ಪುಸ್ತಕ ಸಂಗಾತಿ
ಇರುವುದು ಒಂದೇ ರೊಟ್ಟಿ
ಸಂಬಂಧಗಳ ಕುಲುಮೆಯಲಿ ಬೆಂದ ಕವಿತೆ
ಇರುವುದು ಒಂದೇ ರೊಟ್ಟಿ
ಶೀರ್ಷಿಕೆ;ಇರುವುದು ಒಂದೇ ರೊಟ್ಟಿ (ಕವಿತೆಗಳು)
ಲೇಖಕರು; ಡಾ. ಸದಾಶಿವ ದೊಡಮನಿ
ಸಂಪರ್ಕ ಸಂಖ್ಯೆ; ೬೪೮೧೯೩೧೯೭೦
ಪ್ರಕಾಶಕರು; ಚಂದ್ರಭಾಗ ಪ್ರಕಾಶನ, ಬಸವನಗರ
ಬಾಗಲಕೋಟೆ/ ಸಂಪರ್ಕ ಸಂಖ್ಯೆ;೬೩೬೨೩೦೭೬೧೯
**************
ಕವಿ ಮನ ಅದು ಎಂದಿಗೂ ಪ್ರೀತಿ ಪ್ರೇಮಕ್ಕಾಗಿ ಹಪಹಪಿಸುವ, ಮಾನವೀಯ ಸಂಬಂಧಗಳ ಸಂವೇದನೆಗೆ ಸ್ಪಂದಿಸುವ, ಜೀವ ಕಾರುಣ್ಯದ ಕ್ಷಣಗಳಿಗೆ ತುಡಿಯುವ ದಟ್ಟ ವನ. ಅವ್ಯಕ್ತ ಅಗೋಚರ ಸತ್ಯಗದಂಡಾರಣ್ಯ. ವಿಷಾದ, ನೋವು-ನಲಿವಿನ ಸಂಗಮದಲಿ ಮಿಂದೆದ್ದ ಕಾಣದ ಕಾನನ. ಕವಿ ಮನದ ದಟ್ಟ ಅನುಭವಗಳ ಬಗ್ಗೆ ಏನೆಲ್ಲಾ ಬರೆದರೂ ಕಡಿಮೆಯೇ!.
ಇಂಥದೊಂದು ಕವಿಮನದ ಅನಾವರಣವೇ “ಇರುವುದು ಒಂದೇ ರೊಟ್ಟಿ”. ರೊಟ್ಟಿ ಒಂದೇ ಆದರೂ ಹಸಿದ ಹೊಟ್ಟೆಗಳು ನೂರಾರು, ಸಾವಿರಾರು.. ಬಡತನದ ಬೇಗೆಯಲ್ಲಿ ಬೆಂದ ಜೀವಗಳು ಕೋಟಿ ಕೋಟಿ. ಇರುವ ಒಂದು ರೊಟ್ಟಿಯನ್ನು ಯಾರಿಗೆ ಹಂಚಬೇಕು ಯಾರಿಗೆ ಬಿಡಬೇಕು. ಇರುವ ಒಂದು ರೊಟ್ಟಿಯನ್ನು ಎಲ್ಲರಿಗೂ ಹಂಚುವ ಹೃದಯ ವೈಶ್ಯಾಲತೆಯ ಮೂಲಕ ತನ್ನ ಹಸಿವು ನೀಗಿಸಿಕೊಳ್ಳುವ ಕವಿಗೆ ಹಸಿವು ಇರುವುದು ಮಾನವೀಯ ಸಂಬಂಧಗಳ ಮೂಲದಲ್ಲಿ, ಸ್ನೇಹ ಸಂಬಂಧಗಳ ಹುಡುಕಾಟದಲ್ಲಿ. ಅಜ್ಜ ಅಜ್ಜಿ, ಅವ್ವ ಅಪ್ಪ, ಅಣ್ಣ ತಮ್ಮ, ಅಕ್ಕ, ತಂಗಿ, ಮಗಳು ಇಂಥ ರಕ್ತ ಸಂಬಂಧಗಳಂತೆ ಜಗದ ನೂರಾರು ಮಾನವೀಯ ಸಂಬಂಧಗಳಿಗೆ ಇರುವ ಒಂದು ರೊಟ್ಟಿಯನ್ನು ಹಂಚಿ ಕಾವ್ಯ ಕಟ್ಟಿ ನೋವಿನಲ್ಲೂ ಖುಷಿ ಪಡುವ ಸಂವೇದನಾಶೀಲ ಹೃದಯ ರೊಟ್ಟಿ ಕವಿ ಡಾ. ಸದಾಶಿವ ದೊಡಮನಿಯವರದು. “ಇರುವುದು ಒಂದೇ ರೊಟ್ಟಿ” ಎನ್ನುವ ಶೀರ್ಷಿಕೆಯೇ ಮನಕಲಕುವಂಥದ್ದು ಮತ್ತು ಸಮಾನ ಮನಸ್ಕರನ್ನು ಸೆಳೆಯುವಂಥದ್ದು. ಶೀರ್ಷಿಕೆಯಂತೆ ಕಾವ್ಯ ಕೂಡ ಅಷ್ಟೇ ಪರಿಣಾಮಕಾರಿ ಆಗಿರುವಂಥದ್ದು.
ಇರುವುದು ಒಂದೇ ರೊಟ್ಟಿ
ತಮ್ಮ ತಂಗಿ ಇಬ್ಬರೂ ಅರ್ಧ ಅರ್ಧ ತಿಂದರು!
ನಾನು ಗುಟುಕು ನೀರು ಕುಡಿದೆ
ಆಕ್ಕ ಚರಗಿ ತಳದಲ್ಲಿಯ
ಹನಿ ನೀರಿಗೆ ನಾಲಿಗೆ ಒಡ್ಡಿದಳು
ಅವ್ವ, ಅಪ್ಪ ಒಣ ಉಗುಳು ನುಂಗಿ ಮಲಗಿದರು!
ಇರುವುದು ಒಂದೇ ಕೌದಿ
ಮಿಕ್ಕ ಹಾಸಲಿಲ್ಲ ಹೊದಿಯಲಿಲ್ಲ
ಅಕ್ಕ ತಂಗಿಯರ ಕೈ, ತಲೆಗೆ ಬಂದರೆ
ನನ್ನ ತಮ್ಮನ ಕಾಲಿಗೆ ಬಾರದು
(ಇರುವುದು ಒಂದೇ ರೊಟ್ಟಿ)
ಹೀಗೆ ತನ್ನ ಬಡತನದ ದಿನಗಳನ್ನು ನೆನಪಿಸಿಕೊಳ್ಳುವ ಕವಿ ತುಂಬು ಹೃದಯದಿಂದ ತಾನು ಪ್ರೀತಿಸುವ ತನಗಾಗಿ ಸರ್ವಸ್ವವನ್ನೇ ಧಾರೆಯೆರೆದ ಜೀವಗಳಿಗೆ ತನ್ನ ಬಹುಪಾಲು ಕಾವ್ಯದ ರೊಟ್ಟಿಯನ್ನು ಮೀಸಲಿಟ್ಟಿದ್ದಾರೆ.
ಅಜ್ಜನ ಆಸ್ತಿಯೆಂಬಂತೆ
ಅವ್ವ ನೋವನ್ನೇ
ಪಡೆದು ಬಂದಳು
ಹಿರಿಯ ಮಗಳೊಂದಿಗೆ ಗಂಡನಿಲ್ಲ
ಎಂಬ ಕೊರಗು
ಮಗಳು ತೀರಿದಳೆಂಬುದು ಮೊಗದೊಂದು ಕೊರಗು
ಈ ಗಾಯ ಇನ್ನೂ ಹಸಿ–ಹಸಿ ಇರುವಾಗ ಕಿರಿ ಮಗ ಹಾಸಿಗೆ ಹಿಡಿದ, ತೀರಿದನೆಂಬುದು
ತೀರಲಾಗದ ನೋವು! (ಅವ್ವ)
ಇಡೀ ಮನೆಯೇ ಸಾವಿನ ಮನೆಯಾದಾಗ ತನ್ನ ಹಡೆದವ್ವ ಪಡುವ ಯಾತನೆಯನ್ನು ತುಂಬ ಆರ್ದ್ರವಾಗಿ ಕವಿ ಇಲ್ಲಿ ಕಟ್ಟಿ ಕೊಡುತ್ತಾರೆ.
ಅಪ್ಪ ತೋಡಿದ ಕೆರೆ-ಬಾವಿ ಎಂದೂ ಬತ್ತಲಿಲ್ಲ
ಹಾಕಿದ ಒಡ್ಡು-ಬಾಂದಾರಗಳು ಎಂದೂ ಒಡೆಯಲಿಲ್ಲ. ಇಡೀ ಊರಿಗೆ ಊರೇ ಅಪ್ಪ ತೋಡಿದ ಕೆರೆ-ಬಾವಿಯ ನೀರು
ಕುಡಿಯುತ್ತಾರೆ
ಅಪ್ಪ ಮಾತ್ರ ಕೆರೆ–ಬಾವಿ ಮುಟ್ಟಾಂಗಿಲ್ಲ,
ಮುಟ್ಟಿ ನೀರು ಕುಡಿಯಾಂಗಿಲ್ಲ (ಅಪ್ಪ)
ಇದು ಅಸ್ಪರ್ಶತೆಯ ಇನ್ನೊಂದು ಕರಾಳ ರೂಪ. ಬಾವಿ ತೋಡಲು, ಕೆರೆ ಕಟ್ಟಲು ದಲಿತರು ಬೇಕು. ಉಳ್ಳವರ ದಾಹ, ಹಸಿವು ನೀಗಲು ಅವರ ಬೆವರಿನ ಫಲವಾಗಿ ಹುಟ್ಟಿದ ಅನ್ನ ನೀರು ಬೇಕು. ಆದರೆ ಅದೇ ಅನ್ನ ನೀರು ಇವರಿಗೇ ನಿಷಿದ್ಧ. ಎಂಥ ಭೀಕರ ವ್ಯವಸ್ಥೆ. ತನ್ನ ತಂದೆ ಅನುಭವಿಸಿದ ನರಕ ಯಾತನೆಯನ್ನು ಕವಿ ಇಲ್ಲಿ ದಾಖಲಿಸಿದ್ದು ತಮ್ಮ ಇಡೀ ಸಮುದಾಯ ಅನುಭವಿಸಿದ ನೋವಿನ ಸಂಕೇತವಾಗಿ ಸಮಷ್ಟಿ ಪ್ರಜ್ಞೆಯಾಗಿ ಕಾಣುತ್ತದೆ.
ನೀನು ಬಂದಾಗಿನಿಂದಲೂ
ಏನೋ ಒಂದು ತರಹದ ಕಳೆ
ಕೆನೆಗಟ್ಟಿದೆ ಮಗಳೇ
ಮನ–ಮನೆಯೊಳಗೆ (ಅಪೂರ್ವ)
ಇಂಥ ಸಾವು ನೋವುಗಳು ಮರೆಯಲೆಂದೇ ಜೀವನದಲ್ಲಿ ಆಗೊಂದು ಈಗೊಂದು ಖುಷಿಯ ಸಂದರ್ಭಗಳು ಕೂಡ ಬಂದು ಬಿಡುತ್ತವೆ. ತನ್ನ ಮಗಳು ಹುಟ್ಟಿದ ಮೇಲೆ ಕವಿಯ ಮನೆ ಮತ್ತು ಮನದೊಳಗೆ ಆನಂದದ ಹೊಳಪು ಹರಡುವದನ್ನು ಕಾಣುತ್ತೇವೆ.
ಅವ್ವಳ ಮುದ್ದು ಬಳ್ಳಿ;
ಅಪ್ಪನ ಬದುಕ ಸಿರಿ,
ಅಕ್ಷರಾಳ ಮುದ್ದು ತಂಗಿ ನೀನು
ಮುತ್ಯಾ, ಆಯಿ, ಮಾಮಾ, ಅತ್ತಿ, ಚಿಕ್ಕಿಯರಿಗೆ
ನೀನೇ ಅಚ್ಚು–ಮೆಚ್ಚು
ಹೊತ್ತು ಹೊಂಡಿದರೂ ಮುಳುಗಿದರೂ
ನಿನ್ನದೇ ಮಾತು, ಗುಣ–ಗಾನ
ಅವರ ನಾಲಿಗೆಯ ಮೇಲೆ (ಸಂಸ್ಕೃತಿ)
ಬರೆಯಲೂ ಸ್ಫೂರ್ತಿ, ಬದುಕಲೂ ಸ್ಫೂರ್ತಿ
ನಿನ್ನ ನೆನಪೋ
ದುಡಿ–ದುಡಿದು ದಣಿದಾಗ ತಂಪೆರೆವ ತಾಯಿ
ನಿನ್ನ ನೆನಪೋ
ನೆಲ–ಮುಗಿಲ ತುಂಬ ನಿನ್ನ ನೆನಪ ಹಾಲಳ್ಳಿ ಚಾಚ್ಯಾದೋ
(ತಮ್ಮನಿಗೆ)
ಎನ್ನುವಂತಹ ತನ್ನ ಜೀವನ ಘಟನೆಗಳು ದಾಖಲಿಸಿದಾಗ ಈ ಕವನಗಳು ಕವಿಯ ಜೀವನಾನುಭದ, ಆತ್ಮವೃತ್ತಾಂತದ ಹಾಡುಗಳಾಗಿ ಕೇಳಿಸುತ್ತವೆ. ಇದರಲ್ಲಿ ಮುಖ್ಯವಾಗಿ ತನ್ನ ಪ್ರೀತಿ ಪಾತ್ರರ ಅಗಲಿಕೆ ಮಾತ್ರ ಕವಿಗೆ ಕೊನೆಯಿಲ್ಲದ ವೇದನೆಯಾಗಿ ಹೊರಹೊಮ್ಮುತ್ತದೆ.
ನೀನು ಹೊರಟು ನಿಂತಾಗ
ಇನ್ನೂ ಬಾಳು ಬಳ್ಳಿ ಮೊಗ್ಗೆಯನ್ನು ಬಿಟ್ಟಿರಲಿಲ್ಲ
ಹೋಗುವುದನ್ನು ಅದೆಷ್ಟು ತಪ್ಪಿಸಿದೆವು!
ನಾನು, ಅಪ್ಪ, ಅವ್ವ, ತಂಗಿ
ಆದರೂ ನೀನು ಮನಸ್ಸು ಬದಲಿಸಲಿಲ್ಲ
ವಿಧಿಯನ್ನು ಬೆನ್ನಲ್ಲೇ ಕರೆದುಕೊಂಡು ಬಂದಿದ್ದೆ
ಎಂದು ಕಾಣುತ್ತದೆ
ಅದು ನಮಗಾರಿಗೂ ಗೊತ್ತಾಗಲೇ ಇಲ್ಲ
ಹೇಳದೇ ಕೇಳದೇ ಹೋಗಿಯೇ ಬಿಟ್ಟೆ!
(ತೀರದ ನೋವು)
ಉಣ್ಣಲಿಲ್ಲ, ಉಡಲಿಲ್ಲ.
ಹಸಿಮಣೆಯಂತೂ ಏರಲೇ ಇಲ್ಲ.
ಕಾಣದ ದಾರಿಯ ತುಳಿದೆಯೋ ಬೇಗ
ತೀರದ ದುಃಖವ ಬಿಟ್ಟೋದೋ ನಮಗ
ನಿನ್ನ ನೆನಪು ಹಾಡಾಗಿ ಮೂಡ್ಯಾದೋ ಎದಿಯಾಗ
(ಎಲ್ಲಿ ಹುಡುಕಲಿ ತಮ್ಮನೇ)
ಹೋಗು, ಹೋಗಿ ಬಾ
ಎಂದು ಹೇಳುತ್ತಿರುವೆ ಖರೆ
ಹೃದಯವೇಕೋ ಮೌನ ನುಡಿಯುತ್ತಿದೆ
ಕೊರಳು ಕಟ್ಟಿದೆ, ಕಣ್ಣು ನೀರಾಡುತ್ತಿವೆ ಏನೋ ಕಳೆದುಕೊಳ್ಳುವ ಹಳವಂಡ!
ಎದೆ ನೋಯುತ್ತಿದೆ
ಹೋಗಿ ಬಾ ಜೀವವೇ
ಹೋಗಿ ಬಾ (ಹೋಗಿ ಬಾ ಜೀವವೇ)
ಹೀಗೆ ಪವಿತ್ರ ಸಂಬಂಧಗಳ ಸುತ್ತ ತಿರುಗುವ ಕಾವ್ಯ ಹುಟ್ಟು ಸಾವು, ಸುಖ-ದುಃಖಗಳ ಮಿಶ್ರಣವೇ ಬದುಕು ಎನ್ನುವುದು ಪ್ರತಿಪಾದಿಸುತ್ತದೆ. ಇದರ ಜೊತೆಗೆ ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗುತ್ತ ಪ್ರಸ್ತುತ ನಶಿಸಿ ಹೋಗುತ್ತಿರುವ ಮಾನವೀಯ ಮೌಲ್ಯಗಳ ಕುರಿತು ತುಡಿಯುತ್ತದೆ.
ಬುದ್ಧ, ನಿನ್ನ ಪ್ರೀತಿಯ ಪರಿ
ಅರ್ಥವೇ ಆಗಲಿಲ್ಲ ನಮಗೆ
ಹಾಗಂತಲೇ ನಾವು ಪ್ರೀತಿಯನ್ನು ಮರೆತಿದ್ದೇವೆ
ದ್ವೇಷವನ್ನು ಅರಿತಿದ್ದೇವೆ
ಯುದ್ಧಕ್ಕೆ ಸನ್ನದ್ಧರಾಗುತ್ತಿದ್ದೇವೆ
ನಿತ್ಯ ಗುದ್ದಾಡುತ್ತಿದ್ದೇವೆ
(ಬುದ್ಧ ನಿನ್ನ ಪ್ರೀತಿಯ ಪರಿ…)
ಮುಂದೊಂದು ದಿನ ಇವರು (ಕವಿತೆಯಲ್ಲಿ)
ಉಸಿರಿಗೆ ಜುಲ್ಮಾನೆ ಹಾಕುತ್ತಾರೆ, ಮಾತಿಗೆ ಫಿರ್ಯಾದು ಮಾಡುತ್ತಾರೆ, ನೋಡಿದರೆ ಬಂಧನದ ಆದೇಶ ಹೊರಡಿಸುತ್ತಾರೆ, ನಡೆದರೆ ಶಿಕ್ಷೆ ವಿಧಿಸುತ್ತಾರೆ, ಏಕೆಂದರೆ ನಾವು ಹೆಬ್ಬೆರಳನ್ನೇ ಕಳೆದುಕೊಂಡು ಏಕಲವ್ಯ ಆಗಿರುತ್ತೇವೆ. ಎಡಗೈಲಿ ಸಾಧಿಸಲು ಶತಮಾನಗಳನ್ನೆ ಕಳೆಯುತ್ತೇವೆ ಎಂದು ಹೀಗೆ ಸಾಲು ಸಾಲಾಗಿ ಅಧಿಕಾರಶಾಹಿಗಳ ಕೈಗೆ ಸಿಕ್ಕು ನಲಗುತ್ತಿರುವ ಜನಸಮಾನ್ಯರ ದಯನೀಯ ಸ್ಥಿತಿಯನ್ನು ಕವಿ ನೇರವಾಗಿ ನಿರ್ಭಯವಾಗಿ ಬಿಚ್ಚಿಡುತ್ತಾರೆ. ಮಾನವೀಯತೆ ದುಷ್ಟ ರಾಜಕೀಯ ವ್ಯವಸ್ಥೆಗೆ ಸಿಕ್ಕು ಹೇಗೆ ಅನಾಥವಾಗಿದೆ ಎನ್ನುವುದಕ್ಕೆ ಈ ಕೆಳಗಿನ ಸಾಲುಗಳು ಸಾಕ್ಷಿಕರೀಸುತ್ತವೆ.
ಮಾನವೀಯತೆ ಅನಾಥ!
ಬೀದಿ ಮಗುವಾಗಿ ಕಣ್ಣೀರುಡುವಾಗ
ಇವರು ಕೇಕೇ ಹಾಕಿ ನಗುವರು
ಅಟ್ಟಹಾಸ ಮೆರೆಯುವರು
ಇಟ್ಟ ಹೆಜ್ಜೆಯ ಗುರುತೂ ಬಿಡದವರು
ನೆಲದವ್ವನ ಉಡಿಯೊಳಗಣ ಬೆಂಕಿ ಕಿಡಿಗಳು
ಕಲಿಗಾಲದ ಕುಡಿಗಳು (ಮದ್ದು ಯಾವುದು?)
ಹೀಗೆ ಸಮಾಜದ ಬೇರುಗಳು ಸಡಿಲು ಮಾಡುತ್ತಿರು ಸಾಮಾಜಿಕ ರೋಗಗಳಿಗೆ ಮದ್ದು ಹುಡುಕು ಪ್ರಯತ್ನ ಮಾಡುವ ಕವಿ ಸಮಾಜಿಕ ಅಸಮಾನತೆಯ ದುರಿತ ಕಾಲದಲ್ಲೂ ನಿರಾಶನಾಗಿ ಕೈಚೆಲ್ಲಿ ಕುಳಿತಕೊಳ್ಳದೇ ತನ್ನ ಕಾವ್ಯದ ಮುಖಾಂತರ ಎಲ್ಲ ಅವ್ಯವಸ್ಥೆಯನ್ನು ಸರಿಪಡಿಸುವ ಆಶಾಭಾವನೆಯಿಂದ ತುಟಿಯ ಮೇಲೊಂದು ನಗು ಅರಳಿಸಿದ್ದಾನೆ. ಮತ್ತು ಆ ನಗುವಿಗೆ ಕಾರಣ ಏನೆಂದು ಬರೆದುಕೊಳ್ಳುವುದು ಹೀಗೆ.
ನಗುವುದನ್ನೇ ಮರೆತ ನನಗೆ
ಕಡಲ ದುಃಖವನ್ನು ಕರಗಿಸುವುದು
ಹೇಗೆಂದು ಹೇಳಿ ಕೊಟ್ಟಿತು
ನಿನ್ನ ನಗುವು
ಅದ ತಿಳಿದ ದಿನದಿಂದ ನಾನು
ಸದಾ ಉಕ್ಕೇರುವ ಕಡಲ ಒಡಲು
(ಕರುಣೆ ಬೆಳಕು)
ಕವಿ ಯಾವತ್ತಿಗೂ ಮಾನವೀಯತೆಗಾಗಿ, ಒಲವಿಗಾಗಿ ತುಡಿಯುವ ಮಿಡಿಯುವ ಜೀವಿ. ಅವನು ಪ್ರೀತಿಗಾಗಿ ಬದುಕುತ್ತಾನೆ ಮತ್ತು ಪ್ರೀತಿಯನ್ನೇ ಬೋಧಿಸುತ್ತಾನೆ.
ಜಗದಲ್ಲಿ ಸಿಗುವುದು
ಎಂದೆಂದಿಗೂ ಒಂದೇ
ಅದೇ ಪ್ರೀತಿಯ ಹುಡಿ
ಅದರಲ್ಲಿಯೇ ಹೃದಯ ಹೊರಳಾಡಲಿ
ಬಿಟ್ಟು ಬಿಡು
ಹೃದಯಕ್ಕೆ ಅಂಟಿದ ಪ್ರೀತಿ ಹುಡಿಯ
ಪ್ರತಿ ಹೃದಯಕ್ಕೆ
ಮುಡಿಸುತ್ತಲೇ ನೀ ಸಾಗು
ಆಗುವೆ ಕೊನೆಗೆ ನೀ ಪ್ರೇಮ ಭಿಕ್ಷು
ಜಗದ ಅಕ್ಷು!(ಪ್ರೇಮ ಭಿಕ್ಷು)
ಇಹರು ರಾಮ
ರಹೀಮ್– ಏಸು
ಬುದ್ಧ–ಬಸವ
ಅಂಬೇಡ್ಕರ್ ನಮ್ಮೊಳಗೇ
ಕಲ್ಲು–ಇಟ್ಟಿಗೆ
ಕಟ್ಟಡ ಕಟ್ಟಿ
ಹರಿಸದಿರೋ ರಕ್ತದೋಕುಳಿ
(ಕಟ್ಟುವ ಮುನ್ನ)
ಸುಂದರವಾಗಿ, ಸರಳವಾಗಿ, ಹೃದ್ಯವಾಗಿ, ಉತ್ತರ ಕರ್ನಾಟಕದ ಆಡು ಮಾತಿನ ಭಾಷಾ ಸೊಗಡಿನೊಂದಿಗೆ ಮೂಡಿ ಬಂದಿರುವ ಈ ಗಟ್ಟಿ ಕಾವ್ಯ ಎಲ್ಲರ ಅರಿವಿಗೆ ನಿಲುಕುತ್ತ ಅರಿವನ್ನು ವಿಸ್ತರಿಸುವ ಕಾರ್ಯಮಾಡುತ್ತದೆ. ಈ ದಿಶೆಯಲ್ಲಿ ಮುನ್ನುಡಿ ಮತ್ತು ಬೆನ್ನುಡಿಕಾರರ ಒಂದೆರಡು ಮಾತುಗಳು ನೋಡಿ ಬಿಡೋಣ.
ಮುನ್ನುಡಿಯಲ್ಲಿ ಸುಬ್ಬು ಹೊಲೆಯಾರ್ ಅವರು ಹೀಗೆ ಬರೆಯುತ್ತಾರೆ;
ಸದಾಶಿವ ಅವರ ತಂದೆ, ತಾಯಿಯವರು ಹಸಿದಿದ್ದಕ್ಕೆ ಸದಾಶಿವ ಎಚ್ಚರವಾಗಿದ್ದಾರೆ. ಮತ್ತು ವಿವೇಕತನದಿಂದ ಸಮಾಜವನ್ನು ತಿದ್ದುವ ಮತ್ತು ಕಾವ್ಯದ ಮೂಲಕ ಎಚ್ಚರಿಸುತ್ತಿದ್ದಾರೆ. ಕಾವ್ಯದ ವಿವೇಕದ ಬೆಳಕು, ಅವರಿಗೆ ದಕ್ಕಿದೆ. ಅದನ್ನು ಸಂಕಲನದ ಹಲವು ಸಾಲುಗಳು ಹೊಸ ಕನಸುಗಳಿಗೆ ಕೊಂಡೊಯ್ಯುತ್ತವೆ ಮತ್ತು ಓದುತ್ತ ನನಗೆ ತಾನೇ ಅರಿವು ಪಡೆದುಕೊಳ್ಳುತ್ತವೆ ಎನ್ನುವ ಭರವಸೆ ಈ ಸಂಕಲನಕ್ಕಿದೆ.
ಬೆನ್ನುಡಿಯಲ್ಲಿ ಡಾ. ಅರವಿಂದ ಮಾಲಗತ್ತಿ ಬರೆಯುತ್ತಾರೆ;
ಡಾ. ಸದಾಶಿವ ದೊಡಮನಿಯವರ ಪ್ರಸ್ತುತ ‘ಇರುವುದು ಒಂದೇ ರೊಟ್ಟಿ’ ಸಮಾಜ ಮುಖಿಯಾದ ಆಶಯಗಳನ್ನು ಹೊತ್ತು ತಂದ ಕವನ ಸಂಕಲನವಾಗಿದೆ. ಇದರಲ್ಲಿ ವ್ಯಕ್ತಿ ನಿಷ್ಠ ಹಾಗೂ ಸಮೂಹ ನಿಷ್ಟ ಎರಡೂ ನೆಲೆಯ ಕವನಗಳಲ್ಲದೆ ವ್ಯಕ್ತಿ ನಿಷ್ಠ ಅನುಭವದಾಳದ ಕವನಗಳು ಒಟ್ಟಾರೆ ಅವರ ಕಾವ್ಯದ ಭಿನ್ನ ಮಾರ್ಗದ ಒಂದು ತಿರುವಾಗಿ ಒಡಮೂಡಿವೆ. ಇವುಗಳಲ್ಲಿ ಬಂಧುತ್ವಮುಖಿ ಹಾಗೂ ಕೌಟುಂಬಿಕ ಪರಿಕಲ್ಪನೆಯ ಕವನಗಳು ಪರಿಣಾಮಕಾರಿಯಾಗಿ ಮನದ ಮೇಲೆ ಅಚ್ಚೊತ್ತುವಲ್ಲಿ ಯಶಸ್ವಿಯಾಗುತ್ತವೆ. ಇದರೊಂದಿಗೆ ಪ್ರೀತಿ-ಪ್ರೇಮದ ಸಂಗತಿಗಳು ಕವನಗಳಾಗಿ ಹರಿದಿದ್ದು, ನಂದನ ವನದಲ್ಲಿ ತಂಗಾಳಿ ಬೀಸಿದಂತೆ ಇಲ್ಲಿಯ ಕವಿತೆಗಳಿದ್ದು, ಕಂಪನ್ನು ಸೂಸುತ್ತವೆ. ಅದರಲ್ಲೂ ವಿಷಾದದ ಛಾಯೆಯೂ ಸ್ಥಾಯಿಗುಣವಾಗಿದ್ದು, ಕನ್ನಡ ಪರಂಪರೆಯ ಭಾವಗೀತೆಯ ಹೆಜ್ಜೆಗಳೊಂದಿಗೆ ರೂಪ ಪಡೆದಿವೆ. ಕಾವ್ಯದ ದನಿಯಲ್ಲಿ ಅಧಿಕೃತತೆ ಇದ್ದು, ಗಾಢವಾದ ಪರಿಣಾಮವನ್ನು ಬೀರುತ್ತವೆ. ಆದರೆ ವಾಚ್ಯತೆಯ ಕವನಗಳು ಅಷ್ಟೇ ಪ್ರಮಾಣದಲ್ಲಿವೆ. ಕನ್ನಡ ಕಾವ್ಯದ ಓದನ್ನು ಅಳವಡಿಸಿಕೊಂಡಲ್ಲಿ ಹರಳುಗಟ್ಟುವಿಕೆಯೂ ಕಾವ್ಯದ ಅಂತಸ್ತನ್ನು ಬದಲಾಗುವ ಸಾಧ್ಯತೆ ಅಧಿಕ.
ಕೊನೆ ಗುಟುಕು;
ಬೆನ್ನುಡಿಕಾರರು ಗುರ್ತಿಸುವಂತೆ ಡಾ. ಸದಾಶಿವ ದೊಡಮನಿ ಅವರು ವಾಚ್ಯತೆಯನ್ನು ಮೀರಿ ಇನ್ನಷ್ಟು ರೂಪಕ ಭಾಷೆಯ ಮೂಲಕ ಕಾವ್ಯದ ಕಲೆಯನ್ನು ರೂಢಿಸಿಕೊಂಡಲ್ಲಿ ಕಾವ್ಯ ಇನ್ನೂ ಗಟ್ಟಿಯಾಗಿ ಮೂಡಿ ಬರುವುದರಲ್ಲಿ ಸಂದೇಹವಿಲ್ಲ.
ಅಶ್ಫಾಕ್ ಪೀರಜಾದೆ