ಅಂಕಣ ಸಂಗಾತಿ

ಸಕಾಲ

ನಹಿ ಜ್ಞಾನೇನ ಸದೃಶಂ…..

ಒಂದು ಬೀಜ ಫಲವತ್ತಾದ ಮಣ್ಣೊಳಗೆ ಹುದುಗಿ, ಹದವರಿತು ನಿಧಾನವಾಗಿ ಟಿಸಿಲೊಡೆದು ಜಗಕೊಂದು ಸಂದೇಶ ನೀಡುವ ಪರಿ ಅನನ್ಯವಾದುದು.ಅದರ ಸಮಷ್ಟಿಯು ಜ್ಞಾನವ ಅರಸುವವಗೆ ಪುಟ್ಟ ಹಣತೆಯಂತೆ.ಅದಕೆ ಹಿರಿಯರು ಗುರುಕುಲ ಪದ್ದತಿ ಜಾರಿಗೆ ತಂದಿದ್ದರು.ಎಲ್ಲರ ಮಸ್ತಕಗಳು ಜ್ಞಾನ ಆಗರವಾಗಲೆಂಬ ದಿಟ್ಟ ಹೆಜ್ಜೆ. ಸಮಯ ಉರುಳಿದಂತೆ ಕಲಿಕೆಯ ಕ್ರಮಗಳು ಬದಲಾಗಿವೆ.ಶಿಕ್ಷಣದ ಮಹತ್ವ ಜಾಗೃತಿ ಮೂಡಿದಂತೆಲ್ಲ ಅದೊಂದು ಸುಗ್ಗಿಕಾಲ ಬಂದಂತೆ.ಬಡವ ಬಲ್ಲಿದನೆಂಬ ಭೇದಭಾವಿಲ್ಲ.

ಬಳಪದ ಅಂಚು ಕರಿಕಲ್ಲು ಬಿಳಿ ದಂಡೆಯ ಹೊದ್ದು ತೋಳಗಲ ಹಿಡಿದು ಬರೆವಾಗ ಅದೆಂತಹ ಆನಂದ.’ಅ’ ಬರೆಯಲು ತವಕಿಸುವ ಕೈಬೆರಳುಗಳ ನರ್ತನ ಪಾಟಿಯುದ್ದಕ್ಕೂ ಗೆರೆ ಎಳೆದು ಸರಿತೂಗಿಸುವ ಪರಿ ಜೊತೆಗೆ ಕಿವಿ ಹಿಂಡಿ ತಿದ್ದಲು ಹಚ್ಚುವ ಸಮಯ ಪುನಃ ಬಾರದು.ವರ್ಣಮಾಲೆಯ ಕಲಿತಾಗಿಂದ ಸುಲಲಿತವಾಗಿ ನುಡಿಯಲು ನಾಲಿಗೆ ನಲಿದಾಡಿದಂತೆಲ್ಲ ಬರೆಯುವ ಭಾವ ಹೊಸರೂಪ ತಂದ ಅನುಭವ. ಸಾಧಿಸಿದೆನೆಂಬ ಮುಗುಳ್ನಗೆ ಜೊತೆಗೆ ಏನೋ ಹುಮ್ಮಸ್ಸು.

ಬಳಪವನ್ನು ಬರೆದುದಕ್ಕಿಂತ ತಿಂದಿದ್ದೆ ಹೆಚ್ಚು,ಪದೆ ಪದೆ ಬಳಪದ ಕಟ್ಟಿ ಬೇಕೆನ್ನುವಾಗ ಬೆನ್ನಿಗೆ ಗುದ್ದು ಬಿದ್ದಾಗ ಅಮ್ಮಾ..ಸಾಕು ಇನ್ನು ತಿನ್ನಲ್ಲವೆಂದು ಸುಳ್ಳು ಹೇಳಿದ್ದುಂಟು.ಬಾಲ್ಯವೆಂದರೆ ಅದೇ ಈಗೆಲ್ಲಾ ಅದರ ವಿಷಯ ಕೇವಲ ದಂತಕಥೆಗಳು.ಮಕ್ಕಳಿಗೆ ಬದಲಾದ ಕ್ರಮಗಳು ಹಾಗೂ ಪಾಠಿಯ ಬದಲು ನೋಟ ಬುಕ್, ಅಲ್ಲದೇ ಸ್ಮಾರ್ಟ್ ಕ್ಲಾಸ್ ಎಲ್ಲವೂ ಅಂಗೈಯಲ್ಲಿ. ಕೈಬೆರಳಾಡಿಸಿದರೆ ಸಾಕು ಎಲ್ಲವು ಆರಂಭ ಮುಕ್ತಾಯ ಕೂಡ.ಆಗಾಗ ನೆನಪಾಗುವ ಬಾಲ್ಯದಲ್ಲಿ ತುಂಟಾಟಗಳ ಸುರಿಮಳೆ.ಕೈಚೀಲ ಹಿಡಿದು ಮೂಗೊರೆಸುತ್ತ, ರೊಯ್ಯನೆ ಕೈಗಾಡಿ ಬಿಡುತ್ತ ರಸ್ತೆಯುದ್ದಕ್ಕೂ ಸದ್ದು ಮಾಡುತ್ತ ಶಾಲೆಯಂಗಳದಲಿ ನಿಂತಾಗ ಹಾಕಿದ ಅಂಗಿ ಧೂಳಿನ ಕಣದಿಂದ ಮೆತ್ತಿ ನೀಲಿಹೋಗಿ ಕೆಂಪಾಗಿ ಮಾಸ್ತರ ಕೋಲು ನೆನಪಿಗೆ ಬಂದು ವಾಪಸ್ ಮನೆಗೆ ಓಡಿದ್ದು ನೆನಪಾಗಿ ಮುಗುಳ್ನಗೆ ತುಟಿಯಂಚಲಿ. ನಾವೇನು ಕಡಿಮೆಯಿದ್ದಿಲ್ಲ ಹೀಗೆಲ್ಲ ಮಾಡಿದಿವಿ ಅನ್ನೊದೆ ಖುಷಿ.ಎಲ್ಲವೂ ಕಲಿಕೆಯ ಸುತ್ತಮುತ್ತ.

ಶಿಕ್ಷಣದ ಮಹತ್ವ ಹೆಚ್ಚಾಗುತ್ತಿದ್ದಂತೆ ಅದರ ವ್ಯಾಪ್ತಿ ಮತ್ತು ವಿಸ್ತಾರಗಳೂ ಬದಲಾಗುತ್ತಿವೆ. ಮಕ್ಕಳಿಗೆ ಎಳವೆಯಲ್ಲೇ ಅಂದರೆ ಪೂರ್ವ ಬಾಲ್ಯಾವಧಿ ಶಿಕ್ಷಣ ನೀಡುವತ್ತ ಪ್ರಮುಖವಾಗಿ ಗಮನ ಹರಿಸಲಾಗುತ್ತಿದೆ. ಮಗುವೊಂದರ ಎಂಟನೇ ವಯಸ್ಸಿನ ವರೆಗಿನ ಅವಧಿ ಅದರಲ್ಲೂ ಹುಟ್ಟಿನಿಂದ ನಾಲ್ಕನೇ ವರ್ಷದ ವರೆಗಿನ ಅವಧಿ ಇಡೀ ಬದುಕಿನ ತಳಹದಿ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.ವ್ಯಕ್ತಿಯ ಬೌದ್ಧಿಕತೆಗೆ ಸಂಬಂಧಪಟ್ಟ ನರಮಂಡಲಗಳ ಬೆಳವಣಿಗೆ ಮತ್ತು ಅವುಗಳ ವಿನ್ಯಾಸಗಳು ಈ ಹಂತದಲ್ಲೇ ರೂಪುಗೊಳ್ಳುವ ಕಾರಣ ಬಾಲ್ಯಾವಧಿಯ ಶಿಕ್ಷಣದ ಕೊಡುಗೆ ಬಹುಮುಖ್ಯವಾಗಿದೆ.ಎಲ್ಲವೂ ಎಲ್ಲರಿಗೂ ತಿಳಿದಿರುವುದಿಲ್ಲ.ಕಲಿತವರು ಅದರ ಬಗ್ಗೆ ಚಿಂತಿಸಬಹುದು.ಆದರೆ ಬಡತನದ ಬೇಗೆಯಲಿ ಮಿಂದೆಳುವ ಬದುಕಿಗೆ ಇವೆಲ್ಲ ಅರ್ಥವಾಗುವುದು ಯಾವಾಗ?

ಲೋಕ ಜ್ಞಾನಿ,ಅನುಭವಾಮೃತ ಉಣಬಡಿಸಿದ  ಸರ್ವಜ್ಞನ ವಚನದಂತೆ..

ವಿದ್ಯೆವುಳ್ಳವನ ಮುಖವು |

ಮುದ್ದು ಬರುವಂತಿಕ್ಕು |

ವಿದ್ಯೆಯಿಲ್ಲದವನ ಬರಿ ಮುಖವು,ಹಾಳೂರ |

ಹದ್ದಿನಂತಿಕ್ಕು ಸರ್ವಜ್ಞ ||

ವಿದ್ಯಾವಂತನ ಮುಖವು ಎಲ್ಲರಿಗೂ ಮುದ್ದು ಬರುವಂತಿರುತ್ತದೆ.ವಿದ್ಯೆ ಇಲ್ಲದವನ ಬರಿಮುಖವು ಹಾಳೂರಿನೊಳಗಿರುವ ಹದ್ದಿನಂತಿರುತ್ತದೆ. ಅದನರಿತವನಿಗೆ ಎಲ್ಲ ಸ್ಪಷ್ಟವಾಗುತ್ತದೆ. ಪಡುವಣದ ಸೂರ್ಯನಕಾಂತಿಗೆ  ಪಟಪಟವೆಂದು ರೆಕ್ಕೆಬಡಿದು ಹಾರುವ ಪಾರಿವಾರಗಳು ತೆಂಗಿನ ಮರಗಳ ಹೊಯ್ದಾಟದ ನಡುವೆ, ಹಸಿದ ಹೊಟ್ಟೆಗೆ “ಅನ್ನವೇ ಬಹುಮುಖ್ಯ”’ ಎಂಬ ಅರಿವಿನ ಅನುಭವವದು. ಬಡತನ ಕೆಲವೊಮ್ಮೆ ಬಾಲ್ಯದ ಆನಂದಗಳಿಗೆ ಮುಕ್ತತೆ ಒದಗಿಸಿ ಬಂಧನವನ್ನು ಒದಗಿಸಿಬಿಡುತ್ತದೆ. ಶ್ರೀಮಂತರ ಮಕ್ಕಳು ಹೊರಗಡೆ ಆಟಿಕೆಗಳ ಜೊತೆ ಆಡುವ ಸ್ವಚ್ಚಂದ ಅನುಭವಗಳಿಂದ ವಂಚಿತರಾದರೆ, ಬಡವರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಾ ಹರಿದ ಮಾಸಿದ ಯೂನಿಫಾರಂ ಧರಿಸಿ, ಬ್ಯಾಗ್‌ ಹೆಗಲಿಗೇರಿಸಿ ಪೆನ್ನು, ಪೆನ್ಸಿಲಿಗಾಗಿ ಅಳುತ್ತಾ ನಿಲ್ಲುವ ಅಸಹಾಯಕ ಮಕ್ಕಳ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಕೆಲವೊಮ್ಮೆ ಈ ಚಿತ್ರಣ ಮನಃಪಟಲದಲ್ಲಿ ಕಣ್ಣೀರ ಬಿಂದುವಾಗಿ ಟಪ್ಪನೆ ಉದುರುತ್ತದೆ.

ಪರಿಸ್ಥಿತಿಗಳು ಕಾಲದಿಂದ ಕಾಲಕ್ಕೆ ಅಗತ್ಯತೆಗೆ ಅನುಗುಣವಾಗಿ ಕೊಂಚ ಬದಲಾವಣೆ ತಂದಿದೆ.ಶಿಕ್ಷಣ ಬದುಕಿಗೆ ಅನಿವಾರ್ಯ. ಅಕ್ಷರ ಜ್ಞಾನ ಇಲ್ಲದವ ಸಮಾಜದಲ್ಲಿ ಜೀವನ ನಿರ್ವಹಣೆ ಅಷ್ಟು ಸುಲಭವಲ್ಲ. ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟ ಉದ್ದೇಶ.ಅಂಧಕಾರ ತೊಡೆದು ಜ್ಞಾನ ದೀವಿಗೆಯು ಎಲ್ಲರ ಬದುಕಲ್ಲಿ ಸದಾ  ಬೆಳಗುತ್ತ ಮೌಡ್ಯತೆಯ ದೂರ ತಳ್ಳಲು ಇದೊಂದು ಭದ್ರ ಬುನಾದಿಯೆಂಬ ಸತ್ಯ ಅರಿತಷ್ಟು ಒಳ್ಳೆಯದು. ಹಾಗಂತ ಮಗುವಿನ ಮುಗ್ಧ ಮನಸ್ಸು ಮಾಯವಾಗದಂತೆ ಕಾಪಾಡುವವವರೇ ವ್ಯತಿರಿಕ್ತವಾಗಿ

ನಡೆದುಕೊಳ್ಳುತ್ತಿರುವುದು ನಗ್ನಸತ್ಯ ಕೂಡ. ಇಂದಿನ ಧಾವಂತದ ಬದುಕಲ್ಲಿ ಮಕ್ಕಳ ಬಾಲ್ಯ ಮಿಷನ್ ತರ. ಹೇಳಿದಂತೆ ಕೇಳಬೇಕೆಂಬ ರೋಬೋಟ್ ತರ. ಸ್ವಾತಂತ್ರ್ಯ ಇಲ್ಲ ಹೀಗಿದ್ದಾಗ ಬಾಲ್ಯ ಅಂದರೆ ಏನು? ಎಂಬ ಪ್ರಶ್ನೆ ಮೂಡದೆ ಇರದು.ನಗುವನ್ನು ಮರೆತು, ಇಂತಿಷ್ಟು ಸಮಯ ನಿರ್ಬಂಧ ಹೇರಿ ಒತ್ತಾಯ ಪೂರ್ವಕವಾಗಿ ಆಟವಾಡಿಸುವ ಚೌಕಟ್ಟು ಮಗುವಿನ ಆಂತರಂಗಿಕ ಭಾವವನ್ನು ಯಾವ ಬಣ್ಣವು ಆವರಿಸದಂತೆ ನೀರಸ ಪ್ರಕ್ರಿಯೆ ಹೇರಿದ್ದಂತು ಸತ್ಯ. ಎಲ್ಲೂ ಕೆಲವು ಓದಿನಲ್ಲಿ ತಮಗೆಷ್ಟು ಬೇಕೋ ಅಷ್ಟನ್ನು ಪಡೆದವರು ಮಾತ್ರ ಅಲ್ಪಸ್ವಲ್ಪ ಪ್ರಮಾಣದಲ್ಲಿ ತಮ್ಮ ಬದುಕಿನ ಕೆಲವು ಸಂತಸದ ಕ್ಷಣಗಳನ್ನು ಪಡೆದಿರುತ್ತಾರೆ.

ಹಾಗಂತ ಎಲ್ಲವನ್ನು ಬಿಟ್ಟುಬಿಡುವುದು ಅಲ್ಲ.ಯಾವ ಯಾವ ಕಾಲಘಟ್ಟದಲ್ಲಿ ಏನಾಗಬೇಕೋ…ಯಾವ ಕಲಿಕೆ ಜೀವನಕ್ಕೆ ಬೇಕೋ ಅದು ಶಾಸ್ತ್ರೋಕ್ತವಾಗಿ ಬೆಸೆಯಬೇಕು.ಜ್ಞಾನವಿಲ್ಲದವನ ಜೀವನ         ಸೂರ್ಯನಿಲ್ಲದ ಬಾನಿನಂತೆ.’ನಹಿ ಜ್ಞಾನೇನ ಸದೃಶಂ’ ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ ಎಂಬುದು ಪ್ರಾಚೀನ ಗೀತಾಮೃತದ ಒಂದು ಅಣಿಮುತ್ತು. ಪ್ರಪಂಚದಲ್ಲಿ ಬೆಳವಣಿಗೆಗೆ ವಿಶೇಷ ಪ್ರಾಶಸ್ತ್ಯವುಂಟು.ಯಾವ ನಾಗರಿಕತೆ ಹಾಗೂ ಸಂಸ್ಕೃತಿ ಸಮೃದ್ಧವಾಗಿರುತ್ತದೆಯೋ ಅದು ಸರ್ವತೋಮುಖ ಬೆಳವಣಿಗೆಯನ್ನು ಹೊಂದಿ ಇತಿಹಾಸ ನಿರ್ಮಾಣ ಮಾಡಿರುವುದಕ್ಕೆ ಹಲವಾರು ದೃಷ್ಟಾಂತಗಳು ಪ್ರಪಂಚದಾದ್ಯಂತ ಕಾಣ ದೊರೆಯುತ್ತವೆ. ಜ್ಞಾನ ಬಹುಮುಖಿಯಾದುದು. ಅದು ಹಲವಾರು ದಿಕ್ಕುಗಳಲ್ಲಿ ಚಲನಶೀಲತೆಯನ್ನು ಪಡೆದು ಕೊಂಡಿರುತ್ತದೆ. ಜ್ಞಾನದ ಬೊಕ್ಕಸ ತುಂಬಿದಂತೆಲ್ಲ ಇನ್ನೂ ಆಳಕ್ಕೆ ಇಳಿಯುತ್ತಾ ಹೋಗುತ್ತದೆ. ಕುತೂಹಲ ಗರಿ ಕೆದರುವಂತೆ ಮಾಡುತ್ತದೆ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ…

12 thoughts on “

  1. ಫಲವತ್ತಾಗಿ ಬೆಳೆಯಲು ಫಲವತ್ತಾದ ಮಣ್ಣು ಕೂಡ ಮುಖ್ಯ..
    ಸೊಗಸಾಗಿ ಮೂಡಿಬಂದಿದೆ ಮೇಡಂ..

  2. ಬಾಲ್ಯದ ನೆನಪುಗಳು ಜೊತೆಗೆ ವಿದ್ಯೆಯ ಮಹತ್ವ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು

  3. ಲೇಖನ ಓದುತ್ತಿದ್ದಂತೆ ನನಗಾಗಿಯೆ ಬರೆದಾರೊ ಅನಿಸಿತು.ಕಾರಣ ನನ್ನ ಬಾಲ್ಯ ಕೂಡಾ ಹಾಗೇ ಇತ್ತು.ಪ್ರತಿ ವ್ಯಕ್ತಿಗೂ ಜ್ಞಾನ ಬೇಕು ಅದು ಸಮಾಜಕ್ಕೆ ಬೆಳಕಾಗುವಂತಿರಬೇಕು.ಯಾಕೆಂದರೆ ಇಂದಿನ ಪ್ರಚಲಿತ ವಿದ್ಯಮಾನ ಗಮನಿಸಿದಾಗ ಜ್ಞಾನಿಯಿಂದಲೇ ಅನಾಹುತ ಆಗುವುದು ಹೆಚ್ಚು ಹಾಗಾಗದೆ ಬದುಕನ್ನು ಅಂಧಕಾರದಲ್ಲಿ ಮುಳುಗಿಸದೆ,ಯಾರಿಗೂ ತೊಂದರೆಯಾಗದಂತೆ ಸಂಸ್ಕಾರಯುತ ಜ್ಞಾನ ನಮ್ಮದಾಗಿಸಿಕೊಳ್ಳಬೇಕು.ಉತ್ತಮ ಸಂದೇಶ ಹೊತ್ತ ಲೇಖನ. ಶುಭವಾಗಲಿ

  4. ಶಿಕ್ಷಣ ಮತ್ತು ಕಾಲದ ಮಹತ್ವವನ್ನು , ಬಾಲ್ಯ ದ ದಿನಗಳನ್ನು ತುಂಬಾ ಸುಂದರವಾಗಿ ಪೊಣಿಸಿ ಮುತ್ತಿನ ಹಾರದಂತೆ ಈ ಲೇಖನ ಮೂಡಿ ಬಂದಿದೆ ರೀ ಮೇಡಂ ಜ್ಞಾನದಿಂದ ಮಾನವನ ಜೀವನ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ ಎಂಬ ಸಾರ್ವಕಾಲಿಕ ಸತ್ಯವನ್ನು ಬಿಂಬಿಸುತ್ತದೆ.

  5. ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಒಂದಲ್ಲ ಒಂದು ದಿನ ಫಲ ಕೊಟ್ಟೆ ಕೊಡುತ್ತದೆ……… ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ಬರಹ ಮತ್ತೆ ಬಾಲ್ಯದ ಆ ದಿನಗಳು ನೆನಪಾದವು………..

  6. ಬದುಕಿಗೆ ಬಹಳ ಹತ್ತಿರವಾದ ಬರೆಹ.
    ಅಭಿನಂದನೆಗಳು ಅಕ್ಕಾ

  7. ವಿದ್ಯೆ ಎಲ್ಲ ಜ್ಞಾನಕ್ಕಿಂತ ಮೇಲುಗೈ… ಅದರ ಬೆಲೆ ಗೊತ್ತಿರುವ ಎಲ್ಲವರು ಜ್ಞಾನಿಗಳು..ಲೇಖನ ಸೊಗಸಾಗಿ ಮೂಡಿಬಂದಿದೆ…

  8. ಸಂಸ್ಕಾರ,ಬಾಲ್ಯದ ಚಿತ್ರಣ ಸೊಗಸಾಗಿ ಮೂಡಿಬಂದಿದೆ.

Leave a Reply

Back To Top