ಅಂಕಣ ಸಂಗಾತಿ

ಚಾಂದಿನಿ

ಸ್ವರ್ಗಕ್ಕೇ ಕಿಚ್ಚುಬಿದ್ದರೂ ನಮಗೇನಂತೆ ಚಿಂತೆ?

ಜಡಿಮಳೆ ಸುರಿದಿರಲು,

ಬೆಚ್ಚನೆ ಕಂಬಳಿ ಇರಲು,

ಕಚೇರಿಗೆ ರಜೆ ಇರಲು,

ಸ್ವರ್ಗಕ್ಕೇ ಕಿಚ್ಚುಬಿದ್ದರೂ

ನನಗೇನಂತೆ ಚಿಂತೆ?

ಹೀಗಂತ ನಾನೊಮ್ಮೆ ಹಿಂದೆ ಹೇಳಿದ್ದೆ ಮತ್ತು ಬರೆದಿದ್ದೆ. ಆಗ ನನ್ನ ಸಹದ್ಯೋಗಿ ಮಿತ್ರನೊಬ್ಬ ಹೌ ಈಸ್ ಮಾನ್ಸೂನ್ ಎಂದು ಕೇಳಿದ್ದ. ಇದಕ್ಕೆ ಈ ಮೇಲಿನಂತೆ ತುಂಟ ಉತ್ತರ ನೀಡಿದ್ದೆ. ಈಗ ನಾನೂರಿರುವ ಊರಲ್ಲಿ ನಮ್ಮೂರಿನಂತಹ ಮಳೆ ಇಲ್ಲದ ಕಾರಣ ಮನಸ್ಸು ನನ್ನೂರಿಗೆ ಹೋಗಿ ಮಳೆಯಲ್ಲಿ ತೋಯಬೇಕೆಂಬ ಹಠ ಹಿಡಿದರೂ, ಪರಿಸ್ಥಿತಿ ಅನುಕೂಲ ಕಲ್ಪಿಸುತ್ತಿಲ್ಲ. ಊರಿಂದ ಫೋನ್ ಬಂದಾಗೆಲ್ಲ ಮಳೆಮಳೆಮಳೆಮಳೆ ಶಬ್ದ ಕೇಳಿಕೇಳಿ ಆಟಿತಿಂಗಳ(ಆಷಾಡ ಮಾಸದ) ಮಳೆಯಾಸೆ ದಿಮಿಗುಟ್ಟುತ್ತಿದೆ.

ಮಳೆಗಾಲ ಬಂದಾಗೆಲ್ಲ, ನಮ್ಮೊಡನೆ ಯಾವತ್ತೂ ಅವಿನಾಭಾವ ಸಂಬಂಧ ಕಟ್ಟಿಕೊಂಡೇ ಇರುವ ಬಾಲ್ಯವೇ ಬಂದು ಧುತ್ತೆಂದು ನಿಲ್ಲುತ್ತದೆ. ಚಿಕ್ಕಂದಿನ ಮಳೆ ದಿನಗಳಲ್ಲಿ ಅಮ್ಮನ ಕಣ್ಣು ತಪ್ಪಿಸಿ ನೀರಲ್ಲಿ ಆಟವಾಡಿದ ದಿನಗಳ ಆ ಸವಿಸವಿ ನೆನಪನ್ನು ಮರೆಯಲುಂಟೇ. ಹಳ್ಳಿ ಶಾಲೆಗಳಲ್ಲಿ ಓದಿದ ನಾವುಗಳು ಸುರಿವ ಮಳೆಗೆ ಹೆಗಲಿಗೆ ಆತಿರಿಸಿದ ಕೊಡೆಯನ್ನು ತಿರುವುತ್ತಾ ರಸ್ತೆ ಬದಿಯಲ್ಲಿ ಹರಿವ ನೀರಿಗೆ ಅಭಿಮುಖವಾಗಿ ನಡೆಯುತ್ತ, ಚಪ್ಪಲಿಲ್ಲದ ಪುಟ್ಟ ಕಾಲುಗಳಲ್ಲಿ ನೀರು ಚಿಮುಕಿಸುತ್ತಾ, ಮಾಸ್ಟ್ರ ಭಯದ ನಡುವೆಯೂ ನೋಟ್ಸ್ ಪುಸ್ತಕ ಹರಿದು ದೋಣಿಕಟ್ಟಿ ತೇಲಿಬಿಡುತ್ತಾ ಮನಗೆ ಮರಳಲು ಮರೆಯುತ್ತಿದ್ದ ನೆನಪುಗಳು ಒದೆಯುತ್ತಾ ಪುಟಿಯುವಾಗ, ಮರಳಿ ಬಾ ಬಾಲ್ಯವೇ ಎಂಬ ತುಡಿತದೊಂದಿಗೆ; ಆಗಿನಂತೆ ಸುರಿವ ಜಡಿಮಳೆಗಳು ಅಪರೂಪವಾಗುತ್ತಿರುವ ಈ ವರ್ಷಗಳಲ್ಲಿ ಮರಳಿ ಬಾ ಓ ಮಳೆಯೇ ಎಂಬ ಕರೆಯೂ ತೀರಾ ಉತ್ಪ್ರೇಕ್ಷೆಯಾಗದು.

ಆ ದಿನಗಳಲ್ಲಿ ಮಳೆಗಾಲವೆಂದರೆ ಖುಷಿ. ಮಳೆ ನೀರಿನಲ್ಲಿ ನೆನೆಯುವುದೆಂದರೆ ಇನ್ನೂ ಖುಷಿ. ಕೊಡೆ ಮುರಿದು ಹೋಗಿದೆ ಎಂದರೆ ಇನ್ನಷ್ಟು ಖುಷಿ. ಮಳೆ ನೀರಿನಿಂದ ಹಾವಸೆಗಟ್ಟಿ ಪಾಚಿ ಹಿಡಿದು ಜಾರುವ ಜಾಗದಲ್ಲಿ ಕಾಲಿರಿಸಿ ಉದ್ದೇಶಪೂರ್ವಕವಾಗಿ ಬಿದ್ದು, ಬಿದ್ದಲ್ಲಿಗೇ ಅಮ್ಮನ ಕೈಯಿಂದ ಗುದ್ದಿಸಿಕೊಳ್ಳುವುದೆಂದರಂತೂ ಪರಮ ಖುಷಿ!

ಯಾಕೊತ್ತಾ, ಮಳೆನೀರಿಗೆ ನೆಂದು, ಬಿದ್ದು ಒದ್ದೆ ಮುದ್ದೆಯದ ನಂತರ, ಕಟ್ಟಿಗೆಯಬೆಂಕಿಯಿಂದ ಧಗಧಗಿಸುವ ಒಲೆಯಬುಡದಲ್ಲಿ ಕುಕ್ಕರು ಕಾಲಲ್ಲಿ ಕುಳಿತು ಅಂಗೈಯನ್ನು ಬೆಂಕಿಗೆ ಹಿಡಿದು ಕಾಯಿಸಿ ಮುಖ ತಲೆಗೆಲ್ಲಾ ಒತ್ತಿಕೊಳ್ಳುತ್ತಾ, ಅಮ್ಮ ಕೊಡುವ ಕರಿಕಾಫಿ ಕುಡಿಯುತ್ತಾ (ಕೆಲವೊಮ್ಮೆ ಸುಟ್ಟ ಗೇರುಬೀಜ, ಹಪ್ಪಳ, ಹಲಸಿನ ಬೀಜ ತಿನ್ನುತ್ತಾ) ಮೈಬೆಚ್ಚಾಗಾಗಿಸಿಕೊಳ್ಳುವ ಸಂಭ್ರಮ ಉಂಟಲ್ಲಾ; ಇದರ ಎದುರು ನೀವು ಸಾವಿರಾರು ರೂಪಾಯಿ ವಿನಿಯೋಗಿಸಿ ನೀಡುವ ಪಾರ್ಟಿಯೂ ವೇಸ್ಟೇ. ಸುಡುವ ಗೇರುಬೀಜ, ಹಲಸಿನ ಬೀಜಗಳಿಂದ ಹೊರಡುವ ಠಸ್‌ಪುಸ್ ಶಬ್ದ ದೊಡ್ಡ ಕೌತುಕ. ಇದರ ಸೊನೆ ನಮ್ಮ ಮುಖಕ್ಕೇನಾದರೂ ಹಾರೀತು ಎಂಬ ಅಮ್ಮನ ಆತಂಕ. ದೂರ ಹೋಗೆಂದರೂ ಮತ್ತೆಮತ್ತೆ ಅಲ್ಲಿಯೇ ಅಡರಿಕೊಳ್ಳುವುದಕ್ಕೆ ಮತ್ತೊಂದಷ್ಟು ಎಕ್ಸ್‌ಟ್ರಾ ಬಯ್ಗಳು.

ಮಲೆನಾಡ ಹಳ್ಳಿಗಳಲ್ಲಿ ಮಳೆಗಾಲದ ಕಥೆಯೇ ಬೇರೆ. ಮಳೆಗಾಲಕ್ಕೆಂದೇ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸುವುದು, ಹಪ್ಪಳ ಮಾಡಿಡುವುದು. ಮಳೆಗಾಲಕ್ಕೆ ಆಗುವಷ್ಟು ಅಷ್ಟೂ ಕಟ್ಟಿಗೆಯನ್ನು ಒಟ್ಟುಮಾಡುವುದು.. ಒಂದೇ…. ಎರಡೇ.. ಈಗೆಲ್ಲಿದೆ ಆ ಸಂಭ್ರಮ. ಹಳ್ಳಿಗಳೂ ಪೇಟೀಕರಣಗೊಂಡಿದೆ. ಸೂರ್ಯನ ಮುಖವೇ ಕಾಣದಂತೆ ನಿರಂತರ ಎರಡ್ಮೂರು ದಿನಗಳ ಕಾಲ ಸುರಿಯುತ್ತಿದ್ದ ಜಡಿಮಳೆಯೂ ಕಾಣೆಯಾಗುತ್ತಿದೆ.

ಇಂಥ ಮಳೆಗಳ ವೇಳೆ ಖಂಡಿತವಾಗಿ ಶಾಲೆಗೆ ರಜೆ ಸಿಕ್ಕುತ್ತಿತ್ತು. ಆಕಾಶಕ್ಕೆ ತೂತು ಬಿದ್ದಿದೆ ಎಂದು ನಾವೆಲ್ಲ ಅಂಗಿ ಕುಣಿಸಿಕೊಂಡು, ಮನೆದಾರಿ ಹಿಡಿಯುತ್ತಿದ್ದೆವು. ಶಾಲೆ ಬಿಟ್ಟಮೇಲೆ ಮಳೆಗಾಗಿ ರಜೆ ಸಿಕ್ಕುತ್ತಿರಲಿಲ್ವೇ. ಅದಕ್ಕಾಗಿ ಚೆನ್ನಾಗಿ ಸುರಿವ ಮಳೆಯಂದು ನಾನೇ ರಜೆಹಾಕಿ ದಪ್ಪಕಂಬಳಿ ಹೊದ್ದು ಗಡದ್ದಾಗಿ ನಿದ್ರಿಸುತ್ತಿದ್ದೆ. ನನ್ನ ಈ ಪ್ರೋಗ್ರಾಮು ನನ್ನ ಸ್ನೇಹಿತೆಯರಿಗೆ ವಿಚಿತ್ರವಾಗಿರುತ್ತಿತ್ತು. ಮಳೆಯ ಸವಿ ಅನುಭವಿಸಲು ತಿಳಿಯದ ದ್ರಾಬೆಗಳಾ, ನೀವೇ ಮೂರ್ಖೆತಿಗಳು ಎಂದು ನಾನವರನ್ನು ದಬಾಯಿಸುತ್ತಿದ್ದೆ.

ಮಳೆಯನಾಡಿನಲ್ಲಿ ಹುಟ್ಟಿ ಬೆಳೆದವರು, ಮಳೆಯ ಸೊಬಗನ್ನು ಉಂಡವರು, ಸವಿಯುವ ಮನಉಳ್ಳವರು, ವರುಣರಾಗದ ವೈಭವವನ್ನು ಸವಿಯದಿರಲಾರರು. ಸಿಡಿಲು ಮಿಂಚು ಬೇಡ, ರಭಸದ ಗಾಳಿ ದೂರವಿರಲಿ, ಬರಿಯ ಧೋ ಮಳೆಮಾತ್ರ ಸುರಿಯಲಿ ಎಂದು ಹಾರೈಸುವವರ ಸಂಖ್ಯೆ ದೊಡ್ಡದಿದೆ. ನೀವೇನಂತೀರಿ…?


ಚಂದ್ರಾವತಿ‌ ಬಡ್ಡಡ್

ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ

Leave a Reply

Back To Top