ಪ್ರಿಯಸಖಿ, ಎಚ್ಚರತಪ್ಪಿಯ ಜೋಕೆ!

ಲೇಖನ

ಪ್ರಿಯಸಖಿ, ಎಚ್ಚರತಪ್ಪಿಯ ಜೋಕೆ!

ಸುಮಾ ಕಿರಣ್

ಗೆಳತಿ, ಇತ್ತೀಚೆಗೆ ಪ್ರಿಯಾಂಕ ಉಪೇಂದ್ರ ನಟಿಸಿದ ‘ಪ್ರಿಯಾಂಕ’ ಎಂಬ ಸಿನಿಮಾ ನೋಡಿದೆ.  ಸಾಮಾಜಿಕ ಜಾಲತಾಣದ ಅನಾಹುತವನ್ನು ಬಿಂಬಿಸುವ ಚಿತ್ರವದು.  ಚಿತ್ರ ಮನದಿಂದ ಮರೆಯಾಗುವ ಮೊದಲೇ ಒಂದಿಬ್ಬರು ಆತ್ಮೀಯರು ಫೇಸ್ಬುಕ್ನಲ್ಲಿ ನನ್ನ ಅಕೌಂಟ್ ಹ್ಯಾಕ್ ಆಗಿದೆ ಎಂಬ ಸಂದೇಶ ನೀಡಿದರು.  ಅದು ಹೋಗಲಿ ಎಂದುಕೊಳ್ಳುವಾಗ.. ಮತ್ತೊಬ್ಬ ಆತ್ಮೀಯರು ‘ಮೆಸೆಂಜರ್ ನಲ್ಲಿ ಕೆಲವು ಅಹಿತಕರ ಸಂದೇಶ ಬರುತ್ತದೆ,  ಏನೇ ಮಾಡುವುದು?’ ಎಂದರು. ನಾನು ಈ ಫೇಸ್ ಬುಕ್ ನ ಬಳಕೆ ಮಾಡುವುದು ಅತಿ ಕಡಿಮೆ.   ಕೇವಲ ಸಾಹಿತ್ಯ ಸಂಬಂಧಿ, ಕವನ ಯಾ ಲೇಖನಗಳನ್ನು ಕೆಲ ಸಮೂಹಗಳಿಗೆ ಹಂಚಿಕೊಳ್ಳಲು/ಬೇರೆಯವರ ಸಾಹಿತ್ಯ ಓದಲು ಮಾತ್ರ ಕೆಲ ಸಮಯ ಬಳಸುವೆ.  ಜೊತೆಗೆ ಆ ಮೆಸೆಂಜರ್ ಸಹವಾಸಕ್ಕೆ ಎಂದೋ ಕೈ ಮುಗಿದಿದ್ದೆ. ಅದನ್ನೇ ಅವರಿಗೂ ಹೇಳಿ ಸುಮ್ಮನಾದೆ.

ಅದಾದ ಮೇಲೆ ಕೆಲವು ದಿನ ಈ ಫೇಸ್ಬುಕ್  ಕಡೆಗೆ ತಲೆ ಹಾಕದಿದ್ದರೂ… ಮೊನ್ನೆ ಹಾಗೆ ಹೋದಾಗ ಹಲವು ಬಗೆಯ ಚಾಲೆಂಜ್ಗಳು ಕಣ್ಣಿಗೆ ಕಂಡವು. ಸಿಂಗಲ್ ಚಾಲೆಂಜ್,  ಸ್ಮೈಲ್ ಚಾಲೆಂಜ್,  ಕಪಲ್ಸ್ ಚಾಲೆಂಜ್, ಟ್ರೆಡಿಶನಲ್ ಚಾಲೆಂಜ್, ಸ್ಯಾರಿ ಚಾಲೆಂಜ್ ಇತ್ಯಾದಿ.. ಇತ್ಯಾದಿ. ಅಬ್ಬಬ್ಬಾ! ಈ ನಾರಿಮಣಿಗಳು ಎಲ್ಲಾ ಚಾಲೆಂಜ್ ಗಳಲ್ಲಿ ನಾಮುಂದು.. ತಾಮುಂದು.. ಅಂತ ಭಾಗವಹಿಸಿದ್ದು ಕಂಡಾಗ, ಅಯ್ಯೋ! ಎನ್ನಿಸಿತು. ಯಾಕೋ ‘ಯಾರೋ ತೋಡಿದ ಖೆಡ್ಡಾಗೆ ತಾನಾಗಿ ಹೋಗಿ ಮಿಕವಾಗಿ  ಬೀಳುತ್ತಿದ್ದಾರೆ’ ಎಂಬ ಖೇದವಾಯಿತು. ಅದಕ್ಕೆಂದೇ ಈ ಬಗ್ಗೆ ಸ್ವಲ್ಪ ಮಾಹಿತಿ ಕಲೆ ಹಾಕುವ ಕೆಲಸಕ್ಕೆ ತೊಡಗಿದೆ.

ಹಾಗೆ ಮಾಹಿತಿ ಕಲೆ ಹಾಕುತ್ತಿರುವಾಗ… ವಿಶ್ವಸಂಸ್ಥೆ ಹಾಗೂ ಡಿ ಎನ್ ಎ ಅನಾಲಿಸಿಸ್ ನಡೆಸಿದ ಸಮೀಕ್ಷೆಯೊಂದನ್ನು ಪತ್ರಿಕೆಯಲ್ಲಿ ಓದಿದೆ.  ಅವರ ಪ್ರಕಾರ, ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಈ ರೀತಿಯ ಚಾಲೆಂಜ್ ಮತ್ತು ಫೋಟೋ ಸ್ಪರ್ಧೆಗಳಿಗೆ ಮಹಿಳಾಮಣಿಗಳು ಅತೀ ಬೇಗ ಆಕರ್ಷಿತರಾಗುತ್ತಾರೆ!  ಆದರೆ, ಹಾಗೆ ಆಕರ್ಷಿತರಾಗಿ ಫೋಟೋ ಅಪ್ಲೋಡ್ ಮಾಡುವ ಮೊದಲು ನೂರು ಬಾರಿ ಯೋಚಿಸಿ…  ಎಂಬ ಎಚ್ಚರಿಕೆ ಸಂದೇಶ ಕೂಡ ಈ ಸಂಸ್ಥೆಗಳು ನೀಡಿದೆ.

ಅಷ್ಟೆ ಅಲ್ಲ ಸಖಿ! ತೀರ ವೈಯಕ್ತಿಕ ಭಾವನೆಗಳನ್ನ ಫೀಲಿಂಗ್ ಬ್ಯಾಡ್,  ಫೀಲಿಂಗ್ ಲೋನ್ಲಿ, ಫೀಲಿಂಗ್ ಸಾಡ್ ಇಂತಹದ್ದನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದನ್ನೂ ನಿಲ್ಲಿಸಬೇಕು ಎಂಬ ಎಚ್ಚರಿಕೆ ನೀಡಿದೆ ಈ ವರದಿ.  ಏಕೆಂದರೆ,  ಇಂತಹ ಮಹಿಳೆಯರ ಮೇಲೆ ಕಣ್ಣಿಡುವ ದೊಡ್ಡ ಜಾಲವೇ ಇದೆಯಂತೆ.  ಅವರ ಭಾವನೆಗಳನ್ನು ತಿಳಿದು ದೌರ್ಜನ್ಯ ಎಸಗುವುದು ಬೆಳಕಿಗೆ ಬಂದಿದೆ… ಎನ್ನುತ್ತದೆ ಈ ಸಮೀಕ್ಷೆ.  ಜಾಗತಿಕವಾಗಿ ಶೇ. 30ರಷ್ಟು ಮಹಿಳೆಯರು ವಿವಿಧ ತೆರನಾದ ಸೈಬರ್ ದೌರ್ಜನ್ಯಕ್ಕೆ  ಒಳಗಾಗಿದ್ದಾರೆ.  ಅದರಲ್ಲಿ ಶೇ. 60ರಷ್ಟು ಮಹಿಳೆಯರಿಗೆ ಈ ಸಾಮಾಜಿಕ ಜಾಲತಾಣಗಳೇ ಹಿಂಸೆಯ ಮೂಲವಾಗಿದೆ ಎನ್ನುತ್ತದೆ ಸಮೀಕ್ಷೆ. ಜೊತೆಗೆ ಈ ಕಾರಣದಿಂದಾಗಿಯೇ ಶೇ. 20ರಷ್ಟು ಮಹಿಳೆಯರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ…  ಎನ್ನುತ್ತದೆ ಕೂಡ ಈ ವರದಿ.

ಅಬ್ಬಬ್ಬಾ!  ನೀನು ನನ್ನಂತೆ ಇದನ್ನೆಲ್ಲಾ ಓದಿ ಹೆದರಿದೆಯಾ?  ಖಂಡಿತ ಹೆದರುವ ಅಗತ್ಯವಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿದ್ದು, ಪ್ರತಿಯೊಂದನ್ನು ಹೃದಯದಿಂದ ಯೋಚಿಸದೆ ಬುದ್ಧಿಯಿಂದ ಯೋಚಿಸಿ ಕೆಲಸ ಮಾಡಿದರೆ… ಈ ರೀತಿಯ ತೊಂದರೆಯಿಂದ ಮುಕ್ತರಾಗಬಹುದು.  ಏನು ಮಾಡಬೇಕು ಎಂಬುದು ನಿನಗೆ ತಿಳಿದಿದೆ ಗೆಳತಿ.  ಆದರೂ  ನಿನಗೆ ತಿಳಿದ ವಿಷಯಗಳನ್ನೇ ನಾನು ನೆನಪಿಸುವೆ .

ಪ್ರಿಯಸಖಿ,  ಮೊದಲು ಮಾಡಬೇಕಾದದ್ದು ಇದ್ದಬದ್ದ ಸಾಮಾಜಿಕ ಜಾಲತಾಣಗಳಲ್ಲಿ ಮೂಗುತೂರಿಸುವುದನ್ನು ಬಿಟ್ಟು.. ಒಂದೆರಡು ಜಾಲತಾಣಗಳಲ್ಲಿ ಮಾತ್ರ ಸಕ್ರಿಯವಾಗಿರುವುದು. ಅದರಲ್ಲೂ ಈ ಫೇಸ್ಬುಕ್ಕನ್ನು ಆದಷ್ಟು ಲಾಕ್ ಮಾಡಿ ಸ್ನೇಹಿತರಿಗೆ ಮಾತ್ರ ಸೀಮಿತಗೊಳಿಸಿಕೊಳ್ಳುವುದು. ನನಗೆ ಸಾವಿರಾರು ಸ್ನೇಹಿತರು/ಫಾಲೋಯರ್ಸ್ ಇದ್ದಾರೆ..‌. ಅನ್ನುವುದಕ್ಕಿಂತ, ನಮ್ಮ ನಿಜವಾದ ಗೆಳೆಯರು ಯಾರು? ಎನ್ನುವುದನ್ನು ಗುರುತಿಸಿ, ಗೆಳೆಯರ ಪಟ್ಟಿಯನ್ನು ಕೇವಲ ಕೆಲವೇ ಕೆಲವು ನೂರುಗಳಿಗೆ ಮೊಟಕುಗೊಳಿಸಿ‌ದರಾಯಿತು.   ನಮ್ಮ ಫೇಸ್ಬುಕ್ ಸಾರ್ವಜನಿಕ ಉದ್ಯಾನವನದಂತಾಗದೆ ಕೇವಲ ನಮ್ಮ ಮನೆಯ ಮುಂದಿನ ಕೈತೋಟದಂತಿದ್ದರೆ ಸಾಕು ಅಲ್ಲವೇ?

ಇನ್ನು ಮೆಸೆಂಜರ್ (ಇತ್ತೀಚೆಗೆ ಇದನ್ನು ಫೇಸ್ ಬುಕ್ ಚಾಟ್ ಎಂದು ಹೆಸರಿಸಲಾಗಿದೆ) ಕಿರಿಕಿರಿ ಅನಿಸಿದರೆ.. ಅಂತಹ ಕಿರಿಕಿರಿಗೆ ನಮ್ಮ ಮನಸ್ಸಿನಲ್ಲಿ ಜಾಗ ನೀಡಿ ಯಾಕೆ ಮನಸ್ಸಿನ ಸ್ವಾಸ್ಥ್ಯ ಹಾಳು ಮಾಡಿಕೊಳ್ಳಬೇಕು? ಹಾಗಾಗಿ ಅದನ್ನು ಮನಸ್ಸಿನ ಜೊತೆ-ಜೊತೆಗೆ ಮೊಬೈಲ್ ನಿಂದನು ಡಿಲೀಟ್ ಮಾಡಿ ಬಿಸಾಕಿದರೆ ಆಯ್ತಪ್ಪ.  ಆಗ ನಮ್ಮ ಮನಸ್ಸೂ ಪ್ರಶಾಂತವಾಗಿ  ನೆಮ್ಮದಿಯಾಗಿರುತ್ತದೆ.

ಗೆಳತಿ, ನಾವೆಷ್ಟೇ ಮುಂದುವರೆದಿದ್ದರೂ ಹೆಣ್ಣುಮಕ್ಕಳು ಎಂಬುದನ್ನು ಮೊದಲು ನೆನಪಿಡಬೇಕು. ಹಾಗಾಗಿ ಫೇಸ್ಬುಕ್ ನಂತಹ ಜಾಲತಾಣಗಳಲ್ಲಿ ತಡರಾತ್ರಿಯವರೆಗೆ ಸಂಚಾರ ನಡೆಸುವುದು ಅಪಾಯಕಾರಿ. ಹೇಗೆ ಅಪರಾತ್ರಿ  ರಸ್ತೆಗಳಲ್ಲಿ ಒಂಟಿ ಹೆಣ್ಣು ಮಗಳು ಸಂಚರಿಸುವುದು ಅಪಾಯಕಾರಿಯೋ… ಅದಕ್ಕಿಂತಲೂ ನೂರುಪಟ್ಟು ಇಂತಹ ಸಾಮಾಜಿಕ ಜಾಲತಾಣಗಳಲ್ಲಿ ತಡರಾತ್ರಿಯ ತನಕ ಸುತ್ತಾಡುವುದು ಕೂಡ ಅಪಾಯಕಾರಿ.  ಹಾಗಾಗಿ ಆದಷ್ಟು ರಾತ್ರಿಯೊಳಗೆ (ಉದಾ: ರಾತ್ರಿ ೯ರ ನಂತರ) ಫೇಸ್ಬುಕ್ ನಂತಹ ಜಾಲತಾಣಗಳಿಂದ ಹೊರ ಬರುವುದು ಕ್ಷೇಮ. ನೆನಪಿರಲಿ… ರಾತ್ರಿ ೯ ರ ನಂತರ ಕುಡಿತ ಮತ್ತು ಕಂಠಮಟ್ಟ ಭೋಜನ ಉಂಡ ಕೆಲವು ಮೃಗೀಯ ವ್ಯಕ್ತಿತ್ವದ ಮನಸುಗಳು (ಕ್ಷಮೆ ಇರಲಿ, ಎಲ್ಲ ಫೇಸ್ ಬುಕ್ ಬಳಕೆದಾರರಲ್ಲ) ಇಂತಹ ತಡ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಉಳಿಯುವ ಸ್ತ್ರೀಯರ ತಲಾಶಿಯಲ್ಲಿ ಇರುತ್ತವೆ..

ಇನ್ನು ಅಪರಿಚಿತರನ್ನು ಯಾವುದೇ ಕಾರಣಕ್ಕೂ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಡ.  ಅವರ ಪರಿಚಯ ಚೆನ್ನಾಗಿ ನಿನಗಿದ್ದರೆ ಮಾತ್ರ ಸ್ನೇಹಹಸ್ತ ಚಾಚು. ಮೆಸೆಂಜರ್ ಯಾ ಫ್ರೆಂಡ್ ರಿಕ್ವೆಸ್ಟ್  ಮೂಲಕ ಅಪರಿಚಿತರು ನಿನಗೆ ಸಂದೇಶ ಕಳಿಸುವ ಆಯ್ಕೆಯನ್ನು ತಿರಸ್ಕರಿಸು.  ನನ್ನ  ಊರಿನವರು,  ಸ್ನೇಹಿತರ ಸ್ನೇಹಿತ ಇತ್ಯಾದಿ… ಯಾವ ಸೆಂಟಿಮೆಂಟ್ ನ ಅಗತ್ಯವಿಲ್ಲ. ತೀರ ಪರಿಚಯದವರಿಗೆ ಮಾತ್ರವಿರಲಿ ನಿನ್ನ ಸ್ನೇಹಹಸ್ತ. ಒಂದು ವೇಳೆ ಯಾರಾದರೂ ಅಪರಿಚಿತರ ಸ್ನೇಹ ಮಾಡುವಾಗಲೂ ಅವರು ನಿನ್ನ ಯಾವ ಸ್ನೇಹಿತರ ‘ಮಿತ್ರ’ ಎಂಬುದನ್ನು ತಿಳಿದು,  ಆ ಸ್ನೇಹಿತನಿಂದ ಇವರ ಬಗ್ಗೆ ಸಾಕ್ಕಷ್ಟು ಮಾಹಿತಿ ಕೇಳಿ ತಿಳಿದುಕೊಂಡ ನಂತರವೇ ಸ್ನೇಹಹಸ್ತ ಚಾಚು.  ಇದರಿಂದ ನಿನ್ನ ಮರ್ಯಾದೆಗೆ ಏನು ಕುಂದು ಬರುವುದಿಲ್ಲ.  ಬದಲಾಗಿ ನಿನ್ನ ಸುರಕ್ಷತೆಯೇ ಹೆಚ್ಚುತ್ತದೆ.

ಹಾಗೆಯೇ ಕೊನೆಯ ಮಾತು…  ಗೆಳತಿ, ಸಾಮಾಜಿಕ ಜಾಲತಾಣಗಳಲ್ಲಿ ಭಾವನೆ ಹಂಚಿಕೊಳ್ಳುವಾಗ ಮತ್ತು  ಫೋಟೋ ಹಾಕುವಾಗ ನೂರಲ್ಲ ಸಾವಿರ ಬಾರಿ ಯೋಚನೆ ಮಾಡು.  ತೀರ ಪ್ರಚೋದನಕಾರಿ ಫೋಟೋಗಳನ್ನು ಹಾಕುವುದು ಮೈಮೇಲೆ ಅಪಾಯಗಳನ್ನು ಎಳೆದುಕೊಂಡಂತೆಯೇ.  ಇದಕ್ಕಿಂತಲೂ ಅಪಾಯಕಾರಿ,  ಒಂಟಿತನದ ಯಾ ನೋವಿನ ಭಾವನೆಗಳನ್ನು ಸಾಮಾಜಿಕ ಜಾಲತಾಣದ ಗೋಡೆಯಲ್ಲಿ ಅಂಟಿಸುವುದು.  ಸಾಂತ್ವನದ ನೆಪದಲ್ಲಿ ಗೋಮುಖ ವ್ಯಾಘ್ರರೇ ನಿನ್ನ ಬಳಿ ಬಂದಿರುವುದು ಎಂಬ ಅರಿವಾಗುವ ಮುನ್ನವೇ ನೀನವರ ಜಾಲದಲ್ಲಿ ಬಿದ್ದಿರುತ್ತಿಯ.

ಪ್ರೀಯಸಖಿ, ಸಾಮಾಜಿಕ ಜಾಲತಾಣಗಳು ಕೇವಲ ನಮ್ಮ ಮನರಂಜನೆಯ ಭಾಗವಾಗಬೇಕೇ ಹೊರತು, ನಾವದರ ದಾಸರಾಗಿ ಬದುಕನ್ನು ಕಳೆದುಕೊಳ್ಳಬಾರದು.  ನಾವು ಹಾಕುವ ಫೋಟೋ ಮತ್ತು ಬರಹಗಳು ನಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂಬ ಎಚ್ಚರ ಸದಾ-ಸರ್ವದಾ  ನಮಗಿರಬೇಕು.  ನಮ್ಮ ವೈಯಕ್ತಿಕ ಬದುಕನ್ನು ಎಲ್ಲರೆದುರು ಬೆತ್ತಲೆಗೊಳಿಸುವ ಹಪಹಪಿತನಕ್ಕೆ ಬಿದ್ದು…  ನಮ್ಮನ್ನು ನಾವು ಎಲ್ಲರೆದುರು ಬಟಾಬಯಲಾಗಿಸುವ ಮೂರ್ಖತನವನ್ನು ಇನ್ನಾದರೂ ನಿಲ್ಲಿಸೋಣವೇ?

——————————–

      ಸುಮಾ ಕಿರಣ್

3 thoughts on “ಪ್ರಿಯಸಖಿ, ಎಚ್ಚರತಪ್ಪಿಯ ಜೋಕೆ!

  1. ಧನ್ಯವಾದಗಳು ಸಂಗಾತಿಯ ಸಂಪಾದಕರಿಗೆ ಬಹಳ ಸುಂದವಾಗಿ ನನ್ನ ಲೇಖನ ಪ್ರಕಟಿಸಿದ್ದಕ್ಕಾಗಿ ವಂದನೆಗಳು

  2. ಹೆಂಗಳೆಯರಿಗೆ ಸಕಾಲಿಕ ಮತ್ತು ಮಧುರ ಎಚ್ಚರಿಕೆ! ಉತ್ತಮ ಬರಹ.

Leave a Reply

Back To Top