ಅಂಕಣ ಸಂಗಾತಿ

ಕಾವ್ಯದರ್ಪಣ

ಜೀವನವದೊಂದು ಕಲೆ,ಕಲೆಯ ಕಲಿಸುವುದೆಂತುl

ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂll

ಆವುದೋ ಕುಶಲತೆಯದೊಂದಿರದೆ ಜಯವಿರದುl

ವಿವರ ನಿನ್ನೊಳಗೆಮಂಕುತಿಮ್ಮll

                    – ಡಿ.ವಿ.ಜಿ.

ಕಾವ್ಯ ಪ್ರವೇಶಿಕೆಯ ಮುನ್ನ

ಬದುಕು ಬಹಳ ಅಮೂಲ್ಯವಾದದ್ದು. ಇದು ಮಾನವನ ಅಸ್ತಿತ್ವದ ಕುರುಹಾಗಿದೆ. ನಾವು ಬಾಳಿ ಬದುಕಲು ಹುಟ್ಟಿನಿಂದ ಸಾಯುವವರೆಗೂ ಹಲವಾರು ಸವಾಲುಗಳನ್ನು ಎದುರಿಸುತ್ತೇವೆ.ಇವು ನಮ್ಮ ಬದುಕಿಗೊಂದು ಅರ್ಥ ರೂಪಿಸುತ್ತವೆ.

ಬದುಕೆಂಬುದು ಸುಖ ದುಃಖಗಳ ಮಿಶ್ರಣವಾಗಿದೆ. ಇದನ್ನು ಬದಲಾಯಿಸಿಕೊಳ್ಳುವ ಸಾಮರ್ಥ್ಯ ಮನುಷ್ಯನಿಗಿದೆ. ಇದು ನಮ್ಮ ವರ್ತನೆಗಳು, ಆಲೋಚನೆ ಪ್ರಯತ್ನ ಆಯ್ಕೆಮಾಡಿಕೊಂಡ ದಾರಿ ಮುಂತಾದ ವಿಷಯಗಳಿಂದ ಪ್ರಭಾವಿತವಾಗುತ್ತದೆ.

ಯಾರು ಬದುಕನ್ನು ಗಂಭೀರವಾಗಿ ಸ್ವೀಕರಿಸುತ್ತಾರೋ ಅವರು ಸಾಧನೆಯ ಪಥದಲ್ಲಿ ಜಯಗಳಿಸುತ್ತಾ ಮುಂದೆ ಹೋಗುತ್ತಾರೆ. ಬದುಕನ್ನು ಲಘುವಾಗಿ ತೆಗೆದುಕೊಂಡವರು ಪ್ರತಿಹಂತದಲ್ಲೂ ಸೋಲಿನ ಕಹಿಯನ್ನು ಉಣ್ಣುತ್ತಾ ಸಾಗುತ್ತಾರೆ.

ಇಂತಹ ಅಮೂಲ್ಯ ಬದುಕಿಗೊಂದು ಸಾರ್ಥಕತೆ ಬರುವುದು ನಮ್ಮ ಕಾರ್ಯಗಳಿಂದ. ಅದು ನ್ಯಾಯಯುತವಾಗಿ ಇದ್ದಾಗ ಸರ್ವರಿಗೂ ತಂಗಾಳಿಯ ಅನುಭವ ನೀಡುತ್ತದೆ. ಒಂದು ವೇಳೆ ಅದು ಸಮಾಜಕ್ಕೆ ಮಾರಕವಾಗಿದ್ದರೆ ಇತರರ ಬದುಕನ್ನು ಬಲಿತೆಗೆದುಕೊಂಡು ಅವರ ಭವಿಷ್ಯಕ್ಕೆ ಬಿರುಗಾಳಿಯಂತಾಗುತ್ತದೆ.

ನಾವು ಬಂಗಾರದಂತೆ ನಳನಳಿಸಬೇಕಾದರೆ ನಮ್ಮ ಬದುಕು ಮೌಲ್ಯಗಳ ಬಂಡಾರವಾಗಿರಬೇಕು. ಸಂಸ್ಕೃತಿಗಳ ಕಣಜವಾಗಿ ಇರಬೇಕು. ಮೌಲ್ಯಗಳು ನಮ್ಮೊಳಗೆ ಅಂತರ್ಗತವಾಗಿ, ನಮ್ಮ ವ್ಯಕ್ತಿತ್ವ ವಿಕಸನವಾಗಿ, ಸಾಮಾಜಿಕ ಬಾಂಧವ್ಯ ಅರಳುತ್ತದೆ. ಈ ಮೌಲ್ಯವಿಲ್ಲದ ಬದುಕು ನೀರಿಲ್ಲದ ಬಾವಿಯಂತೆ.ಆದುದರಿಂದ ಇತರರಿಗೆ ಲಾಭಕ್ಕಿಂತ ನಷ್ಟವೇ ಹೇರಳವಾಗಿರುತ್ತದೆ.ಪ್ರತಿಯೊಬ್ಬರೂ ಸುಂದರವಾದ ಬದುಕು ಕಟ್ಟಿಕೊಳ್ಳಲು ಆಶಿಸುತ್ತಾರೆ.

ಈ ಬದುಕು ಹಲವು ಸಮಸ್ಯೆಗಳೆಂಬ ಲೇಬಲ್ ಅಂಟಿಸಿಕೊಂಡೆ ಸಾಗುತ್ತಿರುವುದು.ಕೆಲವರು ಅಲ್ಲಿ ಅಡ್ಡವಾದ ಗುಡ್ಡದಂತ ಕಷ್ಟಗಳನ್ನು ಹೂವಿನಷ್ಟೇ ಸರಾಗವಾಗಿ ಪಕ್ಕಕ್ಕೆ ಸರಿಸಿ ಮುಂದೆ ಸಾಗುತ್ತಾರೆ. ಮತ್ತಷ್ಟು ಜನ ಅಟ್ಟವನ್ನು ಬೆಟ್ಟ ಮಾಡಿಕೊಂಡು ಪರಿತಪಿಸುತ್ತಾರೆ. ಇವೆರಡಕ್ಕಿಂತ ಮತ್ತೊಂದು ಕಠಿಣ ಸವಾಲೆಂದರೆ ನಮ್ಮ ಬದುಕಿನಲ್ಲಿ ಎದುರಾಗುವ ಸಾಮಾಜಿಕ ಸಮಸ್ಯೆಗಳು, ಆರ್ಥಿಕ ಸಂಕಷ್ಟಗಳು.‌ಇವುಗಳು ನಮ್ಮ  ಬದುಕನ್ನು ಚಿಂತೆಯಲ್ಲಿ ಮುಳುಗಿಸಿ ಸಾಧನೆಯ ದಾರಿಗಳಲ್ಲಿ ತಡೆಗೋಡೆಗಳಾಗುತ್ತವೆ.

ಬಹಳ ಮುಖ್ಯವಾಗಿ ಬಡತನ ಮನುಷ್ಯನ ‌ಬದುಕನ್ನು ದುಸ್ತರವಾಗಿಸುತ್ತದೆ.ಆದರೆ ಸ್ವಾಭಿಮಾನ ಸೆಟೆದು ನಿಂತು ಬಲವಂತರ ಅನಾಚಾರಗಳನ್ನು ಪ್ರತಿಭಟಿಸುತ್ತದೆ. ಇವೆಲ್ಲವುಗಳ ಸಂಗಮವೆ ಈ ಬದುಕು.

ಕವಿ ಪರಿಚಯ

ಯಮನೂರು ಸ್ವಾಮಿ ಮರಿಯಪ್ಪ ಕೋಲಕಾರ ಇವರು ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಗಿಣಿಗೇಣಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದಿದ್ದು ವೃತ್ತಿಯಲ್ಲಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾಡಿನ ಅನೇಕ ದಿನಪತ್ರಿಕೆಗಳು, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಇವರದಾಗಿದೆ.

ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಏಕಕಾಲಕ್ಕೆ ಪ್ರಸಾರವಾಗುವ ವಿಜಯವಾಣಿ ದಿನಪತ್ರಿಕೆ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಡಿನ ಅನೇಕ ಕವಿಗಳು, ಸಾಹಿತಿಗಳ ಬರಹಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಸಾಹಿತ್ಯಕ್ಕೆ ಅಗಾಧ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ಕೋಲಕಾರ ಇವರು ಇತ್ತೀಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಹಲವಾರು ವಿಮರ್ಶಾತ್ಮಕ ಲೇಖನಗಳನ್ನು ತಮ್ಮ ಪತ್ರಿಕೆಯಲ್ಲಿ ಬರೆಯುತ್ತಾರೆ. ಜೊತೆಗೆ ಇತರರ ಪುಸ್ತಕಗಳನ್ನು ಓದಿ ಅವುಗಳ ಪರಿಚಯವನ್ನು ಕೂಡ ಬರೆಯುತ್ತಿದ್ದಾರೆ. ಹೊಸದಾಗಿ ಬರಹಗಳನ್ನು ಪ್ರಾರಂಭಿಸಿರುವ ಇವರನ್ನು ಸಾಹಿತ್ಯ ಕ್ಷೇತ್ರ ಅಪ್ಪಿಕೊಂಡು ಹಾರೈಸಲಿ ಎಂದು ಆಶಿಸುವೆ.

ಕವಿತೆಯ ಆಶಯ

ಇಲ್ಲಿ ಕವಿಯು ಬದುಕಿನ ವಿವಿಧ ಮಜಲುಗಳನ್ನು, ಬಡತನ ಹೇಗೆ ನಮ್ಮ ಸುಂದರ ಜೀವನ ಮತ್ತು ಸಾಧನೆಗಳಿಗೆ ಮಾರಕವಾಗುತ್ತದೆ ಎಂಬುದನ್ನು ನಿರೂಪಿಸುತ್ತಾ ಸಾಗಿದ್ದಾರೆ.

ಇಲ್ಲಿ ಕವಿಗೆ ಬರಹವನ್ನು ಬದುಕಾಗಿಸಿ ಕೊಳ್ಳುವ ಆಸೆ ಇದೆ. ಆದರೆ ಬರಹದಿಂದ ಬದುಕು ಕಟ್ಟಿಕೊಳ್ಳಲು ಆಗುತ್ತಿಲ್ಲ ಎಂಬ ಜಾಗೃತಿ ಅರಿವಿದೆ. ಮೂಲಭೂತ ಅಗತ್ಯಗಳಿಗೆ ಕೊರತೆಯಿರುವಾಗ ಬರೆದ ನೂರಾರು ಬರಹಗಳನ್ನು ಕೃತಿಯಾಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ಇದೆ.

ಮನದ ತುಂಬಾ ಇರುವ ನೋವಿನ ದನಿಗಳಿಗೆ ಬರಹಗಳೆಂಬ ಮದ್ದನ್ನು ಕಂಡುಕೊಂಡಿದ್ದಾರೆ. ನಿತ್ಯವೂ ಬರಹದಲ್ಲಿ ಮುಳುಗಿ ನೋವಿನಿಂದ ಆಚೆ ಬರಲು ಪ್ರಯತ್ನ ಮಾಡಿದ್ದಾರೆ

ಇಲ್ಲಿ ಕವಿತೆಯು ಸಾಹಿತ್ಯದ ಹಂಬಲ ಮತ್ತು ಅದಕ್ಕಿಲ್ಲದ ಬೆಂಬಲ ಕುರಿತು ವಿಷಾದ ಭಾವ ವ್ಯಕ್ತಪಡಿಸುತ್ತದೆ. ನಮಗಿರುವ ಕಷ್ಟ ನಮ್ಮನ್ನು ಚಿತೆಯಂತೆ ದಹಿಸುತ್ತದೆ ಎಂಬ ವಿಷಾದ ಇಲ್ಲಿ ವ್ಯಕ್ತವಾಗಿದೆ.

ಬದುಕು ಸಾಗಿಸಲು‌ ಹಣದ ಅವಶ್ಯಕತೆಯಿದ್ದು ಅದನ್ನು ಸಂಪಾದಿಸಲು ದಾರಿಗಳು ಮುಚ್ಚಿದಾಗ ಜೀವನದಲ್ಲಿ ಪಡುವ ಪಡಿಪಾಟಲು ವರ್ಣಿಸಲಸಾಧ್ಯ‌. ಅಂತಹ ಬೇಗುದಿಯನ್ನು ಈ ಕವಿತೆಯ ಮೂಲಕ ನಿರೂಪಿಸಿದ್ದಾರೆ.

ಹಣ ಸಂಪಾದಿಸಲು ದುಷ್ಟ ಮಾರ್ಗಗಳು ಸೆಳೆಯುತ್ತವೆ. ಆದರೆ ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳಲು ಮನವು ಒಪ್ಪುವುದಿಲ್ಲ ಎಂಬುದು ಕವಿತೆಯ ಭಾವವಾಗಿದೆ. ಹಣವಿರುವ ಜನರು ಗುಣದ ಕರೀದಿಗೆ ತೊಡಗುತ್ತಾರೆ. ಇದರಿಂದ ತಾಳ್ಮೆಗೆಟ್ಟ ಮನವು ರೋದಿಸುತ್ತದೆ. ನಮ್ಮನ್ನರಿತ ಮನಗಳು ಕೊಡುವ ನೋವಿನ ಅನಾವರಣ ಈ ಕವಿತೆಯ ಪ್ರಮುಖ ಸಾರವಾಗಿದೆ.

ಕವಿತೆಯ ಶೀರ್ಷಿಕೆ

ಈ ಕವಿತೆಯಲ್ಲಿ ಕವಿಯು ಬದುಕಿನ ಅರ್ಥ ವ್ಯರ್ಥಗಳನ್ನು ಕುರಿತು ವಿಡಂಬನೆ ಮಾಡುತ್ತಾ, ತಮ್ಮ ಮನದ ನೋವು, ಯಾತನೆಗಳನ್ನು, ಬದುಕು,ಬರಹದ ಆಯಾಮಗಳನ್ನು ಕುರಿತು ಬರೆದಿದ್ದಾರೆ. ಈ ನಿಟ್ಟಿನಲ್ಲಿ ಶೀರ್ಷಿಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ.

ಕವಿತೆಯ ವಿಶ್ಲೇಷಣೆ

ಅರ್ಥ ವ್ಯರ್ಥ

ಕೃತಿ ಹೊರಗಡೆ ತರುವಷ್ಟು ಬರಹಗಳಿವೆ

 ಜೀವಿಸಲು ಅನ್ನ ನೀರಿನ ಅಭಾವ ಗಳಿವೆ

 ನಾ ಹೇಗೆ ಬದುಕು ಕಟ್ಟಿಕೊಳ್ಳಲಿ

ಇಲ್ಲಿ ಕವಿ ಬದುಕಿನ ನಾನಾ ಆಶಯಗಳನ್ನು ವ್ಯಕ್ತಪಡಿಸುತ್ತಾ ಸಾಗಿದ್ದಾರೆ. ಕವಿಗಿಲ್ಲಿ‌ ಬರಹವೇ ಬದುಕಾಗಿದೆ. ಕವಿ ತನ್ನ ‌ಮನದ ತಲ್ಲಣಗಳನ್ನು, ವೇದನೆಗಳನ್ನು, ಜಿಜ್ಞಾಸೆಗಳನ್ನು, ಹತಾಶೆಗಳನ್ನು, ನಿರಾಸೆಗಳನ್ನು, ಜೀವನದ ಪಡಿಪಾಟಲನ್ನು ಕಹಿ ಸಿಹಿ ವಿಚಾರಗಳನ್ನು ಇಲ್ಲಿ ಬರಹದ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ.

ಮಾನವನ ಜೀವನ ವಿಶಾಲವಾದ ಕ್ಯಾನ್ವಾಸ್. ಅದರೊಳಗಿನ ಸಾರ ಅಗಾಧ. ಅಲ್ಲಿ ಮನುಷ್ಯ ಕಲಿಯುವ ಪಾಠ ಅಂತಿಂಥದ್ದಲ್ಲ. ಅದು ಜೀವನಾನುಭವದ ಆಗರ. ಇಲ್ಲಿ ತಾನು ದಕ್ಕಿಸಿಕೊಂಡ ಅನುಭವವನ್ನು ಸುಂದರವಾದ ಪದಪುಂಜಗಳಲ್ಲಿ ಕಟ್ಟಿದ್ದಾರೆ.

ನಡೆವ ದಾರಿ ದೊಡ್ಡದಾಗಿದೆ. ಎದುರಾಗುವ ಸವಾಲುಗಳು ಅಧಿಕ. ಅಂತಹ ಸವಾಲುಗಳು ಬರಹಕ್ಕೆ ಸ್ಫೂರ್ತಿಯಾಗುತ್ತವೆ. ಇದರಿಂದ ಬರಹಗಳು ಹೆಚ್ಚಾಗುತ್ತಾ ಹೋಗುತ್ತವೆ.

ಮನದ ಎಲ್ಲ ಭಾವಗಳು ಕಥೆ, ಕವನ, ಲೇಖನ, ಕಾದಂಬರಿಗಳ ರೂಪದಲ್ಲಿ ಸುಂದರವಾದ ಪದಭಾವ ಮತ್ತು ಅರ್ಥಗಳನ್ನು ಒಳಗೊಂಡು ಬಿಳಿಹಾಳೆಯ ಮೇಲೆ ಶೃಂಗಾರಗೊಂಡಿವೆ. ಆದರೆ ಅದನ್ನು ಬರೆದವ ಮಾತ್ರ ಓದಬಲ್ಲ. ಕಾರಣ ಅವು ಪುಸ್ತಕ ರೂಪದಲ್ಲಿ ಹೊರಬಂದಿಲ್ಲ ಎನ್ನುತ್ತಾರೆ ಕವಿಗಳು.

ಇಲ್ಲಿ ಬರಹಗಳು ಬರಿ ಹಾಳೆಯ ಮೇಲೆ ಮಾತ್ರ ಉಳಿಯುವುದಕ್ಕೆ ಕವಿ ಮನಸ್ಸು ರೋದಿಸುತ್ತದೆ. ಅದಕ್ಕೆ ಪುಸ್ತಕ ರೂಪ ನೀಡುವ ಮಹದಾಸೆಯ ಕವಿಯದು. ಆದರೆ ಅದಕ್ಕೆ ಖರ್ಚು ವೆಚ್ಚಗಳು ಪೆಡಂಭೂತಗಳಂತೆ ಬೆಂಬಿಡದೆ ಕಾಡುತ್ತವೆ ಎನ್ನುವ ಬರಹಗಾರರು ಬರಹವೆಂಬುದು ಹವ್ಯಾಸ ಆದರೆ ಇದರಲ್ಲಿ ಜಯ ಪಡೆಯಲು ತಾನು ಹೇಗೆ ಪ್ರಯತ್ನಿಸಲಿ?  ನನಗೆ ಸಲು ಬೇಕಾದ ಅಗತ್ಯಗಳಾದ ನೀರು, ಆಹಾರ, ವಸತಿ ದೊರೆಯುತ್ತಿಲ್ಲ. ನಾನಾ ಕಾರಣಗಳಿಂದ ಕೈಜಾರಿ ಹೋಗುತ್ತಿದೆ. ಇದರಿಂದ ಬವಣೆಗಳ ಸಾಮ್ರಾಜ್ಯವೇ ನನ್ನದಾಗಿದೆ. ಹಾಗಿರುವಾಗ ನಾನು ಬರೆದ ಬರಹಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಿ ಎಂದು ತುಂಬಾ ಖೇದಭಾವದಿಂದ ನುಡಿಯುತ್ತಾರೆ. ಹಾಗಾಗಿ ಬದುಕು ಬರಿ ಹೋರಾಟವಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ದುಸ್ತರವಾಗಿರುವ‌ ಈ  ಕಾಲದಲ್ಲಿ ನಾನು ಹೇಗೆ ಬದುಕು ನಡೆಸಲಿ ಎನ್ನುತ್ತಾರೆ ಕವಿಗಳು.

ಇದು ಎಲ್ಲ ಬರಹಗಾರರ ಬದುಕಿನ ನೈಜ ಕಥೆ ವ್ಯಥೆಯಾಗಿದೆ. ಸರಸ್ವತಿ ನಾಲಿಗೆ ಮೇಲೆ ನಲಿಯುತ್ತಾಳೆ. ಜ್ಞಾನ ಮೆದುಳಲ್ಲಿ ರಾರಾಜಿಸುತ್ತದೆ. ಆದರೆ ಇವರ ಬಳಿ ಲಕ್ಷ್ಮಿ ಮಾತ್ರ ಸುಳಿಯಲಾರಳು. ಹಾಗಾಗಿ ಬರಹಗಾರರು ಬಡವನಾಗಿಯೇ ಉಳಿಯುತ್ತಾನೆ. ಎನ್ನುವ ಕವಿ ಇಂತಹ ಪರಿಸ್ಥಿತಿಯಲ್ಲಿ ನಾನು ಬರಹವನ್ನು ಹೇಗೆ ಬದುಕಾಗಿಸಿ ಕೊಳ್ಳಲಿ ಇದರಿಂದ ಹೊಟ್ಟೆ ತುಂಬುವುದಿಲ್ಲ ಎಂದು ಬರಹವನ್ನು ಕೈ ಚೆಲ್ಲುತ್ತಾರೆ. ಇದರಿಂದ ಅದೆಷ್ಟು ಪ್ರಬುದ್ಧ ಸಾಹಿತ್ಯ ಪುಸ್ತಕರೂಪ ಪಡೆಯದೆ ವ್ಯರ್ಥವಾಗುತ್ತದೆ ಎಂಬುದು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಸತ್ಯವಾಗಿದೆ.

ಅನಾಮಿಕ ಕರೆಗಳು ಸದ್ದು ಮಾಡುತ್ತಿವೆ

 ಸ್ವಾಭಿಮಾನಕ್ಕೆ ಹೆದರಿ ಬೆದರಿ ನಿಂತ ನೀರಾಗಿವೆ

ನಾ ಹೇಗೆ ಬದುಕು ಕಟ್ಟಿಕೊಳ್ಳಲಿ

ಇಲ್ಲಿ ಸ್ವಾರ್ಥಿಗಳು ತಮ್ಮ ಅನುಕೂಲ ಸಿಂಧು ವಾದ ಪ್ರಯೋಗಿಸಿ ಬಡವರು, ನಿರುದ್ಯೋಗಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುವರು. ಎನ್ನುವ ಕವಿಗಳು ಇದಕ್ಕಾಗಿ ನಾವು ಸ್ವಾಭಿಮಾನವನ್ನು ಬಲಿಕೊಡಬೇಕು. ಉಳ್ಳವರ ಅಡಿಯಾಳಾಗಿ, ನಾವು ಅವರ ಕಾಲಡಿ ಧೂಳಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಸಾಗಬೇಕು. ಅದಕ್ಕಾಗಿ ಅನಾಮಿಕ ಕರೆಗಳು ಸದ್ದು ಮಾಡುತ್ತಿವೆ ಎಂದರೆ ಇವರನ್ನು ಸೆಳೆಯಲು ಪ್ರಯತ್ನಿತ್ತವೆ ಎಂದರ್ಥ.

ಆದರೆ ಕವಿಗಿದು ಸುತಾರಾಂ ಇಷ್ಟವಿಲ್ಲ. ಕಾರಣ ಅವರು ಈಗ ಸಹಾಯ ಮಾಡಿ ತನ್ನ ಹಂಗಿನಲ್ಲಿ ಸಿಲುಕಿಸಿಕೊಂಡು ಮುಂದೆ ಪರರ ಮುಂದೆ ಬೆತ್ತಲಾಗಿಸುವ ಜನರ ಕಂಡು ಸ್ವಾಭಿಮಾನ ಕುದಿಯುತ್ತದೆ. ಅವರ ಸಿಂಗ್ ಸೇರದೆ ಸ್ವತಂತ್ರವಾಗಿ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಪರಿಹರಿಸಿಕೊಳ್ಳುವ ಮಾರ್ಗದಲ್ಲಿ ನಾನು ಚಲಿಸಬೇಕಾಗುತ್ತದೆ.ಆದ್ದರಿಂದ ಅತಿ‌ ಸುಲಭವಾಗಿ ಕಟ್ಟಿಕೊಡಲಾಗದು ಎಂಬುದು ಕವಿತೆಯ ಮನದಿಂಗಿತ.

ಅರಿಯುವೆ ಅಕ್ಷರಗಳ ಬರೆಯುವೆ ಮೆರೆಯುವೆ

 ಮನದ ಮೂಖ ವೇದನೆಯನ್ನು ದೂರ ಮಾಡುವೆ

ನಾ ಹೇಗೆ ಬದುಕು ಕಟ್ಟಿಕೊಳ್ಳಲಿ

ಸಾಹಿತ್ಯಕ್ಕೆ ಮನದ ನೋವನ್ನು ದೂರ ಮಾಡುವ ಸಾಮರ್ಥ್ಯವಿದೆ. ಮನಸ್ಸು ದುಃಖದಲ್ಲಿದ್ದಾಗ ಮುಂದಿನ ನಡೆ  ತಿಳಿಯದಿದ್ದಾಗ ನಾವು ಸಾಂತ್ವನಕ್ಕೆ ಯಾವುದಾದರೊಂದು ದಾರಿ ಹುಡುಕಿಕೊಳ್ಳುತ್ತೇವೆ ಎಂದು ಕವಿಯು ತನ್ನ ನೋವನ್ನು ಮರೆಯಲು ಪುಸ್ತಕಗಳನ್ನು ಓದುವೆ, ಅರಿಯುವೆ, ಆಗ ಬದುಕಿನ ಸಾರ ತಿಳಿದು ಮನದ ಭಾರವಿಳಿದು ಸಮಾಧಾನಪಡುವೆ ಎನ್ನುತ್ತಾರೆ.

ತವಕಿಸುವ ಮನಸ್ಸು ನಿರುಮ್ಮಳವಾಗಲು ಬರಹವೊಂದು ಮದ್ದಾಗಿದೆ. ನಮ್ಮ ಆತಂಕ, ಅಂತರಂಗದಲ್ಲಿ ಅಡಗಿದ್ದ ದುಗುಡಗಳು, ಮನದೊಳಗಿನ ತೊಳಲಾಟಗಳಿಗೆಲ್ಲ ಜೀವತುಂಬಿ ಅಕ್ಷರ ರೂಪದಲ್ಲಿ ಬರೆಯುವೆ. ಜೊತೆಗೆ ಇತರರು ಬರೆಯುವ ಸಾಹಿತ್ಯವನ್ನು ಸಾಕಷ್ಟು ಓದುವೆ. ಆ ಮೂಲಕ ನೊಂದು ಬೆಂದ ಮನಸ್ಸಿಗೊಂದಿಷ್ಟು ಸಾತ್ವನ ತುಂಬಿಕೊಳ್ಳುವೆ.

ಇಲ್ಲಿ ನಾವು ಖುಷಿಯನ್ನಾಗಲಿ, ದುಃಖವಾಗಲಿ ಬರಹದ ಮೂಲಕ ಬಿತ್ತರಿಸಿದಾಗ ಲವಲವಿಕೆಗೆ ಮನಸ್ಸು ಶರಣಾಗುತ್ತದೆ.ಆಗ ಸಂತೋಷವಾಗಿ ಮೆರೆಯುವೆ ಎನ್ನುವ ಕವಿಯು ಇದರಿಂದ ಮನದ ಮೂಖ ವೇದನೆಯನ್ನು ದೂರ ಮಾಡಿಕೊಳ್ಳುವೆ. ಆದರೆ ಓದು ಬರಹದಿಂದ ನಾನು ಹೇಗೆ ಬದುಕು ಕಟ್ಟಿಕೊಳ್ಳಲಿ ಎಂದು ಪರಿತಪಿಸುತ್ತಾರೆ.

ಹೃದಯದಲ್ಲಿ ನೋವು ಇಲ್ಲದಿದ್ದರೆ ಮತ್ತಷ್ಟು ಮಗದಷ್ಟು ನವ ನಾವಿನ್ಯದ ಬರಹಗಳು ಮೂಡುತ್ತವೆ. ಜೊತೆಗೆ ಹೊಸ ಹೊಸ ವಿಚಾರಗಳನ್ನು ಓದಿ ತಿಳಿಯಲು ಮನಸ್ಸು ಹಾತೊರೆಯುತ್ತದೆ. ಅಂತಹ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಬೇಕು ಎಂಬುದು ಕವಿಯ ಆಶಯವಾಗಿದೆ.

ಇಲ್ಲಿ ನಾವು ಚಿಂತಿಸಲೇಬೇಕಾದ ಸಂಗತಿಯೆಂದರೆ ಬರಹವೆಂಬುದು ಬದುಕಿಗೆ ಒಂದು ಮೂಲವಾಗಿ, ಜೀವನ ನಿರ್ವಹಣೆಗೆ ಸಹಕಾರಿಯಾಗಬೇಕು. ನಮ್ಮ ಹಿಂದಿನ ಕವಿಗಳು ಕೂಡ ಪುಸ್ತಕ ಪ್ರಕಟಿಸಲು ಪಟ್ಟ ಪ್ರಯಾಸ ಅಷ್ಟಿಷ್ಟಲ್ಲ. ಅದು ಇಂದಿಗೂ ಸಾಗುತ್ತಿದೆ. ಹಾಗಾಗಿ ಬರಹಗಾರರಿಗೆ ಪ್ರೋತ್ಸಾಹ ದೊರೆತರೆ ಅವರ ಶಕ್ತಿ ಹೆಚ್ಚುತ್ತದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ.

ಹಣವಿಲ್ಲ ಎನಗೆ ಹೆಣಭಾರ ಹೊರುವೆ

 ಚಿಂತನೆಗಳೆಲ್ಲವೂ ಅಗ್ನಿಯಲ್ಲಿ ಚಿತೆ ಯಾಗುತ್ತಿವೆ

 ನಾ ಹೇಗೆ ಬದುಕು ಕಟ್ಟಿಕೊಳ್ಳಲಿ

ಹಣವಿದ್ದರೆ ಸಾಕು ಸರ್ವವೂ ಕಾಲಡಿಯಲ್ಲಿ ಇರುತ್ತದೆ. ಬಯಸಿದ ಭಾಗ್ಯ ನಮ್ಮನ್ನರಸಿ ಬರುತ್ತದೆ. ನಮ್ಮ ಆರ್ಥಿಕ ಸಂಕಷ್ಟಗಳು ತರಗೆಲೆಗಳಂತೆ ಉದುರುತ್ತವೆ. ನಮ್ಮ ಜವಾಬ್ದಾರಿಯ ಹೆಗಲು ಹಗುರವಾದಂತೆ ತೋರುತ್ತದೆ. ಸಮಸ್ಯೆ ಬಂದರೂ ಸವಾಲುಗಳು ಎದುರಾದರೂ ಬಗೆಹರಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಧೈರ್ಯವಿರುತ್ತದೆ.

ಹಾಗಂದ ಮಾತ್ರಕ್ಕೆ ಹಣವೆ ಸರ್ವಸ್ವವಲ್ಲ‌. ಅಥವಾ ಇಲ್ಲದ ಬದುಕು ಸಂಪೂರ್ಣವಲ್ಲ. ಕೊನೆಪಕ್ಷ ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಾದದರೂ ಹಣದ ಅವಶ್ಯಕತೆ ನಮಗಿರುತ್ತದೆ. ಆದುದರಿಂದ ಸ್ವಲ್ಪ ಮಟ್ಟಿಗೆ ನಿರಾಳವಾಗಿ ಉಸಿರಾಡಬಹುದು. ಆದರೆ ಕವಿ ಧನವಿಲ್ಲದ ಅಸಹಾಯಕ ಪರಿಸ್ಥಿತಿಯನ್ನು ಓದುಗರ ಮುಂದಿಡುತ್ತಾರೆ. ಜೀವನದ ಹೊಣೆಗಾರಿಕೆಗಳೆಂಬ ಭಾರವನ್ನು ನಾನು ಹೊರಬೇಕಾಗಿದೆ. ಆದರೆ ಅದಕ್ಕೆ ಸಮರ್ಪಕವಾದ ಶಕ್ತಿ ನನ್ನಲ್ಲಿಲ್ಲ ನಾನು ಹೇಗೆ ಬದುಕು ಕಟ್ಟಿಕೊಳ್ಳಲಿ ಎಂದು ವಿಷಾದ ಪಡುತ್ತಾರೆ.

ಕವಿಯು ಬದುಕಿನ ದಾರಿಯ ಉದ್ದಕ್ಕೂಯಿರುವ ಕಗ್ಗಂಟುಗಳನ್ನು ಬಿಡಿಸಿಕೊಳ್ಳಲಾಗದೆ ಚಿಂತೆಯಲ್ಲಿ ಮುಳುಗಿದ್ದೇನೆ ಎನ್ನುವ ಕವಿಯು, ಚಿಂತೆಗಳು ನಮ್ಮನ್ನು ಹೇಗೆ ಸುಡುತ್ತವೆ ಎಂಬುದಕ್ಕೆ ಚಿತೆಯ ರೂಪಕವನ್ನು ಬಳಸಿರುವುದು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಚಿಂತೆಯಿರುವ ಮನುಷ್ಯ ಚಿತೆಯೇರಿದ ಹೆಣಕ್ಕೆ ಸಮಾನ. ಚಿತೆ ಸತ್ತ ದೇಹವನ್ನು ಸುಟ್ಟರೆ, ಚಿಂತೆ ಜೀವಂತ ಕಾಯವನ್ನು ದಹಿಸುತ್ತದೆ. ಹಾಗೆ ನಾನು ಜವಾಬ್ದಾರಿಗಳ ನಿರ್ವಹಣೆ ಮಾಡಲು ಆದಷ್ಟು ಬಡವನಾಗಿರುವೆ. ಆದ್ದರಿಂದ ನಿತ್ಯ ಚಿಂತೆಯಲ್ಲಿ ಮುಳುಗುವೆ ಎನ್ನುತ್ತಾರೆ.

ಅರ್ಥ ಮನಗಳು ವ್ಯರ್ಥ ಲೆಕ್ಕ ಕೇಳುತ್ತಿರುವೆ ಸಹನೆ ತಾಳ್ಮೆ ಹರಿಹರಕ್ಕೆ ಗಳು ಮುರಿದಿವೆ ಹೇಗೆ ಬದುಕು ಕಟ್ಟಿಕೊಳ್ಳಲಿ

ನಮ್ಮನ್ನು ಅರಿತಿರುವ ಮನಸ್ಸುಗಳು ನಮಗೆ ಹೂವಂತೆ ಬಾಸವಾಗದೆ ಚುಚ್ಚುವ ಮುಳ್ಳಾಗಿರುವುದು ವಿಪರ್ಯಾಸ .ನಮಗೆ ಅಪರಿಚಿತರಿಂದಲೋ, ದೂರದವರಿಂದಲೋ ಕೆಡುಕಾದರೆ ಅದು ನೀಡುವ ನೋವು ಕಡಿಮೆ ಪ್ರಮಾಣದ್ದಾಗಿರುತ್ತದೆ. ಕಾರಣ ಅವರಿಗೆ ನಮ್ಮ ಬಗ್ಗೆ ತಿಳಿದಿರುವುದಿಲ್ಲ, ನಮ್ಮೊಳಗಿನ ಒಳ್ಳೆಯ ಮನಸ್ಸು ಅವರಿಗೆ ಕಂಡಿರುವುದಿಲ್ಲ, ಯಾವುದೋ ಪೂರ್ವಗ್ರಹಪೀಡಿತರಾಗಿ ನಮ್ಮ ಮೇಲೆ ದ್ವೇಷ ಸಾಧಿಸುವರು ಅಥವಾ ನಮ್ಮ ಬಗ್ಗೆ ಅಪಪ್ರಚಾರ ಮಾಡುವರು. ತೊಂದರೆಗೀಡು ಮಾಡುವರು. ಆದರೆ ನಮ್ಮ ಬಗ್ಗೆ ಸಂಪೂರ್ಣ ತಿಳಿದಿರುವ ಮನುಷ್ಯರು ಬಂಧು,ಬಾಂಧವರು, ಒಡನಾಡಿಗಳು, ಸ್ನೇಹಿತರು, ಹಿತೈಷಿಗಳು ಎಂಬ ಹಣೆಪಟ್ಟಿ ಕಟ್ಟಿ ಕೊಂಡಿರುವವರು ನಮ್ಮ ಬೆನ್ನಿಗೆ ಚೂರಿ ಹಾಕಿ ನಮ್ಮನ್ನು ಕಷ್ಟದಲ್ಲಿ ಸಿಲುಕಿಸಿ ತಮಾಷೆ ಮಾಡಿ ಗಹಗಹಿಸುವರು.

ಅಂತಹ ಸಮಯದಲ್ಲಿ ಕೆಲಸಕ್ಕೆಬಾರದ ಅನಾವಶ್ಯಕ ಮಾತುಗಳನ್ನಾಡಿ ಕೊಂಕು ನುಡಿಗಳಿಂದ ಘಾತ ಮಾಡುವರು. ಆದರೆ ಎಲ್ಲವನ್ನೂ ಸಹಿಸಿಕೊಳ್ಳಲು ನಾನೇನು ಕಲ್ಲಲ್ಲವಲ್ಲ. ನಾನು ಅರಿಷಡ್ವರ್ಗಗಳಿಂದ ಕೂಡಿದ ಮನುಷ್ಯನಲ್ಲವೇ?ನನಗೂ ಕೋಪ,ತಾಪ, ಅವಮಾನಗಳು ಒಂದು ಹಂತ ಮೀರಿದಾಗ ತಾಳ್ಮೆಯ ಕಟ್ಟೆ ಒಡೆದು ಪ್ರವಾಹೋಪಾದಿಯಲ್ಲಿ ಹರಿಯುವುದು. ಎಷ್ಟು ನೋವು ತಡೆಯಲು ಸಾಧ್ಯ ಮನಸ್ಸಿಗೆ,

ಅವರ ತಾಳ್ಮೆಯೆಂಬ ಹಕ್ಕಿಯ ರೆಕ್ಕೆಗಳು ಮುರಿದಾಗ ಶೋಕಸಾಗರದಲ್ಲಿ ಮುಳುಗಿ ಪರಿತಪಿಸುವರು. ಹೀಗಿರುವಾಗ ನಾನು ಹೇಗೆ ತಾಳ್ಮೆಯ ಬದುಕು ಕಟ್ಟಿಕೊಳ್ಳಲಿ ಎಂದು ಆಕ್ರೋಶದಿಂದ ನುಡಿಯುತ್ತಾರೆ.

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಇಲ್ಲಿ ಕವಿಗೆ ಜಗದ ಜಂಜಡಗಳು ಬಹುವಾಗಿ ಕಾಡಿವೆ. ಅದ್ಭುತವಾದ ಚಿಂತನಾಶೀಲ ಕಾವ್ಯವಸ್ತುವನ್ನು ಇಟ್ಟುಕೊಂಡು ಕವಿತೆ ರಚಿಸಿದ್ದಾರೆ.

ಇಲ್ಲಿ ಕವಿಯ ಸಮ್ಮಿಶ್ರ ಭಾವವನ್ನು ಕವಿತೆಯಲ್ಲಿ ಕಾಣಬಹುದು. ಇದು ವಾಸ್ತವಿಕ ಬದುಕಿನ ಕಹಿ ಸತ್ಯವನ್ನು ಹೊತ್ತು ತಂದಿದೆ. ಉಳ್ಳವರಿಗಿಂತ ಇಲ್ಲದವರು ಹೇಗೆ ಭಿನ್ನವಾಗಿ ಜೀವಿಸುತ್ತಾರೆ, ಚಿಂತಿಸುತ್ತಾರೆ ಎಂಬ ಸತ್ಯವನ್ನು ಈ ಕವಿತೆ ಅನಾವರಣ ಮಾಡುತ್ತದೆ.

ಮನುಷ್ಯ ಬರಹದ ಮೂಲಕ ಕಾಣುವ ತೃಪ್ತಿ ಮತ್ತು ತಾಳ್ಮೆಯ‌ ತಾಪವನ್ನು ಇಲ್ಲಿ ಕಾಣಬಹುದು. ಅವರ ಭಾವಕೋಶ ಸ್ಪಷ್ಟವಾಗಿದ್ದು

ಒಂದಷ್ಟು ನಿಖರತೆಯೊಂದಿಗೆ

ಕಾವ್ಯ ಹೆಣೆಯಲಿ ಎಂದು ಹಾರೈಸುವೆ.

ಮುಂದಿನ ವಾರ ಮತ್ತೊಂದು ಕಾವ್ಯ ವಸ್ತುವಿನೊಂದಿಗೆ ನಿಮ್ಮ ಮುಂದೆ ಬರುವೆ.‌ಅಲ್ಲಿಯವರೆಗೂ ನಮಸ್ಕಾರಗಳು.


ಅನುಸೂಯ ಯತೀಶ್

ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

One thought on “

  1. ನಿಜವಾದ ಮಾತುಗಳು mam, ಇವರು ಹೊಸ ಪ್ರತಿಭೆಗಳಿಗೆ ದಾರಿ ದೀಪವಾಗಿದ್ದಾರೆ, ಸಾಹಿತ್ಯದಲಿ ಇವರ ಸೇವೆಗೆ ಅಭಿನಂದನೆಗಳು

Leave a Reply

Back To Top