ನಾನು ದ್ರೌಪದಿಯ ಆತ್ಮ

ಕಾವ್ಯ ಸಂಗಾತಿ

ನಾನು ದ್ರೌಪದಿಯ ಆತ್ಮ

ಶಾಂತಾ ನಾಗಮಂಗಲ

ಬಾಲ್ಯ ಶೈಶವಗಳ ಕಾಣಲಿಲ್ಲ
ತಾಯ್ಮಡಿಲ ಸುಖವುಣ್ಣಲಿಲ್ಲ
ತಾಯ್ತಂದೆಯರು  ಸುಖಪಟ್ಟ
ಸಮಯದಲಿ ಫಲಿತ ಫಲವಲ್ಲ

ಅಪ್ಪನಿಗೆ ಪ್ರತೀಕಾರದ ವಾಂಛೆ
ಯಜ್ಞಕುಂಡವೇ ಕ್ಷೇತ್ರವಾಯ್ತವಗೆ
ಹವಿಸ್ಸಿಗೂ ಬರಲಿಲ್ಲವಂತೆ ಅಮ್ಮ
ಅಮ್ಮನಿಗೇನಿತ್ತೋ   ವಾಂಛೆ

ಗೆಳೆಯ ಮಾಡಿದವಮಾನ
ಮಗನ ಪಡೆವುದರ ಗುಟ್ಟು
ಮಗಳೇಕೆ ಬೇಕಿತ್ತು  ಅಪ್ಪಗೆ
ಕೀರ್ತಿಶನಿ  ಅಳಿಯನಾದನೆ

ಅಮ್ಮ  ಹೊತ್ತು ಹೆತ್ತಿದ್ದರೆ ನನ್ನ
ಹಾಸಿಗೆಯ ಹಂಚ ಬಿಡುತ್ತಿದ್ದಳೆ
ಪಾಂಡವರ ಬೊಡ್ಡಿಯೆಂದವನ
ಕಾದ ಸರಳ ನುಡಿ ಕೇಳಿಸುತ್ತಿದ್ದಳೆ

ದ್ವಾಪರಕೆ ಮುಗಿಯಿತೇನು
ನುಡಿ ಶೂಲದಿ  ದ್ರೌಪದಿಯ
ಚುಚ್ಚುವ ಮುಗ್ಧತೆ ನಟಿಸುವ
ಹೀನ ಕೌರವ ಸಂತಾನ ಸರಣಿ

ದ್ರುಪದ ನಂದನೆಯೊ ಮತ್ತಾರೊ
ದ್ರೌಪದಿ ಈ ಹೆಸರಲ್ಲೇ ದೋಷವೇ
ಸಂಕಟಗಳ ನೋವಿನ ವೈಕಟ್ಯವೇ
ಕೇಳಿದೊಡನೆ ಚುಚ್ಚ ಬೇಕೆನಿಸುವುದೆ


Leave a Reply

Back To Top