅಲ್ಲಾ ಗಿರಿರಾಜ್, ಶ್ರೀದೇವಿ ಕೆರೆಮನೆ ಇಂತಹ ಹಿರಿಯರೆಲ್ಲ (ವಯಸ್ಸಿನಿಂದ ಕಿರಿಯರು ಇಲ್ಲಿ ಸೇರಿರಬಹುದು. ಅವರ ಚಿಂತನೆಗಳಿಂದ ಹಿರಿಯರು ಎಂಬುದು ನನ್ನ ಭಾವ) ಗಜಲ್ ಕಾವ್ಯ ಅರಿಯಲು ಬೇಕಾದ ಚಿಂತನೆಗಳನ್ನು ಸಾಕಷ್ಟು ಹರಿ ಬಿಟ್ಟಿದ್ದಾರೆ. ಇವರ ಸಾಲಿನಲ್ಲಿ ನಿಸ್ಸಂಶಯವಾಗಿಯೂ ಮೊದಲ ಸಾಲಿನಲ್ಲಿ ಈಗ ಚಲಾವಣೆಯಲ್ಲಿರೊ ಹೆಸರು ಗಜಲ್ ಗೋ ಡಾ .ಮಲ್ಲಿನಾಥ ತಳವಾರ ಅವರದು. ಎದ್ದರೂ, ಕುಳಿತರೂ ಗಜಲ್ ಚಿಂತನೆಯನ್ನೇ ಮಾಡುವ ಅವರು ಇತರರ ಗಜಲ್ ಗಳ ಕುರಿತು ಬರೆಯುವ ವಿಮರ್ಶೆಗಳ ಸೊಗಸೆ ಸೊಗಸು. ಇಲ್ಲಿಯವರೆಗೆ ಅವರ ಮೂರು ಗಜಲ್ ಸಂಕಲನಗಳು ಬಂದಿದ್ದು, ಪ್ರತಿಯೊಂದರಲ್ಲೂ ಸುಮಾರು ಇಪ್ಪತ್ತು‌-ಮೂವತ್ತು‌ ಪುಟಗಳ ಗಜಲ್ ಮೀಮಾಂಸೆ ಇರುವದನ್ನು ಕಾಣಬಹುದು. ಹೀಗಾಗಿ ಮೂರು ಗಜಲ್ ಸಂಕಲನಗಳಲ್ಲಿ ಅವರು ಬರೆದಿರುವ ಗಜಲ್ ಮೀಮಾಂಸೆಯನ್ನೇ ಕುರಿತು ಒಂದು ಸಂಕಲನ ಮಾಡಿದರೂ ಒಂದು ಪ್ರತ್ಯೇಕ ಪುಸ್ತಕವಾಗುತ್ತದೆ. ಅಷ್ಟು ಗಜಲ್ ಮೇಲೆ ಅವರಿಗೆ ಗತಿ, ಹಿಡಿತ ಸಾಧಿತವಾಗಿದೆ. ಅವರೊಬ್ಬ ಗಜಲ್‌ಪ್ರೇಮಿ, ಕುಟುಂಬ ಪ್ರೇಮಿ ಕೂಡ ಹೌದು. ಡಾ ಮಲ್ಲಿನಾಥ ತಳವಾರ ಅವರ ತಾಯಿಯ ಹೆಸರು ಶ್ರೀಮತಿ ರತ್ನಮ್ಮ, ತಂದೆಯ ಹೆಸರು ಶಿವರಾಯ, ಕವಿಯ ಹೆಸರು ಮಲ್ಲಿನಾಥ.‌ ಈ ಮೂವರ ಭಾವಸಂಗಮವಾಗಿ ಅವರ ಕಾವ್ಯನಾಮ ‘ರತ್ನರಾಯಮಲ್ಲ’ ಎಂದೆ ಇದೆ. ‘ರತ್ನಮ್ಮ-ಶಿವರಾಯನವರ ರಾಜನಂತಹ‌ ಮಗ‌ ಮಲ್ಲ’ ಎಂದು ಅರ್ಥವನ್ನು ಅದು‌ ಕೊಡುತ್ತದೆ. ಅವರು ಇದೆ ಕಾವ್ಯನಾಮದಿಂದ ಚಿರಪರಿಚಿತರು. ‘ಮಲ್ಲಿ’ ಅವರ ತಕಲ್ಲುಸ್ ನಾಮ. ಅಂದರೆ ಗಜಲ್ ಕಾವ್ಯ ನಾಮ.‌ ಅವರು ಕನ್ನಡ ಗಜಲ್‌ಲೋಕದಲ್ಲಿ ಪ್ರಸಿದ್ಧರಾಗಿದ್ದೆ ‘ಮಲ್ಲಿ” ಯಿಂದ.

“ಮಲ್ಲಿಗೆ ಸಿಂಚನ” ಅವರ ಎರಡನೆ ಗಜಲ್ ಸಂಕಲನ. “ಗಾಲಿಬ್ ಸ್ಮೃತಿ” ಎಂಬ ಸುಂದರ ಗಜಲ್ ಸಂಕಲನವಾದ ಮೇಲೆ ಇದು ಬಂದಿದೆ. ಇದರಲ್ಲಿ ನಾನು ಮೇಲೆ ಹೇಳಿದಂತೆ ಮೊದಲ ಮೂವತ್ತು ಪುಟಗಳು ಗಜಲ್ ಮೀಮಾಂಸೆಗೆ ಮೀಸಲಾಗಿವೆ. ಆಮೇಲೆ ಅರವತ್ತರಷ್ಟು ಗಜಲ್ ಗಳಿವೆ. ಮೊದಲ ಭಾಗದಲ್ಲಿ ಸ್ವತಃ ಗಜಲ್ಕಾರರೇ ಗಜಲ್ ಪಾರಿಭಾಷಿಕ ಪದಗಳು ಎಂಬ ಹೆಸರಿನಲ್ಲಿ ಗಜಲ್ ಉಗಮ ಕುರಿತು ಅದ್ಭುತವಾದ ಪರಿಚಯ ಮಾಡಿಕೊಡುತ್ತಾರೆ. ಗಜಲ್ ಕಾವ್ಯದಲ್ಲಿ ಬಳಕೆಯಾಗುವ ಪಾರಿಭಾಷಿಕ ಪದಗಳ ಕುರಿತ ಈ ವಿವರಣೆ ಬಹಳ ಅಪರೂಪದ್ದಾಗಿದೆ. ಗಜಲ್ ಗೋ ಎಂದರೆ ಗಜಲ್ ಬರೆಯುವವರು, ಗಜಲ್ ಗೋಯಿ ಎಂದರೆ ಗಜಲ್ ಬರೆಯುವ ಕ್ರಮ ಎಂಬಂತಹ ವಿವರಗಳು ಗಜಲ್ ಕ್ಷೇತ್ರ ಪ್ರವೇಶಿಸುವ ಎಲ್ಲರಿಗೂ ತುಂಬ ಉಪಯುಕ್ತವಾಗಿವೆ.

‘ಮಲ್ಲಿಗೆ ಸಿಂಚನ’ ಹೆಸರೆ ಹೇಳುವಂತೆ ಮಲ್ಲಿಗೆಯ ಗಂಧ ತನ್ನ ಸುತ್ತೆಲ್ಲ ಸೂಸುವ ಸುಂದರ ಗಜಲ್ ಗಳ ಗುಲ್ದಸ್ತ.

ಪ್ರೇಮ ಬದುಕಿನ ಅತಿ ದೊಡ್ಡ ಸಂಪತ್ತು‌. ಗಜಲ್ ಕಾವ್ಯ ಬಣ್ಣಿಸಿದಷ್ಟು ಪ್ರೇಮ ಸಂಹಿತೆಯನ್ನ ಇನ್ನಾವುದು ಬಣ್ಣಿಸಿಲ್ಲ.

ಹೃದಯವು ನನ್ನದಾದರೂ ಬಡಿತ ನಿನ್ನದು ಗೆಳತಿ

ಹಗಲಿರುಳು ನಿನ್ನಯ ಧ್ಯಾನವನ್ನೇ ಮಾಡುತಿರುವೆ”

( ಗಜಲ್-೩)

ಎನ್ನುವ ಸಾಲುಗಳು ಪ್ರೇಮಸಂಹಿತೆಯ ಸಾಕ್ಷಿಯಾಗಿವೆ. ಪ್ರೇಮದ ದುರ್ದೈವವೋ ಏನೋ ಅದು ಬಹಳಷ್ಟು ಸಲ ಸಫಲವಾಗುವದೇ ಇಲ್ಲ. ಹಾಗಾಗಿ ಬಹಳ ಸಲ ಪ್ರೇಮಿ ಮಧುಶಾಲೆಯನ್ನು ಅವಲಂಬಿಸಿ ತನ್ನ ಪ್ರೇಮದ ಸೋಲಿನ ನೋವನ್ನು ಕಳೆಯ ಬಯಸುತ್ತಾನೆ. ಅಂತೆಯೇ

ಮಧುಶಾಲೆಯಲ್ಲಿ ಕಾಲ ನೂಕುತಿರುವೆ

ಅಮೃತ ಅವಳಿಗಾಗಿ ಕಾಯುತಿದೆ ಸಾಕಿ

ಎಂದು ತನ್ನ ನೋವನ್ನು ಸಾಕಿಗೆ ಹೇಳಿಕೊಳ್ಳುತ್ತಾನಾದರೂ ಆ ಉರಿ ಅದರಿಂದ ಆರಿದ ಸೂಚನೆಯೇನೂ ಇಲ್ಲ. ಏಕೆಂದರೆ ಅವಳ ಅಗಲಿಕೆಯೇನೋ ಘಟಿಸಿದೆ. ಆದರೆ ಅವಳ ನೆನಪು ಮಾತ್ರ ಹೋಗಲಿಲ್ಲ. ಹೊದವಳು ಅವಳನ್ನು ಮರೆಯುವದನ್ನು‌ ಕಲಿಸದೇ ಹೋದಳು. ೧೨ ನೆಯ ಗಜಲ್

ಪ್ರೀತಿಸುವದನ್ನು ಕಲಿಸಿ ಕೊಟ್ಟವಳು ಮರೆಯುವದನ್ನೇಕೆ ಕಲಿಸಲಿಲ್ಲ

ಸಪ್ತಪದಿಯ ಆಸೆತೋರಿಸಿ ನನ್ನೊಂದಿಗೆ ಹೆಜ್ಜೆಗಳನೇಕೆ ಬೆರೆಸಲಿಲ್ಲ”

ಎಂದು ಅವಳು ಮಾಡಿದ್ದ ನೋವಿನಲ್ಲಿ ನರಳುವದನ್ನು ಸೂಚಿಸಿದೆ. “ಕಂಗಳಲಿ ಅವಳ ಕನಸಿಟ್ಟುಕೊಂಡು” ಮನದಲ್ಲಿ ಅಕ್ಷಯ ಬಯಕೆಗಳನ್ನು ಬಿತ್ತುವ ಗಜಲ್ ಗೋ

ಹೃದಯವು ನನ್ನದಾದರೂ ಬಡಿತ ನಿನ್ನದು ಗೆಳತಿ

ಹಗಲಿರುಳು ನಿನ್ನಯ ಧ್ಯಾನವನ್ನೆ ಮಾಡುತಿರುವೆ” (ಗಜಲ್-೩)

ಇದೇ ಅಲ್ಲವೇ ಪ್ರೀತಿ ಅಂದರೆ! ಪ್ರೇಮದ ಬಂಧ ಇಂದು ನಿನ್ನೆಯದೆ? ಅದು ಜನ್ಮಾಂತರದಲೂ ಪ್ರೀತಿಸುತ ಕಾಯುವಂಥದು. ಇನ್ನೂ ಮುಂದುವರೆದು ಪ್ರೇಮದ ಪರಿಯ ಗಾಢತೆ ಎಷ್ಟೆಂದರೆ

ಈ ಜನುಮ ಸಾಲದಿರೆ ಮರು ಜನುಮ ಕಾಯ್ದಿರಿಸುವೆ

ಇತಿಹಾಸದ ಪುಟ ಸೇರಲು ತುದಿಗಾಲಲ್ಲಿ ನಿಂತಿರುವೆ”

ತನ್ನ ಪ್ರೇಮದ ಚರಿತ್ರೆಯನ್ನು ಇತಿಹಾಸದ ಪುಟಗಳಲ್ಲಿ ಅಜರಾಮರಗೊಳಿಸುವ ಬಯಕೆ ಅವನದು. ಹೀಗೇಯೆ “ಪ್ರೇಮ ಪ್ರೀತಿಯನ್ನೇನೋ ಆಕೆ ತೋರಿದಳು. ಆದರೆ ಸಪ್ತಪದಿಯನ್ನು ತುಳಿಯಲಿಲ್ಲ. “ಪ್ರೇಮವೆಂಬುದು ಧ್ಯಾನ ಎಂದು ಮನದಟ್ಟು ಮಾಡಿಸಿದಳಾದರೂ, ಅದರಿಂದ ಕದಡಿದ ಎದೆಯ ಕೊಳವನ್ನು ತಿಳಿಗೊಳಿಸುವದನ್ನು ಕಲಿಸಲಿಲ್ಲ ಎಂಬುದನ್ನು ಹೇಳುತ್ತದೆ. ನಿಜ ಪ್ರೇಮ‌ ಮೂಡುವದು ಸರಳ. ಆದರೆ ಅದನ್ನು ನಿಭಾಯಿಸುವದು ಸರಳವಲ್ಲ ಎಂಬುದು ಅವಳಿಗೆ ಗೊತ್ತಿದೆ. ಹಾಗಾಗಿ ಅದು ಪ್ರಯೋಗವಾಗದೇ ಹೋಯಿತು. ಸಿದ್ಧಾಂತ ಬಿಟ್ಟು ಪ್ರಾಯೋಗಿಕವಾಗಿ ಬದುಕುವದನ್ನು ಆಕೆ ಅರಿಯುವದು ಸಾಧ್ಯವಾಗಲಿಲ್ಲ. ಏಕೆಂದರೆ ಇಂದು ಪ್ರೀತಿಯೂ ವ್ಯವಹಾರದ ಸರಕಿನಂತಾಗಿರುವದು ಜಗತ್ತಿನ ದುರಂತವೆನಿಸಿದೆ. ಹೀಗೆ ಪ್ರೇಮದ ವಿಪಲತೆಯನ್ನು ಅನೇಕ ಗಜಲ್ಗಳು ಸೂಚಿಸುತ್ತವೆ. ಪ್ರೇಮವೆಂಬುದನ್ನು ಎಲ್ಲರೂ ಮುದ್ದಿಸಬಹುದು. ಆದರೆ ಅದನ್ನು ಒಲಿಸಿಕೊಳ್ಳುವದು ಸಾದ್ಯವಿಲ್ಲ. ಕೊನೆಗೆ ಪ್ರೇಮವನ್ನು ಸ್ನೇಹವಾಗಿ ಅರಿಯುವದೆ ಕೊನೆ ಎಂಬುದು ತಿಳಿದ ಗಜಲ್ ಗೋ ಪ್ರೇಮಿಯ ತೀರ್ಮಾನ. ಮಲ್ಲಿನಾಥರ ಗಜಲ್ಗಳ ಸಾಮಾಜಿಕ ಚಿಂತನೆ ಬಹಳ ವಿಶಿಷ್ಟವಾಗಿದೆ. ನೋವಿನ ಹೊಳೆಯೊಳಗೆ ಪೂರ್ತಿ ತೊಯ್ತದವರ ಅನುಭವ ಮಾತ್ರ ಇಷ್ಟು ದಟ್ಟವಾಗಿರಲು ಸಾದ್ಯ. ನೋವನ್ನು ಅದರ ಸಂಪೂರ್ಣ ಪ್ರಮಾಣದಲ್ಲಿ ಉಂಡ ಗಜಲ್ ಗೋ ಇಲ್ಲಿನ ಗಜಲ್ಗಳಲ್ಲಿ ತುಂಬ ವಿಸ್ತಾರವಾಗಿ ಬಿತ್ತರಿಸಿದ್ದಾರೆ. ಬಹಳ ಮಹತ್ವದ ಮಾತೆಂದರೆ ನೋವಿನಲ್ಲು ಈ ಶಾಯರ್ ಸೋತಿಲ್ಲ.‌

ಕಂಗಳಲಿ ಕಂಬನಿಯಿದ್ದರೂ ನಗುತಿರುವೆ

ಸಾವಿಗೆ ಹತ್ತಿರವಿದ್ದರೂ ಬದುಕುತಿರುವೆ”

ಎಂದು ತನ್ನ ಧೈರ್ಯವನ್ನೇ ಸಾರುತ್ತಾರೆ. ಇಂದು ಸಾಮಾಜಿಕ ಜಗತ್ತಿನಲ್ಲಿ ದುಡ್ಡು ಮುಖ್ಯವಾಗುತ್ತಿದೆ. ಇಂದು ಕಾಂಚಾಣದ ಲೋಕ. ಮನುಷ್ಯ ಸಂಬಂಧಗಳೆ ಮಾಯವಾಗಿ ರಕ್ತ ಹೊಳತಾಗಿ ದುಡ್ಡಿಗಾಗಿ ಹರಿಯುತ್ತಿರುವ ದುರಂತವನ್ನು ಅವರ ಗಜಲ್ ಗಳು ಬಿತ್ತರಿಸುತ್ತವೆ. ಬರೀ ನಾಟಕದ ಲೋಕದಲ್ಲಿ ಜೀ ಹುಜೂರ್ ಎನ್ನುವವರ ಸಂಸ್ಕೃತಿ ಬೆಳೆಯುವದ ಕಂಡು ರೋಸಿ ಹೋದ ಸ್ತಿತಿ ಗಜಲಕಾರರದು .ಇಂದು ವಿದ್ಯೆ‌ ಕೂಡ ಯಾರನ್ನೋ ಓಲೈಸುವ ವ್ಯವಸ್ಥೆಯಾಗಿದ್ದನ್ನು ೨೬ ನೆಯ ಗಜಲ್ ಸಾರುತ್ತಿದೆ.

ಪದವಿಗಳು ಸುತ್ತುವರಿದಿವೆ ರಂಗು ರಂಗಿನ ಸಮಾಜದಲ್ಲಿ

ಜಿಂದಗಿಯೂ ಮಸಣದ ಹೂವನ್ನು ಅರಳಿಸುತಿದೆ ಜಾಲಿಮ್”

ಅವ್ವನನ್ನು ಕುರಿತ ಎರಡು ಗಜಲ್ ಆತ್ಮೀಯವಾಗಿಯೇ ದುಃಖ ಹಂಚಿಕೊಳ್ಳುತ್ತವೆ. ಮಕ್ಕಳು ಒಂದರ್ಥದಲ್ಲಿ ತಾಯಿಯ ಜೀವ ತಿನ್ನುವ ಕೂಸುಗಳೇ. ಅದರಲ್ಲಿಯೂ ಬಡತನದಲ್ಲಂತೂ ಇದು ಅಕ್ಷರಶಃ ಸತ್ಯ. ಅಲ್ಲಿ ಮಕ್ಕಳು ತಾಯಿಗೆ ಕೊಡುವ ಕಷ್ಟವನ್ನು

ಅಮ್ಮ..ತಿನ್ನೊಕೆ ಸತಾಯಿಸುತ ನಿನ್ನ ಜೀವ ತಿಂದವನು ನಾನು

ನಿನ್ನ ಹಸಿವನ್ನು ಮರೆಸಿ ಉಪವಾಸ ಕೆಡವಿದವನು ನಾನು” (ಗಜಲ್ ೨೭)

ಎನ್ನುವ ಸಾಲುಗಳ ವಾಸ್ತವತೆ ಕರುಳು ಹಿಂಡುವಂತಹದು. ಬಡತನದ ನೋವೇ ಹಾಗೇ.. ಅಲ್ಲಿ ಸುಂದರ ವಾತ್ಸಲ್ಯ ಮಾತ್ರ ವಿಹರಿಸುವ ಚಿತ್ರಗಳು ಸಿಗಲಾರವು. ಬಾಳು ನೂಕುವದೇ ದುಸ್ತರವಾದಾಗ ರಮ್ಯತೆಯನೆಲ್ಲಿ ಅರಸುವದು? ಬಡತನದ ಬರ್ಭರ ಚಿತ್ರವನ್ನು ನೋಡಬೇಕೆಂದರೆ ಗಜಲ್ ೩೧ ರಲ್ಲಿ ಕಾಣಬೇಕು. ಮೊದಲ‌ ಮತ್ಲಾದಲ್ಲಿಯೇ

ಹೃದಯ ಶ್ರೀಮಂತವಾಗಿತ್ತು ಹಣೆಬರಹ ಗುಡಿಸಲಲ್ಲಿ ಕೊಳೆಯುತ್ತಿತ್ತು

ನಾನು ಒಳ್ಳೆಯವನಿದ್ದೆ ಆದರೆ ವಿಧಿ ಕೊಳಕು ಹಾಸಿಗೆಯಲ್ಲಿ ನರಳುತ್ತಿತ್ತು”

ತನ್ನ ದುರ್ದೈವ ಮತ್ತು ದುರ್ವಿಧಿಯನ್ನೇ ಹಳಿದುಕೊಳ್ಳುತ್ತ ಗಜಲಗೋ ದುಃಖಿಸುತ್ತಾನೆಯೇ ಹೊರತು ಅದಕ್ಕೆ ಕಾರಣವಾದವರನ್ನು ಹಳಿಯಲು ಹೋಗುವುದಿಲ್ಲ. ಸಾಹಿತ್ಯದ ನಿಜ ಶ್ರೀಮಂತಿಕೆಯೇ ಇದಲ್ಲವೇ? ಹೆಣ್ಣನ್ನು ಸಮಾಜ ಶೋಷಿಸಿದ ರೀತಿಯನ್ನು ಇಲ್ಲಿನ ಗಜಲ್ ಗಳು ಬೇರೆ ಬೇರೆ ರೀತಿಯಾಗಿ ಚಿತ್ರಿಸಿವೆ. ಅವ್ವನಾಗಿ, ಅಕ್ಕ-ತಂಗಿಯರಾಗಿ, ಪ್ರೇಮಿ – ಹೆಂಡತಿಯಾಗಿ, ಮಗಳಾಗಿ ಅವಳನ್ನು ಮಲ್ಲಿನಾಥ ಅವರು ಚಿತ್ರಿಸುತ್ತಾರೆ. ಪ್ರತಿಯೊಂದು ಗಜಲ್ ವಿಮರ್ಶೆ ಮಾಡಲು ಮನಸ್ಸಿದ್ದರೂ ಎಲ್ಲವನ್ನು ಎತ್ತಿ ಹೇಳುವದು ಅಸಾಧ್ಯ.

ಕನ್ನಡದಲ್ಲಿ ಸದ್ಯಕ್ಕೆ ಅತಿ ಹೆಚ್ಚು ಪ್ರಯೋಗ ಮಾಡುತ್ತಿರುವ ಗಜಲ್ಕಾರರ ಕೆಲವರ ಹೆಸರು ಹೇಳಬಹುದಾದರೆ ಅದರಲ್ಲಿ, ನನ್ನ ಓದಿನ ಮಿತಿಯಲ್ಲಂತೂ ಮಲ್ಲಿನಾಥರೇ ಅಗ್ರಗಣ್ಯರಲ್ಲಿ ಒಬ್ಬರು ಎನ್ನುವದು ನನ್ನ ಗಟ್ಟಿಯಾದ ನಂಬಿಕೆ. ಗಜಲ್ ಶಾಸ್ತ್ರ ಜ್ಞಾನ, ಪ್ರಯೋಗ ಜ್ಞಾನ ಅವರಿಗೆ ಅಧ್ಯಯನದ ಬಲದಿಂದ ಸಿದ್ದಿಸಿವೆ. ನಮ್ಮ ಹಳೆಗನ್ನಡದ ವ್ಯಾಕರಣಕಾರ, ಮೀಮಾಂಸಕರ ಹಾಗೆ ನಿಯಮಗಳನ್ನು ತಾವೆ ಕಟ್ಟಿಕೊಟ್ಟು ಅದಕ್ಕೆ ತಕ್ಕ ಪದ್ಯಗಳನ್ನು ತಾವೆ ರಚಿಸುವ ವಿಧಾನ ಇದು. ಗಜಲ್ ಸಾಹಿತ್ಯದ ಎಲ್ಲ‌ ಪ್ರಕಾರದ ಲಕ್ಷಣಗಳನ್ನು ವಿವರಿಸಿ ಅದಕ್ಕೆ ತಕ್ಕ ಲಕ್ಷಣಗಳನ್ನೂ ಅವರು ನೀಡಿರುವದು ಇಲ್ಲಿನ ವಿಶೇಷತೆ. ಜುಲ್ ಕಾಫಿಯಾ ಗಜಲ್, ಸ್ವರ ಕಾಫಿಯಾ ಗಜಲ್, ಮಾತ್ರಯಾಧಾರಿತ ಗಜಲ್, ತರಹೀ ಗಜಲ್, ಮತ್ಲಾ ಗಜಲ್, ವ್ಯಕ್ತಿ ವಿಶೆಷ ಗಜಲ್, ದಿನದ ವಿಶೇಷ ಗಜಲ್, ಸೆಹ್ ಗಜಲ್ ..ಹೀಗೆ ಕನ್ನಡದಲ್ಲಿ ಎಲ್ಲ ಪ್ರಕಾರದ ಗಜಲ್ ಸಾಧ್ಯತೆಗಳನ್ನು ಸೂರೆ ಹೊಡೆಯುತ್ತಿರುವ ಈ ಶಾಯರ್ ಇನ್ನೂ ಸಾಗುವ ದಾರಿ ಬಹು ದೀರ್ಘವಿರು ವದರಿಂದ ಇವರಿಂದ ಇನ್ನೂ ಅಧಿಕವಾದುದನ್ನು ಓದುಗ ಮತ್ತು ವಿಮರ್ಶಕ ಬಳಗ ಬಯಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಅಂತಹ ಪ್ರಬಲವಾದ ಗಜಲ್ ಓದಿನ ಹಿನ್ನೆಲೆಯೇ ಇಲ್ಲದ ನಾನು ಅವರ ಗಜಲ್ ಪರಿಚಯಿಸ ಹೊರಟಿರುವದು ಒಂದು ರೀತಿ ನನಗೆ ಅಚ್ಚರಿಯಾಗಿ ಕಂಡಿರುವದನ್ನು ಹೇಳುತ್ತ ಈ ಕೆಲ ಸಾಲಿಗೆ ವಿರಾಮ ಕೊಡುತ್ತೇನೆ.

ಪುಸ್ತಕಗಳ ಮಡಿಲಿನಲ್ಲಿ‌ ಮಲಗುತಿರುವೆ ನಾನು

ಅಂತರಂಗದ ಬೆಳಕಿನಲ್ಲಿ ಬರೆಯುತಿರುವೆ ನಾನು” (ಗಜಲ್-೪೧)


ಡಾ .ಯ.ಮಾ.ಯಾಕೊಳ್ಳಿ

One thought on “ಡಾ.ಮಲ್ಲಿನಾಥ ತಳವಾರ ಅವರ ಗಜಲ್ ಲೋಕದ ಮಲ್ಲಿಗೆ ಕಂಪು

  1. ಹರಿದಾಸ ಹಜಾರೆ ,ಯು,ಮಾದನ ಹಿಪ್ಪರಗಾ ತಾ ಆಳಂದ ಜಿಲ್ಲಾ ಕಲಬುರ್ಗಿ,ಪಿನಕೋಡ ೫೮೫೨೩೬, ಮೋ,ನಂ, ೭೨೦೪೭೬೫೯೧೭ says:

    ನನ್ನಲ್ಲಿ ಈ ಗಜಲ್ ಪರಿಭಾಷೆಯ ಕೊರತೆ ಇದೆ, ,,,ಆದರೂ ಸಹ ತಮ್ಮ ಬಾ: ಮಲ್ಲಿನಾಥ ತಳವಾರ ಇವರ ಗಜಲ್ ಲೋಕದ ,,” ಮಲ್ಲಿಗೆ ಕಂಪು ‘ ಈ ಬರಹವು ಮುದ್ದಾಗಿ ಸುಂದರವಾಗಿ ಅರ್ಥಪೂರ್ಣವಾಗಿ ನಿರೂಪಿಸಿ ಕೊಟ್ಟಿದ್ದಕ್ಕೆ,,ತುಂಬಾ ಧನ್ಯವಾದಗಳು,

Leave a Reply

Back To Top