ಕಥಾ ಸಂಗಾತಿಒ
ಸೀತಾಪುರದ ಶೂರ್ಪನಖಿ
ವಿಶ್ವನಾಥ.ಎನ್. ನೇರಳಕಟ್ಟೆ
[ಆಷಾಡದ ಮಳೆಗೆ ಒದ್ದೆಮುದ್ದೆಯಾದ ಕೋಳಿಯ ಹಾಗಾಗಿದ್ದ ನಾನು ಮನೆ ತಲುಪಿದ ತಕ್ಷಣವೇ ಬಚ್ಚಲು ಮನೆಯ ಒಳಹೋದೆ. ಬಿಸಿಬಿಸಿಯಾದ ನೀರಿನಲ್ಲಿ ಸ್ನಾನ ಮಾಡಿದ ಬಳಿಕ ಮನಸ್ಸಿಗೆ ಒಂದಷ್ಟು ಸಮಾಧಾನವಾಯಿತು. ಈಗಿನ ಕಾಲದ ಮಳೆಗೇ ಹೀಗೆ ಆಗಬೇಕಾದರೆ ನಲ್ವತ್ತು- ಐವತ್ತು ವರ್ಷಗಳ ಮೊದಲಿನ ಮಂಗಳೂರಿನ ಮಳೆಗೆ ಸಿಕ್ಕಿದ್ದರೆ ನನ್ನ ಪರಿಸ್ಥಿತಿ ಏನಾಗುತ್ತಿತ್ತು ಎಂದು ಯೋಚಿಸುತ್ತಲೇ ಚಾವಡಿಯಲ್ಲಿ ಬಂದುಕುಳಿತೆ. ಮೊಬೈಲ್ ನೋಡಿದರೆ, ನನ್ನ ಕಾಲೇಜ್ ಸ್ನೇಹಿತರೆಲ್ಲರೂ ಒಂದೇ ವಾಟ್ಸಾಪ್ ಸ್ಟೇಟಸ್ ಹಾಕಿದ್ದರು. ಈ ಕೊರೋನಾ ಗದ್ದಲದಲ್ಲಿ ಅಂತೂ ಇಂತೂ ಡಿಗ್ರಿ ಪರೀಕ್ಷೆ ಮುಗಿದಿರುವುದು ಅವರಿಗೆಲ್ಲಾ ಖುಷಿ ಕೊಟ್ಟಿತ್ತು. ಅದನ್ನೇ ಸ್ಟೇಟಸ್ ಹಾಕಿದ್ದರು. ಅವೆಲ್ಲವನ್ನೂ ನೋಡಿ ಆದಮೇಲೆ ನಾನು ಮನೆಯ ಹಿಂಭಾಗಕ್ಕೆ ಹೋದೆ. ನಾನು ಬಚ್ಚಲಿಗೆ ಹೊಕ್ಕುವಾಗಲೇ ಮೊಬೈಲಿನಲ್ಲಿ ಮಾತನಾಡಲು ಶುರುವಿಟ್ಟುಕೊಂಡಿದ್ದ ಅಮ್ಮ ಇನ್ನೂ ಮಾತು ಮುಗಿಸಿರಲಿಲ್ಲ. ಯಾವತ್ತೂ ಮೊಬೈಲ್‌ನಲ್ಲಿ ಇಷ್ಟು ಮಾತನಾಡಿದವರಲ್ಲ. ನಾನೇನಾದರೂ ಹತ್ತು ನಿಮಿಷ ಮೊಬೈಲ್ ನೋಡುತ್ತಾ ಕುಳಿತರೆ ಬೈಯ್ಯುತ್ತಿದ್ದ ಅಮ್ಮ ಈಗ ಅವರೇ ಇಷ್ಟು ಹೊತ್ತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದದ್ದು ನನಗೆ ಅಚ್ಚರಿಯಾಗಿತ್ತು. ಅಮ್ಮನನ್ನು ಏನಾದರೂ ತಮಾಷೆ, ಕೀಟಲೆ ಮಾಡಬೇಕೆಂದು ನಾನು ಯೋಚಿಸುತ್ತಿದ್ದಾಗಲೇ ಮಾತು ಮುಗಿಸಿದ ಅಮ್ಮ ನನ್ನ ಕಡೆಗೆ ತಿರುಗಿ, ಅಳುಮೋರೆ ಮಾಡುತ್ತಾ, ಆತಂಕದ ದನಿಯಲ್ಲಿ ಹೇಳಿದರು- “ಸೀತಾಪುರದ ಅಜ್ಜಿ ತೀರಿಹೋದರಂತೆ”
‘ಸೀತಾಪುರದ ಅಜ್ಜಿ’ ಎಂಬ ಶಬ್ದ ಕೇಳಿದ ಕೂಡಲೇ ನನಗೆ ನೆನಪಾದದ್ದು ಅವರ ಜೋರಿನ ಮುಖ. ಸಿಡುಕು ಮುಖದ ಪ್ರಾಂಶುಪಾಲರ ಹಾಗೆ ಇದ್ದವರು ಅವರು. ಅವರು ನಗುತ್ತಿದ್ದದ್ದೇ ಭಾರೀ ಅಪರೂಪ. ಯಾವಾಗ ನೋಡಿದರೂ ಬೈಗುಳ. ಅವರ ಮನೆಯ ಕೆಲಸದವರೆಲ್ಲಾ ಈ ಅಜ್ಜಿಯ ಒಂದು ಮಾತು ಕೇಳಿದರೆ ಪೋಲೀಸರೆದುರು ನಿಂತ ಕಳ್ಳರಂತೆ ಹೆದರುತ್ತಿದ್ದರು. ಅಷ್ಟು ಜೋರಿನ ಹೆಂಗಸು. ಕೆಲವೊಮ್ಮೆ ಮನೆಗೆ ಬಂದ ನೆಂಟರಿಷ್ಟರಿಗೂ ಯಾವುದೇ ಮುಲಾಜಿಲ್ಲದೆ ಬೈಯ್ಯುತ್ತಿದ್ದರು. ಅವರೇನಾದರೂ ಬೈಯ್ಯುವುದಕ್ಕೆ ಆರಂಭಿಸಿದರೆ, ನೊಣವೂ ಅಲ್ಲಿ ನಿಲ್ಲಲಾರದು. ಅಷ್ಟು ದೊಡ್ಡ ಗಂಟಲು ಅವರದ್ದು.
ನಾನು ಅವರ ಮನೆಗೆ ಮೂರು ಸಲ ಹೋಗಿದ್ದೆ. ಮೊದಲ ಸಲ ಹೋಗಿದ್ದಾಗ ನಾನಿನ್ನೂ ಮೂರನೇ ತರಗತಿಯಲ್ಲಿದ್ದೆ. ಅವರ ಮುಖ ನೋಡುವುದಕ್ಕೇ ನನಗೆ ಭಯವಾಗಿತ್ತು. ನಿಗಿನಿಗಿ ಕೆಂಡದ ಹಾಗಿರುವ ಮುಖ ನೋಡಿ ಒಳಗೊಳಗೆ ನಗುವೂ ಬಂದಿತ್ತು. ಎರಡು ವರ್ಷಗಳ ನಂತರ, ಎರಡನೇ ಸಲ ಅವರ ಮನೆಗೆ ಹೋದಾಗ ಅವರ ಕಣ್ಣಿಗೇ ಕಾಣಿಸದ ಹಾಗೆ ಎಚ್ಚರಿಕೆಯಿಂದ ಇದ್ದೆ. ಮೂರನೆಯ ಸಲ ಹೋದಾಗ ಅವರೆಲ್ಲಿ ಬೈದಾರೋ ಎಂಬ ಅಂಜಿಕೆ ನನ್ನಲ್ಲಿತ್ತು. ಮಧ್ಯಾಹ್ನದ ಹೊತ್ತಿಗೆ ನನ್ನ ಭಯ ನಿಜವಾಯ್ತು. ಊಟ ಮಾಡಿದ ಬಳಿಕ ನೀರಲ್ಲಿ ಕೈತೊಳೆದು, ಒದ್ದೆ ಕೈಯ್ಯನ್ನು ನಾನು ಚಡ್ಡಿಗೆ ಒರೆಸಿಕೊಂಡದ್ದನ್ನು ಕಂಡ ಅವರು “ಒಂದು ಕರ್ಚೀಫು ಇಟ್ಟುಕೊಳ್ಳುವುದಕ್ಕೇನು ಧಾಡಿ ನಿನಗೆ? ಆ ಗಲೀಜನ್ನು ಚಡ್ಡಿಗೇ ಒರೆಸಿಕೊಳ್ಳುತ್ತಿದ್ದೀಯಲ್ಲಾ, ಬುದ್ಧಿಯಿಲ್ಲದವನ ಹಾಗೆ. ಹಾಗಿದ್ದ ಗಲೀಜು ಬುದ್ಧಿ ಎಲ್ಲಾ ಇರಬಾರದು” ಎಂದು ಬೈದಿದ್ದರು. ಅಲ್ಲಿ ಇದ್ದವರೆಲ್ಲಾ ನನ್ನ ಮನೆಯವರೇ ಆದ್ದರಿಂದ ನನಗೆ ಮರ್ಯಾದೆಯೇನೂ ಹೋದಂತೆ ಭಾಸವಾಗಿರಲಿಲ್ಲ. ಆದರೆ ಒಂದಷ್ಟು ಹೊತ್ತು ನನ್ನ ಮುಖ ಸಪ್ಪಗಾಗಿತ್ತು. ಇದಾದ ಬಳಿಕ ಅಪ್ಪ ಅಮ್ಮ ಅವರ ಮನೆಗೆ ಹೋದಾಗಲೂ ನಾನು ಹೋಗಿರಲಿಲ್ಲ. ಏನಾದರೂ ಕಾರಣ ಹೇಳಿ, ಅಲ್ಲಿಗೆ ಹೋಗಿ, ಬೈಗಳು ತಿನ್ನುವುದರಿಂದ ಪಾರಾಗುತ್ತಿದ್ದೆ.
ಹೀಗೆ ಬೈಗುಳಕ್ಕೇ ಹೆಸರು ಪಡೆದಿದ್ದ ಆ ಅಜ್ಜಿಯ ಮುಖದಲ್ಲಿ ಊಟದ ಸಮಯಕ್ಕೆ ಬಹಳ ಚಂದದ ನಗುವನ್ನು ಕಾಣಬಹುದಿತ್ತು. ಮನೆಗೆ ಬಂದ ನೆಂಟರಿಷ್ಟರಿಗೆ ಊಟ ಹಾಕುವುದರಲ್ಲಿ ಅವರಿಗೇನೋ ಖುಷಿ. ಬಂದವರೇನಾದರೂ ದಾಕ್ಷಿಣ್ಯ ಮಾಡಿಕೊಂಡು ಕಡಿಮೆ ಉಣ್ಣುತ್ತಿದ್ದಾರೆಂದು ಗೊತ್ತಾದರೆ ಬಡಿಸುವವರಲ್ಲಿ ಜೋರಾಗಿ ಹೇಳಿ, ಒತ್ತಾಯದಿಂದ ಬಡಿಸುವಂತೆ ಸೂಚನೆ ಕೊಡುತ್ತಿದ್ದರು. ರುಚಿಗಟ್ಟಾದ ಊಟ ಮಾಡಿದ ಬಳಿಕ ಅವರಿಂದ ನಾವು ತಿಂದಿದ್ದ ಬೈಗುಳವೆಲ್ಲಾ ತತ್ಕಾಲಕ್ಕೆ ಹೊಟ್ಟೆ ಸೇರುತ್ತಿತ್ತು. ಅವರು ನಮ್ಮನ್ನು ಬೈದಿದ್ದಾರೆಂಬ ಸಂಗತಿಯೇ ಮರೆತುಹೋಗುತ್ತಿತ್ತು. ಆದರೆ ಅದು ತತ್ಕಾಲಕ್ಕೆ ಮಾತ್ರ. ಹೊಟ್ಟೆ ಸೇರಿದ ಆಹಾರ ಜೀರ್ಣವಾಗುವಷ್ಟರಲ್ಲಿ ಅವರು ನಮ್ಮನ್ನು ಬೈದದ್ದು ನೆನಪಾಗಿ ಮನಸ್ಸು ಕೆರಳುತ್ತಿತ್ತು. ಆದರೆ ಅವರೆದುರು ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಅವರನ್ನು ಹಿಂದಿನಿಂದ ಸಾಕಷ್ಟು ಜನ ಬೈಯ್ಯುತ್ತಿದ್ದರು. ಲೇವಡಿ ಮಾಡುತ್ತಿದ್ದರು. ಶೂರ್ಪನಖಿ ಎನ್ನುತ್ತಿದ್ದರು. ಆದರೆ ಅವರ ಎದುರು ತುಟಿ ಬಿಚ್ಚುತ್ತಿರಲಿಲ್ಲ. ಸೀತಾಪುರದ ಅತಿ ಪ್ರತಿಷ್ಠಿತ ಮನೆತನಕ್ಕೆ ಅವರು ಸೇರಿದವರಾದ್ದರಿಂದ ಅವರನ್ನು ಎದುರು ಹಾಕಿಕೊಳ್ಳುವ ಗಟ್ಟಿ ಗುಂಡಿಗೆ ಯಾರಿಗೂ ಇರಲಿಲ್ಲ.
ಅವರ ಒಂದು ವಿಶೇಷತೆ ಎಂದರೆ, ಅವರು ಗಂಡುಹುಡುಗರಿಗೆ ಬೈಯ್ಯುತ್ತಿದ್ದದ್ದು ಜಾಸ್ತಿ. ಹೆಣ್ಣುಮಕ್ಕಳಿಗೆ ಬೈಯ್ಯುವುದೇ ಕಡಿಮೆ. ಒಂದುವೇಳೆ ಬೈದರೂ ಮತ್ತೆ ಅವರನ್ನು ಮುದ್ದುಮಾಡಿ, ಸಮಾಧಾನಪಡಿಸುತ್ತಿದ್ದರು.
ಹೀಗಿದ್ದ ಸೀತಾಪುರದ ಅಜ್ಜಿ ನನ್ನ ಅಮ್ಮನಿಗೆ ಬಹಳ ದೂರದ ಸಂಬಂಧಿ. ಚಿಕ್ಕಮ್ಮ ಆಗಬೇಕು. ನನ್ನಮ್ಮನಿಗೆ ಅವರು ಚಿಕ್ಕಮ್ಮ ಆಗುವುದು ಹೇಗೆ ಎಂದು ಕೇಳಿದರೆ ತಕ್ಷಣಕ್ಕೆ ಹೇಳುವುದಕ್ಕೆ ನನಗೆ ಮಾತ್ರವಲ್ಲ, ನನ್ನ ಅಮ್ಮನಿಗೂ ಸಾಧ್ಯವಿಲ್ಲ. ಅದ್ಯಾವುದೋ ಬಾದರಾಯಣ ಸಂಬಂಧ. ದೂರದ ಸಂಬಂಧವೇ ಆಗಿದ್ದರೂ ಕೂಡಾ ನನ್ನ ಅಮ್ಮನಿಗೆ ಅವರಲ್ಲಿ ಬಹಳ ಪ್ರೀತಿ, ಆತ್ಮೀಯತೆ ಇತ್ತು. ಯಾಕೆಂದು ನನಗೆ ಗೊತ್ತಿಲ್ಲ.
ಈಗ ಅವರು ತೀರಿಹೋಗಿರುವ ಸುದ್ದಿ ಕೇಳಿ, ಅಮ್ಮನಿಗೆ ವಿಪರೀತ ಆಘಾತವಾಗಿತ್ತು. ಅಪ್ಪ ಆಫೀಸಿನಿಂದ ಬಂದ ಕೂಡಲೇ ನಾವು ಮೂರೂ ಜನ, ಅಂದರೆ ನಾನು, ಅಮ್ಮ, ಅಪ್ಪ ಸೀತಾಪುರದ ಕಡೆಗೆ ಹೊರಟೆವು. ಪಿಎಚ್. ಡಿ. ಮಾಡುತ್ತಿದ್ದ ಅಕ್ಕ ಅಜ್ಜಿ ತೀರಿಹೋದ ವಿಷಯ ತಿಳಿದ ಬಳಿಕವೂ ಬರುವುದಕ್ಕೆ ಒಪ್ಪಿರಲಿಲ್ಲ. “ನನಗೆ ಓದುವುದಕ್ಕಿದೆ. ನಾನು ಬರುವುದಿಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿ, ಮನೆಯಲ್ಲಿಯೇ ಉಳಿದುಕೊಂಡಳು. ವಾಸ್ತವವಾಗಿ ಅವಳಿಗೆ ಸೀತಾಪುರದ ಅಜ್ಜಿ ಎಂದರೆ ಸ್ವಲ್ಪವೂ ಇಷ್ಟವಿರಲಿಲ್ಲ. ಅದಕ್ಕಾಗಿಯೇ ಓದಿನ ನೆಪವೊಡ್ಡಿ ಮನೆಯಲ್ಲಿಯೇ ಕುಳಿತಳು. ನನಗೂ ಹೋಗುವುದಕ್ಕೆ ಇಷ್ಟವಿರಲಿಲ್ಲ. ಆದರೆ ಅಮ್ಮ ಒತ್ತಾಯಿಸಿದ್ದರಿಂದ ಕಾರು ಹತ್ತಿ ಕುಳಿತೆ. ನಮ್ಮ ಮನೆಯಿಂದ ಸುಮಾರು ನಲುವತ್ತೇಳು ಕಿಲೋಮೀಟರ್‌ಗಳಷ್ಟು ದೂರ. ಕಾರು ವೇಗವಾಗಿ ಸಾಗತೊಡಗಿತು.
***
ಸೀತಾಪುರದ ಮನೆಯಲ್ಲಿ ತುಂಬಾ ಜನ ಸೇರಿದ್ದರು. ಆದರೆ ಸೇರಿದ ಬಹುತೇಕ ಜನರ ಮುಖದಲ್ಲಿ ಬೇಸರ ಎನ್ನುವುದು ಇರಲಿಲ್ಲ. ಸಾವಿನ ಸುದ್ದಿ ತಿಳಿದ ಬಳಿಕ ಬಾರದೇ ಇರುವುದು ಸರಿಯಲ್ಲ ಎಂಬ ಮನೋಭಾವದಿಂದ ಬಂದಂತೆ ಬಹುತೇಕರ ಮುಖಭಾವವಿತ್ತು.
ಹೆಣವನ್ನು ಹೊರಬೇಕೆಂಬ ಸಮಯಕ್ಕೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಖಾಯಿಲೆ ಶುರುವಾಗತೊಡಗಿತು. “ನನಗೆ ಸೊಂಟದ ಆಪರೇಶನ್ ಆಗಿ ನಾಲ್ಕು ತಿಂಗಳಾಗಿದೆಯಷ್ಟೇ. ಭಾರ ಹೊರಬಾರದು ಅಂತ ಡಾಕ್ಟ್ರು ಹೇಳಿದ್ದಾರೆ. ನನಗೆ ಆಗಲಿಕ್ಕಿಲ್ಲ” ಬಹಳ ಮೆದುವಾಗಿ ನುಡಿದ ಒಬ್ಬ ಅಲ್ಲಿಂದ ಮೆಲ್ಲನೆ ಜಾಗ ಖಾಲಿ ಮಾಡಿದ. “ಗದ್ದೆಯಲ್ಲಿ ದುಡಿದು ನನಗೆ ಮೈಕೈ ಎಲ್ಲಾ ನೋವೆದ್ದಿದೆ” ಎಂದ ಇನ್ನೊಬ್ಬ ಸಮೀಪದಲ್ಲಿದ್ದವನ ಮುಖ ನೋಡಿದ. “ನನ್ನ ಅಮ್ಮ ಇನ್ನೂ ಬದುಕಿದ್ದಾರೆ. ನಾನು ಹೆಗಲು ಕೊಡುವ ಹಾಗಿಲ್ಲ. ಇಲ್ಲವಾದರೆ……” ಎಂದು ಹೇಳಿ, ಆತ ಮಾತು ನಿಲ್ಲಿಸಿದ. “ನನಗೆ ಕೊಳ್ಪು. ಸೊಂಟ ಹಿಡಿದುಕೊಂಡಿದೆ. ಎಷ್ಟು ಔಷಧಿ ಮಾಡಿದರೂ ಸರಿಹೋಗಿಲ್ಲ” ಎಂದು ಹೇಳಿದ ನನ್ನ ಸಮೀಪದಲ್ಲಿದ್ದವನು ಭಾರೀ ನೋವಿರುವವನಂತೆ ಸೊಂಟ ಹಿಡಿದುಕೊಂಡ.
ಇಷ್ಟಾಗುವಾಗ ನನ್ನ ಅಪ್ಪ “ಹೀಗೆ ಒಬ್ಬೊಬ್ಬರು ಒಂದೊಂದು ಕಾರಣವನ್ನು ಹೇಳುತ್ತಲೇ ಇದ್ದರೆ ಹೆಣವನ್ನು ಹೀಗೆಯೇ ಇಡಬೇಕಷ್ಟೇ. ಸಾಧ್ಯ ಇರುವವರು ಒಂದು ನಾಲ್ಕು ಜನರಾದರೂ ಮುಂದೆ ಬನ್ನಿ” ಎಂದು ಹೇಳಿ, ಮೊದಲಾಗಿ ಅವರೇ ಹೆಗಲು ಕೊಡುವುದಕ್ಕೆ ಸಿದ್ಧರಾಗಿ ನಿಂತರು. ಅದನ್ನು ಕಂಡು ಗುಂಪಿನಲ್ಲಿದ್ದ ಕೆಲವರು ಮುಂದೆ ಬಂದರು. ಹೆಣ ಎತ್ತುವುದಕ್ಕೆ ಸಿದ್ಧತೆಯಾಯಿತು.
ಅಷ್ಟರಲ್ಲಿಯೇ ಮನೆಯ ಕೆಲಸದವನು ಹಟ್ಟಿಯ ಕಡೆಯಿಂದ ಓಡಿಕೊಂಡು ಬಂದು, ಒಂದೇ ಉಸಿರಿನಲ್ಲಿ “ಅಕ್ಕನ ಪ್ರೀತಿಯ ದನ ಸತ್ತುಹೋಗಿದೆ” ಎಂದ. ಎಲ್ಲರೂ ಹಟ್ಟಿಗೆ ಹೋಗಿ ನೋಡಿದರೆ ‘ನಂದಿನಿ’ ಹೆಸರಿನ ದನ ಸತ್ತುಹೋಗಿತ್ತು. ಆ ದನ ಎಂದರೆ ಅಜ್ಜಿಗೆ ಭಾರೀ ಇಷ್ಟ ಇತ್ತಂತೆ. ಅದಕ್ಕೆ ಆಹಾರ ಕೊಟ್ಟ ಬಳಿಕವೇ ಅವರು ಉಣ್ಣುತ್ತಿದ್ದದ್ದಂತೆ. ಅಜ್ಜಿ ತೀರಿಹೋದ ತಕ್ಷಣವೇ ದನ ಆಹಾರ ಸೇವಿಸುವುದನ್ನೇ ನಿಲ್ಲಿಸಿತ್ತಂತೆ. ಮುಖ ಬಾಡಿಸಿಕೊಂಡು ಇತ್ತಂತೆ. ಕೆಲಸದವರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.
ಮಕ್ಕಳಿಲ್ಲದ ಅಜ್ಜಿಯ ಹೆಣಕ್ಕೆ ಬೆಂಕಿ ಕೊಡುವವರು ಯಾರು? ಎಂಬ ಪ್ರಶ್ನೆ ಬಂದಾಗ ನನ್ನ ತಂದೆ ತಾನು ಕೊಡುವುದಾಗಿ ಒಪ್ಪಿಕೊಂಡರು. ಅಂತಿಮ ಸಂಸ್ಕಾರದ ಪೂರ್ಣ ಜವಾಬ್ದಾರಿಯನ್ನು ತಾನೇ ವಹಿಸಿಕೊಳ್ಳುವುದಾಗಿ ತಿಳಿಸಿದರು. ತಂದೆಗೆ ಈ ಎಲ್ಲಾ ಅಧಿಕಪ್ರಸಂಗ ಬೇಡವಿತ್ತು ಎಂದು ನನಗೆ ಅನಿಸಿತು. ಆದರೆ ಬಾಯಿಬಿಟ್ಟು ಹೇಳಲು ಸಾಧ್ಯವಾಗಲಿಲ್ಲ. ಅಜ್ಜಿಯನ್ನು ದಹಿಸಿದ ಸ್ಥಳದ ಹತ್ತಿರವೇ ಅವರ ಪ್ರೀತಿಯ ದನವನ್ನೂ ಮಣ್ಣುಮಾಡಿ, ನಾವೆಲ್ಲರೂ ಅಲ್ಲಿಂದ ಹೊರಟೆವು.
***
ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗಲೂ ಅಮ್ಮನ ದುಃಖ ಕಡಿಮೆಯಾಗಿರಲಿಲ್ಲ. ಅಜ್ಜಿಯನ್ನು ನೆನಪಿಸಿಕೊಂಡು ಜೋರಾಗಿ ಅಳುತ್ತಿದ್ದರು. ನನಗೆ ಇದು ಅತಿ ಎನಿಸಿತು. “ಅಷ್ಟು ಅಳುವುದ್ಯಾಕೆ? ಅವರು ಬಹಳ ಜೋರಿನವರು. ಯಾರನ್ನೂ ಪ್ರೀತಿ ಮಾಡಿದವರಲ್ಲ. ಹೀಗೆ ಅಳುವುದಕ್ಕೆ ಏನಿಲ್ಲ. ಅಷ್ಟು ಒಳ್ಳೆಯವರಲ್ಲ ಅವರು. ಹೆಣ ಹೊರುವುದಕ್ಕೆ ನಾಲ್ಕು ಜನ ಬಂದದ್ದೇ ಬಹಳ ಕಷ್ಟದಲ್ಲಿ” ಎಂದು ಅಮ್ಮನಿಗೆ ನಾನು ಜೋರುಮಾಡಿದೆ. ಅದಕ್ಕೆ ಅಮ್ಮ “ಸರಿಯಾಗಿ ಗೊತ್ತಿಲ್ಲದೆ ಹಾಗೆಲ್ಲಾ ಹೇಳುವುದು ಸರಿ ಅಲ್ಲ. ಅವರು ಅನುಭವಿಸಿದ ಕಷ್ಟ ಕೆಲವರಿಗೆ ಮಾತ್ರ ಗೊತ್ತಿದೆ. ದಾಕ್ಷಾಯಿಣಿ ಹೆಸರಿನ ಅವರು ಆ ಶಿವದೇವರ ಹೆಂಡತಿ ದಾಕ್ಷಾಯಿಣಿಯ ಹಾಗೆಯೇ ಜೀವನಪೂರ್ತಿ ಬೆಂಕಿಯಲ್ಲಿ ಬೆಂದುಕೊಂಡೇ ಇದ್ದವರು” ಎಂದು ಹೇಳಿ, ಸೀತಾಪುರದ ಅಜ್ಜಿಯ ಬದುಕನ್ನು ನನ್ನ ಮುಂದೆ ತೆರೆದಿಡಲಾರಂಭಿಸಿದರು……
***
ಮಲ್ಲೆಕೊಡಿ ಗೋಪಾಲಣ್ಣ ಎಂದರೆ ದೊಡ್ಡ ಹೆಸರು ಪಡೆದಿದ್ದ ಮನುಷ್ಯ. ಶ್ರೀಮಂತ ಅಲ್ಲದೇ ಹೋದರೂ ನಾಲಗೆ ಹರಿತ ಇರುವ ಮನುಷ್ಯ ಎನ್ನುವುದು ಊರಿನ ಎಲ್ಲರಿಗೂ ತಿಳಿದಿದ್ದ ವಿಷಯ. ಪಾಲಿನಲ್ಲಿ ದೊರಕಿದ ಭುಮಿಯಲ್ಲಿ ಕೃಷಿ ಮಾಡಿಕೊಂಡು, ಖುಷಿಯಿಂದ ಇದ್ದ ಗೋಪಾಲಣ್ಣನಿಗೆ ಆವಾಗಾವಾಗ ಯಕ್ಷಗಾನ ತಾಳಮದ್ದಲೆಯಲ್ಲಿ ಅರ್ಥ ಹೇಳುವ ಹವ್ಯಾಸವಿತ್ತು. ತಮಾಷೆ, ಚಾತುರ‍್ಯ ಎಲ್ಲವೂ ಇದ್ದ ಅವರ ಮಾತುಗಾರಿಕೆ ಬಹಳಷ್ಟು ಜನರ ಮನವನ್ನು ಸೆಳೆಯುತ್ತಿತ್ತು.
ಹೀಗೆ ಹೆಸರು ಪಡೆದಿದ್ದ ಗೋಪಾಲಣ್ಣನಿಗೆ ಹನ್ನೆರಡು ಜನ ಮಕ್ಕಳು. ಎಂಟು ಜನ ಗಂಡುಮಕ್ಕಳು, ನಾಲ್ಕು ಜನ ಹೆಣ್ಣುಮಕ್ಕಳು. ನಾಲ್ವರು ಹೆಣ್ಣುಮಕ್ಕಳಲ್ಲಿ ಮೊದಲಿನವಳು ದಾಕ್ಷಾಯಿಣಿ. ಬಹಳ ಚುರುಕು ಬುದ್ಧಿಯವಳಾಗಿದ್ದ ದಾಕ್ಷಾಯಿಣಿಯನ್ನು ಕಂಡರೆ ತಂದೆಗೆ ಬಹಳ ಪ್ರೀತಿಯಿತ್ತು. ಮಗಳನ್ನು ಒಳ್ಳೆಯ ಮನೆಗೆ ಮದುವೆ ಮಾಡಿಕೊಡಬೇಕೆಂಬ ಆಸೆ ಅವರಿಗಿತ್ತು.
ಅವರ ಆಸೆ ಸತ್ಯ ಆಗುತ್ತದೇನೋ ಎನ್ನುವಂತೆ ಮದುವೆ ದಲ್ಲಾಳಿಯೊಬ್ಬ ಒಂದೊಳ್ಳೆ ಸಂಬಂಧವನ್ನು ತಂದಿರುವುದಗಿ ತಿಳಿಸಿದ. ಸೀತಾಪುರದ ಶ್ರೀಮಂತ ಮನೆತನ. ಹುಡುಗನ ಹೆಸರು ರಮೇಶ. ಮನೆಯಲ್ಲಿ ಟಿ.ವಿ., ಕಾರು ಎಲ್ಲಾ ಇದೆ. ದುಡಿಯದೇ ಸುಮ್ಮನೆ ಕುಳಿತಿದ್ದರೂ ನೆಮ್ಮದಿಯಿಂದ ಊಟ ಮಾಡಬಹುದು. ಎಂಟು ತಲೆಮಾರಿಗೆ ಸಾಕಾಗುವಷ್ಟು ಆಸ್ತಿ ಇದೆ. ವಿಷಯ ತಿಳಿದ ಗೋಪಾಲಣ್ಣನಿಗೆ ಆದ ಸಂತಸ ಅಷ್ಟಿಷ್ಟಲ್ಲ. ಮನೆಯಲ್ಲಿ ಟಿ.ವಿ., ಕಾರು ಇದೆ ಎಂದಾದರೆ ಅದು ಆಗರ್ಭ ಶ್ರೀಮಂತರ ಮನೆ ಎಂದು ಲೆಕ್ಕ ಹಾಕುತ್ತಿದ್ದ ಕಾಲವದು. ಇಂತಹ ಸಿರಿವಂತರ ಮನೆಗೆ ತನ್ನ ಮಗಳನ್ನು ಕೊಟ್ಟರೆ ಅವಳು ಜೀವಮಾನವೆಲ್ಲಾ ಖುಷಿಖುಷಿಯಾಗಿರಲು ವ್ಯವಸ್ಥೆ ಮಾಡಿಕೊಟ್ಟಂತೆಯೇ ಎಂಬ ಯೋಚನೆ ಗೋಪಾಲಣ್ಣನದ್ದಾಗಿತ್ತು. ತನ್ನ ಚುರುಕು ಮಾತಿನಿಂದ ಸಂಬಂಧ ಕುದುರುವಂತೆ ಮಾಡಿದ ಗೋಪಾಲಣ್ಣ, ಮಗಳು ದಾಕ್ಷಾಯಿಣಿ ಸೀತಾಪುರದ ಸೊಸೆಯಾದ ಬಳಿಕ ನಿರಾಳತೆಯ ನಿಟ್ಟುಸಿರನ್ನು ಬಿಟ್ಟ……
***
ಅಪ್ಪ ತಕ್ಷಣ ಕಾರಿನ ಬ್ರೇಕ್ ಹಾಕಿದರು. ಅಮ್ಮನಿಗೆ ಹೆದರಿಕೆ ಆಯಿತು. ಮಾತು ನಿಲ್ಲಿಸಿದರು. “ಅದೊಂದು ದರಿದ್ರ ಬೆಕ್ಕು. ಅಡ್ಡ ಬಂತು. ನಾನೇನಾದರೂ ಬ್ರೇಕ್ ಹಾಕದಿದ್ದರೆ ಸತ್ತೇಹೋಗುತ್ತಿತ್ತು” ಎಂದು ಹೇಳಿದರು ಅಪ್ಪ. ರಸ್ತೆಯ ಪಕ್ಕಕ್ಕೆ ಓಡಿಹೋದ ಬೆಕ್ಕನ್ನು ನೋಡುತ್ತಲೇ ಅಮ್ಮ “ಹೀಗೆಯೇ ಎಂದು ಹೇಳಲಾಗುವುದಿಲ್ಲ. ಅಂದುಕೊಳ್ಳದ್ದೂ ಕೆಲವೊಮ್ಮೆ ನಡೆಯುತ್ತದೆ. ಎಲ್ಲದಕ್ಕೂ ನಾವು ಸಿದ್ಧ ಇರಬೇಕು, ಅಷ್ಟೇ” ಎಂದರು. ಅಮ್ಮನ ಈ ಮಾತಿನಲ್ಲಿ ಸೀತಾಪುರದ ಅಜ್ಜಿಯ ಬದುಕಿನ ಗುಟ್ಟು ಇರಬಹುದು ಎನ್ನುವ ಕುತೂಹಲ ನನ್ನಲ್ಲಿತ್ತು. ಅಮ್ಮನ ಮಾತು ಮುಂದುವರಿಯಿತು. ಮದುವೆಯ ನಂತರದ ದಾಕ್ಷಾಯಿಣಿಯ ಜೀವನವನ್ನು ಅವರೀಗ ಹೇಳತೊಡಗಿದರು……
***
ಬಹಳ ಆಸೆ, ಅತೀವವಾದ ನಿರೀಕ್ಷೆ ಇಟ್ಟುಕೊಂಡು ಮದುವೆ ಆದ ದಾಕ್ಷಾಯಿಣಿಗೆ ಗಂಡನ ಪ್ರೀತಿ ಸಿಗಲಿಲ್ಲ. ಮೊದಲ ರಾತ್ರಿ ಆಕೆ ಅವನಿಗಾಗಿ ಕಾದು ಕುಳಿತಿದ್ದಳು. ಆದರೆ ಸ್ನೇಹಿತರೊಂದಿಗೆ ಇಸ್ಪೀಟಾಡುತ್ತಾ ಕುಳಿತಿದ್ದ ಆತ ಕೋಣೆಗೆ ಬರಲೇ ಇಲ್ಲ. ಮರುರಾತ್ರಿಯೂ ಹೀಗೆಯೇ. ಹಗಲಿಡೀ ಮನೆಯಲ್ಲಿಯೇ ಇರುವ ರಮೇಶ ರಾತ್ರಿಯಾಗುತ್ತಿದ್ದಂತೇ ಏನಾದರೂ ಕಾರಣ ಮುಂದುಮಾಡಿಕೊಂಡು ಮನೆಯಿಂದ ಹೊರಹೋಗುತ್ತಿದ್ದ. ಏನು ಕಾರಣ ಎನ್ನುವುದು ಇನ್ನೂ ಇಪ್ಪತ್ತು ತುಂಬಿರದ ದಾಕ್ಷಾಯಿಣಿಗೆ ತಿಳಿದಿರಲಿಲ್ಲ.
ಕೊನೆಗೆ ಒಂದು ರಾತ್ರಿ ಅವನಾಗಿಯೇ ನಿಜವಿಚಾರವನ್ನು ಅವಳಿಗೆ ತಿಳಿಸಿದ. ಕಾರು ಡ್ರೈವಿಂಗ್ ಮಾಡುತ್ತಿರಬೇಕಾದರೆ ಅಪಘಾತ ಆಗಿ ಅವನ ಗಂಡಸ್ತನ ಹೊರಟುಹೋಗಿತ್ತು. ಅವನಿಗೆ ಮದುವೆ ಆಗುವುದೂ ಇಷ್ಟ ಇರಲಿಲ್ಲ. ಆದರೆ ಮನೆಯವರ ಒತ್ತಾಯಕ್ಕೆ ಮದುವೆಗೆ ಒಪ್ಪಿಕೊಂಡಿದ್ದ. ಗಂಡನ ಈ ಮಾತನ್ನು ಕೇಳಿ ದಾಕ್ಷಾಯಿಣಿಗೆ ಸಿಡಿಲು ಹೊಡೆದಂತಾಯಿತು. “ನೀನು ಈ ವಿಷಯವನ್ನು ಯಾರಲ್ಲೂ ಹೇಳಬಾರದು. ಹೊರಗಿನವರಿಗೆ ತಿಳಿದರೆ ನನ್ನ ಮರ್ಯಾದೆ ಹೋಗುತ್ತದೆ. ಮರ್ಯಾದೆ ಹೋದರೆ ನಾನು ಜೀವಂತ ಇರುವುದಿಲ್ಲ. ನಿನಗೆ ಗಂಡ ಜೀವಂತ ಇರಬೇಕೋ, ಬೇಡವೋ, ನೀನೇ ಯೋಚನೆ ಮಾಡು” ಎಂಬ ರಮೇಶನ ಮಾತು ದಾಕ್ಷಾಯಿಣಿಯ ಬಾಯಿ ಮುಚ್ಚಿಸಿತು.
“ಮದುವೆ ಆಗಿ ಒಂದು ವರ್ಷ ಕಳೆಯಿತು. ಇನ್ನೂ ಏನೂ ವಿಶೇಷ ಇಲ್ಲವಾ?” ಎಂದು ದಾಕ್ಷಾಯಿಣಿಯಲ್ಲಿ ಬಹಳಷ್ಟು ಜನ ಕೇಳುವುದಕ್ಕೆ ಆರಂಭಿಸಿದರು. ಅವರಿಗೆಲ್ಲರಿಗೂ ಉತ್ತರ ಕೊಟ್ಟೂ ಕೊಟ್ಟೂ ಅವಳಿಗೆ ಸಾಕಾಗಿಹೋಗಿತ್ತು. ಸತ್ಯ ಹೇಳುವ ಹಾಗಿಲ್ಲ. “ಅಂಥ ವಿಶೇಷ ಏನೂ ಇಲ್ಲ” ಎಂದ ಮರುಗಳಿಗೆಯೇ ಎದುರಿನವರ ಪುಕ್ಕಟೆ ಸಲಹೆ- “ನಿನ್ನಲ್ಲಿ ಏನೋ ದೋಷ ಇರಬೇಕು. ಪಂಡಿತರಲ್ಲಿ ತೋರಿಸುವುದು ಒಳ್ಳೆಯದು.” ಹೊರಗಿನವರು ಮಾತ್ರವಲ್ಲ, ಮನೆಯವರೇ ಹಾಗೆ ಹೇಳಲು ಶುರುಮಾಡಿದರು. ತನ್ನಲ್ಲೇ ಏನೋ ದೋಷ ಇದೆ ಎಂದು ಎಲ್ಲರೂ ಬೊಟ್ಟು ಮಾಡಿ ತೋರಿಸುತ್ತಿದ್ದಾಗಲೂ ದಾಕ್ಷಾಯಿಣಿ ನಿಜ ವಿಚಾರ ಹೇಳಲಿಲ್ಲ. ಲೋಕದ ಕಣ್ಣಿಗೆ ಮಣ್ಣು ಹಾಕಲೆಂಬಂತೆ ಪಂಡಿತರ ಬಳಿಗೆ ಹೋದಳು. ರಮೇಶ ಮೊದಲೇ ಆ ಪಂಡಿತರಿಗೆ ಕೈತುಂಬಾ ಹಣ ಕೊಟ್ಟಿದ್ದ. ಪರೀಕ್ಷಿಸಿದಂತೆ ನಟಿಸಿದ ಪಂಡಿತರು ರಮೇಶ ಹೇಳಿಕೊಟ್ಟದ್ದನ್ನೇ ಉರುಹೊಡೆದು, ದಾಕ್ಷಾಯಿಣಿಯಲ್ಲಿ ದೋಷ ಇದೆ. ಈಕೆಗೆ ಮಕ್ಕಳಾಗುವ ಸಾಧ್ಯತೆ ಇಲ್ಲ ಎಂದರು.
‘ದಾಕ್ಷಾಯಿಣಿಗೆ ಏನೋ ದೊಡ್ಡ ತೊಂದರೆ ಇದೆಯಂತೆ. ಅವಳಿಗೆ ಈ ಜನ್ಮದಲ್ಲಿ ಮಕ್ಕಳಾಗುವುದಿಲ್ಲವಂತೆ ಎಂಬ ಮಾತು ಸೀತಾಪುರ ಮತ್ತು ಮಲ್ಲೆಕೊಡಿ ಎರಡು ಊರುಗಳಲ್ಲಿಯೂ ಸುದ್ದಿಯಾಯಿತು. ಕೆಲವರು ಅವಳಲ್ಲಿ ಮಾತನಾಡುವುದನ್ನೇ ನಿಲ್ಲಿಸಿದರು. ಅವಳ ಹಿಂದಿನಿಂದ “ಅವಳು ಗಡಸು” ಎಂದು ಹೇಳಿ, ನಗುವವರ ಸಂಖ್ಯೆ ಜಾಸ್ತಿಯಾಗತೊಡಗಿತ್ತು. ಯಾವಾಗಲೂ ಚುರುಕಿನಿಂದ ನಗುನಗುತ್ತಾ ಇದ್ದ ದಾಕ್ಷಾಯಿಣಿ ಹೀಗೆಲ್ಲಾ ಆದ ಬಳಿಕ ಒಂದು ರೀತಿಯ ಬೇಸರಕ್ಕೆ ಒಳಗಾದಳು. ಹೀಗೆಯೇ ದಿನಗಳು ಸಾಗುತ್ತಿದ್ದವು. ಮಕ್ಕಳು ಇಲ್ಲದಿದ್ದರೆ ಏನಂತೆ, ಮನೆಯಲ್ಲಿಯಲ್ಲಿರುವ ದನ ಕರುಗಳು, ಬೆಕ್ಕುಗಳು ಇವುಗಳನ್ನೇ ಮಕ್ಕಳಂತೆ ಮುದ್ದಿಸುತ್ತಾ, ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳುತ್ತಿದ್ದಳು ದಾಕ್ಷಾಯಿಣಿ.
ಹೀಗಿರುವಾಗಲೇ ಅವಳ ಗಂಡ ರಮೇಶ ಒಂದು ರೀತಿಯಲ್ಲಿ ಅರೆಹುಚ್ಚರ ಹಾಗೆ ವರ್ತಿಸಲಾರಂಭಿಸಿದ……
***
ಬ್ಯಾರಿಕೇಡ್ ಇಟ್ಟುಕೊಂಡು ಪೋಲೀಸರು ನಿಂತುಕೊಂಡಿರುವುದನ್ನು ನೋಡಿದ ಅಪ್ಪ ಕಾರು ನಿಲ್ಲಿಸಿದರು. “ಇಷ್ಟು ಹೊತ್ತಿಗೆ ಎಲ್ಲಿಂದ ಬರುತ್ತಿದ್ದೀರಿ?” ಎಂದು ಪ್ರಶ್ನಿಸಿದ ಪೋಲೀಸರು ಕಾರಿನ ಒಳಗೆ ಇಣುಕಿ ನೋಡಿದರು. ಅಪ್ಪ ಸೀತಾಪುರಕ್ಕೆ ಹೋಗಿರುವುದರ ಬಗ್ಗೆ ವರದಿ ಒಪ್ಪಿಸುತ್ತಿದ್ದಾಗಲೇ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಮ್ಮನನ್ನು ಕಂಡ ಪೋಲೀಸರು “ಹ್ಞಾ ಹೋಗಿ ಹೋಗಿ” ಎಂದರು. ಕಾರಿನಲ್ಲಿ ಹೆಣ್ಣೊಬ್ಬಳು ಇದ್ದುದನ್ನು ಕಂಡ ಕೂಡಲೇ ಯವ ವಿಚಾರಣೆಯನ್ನೂ ನಡೆಸದೆ ಪೋಲೀಸರು ನಮ್ಮನ್ನು ಬಿಟ್ಟದ್ದನ್ನು ಕಂಡು ನನಗೆ ಆಶ್ಚರ್ಯವಾಗಿತ್ತು. ಕಾರು ಮುಂದೆ ಸಾಗುತ್ತಿದ್ದಂತೆ “ನೋಡಮ್ಮಾ. ನಿನಗೆ ಪೋಲೀಸರೂ ಕೂಡಾ ಎಷ್ಟು ಬೆಲೆ ಕೊಟ್ಟಿದ್ದಾರೆ. ನಾನೂ ಅಪ್ಪ ಮಾತ್ರ ಇದ್ದಿದ್ದರೆ ಕಡಿಮೆ ಎಂದರೂ ಹತ್ತು ನಿಮಿಷ ವಿಚಾರಣೆ ನಡೆಯುತ್ತಿತ್ತು. ನಿನ್ನನ್ನು ನೋಡಿದ ತಕ್ಷಣ ಹೋಗುವುದಕ್ಕೆ ಹೇಳಿದ್ದಾರೆ. ಹೆಂಗಸರಿಗೆ ಅದೆಷ್ಟು ಬೆಲೆ ಇದೆ ಈ ಸಮಾಜದಲ್ಲಿ. ಅಲ್ಲವಾ?” ತಮಾಷೆಯ ಧಾಟಿಯಲ್ಲಿ ನಾನು ಹೇಳಿದೆ.
ನನ್ನ ಮಾತಿಗೆ ಅಮ್ಮ “ಹೆಂಗಸರಿಗೆ ಈಗಿನ ಕಾಲದಲ್ಲಿ ಇರುವ ಬೆಲೆ ಮೊದಲಿನ ಕಾಲದಲ್ಲಿ ಇದ್ದಿದ್ದರೆ ಸೀತಾಪುರದ ಅಜ್ಜಿಯ ಜೀವನ ಹಾಗೆ ಆಗಲಿಕ್ಕಿತ್ತಾ?” ಎಂದು ಬಹಳ ಬೇಜಾರಿನಲ್ಲಿ ನುಡಿದಳು. ಅರ್ಧದಲ್ಲಿ ನಿಂತಿದ್ದ ಸೀತಾಪುರದ ಅಜ್ಜಿಯ ಜೀವನ ಮುಂದುವರಿಯಲಾರಂಭಿಸಿತು…..
***
ರಮೇಶ ತಲೆ ಸರಿ ಇಲ್ಲದವನ ಹಾಗೆ ನಡೆದುಕೊಳ್ಳಲಾರಂಭಿಸಿದ್ದ. ಕೆಲಸಕ್ಕೆ ಬರುವ ಹೆಣ್ಣಾಳುಗಳಲ್ಲಿ ಏನೇನೋ ಅಸಹ್ಯವಾಗಿ ಮಾತನಾಡುತ್ತಿದ್ದ. ಒಟ್ಟಾರೆ ನಗುತ್ತಿದ್ದ. ಅವನ ಮತಿಗೆ ತಲೆಬುಡ ಇರಲಿಲ್ಲ. ಇದನ್ನೆಲ್ಲಾ ನೋಡುತ್ತಿದ್ದ ದಾಕ್ಷಾಯಿಣಿಗೆ ತನು ಮುಚ್ಚಿಟ್ಟ ಸತ್ಯವನ್ನೆಲ್ಲಾ ಹೇಳಿಬಿಡಬೇಕೆಂಬ ಉಮೇದು ಬರುತ್ತಿತ್ತು. ಆದರೆ ಅವರಿಬ್ಬರು ಗಂಡ ಹೆಂಡತಿ ಮಾತ್ರವೇ ಕೋಣೆಯಲ್ಲಿರುವಾಗ ರಮೇಶ ಕಣ್ಣುಗಳಲ್ಲಿ ನೀರು ತುಂಬಿಸಿಕೊಂಡು “ದಾಕ್ಷಾಯಿಣಿ, ನಿನಗೆ ನಾನು ಮೋಸ ಮಾಡಿದೆ. ನನ್ನಿಂದಾಗಿ ನೀನು ಕಷ್ಟ ಅನುಭವಿಸಬೇಕಾಯಿತು” ಎಂದು ಹೇಳುತ್ತಿದ್ದ. ಹೀಗೆ ಹೇಳಿ, ಐದು ನಿಮಿಷಗಳಾಗುವಷ್ಟರಲ್ಲಿಯೇ ಮತ್ತೆ ಹುಚ್ಚುಗಟ್ಟಿ ಕುಣಿಯುತ್ತಿದ್ದ. “ನನ್ನನ್ನು ಕೊಲ್ಲು. ನಾನು ಸಾಯುತ್ತೇನೆ. ನನ್ನನ್ನು ನೀನೇ ಕೊಲ್ಲಬೇಕು” ಎಂದು ಹೇಳಿ, ಆಕೆಯ ಕೈಗಳನ್ನು ಬಲವಂತವಾಗಿ ತನ್ನ ಕುತ್ತಿಗೆಯ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದ. ಮತ್ತೆ ಪುನಃ ವಿಪರೀತವಾದ ಭಯಕ್ಕೆ ಒಳಗಾದವನಂತೆ ಮಂಚದ ಆಚೆ ಬದಿಗೆ ಹೋಗಿ ಅಡಗಿ ಕುಳಿತುಕೊಳ್ಳುತ್ತಿದ್ದ. ಮತ್ತೆ ಹುಚ್ಚುಹುಚ್ಚಾಗಿ ನಗುತ್ತಾ ಅವಳ ಬಳಿಗೆ ಬರುತ್ತಿದ್ದ. ಕೆಲವೊಮ್ಮೆ ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡು, ಅಂಗಾಂಗಗಳನ್ನೆಲ್ಲಾ ಬಲವಾಗಿ ಅದುಮುತ್ತಿದ್ದ. ಮುಖವನ್ನು ಕಚ್ಚಿ ಗಾಯಗೊಳಿಸುತ್ತಿದ್ದ. ಅವನ ಈ ಅವಸ್ಥೆ ಕಂಡು ದಾಕ್ಷಯಿಣಿಗೆ ನಿಜವಿಚಾರವನ್ನು ಸಮಾಜಕ್ಕೆ ತಿಳಿಸಬೇಕೆಂಬ ಉಮೇದು ಹೊರಟುಹೋಗುತ್ತಿತ್ತು. ಕೋಪದ ಬದಲಿಗೆ ಅದೆಷ್ಟೋ ಸಲ ಆತನ ಕುರಿತು ಕರುಣೆ ಮೂಡಿಬರುತ್ತಿತ್ತು. ಅವನ ದೌರ್ಬಲ್ಯವೇ ಅವನ ಮಾನಸಿಕ ಸ್ಥಿರತೆಯನ್ನು ಹಾಳುಗೆಡಹಿದೆ ಎಂಬ ವಿಚಾರ ಅವಳ ಚುರುಕುಬುದ್ಧಿಗೆ ಹೊಳೆಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಸತ್ಯ ಹೇಳಿದರೆ ನನ್ನ ಸಂಸಾರ ಸರಿಯಾಗುತ್ತದಾ? ನಾನು ಪಡೆದುಕೊಂಡು ಬಂದದ್ದನ್ನು ನಾನೇ ಅನುಭವಿಸಬೇಕು ಎನ್ನುವ ಯೋಚನೆ ಅವಳಲ್ಲಿ ಬಲವಾಗಿತ್ತು. ಜೊತೆಗೆ, ತಾನು ಸೇರಿದ ಮನೆಯ ಮರ್ಯಾದೆಯನ್ನು ಹೇಗಾದರೂ ಮಾಡಿ ಉಳಿಸಬೇಕು ಎಂಬ ಭಾವನೆ ಅವಳದ್ದಾಗಿತ್ತು. ರಮೇಶ ಹೀಗೆ ಅರೆಹುಚ್ಚ ಆಗಿರುವ ವಿಷಯ ಹೊರಗಿನವರಿಗೆ ತಿಳಿಯದಂತೆ ಅವನ ಮನೆಯವರೆಲ್ಲಾ ನೋಡಿಕೊಂಡಿದ್ದರು. ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಹುಚ್ಚು ಇದ್ದರೆ ಇಡೀ ಮನೆಯವರನ್ನೇ ತಿರಸ್ಕರಿಸುತ್ತಿದ್ದ ಕಾಲ ಅದಾಗಿತ್ತು. ಮನೆಗೆ ಬರುವ ಕೆಲಸದಾಳುಗಳಿಗೆ ಬಿಟ್ಟು ಬೇರೆ ಯಾರಿಗೂ ರಮೇಶನ ಈ ಹುಚ್ಚಾಟಿಕೆಗಳು ಗೊತ್ತಿರಲಿಲ್ಲ.
ಹೀಗೆಯೇ ಹುಚ್ಚುಗಟ್ಟುತ್ತಿದ್ದ ರಮೇಶ ಅದೊಂದು ದಿನ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ಹೆಣ್ಣಾಳನ್ನು ತಬ್ಬಿಕೊಳ್ಳುವುದಕ್ಕೆ ಪ್ರಯತ್ನಿಸಿದ. ಅವಳ ಮೈಮೇಲೆ ಕೈಹಾಕಿದ. ಅವಳು ಹೇಗೋ ಪ್ರಯಾಸಪಟ್ಟು ಅವನಿಂದ ತಪ್ಪಿಸಿಕೊಂಡು ಬಂದು ದಾಕ್ಷಾಯಿಣಿಯಲ್ಲಿ ವಿಷಯ ತಿಳಿಸಿದಳು. “ಅಕ್ಕಾ, ನನಗೆ ಹೆದರಿಕೆ ಆಗುತ್ತದೆ. ಇನ್ನು ನಾನು ನಿಮ್ಮ ಮನೆಯ ಕೆಲಸಕ್ಕೆ ಬರುವುದಿಲ್ಲ” ಎಂದಳು. ಹೀಗೆಯೇ ಇದ್ದರೆ ಮನೆಯ ಮರ್ಯಾದೆ ಮೂರು ಕಾಸಿಗೆ ಹರಾಜಾದೀತು ಎಂದು ಭಾವಿಸಿದ ರಮೇಶನ ತಂದೆ- ತಾಯಿ ಆ ಕೆಲಸದವಳಿಗೆ ಹಣ ಕೊಟ್ಟು, ಅವಳನ್ನು ತೆಪ್ಪಗಾಗಿಸಿದರು. ಮರುದಿನದಿಂದಲೇ ರಮೇಶನನ್ನು ಮನೆಯ ಹಿಂದುಗಡೆಯಿರುವ ಕತ್ತಲೆ ಕೋಣೆಯಲ್ಲಿ ಕಟ್ಟಿಹಾಕಿದರು. ಮೂರು ದಿನಕ್ಕೊಮ್ಮೆ ಅವನನ್ನು ಸ್ನಾನ ಮಾಡಿಸುವುದಕ್ಕಾಗಿ ಇಬ್ಬರು ಗಟ್ಟಿಮುಟ್ಟಾದ ಯುವಕರನ್ನೂ ನೇಮಿಸಿದರು.
ರಮೇಶನಿಗೆ ಹುಚ್ಚು ಶುರು ಆದಾಗಲೇ ಒಳ್ಳೆ ವೈದ್ಯರಲ್ಲಿ ಕರೆದುಕೊಂಡು ಹೋಗಿ ತೋರಿಸಿದ್ದರೆ ಅವನ ಹುಚ್ಚು ಬಿಟ್ಟುಹೋಗುತ್ತಿತ್ತೇನೋ. ಆದರೆ ಮನೆಯವರಿಗೆ ಆ ತಿಳಿವಳಿಕೆಯೇ ಇರಲಿಲ್ಲ. ಹುಚ್ಚು ಹಿಡಿದರೆ ಮತ್ತೆ ಯಾವತ್ತೂ ಬಿಟ್ಟುಹೋಗುವುದಿಲ್ಲ ಎಂಬ ತಪ್ಪು ಗ್ರಹಿಕೆ ಅವರದ್ದು. ವೈದ್ಯರಲ್ಲಿಗೆ ಹೋದರೆ ಊರಿಡೀ ಸುದ್ದಿಯಾಗಿ ಜನರೆಲ್ಲಾ ತಮ್ಮನ್ನು ಅಪಹಾಸ್ಯ ಮಾಡಿಯಾರು, ನಿರ್ಲಕ್ಷಿಸಿಯಾರು ಎಂಬ ಹಿಂಜರಿಕೆ ಅವರಲ್ಲಿತ್ತು. ಕೋಣೆಯಲ್ಲಿಯೇ ಕೂಡಿಹಾಕಿದ್ದರಿಂದಗಿ ರಮೇಶನ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು. ಒಂದು ದಿನ ಆ ಇಬ್ಬರು ಯುವಕರು ಕೋಣೆಯಿಂದ ಅವನನ್ನು ಹೊರತಂದು ಸ್ನಾನ ಮಾಡಿಸುತ್ತಿರಬೇಕಾದರೆ ಅವರ ಕೈಯ್ಯಿಂದ ತಪ್ಪಿಸಿಕೊಂಡು, ಕೈಗೆ ಸಿಕ್ಕಿದ ದೊಣ್ಣೆಯಲ್ಲಿ ಎದುರಿಗೆ ಬಂದವರಿಗೆಲ್ಲಾ ಹೊಡೆಯಲಾರಂಭಿಸಿದ್ದ. ಅವನನ್ನು ಮತ್ತೆ ಕೋಣೆಯಲ್ಲಿ ಕೂಡಿಡಬೇಕಾದರೆ ಸಾಕುಸಾಕಾಗಿ ಹೋಗಿತ್ತು. ಅವನು ಹುಚ್ಚನಾಗಿದ್ದಾನೆ ಎಂಬ ವಿಷಯ ಊರಿನ ಬಹುತೇಕರಿಗೆ ತಿಳಿಯುವಂತಾಗಿತ್ತು.
ಇದಾದ ಬಳಿಕ ಅವನನ್ನು ಹೊರಗಡೆ ಕರೆದುಕೊಂಡು ಬರುತ್ತಿರಲಿಲ್ಲ. ಕೊನೆಗೊಂದು ದಿನ ಅವನು ಹಾಗೆಯೇ ತೀರಿಹೋದ.
ಗಂಡನ ಶವದ ಮುಂದೆ ಕುಳಿತಿದ್ದ ದಾಕ್ಷಾಯಿಣಿಯ ಕಣ್ಣುಗಳಲ್ಲಿ ಹನಿ ನೀರು ಇರಲಿಲ್ಲ. ಸೇರಿದ್ದ ಜನರಲ್ಲಿ ಹೆಚ್ಚಿನವರು “ಈ ದರಿದ್ರದವಳನ್ನು ಮದುವೆ ಆಗಿ ಅವನು ಹಾಳಾಗಿಹೋದ. ಇವಳಿಗೆ ದೋಷ ಇತ್ತು. ಮಕ್ಕಳಾಗಲಿಲ್ಲ. ಅದೇ ಬೇಜಾರಿನಲ್ಲಿ ಅವನಿಗೆ ಹುಚ್ಚು ಹಿಡಿದದ್ದಿರಬೇಕು, ಪಾಪ” ಎಂದು ಹೇಳುತ್ತಿದ್ದರು.
ಮಗನನ್ನು ಕಳೆದುಕೊಂಡ ದುಃಖ ರಮೇಶನ ಅಪ್ಪ- ಅಮ್ಮನನ್ನು ಒಂದೇ ವರ್ಷದಲ್ಲಿ ನುಂಗಿಹಾಕಿತು.
***
“ಗಂಡ ಸತ್ತಾಗಲೂ ಅಜ್ಜಿ ಅಳಲಿಲ್ಲವಲ್ಲ, ಯಾಕೆ?” ನಾನು ಅಮ್ಮನಲ್ಲಿ ಕೇಳಿದೆ. “ಮಣ್ಣಿನ ಮುದ್ದೆ ಮಳೆ ಸುರಿದಾಗ ಕರಗಿಹೋಗುತ್ತದೆ. ಆದರೆ ಬಂಡೆಕಲ್ಲು ಕರಗುವುದಿಲ್ಲ” ಎಂದು ಹೇಳಿ ಅರೆಕ್ಷಣ ಮಾತು ನಿಲ್ಲಿಸಿದ ಅಮ್ಮ ಮತ್ತೆ ಹೇಳಿದಳು- “ಅಷ್ಟು ಗಟ್ಟಿತನ ಇಲ್ಲದಿದ್ದರೆ ಅಷ್ಟು ದೊಡ್ಡ ಮನೆಯನ್ನು ಅವರೊಬ್ಬರೇ ನಡೆಸಿಕೊಂಡು ಹೋಗುವುದಕ್ಕೆ ಸಾಧ್ಯವಿತ್ತಾ?”
ಅಜ್ಜಿಯ ಜೀವನ ಅಮ್ಮನ ಮಾತಿನ ಮೂಲಕ ಮುಂದುವರಿಯಲಾರಂಭಿಸಿತು……
***
ಗಂಡು ದಿಕ್ಕಿಲ್ಲದ ಮನೆಯನ್ನು, ವಿಸ್ತಾರವಾದ ತೋಟವನ್ನು ಬಹಳ ಸುಲಭವಾಗಿ ತಮ್ಮ ಕೈವಶ ಮಾಡಿಕೊಳ್ಳಬಹುದೆಂದು ಯೋಚಿಸಿದ ರಮೇಶನ ದಾಯಾದಿಗಳು ದಾಕ್ಷಾಯಿಣಿಯ ಜೊತೆಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದರು. ಗಡಿಬೇಲಿಯನ್ನು ಮುಂದೆ ಮುಂದೆ ಹಾಕುವುದಕ್ಕೆ ಆರಂಭಿಸಿದರು. ಪಾಪದವಳಾಗಿದ್ದ ದಾಕ್ಷಾಯಿಣಿಯ ಜೋರುತನ ಅವರ ಅರಿವಿಗೆ ಬಂದದ್ದು ಆಗಲೇ. ವಿಷಯ ತಿಳಿದ ತಕ್ಷಣವೇ ದಾಕ್ಷಾಯಿಣಿ ಕತ್ತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ತೋಟಕ್ಕೆ ಹೋದಳು. ಏನಾದರೂ ಬಿಡುವುದಿಲ್ಲ ಎಂಬ ಹಠದಿಂದ ಮಾತನಾಡಿದಳು. ನಂಬಿಕಸ್ಥ ಕೆಲಸದಾಳುಗಳಿಬ್ಬರೂ ಆಕೆಯ ಜೊತೆಗಿದ್ದರು. ಊರಿನ ಜನರೆಲ್ಲಾ ಸೇರಿದ ಕೂಡಲೇ ಜಗಳಕ್ಕೆಂದು ಬಂದಿದ್ದ ದಾಯಾದಿಗಳೆಲ್ಲಾ ಮೆಲ್ಲಮೆಲ್ಲನೆ ಜಾಗ ಖಾಲಿ ಮಾಡಿದ್ದರು.
ಯೋಚಿಸಿದಷ್ಟು ಸುಲಭದಲ್ಲಿ ಆಗುವ ಕೆಲಸ ಇದಲ್ಲ ಎಂದು ಅರ್ಥೈಸಿಕೊಂಡ ಆ ದಾಯಾದಿಗಳು ಕೋರ್ಟಿನಲ್ಲಿ ದಾವೆ ಹೂಡಿದರು. ವಕೀಲರಿಗೆ ಕಾಸು ತಿನ್ನಿಸಿದರೆ ಕೇಸು ಗೆಲ್ಲಬಹುದು ಎಂಬ ಯೋಚನೆ ಅವರದ್ದು. ಐದು ವರ್ಷ ನಿರಂತರವಾಗಿ ವ್ಯಾಜ್ಯ ನಡೆಯಿತು. ಎತ್ತಿನಗಾಡಿಯಲ್ಲಿ ಕುಳಿತು ಕೋರ್ಟಿಗೆ ಹಾಜರಾಗುತ್ತಿದ್ದ ದಾಕ್ಷಾಯಿಣಿ ಆ ದಾಯಾದಿಗಳ ಮೋಸವನ್ನೆಲ್ಲಾ ಒಂದಿಷ್ಟೂ ಮುಚ್ಚುಮರೆಯಿಲ್ಲದೆ ನ್ಯಾಯಾಧೀಶರ ಮುಂದೆ ಅರುಹತೊಡಗಿದಳು. ಕೊನೆಗೂ ಸತ್ಯ ಗೆದ್ದಿತ್ತು. ಮನೆ, ತೋಟ ಎಲ್ಲವೂ ದಾಕ್ಷಾಯಿಣಿಗೇ ಸೇರಬೇಕು ಎಂಬ ತೀರ್ಮಾನ ಹೊರಬಿತ್ತು.
ಕೋಲು ಕೊಟ್ಟು ಏಟು ತಿಂದಂತಹ ಅವಸ್ಥೆ ಆ ದಾಯಾದಿಗಳದ್ದು. ಹಣವೂ ಹೋಯಿತು. ಸೋಲೂ ಆಯಿತು. ಸೋತಿರುವುದನ್ನು ಒಪ್ಪಿಕೊಳ್ಳುವುದಕ್ಕೆ ಅವರು ಸಿದ್ಧರಿರಲಿಲ್ಲ. ಊರಿನಲ್ಲಿಡೀ ಮರ್ಯಾದೆ ಕಳೆದುಕೊಂಡಿರುವುದಕ್ಕೆ ಸೇಡು ತೀರಿಸಿಕೊಳ್ಳಲೇಬೇಕು ಎಂದು ಹಲ್ಲುಕಡಿದ ಅವರು ಸಣ್ಣ ಸಣ್ಣ ವಿಷಯಕ್ಕೂ ಜಗಳ ತೆಗೆಯಲಾರಂಭಿಸಿದರು. ದಾಕ್ಷಯಿಣಿಯ ನಂಬಿಕಸ್ಥ ಆಳಿಗೆ ಬೇಕುಬೇಕೆಂದೇ ಬೈದು, ಅವನ ತಲೆಗೆ ಕತ್ತಿಯಿಂದ ಕಡಿದು ಪರಾರಿಯಾದರು. ವಿಷಯ ಗೊತ್ತಾದ ತಕ್ಷಣ ದಾಕ್ಷಾಯಿಣಿ ಆ ಕೆಲಸದವನ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಟ್ಟಳು. ಪೋಲೀಸ್ ಕಂಪ್ಲೇಂಟ್ ಕೊಟ್ಟಳು. ಆ ದಾಯಾದಿಗಳು ಪೋಲೀಸರಿಗೆ ಕೈಮುಗಿದು, “ನಮ್ಮನ್ನು ದಯವಿಟ್ಟು ಬಿಡಿ. ದಮ್ಮಯ್ಯ, ಇನ್ನುಮುಂದೆ ಹೀಗೆ ಮಾಡುವುದಿಲ್ಲ” ಎಂದು ಬೇಡಿಕೊಳ್ಳುವಂತಾಯಿತು. ಎಚ್ಚರಿಕೆ ಕೊಟ್ಟ ಪೋಲೀಸರು ಅವರನ್ನು ಬಿಟ್ಟುಬಿಟ್ಟರು.
***
“ಹಾಗಾದರೆ ನಂತರ ಅವರ ತೊಂದರೆ ಕಡಿಮೆ ಆಯಿತಾ?” ನಾನು ಆಶ್ಚರ್ಯದಿಂದ ಕೇಳಿದೆ. ಅಷ್ಟು ಹೊತ್ತು ಅಮ್ಮನ ಮಾತುಗಳನ್ನು ಸುಮ್ಮನೆ ಕೇಳುತ್ತಿದ್ದ ನನ್ನ ಮನಸ್ಸಿನಲ್ಲಿ ಈಗ ಸೀತಾಪುರದ ಅಜ್ಜಿಯ ಬದುಕು ಅಪಾರ ಸೋಜಿಗವನ್ನು ಹುಟ್ಟುಹಾಕಿತ್ತು. ನಾನು ಇಷ್ಟು ವರ್ಷಗಳಲ್ಲಿ ಅರಿತುಕೊಳ್ಳದ ವಿಚಾರ ಸೀತಾಪುರದ ಅಜ್ಜಿಯ ಬದುಕಿನಲ್ಲಿತ್ತು. ಅದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕೆಂದು ನನ್ನ ಮನಸ್ಸು ಬಯಸತೊಡಗಿತ್ತು.
“ನಾಯಿ ಯಾವತ್ತಾದರೂ ಗಲೀಜು ತಿನ್ನುವುದನ್ನು ಬಿಡುತ್ತದಾ? ನಾಯಿಯಾದರೂ ಬಿಡುತ್ತದೋ ಏನೋ. ಆದರೆ ಈ ಕೆಲವು ಮನುಷ್ಯರಿದ್ದಾರಲ್ಲಾ, ಅವರು ಯಾವತ್ತಿಗೂ ದ್ವೇಷ, ಕೋಪವನ್ನು ಬಿಡುವುದಿಲ್ಲ. ದ್ವೇಷವನ್ನು ಒಡಲಲ್ಲಿರಿಸಿಕೊಂಡಿದ್ದ ಆ ದಾಯಾದಿಗಳು ಮಾಡಿದ ಕೆಲಸ ಮೃಗಕ್ಕಿಂತಲೂ ಹೀನವಾದದ್ದು…” ಹೇಳಿದ ಅಮ್ಮ ಮಾತಿಗೆ ವಿರಮ ಕೊಟ್ಟರು. ನಾನು ಅವರ ಮುಖವನ್ನೇ ನೋಡುತ್ತಿದ್ದೆ. ಅವರು ಹೇಳುತ್ತಾ ಹೋದರು……
***
ಆ ದಿನ ಸೀತಾಪುರದ ತೋಟದಲ್ಲಿ ಅಡಿಕೆ ಕೊಯ್ಲು ಇತ್ತು. ಆ ಸಮಯಕ್ಕಾಗುವಾಗಲೇ ದಾಕ್ಷಾಯಿಣಿ ಬಹಳ ಜೋರಿನ ಹೆಣ್ಣುಮಗಳೆಂದು ಹೆಸರು ಪಡೆದಾಗಿತ್ತು. ಅವರ ಬಿರುಸಿನ ಬಾಯಿಗೆ ಬೆದರಿ ಕೆಲಸದವರೆಲ್ಲಾ ಒಂದಿಷ್ಟೂ ಮೈಗಳ್ಳತನವಿಲ್ಲದೆ ಕೆಲಸ ಮಾಡುತ್ತಿದ್ದರು. ಸಂಜೆ ಹೊತ್ತಿಗಾಗುವಾಗ ಕೊಯ್ಲಿನ ಕೆಲಸ ಸಂಪೂರ್ಣವಾಗಿ ಮುಗಿದಿತ್ತು. ಕೆಲಸದವರನ್ನು ಬೈದಂತೆ ನಟಿಸುತ್ತಲೇ ದಾಕ್ಷಾಯಿಣಿ ಲೆಕ್ಕಕ್ಕಿಂತಲೂ ಹೆಚ್ಚಿನ ಕೂಲಿಯನ್ನೇ ಅವರಿಗೆ ಕೊಟ್ಟಳು. ಕೆಲಸ ಒಳ್ಳೆ ರೀತಿಯಲ್ಲಿ ಮುಗಿದಿದೆ ಎಂಬ ಸಂತಸ ಅವಳದ್ದಾಗಿತ್ತು.
ಬೆಳ್ಳಂಬೆಳಗ್ಗೆಯಿಂದಲೇ ಕೆಲಸದಾಳುಗಳಿಗೆ ಕೆಲಸ ಹೇಳುತ್ತಾ, ತೋಟವನ್ನಿಡೀ ಸುತ್ತು ಹಾಕಿಕೊಂಡು ಇದ್ದ ಕಾರಣ ಅವತ್ತು ರಾತ್ರಿ ಯಾವತ್ತಿಗಿಂತಲೂ ಮೊದಲೇ ಆಕೆಗೆ ನಿದ್ರೆ ಬಂದಿತ್ತು. ರಾತ್ರಿ ಒಂದು ಗಂಟೆಯೋ, ಎರಡು ಗಂಟೆಯೋ ಆಗಿರಬಹುದು, ದೊಡ್ಡದಾದ ಶಬ್ದ, ಮಾತುಗಳು ಕೇಳಿಸಿದವು. ಅವಳಿಗೆ ಎಚ್ಚರವಾಗಿತ್ತು. ಎದ್ದು ನೋಡಿದರೆ ಆ ದಾಯಾದಿಗಳು. ಅವರಲ್ಲಿ ಒಬ್ಬ ಅವಳ ಮೈಮೇಲೆ ಕೈ ಹಾಕುವುದಕ್ಕೆ ಮುಂದಾದ. ಕೂಡಲೇ ಅಡುಗೆಕೋಣೆಗೆ ಓಡಿದ ದಾಕ್ಷಾಯಿಣಿ ಬರುವ ಮಳೆಗಾಲಕ್ಕೆ ಮಾವಿನ ಮಿಡಿ ಉಪ್ಪಿನಕಾಯಿ ಹಾಕುವುದಕ್ಕೆಂದು ಇಡಲಾಗಿದ್ದ ಮೆಣಸಿನ ಹುಡಿಯನ್ನು ರಾಶಿರಾಶಿಯಾಗಿ ಕೈಗೆ ತೆಗೆದುಕೊಂಡು, ಹಿಂದೆಯಿಂದ ಓಡಿಕೊಂಡು ಬಂದವರ ಕಣ್ಣಿಗೆ ಎರಚಲಾರಂಭಿಸಿದಳು. ಬರುವುದಕ್ಕೆ ಮೊದಲು ತೋಟದಲ್ಲಿ ಕುಳಿತು ಕಂಠಪೂರ್ತಿ ಕುಡಿದುಕೊಂಡು ಬಂದಿದ್ದ ಅವರಿಗೆ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿಯೇ ಐದು ನಿಮಿಷಗಳು ಕಳೆದುಹೋಗಿದ್ದವು. ಒಂದು ದೊಣ್ಣೆಯನ್ನು ಹಿಡಿದುಕೊಂಡು ಸರಿಯಗಿ ಬಾರಿಸಿದ ದಾಕ್ಷಾಯಿಣಿ ಮರುದಿನ ಪೋಲೀಸ್ ಸ್ಟೇಶನ್ನಿಗೆ ಹೋಗಿ ದೂರು ಕೊಟ್ಟಳು. ಅಷ್ಟೂ ಜನರಿಗೆ ಶಿಕ್ಷೆ ಆಯಿತು…… ***
ಹೇಳಿದ ಅಮ್ಮನ ಮುಖದಲ್ಲಿ ಹೆಮ್ಮೆಯ ಭಾವವಿತ್ತು. “ಅಷ್ಟೆಲ್ಲಾ ಆದ ಮೇಲೆ ಆ ದಾಯಾದಿಗಳಿಗೆ ಏನು ಮಾಡಿದರೂ ಪ್ರಯೋಜನ ಇಲ್ಲ ಅಂತ ಗೊತ್ತಾಗಿತ್ತು. ಅವರಿಂದ ಮತ್ತೆ ಏನೂ ತೊಂದರೆ ಆಗಲಿಲ್ಲ” ಎಂದಳು ಅಮ್ಮ. “ಅವರಂತಹ ಸ್ವಾಭಿಮಾನಿ ಯಾರೂ ಇಲ್ಲ. ಒಂದು ಸಮಯದಲ್ಲಿ ಅವರ ತೋಟಕ್ಕೆ ಕೊಳೆರೋಗ ಬಂತು. ತೋಟದಲ್ಲಿ ಫಸಲೇ ಇಲ್ಲ. ಸಾಲ ಮಾಡಲೇಬೇಕು ಎಂಬ ಸ್ಥಿತಿ. ಸಾಲ ಮಾಡಿದರು. ಅದನ್ನು ತೀರಿಸುವುದಕ್ಕೆ ಸಾಧ್ಯವಾಗದ ಅನಿವಾರ್ಯತೆ. ಸಾಲ ಕೊಟ್ಟವರು ಮರುದಿನ ಬರುತ್ತಾರೆ. ಸಾಲ ತೀರಿಸಲೇಬೇಕು. ಗತ್ಯಂತರವಿಲ್ಲ. ಅಂತಹ ಸ್ಥಿತಿಯಲ್ಲಿಯೂ ಹೆದರದ ಅವರು ತಾಳಿಯನ್ನು ಅಡ ಇಟ್ಟು, ಸಾಲ ತೀರಿಸಿ, ಸೀತಾಪುರದ ಮನೆಯ ಗೌರವವನ್ನು ಉಳಿಸಿದ್ದರು” ಇಷ್ಟು ಹೇಳಿ, ಮಾತು ನಿಲ್ಲಿಸಿದ ಅಮ್ಮ ಹೊರಗಿನ ಕತ್ತಲೆಯ ಕಡೆಗೆ ದೃಷ್ಟಿ ಹರಿಸಿದರು.
ಆಗ ಅಪ್ಪ “ಅವರು ನಮಗೆ ಮಾಡಿದ ಉಪಕಾರ ಈ ಜನ್ಮದಲ್ಲಿ ಮರೆಯುವಂತಹದ್ದಲ್ಲ, ತೀರಿಸುವಂಥದ್ದಲ್ಲ” ಎಂದು ಹೇಳಿ, ಹಿಂದೆ ನಡೆದ ಘಟನೆಯನ್ನು ನನ್ನಲ್ಲಿ ಹೇಳತೊಡಗಿದರು- “ಎಂಟು ವರ್ಷಗಳಷ್ಟು ಹಿಂದಿನ ಘಟನೆಯಿದು. ನಾವಾಗ ಭಾರೀ ಕಷ್ಟದಲ್ಲಿದ್ದೆವು. ನಿನ್ನ ಅಕ್ಕನನ್ನು ಡಿಗ್ರಿಗೆ ಸೇರಿಸಬೇಕಿತ್ತು. ಆದರೆ ನನ್ನ ಕೈಯ್ಯಲ್ಲಿ ಹಣವೇ ಇರಲಿಲ್ಲ. ಸರ್ಕಾರದ ಎಡವಟ್ಟಿನಿಂದಾಗಿ ಆರು ತಿಂಗಳುಗಳಿಂದ ನನಗೆ ಸಂಬಳ ಆಗಿರಲಿಲ್ಲ. ನನ್ನ ಅಕೌಂಟ್‌ನಲ್ಲಿ ಇದ್ದ ಹಣದಲ್ಲಿ ನಿಮ್ಮಿಬ್ಬರನ್ನೂ ಓದಿಸುವುದು ಸಾಧ್ಯ ಇರಲಿಲ್ಲ. ಹೇಗಿದ್ದರೂ ನಿನ್ನ ಅಕ್ಕ ಹೆಣ್ಣು. ಮದುವೆ ಆಗಿ ಹೋಗುವವಳು. ಅವಳು ಓದಿದ್ದು ಸಾಕು. ಸ್ವಲ್ಪ ವರ್ಷ ಬಿಟ್ಟು ಅವಳನ್ನು ಮದುವೆ ಮಾಡಿಕೊಡುವುದು. ಇರುವ ಹಣದಲ್ಲಿ ನಿನ್ನನ್ನು ಓದಿಸುವುದು ಅಂತ ನಿರ್ಧಾರ ಮಾಡಿ ಆಗಿತ್ತು. ಹೀಗೆ ನಿರ್ಧಾರ ಮಾಡಿದ ದಿವಸವೇ ಸೀತಾಪುರದ ಅಜ್ಜಿ ಯಾವತ್ತಿನ ಹಾಗೆ ಫೋನ್ ಮಾಡಿದ್ದರು. ನಿನ್ನ ಅಮ್ಮ ವಿಷಯ ಹೇಳಿದ ತಕ್ಷಣ ನಿನ್ನ ಅಕ್ಕನ ಓದಿಗೆ ಬೇಕಾಗುವಷ್ಟು ಹಣ ಕೊಡುತ್ತೇನೆಂದರು. ಮರುದಿನವೇ ಅವರ ಮನೆಯ ಕೆಲಸದವನಲ್ಲಿ ಹಣ ಕಳಿಸಿಕೊಟ್ಟರು. ಯಾವ ಕಾರಣಕ್ಕೂ ಅವಳ ವಿದ್ಯಾಭ್ಯಾಸ ನಿಂತುಹೋಗಬಾರದೆಂದು ತಿಳಿಸಿದ್ದರು. ಹಣ ಅವರು ಕೊಟ್ಟದ್ದು ಅಂತ ಯಾರಿಗೂ ತಿಳಿಸಬಾರದೆಂದು ಭಾಷೆ ತೆಗೆದುಕೊಂಡಿದ್ದರು” ಹೇಳಿ ಮುಗಿಸಿದ ಅಪ್ಪನ ಮುಖದಲ್ಲಿ ಅತೀವ ದುಃಖವಿತ್ತು. ಆ ಬಗೆಯ ದುಃಖವನ್ನು ನಾನು ಅವರ ಮುಖದಲ್ಲಿ ಯಾವತ್ತೂ ಕಂಡಿರಲಿಲ್ಲ.
“ಅಲ್ಲ, ಅಜ್ಜಿ ಅಷ್ಟು ಒಳ್ಳೆಯವರಾಗಿದ್ದರೂ ಒಬ್ಬ ಮನುಷ್ಯನೂ ಅವರನ್ನು ಹೊಗಳುವುದಿಲ್ಲವಲ್ಲ. ಅವರ ಹೆಣಕ್ಕೆ ಹೆಗಲು ಕೊಡುವುದಕ್ಕೆ ನಾಲ್ಕು ಜನ ಸರಿಗಟ್ಟಿನಲ್ಲಿ ಮುಂದೆ ಬರಲಿಲ್ಲವಲ್ಲ. ಯಾಕೆ?” ನಾನು ಕೇಳಿದೆ. “ಅವರ ಬುದ್ಧಿ ಸರಿ ಇಲ್ಲ, ಕೆಲಸದವನ ಜೊತೆಗೆ ಸಂಬಂಧ ಇದೆ, ಆ ಸಂಬಂಧ ಗೊತ್ತಾದ ಕಾರಣಕ್ಕೇ ನಮ್ಮ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟದ್ದು ಎಂದೆಲ್ಲಾ ಆ ದಾಯಾದಿಗಳು ಸುದ್ದಿ ಮಾಡಿದ್ದರು. ಊರಿನವರು ಅದನ್ನು ನಂಬಿದ್ದರು. ಒಬ್ಬಳು ಹೆಣ್ಣುಮಗಳು ಒಬ್ಬಳೇ ಮರ್ಯಾದೆಯಿಂದ ಬದುಕುವುದು ತುಂಬಾ ಕಷ್ಟ” ಅಮ್ಮ ಹೇಳಿದಳು. “ಆ ದಾಯಾದಿಗಳ ಮಾತು ಕೇಳಿ ಸೀತಪುರದ ಅಜ್ಜಿಯನ್ನು ನಡತೆಗೆಟ್ಟವಳು ಅಂತ ಹಿಂದಿನಿಂದ ಆಡಿಕೊಳ್ಳುತ್ತಿದ್ದರಲ್ಲಾ ದೊಡ್ಡ ಮನುಷ್ಯರು, ಅವರೇ ಅದೆಷ್ಟೋ ಸಲ ಅಜ್ಜಿಯಿಂದ ಸಹಾಯ ಪಡೆದದ್ದು ನನಗೆ ಗೊತ್ತಿದೆ. ಹಾಗೆ ಸಹಾಯ ಪಡೆದವರೇ ಇಂದು ಕೆಲವರು ಅವರ ಹೆಣ ಎತ್ತಲು ಬರಲಿಲ್ಲ. ಮನುಷ್ಯನೇ ಹಾಗೆ, ಪಡೆದ ಸಹಾಯ ಮರೆಯುತ್ತಾನೆ. ಆದರೆ ಅವರ ಮನೆಯ ದನ ಅವರಿತ್ತ ಅನ್ನದ ಋಣವನ್ನು ಮರೆತಿಲ್ಲ ನೋಡು” ಅಪ್ಪ ಕೋಪದಿಂದ ಹೇಳಿದರು.
“ಗಂಡ, ಗಂಡನ ಮನೆಯವರು ಎಲ್ಲರೂ ತೀರಿಹೋದ ಮೇಲೂ ಅವರೊಬ್ಬರೇ ಜೀವನ ಮಾಡಿದ್ದು ವಿಶೇಷ. ಅಲ್ವಾ?” ನಾನು ಆಶ್ಚರ್ಯದಿಂದ ಕೇಳಿದೆ. “ಈಗಿನ ಕಾಲದವರು ಸಣ್ಣ ವಿಷಯಕ್ಕೂ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾರೆ. ಅಂಥವರು ಸೀತಾಪುರದ ಅಜ್ಜಿಯನ್ನು ನೋಡಿ ಕಲಿಯಬೇಕು. ಅವರು ಅಷ್ಟು ಕಷ್ಟ ಇದ್ದರೂ ಜೀವ ಉಳಿಸಿಕೊಂಡದ್ದು ತನ್ನ ಗಂಡನ ಮನೆಯ ಮರ್ಯಾದೆಯನ್ನು ಕಾಪಾಡುವುದಕ್ಕೆ” ಹೇಳಿದ ಅಮ್ಮ ಬಾಯಿಗೆ ಕೈಯ್ಯಿಟ್ಟು, ಉಕ್ಕಿಬರುತ್ತಿರುವ ದುಃಖವನ್ನು ತಡೆದುಕೊಳ್ಳಲು ಪ್ರಯತ್ನಿಸಿದಳು. ಆದರೆ ಸಾಧ್ಯವಾಗಲಿಲ್ಲ.
“ಅಪ್ಪ, ಅಷ್ಟು ಒಳ್ಳೆಯವರಾಗಿದ್ದ ಅಜ್ಜಿ ಅಷ್ಟು ಜೋರು ಇದ್ದದ್ದು ಯಾಕೆ ಹಾಗಿದ್ದರೆ?” ನಾನು ಕೇಳಿದೆ.
“ಜೋರು ಎಂಬಂತೆ ಕಾಣುವವರು ನಿಜವಾಗಿಯೂ ಅಷ್ಟು ಜೋರು ಇರುವುದಿಲ್ಲ. ಇವರೂ ಅಷ್ಟೇ. ಎಲ್ಲರಿಗೂ ಬೈಯ್ಯುತ್ತಿದ್ದರು. ಅದು ಸತ್ಯ. ಆದರೆ ಅವರಿಗೆ ಒಳ್ಳೆಯ ಮನುಷ್ಯರಲ್ಲಿ ಅಷ್ಟೇ ಪ್ರೀತಿ ಇತ್ತು. ಅವರು ವರ್ಷಕ್ಕೆ ಅದೆಷ್ಟೋ ಲಕ್ಷ ಹಣವನ್ನು ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಕೊಡುತ್ತಿದ್ದರು. ಅವರು ಬೈಯ್ಯುತ್ತಿದ್ದದ್ದು ಎಲ್ಲರಿಗೂ ಗೊತ್ತಿದೆ. ಆದರೆ ಅವರ ಈ ಒಳ್ಳೆಕಾರ್ಯ ಯಾರಿಗೂ ಗೊತ್ತಿಲ್ಲ. ಅವರು ಅಷ್ಟು ಜೋರಿನವರಂತೆ ತೋರಿಸಿಕೊಳ್ಳದೇ ಇದ್ದಿದ್ದರೆ ಸುತ್ತ ಇದ್ದ ಬಿಕನಾಸಿಗಳೆಲ್ಲಾ ಸೇರಿಕೊಂಡು, ಅವರನ್ನು ಜೀವಂತ ಸಮಾಧಿ ಮಾಡುತ್ತಿದ್ದರು. ಹಾವು ಬುಸುಗುಟ್ಟುತ್ತದೆ ಎಂದರೆ ಅದು ಕಚ್ಚಿ ಸಾಯಿಸುತ್ತದೆ ಎಂದೇ ಅರ್ಥ ಅಲ್ಲ. ಅದರ ರಕ್ಷಣೆಗಾಗಿಯೂ ಇರಬಹುದು. ಅದರ ಅಸ್ತಿತ್ವ, ಬದುಕು ಅದಕ್ಕೆ ಮುಖ್ಯವಾಗಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಹೆಚ್ಚಿನವರಿಗೆ ಇಲ್ಲ” ಅಪ್ಪ ವಿಷಾದದಲ್ಲಿಯೇ ನುಡಿದಿದ್ದರು.
ಅಷ್ಟಾಗುವಾಗ ಕಾರು ನಮ್ಮ ಮನೆಯಂಗಳವನ್ನು ತಲುಪಿತ್ತು. ಬಹಳ ಗಡಿಬಿಡಿಯಲ್ಲಿ ಕಾರಿನ ಬಾಗಿಲು ತೆರೆದ ನಾನು ಸೀತಾಪುರದ ಅಜ್ಜಿಯ ಬದುಕನ್ನು ಅಕ್ಕನಿಗೆ ತಿಳಿಸಬೇಕು ಎಂದುಕೊಳ್ಳುತ್ತಾ ಮನೆಯ ಒಳಗೆ ಪ್ರವೇಶಿಸಿದೆ. ಸ್ತ್ರೀವಾದದ ಕುರಿತು ಪಿಎಚ್. ಡಿ. ಮಾಡುತ್ತಿರುವ ಅಕ್ಕ, ಸೀತಾಪುರದ ಅಜ್ಜಿಯ ಬದುಕಿನಿಂದ ಬಹಳಷ್ಟು ಕಲಿಯುವುದಕ್ಕಿದೆ ಎಂಬ ಭಾವನೆ ನನ್ನದಾಗಿತ್ತು.
ವಿಶ್ವನಾಥ ಎನ್ ನೇರಳಕಟ್ಟೆ
ತುಂಬಾ ಚೆನ್ನಾಗಿದೆ.