ಅಂಕಣ ಸಂಗಾತಿ
ನೆನಪಿನದೋಣಿಯಲಿ
ಅಜ್ಜಿ ಮನೆಯಲ್ಲಿ ರಜೆಯ ಮಜಾ
ನಮ್ಮಜ್ಜಿ ಅಂದರೆ ಅಮ್ಮನ ಅಮ್ಮನ ಮನೆ ಚಿಂತಾಮಣಿ. ಬೇಸಿಗೆ ರಜೆಗೆ ಅಲ್ಲಿಗೆ ಕಡ್ಡಾಯ ಭೇಟಿ ಇದ್ದೇ ಇರುತ್ತಿತ್ತು. ವಾರದ ಮುಂಚಿನಿಂದ ಹೊರಡುವ ತಯಾರಿ ಕಾತುರ. ಇಂಥ ದಿನ ಹೊರಡ್ತೀವಿ ಅಂತ ಪತ್ರ ಬರೆದು ಹಾಕಿ ಹೊರಟರೆ ಆಮೇಲೆ ಬೇರೆಯದೇ ಲೋಕ. ಅಮ್ಮನಿಗೆ ಇಬ್ಬರು ಅಕ್ಕ ಇಬ್ಬರು ತಂಗಿ ಒಬ್ಬ ಅಣ್ಣಾ ಮತ್ತು ಒಬ್ಬ ತಮ್ಮ. ಒಂದು ಇಪ್ಪತ್ತೈದು ಜನ ಮೊಮ್ಮಕ್ಕಳು .ಆಹಾ! ಎಂಥ ಸುಂದರ ದಿನಗಳವು .ಒಂದೆರಡು ದಿನಗಳ ಅಂತರದಲ್ಲಿ ಎಲ್ಲ ಅಲ್ಲಿ ಸೇರುತ್ತಿದ್ದೆವು .ಅಜ್ಜಿ ಮನೆಯಲ್ಲಿ ಒಂದು ಭಾವಿ ಇತ್ತು ಅದರಲ್ಲಿ ನೀರು ಸೇದುವುದೇ ಒಂದು ಆಟ. ಸರತಿಯಲ್ಲಿ ಸ್ನಾನ ತಲೆ ಬಾಚಿಸಿಕೊಳ್ಳುವುದು. ದೊಡ್ಡಮ್ಮನ ಚಿಕ್ಕಮ್ಮನ ಯಾರ ಕೈ ಬಿಡುವಿರುತ್ತೆ ಅವರಿಗೆ ನಮ್ಮ ನಿಗಾ ವಹಿಸುವ ಕೆಲಸ .ಕಾಫಿ ಬೆರೆಸಲೆಂದೇ ಅಡುಗೆ ಮನೆಯ ಮೂಲೆಯಲ್ಲಿದ್ದ ಪಂಪ್ ಸ್ಟೌವ್. ದಿನವೂ ಬಗೆ ಬಗೆಯ ತಿಂಡಿ ಊಟ ಬಲವಂತದಿಂದ ಪ್ರೀತಿಯಿಂದ ಬಡಿಸುತ್ತಿದ್ದ ಅಜ್ಜಿ ಅಮ್ಮಂದಿರು ಹೊರಗಿನಿಂದ ಬಂದವರಿಗಿಂತೂ ಯಾರು ಯಾರ ಮಕ್ಕಳು ಎಂದು ಗೊತ್ತಾಗುತ್ತಲೇ ಇರಲಿಲ್ಲ.
ಆಟವಾಡಲು ವೇಳಾಪಟ್ಟಿ ಮಾಡಿಕೊಂಡಿರುತ್ತಿದ್ದೆವು. ಅಕ್ಕಪಕ್ಕದ ಮಕ್ಕಳು ಸೇರಿ ಬಿಟ್ಟರಂತೂ ವಾನರ ಪಾಳ್ಯವೇ. ಕುಂಟೆಬಿಲ್ಲೆ ಲಗೋರಿ ಚಾರ್ ಪತ್ತಾರ್ ಇವೆಲ್ಲಾ ಬೆಳಗ್ಗೆ ಹನ್ನೊಂದು ರವರೆಗೆ ಅಷ್ಟೆ. ಆಮೇಲೆ ಮನೆಯೊಳಗೆ ಕುಳಿತು ಕಳ್ಳ ಪೊಲೀಸ್, ಚೌಕಾಬಾರ, ಅಳಗುಳಿ ಮನೆ ,ಪಗಡೆ, ಕೈಮೇಲೆ ಕವಡೆ, ಕಲ್ಲಾಟ ಬಳೆ ಚೂರಾಟ ಇವೆಲ್ಲಾ ಸರದಿಯ ಪ್ರಕಾರ .ಜಗಳವಾಡದಂತೆ ಶಿಸ್ತಿನಿಂದ ಆಡಲು ನಮ್ಮ ಚಿಕ್ಕಮ್ಮಂದಿರು (ಇಬ್ಬರೂ ಉಪಾಧ್ಯಾಯಿನಿಯರು) ಪ್ಯಾನೆಲ್ ಬೇರೆ ಮಾಡಿಡುತ್ತಿದ್ದರು .ಆಮೇಲೆ ಅಕ್ಷರಗಳನ್ನು ಆರಿಸಿ ಅದರಿಂದ ಶುರುವಾಗುವ ಗಂಡಸರ ಹೆಂಗಸರ ಹೆಸರುಗಳು ಊರಿನ ಹೆಸರು ಹಣ್ಣಿನ ಹೂವಿನ ಹೆಸರು ಮತ್ತು ಸಿನಿಮಾ ಹೆಸರು ಬರೀಬೇಕು .ಒಬ್ಬರು ಬರೆದದ್ದನ್ನೇ ಬರೆದರೆ ಅಂಕ ಕಡಿತ .ಹೀಗೆ ಒಳಾಂಗಣ ಆಟಗಳು. ಸಂಜೆಯಾದರೆ ಬಳಿಯಲ್ಲೇ ಇದ್ದ ಪಾರ್ಕಿಗೆ. ಅಲ್ಲಿ ಆಡಿ ಬಂದು ಕೈಕಾಲು ತೊಳೆದರೆ ತಾತ ಶಿಸ್ತಿನಿಂದ ಪ್ರತಿಯೊಬ್ಬರ ಕೈಲೂ ಶ್ಲೋಕ ಅಥವಾ ದೇವರ ನಾಮ ಹೇಳಿಸುತ್ತಿದ್ದರು. ಅದು ಪುನರುಕ್ತಿ ಆಗಬಾರದು ಎಂದು ಹೊಸ ಹೊಸದು ಕಲಿಯುವ ಉಮೇದು ಬೇರೆ.
ಅಜ್ಜಿ ಮನೆ ಎಂದರೆ ಕೈತುತ್ತು ಮರೆಯಲಾದೀತೆ? ರಾತ್ರಿ ಊಟವಂತೂ ದಿನ ಕೈತುತ್ತು ತಾರಸಿಯ ಮೇಲೆ .ಸಂಜೆ ನೀರು ಹಾಕಿ ತೊಳೆದು ತಣ್ಣಗಿರುತ್ತಿದ್ದ ಜಾಗ .ಕೆಳಗಿನಿಂದ ದೊಡ್ಡ ಡಬ್ಬಿಯಲ್ಲಿ ತಂದು ಅತ್ತೆ ಅಮ್ಮ ದೊಡ್ಡಮ್ಮ ಚಿಕ್ಕಮ್ಮ ಯಾರಾದರೂ ಸರಿಯೇ ಸುತ್ತ ಕೂರಿಸಿ ಕೈತುತ್ತು ಹಾಕುತ್ತಿದ್ದರೆ ಅದೆಷ್ಟು ತಿನ್ನುತ್ತಿದ್ದೆವು ಲೆಕ್ಕವೇ ಇಲ್ಲ .ಚಾಪೆ ಜಮಖಾನ ಹಾಸಿ ಬಟ್ಟೆಗಳನ್ನು ಟವಲ್ನಲ್ಲಿ ಸುತ್ತಿ ತಲೆದಿಂಬು ಮಾಡಿಕೊಂಡು ಆಕಾಶ ನಕ್ಷತ್ರ ನೋಡುತ್ತಾ ಮಲಗುತ್ತಿದ್ದೆವು. ಆ ದಿನಗಳು ಮರಳಿ ಬರಬಾರದೇ*
ಒಂದು ಬಾರಿ ಚಿಂತಾಮಣಿ ಬೆಟ್ಟ ಮತ್ತೊಂದು ಬಾರಿ ಕೈವಾರ ಬೆಟ್ಟ ಭೇಟಿ ಇದ್ದೇ ಇರುತ್ತಿತ್ತು. ತಿಂಗಳು ಮುಗಿದಿದ್ದೇ ಗೊತ್ತಾಗುತ್ತಿರಲಿಲ್ಲ. ಕಸಿನ್ ಗಳಿಂದ ಹೊಸ ವಿಷಯ ಕಲಿತು ಬೇರೆ ಬೇರೆ ಕಲೆಗಳ ವಿನಿಮಯ. ಒಟ್ಟಿನಲ್ಲಿ ಸರ್ವಾಂಗೀಣ ಮನರಂಜನೆಯ ಜತೆಗೆ ಜ್ಞಾನಾರ್ಜನೆಯೂ ಇತ್ತು. .ತಾತನ ಸಂಗ್ರಹಾಲಯದ ಪುಸ್ತಕಗಳನ್ನು ಓದಲು ಕೊಡುತ್ತಿದ್ದರು .ವಾಚನಾಲಯಕ್ಕೆ ಭೇಟಿ. ಮತ್ತೆ ನಾನು ಕಥೆ ಹೇಳುವ ಪರಿ ಎಲ್ಲರಿಗೂ ಇಷ್ಟ ಅದರಲ್ಲೂ ಮಾಟಗಾತಿಯ ಕಥೆಗಳು ಎಲ್ಲರೂ ಇಷ್ಟಪಟ್ಟು ಕೇಳುತ್ತಿದ್ದರು .
ಅಂದಿನ ಅಜ್ಜಿ ಮನೆಗಳಿಂದ ನಾವು ಸಹಕಾರ ಹಂಚಿ ತಿನ್ನುವ ಬುದ್ಧಿ ಸಹಿಷ್ಣುತೆ ನಿಸ್ವಾರ್ಥಗಳನ್ನು ಕಲಿತಿದ್ದೇವೆ. ಇಂದಿನ ವ್ಯಕ್ತಿತ್ವ ವಿಕಸನದ ಪಠ್ಯಗಳನ್ನು ಕಂಡಾಗಲೆಲ್ಲ ನನಗೆ ಇದೆಲ್ಲಾ ಅಜ್ಜಿಮನೆಯ ವಾಸದಲ್ಲೇ ಅರಿತಿದ್ದೇವೆ ಅನ್ನಿಸುತ್ತದೆ. ಸಂಘ ಜೀವಿಯಾಗಿ ಸಮಾಜದಲ್ಲಿ ನೆಲೆಗೊಳ್ಳಲು ಇವೆಲ್ಲ ಅತ್ಯವಶ್ಯ ಅಲ್ಲವೇ? ಆದರೆ
ಇಂದಿನ ತಲೆಮಾರು ಇವೆಲ್ಲವುಗಳಿಂದ ವಂಚಿತರಾಗುತ್ತಿದ್ದಾರೆ ಎನ್ನುವುದೇ ವಿಷಾದದ ಸಂಗತಿ .
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು