ಅಂಕಣ ಸಂಗಾತಿ

ಸಿನಿ ಸಂಗಾತಿ

ರಾಕೆಟ್ರಿ- ದಿ ನಂಬಿ ಎಫೆಕ್ಟ್

ಭಾರತ ಬಾಹ್ಯಾಕಾಶ ಸಂಸ್ಥೆ ಕಂಡ ಅಪ್ರತಿಮ ಪ್ರತಿಭಾವಂತ ವಿವಾದಿತ ವಿಜ್ಞಾನಿ ನಂಬಿನಾರಾಯಣ್ ಅವರ ಜೀವನ ಕಥೆಯನ್ನ ಆಧರಿಸಿದ ಬಯೋಪಿಕ್ ಚಿತ್ರ – ರಾಕೆಟ್ರೀ( rocketry the nambi effect)
ಖ್ಯಾತ ಚಿತ್ರನಟ ಮಾಧವನ್ ನಟಿಸಿ ಕಥೆ, ಚಿತ್ರಕಥೆ, ನಿರ್ಮಾಣ ಹಾಗೂ ನಿರ್ದೇಶನ ಮಾಡಿರುವ ಚಿತ್ರ ರಾಕೇಟ್ರಿ ದಿ ನಂಬಿ ಎಫೆಕ್ಟ್.. ಇಂಗ್ಲೀಷ್ ತಮಿಳು ಹಾಗೂ ಹಿಂದಿಯಲ್ಲಿ ಏಕಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದು, ಕನ್ನಡ ತೆಲುಗು ಇತರ ಭಾಷೆಗಳಿಗೆ ಚಿತ್ರವು ಡಬ್ ಆಗಿದೆ.
ಚಿತ್ರದ ತಮಿಳು ಅವತರಣಿಕೆಯಲ್ಲಿ ಸೂರ್ಯ ಹಾಗೂ ಹಿಂದಿಯಲ್ಲಿ ಶಾರುಖ್ ಖಾನ್ ನಂಬಿನಾರಾಯಣ್ ರನ್ನು ಸಂದರ್ಶಿಸಿರುವುದು ಚಿತ್ರಕ್ಕೆ ಕಮರ್ಷಿಯಲ್ ಟಚ್ ಕೊಡಲು ಕಾರಣವಾಗಿದೆ.


ನಂಬಿನಾರಾಯಣನ್ ಭಾರತ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ- ಇಸ್ರೋ (ISRO) ವಿನಲ್ಲಿ ಕೆಲಸ ಮಾಡಿದ ಅತ್ಯಂತ ಮೇಧಾವಿ ವಿಜ್ಞಾನಿ. ಕ್ರಯೋಜನಿಕ್ ತಂತ್ರಜ್ಞಾನವನ್ನು ರಾಕೆಟ್ ಇಂಜಿನ್ ಗಳಲ್ಲಿ ಬಳಸುವಿಕೆಯ ಕುರಿತಂತೆ ನಂಬಿ ಅವರದು ಮುಖ್ಯ ಸಂಶೋಧನೆ, ರಾಕೆಟ್ ವಿಜ್ಞಾನಿ ಎಂದೇ ಅವರು ಪ್ರಚಲಿತರು.
ತಮ್ಮ ಮಹತ್ವದ ಸಂಶೋಧನೆಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐ ಎಸ್ ಐ ಗೆ ಮಾರಾಟ ಮಾಡಿದ ಆರೋಪದಡಿ ಬಂಧಿಸಲ್ಪಡುವ ಈ ವಿಜ್ಞಾನಿ ತಮ್ಮ ದಶಕಗಳ ಕಾಲದ ಕಾನೂನು ಸಮರದ ಮೂಲಕ ತಮ್ಮ ಮೇಲಿನ ಆರೋಪ ಸುಳ್ಳು ಎಂಬುದನ್ನು ನಿರೂಪಿಸುತ್ತಾರೆ.
ವಿಜ್ಞಾನಿಯಾಗಿ ಅವರ ಸಾಧನೆಗಳು, ನಂತರದ ಅವರ ಜೀವನದಲ್ಲಿ ನಡೆದ ಘಟನೆಗಳೆಲ್ಲವುಗಳ ಚಿತ್ರಣವೇ ರಾಕೆಟ್ರೆ ಸಿನಿಮಾ.
ನಂಬಿನಾರಾಯಣನ್ ರವರು ವಿಜ್ಞಾನಿಯಾಗಿ ಬೇರೆ ಬೇರೆ ದೇಶಗಳಿಗೆ ಪ್ರಯಾಣ ಮಾಡುತ್ತಾರೆ. ಫ್ರಾನ್ಸ್ ಸ್ಕಾಟ್ಲಂಡ್, ರಷ್ಯಾ, ಅಮೆರಿಕ ದೇಶದ ನಾಸಾದಲ್ಲಿ ಅವರ ಸಂಶೋಧನೆ ನಡೆಯುತ್ತದೆ. ರಾಕೆಟ್ಗಳಲ್ಲಿ ಕ್ರಯೋಜನಿಕ್ ಎಂಜಿನ್ ಗಳ ಬಳಕೆ ಕುರಿತಂತೆ ನಂಬಿಯವರು ನಡೆಸುವ ಸಂಶೋಧನೆಯ ಸುದೀರ್ಘ ವಿಜ್ಞಾನ ಯಾತ್ರೆಯ ಚಿತ್ರಣ ಮೊದಲ ಭಾಗವಾದರೆ, ಅವರ ಜೀವನದ ದುರಂತ ಘಟನೆಯ ಚಿತ್ರಣ ಎರಡನೆಯ ಭಾಗದಲ್ಲಿದೆ.


ವಿಜ್ಞಾನದ ಒಂದು ಸಾಕ್ಷ ಚಿತ್ರದಂತೆ ಮೊದಲ ಭಾಗ ಭಾಸವಾಗುತ್ತದೆ. ಸಂಶೋಧನೆಗಳ ಹಲವು ಉಪಯುಕ್ತ ಮಾಹಿತಿಗಳು ಇಲ್ಲಿವೆ. ನಂಬಿ ಅವರ ಸಂಶೋಧನೆಗೆ ಪ್ರೋತ್ಸಾಹ ನೀಡಿದ ಸತೀಶ್ ಧವನ್ ಯು ಆರ್ ರಾವ್ ಮತ್ತು ಅವರ ಸಮಕಾಲಿನ ಅಬ್ದುಲ್ ಕಲಾಂ ಈ ಎಲ್ಲ ವಿಜ್ಞಾನಿಗಳ ಪಾತ್ರಗಳು ಚಿತ್ರದಲ್ಲಿವೆ.
ನಂಬಿಯವರನ್ನು ಅಪ್ರತಿಮ ದೇಶಭಕ್ತರಂತೆ ತೋರಿಸಲಾಗಿದೆ. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ದಲ್ಲಿ ಸಂಶೋಧಕರಾಗಿ ಸಿಕ್ಕ ಆಹ್ವಾನವನ್ನು ತಿರಸ್ಕರಿಸಿ ನಂಬಿಯವರು ಭಾರತದ ಇಸ್ರೋಗೆ ಸೇರುವುದು ಅವರ ದೇಶಾಭಿಮಾನಕ್ಕೆ ಪುಷ್ಠಿ ನೀಡುತ್ತದೆ.
ರಷ್ಯಾದ ಹಿಮಚ್ಛಾದಿತ ಪ್ರದೇಶದಿಂದ ರಾಕೆಟ್ ಇಂಜಿನ್ ಭಾಗಗಳನ್ನು ಹೊತ್ತು ತರುವ ದೃಶ್ಯಗಳು ನಂಬಿಯವರನ್ನು ಜೇಮ್ಸ್ ಬಾಂಡ್ ಚಿತ್ರಗಳ ನಾಯಕರಂತೆ ಬಿಂಬಿಸಲಾಗಿದೆ.
ಚಿತ್ರದ ಕೆಲವೊಂದು ಕಡೆ ಅವರು ಏಕಮುಖವಾಗಿ ವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಷ್ಟೊಂದು ಸಮಂಜಸವೆನಿಸುವುದಿಲ್ಲ. ಅವರೊಬ್ಬರನ್ನೇ ಅಪ್ರತಿಮ ನಾಯಕರಂತೆ ಚಿತ್ರಿಸುವ ಪ್ರಯತ್ನ ಇಲ್ಲಿದ್ದು ವಾಸ್ತವಿಕತೆಗೆ ಸ್ವಲ್ಪ ದೂರವಾಯಿತೇನೋ ಎಂದು ಅನಿಸುತ್ತದೆ.
ಚಿತ್ರದ ದ್ವಿತೀಯ ಭಾಗದಲ್ಲಿ ಅವರು ಅನುಭವಿಸುವ ಮಾನಸಿಕ ಹಿಂಸೆ ಮನಸ್ಸಿಗೆ ತಟ್ಟುವಂತಿದೆ. ಅವರ ಮೇಲಿನ ಆರೋಪದಿಂದಾಗಿ ಸಮಾಜದಲ್ಲಿ ಅವರಿಗುಂಟಾಗುವ ತೇಜೋವಧೆ, ಅವರ ಹೆಂಡತಿ ಮಕ್ಕಳನ್ನು ಸಮಾಜ ತುಚ್ಛೀಕರಿಸುವುದನ್ನು ಯಥಾವತ್ತಾಗಿ ಚಿತ್ರೀಕರಿಸಲಾಗಿದೆ.
ವಿಜ್ಞಾನ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆ ನೀಡಿದ ವಿಜ್ಞಾನಿಯನ್ನು ಅವರು ದೇಶಕ್ಕೆ ಸಲ್ಲಿಸಿದ ಸೇವೆ, ತ್ಯಾಗ ಎಲ್ಲವನ್ನು ಮೂಲೆಗುಂಪಾಗಿಸಿ, ಅವರನ್ನು ದೇಶದ್ರೋಹಿ ಎಂದು ಸೆರೆ ಹಿಡಿಯುವುದು ಮತ್ತು ಲಾಕಪ್ ನಲ್ಲಿ ನಂಬಿಯವರಿಗೆ ನೀಡಿದ ಚಿತ್ರಹಿಂಸೆ ದಾರಣವೆನಿಸಿದೆ. ಈ ಎಲ್ಲಾ ಘಟನೆಗಳನ್ನು ಮನ ಮುಟ್ಟುವಂತೆ ಮಾಧವನ್ ಚಿತ್ರಿಸಿದ್ದಾರೆ.


ಮಧ್ಯಮ ವರ್ಗದ ನಂಬಿ ಅವರ ಮನೆ, ಮನೆಯ ಸದಸ್ಯರು , ಮಧ್ಯಮ ವರ್ಗದ ಮೆಂಟಾಲಿಟಿ, ನಂಬಿಯವರಿಗೆ ಅವರ ಕುಟುಂಬದ ಮೇಲೆ ಇದ್ದ ಅಟ್ಯಾಚ್ಮೆಂಟ್ ಚಿತ್ರತವಾಗಿದ್ದು ಅವರು ಹೇಗೆ ಫ್ಯಾಮಿಲಿ ಮ್ಯಾನ್ ಆಗಿದ್ದರು ಎಂಬುದಕ್ಕೆ ಪೂರಕವಾಗಿದೆ.
ನಂಬಿ ನಾರಾಯಣನ್ ಸಾಧನೆ ,ಸಂಘರ್ಷ ಎಲ್ಲವುಗಳ ಸಂಪೂರ್ಣ ಚಿತ್ರಣ ರಾಕೆಟ್ ರಿ ಒಂದು ಹೊಸ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.
ಮನರಂಜನೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಚಿತ್ರ ನೋಡಲು ಹೋದರೆ ನಿರಾಶೆಯಾಗುತ್ತದೆ. ನಂಬಿ ಅವರ ಪಾತ್ರದಲ್ಲಿ ಸ್ವತಹ ಮಾಧವನ್ ಅಭಿನಯಿಸಿದ್ದು , ಉತ್ತಮ ನಟನೆ ನೀಡಿದ್ದಾರೆ. ನಂಬಿಯವರ ಪತ್ನಿಯ ಪಾತ್ರದಲ್ಲಿ ( ಮೀನ) ಸಿಮ್ರನ್ ಉತ್ತಮ ನಟನೆ ನೀಡಿದ್ದಾರೆ. ಅವರ ಪ್ರತಿಭಾಪ್ರದರ್ಶನಕ್ಕೆ ಇಲ್ಲಿ ಅಷ್ಟೊಂದು ಅವಕಾಶವಿಲ್ಲ.
ಚಿತ್ರದಲ್ಲಿ ಬರುವ ಹಲವು ವಿಜ್ಞಾನಿಗಳ ಪಾತ್ರಗಳಲ್ಲಿ ಅನೇಕರು ಚೆನ್ನಾಗಿ ನಟಿಸಿದ್ದಾರೆ. ನಟನೆಯಲ್ಲಿ ಸಂಪೂರ್ಣ ಅಂಕ ಮಾಧವನ್ ಗೆ ಲಭಿಸಿದರೆ ನಿರ್ದೇಶನಕ್ಕೇ ಅವರು ಹಾಕಿರುವ ಶ್ರಮವನ್ನು ಅಲ್ಲಗಳೆಯಲಾಗದು.
ಚಿತ್ರದ ಕೊನೆಯ ಭಾಗದಲ್ಲಿ ನಂಬಿ ನಾರಾಯಣ್ ಅವರು ತಮ್ಮ ಮೇಲೆ ಬಂದ ಆರೋಪದ ವಿರುದ್ಧ ದಶಕಗಳ ಕಾಲ ನಡೆದ ಹೋರಾಟ, ಅದರಲ್ಲಿ ತಮಗೆ ಸಿಕ್ಕ ಜಯ ಇವುಗಳ ಬಗ್ಗೆ ಸಮಾಧಾನ ವ್ಯಕ್ತಪಡಿಸುತ್ತಾರೆ. ದೋಷ ಮುಕ್ತರಾದ ನಂಬಿಯವರಿಗೆ ಭಾರತ ದೇಶ ಪದ್ಮಭೂಷಣ ಪ್ರಶಸ್ತಿ ನೀಡುತ್ತದೆ. ಅದಕ್ಕೆ ಅವರು ಸಂತೋಷ ವ್ಯಕ್ತಪಡಿಸುತ್ತಾರೆ. ಆದರೆ ತಮ್ಮ ವೃತ್ತಿ ಜೀವನವನ್ನು ಕೊನೆಗಾಣಿಸಲು ನಡೆದ ಸಂಚಿನ ರೂವಾರಿ ಯಾರು? ಆ ಘಟನೆಗಳ ಹಿಂದಿರುವ ಶಕ್ತಿ ಯಾವುದು ಎಂಬುದನ್ನು ತನಿಖೆ ನಡೆಸಿ ನಿಜಾಂಶ ಹೊರ ಜಗತ್ತಿಗೆ ತಿಳಿಸಿದ್ದರೆ ಅದು ತನಗೆ ನೀಡುವ ಅತ್ಯಂತ ದೊಡ್ಡ ಪ್ರಶಸ್ತಿ ಆಗುತ್ತಿತ್ತು ಎಂಬ ಅವರ ಮಾತು ಉಲ್ಲೇಖನೀಯ.
ದೇಶಕ್ಕಾಗಿ ದುಡಿಯುವ ನಮ್ಮ ವಿಜ್ಞಾನಿಗಳನ್ನು ನಡೆಸಿಕೊಳ್ಳುವ ಪರಿ ಬದಲಾಗಬೇಕು, ವೈಜ್ಞಾನಿಕ ಸಂಶೋಧನೆಗಳಿಗೆ ಮತ್ತಷ್ಟು ಒತ್ತು ನೀಡಬೇಕಾಗಿರುವುದು ಈಗಿನ ಅಗತ್ಯವೂ ಹೌದು.
ಒಟ್ಟಾರೆಯಾಗಿ ಈ ದೇಶಕ್ಕಾಗಿ ದುಡಿದ ಒಬ್ಬ ವಿಜ್ಞಾನಿಯ ಜೀವನ ಕಥೆಯನ್ನಾಧರಿಸಿದ ಈ ಚಿತ್ರ ವಿಭಿನ್ನವಾಗಿದ್ದು ಒಳ್ಳೆಯ ಚಿತ್ರಗಳ ಸಾಲಿಗೆ ಸೇರುತ್ತದೆ..


ಕುಸುಮ ಮಂಜುನಾಥ.

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.


Leave a Reply

Back To Top