ಕಾವ್ಯ ಸಂಗಾತಿ
ಅವಳ ಕವಿತೆ
ವಾಣಿ ಭಂಡಾರಿ
ಅವನಿರದ ಅವಳಲ್ಲಿ ಕವಿತೆಗಳೆ
ತೊಟ್ಟಿಲಲಿ ಲಾಲಿ ಹಾಡುತಿವೆ
ಅವನ ನೆನಪಿನೊಳಗೆ
ಮತ್ತದೆ ಭಾವಗಳ ನಾಗಾಲೋಟ
ಅರೆಮಬ್ಬು ಜೊಂಪಿಗೊಂದೊಂದು
ಮೆಲು ಹಾಡು
ನಿದ್ದೆ ಬರುವ ತನಕ
ಸುಪ್ತದೊಳಗೆ ಅಡಗಿ ಕನವರಿಸೊ
ನೋವಿನ ನೆನಪ ಪಾಳಿಗೆಲ್ಲಿಹುದು
ಸುಖದ ಜೋಗುಳ?
ಬದುಕ ಪದಗಳಲಿ
ಅಕ್ಷರಗಳದೆ ಮಾತು
ಒಳ ಸೇರಿದ ಮೌನಕ್ಕೆ ಯಾರು
ಜೊತೆಗಾತಿ?
ಮಾತು ಬೆಸೆದ ಜೊತೆಗಾರ
ಎಟುಕದಂಬರ
ಮಸಣದ ಹೂವಂತೆ
ಹೂವಾಗಿ ಹಬ್ಬಿ ಅಪ್ಪಿತು ಧರೆ
ಭಸ್ಮದ ಗುಡ್ಡೆಯೊಳಗೆ,,
ಹಾರುವ ಪ್ರೀತಿ ಕಣಗಳಿಗೆ
ಎಲ್ಲೆಯುಂಟೆ? ಜಗದೊಳಗೆ
ಕಣ್ಣ ಹನಿ ಜಾರಿ ಇರುಳಿನಲಿ
ನಿತ್ಯ ಕನವರಿಕೆ ಕತ್ತಲೆಯ
ಹುತ್ತದೊಳಗೆ
ಅವನ ನೆನಪಿರದ
ದಿನ ಕವಿತೆಗಳಿಗೆ ಸಾವು.
ಸಾವಾಗದ ಕವಿತೆ ಅವನು
ಮನದ ಅಲೆಯೊಳಗೆ ನಿತ್ಯ
ತೇಲುತಲಿ ಎದೆ ದಡಕೆ
ಚಾಚಿ ತಬ್ಬಿ ಮುದ್ದಿಸೊ
ಅವನ ನೆನಪೆ ಕವಿತೆ.
ಮೊದಲ ಮಳೆಯ ಘಮದಲೂ
ಆಗಸದಂಚಿನ ಹೊಳಬೆಳಕಿನಲೂ
ಕೆಂಬಣ್ಣ ಸೂಸೋ ಮುಗಿಲಿನಾಚೆಯ
ನೆನಪ ಓಕುಳಿಯಲೂ ಅವನದೆ
ಅನವರತ ಧ್ಯಾನಸ್ಥ ದಿನಮನ.
ಅವನ ನೆನಪಿನಾಲಯದಲಿ
ನಾ ಸದಾ ದಿವ್ಯ ಮೌನಿ.
ತುಂಬಾ ಚೆನ್ನಾಗಿದೆ ಜಿ, ಅಭಿನಂದನೆಗಳು
Nice one Madam..