ಲೇಖನ
ಚಂಪಾ ಅವರ ಜೇಲಿನಲ್ಲಿ ದೇವರು- ಕವಿ
ಯಾಕೊಳ್ಳಿ
ಚಂದ್ರಶೇಖರ ಪಾಟೀಲರು ಚಂಪಾ ಎಂದೇ ಹೆಸರಾದ ಕನ್ನಡದ ಹಿರಿಯ ಕವಿಗಳು.ಕನ್ನಡದ ಪ್ರಮುಖ ನಾಟಕಕಾರರಲ್ಲಿಯೂ ಒಬ್ವರಾದ ಚಂಪಾ ತಮ್ಮ ಸಂಕ್ರಮಣ ಪತ್ರಿಕೆಯ ಮೂಲಕ ನಾಡಿನ ಓದುಗರಿಗೆ ಕಳೆದ ಅರ್ಧ ಶತಮಾನದಿಂದ ಸಾಹಿತ್ಯದ ಉಣಿಸು ಬಡಿಸುತ್ತ ಬಂದವರು.ಅವರ ಕಾವ್ಯ ಮೊದಲಿನಿಂದಲೂ ವಿಮರ್ಶಕರಾದ ಎಚ್ .ಎಸ್. ರಾಘವೇಂದ್ರರಾಯರು ಹೇಳುವಂತೆ ಏಕಾಂತಕ್ಕಿಂತ ಲೋಕಾಂತವನ್ನೇ ಬಯಸಿದ ಕಾವ್ಯ.( ಚಂಪಾ ಕಾವ್ಯ – ಮುನ್ನುಡಿಯಲ್ಲಿ)
೧೯೬೦ ರಲ್ಲಿ ಅವರ ಮೊದಲ ಸಂಕಲನ ‘ಬಾನುಲಿ’ ಪ್ರಕಟವಾಯಿತು.ತನ್ನ ಕವಿತೆ ಓದುಗನ ಎದೆಯಲ್ಲಿ ಒಂದಿಷ್ಟು ಕಲರವ ಮೂಡಿಸಿದರೆ ಸಾರ್ಥಕ ಎಂಬುದು ಮೊದಲ ಸಂಕಲನ ಪ್ರಕಟಿಸುವಾಗ ಚಂದ್ರಶೇಖರ ಪಾಟೀಲರ ಹಂಬಲವಾಗಿತ್ತು ಎನ್ನುವದು ಬಾನುಲಿಕವಿತಾ ಸಂಕಲನದ
ಓದುಗ
ನನ್ನ ಎದೆಯ ಕೇಂದ್ರದಿಂದ
ಸುತ್ತುಮುತ್ತು ಬಿತ್ತರಿಸುವೆ
ಇದೋ ನನ್ನ ಬಾನುಲಿ
ನೀನು ಸೆಳೆಯೆ,ಬಳಿಗೆ ಸುಳಿದು
ನನ್ನ ಹಾಡೆ ಹಾಡಬಹುದು
ಮತ್ತೆ ನಿನ್ನ ಎದೆಯಲಿ
ಎಂಬ ಸಾಲುಗಳಲ್ಲಿ ಸೂಚಿಸಿದ್ದರು. ಈ ಕವಿತಾ ಸಂಕಲನದ ‘ಜೇಲಿನಲ್ಲಿ ದೇವರು’ಎಂಬ ಕವಿತೆಯ ನನ್ನ ಓದನ್ನು ಇಂದು ನಿಮ್ಮೊಡನೆ ಹಂಚಿಕೊಳ್ಳುವ ಆಸೆಯಿಂದ ಈ ಕೆಳಗಿನ ಸಾಲುಗಳನ್ನು ಬರೆಯುತ್ತಿದ್ದೇನೆ.
ಚಂಪಾ ಅವರ ಕಾವ್ಯ ಪ್ರಾರಂಭದಿಂದಲೂ ವ್ಯಂಗ್ಯ ವಿಡಂಬನೆಗಳತ್ತ ವಾಲಿದ್ದು ಎಂಬುದನ್ನು ಅವರ ಈ ಮೊದಲ ಸಂಕಲನಕ್ಕೆ ಮುನ್ನುಡಿ ಬರೆದ ವಿನಾಯಕರು ಗುರುತಿಸಿದ್ದರು. ಆದರೆ ಆ ವಿಡಂಬನೆಯ ಹಿಂದೆ ಇರುವದು ಲೋಕವನ್ನು ತಿದ್ದಬೇಕೆನ್ನುವ ಗುಣವೇ.ಎಂಬ ಅಂಶವನ್ನು ಅವರು ಗಮನಿಸಿದ್ದರು.
‘ಜೇಲಿನಲ್ಲಿ ದೇವರು’ ಕವಿತೆ ತುಸು ದೀರ್ಘವಾಗಿಯೇ ಇದೆ. ದೇವರನ್ನು ಜೇಲಿನಂತಹ ಗುಡಿಯಲ್ಲಿ ಅನ್ನ ನೀರಿಲ್ಲದೆ ಕೂಡಿ ಹಾಕಿದ ಮನುಷ್ಯ ತಾನು ಮಾತ್ರ ಹೊಟ್ಟೆ ತುಂಬ ಹೊಡೆದು ಕೊನೆಗೂ ದೇವರಿಗೆ ಏನನ್ನು ನೀಡದೆಯೆ ಉಪವಾಸ ಕೆಡವಿದ ಸಂಗತಿಯನ್ನು ಬಣ್ಣಿಸುತ್ತಾರೆ.ವಿನೊದದ ಒಳಗೋಳಗೆ ವಿಷಾದ ,ಮನುಷ್ಯನ ಕೈಯಲ್ಲಿ ಸಿಲುಕಿ ದೇವರು ಅನುಭವಿಸು ಫಜೀತಿ ಇವುಗಳನ್ನು ತಂದಿದ್ದಾರೆ.
ಆರಂಬದಲ್ಲಿಯೆ ದೇವರನ್ನು ಮನುಷ್ಯ ಗುಡಿಯಂಬ ಜೇಲಿನಲ್ಲಿ ತಂದೊಗೆದ ಚಿತ್ರವಿದೆ.
ಪರಮೇಶ್ವರನ ಕೈಗೆ ಬೇಡಿಯ ಬಿಗಿದು ನರನು ಭೂಲೋಕದಲಿ ತಂದೊಗೆದನು
ಗರ್ಭ ಗುಡಿಯಲಿ ನೂಕಿ ಭದ್ರ ಬೀಗವ ಹಾಕಿ
ಶಿರಬಾಗಿ ಮತ್ತೊಮ್ಮೆ ಕೈಮುಗಿದನು
ದೇವರನ್ನು ಗುಡಿಯ ಒಳಗೆ ಹಾಕಿ ಬೀಗ ಜಡಿದು ಆತ ಹೊರಬರದಂತೆ ಮಾಡಿರುವ ಚಿತ್ರವನ್ನು ತರುತ್ತಾರೆ. ಗುಡಿಯ ಒಳಗೋ ಸುತ್ತಲೂ ಕತ್ತಲೆ,ಜೇಡರ ಬಲೆ ಹೆಣೆದಿದೆ.ಎಂಥ ಭೀಕರ ಏಕಾಂತವಿದೆಯಂದರೆ ದೇವರೂ ನಿಟ್ಟುಸಿರು ಬಿಟ್ಟರೆ ಅವನಿಗೆ ಗುಡುಗಿನ ಹಾಗೆ ಕೇಳಿಸುತ್ತದೆ.
ಪಾಪ ದೇವರು ಹಸಿವು ಎಷ್ಟು ತಡೆಯಬಲ್ಲ! ಹನಿ ನೀರೂ ಇಲ್ಲದೆ ಬಾಯಿ ಒಣಗುತ್ತಿದೆ.ಮನುಷ್ಯ ಹೂಡಿದ ಆಟಕ್ಕೆ ಕೋಪಗೊಂಡಿಂದ್ದಾನೆ. ಆದರೇನು ಮಾಡುವದು? ಗುಡಿಯಂತಹ ಜೇಲಿನಲ್ಲಿ ಬಂಧಿಯಾಗಿ ದ್ದಾನೆ. ದೇವರ ಈ ಸ್ಥಿತಿಯನ್ನು ಕವಿತೆ
ಬಿಡುಗಣ್ಣ ದೇವರಿಗೆ ತೂಕಡಿಕೆ ಬರುತಲಿದೆ
ಹೊಟ್ಟೆಯಲಿ ಸಾಗುತಿದೆ ಡೊಂಬರಾಟ
ಹನಿನೀರು ಇಲ್ಲದೆಯೆ ಬಾಯಿ ಒಣಗುತಿದೆ
(ನರನು ಹೂಡಿದ ಆಟ ದೊಡ್ಡ ಮಾಟ)
ಆಮೇಲೆ ತಮ್ಮ ಸ್ನಾನ ಜಪ ತಪ ಎಲ್ಲ ಮುಗಿಸಿ ಹೊಟ್ಟೆ ತುಂಬ ಪ್ರಸಾದ ಸ್ವೀಕರಿಸಿದ (ಸಾಂಗವಾಗಿ ಎಂಬ ಪದ ಅವರ ಹೊಟ್ಟೆ ತುಂಬಿದ ಸ್ಥಿತಿಗೆ ಸಚಕ) ಮಂದಿ ಗುಡಿಗೆ ಬಂದರು.ಯಾರಿಗೂ ದೇವರ ಹಸಿವೆಯ ಬಗ್ಗೆ ಚಿಂತೆಯಿಲ್ಲ .ಹಸಿದು ಮಲಗಿದ್ದ ದೇವರನು ಎಬ್ಬಿಸಲು ಎಲ್ಲರಿಗಿಂತ ಜಾಸ್ತಿಯೇ ಉಂಡ ಪೂಜಾರಿ ಮುಂದೆ ಬರುತ್ತಾನೆ ( ಪೂಜಾರಿಯನ್ನು ಹಿರಿ ಹೊಟ್ಟೆ ಪೂಜಾರಿ ಎಂಬ ಮಾತಿನಿಂದ ವಿಡಂಬಿಸುತ್ತಾರೆ ಕವಿ)
ಆಗ ದೇವರ ತಯಾರಿ ಆರಂಭವಾಯಿತು. ಅವನ
ಇದ್ದ ಕಣ್ಣನು ಕಿತ್ತು ಕಣಬಟ್ಟು ಹಚ್ಚಿದರು ಕಮಲವದನಕೆ ಬೆಳ್ಳಿ ಕೋರೆ ಮೀಸೆ
ಎಣ್ಣೆ ಮಜ್ಜನದಿಂದ ಮೈಯೆಲ್ಲ ಜಿಡ್ಡಾಯ್ತು
ಓಡಿ ಹೋಯ್ತು ಓಡಿ ಹೋಗುವಾಸೆ
ಗಂಧ ಕರ್ಪೂರಗಳ ಸುಟ್ಟು ಹೊಗೆ ತುಂಬಿದರು
ಕಟ್ಟಿ ಹೋಯಿತು ಗಂಟಲುಸಿರು ಎಲ್ಲ
ಉಗುಳು ಮಂತ್ರವು ಸಿಡಿದು ಶಂಖವಾದ್ಯವು ಬಡಿದು
ಹರಿದು ಹೋಯಿತು ಅವನ ಕರ್ಣ ಪಟಲ
ಈ ಎರಡು ಪದ್ಯ ಭಾಗಗಳು ಮನುಷ್ಯನ ಆಡಂಭರದ ಪೂಜಾ ಕಾರ್ಯದಿಂದ ದೇವರಿಗೆ ಎಷ್ಟು ಹಿಂಸೆ ಯಾಯಿತು ಎಂಬುದನ್ನು ವಿವರಿಸುತ್ತವೆ. ಅಲ್ಲಿರುವ ಯಾರಿಗೂ ದೇವರ ಬಗೆಗಾಗಲಿ ,ದೇವರ ಹಸಿವಿನ ಬಗೆಗಾಗಲಿ,ದೇವರ ಪರಿವಾರದ ಬಗೆಗಾಗಲಿ ಎಳ್ಳನಿತೂ ಚಿಂತೆಯಿಲ್ಲ. ಎಲ್ಲರೂ ತಮ್ಮ ಸಂಬ್ರಮದಲ್ಲಿ ಮುಳುಗಿರುವವರೇ.
ಆರತಿಯನೆತ್ತಿದರು ಗರತಿಯರ ಕಂಡೊಡನೆ
ಪಾರ್ವತಿಯ ನೆನಪಾಯ್ತು ಭೂತಪತಿಗೆ
ಪಾಪ! ಮಗು ಗಣಪತಿಗೆ ಯಾರೇನು ಮಾಡಿದರೋ
ಏನು ತೋಚಲೆಯಿಲ್ಲ ಮಂಕುಮತಿಗೆ
ಪೂಜೆಗೆಂದು ಬಂದ ಮಹಿಳೆಯರ ನೋಡಿ ಶಿವನಿಗೆ ಪಾರ್ವತಿಯ ನೆನಪಾಗಬೇಕೆ? ಪಾಪ ಎಲ್ಲಿರುವಳೋ ? ಹೇಗಿರುವಳೋ? ಮಗ ಗಣಪತಿಯ ಪಾಡೇನೋ ? ಶಿವ ಚಿಂತಿಸಿದ.ಆದರೂ ಹಸಿದಹೊಟ್ಟೆ ತಾಳ ಹಾಕುತ್ತಿತ್ತು. ಆಗಲೇ ಭಕ್ತರು
ಮಧ್ಯಾಹ್ನ ಬೆಳ್ಳಿ ತಂಬಿಗೆಯಲ್ಕಿ ಮಡಿನೀರು
ಬಂಗಾರ ತಾಟಿನಲಿ ಬಂತುನೈವೇದ್ಯ
ಹಣ್ಣು ಹೂ ಕಾಯಿಗಳು! ಹಣ್ಣು ಪಾಯಸ ಖೀರು!
ಎಂತೆಂಥ ಪಕ್ವಾನ್ನ ! ಎಷ್ಟು ಖಾದ್ಯ
ಇಂಥ ಪಕ್ವಾನ್ನ ತಂದಾಗ ದೇವರಿಗೆ ಖುಷಿಯಾಗದಿದ್ದಿತೆ?ತುಂಬ ಖುಷಿಯಾದ ದೇವರು ಹಸಿದಿದ್ದಕ್ಕೂ ಸಾರ್ಥಕ ವಾಯಿತು ಎಂದುಕೊಂಡ.ಆದರೆ ಆದದ್ದೇ ಬೇರೆ. ಪೂಜಾರಿ ದೇವರಿಗೆ ಕೊಟ್ಟರೆ ತಾನೇ?
ಇಡೀ ಕವಿತೆ ಓದುವಾಗ ಒಂದು ಬಗೆಯ ವಿನೋದ , ದೇವರು ಮನುಷ್ಯ ಮಾತ್ರರಿಂದ ದೇವರು ಅನುಭವಿಸುತ್ತಿರುವ ಪಾಡು ನೆನೆದು ವಿಷಾದ ವಾಗುತ್ತದೆ. ಕವಿ ಚಂಪಾ ಅವರು ಕೇವಲ ವಿಡಂಬನೆ ,ವಿನೋದದ ಕಾರಣಕ್ಕಾಗಿ ಈ ಕವಿತೆಯನ್ನು ಬರೆಯದೆ ಎಲ್ಲವನ್ನೂ ತನ್ನ ಮೋಸಕ್ಕಾಗಿಯೇ ಬಳಸಿಕೊಳ್ಳುವ ಮನುಷ್ಯ ಪ್ರವೃತ್ತಿಯನ್ನು ವಿರೋಧಿಸುತ್ತಾರೆನ್ನಿಸುತ್ತದೆ.ಅವರದೇ ಇನ್ನೊಂದು ಕವಿತೆ 2003 ರಲ್ಲಿಬಂದ ‘ದೇವಬಾಗ’ ಕವನ ಸಂಕಲನದಲ್ಲಿ ‘ದೇವ ಪೂಜಾ ವಿಧಾನ ‘ಎಂಬ ಕವಿತೆ ಯಲ್ಲಿ ಇಂಥ ದೇ ವಿಡಂಬನೆ ಇರುವದನ್ನು ಕಾಣಬಹುದು.ಪುರೋಹಿತ ವ್ಯವಸ್ಥೆಯ ವಿಡಂಬಣೆ ಅಲ್ಲಿ ಎದ್ದು ಕಾಣುತ್ತದೆ
ತನಗಾಗಿ ಭಕ್ತ ಮಂಡಳಿ ತಂದ
ತಿಂಡಿ ತಿನಿಸುಗಳೆಲ್ಲ
ಪೂಜಾರಿಯ ಹೊಟ್ಟೆ ಗುಂಡಿಗೆ
ಸೇರುತ್ತಿದ್ದ ಕಂಡು ಥಂಡಾ ಹೊಡೆದ ದೇವರು
ಕಂಗಾಲಾಗಿ ನನಗೂ ಸ್ವಲ್ಪ ಕೊಡು
ಅಂತ ಅಂಗಲಾಚಿದ
ಎಂದು ಅ ಪದ್ಯವೂ ಪೂಜಾರಿಯ ಕೈಯಲ್ಕಿ ಸಿಕ್ಕ ದೇವರ ದುಸ್ತಿತಿಯನ್ನೇ ಬಣ್ಣಿಸಿದೆ.ಇಲ್ಕಿಯೂ ಹಾಗೇ ಆಗುತ್ತದೆ .ಪೂಜಾರಿ ಭಕ್ಷ್ಯ ಭೋಜ್ಯಗಳನ್ನೆಲ್ಲ ತನ್ನ ಮನೆಗೆ ಸಾಗಿಸಿ ಮತ್ತೆ ದೇವರನ್ನು ಉಪವಾಸವೇ ಕೆಡಹುತ್ತಾನೆ.
ದೇವರು
ಹಸಿದ ಹೊಟ್ಟೆಗೆ ದೇವ ಎಳ್ಳು ನೀರನು ಬಿಟ್ಟು
ಕೈಯ ಜಜ್ಹಿದನೊಮ್ಮೆ ಕಲ್ಲು ಹಣೆಗೆ
” ತಲೆಯಮೇಲಿನ ಗಂಗೆ ನೀರು ನೀರೆನ್ನುವಳು
ಕಂಠದೊಳಗಿನ ಹಾವಿಗಿಲ್ಲ ಹಾಲು
ಏನುಮಾಡಲಿ ಚಂದ್ರ ಸೊರಗಿ ಸಾಯುತಲಿಹನು
ನನ್ನ ಜೀವನವೆಲ್ಲ ಹಾಳು ಹಾಳು
ಶಿವನಿಗೆ ದಾರಿಯೇ ಕಾಣುತ್ತಿಲ್ಲ.ಒಂದೇ ಸವನೆ ಕೊರಗುತ್ತಿದ್ದಾನೆ.ವ್ಯಂಗ್ಯದ ಪರಮಾವಧಿ ನೋಡಿ! ಯಾರು ಲೋಕಕ್ಕೆ ನೀರು ಕೊಡುವ ಗಂಗೆ ಎನ್ನುತ್ತೆವೆಯೋ ಆ ಗಂಗೆಗೆ ಕುಡಿಯಲು ನೀರಿಲ್ಲ.
ಇನ್ನು ಕೊರಳೊಳಗಿನ ಆದಿಶೇಷ ಚಂದ್ರರನ್ನಂತೂ ಕೇಳುವಂತೆಯೇ ಇಲ್ಲ. ಕೊನೆಗೂ ದೇವರು ಯಾರಿಗೂ ಕಾಣಿಸದಂತೆ ಕಣ್ಣಿರು ಸುರಿಸುವ ಸ್ಥಿತಿ ಬಂದಿದೆ.
ಕವಿ ಕೊನೆಯಲ್ಲಿ ಇದೆಲ್ಲಕ್ಕೂಕಾರಣವಾದ ಮಾನವನ ಘನ ಕಾರ್ಯವನ್ನು ವಿಡಂಬಿಸುತ್ತ
ಮೂರ್ಖ ಮನುಕುಲವಿಂದು ತನಗೆ ಜನುಮವನಿತ್ತ
ದೇವರನೆ ಒಗೆದಿಹುದು ಜೇಲಿನಲ್ಲಿ
ಎಂಬ ವಿಡಂಬನೆಯ , ವಿಷಾದದ ಸಾಲುಗಳೊಂದಿಗೆ ಮುಕ್ತಾಯವಾಗಿದೆ. ಚಂದ್ರಶೇಖರ ಪಾಟೀಲರ ಇಡೀ ಕಾವ್ಯದ ಶಕ್ತಿ ಇರುವದೇ ಈ ವಿಡಂಬನೆಯಲ್ಕಿ..
ಕನ್ನಡದ ನವೋದಯ ,ನವ್ಯ ,ದಲಿತ ,ಬಂಡಾಯಗಳು ಕಟ್ಟಿದ ರಾಜಮಾರ್ಗದಲ್ಲಿ ಅವರೆಂದೂ ಸಂಚರಿಸಿದವರಲ್ಲ.ಅವರದು ತಾವೆ ನಿರ್ಮಿಸಿಕೊಂಡ ಮಾರ್ಗ.ಮತ್ತೆ ಎಚ್ ಎಸ್ .ರಾಘವೇಂದ್ರರಾವ್ ಅವರ ಮಾತನ್ನೇ ನೆನಪಿಸುವದಾದರೆ ” ಭಾವನೆ,ವಿಡಂಬನೆ ಮತ್ತು ವಿಚಾರಗಳ ಕುದುರೆಯಾನ” .
ಅವರ ತೀರ ಇತ್ತೀಚಿನ ಕವಿತೆಯಲ್ಲಿ ಡಾಳಾಗಿ ಕಾಣಿಸು ವ wit ಗೆ ಬೇಕಾದಷ್ಟು ಆಧಾರ ಈ ಮೊದಲ ಸಂಕಲನದ ಪದ್ಯದಲ್ಲಿಯೆ ಒದಗಿತ್ತು ಎನ್ನುವದು ಅವರ. ಈ ಕವಿತೆ ಓದಿನಿಂದ ಸಿದ್ಧವಾಗುತ್ತದೆ.
ಯಾಕೊಳ್ಳಿ
ದೇವರು ಜೈಲಿನಲಿ.
ಕವಿತೆಯನ್ನು ಅರ್ಥವತ್ತಾದ ಸಮಯದಲ್ಲಿ ನೆನಪಿಸಿದ್ದಕ್ಕೆ ಥ್ಯಾಂಕ್ಸ...