ಓದು ನೀಡಿದ ಅನುಭೂತಿ

ಪುಸ್ತಕ ಸಂಗಾತಿ

ಓದು ನೀಡಿದ ಅನುಭೂತಿ

ಗಜಲ್  ಪ್ರಿಯ ಸಹೃದಯರೇ,

ವಿಮರ್ಶೆ ಅಲ್ಲದ,ಸಂಪಾದಕತ್ವವೂ ಅಲ್ಲದ, ಮೇಡಂ ಶೈಲಶ್ರೀ ಶಶಿಧರ್ ಅವರ ಗಜಲ್ ಸಂಕಲನ  ರಾಧಾಮೋಹನ ಪ್ರೇಮಾನುರಾಗ ಓದುವಾಗ ಚಿತ್ತದಲಿ ಹಾದುಹೋದ ಯೋಚನಾ ಲಹರಿಯ ಅನುಭೂತಿಯನ್ನು ಅರುಹಲು ಬಯಸುವೆ. ನಾನು ಹೇಳಿದ್ದೇ ಸರಿ ಎನ್ನುವ ಭಾವನೆ ಇರಿಸದೆ, ಯಾವುದೇ ಗಜಲ್ ಸಂಕಲನ ಹೊರತರದ ನಾನು ಪ್ರಮಾಣಿಕ ಗಜಲ್ ಪರಿಚಾರಕನಾಗಿ ಮಾತ್ರ,ಬರೆದಿಹೆ.

1922ರಲ್ಲಿ ಬೇಂದ್ರೆ ಅಜ್ಜನ ಮೂದಲ ಪ್ರಕಟಿತ ಕೃತಿ ಬಂತು. ಅಂದರೆ ನೂರು ವರುಷವಾಯ್ತು, ಅದು ಖಂಡಕಾವ್ಯ, ಹೆಸರು ಕೃಷ್ಣಾಕುಮಾರಿ. ಕೃತಿಯಲ್ಲಿ ಈಕೆ ಸೌಂದರ್ಯದ ಸಂಕೇತ. ಇದರ ಒಟ್ಟು ಸಂದೇಶ ಸೌಂದರ್ಯಕ್ಕೆ ಸಾವಿಲ್ಲವೆಂದು. ನಾನು ಕೃತಿ ಓದಿಲ್ಲ, ಹಿರಿಯರ ವಿಮರ್ಶೆ ಕೇಳಿರುವೆ.

ಅಂತೆಯೇ ರಾಧಾ ಮೋಹನರ ಪ್ರೇಮಾನುರಾಗ ಕ್ಕೂ ಕೊನೆ ಎಂಬುದಿಲ್ಲ ಯುಗಗಳು ಕಳೆದರೂ ನಿತ್ಯ ನವೀನ.

ಹಲವಾರು ಗಜಲಿಗೆ ಇರುವ ಅರ್ಥ ವ್ಯಾಖ್ಯಾನಗಳಲ್ಲಿ ಪ್ರೇಮಿ ಪ್ರೇಯಸಿಯರ ಪಿಸು ಮಾತು ಎಂಬುದೇ ಸರಿ ಎಂದು ನಂಬುವುದಾದರೆ, ಶೈಲಶ್ರೀ ಯವರು ಅದಕ್ಕೆ ನೂರಕ್ಕೆ ನೂರರಷ್ಟೂ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.

ಪ್ರೀತಿ,ಪ್ರೇಮ,ವಿರಹ, ವಿಷಯಮಾತ್ರ ವಿರಿಸಿಕೊಂಡು, ಬೇರಾವುದೇ ವಿಷಯವಿರದೆ ಬರೆದ, ನನಗೆ ತಿಳಿದಮಟ್ಟಿಗೆ ಇದೇ ಕನ್ನಡದ ಮೊದಲ ಸಂಕಲನ.

ಶೈಲಶ್ರೀ ಅವರು ಈಗಾಗಲೇ ಸೆಹ್ ಗಜಲ್ ಸಂಕಲನ ತಂದಂತ ಮೊದಲಿಗರಾಗಿದ್ದಾರೆ.

ಭಾರತದ ಪುರಾಣಿಕ ಪರಂಪರೆಯಲ್ಲಿ ಸ್ವಚ್ಛಂದ ಪ್ರೇಮಕೆ ಅವಕಾಶವಿರಲಿಲ್ಲ.

ಕಾಳಿದಾಸನ ಮೇಘ ಸಂದೇಶ ಸಹ ಪ್ರೇಮಿಯು ತನ್ನ ಪ್ರೇಯಸಿ ಇರುವ ಪ್ರದೇಶದ ವರ್ಣನೆ ನೀಡುತ್ತಾ ಸಂದೇಶ ಕಳುಹುವ ಆದರೆ ಪ್ರೇಯಸಿಯ ವರ್ಣನೆ ಕಡಿಮೆ.

ಮದುವೆ ಎಂಬುದೂ ಎರಡು ಸಂಬಂಧಗಳ ಬೆಸುಗೆ ಆಗಿತ್ತೇ ಹೊರತು, ಒಂದು ಗಂಡು ಹೆಣ್ಣಿನ ಖಾಸಗಿ ಸಂಬಂಧ ಎಂದು ಬಗೆದದ್ದೇ ಇಲ್ಲ.

ಇದಾದ ಬಹಳ ಕಾಲಾನಂತರ ದುಷ್ಯಂತ/ ಶಕುಂತಲೆ ಪ್ರೇಮ ವಿವಾಹ ಬಂದರೂ ಅವರ ಸರಸ ಸಲ್ಲಾಪದ ವಿವರ ಕಡಿಮೆಯೇ.

ಹೀಗಾಗಿ ಪ್ರೀತಿ ಪ್ರೇಮ ವಿರಹ ಗಳನ್ನು ವಿವರಿಸುವ ಘಟನೆಗಳು ಶೃಂಗಾರಮಯವಾಗಿ ಬಂದದ್ದು ರಾಧೆ ಮತ್ತು ಕೃಷ್ಣರಿಂದ ಎಂಬುದು ಖಚಿತ.

ಸಂಪೂರ್ಣ ಅರ್ಥೈಸಿಕೊಳ್ಳಲಾಗದ ಕಾಲದಿ ಮಹಾಕವಿ ಕಾಳಿದಾಸರ ಮೇಘಸಂದೇಶ ಓದಿದ,ಮತ್ತು ಹನ್ನೆರಡನೆಯ ಶತಮಾನದ ರಾಧಾ ಕೃಷ್ಣರ ಮಥುರೆಯ ಪ್ರೇಮದ ರಸರೋಮಾಂಚನವನ್ನು ವಿವರಿಸುವ ಜಯದೇವ ಮಹಾಕವಿಯ ಅಷ್ಟಪದಿಗಳನ್ನು ತುಂಬು ಯೌವನದಿ ಹಲವಾರುಬಾರಿ ಓದಿ ಆನಂದಿಸಿ ಕನ್ನಡಕೆ ತರ್ಜಿಮೆ ಮಾಡುವ ವ್ಯರ್ಥ ಪ್ರಯತ್ನಗಳ ನೆನಪಿನಾನುಭವ ನನಗಾಯಿತು.

ಜೊತೆಗೆ ಹದನಾಲ್ಕನೇ ಶತಮಾನದ ಮೈಥಿಲಿ ಬಾಷೆಯ ವಿದ್ಯಾಪತಿಕೀ ಪದಾವಳಿ ಎಂಬ ಗೀತೆಗಳಿಂದ ಶೃಂಗಾರವು ವಯುಕ್ತಿಕ ಭಕ್ತಿಯ ಅನುಭವದೊಡನೆ ಕೂಡಿ ಬೆಳೆಯಿತು, ಇಂತಹ ಕೃತಿಯ ಕನ್ನಡಾನುವಾದವನ್ನು ಓದಿದಾಗ ಆದ ಅನಭವವನ್ನೂ ಪುನಃ ನಾನು ಶೈಲಶ್ರೀ ಮೇಡಂ ರವರ ಈ ಕೃತಿಯನ್ನು ಓದುವಾಗ ಪಡೆದೆ.

ಇವರ ಮಧ್ಯ ಭಕ್ತೆ ಮೀರಾ, ಶರಣೆ ಅಕ್ಕ, ತೆಲಗಿನ ಅಣ್ಣಮಯ್ಯರೆಲ್ಲರೂ ನನ್ನ ಮಸ್ತಿಷ್ಕದಲಿ ಸುಳಿದಾಡಿದರು.

ನಮೂದಿಸಿದ ಕೃತಿಗಳ ಪ್ರಾಕಾರಗಳು ಬೇರೆಯಾದರೂ  ಮುಖ್ಯ ವಿಷಯದ ತಿರುಳು ಒಂದೇ! ಅದು ಎಲ್ಲರೂ ಇಷ್ಟ ಪಡುವ ಸೌಂದರ್ಯೋಪಾಸನೆಯ ಶೃಂಗಾರ.

ಗಜಲ್ ಹಾಡುಗಬ್ಬ ಆದರೂ ಸಹ ಒತ್ತಕ್ಷರಗಳ ಬಳಕೆ ಕಡಿ ಮೆಯಾಗಿ ಸುಲಲಿತವಾದ ವೇಗದ ಓದಿಗೆ ಅವಕಾಶವಿದ್ದು ಹಾಡಿದಂತೆ ಗೇಯತೆ ತನೇತಾನಾಗಿ ಮೇಡಂರವರ ಗಜಲುಗಳಲಿ ಬಂದಿದೆ. ಪೂರಕವೆಂಬಂತೆ ಸುಮಾರು ಇಪ್ಪತ್ತು ಸಂಪೂರ್ಣ ಮತ್ಲಾ ಗಜಲ್ ಆಗಿರುವುದು ಕೊರತೆಯನು ಸ್ವಲ್ಪ ನೀಗಿಸುತ್ತದೆ.

 ಪ್ರೀತಿ ಎಂದರೆ ಕಾಮವಲ್ಲ ಅಂತರಾಳದ ವಾತ್ಸಲ್ಯವದು (ಗಜಲ್-3) ಎಂಬ ಕೃತಿಕಾರರ ವಾಕ್ಯವನು ಪ್ರತಿ ಗಜಲ್ ಓದುವಾಗಲೂ ನೆನಪಿಸಿ ಕೊಂಡು ಓದಿರುವೆ.

ನಾನೂ ಗಜಲ್ ಕ್ಷೇತ್ರದ ಪರಿಚಾರಕನಾಗಿದ್ದು, ಹೆಣ್ಣು ತನವನು ಅಹ್ವಾನಿಸಿಕೊಂಡು ಯಾರಿಗೂ ತಿಳಿಯದ ಹಾಗೆ ಯಾರೋ ಹೆಣ್ಣು ಬರೆದಿರಬಹುದು  ಎಂಬಂತೆ ಬರೆದರೂ ಯಶಸ್ಸು ಕಂಡಿಲ್ಲ.

ಶೈಲಶ್ರೀ ಯವರು ಕೃಷ್ಣನ ಒಡಲಿಗೆ ಪರಕಾಯ ಪ್ರವೇಶಮಾಡಿ ಗಂಡುತನವನು ಅನುಭವಿಸಿ ರಾಧೇ ಎಂಬ ರಧೀಫ್ ಇರುವ ಸುಮಾರು 36 ಗಜಲುಗಳ ರಚಿಸಿ ಸೈ ಎನಿಸಿಕೊಂಡಿರುವರು.

ಓದಿದ ನಾನು ಹಲವು ಗಂಟೆ ಗಳಲಿ ಮುಗಿಸಿರುವೆ. ಕೆಲವು ಭಾವನೆಗಳು ಹಲವು ಗಜಲಲ್ಲಿ ಪುನರಾವರ್ತನೆ ಆಗಿವೆ ಎಂದು ಹೇಳುವುದು ಸುಲಭ, ಆದರೆ ಕೃತಿಕಾರರು ಕೃತಿಯನ್ನು ಬರೆಯಲು ವರ್ಷಗಳೇ ಹಿಡಿದಿರಬಹುದು! ಬರೆದ ಪ್ರತಿಸಾಲನೂ ನೆನಪಿರಿಸಿ ಮುಂದುವರೆಯುವುದು ಅಸಾಧ್ಯ. ಓದುವಾಗ ಆ ಭಾವನೆಗಳ ಮರುಕಳಿಸಿದ್ದರೂ ಅದು ಸಹ್ಯ ಎಂದೆನಗೆ ಅನಿಸುತ್ತದೆ.

 ಮೋಹವೇ, ಪ್ರೇಮವೇ, ಏನು ಹೆಸರಿಡಲಿ ನಿನ್ನೊಲವಿಗೆ (ಗಜಲ್-4)

ಎಂಬಂತ ಮಾತು ಯುವ ಉತ್ಕಟ ಪ್ರೇಮಿಗಳ ಮನೋಸ್ಥಿತಿ ನೆನಪಿಸುತ್ತವೆ.

 ನಮ್ಮ ಬೆಸುಗೆಗೆ ಕಂದೀಲಾಗಲು ಶಶಿಗೂ ಇನ್ನಿಲ್ಲದ ಆತುರ(ಗಜಲ್-5) ಎಂಬಂತಹ ವಾಕ್ಯರಚನೆ ಬಹಳ ಮುದ ನೀಡುತ್ತವೆ.

 ಕೇದಿಗೆ ಬನದ ಬಳಿಗೆ ಹೋಗೋಣ ಬಾ (ಗಜಲ್-16)  ನಾ ಓದಿದ ಯಾವ ಕನ್ನಡದ ಗಜಲಿನಲಿ ಕೇದಿಗೆ ಬನದ ಪ್ರಸ್ತಾಪ ಬಂದುದು ನೆನಪಿಲ್ಲ.

ಪದ ಪ್ರಯೋಗದಿ

ಹವಳ ಕೆಂಪು, ತೆಳ್ಳಗೆ ಬೆಳ್ಳಿಗೆ ಕಣ್ಣು ಕುಕ್ಕುವನಡು, ವೀಳ್ಯರಸ ಸವರಿದತುಟಿ,(ಗಜಲ್-24)

ಮುನ್ನಾ, ಬಂಗಾರ,ಚಿನ್ನ ಎನ್ನದೊರೆ ,ಜಾನೂ ,ಸಜನಿ,ಮನ ಸೆಳೆಯುತ್ತವೆ.

ಗಜಲ್-66 ಗಜಲ್ _63 ,ಎರಡೂ ‘ಉ’ ಕಾರಾಂತ್ಯ ಸ್ವರ ಗಜಲ್ ಆಗಿದ್ದು ಸಾಕಷ್ಟು ಬಹು ಕಾಫಿಯಾ ಗಜಲಗಳೂ ಸೇರಿ ಮೇಡಂ ಅವರ ಕೃತಿ ಹಿಂದಿನ “ಕೃಷಿ” ನಿರೂಪಿಸುತ್ತದೆ.

ಒಟ್ಟಿನಲ್ಲಿ  ಇದೊಂದು ಮೇಡಂ ನವರ ಸ್ವಚ್ಛಂದ ಮನಸಿನ ಸೌಂದರ್ಯೋಪಾಸನೆಯ ಶೃಂಗಾರ ಕಾವ್ಯವೆಂದು ಹೇಳುತ್ತಾ ಮೇಡಂ ರವರ ಕವಿ/ಗಜಲಿಗ ಮನಸಿಗೆ ವಂದಿಸುವೆ. ಕೃತಿಯ ಕೊಂಡು ಓದಿಹೆನೆಂದು ಹೇಳುತ್ತಾ ತಾವು ಕೊಂಡು ಓದಲು ಹೇಳುವೆ.

ಸಂಪರ್ಕಿಸ ಬೇಕಾದ ಮೊಬೈಲ್ ಸಂಖ್ಯೆ  9008834612


 ಬಾಗೇಪಲ್ಲಿ ಕೃಷ್ಣಮೂರ್ತಿ

Leave a Reply

Back To Top