ಗಾಢವಾಗಿ ಮೋಹ ತುಂಬುವ – ‘ಪರಿಮಳಗಳ ಮಾಯೆ’

ಪುಸ್ತಕ ಸಂಗಾತಿ

ಗಾಢವಾಗಿಮೋಹತುಂಬುವ

ಪರಿಮಳಗಳಮಾಯೆ

ಗಾಢವಾಗಿ ಮೋಹ ತುಂಬುವ – ‘ಪರಿಮಳಗಳ ಮಾಯೆ

ಓದುಗರನ್ನು ಸೆರೆ ಹಿಡಿಯುವ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಲಲಿತ ಪ್ರಬಂಧಗಳದ್ದು ಜನಪ್ರಿಯ ಮಾದರಿ ಎನ್ನಬಹುದು. ಕತೆ, ಕಾದಂಬರಿಗೆ ಅಪಾರ ಸಂಖ್ಯೆಯಲ್ಲಿ ಓದುಗರಿರುವಂತೆ, ಲಲಿತ ಪ್ರಬಂಧಗಳಿಗೂ ಬಹಳ ಜನಮನ್ನಣೆ ಇದೆ. ಲಲಿತ ಪ್ರಬಂಧಗಳು ಬರಹಗಾರರ ವಿಶಿಷ್ಟ ಶೈಲಿಯನ್ನು ಸಹ ಕ್ಯಾರಿ ಮಾಡುತ್ತವೆ. ಪ್ರತೀ ಬರಹಗಾರರಿಗೂ ಅವರದ್ದೇ ಆದ ಓದುಗವರ್ಗ ಇರುತ್ತದೆ. ಹಾಗೆಯೇ ಓದುಗರು ಸಹ ಬರಹಗಾರರ ಹೆಸರನ್ನ ನೋಡದೇ ಅವರ ಬರಹದ ಶೈಲಿ ಹಾಗೂ ವಿಷಯ ಪ್ರಸ್ತುತಿಯನ್ನು ನೋಡಿಯೇ ಇದು ಇಂತಹ ಲೇಖಕರದ್ದೇ ಎಂದು ಖಚಿತವಾಗಿ ಹೇಳಿಬಿಡುತ್ತಾರೆ. ಇದು ಲಲಿತ ಪ್ರಬಂಧಗಳ ಮೋಡಿ.

ಬರಹಗಾರರಲ್ಲಿ ಲಿಂಗ ಬೇಧ ಮಾಡಬಾರದು. ಆದರೂ ಸಾಹಿತ್ಯ ವಲಯದಲ್ಲಿ ಪದೇಪದೇ ಮಹಿಳಾ ಬರಹಗಾರರಿಗೆ ಲಲಿತ ಪ್ರಬಂಧಗಳು ಸೂಕ್ತ ಎಂಬ ಒಂದು ಮಾತು ಕೇಳಿಬರುತ್ತಿರುತ್ತದೆ. ಅದರಲ್ಲೂ ಅವರ ಸಹಜ ಬದುಕನ್ನು, ಜೀವನ ಶೈಲಿಯನ್ನು ಚಿತ್ರಿಸುವುದಕ್ಕೆ, ಸುಖ ದುಃಖ, ದುಗುಡ ದುಮ್ಮಾನ ಸಮ್ಮಾನಗಳನ್ನು ಸುಲಲಿತವಾಗಿ ಅಭಿವ್ಯಕ್ತಪಡಿಸುವುದಕ್ಕೆ ಪ್ರಬಂಧ ಮಾದರಿಯ ಬರಹಗಳು ಲೇಖಕಿಯರಿಗೆ ಅನುಕೂಲಕರ ಎಂಬುದರ ಕುರಿತಾಗಿ ಈ ಮಾತಿರುತ್ತದೆ. ಈ ಹೇಳಿಕೆಯನ್ನು ಅಪಹಾಸ್ಯ ಎಂದೋ, ಮಹಿಳಾ ಬರಹಗಾರರ ಬರವಣಿಗೆ ಕುರಿತು ಹಾಕುತ್ತಿರುವ ಮಿತಿ ಎಂದೋ ಕನಲ ಬೇಕಿಲ್ಲ ಎನ್ನುವುದು ನನ್ನ ಅಭಿಮತ. ಬರಹಗಾರರಿಗೆ ಒಳತುಡಿತವನ್ನು ಅಭಿವ್ಯಕ್ತ ಪಡಿಸಬೇಕಾಗಿರುವುದು ಪ್ರಥಮ ಆದ್ಯತೆಯಾಗಿರುವಾಗ, ಒಲಿದ ಪ್ರಕಾರವನ್ನು ಅಪ್ಪಿಕೊಳ್ಳುವುದರಲ್ಲಿ ಯಾವ ಅಪರಾಧವೂ ನನಗೆ ಕಾಣುವುದಿಲ್ಲ.

ಇಷ್ಟು ವಿಷಯ ಪ್ರಸ್ತಾಪಿಸಲು ಕಾರಣ, ನನ್ನ ಗೆಳತಿ ಶ್ರೀಮತಿ ಸಮತಾ ಆರ್.‌ ಅವರ ಲಲಿತ ಪ್ರಬಂಧಗಳ ಸಂಗ್ರಹವಾದ ಚೊಚ್ಚಲ ಕೃತಿ ʼಪರಿಮಳಗಳ ಮಾಯೆʼ.

ಅತ್ಯಂತ ಸಹಜ ನಿರೂಪಣೆ ಹಾಗೂ ಸೊಗಸಾದ ಲಯದ ಕಾರಣಕ್ಕಾಗಿ ʼಪರಿಮಳಗಳ ಮಾಯೆʼ ಓದುಗರ ಮನಸ್ಸೂರೆಗೊಳ್ಳುತ್ತದೆ. ಪುಸ್ತಕ ಹಿಡಿದರೆ ಸಮಯದ ಪರಿವೆಯೇ ಆಗದು. ಎಲಿಯೂ ಬೇಸರ ಹುಟ್ಟಿಸದೇ, ಒಂದು ಸಣ್ಣ ನಿಲಗಡೆ ಬಯಸದೆ ಓಡುವ ಎಕ್ಸ್‌ ಪ್ರೆಸ್‌ ರೈಲಿನ ವೇಗ ಓದುವ ಕಣ್ಣುಗಳಿಗೆ ಬಂದುಬಿಡುತ್ತದೆ. ಇಲ್ಲಿಯ ಪ್ರಬಂಧಗಳು ಲಾಲಿತ್ಯಪುರ್ಣವಾಗಿವೆ. ಬರಹಗಳೊಳಗಿನ ಲಾಸ್ಯ, ಲಯ, ಲವಲವಿಕೆ ಗಮನಾರ್ಹವಾದುದು. ಇದರೊಳಗೆ ರಾಜತಾಂತ್ರಿಕ ನೈಪುಣ್ಯದ ವಿಚಾರವಿಲ್ಲ, ರಾಕೆಟ್‌ ಸೈನ್ಸ್‌ ಬಗ್ಗೆ ಮಾತನಾಡುವುದಿಲ್ಲ…… ಎಂದು ರೂಢಿ ಮಾತಿನಲ್ಲಿ ಹೇಳಬಹುದಾದರೂ, ಇದರಲ್ಲಿರುವ ಸರ್ವೇ ಸಾಮಾನ್ಯ ಬದುಕಿನ ವಿಚಾರಗಳನ್ನು ಬರಹಗಾರ್ತಿ ಹೇಳಿರುವ ರೀತಿಯಿಂದ ಹಿರಿದಾದ ಮಹತ್ವ ಆ ವಿಷಯಗಳಿಗೆ ಪ್ರಾಪ್ತಿಯಾಗುತ್ತವೆ. ಅನುದ್ದೇಶದಿಂದ, ಸಾಮಾನ್ಯ ಲಹರಿಯಲ್ಲಿ ಬರೆದಿದ್ದರೂ ಓದುಗರ ಭಾವನೆಗೆ ಅವು ದಕ್ಕುವ ಪರಿ ಅನನ್ಯವಾದುದು.  ನಿರುಮ್ಮಳಭಾವದಲ್ಲಿ ತಮ್ಮ ಬದುಕಿನ, ಕಂಡು ಕೇಳಿದ ಜೀವನದ ಬಗ್ಗೆ ಬರೆದುಕೊಂಡರೂ ತಮಗೆ ಅರಿವಿಲ್ಲದಂತೆ, ಗಹನವಾದ ವಿಚಾರವನ್ನು, ಆ ವಿಚಾರದೊಳಗೊಂದು ಚಿಂತನೆಯನ್ನು ಓದುಗರಿಗೆ ಮುಟ್ಟಿಸಿಬಿಡುತ್ತಾರೆ. ಹಾಗಾಗಿಯೇ ಈ ಬರಹಗಳನ್ನು ಪದೇ ಪದೇ ತಾಜಾ ಎನಿಸುವಂತೆ ಓದಬಹುದು. ಇದು ಈ ಕೃತಿಯ ಮೊದಲ ಯಶಸ್ಸು.

ಮುನ್ನುಡಿಯ ಮಾತಿನಲ್ಲಿ ಶ್ರೀ ಪುರುಷೋತ್ತಮ ಬಿಳಿಮಲೆ ಅವರು ಸಮತಾ ಅವರ ಬರವಣಿಗೆಯ ಶಕ್ತಿಯನ್ನು ಸಮರ್ಥವಾಗಿ ಗುರುತಿಸಿ ಬೆನ್ನುತಟ್ಟಿ ಮನದುಂಬಿ ಹಾರೈಸಿದ್ದಾರೆ. “ಎಷ್ಟೋ ಬಾರಿ ಇಲ್ಲಿನ ಪ್ರಬಂಧಗಳನ್ನುಓದುತ್ತಾ ನಾನು ನನ್ನಷ್ಟಕ್ಕೇ ಮುಗುಳ್ನಕ್ಕದ್ದುಂಟು. ಆದರೆ ಮರುಕ್ಷಣದಲ್ಲಿ ಒಂದು ಬಗೆಯ ವಿಷಾದಕ್ಕೂ ಜಾರಿದ್ದೇನೆ. ಇದು ಚಾರ್ಲಿ ಚಾಪ್ಲಿನ್‌ ಸಿನೆಮಾಗಳ ಹಾಗೆ. ನಗಿಸುವುದೊಂದೇ ಅವುಗಳ ಗುರಿಯಲ್ಲ.‌ ಅದರೊಂದಿಗೆ ವಾಸ್ತವದ ಬಗೆಗೆ ನಮ್ಮ ತಿಳಿವಳಿಕೆಗಳನ್ನು ಅವು ಹೆಚ್ಚಿಸುತ್ತವೆ…..” ಎಂದು  ಪುಸ್ತಕದೊಳಗಿನ ಬರಹಗಳ ತಾತ್ವಿಕ ಆಯಾಮವನ್ನು ವಿಶ್ಲೇಷಿಸುತ್ತಾರೆ.

ಸಮಾಜದಲ್ಲಿ ಅತ್ಯಂತ ಗೌರವದ ವೃತ್ತಿ ಎಂದು ಪರಿಗಣಿಸಲಾಗಿರುವ ಶಿಕ್ಷಕ ವೃತ್ತಿಯಲ್ಲಿರುವ ಸಮತಾ ಅವರು ಪ್ರವೃತ್ತಿಯಾಗಿ ಬರವಣಿಗೆಯನ್ನು ರೂಢಿ ಮಾಡಿಕೊಂಡಿದ್ದು, ಅವರೊಬ್ಬ ಪ್ರವೀಣ ಬರಹಗಾರರಂತೆ ತೋರುತ್ತಾರೆ. ಬಾಲ್ಯಕಾಲದ ಓದು, ಅಪ್ಪನ ಪ್ರೇರೇಪಣೆ ಅವರ ಬರಹದ ಹದಕ್ಕೆ ಕಾರಣವಾಗಿವೆ ಎಂದು ಹೇಳಬಹುದಾದರೂ, ಅವರ ಜೀವನಾನುಭವ, ಹಾಸ್ಯ ಪ್ರಜ್ಞೆ ಬರಹಗಳ ಸೊಗಸನ್ನು ವಿಸ್ತರಿಸುತ್ತವೆ.

 ʼಪರಿಮಳಗಳ ಮಾಯೆʼಯ ಬರಹಗಳಲ್ಲಿ ಹಾಸ್ಯವಿದೆ. ಆದರೆ ಎಲ್ಲಿಯೂ ನಗೆ ಉಕ್ಕಿಸುವ ಹಲವಾರು ಪ್ರಸಂಗಗಳ ನಿರೂಪಣೆಯಲ್ಲಿ ಅವರು ಸಂಯಮದ ಗೆರೆ ದಾಟುವುದಿಲ್ಲ. ಬೇರೆಯವರನ್ನು ಅಪಹಾಸ್ಯ ಮಾಡುವುದಿಲ್ಲ. ತಮ್ಮ ಕಾಲನ್ನು ತಾವೇ ಎಳೆದುಕೊಳ್ಳುತ್ತಾ ಸ್ವವಿಮರ್ಶೆಯಲ್ಲಿ ತೊಡಗಿಕೊಳ್ಳುತ್ತಾ ಸಮಾಜವನ್ನು ವಿಮರ್ಶಾತ್ಮಕವಾಗಿ ನೋಡುವ ಬಗೆಯನ್ನು ಓದುಗರಿಗೆ ದಾಟಿಸಿ ಬಿಡುತ್ತಾರೆ. ಅಹಂಭಾವದ ಸುಳಿವೇ ಇಲ್ಲದ ಸರಳ ಪ್ರಸ್ತುತಿ ಇಲ್ಲಿನ ಪ್ರಬಂಧಗಳು ಆಪ್ತವಾಗಲು ಪ್ರಧಾನ ಕಾರಣಗಳಾಗಿವೆ.

 ಮಹಿಳಾ ಸಮಾನತೆ, ಶಿಕ್ಷಣದ ಮಹತ್ವ, ಮಹಿಳೆಯರಿಗೆ ಅಗತ್ಯವಾಗಿ ಬೇಕಾದ ಆಧುನಿಕ ಗ್ಯಾಜೇಟ್‌ ಲೋಕದ ಕಲಿಕೆ ಮುಂತಾದುವನ್ನು ಸಮತಾ ಸದ್ದುಗದ್ದಲವಿಲ್ಲದೇ ಆದರೆ  ಬಹಳ ಸ್ಪಷ್ಟವಾಗಿ ಹೇಳುತ್ತಾರೆ. ಏನೋ ಮಾತಿಗೆ ಹೇಳಿದ್ದಾರೆ ಬಿಡು ಎಂದು ನಿರ್ಲಕ್ಷಿಸುವಂತಿಲ್ಲ. ಅವು ಮನಸ್ಸಿಗಿಳಿದು ಆಲೋಚನೆಗೆ ಹಚ್ಚುತ್ತವೆ.

ʼನಾಳೆ ಅಡುಗೆ ಏನು ಮಾಡುವುದು?!ʼ ಎಂಬ ಲೇಖನದಲ್ಲಿ, ವಿವಾಹ ಪೂರ್ವದಲ್ಲಿ ಹಾಗೂ ವಿವಾಹಾನಂತರದ ಗಂಡು ಹೆಣ್ಣಿನ ಜೀವನವನ್ನು ವಿಶ್ಲೇಷಿಸುತ್ತಾ, “ಮದುವೆ ನಂತರವೂ ಹೆಂಡತಿ ಅದೇ ರೀತಿ ಅಡುಗೆ ಮಾಡಿದರೆ ಈ ಗಂಡಸರು ಒಪ್ಪುವರೇನು! ವೈವಿಧ್ಯವಿಲ್ಲದಿದ್ದರೆ ಬರೀ ಅಡುಗೆಯೇನು, ಜೀವನವೇ ನೀರಸವಲ್ಲವೇ? ಹಾಗಾಗಿ ಹೆಂಗಸರ ಎಷ್ಟು ತಲೆ ನೋವಾದರೂ ತಮ್ಮ ವರೈಟಿ ವರೈಟಿ ಅಡುಗೆ ಬಿಡಲಾರರು.” ಎನ್ನುತ್ತಲೇ ಹೆಂಗಸರಿಗೆ ಬಂಧನವಾಗುವುದನ್ನೂ ಆಕೆ ಹೇಗೆ ವಿಶೇಷ ಮಾಡಿಕೊಳ್ಳುತ್ತಾಳೆಂಬುದನ್ನು ಧನಾತ್ಮಕವಾಗಿ ಹೇಳುತ್ತಾರೆ. ಸಮತಾ ಅವರ ಒಟ್ಟೂ ಬರವಣಿಗೆಯೊಳಗಿನ ಹೂರಣವೇ ಇದು. ಹೆಣ್ಣು ಬದುಕನ್ನು ಎಷ್ಟೇ ಹಳಿದುಕೊಂಡರೂ, ಅದರೊಳಗಿನ ಬೆಳಕನ್ನು, ಆ ಬೆಳಕಿನ ಮೂಲಕ ಜಗವ ಗೆಲ್ಲುವ ಛಲವನ್ನೂ ಸಾಧ್ಯತೆಯನ್ನೂ ಅವರು ಸಮರ್ಥಿಸುತ್ತಾ ಸಾಬೀತುಪಡಿಸುತ್ತಾರೆ.

ಇಲ್ಲಿನ ಬರಹಗಳನ್ನು ಓದುತ್ತಾ ಓದುತ್ತಾ… ಅರೆ, ಈ ಲೇಖಕಿ ವಿಶೇಷವಾದುದನ್ನೇನೂ ಹೇಳುತ್ತಿಲ್ಲವಲ್ಲ ಎಂದೆನಿಸಿದ ಮರುಕ್ಷಣವೇ ಈ ಬರಹಗಳೊಳಗೆ ಯಾವುದೂ ಉತ್ಪ್ರೇಕ್ಷೆ ಆಗಿಲ್ಲ ಎನ್ನುವುದೂ ಹೊಳೆದುಬಿಡುತ್ತದೆ. ಹೀಗೆ ಪ್ರಾಮಾಣಿಕ ಅಭಿವ್ಯಕ್ತಿಯೇ ಸಮತಾ ಅವರ ಮೊದಲ ಗೆಲುವು ಆಗಿದೆ. ಪ್ರತೀ ಲೇಖನಗಳೊಳಗೆ ಅವರು ಕೊಡುವ ಗಾದೆ, ನುಡಿಗಟಟುಗಳು, ಗ್ರಾಮ್ಯ ಬದುಕಿನ ಚಿತ್ರಣ, ಆಧುನಿಕತೆ ಹಾಗೂ ಹಳ್ಳಿಯ ಮುಖಾಮುಖಿ ಅವರ ಸಮಕಾಲೀನರಾಗಿರುವ ನನ್ನಂಥವರಿಗೆ ಬೇರೆ ಏನನ್ನೋ ದಕ್ಕಿಸಿಕೊಡುತ್ತವೆ. ಈ ಬರಹಗಳೊಳಗೆ ನಮ್ಮ ಬದುಕಿನ ಹಾಡುಗಳಿವೆ. ಅದನ್ನು ಪುಸ್ತಕ ಓದುವ ಮೂಲಕ ನಾವೇ ಹಾಡಿಕೊಳ್ಳಬೇಕು. ಅವು ಆಗಾಗ್ಗೆ ಗುನುಗುವಂತಹ ಸುಖದಾ ಸ್ವಪ್ನ ಗಾನಗಳಾಗುಳಿಯುತ್ತೆ…!

ಸಮತಾ ಅವರ ಹಲವು ಲೇಖನಗಳನ್ಕೊನು ಅಲ್ನೆಲಲಿ ಓದಿ ಅವರಿಗೆ ನನ್ನ ಅಭಿಪ್ರಾಯ ಹೇಳುತ್ತಿದ್ದುದುಂಟು. ಬಿಡಿ ಲೇಖನಗಳನ್ನು ಹಿಡಿಯಾಗಿ ಓದಿದ ಮೇಲೆ ಹೇಳಬೇಕೆನಿಸಿದ ಈ ಮಾತು ಬರಿಯ ಮಾತಲ್ಲ. ನನ್ನ ಪ್ರಾಮಾಣಿಕ ಅನಿಸಿಕೆ….. “ಸಮತಾರ  ʼಪರಿಮಳಗಳ ಮಾಯೆʼ ಕನ್ನಡದ ಅತ್ಯುತ್ತಮ ಲಲಿತ ಪ್ರಬಂಧಗಳ ತೋಟ ಹೊಕ್ಕರೆ, ಅಲ್ಲಿರುವ ಗಾಢ ಮೋಹಕ ಪರಿಮಳ ಬೀರುವ ಬಿರಿದ ಮಲ್ಲಿಗೆಯ ಹೂ ಆಗಿದೆ.” ಹೂದೋಟದಲ್ಲಿ ಹಲವು ವೈವಿಧ್ಯದ ಬಣ್ಣ, ಪರಿಮಳಗಳ ಹೂಗಳಿವೆ. ಸಮತಾ ಅವನ್ನು ಸೊಗಸಾದ ಮಾಲೆ ಕಟ್ಟಿ ನಮ್ಮನ್ನು ಕಲಾರಸಿಕರನ್ನಾಗಿ ಮಾಡಲೆಂದು ಆಶಿಸುತ್ತೇನೆ. ಅಲ್ಲಿಯವರೆವಿಗೂ ಕನ್ನಡ ಓದುಗರು ಈ ಕೃತಿಯ ಪರಿಮಳಗಳ ಮಾಯೆಯೊಳಗೆ ಬಂಧಿಗಳಾಗಿರಲಿ


 ವಸುಂಧರಾ ಕದಲೂರು

3 thoughts on “ಗಾಢವಾಗಿ ಮೋಹ ತುಂಬುವ – ‘ಪರಿಮಳಗಳ ಮಾಯೆ’

  1. ತುಂಬಾ ಚೆಂದಕ್ಕೆ ವಿಶ್ಕೇಷಿಸಿರುವೆ‌ ವಸುಂಧರ. ನಾನೂ ಓದಿರುವೆ. ಚೆಂದದ ಲಲಿತ ಪ್ರಬಂಧಗಳು. ಅಭಿನಂದನೆಗಳು ಇಬ್ಬರಿಗೂ

  2. ಕೃತಿಯ ಬಗ್ಗೆ ಉತಮ ಅಭಿವ್ಯಕ್ತಿ. ಅಭಿನಂದನೆಗಳು ಇಬ್ಬರಿಗೂ

Leave a Reply

Back To Top