ಮೊಗೆದಷ್ಟೂ ಮುಗಿಯದ ಮಹಾಭಾರತ

ಲೇಖನ

ಮೊಗೆದಷ್ಟೂ ಮುಗಿಯದ ಮಹಾಭಾರತ

ಸುಮಾ ಕಿರಣ್

ಅವಜಾನನ್ತಿ  ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್

ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್ ॥

ಇದು ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಹೇಳುವ ಮಾತು. ಗೀತೆಯ ಒಂಭತ್ತನೇ ಅಧ್ಯಾಯದಲ್ಲಿ ಈ ಮಾತು ಬರುತ್ತದೆ.

ಸರಳವಾದ ಮಾತುಗಳಲ್ಲಿ ಇದನ್ನು ಅರ್ಥೈಸುವುದಾದರೆ… “ನನ್ನ ಶ್ರೇಷ್ಠವಾದ ಹಿರಿಮೆಯನ್ನು ಅರಿಯದ ತಿಳಿಗೇಡಿಗಳು ಮನುಷ್ಯನಂತೆ ಕಾಣಿಸಿಕೊಂಡು ಮೈದಾಳಿದ ನನ್ನನ್ನು ಮನುಷ್ಯನೆಂದೇ ಬಗೆದು ಕಡೆಗಣಿಸುತ್ತಾರೆ” ಎಂದು ಕೃಷ್ಣನು ಅರ್ಜುನನಲ್ಲಿ ಹೇಳುವಂತಹ ಮಾತು. ಮುಂದೆ ಕೃಷ್ಣನ ಅಂತ್ಯ ಕಾಲದಲ್ಲಿ ಈ ಮಾತು ಪರಮ ಸತ್ಯವಾಗಿ ಗೋಚರಿಸುತ್ತದೆ. ಇಡೀ ಯಾದವ ಕುಲವೇ ಶ್ರೀಕೃಷ್ಣನ ಅವತಾರದ ಬಗ್ಗೆ ಪ್ರಶ್ನೆ ಎತ್ತುತ್ತದೆ!  ಅವನದೇ ಮಕ್ಕಳು  ಕೃಷ್ಣನನ್ನು ನೀಚನೆಂದು, ಕುಟಿಲನೆಂದು,  ಧರ್ಮ ಬಿಟ್ಟವನೆಂದು ಹಳಿಯುತ್ತಾರೆ.  ಅವನು ನಂಬಿದ ಮೌಲ್ಯಗಳನ್ನು ಗೇಲಿ ಮಾಡಲಾರಂಭಿಸುತ್ತಾರೆ.

ಅರೆರೆ! ಇವಳಿಗೆ ಇವತ್ತೇನಾಯಿತು ಎಂಬ ಯೋಚನೆಯೇ?  ಇಂದು ಹೊಸ ತಲೆಬಿಸಿ ತಂದಿದ್ದಾಳೆ ಎಂದು ಚಿಂತಿಸುತ್ತಿದ್ದೀರಾ? ಖಂಡಿತ ಇಲ್ಲ! ಅಂತಹ ಯಾವ ಆಲೋಚನೆಯೂ ನನಗಿಲ್ಲ.  ಇತ್ತೀಚೆಗೆ ಪ್ರೊ|| ನಾರಾಯಣಾಚಾರ್ಯರ “ಕೃಷ್ಣನ ಕೊನೆಯ ಗಳಿಗೆಗಳು” ಎಂಬ ಪುಸ್ತಕದಲ್ಲಿದ್ದ ಈ ಮೇಲಿನ ಘಟನೆ ನನ್ನ ಮನಸ್ಸನ್ನು ತಟ್ಟಿತು. ಅಂತಹ ಶ್ರೀ ಕೃಷ್ಣನ ವಿರುದ್ಧವೇ ಟೀಕೆ, ಅಪಪ್ರಚಾರಗಳು ನಡೆಯಿತು… ಎಂಬುದನ್ನು ನಿಮಗೂ ತಿಳಿಸುವ ಉದ್ದೇಶದಿಂದ ಮಹಾಭಾರತದ ಈ ಘಟನೆಯನ್ನು ಉಲ್ಲೇಖಿಸಿದೆ, ಅಷ್ಟೇ.

ಹೌದು!  ಅವತಾರ ಪುರುಷ ಎನಿಸಿಕೊಂಡ ಆ ಮಹಾತ್ಮ ಶ್ರೀಕೃಷ್ಣನ ಮಕ್ಕಳು ಹಾಗೂ ಕುಲಬಾಂಧವರೇ ಕೊನೆಯಲ್ಲಿ ಅವನ ವಿರುದ್ಧ ಅಪಪ್ರಚಾರ ಮಾಡುವ ಜೊತೆಗೆ ಅವನನ್ನು ಟೀಕಿಸುತ್ತಾರೆ.  ಅವನು ಮಾಡಿದ ಕೆಲಸಗಳೆಲ್ಲದರ ಹಿಂದೆ ಸ್ವಾರ್ಥವನ್ನು ಆರೋಪಿಸಿ ಮಾತನಾಡುತ್ತಾರೆ.  ಜಗತ್ತಿನ ಉದ್ಧಾರಕ್ಕಾಗಿ ಲೀಲಾಧಾರಿಯಾಡಿದ ಲೀಲಾ ನಾಟಕಗಳೆಲ್ಲ ಅವನವರ ಕಣ್ಣಿನಲ್ಲಿ ನಿಕೃಷ್ಟವಾಗಿ ಬಿಡುತ್ತದೆ. ಕಾಲ ಸರಿದಂತೆ ಅವನ ಮಕ್ಕಳಿಗೆ ಅವನಲ್ಲಿ ಹಾಗೂ ಅವನ ಲೀಲೆಗಳಲ್ಲಿ ನಂಬಿಕೆ ಹೊರಟು ಹೋಗುತ್ತದೆ.

ಮಿತ್ರರೇ, ಇದಕ್ಕಿಂತಲೂ ಉತ್ತಮ ನಿದರ್ಶನದ ಅಗತ್ಯವಿದೆಯೇ? ಯಾರೋ… ಎಲ್ಲೋ… ನಮ್ಮ ಬಗ್ಗೆ ಟೀಕೆ ಮಾಡಿದರು ಎಂದು ನಾವು ನೋವು ಪಡುತ್ತೇವೆ. ಇನ್ಯಾರೋ ನಮ್ಮ ವಿರುದ್ಧ ಅಪಪ್ರಚಾರ ನಡೆಸಿದರೆಂದು ಬೇಸರಪಟ್ಟುಕೊಳ್ಳುತ್ತೇವೆ. ನಮಗೆ ಅಹಂಕಾರಿ, ಸ್ವಾರ್ಥಿ ಎಂಬ ಪಟ್ಟಗಳನ್ನು ನೀಡಿ ಅಗೌರವಿಸಿದರೆಂದು ದುಃಖ ಪಡುತ್ತೇವೆ.  ಎದುರಾಗುವ ನಿಂದೆ, ಟೀಕೆ, ಅಪಪ್ರಚಾರಗಳಿಗೆ ಹೆದರಿ ಬೇಸರಗೊಂಡು ಖಿನ್ನರಾಗುತ್ತೇವೆ  ಅಥವಾ ಆತ್ಮಹತ್ಯೆಯತ್ತ ಸರಿಯುತ್ತೇವೆ.

ಕ್ಷಣಕಾಲ ಯೋಚಿಸಿ! ನಮಗೆ ಮಹಾಭಾರತದಂತಹ ಜ್ವಲಂತ ಉದಾಹರಣೆ ಎದುರಿಗಿರುವಾಗ ನಾವು ಅದನ್ನು ಮಾದರಿಯಾಗಿಟ್ಟುಕೊಂಡು, ಬದುಕಿನಲ್ಲಿ ಸುಖ-ಸಂತೋಷ  ಅರಸುವುದು ಬಿಟ್ಟು, ಹೀಗೆ ಸಣ್ಣ ಪುಟ್ಟ ವಿಷಯಗಳಿಗೆ ಚಿಂತಿಸುತ್ತಾ  ನಮ್ಮ ಬದುಕನ್ನು ಸವೆಸಿ ಬಿಡುತ್ತೇವೆ – ಇದು ಸರಿಯೇ??

ಯಾವುದೇ ಸ್ವಾರ್ಥವಿಲ್ಲದೆ, ಕೇವಲ ಧರ್ಮದ ರಕ್ಷಕನಾಗಿ ನಿಂತ ಆ ಪರಮಾತ್ಮನನ್ನೇ ಕಪಟಿ, ಧರ್ಮದ್ರೋಹಿ, ನೀಚನೆಂದು ನಿಂದಿಸಿದ ಮೇಲೆ… ಅವನ ಪ್ರತಿಯೊಂದು ಕೃತ್ಯಗಳ ಹಿಂದೆಯೂ ಸ್ವಾರ್ಥದ ಲೇಪವನ್ನು ಬಳಿದ;  ಅವನ ವಿರುದ್ಧವೇ ಅಪಪ್ರಚಾರ ನಡೆಸಿದ ಮೇಲೆ… ಹುಲು ಮಾನವರಾದ ನಮ್ಮ ವಿರುದ್ಧ ಇಂತಹ ಟೀಕೆ,  ನಿಂದನೆ, ಅಪಪ್ರಚಾರಗಳು ಸರ್ವೇಸಾಮಾನ್ಯ ಎಂಬುದನ್ನು ಮೊದಲು ನಾವು ಅರಿಯಬೇಕು.

ಮಿತ್ರರೇ… ನಮ್ಮ ಬಗ್ಗೆ ಯಾರೋ ಟೀಕೆ ಮಾಡಿದ್ದಾರೆ, ನಿಂದಿಸಿದ್ದಾರೆ, ಸ್ವಾರ್ಥಿ ಅಥವಾ ಅಹಂಕಾರಿ ಎಂದೆಲ್ಲಾ ಜರಿದಿದ್ದಾರೆ ಎಂದು ಚಿಂತಿಸುತ್ತಾ ಕೂರುವ ಬದಲು, ಆ ಜಗನ್ನಿಯಾಮಕನನ್ನೇ ಬಿಡದ ನಿಂದನೆಗಳು ನಮ್ಮನ್ನು ಬಿಟ್ಟಿತೇ… ಎಂದು ಯಾಕೆ ಯೋಚಿಸಬಾರದು?  ಬಂದ ಟೀಕೆಗಳಿಗೆಲ್ಲಾ ಉತ್ತರಿಸುತ್ತಾ, ದೂರಿದವರೊಂದಿಗೆಲ್ಲ ಜಗಳವಾಡುತ್ತಾ ನಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವ ಬದಲಾಗಿ; ಹೇಳುವವರು ಹೇಳುತ್ತಿರಲಿ, ನನಗೇನು? ಎಂದು ನಮ್ಮ ದಾರಿಯಲ್ಲಿ ನಾವು ಸಾಗಿದರಾಯಿತು!  ಹೇಗೆ ಎಲ್ಲಾ ಟೀಕೆ, ನಿಂದೆ, ಅವಮಾನಕ್ಕೂ ಶ್ರೀಕೃಷ್ಣನ ಮಂದಹಾಸವೇ ಅಂತಿಮ ಉತ್ತರವಾಗಿತ್ತೋ… ಅಂತೆಯೇ ನಿಂದಿಸಿದವರ, ಟೀಕಿಸಿದವರ, ಅವಮಾನಿಸಿದವರ, ಅಪಪ್ರಚಾರಗೈದವರೆಡೆಗೆ ಒಂದು ಅನುಕಂಪದ ನಗೆಯನ್ನು ತೂರಿ ನಮ್ಮ ಜೀವನದ ಗುರಿಯತ್ತ ಮುಂದಿನ ಹೆಜ್ಜೆಯನ್ನಿಟ್ಟು ನಮ್ಮ ಗಮ್ಯದತ್ತ ನಾವು ಗಜ ಗಾಂಭೀರ್ಯದೊಂದಿಗೆ ಸಾಗೋಣವೆ?


ಸುಮಾ ಕಿರಣ್

3 thoughts on “ಮೊಗೆದಷ್ಟೂ ಮುಗಿಯದ ಮಹಾಭಾರತ

  1. ಬಹಳ ಸುಂದವಾಗಿ ಪ್ರಕಟಿಸಿದ ಸಂಗತಿಯ ಸಂಪಾದಕರಿಗೆ ಧನ್ಯವಾದಗಳು

  2. ದೈನಂದಿನ ಜೀವನದಲ್ಲಿ ನಮ್ಮೊಂದಿಗೆ ಇರುವ/ಬರುವ ಜನರು ಮಾಡುವ ಅನವಶ್ಯಕ ಟೀಕೆ ಟಿಪ್ಪಣಿಗಳನ್ನು ಪಕ್ಕಕ್ಕಿರಿಸಿ ನಮ್ಮ ದಾರಿಯಲ್ಲಿ ನಾವು ಸಾಗುತ್ತಿರಬೇಕು ಎಂಬ ಮಾತನ್ನು ಉತ್ತಮ ಉದಾಹರಣೆಯೊಂದಿಗೆ ಸರಳವಾಗಿ ತಿಳಿಸಿದ್ದಿಯಾ ಸುಮಾ…. ಅಭಿನಂದನೆಗಳು .

    ನಿನ್ನಿಂದ ಮತ್ತಷ್ಟು ಉತ್ತಮ ವಿಚಾರಧಾರೆಗಳು ಓದುಗರನ್ನು ತಲುಪಲಿ .

Leave a Reply

Back To Top