ಅಂಕಣ ಸಂಗಾತಿ

ಕಾವ್ಯದರ್ಪಣ

ಸೋಲೆಂಬ ರೋಗಕ್ಕೆ ಆತ್ಮವಿಶ್ವಾಸ

ಮತ್ತು ಕಠಿಣ ಪರಿಶ್ರಮವೇ ಮದ್ದು,

ಇದು ಯಾರಲ್ಲಿರುತ್ತದೆಯೋ

ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

         – ಅಬ್ದುಲ್ ಕಲಾಂ

ಕಾವ್ಯ ಪ್ರವೇಶಿಕೆಯ ಮುನ್ನ

ಕಾಲ ಗಡಿಗಳ ಹಂಗು ಮೀರಿ ಸಮಾಜವನ್ನು ತಿದ್ದುವ ಹಾಗೂ ಬದುಕಿನ ಭರವಸೆಯನ್ನು ಕಳೆದುಕೊಂಡ ಜನರಲ್ಲಿ ಜೀವನೋತ್ಸಾಹ ಮೂಡಿಸುವ ದಿಸೆಯಲ್ಲಿ ಹಿಂದಿನಿಂದಲೂ ಶರಣರು, ದಾರ್ಶನಿಕರು, ತತ್ತ್ವಜ್ಞಾನಿಗಳು ಹೆಜ್ಜೆ ಹಾಕುತ್ತಿರುವುದು ಶ್ಲಾಘನೀಯ ಸಂಗತಿ . ಈ ನಿಟ್ಟಿನಲ್ಲಿ ವಚನಸಾಹಿತ್ಯ ದೊಡ್ಡ ಜನಾಂದೋಲನವನ್ನೆ ಸೃಷ್ಟಿಸಿದ್ದನ್ನು ಮರೆಯುವಂತಿಲ್ಲ.

ಜೀವನದಲ್ಲಿ ಸೋತಾಗ ಮೇಲೇಳಲು ಬರವಸೆಯ ಊರುಗೋಲು ಬೇಕು .ಅದು ಕವಿತೆಯಾದರೂ ಸರಿ ಸಾಂತ್ವನದ ನುಡಿಗಳಾದರೂ ಸರಿ ಪ್ರಪಾತಕ್ಕೆ ಬಿದ್ದವರನ್ನು ಮೇಲೆತ್ತುವವಂತಹ ಶಕ್ತಿ ಬರಹಕ್ಕಿದೆ. ಆದ್ದರಿಂದಲೇ ಖಡ್ಗಕ್ಕಿಂತ ಲೇಖನಿ ಹರಿತವಾದದ್ದು ಎಂದು ವಾಲ್ಟೇರ್ ಹೇಳಿರುವುದು.

ಜೀವನವನ್ನು ಹೇಗೆ ನಡೆಸಬೇಕು, ಎದುರಾದ ಸವಾಲುಗಳನ್ನು ಹೇಗೆ ನಿಭಾಯಿಸಬೇಕು, ಕಾಲೆಳೆಯುವವರ ಮುಂದೆ ಹೇಗೆ ಮೇಲೇಳಬೇಕು ಮುಂತಾದ ಸಂದೇಶಗಳನ್ನು ತಮ್ಮ ಬರವಣಿಗೆಯ ಮೂಲಕ ಜನ ಸಮುದಾಯಕ್ಕೆ ತಲುಪಿಸುವ ಪ್ರಯತ್ನ, ಪರಂಪರೆಯನ್ನು ಪ್ರಜ್ಞಾವಂತ ಬರಹಗಾರರು ಮುಂದುವರಿಸಿಕೊಂಡು ಬರುತ್ತಿರುವುದು ಉತ್ತಮ ಸಮಾಜಮುಖಿ ಬೆಳವಣಿಗೆಯಾಗಿದೆ. ಇದು ಕವಿಗಳ ಸಾಮಾಜಿಕ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದ ಜವಾಬ್ದಾರಿ ಕೂಡ ಆಗಿದೆ.

ತನ್ನ ಕಾವ್ಯದ ಮೂಲಕ ಜನರನ್ನು ರಂಜಿಸಿದರೆ ಮಾತ್ರ ಸಾಲದು. ಅದರಿಂದಾಚೆಗೆ ಮಾನವನಾಗಿ ಮಾನಸಿಕ ಸ್ಥೈರ್ಯ ನೀಡುವುದು ಬಹಳ ಮುಖ್ಯ. ಸಾಮಾಜಿಕ ವಿದ್ಯಮಾನಗಳಿಗೆ ತಲ್ಲಣಗಳಿಗೆ ಕವಿಯ ಮನಸ್ಸು ಸ್ಪಂದಿಸಿದಾಗ ಮಾತ್ರ ಇಂತಹ ಕಾವ್ಯ ಜೀವ ಪಡೆಯಲು ಸಾಧ್ಯ. ಇದರಲ್ಲಿ ಗದ್ಯಪದ್ಯಗಳ ಪಾತ್ರವು ಬಹಳ ಮುಖ್ಯ.‌ಆದರೂ ಪದ್ಯಗಳು ಗೇಯತೆ  ಸ್ವರೂಪ, ಪ್ರಸಗಳು ಸೆಳೆತದಿಂದ ಹೃದಯಕ್ಕೆ ತಟ್ಟನೆ ಸ್ಪರ್ಶಿಸುತ್ತವೆ . ಈ ಧ್ಯೇಯದೊಂದಿಗೆ ಸದಾ ಜಾಗೃತ ಬರಹಗಳ ಮೂಲಕ ಜನರನ್ನು ಎಚ್ಚರಿಸುವ ಮತ್ತು ಪ್ರೋತ್ಸಾಹಿಸುವ ಕವಿ ಕಾವ್ಯ ಪರಿಚಯವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲಿದ್ದೇನೆ.

ಕವಿ ಪರಿಚಯ

ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದವರಾದ ಗಂಗಾಧರ ಕಂಬಿಮಠ್ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೂ ಪ್ರೀತಿ ಪ್ರೇಮದ ಬಗ್ಗೆ ಕವಿತೆ ಬರೆಯುವ ಹವ್ಯಾಸವಿದ್ದ ಇವರು ಬರಹವನ್ನು ಗಂಭೀರವಾಗಿ ಪರಿಗಣಿಸಿದ್ದು ಫೇಸ್ಬುಕ್ ಸಾಮಾಜಿಕ ಜಾಲತಾಣ ಬಳಕೆಯ ಸಂದರ್ಭದಲ್ಲಿ. ಪ್ರಸಕ್ತ ತನ್ನ ಸುತ್ತ ಮುತ್ತಲೂ ನಡೆಯುವ ದೈನಂದಿನ ವಿದ್ಯಮಾನಗಳನ್ನು ಕುರಿತು ತಮ್ಮದೇ ಆದ  ವಿಶಿಷ್ಟ ಶೈಲಿಯಲ್ಲಿ ಚುಟುಕು ರಚಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವವರು. ರಾಜಕೀಯ ಆಗುಹೋಗುಗಳ ಮೇಲೂ ತಮ್ಮ ಬರಹದ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಅವರದು.

ವೈವಿಧ್ಯಮಯವಾದ ವಿಚಾರಗಳನ್ನು ಕುರಿತು ಅದ್ಭುತ ಶಬ್ದ ಚಮತ್ಕಾರ ಹಾಗೂ ರೂಪಕಗಳ ಮೂಲಕ ಮಾರ್ಮಿಕವಾದ ಬರಹಗಳಲ್ಲಿ ಕವಿತೆಗೆ ಜೀವತುಂಬುವ ಇವರ ನೆಚ್ಚಿನ ಪ್ರಕಾರವೇ ಕವನ ರಚನೆಯಾಗಿದೆ. ಇವರ ಬರಹಗಳು ರಾಜ್ಯದ ನಾನಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ ಅನುಭವವಿದೆ. ಸಾಹಿತ್ಯ ಸೇವೆಗಾಗಿ ಸಂಸ್ಥೆಗಳಿಂದ ಸನ್ಮಾನ, ಪ್ರಶಸ್ತಿ ,ಬಹುಮಾನಗಳನ್ನು ಸ್ವೀಕರಿಸಿದ ಹೆಗ್ಗಳಿಕೆ ಇವರದು.

ಕವನ ವಾಚನ ಮಾಡುವುದರಲ್ಲಿ ಪ್ರವೀಣರಾದ ಇವರು ಮನೋಜ್ಞ ವಾಚನಕ್ಕೆ ತಲೆದೂಗದವರಿಲ್ಲ. ಅಷ್ಟು ಅದ್ಬುತವಾದ ಶೈಲಿಯಲ್ಲಿ ಕೇಳುಗರ ಮನಸೂರೆಗೊಂಡಿದ್ದಾರೆ. ಪ್ರಸಕ್ತ ಇವರು ಕವಿ ವೃಕ್ಷ ಬಳಗ ಬೆಂಗಳೂರು ವಿಭಾಗದ ಸಾಹಿತ್ಯ ಸಂಘಟನೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕವಿತೆಯ ಆಶಯ

ಬದುಕಿನ ದಾರಿಯಲ್ಲಿ ಗುರಿಯನ್ನು ತಲುಪಲು ಸೋತು ಸುಣ್ಣವಾಗಿ, ಬಳಲಿ ಬೆಂಡಾದ ನಿತ್ರಾಣ ಮನಗಳಿಗೆ ಧೈರ್ಯಂ ಸರ್ವತ್ರ ಸಾಧನಂ ಎಂಬ ಸೂತ್ರದಡಿಯಲ್ಲಿ ನಡೆಯಲು ಅಗತ್ಯವಾದ ಪ್ರೋತ್ಸಾಹ ತುಂಬುವ ಮೂಲಕ ಕಷ್ಟಗಳಲ್ಲಿ ಮುಳುಗಿದವರನ್ನು ಬದುಕಿನ ನಾವೆಯಲ್ಲಿ ಮೇಲೆತ್ತಲು ಕವಿಯು ನಾನು ಸಲಹೆಗಳನ್ನು ನೀಡುತ್ತಾ ಅವರನ್ನು ಗೆಲುವಿನ ಅಲೆಯಲ್ಲಿ ತೇಲಿಸಲು ಪ್ರಯತ್ನ ಮಾಡಿದ್ದಾರೆ.

ಇಲ್ಲಿ ಕವಿಯು ಇತರರನ್ನು ನಿಂದಿಸುತ್ತಾ, ಕೊಂಕು ನುಡಿಗಳೆಂಬ ಶರವನ್ನು ಬೀಸುತ್ತಾ ಹಳ್ಳಕ್ಕೆ ತಳ್ಳಿ ಆಳಿಗೊಂದು ಕಲ್ಲೆವ ಜನಗಳ ನಡೆಗೆ ಬೇಸರದೆ, ಹೆದರದೆ ,ಸಮಚಿತ್ತರಾಗಿ ಕಂಡ ಕನಸುಗಳನ್ನು ನನಸು ಮಾಡಿಕೊಳ್ಳುವ ಅಗತ್ಯತೆಯನ್ನು ತಮ್ಮ ಎಚ್ಚರಿಕೆಯ ಬರಹದ ಮೂಲಕ ಸಾಧನೆಯ ಸಿಹಿಯನ್ನು ಸವಿಯಲು ಕರೆ ಕೊಡುವುದೇ ಕವಿತೆಯ ಪ್ರಬಲವಾದ ಆಶಯವಾಗಿದೆ.

ಒಬ್ಬ ಮನುಷ್ಯನಿಗೆ ಬದುಕಲು ಮೂಲಭೂತ ಅದಕ್ಕೆಗಳಿದ್ದರೆ ಸಾಲದು. ಅವನಲ್ಲಿ ಜೀವನೋತ್ಸಾಹವಿರಬೇಕು, ಚೈತನ್ಯದಾಯಕ ಶಕ್ತಿ ಇರಬೇಕು, ಸೋತಾಗ ಮೇಲೆದ್ದು ಗೆಲ್ಲುವೆನೆಂಬ ಹಂಬಲವಿರಬೇಕು, ನಮ್ಮನ್ನು ಹೀಯಾಳಿಸುವವರ ಮುಂದೆ ಉತ್ಸಾಹದ ಚಿಲುಮೆ ಅಂತೆ ಪುಟಿದೇಳಬೇಕು. ಅವಮಾನವನ್ನು ಸನ್ಮಾನವಾಗಿಸಿಕೊಳ್ಳವ ಚಾಕಚಕ್ಯತೆ ಇರಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಹಂತದಲ್ಲೂ ಧನಾತ್ಮಕ ಚಿಂತನೆ ಮಾಡಬೇಕು. ದಿಟ್ಟತನದಿಂದ ಎದುರಿಸಿ ಟೀಕಾಕಾರರಿಂದಲೇ ಅಭಿನಂದಿಸಿ ಕೊಳ್ಳುವ ಸಾಧನೆ ಮಾಡಬೇಕು. ನೂರು ಜನ ಆಡುವ ನೂರು ಮಾತುಗಳನ್ನು ನಮ್ಮ ಏಳಿಗೆಗೆ ವೇದಿಕೆಯಾಗಿಸಿಕೊಳ್ಳಬೇಕು. ಜೀವನದಲ್ಲಿ ಏನೇ ಬಂದರು ಹೆದರದೆ ಎದುರುಗೊಂಡು ಜಯಿಸುವ ಕುಶಲತೆ ಇರಬೇಕು ಎಂಬುದು ಕವಿ ಕಿವಿ ಮಾತಿನ ಪ್ರಬಲವಾದ ಧ್ಯೇಯವಾಗಿದೆ.

ಕವಿತೆಯ ಶೀರ್ಷಿಕೆ

ಕವಿತೆಯ ಶೀರ್ಷಿಕೆಯೇ ವಿಶಿಷ್ಟವಾಗಿದ್ದು ಸಂದೇಶವನ್ನು ಹೊತ್ತು ತಂದಿದೆ. ಕವಿ ಕಿವಿ ಮಾತು ಎನ್ನುವಲ್ಲಿ ಕಿವಿ ಪದವು ಆಲಿಸುವಿಕೆಯ ಪ್ರತೀಕವಾಗಿದ್ದು, ಕವಿ ಓದುಗರಿಗೆ ಏನೋ ಕಿವಿಮಾತು ಹೇಳಲು ಹೊರಟಿದ್ದಾರೆ ಎಂಬುದು ಅರ್ಥವಾಗುತ್ತದೆ. ಕವಿತೆಯುದ್ದಕ್ಕೂ ಮನುಜನಿಗೆ ಆತ್ಮವಿಶ್ವಾಸ ಪಡೆಯುವ ಪರಿಯನ್ನು ವಿಶ್ಲೇಷಿಸುತ್ತಾ ಸಾಗಿದ್ದಾರೆ.

ಕವಿತೆಯ ವಿಶ್ಲೇಷಣೆ

ಕವಿ ಕಿವಿಮಾತು

ಕೊಂಕುನುಡಿಗಳಿಗೆ

 ಮಂಕಾಗಬೇಡ

 ಸುಂಕವಿಲ್ಲ ಮಾತುಗಳಿಗೆ

 ಆಡಿಕೊಳ್ಳುವವರು ನೂರು ಜನ

 ನೂರು ಮಾತು

ನಾವು ಆಡುವ ಮಾತಿಗೆ ಯಾವುದೇ ಸುಂಕ ಕಟ್ಟುವ ಅಗತ್ಯವಿಲ್ಲ ಅದಕ್ಕೆ ಕೊಂಕು ನುಡಿಗಳನ್ನು ಧಾರಾಳವಾಗಿ ಬಳಸುತ್ತಾರೆ ಎನ್ನುವ ಕವಿಯು ಅತಿ ಭಾಷಿಗಳು ಉಡಾಫೆಯ ಮಾತುಗಳನ್ನು ಆಡುತ್ತಾರೆ.ಅದು ಅವರಿಗೆ ಕರಗತವಾಗಿರುತ್ತದೆ ಎಂಬ ವಿಷವನ್ನು ವ್ಯಕ್ತಪಡಿಸುತ್ತಾ ಮಾತು ಬೆಳ್ಳಿ ಮೌನ ಬಂಗಾರ ಎಂಬ ನುಡಿಯನ್ನು ಮರೆತು ವರ್ತಿಸುತ್ತಾರೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

ಒಂದು ಕೈಯಲ್ಲಿ ಇರುವ ಐದು ಬೆರಳುಗಳು ಹೇಗೆ ಸಮವಿಲ್ಲವೋ ಹಾಗೆ ಜನರೆಲ್ಲರ ಆಲೋಚನೆಗಳು ಒಂದೇ ತೆರನಾಗಿರುವುದಿಲ್ಲ. ಒಬ್ಬರ ಮನೋಭಾವ ಒಂದೊಂದು ರೀತಿ ಯೋಚಿಸುತ್ತದೆ. ಮನಸ್ಸಿನಂತೆ ಮಹಾದೇವ ಎಂಬಂತೆ ಅವರ ನಾಲಿಗೆ ಉಳುರಿದಂತೆ ಮಾತನಾಡುತ್ತಾರೆ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವ ಗಾದೆ ಮಾತು ಅದಕ್ಕಾಗಿ ಹುಟ್ಟಿಕೊಂಡಿದೆ. ಆಡಿಕೊಳ್ಳುವವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವೂ ಇಲ್ಲ. ಒಬ್ಬರ ಮಾತು ಇನ್ನೊಬ್ಬರ ಬಾಳಿಗೆ ಬೆಳಕು ಆಗಬಹುದು, ಬೆಂಕಿಯಂತೆ ಜ್ವಲಿಸಿ   ಭಸ್ಮವನ್ನು ಮಾಡಬಹುದು. ಕೊಂಕು ನುಡಿಗಳನ್ನು ಆಡುವ ಮುನ್ನ ಅದರ ಪರಿಣಾಮಗಳನ್ನು ಯೋಚಿಸಬೇಕು. ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ನೆಂಟರು ಆಗುತ್ತಾರೆ ಅಂದರೆ ನಾಲಿಗೆಯು ನಮ್ಮ ಸರ್ವ ಗುಣಗಳನ್ನು ಬೆಳಕಿಗೆ ತರುತ್ತದೆ.

ಕಾಯಲು ಮೇಲೊಬ್ಬ ಇರುವಾಗ

 ಕಾಯಕವಿಲ್ಲದವರ ಕೊಂಕು ಮಾತಿಗೆ

 ಏಕೆ ಕೊರಗುತ್ತೀರಾ

 ಯಾರನ್ನು ನಂಬಿ ಬಂದಿಲ್ಲ

 ಎನ್ನುವುದೆ ಸತ್ಯವಾದರೆ

 ಯಾರಾದರೂ ನಮ್ಮೊಂದಿಗೆ ಇರುತ್ತಾರೆ

 ಎನ್ನುವ ನಿರೀಕ್ಷೆಯೂ ಹುಸಿ

 ಎಂಬ ಬಸವ ವಾಣಿ ಆಡಿಕೊಳ್ಳುವವರ ಕೊಂಕು ನುಡಿಗಳನ್ನು ನಿರ್ಲಕ್ಷಿಸುವಂತೆ ಸಲಹೆ ನೀಡುತ್ತದೆ.

ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿಗೆ ಅನ್ವರ್ಥಕವಾಗಿ ನಡೆದುಕೊಳ್ಳುತ್ತಾ ಮನಬಂದಂತೆ ಇತರರನ್ನು ಮೂದಲಿಸುವ ಮತಿಗೇಡಿ ಗಳಿಗೆ ಸೆಡ್ಡು ಹೊಡೆದು ನೂರು ಜನ ನೂರು ಮಾತು ಆಡಿದರೂ ನೀನು ಮುಂಕಾಗಬೇಡ ಎಂಬ ಸ್ಪೂರ್ತಿಯ ನುಡಿಯು ಶ್ಲಾಘನೀಯವಾಗಿದೆ.

ನೊಂದು ಕೊಳ್ಳದಿರು

 ಕಾಲೆಳೆಯುವ ದುರ್ಜನರಿಗೆ

ಸಂತಸಪಡು ನೀ ಮೇಲೇರುವೆಯೆಂದು

ಹಾಕುತಿರು ಹೆಜ್ಜೆಯ ಮುಂದೆ

 ಕುಳಿತು ಕೊಳ್ಳದಿರು ಸೋತು

ಯಾರಾದರೂ ನಿನ್ನ ಕಾಲೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದರೆ ನೀನು ಹೆಮ್ಮೆಪಡಬೇಕು. ಕಾರಣ ನೀನು ಸಾಧನೆಯ ಶಿಖರದಲ್ಲಿ ಅವರಿಗಿಂತ ಮೇಲೆ ಸಾಗುತ್ತಿರುವೆ ಎಂದು ಭಾವಿಸು ಎನ್ನುವ ಕವಿ ಅಸೂಯೆ ಪಡುವವರಿಗೆ ಹೊಗೆಯು ಉಂಟು, ಬೂದಿಯೂ ಉಂಟು, ಅಂದರೆ ದುರ್ಜನರು ಮತ್ಸರದ ಬೆಂಕಿಯಲ್ಲಿ ತಾವೇ ಬೆಂದು ಬೂದಿಯಾಗುವರು. ಅಂತಹ ಜನರ ಕಾಲೆಳೆತಕ್ಕೆ  ಮರುಗದಿರು, ಕೊರಗದಿರು ಎಂಬ ಕಿವಿಮಾತನ್ನು ಕವಿ ಹೇಳಿದ್ದಾರೆ.

ಹಡಗೊಂದು ಸುತ್ತಲೂ ನೀರಿದ್ದರೂ ಮುಳುಗಲಾರದು. ಅದೇ ನೀರು ಹಡಗನ್ನು ಪ್ರವೇಶಿಸಿದರೆ ಭಾರವಾಗಿ ಮುಳುಗುವುದು. ಹಾಗೆಯೇ ನಮ್ಮ ಮನಸ್ಸು ಕೂಡ ನಾವೆಯಂತೆ ನಮ್ಮ ಮನಸ್ಸಿನ ಸುತ್ತ ಅದೆಷ್ಟೇ ನಕಾರಾತ್ಮಕ ಘಟನೆಗಳು ನಡೆಯುತ್ತಿದ್ದರೂ ನಮಗೆ ಅದರಿಂದ ಯಾವುದೇ ನಷ್ಟವಾಗುವುದಿಲ್ಲ. ಆದರೆ ನಮ್ಮ ಮನಸ್ಸಿನೊಳಗೆ ಈ ನಕಾರಾತ್ಮಕ ಭಾವನೆ ಸೇರಿಕೊಂಡರೆ ಮುಗಿಯಿತು ನಮ್ಮ ಸಾಧನೆಗೆ ದೊಡ್ಡ ತಡೆಗೋಡೆಯಾಗುತ್ತದೆ.

ಇಲ್ಲಿ ಕವಿವಾಣಿ ಒಂದು ನೆನಪಾಗುತ್ತದೆ

ಬದುಕುವ ಆಸೆ ಇದ್ದರೆ

 ನಿನ್ನ ಶತ್ರುಗಳ ಕಣ್ಣೆದುರೇ ಬದುಕು

 ಅವರು ನಿನ್ನ ಎದುರು ಸುಳಿದಾಗಲೆಲ್ಲ

 ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ ಇಂತಹ ಬದುಕು ನಿಮ್ಮದಾಗಿರಲಿ ಎಂಬುದು ಕವಿತೆಯ ಆಶಯವಾಗಿದೆ.”

ಹಳ್ಳಕ್ಕೆ ಬಿದ್ದ ತೋಳಕ್ಕೆ

 ನೂರೆಂಟು ಕಲ್ಲು

 ಬಿದ್ದವನಿಗೆ ಗುದ್ದುವ ಬಹಳ

 ಕೈಹಿಡಿದು ಎಬ್ಬಿಸುವವರು ಬಲು ವಿರಳ

 ಎದ್ದುನಿಲ್ಲು ನಿನ್ನತ್ತ ಎಸೆದ ನಿಂದನೆಯ

 ಕಲ್ಲುಗಳ ಮೆಟ್ಟಿಲುಗಳನ್ನಾಗಿಸಿ

ಗೆದ್ದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುವುದಕ್ಕಿಂತ ಸೋತಾಗ ಕಾಲೆಳೆದು ಆಡಿಕೊಳ್ಳುತ್ತಾ ಇಲ್ಲಸಲ್ಲದ ಗುಲ್ಲು ಎಬ್ಬಿಸುತ್ತ ನಮ್ಮಲ್ಲಿರುವ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಲೇವಡಿ ಮಾಡುವ ಜನರು ಬಹಳ ಇದ್ದಾರೆ ಎಂಬುದನ್ನು ಕವಿಯುವ ಹಳ್ಳಕ್ಕೆ ಬಿದ್ದ ತೋಳಕ್ಕೆ ನೂರೆಂಟು ಕಲ್ಲು ಎಂದು ಮಾರ್ಮಿಕವಾಗಿ ಚಾಟಿ ಬೀಸಿದ್ದಾರೆ. ಬಿದ್ದವನಿಗೆ ಗುದ್ದುವರೆ ಬಹಳ, ಕೈಹಿಡಿದು ಎಬ್ಬಿಸುವರು ಬಲು ವಿರಳ ಅಂದರೆ ಸೋತಾಗ ಹಂಗಿಸಿ ಮತ್ತಷ್ಟು ಪ್ರಪಾತಕ್ಕೆ ತಳ್ಳುತ್ತಾರೆ ವಿನಹ ಅವರಲ್ಲಿ ಧೈರ್ಯ ತುಂಬಿ ಪ್ರೋತ್ಸಾಹದ ನುಡಿಗಳ ಮೂಲಕ ಮೇಲೆತ್ತಿ ಸಲಹುವ  ಮನೋಭಾವ ಬಹಳ ಕಡಿಮೆ ಜನರಿಗಿದೆ ಎಂಬ ಆತಂಕವನ್ನು ಕವಿಯ ಸಾಲುಗಳಲ್ಲಿ ಕಾಣಬಹುದು.

ಹಿಂದಿನ ಸೋಲಿನ ಅನುಭವಗಳನ್ನು ನಾಳೆಯ ಗೆಲುವಿನ ದಾರಿ ಮಾಡಿಕೊಂಡು ಸಾಗಬೇಕು. ಆ ನಿಟ್ಟಿನಲ್ಲಿ ನೀನು ಕಾರ್ಯಪ್ರವೃತ್ತರಾಗು ಎನ್ನುತ್ತಾ ಕವಿಯು ನಿಂದನೆಯ ಕಲ್ಲುಗಳನ್ನು ಮೆಟ್ಟಿಲಾಗಿಸಿಕೊಂಡು ಅಂದರೆ ಅವಮಾನ ಅವಹೇಳನದ ಮಾತುಗಳನ್ನು ಮೆಟ್ಟಿನಿಂತು ನಿನ್ನ ಸಾಮರ್ಥ್ಯದಿಂದ ಸ್ವಂತ ಬಲದಿಂದ ಬದುಕಬೇಕೆಂದು ಆಶಿಸುತ್ತಾರೆ.

ನಿಂದಕರ ನಿಂದನೆಗೆ ಕೊಡದಿರುವ ಚಿತ್ತ ಇರಲಿ ದೇಯ ಸಾಧನೆಯತ್ತ

 ದುರ್ಗಮವಾಗಿದ್ದರೂ ದಾರಿ ಸಾಗಲೇಬೇಕು ಗಮ್ಯದತ್ತ

 ಅತ್ತಿತ್ತ ಚಂಚಲ ಚಿತ್ತನಾಗದೆ

 ನಡೆಯುತ್ತಿರು ಮನವ ಅಚಲವಾಗಿಸಿ

ನಮ್ಮ ಗಮ್ಯದ ಪಥ ದುರ್ಗಮವಾಗಿ ಇದ್ದರೂ ಸರಿ ನಮ್ಮ ಪ್ರಯತ್ನ ಅಚಲ ವಾಗಿದ್ದರೆ, ಮನಸ್ಸಿನಲ್ಲಿ ದೃಢತೆ ಇದ್ದರೆ, ವಿಚಲಿತರಾಗದೆ ಇದ್ದರೆ, ಯಶಸ್ವಿಯಾಗಿ ನಾವು ಅಂದುಕೊಂಡ ಗುರಿ ತಲುಪುತ್ತೇವೆ ಎಂಬುದು ಕವಿತೆಯ ಪ್ರೇರಣಾ ಪೂರ್ವಕ ಸಾಲುಗಳು.

ನಿಂದಿಸಿದರೆ ನಿಂದಿಸಲಿ ಬಿಡು

 ಆರೋಪಗಳ ಹೋರಿಸಸಿ ಬಿಡು

 ನೋಯಿಸಿದರೆ ನೋಯಿಸಲಿ ಬಿಡು

  ಮನಬಂದಂತೆ ಕೂಗಾಡಲಿ ಬಿಡು

 ಸುಮ್ಮನಿದ್ದು ಬಿಡು

 ಅವರವರ ಬುತ್ತಿ ಅವರವರ ಹೆಗಲಿಗೆ

ಎಂಬ ಬಸವಣ್ಣನವರ ವಚನದಂತೆ ನಿಂದಿಸಿದರೆ ಅದರ ಫಲಾಫಲಗಳನ್ನು ಅವರೆ ಉಣ್ಣುವರು. ನೀನು ದೃಢವಾಗಿ ನಿಂತು ಗಮ್ಯದತ್ತಾ ಸಾವು ಎಂಬ ವಿಚಾರವನ್ನು ಹೊತ್ತು ತಂದಿದೆ

ಇಲ್ಲಿ ಕವಿಯುವ ನೀನು ಗುರಿಯತ್ತ ಸಾಗಬೇಕಾದರೆ ನಿನ್ನ ಮನಸ್ಸು ದೊಡ್ಡದಿರಬೇಕು ಚಂಚಲತೆಯಿಂದ ಹೊರತಾಗಿರಬೇಕು ಮಾವ ಮನದಲ್ಲಿ ಸ್ಥಿರತೆ ಇರಬೇಕು ಎಂಬ ಸಂದೇಶವನ್ನು ನೀಡುತ್ತಾರೆ

ಏಳು ಬೀಳುಗಳು ಉಂಟು

 ಸಮವಿಲ್ಲ ಬದುಕ ದಾರಿ

ಸೋತೊಡನೆ

 ಕೈಕಟ್ಟಿ ಹೌಹಾರಿ

 ಆತ್ಮವಿಶ್ವಾಸದ ಜ್ಯೋತಿ ಬೆಳಗುತಿರು

 ಸದಾ ಛಲವಿರಲಿ ಎದೆಯಲ್ಲಿ

ಜೀವನ ಎಂಬುದು ಹುಲ್ಲುಹಾಸಲ್ಲ ಅದೊಂದು ಕಲ್ಲುಮುಳ್ಳುಗಳ ದಾರಿ,ಕಷ್ಟ ಸುಖಗಳ ಸಮಾಗಮ, ಬೇವು ಬೆಲ್ಲಗಳ ಸಂಗಮ. ಹಾಗಾಗಿ ಕವಿಯು ಬದುಕಲ್ಲಿ ಏಳುಬೀಳುಗಳುಂಟು ಹಣವಿಲ್ಲದೆ ದಾರಿ ಎಂದಿರುವುದು. ಇಂತಹ ಪಥದಲ್ಲಿ ಸಾಗುವಗೆ‌ ಜಯ  ಅಪಜಯ ಸಹಜ. ಒಮ್ಮೆ ಸೋಣೊಡನೆ ಕೈಕಟ್ಟಿ ಭಯದಿಂದ ಕೂರದೆ ಸೋಲೆ ಗೆಲುವಿನ ಸೋಪಾನ ಎಂಬ ತತ್ವವನ್ನು ಅರಿತು ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂಬ ಆತ್ಮವಿಶ್ವಾಸದ ನುಡಿಗಳನ್ನು ಪಾಲಿಸುತ್ತಾ ಸಾಧನೆಯ ಪಥದಲ್ಲಿ ಚಲಿಸಬೇಕು ಎಂದಿದ್ದಾರೆ.

ಆಗಸವನ್ನು ಏರುವ ಆತ್ಮವಿಶ್ವಾಸ ನಮ್ಮದಾದರೆ ಕನಿಷ್ಠಪಕ್ಷ ಒಂದು ಬೆಟ್ಟವನ್ನು ಆದರೂ ಏರುತ್ತೇವೆ. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದಾಗ ಸೋಲು ನಮ್ಮ ಬಳಿ ಸುಳಿಯಲು ಹೆದರಿ ವಿಜಯಲಕ್ಷ್ಮಿ ಒಲಿದು ಬರುತ್ತಾಳೆ ಎಂಬ ಆಶಾವಾದದ ,ಆತ್ಮವಿಶ್ವಾಸದ ಜ್ಯೋತಿ ಬೆಳಗುವ ಮುಖೇನ ಸಾಲುಗಳು ಮೂಡಿ ಬಂದಿದೆ.

ಚಿಂತನೆಯ ಮನಸ್ಸು ನಿಮ್ಮ ಮೂಲ

ಆಸ್ತಿ ಆಗಿರಬೇಕು ಆಗ ಜೀವನದಲ್ಲಿ

ಏಳು ಬೀಳುಗಳು ಬಂದ್ರೂ

ದೃಢವಾಗಿ ನಿಲ್ಲಬಹುದು

           – ಅಬ್ದುಲ್ ಕಲಾಂ

ಇವೆಲ್ಲ ಸಾಧ್ಯವಾಗಬೇಕಾದರೆ ಸಾಧಕನೆದೆಯಲ್ಲಿ ಸದಾ ಛಲವಿರಬೇಕು ಎನ್ನುತ್ತಾರೆ. ನಡೆಯುವವನು ಎಡವೋದು ಸಹಜ ಕೂತವನು ಎಡವಲು ಸಾಧ್ಯವೇ,  ಹಾಗೆಯೇ ಪ್ರಯತ್ನ ಮಾಡುವವನು ಸೋಲುತ್ತಾನೆ, ಪ್ರಯತ್ನವನ್ನು ಮಾಡದೇ ಅವನು ಸಾಯುತ್ತಾನೆ .ಇದರಿಂದ ಮರಳಿ ಪ್ರಯತ್ನ ಮಾಡಬೇಕೆಂದು ಕವಿ ಕರೆಯುತ್ತಿದ್ದಾರೆ.

ನೆನೆದು ನಿಂದನೆಗಳ ಆಗದಿರುವ ತತ್ತರ

ಹೇಳಿದವರಿಗೆ

 ಸಾಧನೆಯ ರೂಪದಲ್ಲಿ ಕೊಡು ಉತ್ತರ

 ನಿನ್ನ ನೋಡಿ ಉಂಟಾಗುವಂತೆ ಮತ್ಸರ

 ಧನಾತ್ಮಕ ಚಿಂತನೆಯೆ ಇರಲಿ ಸದಾ

 ಯಶಸ್ಸು ಕಟ್ಟಿಟ್ಟ ಬುತ್ತಿ ಜೀವನದಲ್ಲಿ

ನಿಂದನೆಗಳು ನಮ್ಮನ್ನು ಮುಂದೆ ಕರೆದೊಯ್ಯುವ ಸಾಧನೆಯ ಗಾಲಿಗಳು ಅವುಗಳನ್ನು ಮೆಟ್ಟಿಲು  ಮಾಡಿಕೊಂಡು ಯಶಸ್ಸಿನ ಉತ್ತುಂಗ ಶಿಖರ ಏರಿ ಕೆಳಗೆ ನಿಂತವರು ತಲೆಯೆತ್ತಿ ನಿಮ್ಮನ್ನು ನೋಡಿ ಕುರುಬುವಂತಹ ಮಹತ್ವದ ಕಾರ್ಯ ಮಾಡಬೇಕೆಂದು ಕರೆ ನೀಡಿದ್ದಾರೆ.

ನಿಂದನೆಗೆ ಹೆದರದೆ ತತ್ತರಗೊಳ್ಳದೆ ಅವರ ನಿಂದನೆಗಳಿಗೆ ಸಾಧನೆಯ ಉತ್ತರ ಕೊಡಬೇಕು ವಿನಹ ನಿಂದನೆಗೆ ಹಿಂಜರಿದು ಕೊರಗುತ್ತಾ ಕೂರಬೇಡ ಪಲಾಯನವಾದ ಮಾಡಬೇಡ ಎನ್ನುವ ಕವಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿನ್ನ ನಿಂದಕರಿಗೆ ಮತ್ಸರ ಮೂಡುವಂತೆ ಸಾಧನೆ ಮಾಡಬೇಕು ಎಂದು ಆಶಿಸುತ್ತಾರೆ. ಆಡಿಕೊಳ್ಳುವವರ ಮಾತಿಗೆ ನಕಾರಾತ್ಮಕ ಭಾವ ತೋರಿ ಹಿಂದೆ ಸರಿಯದೆ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ನಾನು ಮಾಡುತ್ತೇನೆ ತೀರುತ್ತೇನೆ ಎಂಬ ಆತ್ಮವಿಶ್ವಾಸದ ಹೆಜ್ಜೆಯಿಟ್ಟಾಗ ವಿಜಯಲಕ್ಷ್ಮಿ ನಿನ್ನರಸಿ ಬರುವಳು ಆ ನಿಟ್ಟಿನಲ್ಲಿ ಗಮನ ಹರಿಸಬೇಕೆಂಬ ಪ್ರೋತ್ಸಾಹಿಸಿದ್ದಾರೆ.

ಒಂದೊಮ್ಮೆ ನೀವು ಸೋತರೆ ಎದೆಗುಂದಬೇಡಿ.

ಸೋಲೆಂದರೆ ಕಲಿಕೆಯ ಮೊದಲ ಪ್ರಯತ್ನ.

 ಕೊನೆ ಎಂದಿಗೂ ಕೊನೆಯಲ್ಲ.

 ಅಂದರೆ ಪ್ರಯತ್ನ ಎಂದಿಗೂ ಸಾಯುವುದಿಲ್ಲ

 ನೀವು ಉತ್ತರವಾಗಿ ಇಲ್ಲ ಎಂದರೆ

 ಅದು ಮುಂದಿನ ಅವಕಾಶವಿದೆ ಎಂದರ್ಥ

ಆದ್ದರಿಂದ ಒಮ್ಮೆ ಸೋತರೆ ಮುಂದಿನ ಗೆಲುವಿಗೆ ಸಿದ್ದರಾಗಿ  ಎಂಬ ವಿವೇಕವಾಣಿಯನ್ನು ಯಾರೂ ಮರೆಯುವಂತಿಲ್ಲ ಎಂಬುದು ಕವಿಯ ಕವಿತಾ  ಸಾರವಾಗಿದೆ.

ಕವಿತೆಯಲ್ಲಿ ನಾ ಕಂಡ  ಕವಿಭಾವ

ಕುಸಿದ ಬಿದ್ದವರನ್ನು ಮೇಲೆತ್ತಿ ನಿಲ್ಲಿಸುವ ಸಾಮರ್ಥ್ಯ ಕವಿಯ ಲೇಖನಿಗಿರುವುದು ಅವರ ಬರಹದಿಂದ ತಿಳಿಯುತ್ತದೆ. ಮುಳುಗುವವನಿಗೆ ಹುಲುಕಡ್ಡಿಯು ಆಸರೆಯಾಗುತ್ತದೆ ಎಂಬುದು ಸುಳ್ಳಲ್ಲ. ಅಂತಹ ತಾಕತ್ತು ಅವರ ಕಾವ್ಯಶಕ್ತಿಗಿದೆ.ಇಡಿ ತುಂಬಾ ಬದುಕಿಗೆ ಭರವಸೆ ತುಂಬುತ್ತಾ ಸಾಗಿರುವ ಕವಿಯ ಜೀವಪರ ಕಾಳಜಿ ಶ್ಲಾಘನೀಯವಾಗಿದೆ.

ಮಾತಿನಿಂದ ಮನುಜನ  ಮೇಲೆ ಆಗುವ ಭೀಕರ ಪರಿಣಾಮ ಕವಿಯನ್ನು ಬಹಳವಾಗಿ ಕಾಡಿದೆ.

ಮಾತಿನಿಂ ನಗೆ ನುಡಿಯು

 ಮಾತಿನಿಂ ಹಗೆ ಕೊಲೆಯು

 ಮಾತಿನಿಂ ಸರ್ವಸಂಪದವು

 ಲೋಕಕೆ ಮಾಣಿಕ್ಯವು

 ಎಂಬ ಸರ್ವಜ್ಞರ ವಚನವನ್ನು ಓದಿದಾಗ ಮಾತಿನ ಮಹಿಮೆ ತಿಳಿಯುತ್ತದೆ. ಇಲ್ಲಿ ಕವಿಗೆ ಮಾತು, ಮಾತಿನಿಂದಾಗುವ ಅನರ್ಥಗಳ ಆಳವಾದ ಅರಿವಿದೆ. ಬಾಯಿಂದ ಹೊರ ಬಿದ್ದ ಮಾತು ಬಿಟ್ಟ ಬಾಣದಂತೆ, ಒಮ್ಮೆ ಚಿಮ್ಮಿದ ಮೇಲೆ ಮತ್ತೆ ಬತ್ತಳಿಕೆ ಸೇರಲಾರದು. ಆದ್ದರಿಂದ ಮಾತನಾಡುವ ಮುನ್ನ ಅದರ ಪರಿಣಾಮಗಳ ಅರಿವಿರಬೇಕು ಎನ್ನುವ ಕವಿ ಎಲ್ಲರಲ್ಲಿಯೂ, ಎಲ್ಲ ಸಂದರ್ಭದಲ್ಲಿ ಅದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದುದರಿಂದ ಕೊಂಡಾಡುವ ಜನರಿಗೆ ಜಗ್ಗದೆ ಬಗ್ಗದೆ ಮುನ್ನಡೆಯುವ ಕರೆ ನೀಡಿದ್ದಾರೆ

ಇವರ ಸಾಹಿತ್ಯ ಮನಸ್ಸಿಗೆ ಹಿತ ನೀಡುವ ಜೊತೆಗೆ ಸಾಂತ್ವನದ ಚೆಲುವೆಯಾಗಿ ಹರಿದಿದೆ. ಅವರ ಕವಿತೆಯಲ್ಲಿ ವೇದನೆಯಿದೆ, ಸಂವೇದನೆಯಿದೆ, ಬದುಕಿನ ಬಗ್ಗೆ ಆಶಾವಾದವಿದೆ, ಸಶಕ್ತವಾದ ಪದಪುಂಜಗಳ ಮೂಲಕ ಭಾವಕ್ಕನುಸಾರವಾಗಿ ಕಾವ್ಯಾಭಿವ್ಯಕ್ತಿ ಮೂಡಿಬಂದಿದೆ. ಭಾವ ಪ್ರಚೋದನೆಗಿಂತ ಬುದ್ಧಿಯ ತರ್ಕದ ಮೂಸೆಯಲ್ಲಿ ಕವಿತೆಗೆ ಜೀವತುಂಬಿದ್ದಾರೆ. ಗಂಭೀರವಾದ ವಿಷಯವನ್ನು ಓದುಗರಿಗೆ ಪ್ರಿಯವಾಗುವ ಶೈಲಿಯಲ್ಲಿ ನಿರೂಪಿಸಿರುವುದು ಹೆಮ್ಮೆಯ ವಿಷಯ. ಇದು ಇವರ ಸಾಹಿತ್ಯಕ ಮನೋಧರ್ಮವನ್ನು ಸೂಚಿಸುತ್ತದೆ.

ಇವರ ಕವಿತೆಯ ಅಭಿವ್ಯಕ್ತಿ ಸರಳ ಸುಂದರವಾಗಿ ಸಿಂಗಾರಗೊಂಡು, ಜನಸಾಮಾನ್ಯರ ಹೃದಯವನ್ನು ತಟ್ಟಿ ಬಡಿದೆಬ್ಬಿಸುವ ಎಚ್ಚರಿಕೆಯ ಗಂಟಾನಾಧವಾಗಿದೆ. ನೊಂದವರ ಬಗ್ಗೆ ಇವರಿಗೆ ಅಪಾರವಾದ ಅನುಕಂಪ, ಪ್ರೀತ್ಯಾಧರಗಳು ಇರುವುದನ್ನು ಈ ಕವಿತೆ ರುಜುವಾತು ಪಡಿಸುತ್ತದೆ. ದಾರ್ಶನಿಕರು ,ಶರಣರ ಸಂದೇಶಗಳ ಹೂಳಹುಗಳಿಗೆ ಕಾವ್ಯದ ಮುತ್ತು ಪೋಣಿಸಿದ್ದಾರೆ. ಕವಿ ನುಡಿಯ ಕಿವಿಮಾತು ಜೀವದನಿಯಲ್ಲಿ ಅನುರಣಿಸಿ ಕಾವ್ಯ ಧಾರೆಯಾಗಿ ಹರಿಯುವ ಮೂಲಕ ಅಮೋಘ ಸಂದೇಶವನ್ನು ಜನತೆಗೆ ನೀಡುತ್ತದೆ.

ಒಟ್ಟಾರೆ ಹೇಳುವುದಾದರೆ ಇಂದಿನ ದಿನಮಾನಗಳಲ್ಲಿ ಮಾನಸಿಕ ತೊಳಲಾಟದಲ್ಲಿ ಬಳಲುತ್ತಾ ದಾರಿ ಕಾಣದೆ ಪರಿತಪಿಸುವ ಜನರಿಗೆ ಇಂತಹ ಸ್ಪೂರ್ತಿದಾಯಕ ಸಾಹಿತ್ಯದ ಅಗತ್ಯತೆ ಇದೆ. ಆ ನಿಟ್ಟಿನಲ್ಲಿ ಕವಿಯ ಒಂದು ಪ್ರಯತ್ನ ಅಭಿನಂದನಾರ್ಹವಾಗಿದೆ.

ಇವರಿಗೆ ಕಾವ್ಯ ಕಸೂತಿಯ ಕಲೆ ಚೆನ್ನಾಗಿ ಒಲಿದಿದೆ .ಹಾಗಾಗಿ ನೋವು, ಹತಾಶೆ ,ನಿರಾಶೆ ,ತ್ಯಕ್ತ ಹೃದಯದ ತಲ್ಲಣಗಳಿಗೆ ಸರಾಗವಾಗಿ ತಮ್ಮ ಕಾವ್ಯದ ಮೂಲಕ ಜೀವತುಂಬಿದ್ದಾರೆ. ವಿಷಯವನ್ನು ಮನಮುಟ್ಟುವಂತೆ ನಿರೂಪಿಸುವ ಇವರ ಜಾಣ್ಮಿಗೊಂದು ನಮನ ಹೇಳಲೇಬೇಕು. ಮತ್ತಷ್ಟು ಮಗದಷ್ಟು ಸಮಾಜಮುಖಿ ಸಾಹಿತ್ಯ ಇವರಿಂದ ರಚಿತವಾಗಿ ಕತ್ತಲೆಯಲ್ಲಿರುವವರಿಗೆ ಬೆಳಕಿನ ಪ್ರಭೆಯನ್ನು ಬೀರಲಿ ಎಂದು ಹಾರೈಸೋಣ.

ಪ್ರೀತಿಯ ಓದುಗರೆ

ನಿಮ್ಮ ಓದುವ ಹಂಬಲವನ್ನು ಕಾಪಿಟ್ಟುಕೊಂಡು ಹೊಸ ಓದಿಗೆ ನಿರೀಕ್ಷಿಸುತ್ತಿರಿ. ಮುಂದಿನ ವಾರ ಮತ್ತೊಂದು ಕವಿ ಕಾವ್ಯ ಪರಿಚಯದೊಂದಿಗೆ ನಿಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೂ ಎಲ್ಲರಿಗೂ ನನ್ನ ಹೃನ್ಮನದ ನಮನಗಳು.


ಅನುಸೂಯ ಯತೀಶ್




ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ




admin

Post navigation
ಅನಾಥರಲ್ಲ
Next Post
Leave a Reply

Related Posts

ಅಂಕಣ
admin



ಅಂಕಣ ನೆನಪಿನ ದೋಣಿಯಲಿ
admin



ಅಂಕಣ ಸಾಧಕಿಯರ ಯಶೋಗಾಥೆ
admin


Search for:
ಸಂಪಾದಕರು: ಕು.ಸ.ಮಧುಸೂದನರಂಗೇನಹಳ್ಳಿ

ವಾಟ್ಸಪ್:
7019100351
email: sangaatipatrike@gmail.com
ಗೌರವ ಸಂಪಾದಕರು: ಹೊನ್ನಾಳಿ ಶಿವಕುಮಾರ್

ಕಾರ್ಯನಿರ್ವಾಹಕ ಸಂಪಾದಕರು: ನಾಗರಾಜ ಹರಪನಹಳ್ಳಿ

ವಾಟ್ಸಪ್:
9448408633
February 2022
M
T
W
T
F
S
S
 
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
 
« Jan    
ವಿಶೇಷ ಸೂಚನೆ
copy rights resrved(ಇಲ್ಲಿನ   ಎಲ್ಲ ಬರಹಗಳೂ  ಕೃತಿಸ್ವಾಮ್ಯಕ್ಕೆ ಒಳಪಟ್ಟಿರುತ್ತವೆ.) ಈಬರಹಗಳ  ಎಲ್ಲಾ ಅಭಿಪ್ರಾಯಗಳೂ ಲೇಖಕರ ವೈಯುಕ್ತಿಕ ಅಭಿಪ್ರಾಯಗಳಾಗಿದ್ದು,ಸಂಗಾತಿ  ಬ್ಲಾಗ್ ಅದಕ್ಕೆ ಹೊಣೆಯಾಗಿರುವುದಿಲ್ಲ

One thought on “

  1. ಯುವ, ಉತ್ಸಾಹಿ, ಉದಯೋನ್ಮುಖ, ಪ್ರತಿಭಾವಂತ ಕವಿ ಮಿತ್ರ ಶ್ರೀ ಗಂಗಾಧರ ಕಂಬಿಮಠ ಅವರು ತಮ್ಮ ವಿಶಿಷ್ಟ ಹಾಗೂ ಆಕರ್ಷಕ ಶೈಲಿಯಲ್ಲಿ ಕವನ ವಾಚನ ಮಾಡಿ ಕವಿಮನಸ್ಸುಗಳನ್ನು ಗೆದ್ದಿರುವುದು ನಾವೆಲ್ಲಾ ನೋಡಿದ್ದೇವೆ,ಕೇಳಿದ್ದೇವೆ. ಇಂತಹವರ ಒಂದು ಅರ್ಥಪೂರ್ಣ ಕವನವನ್ನು ಹತ್ತಾರು ಬಾರಿ ಓದಿ ಆಳ ಅಗಲವನ್ನಳಿದು, ಆಳಕ್ಕಿಳಿದು ತಳಬುಡವನ್ನು ಸೋಸಿ ಕವಿತೆಯ ಒಳ ಆಶಯವನ್ನು ಎಲ್ಲರ ಮನಮುಟ್ಟುವಂತೆ ವಿವರಿಸಿದ್ದಾರೆ, ವಿಶ್ಲೇಷಣೆ ಮಾಡಿದ್ದಾರೆ ಸಹೋದರಿ ಶ್ರೀಮತಿ ಅನುಸೂಯ ಯತೀಶ್ ಅವರು. ಕನ್ನಡ ಕಾವ್ಯ ವಿಮರ್ಶೆ, ವಿಶ್ಲೇಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡು ನೂರಾರು ಹೊಸ ಪುಸ್ತಕ, ಪ್ರತಿಭೆ ಗಳನ್ನು ಪರಿಚಯಿಸುವಲ್ಲಿ ಯಶಸ್ಸು ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ. ಇವರ ವಿಶ್ಲೇಷಣೆ ಓದಿದ ನಂತರ ಕಂಬಿಮಠ ಅವರ ಕವಿತೆ … ಕಬ್ಬಿನ ಹಾಲಾಯಿತು, ಸುಲಿದ ಬಾಳೆಹಣ್ಣಾಯಿತು, ಎಳೆನೀರುಳ್ಳ ತೆಂಗು ಕತ್ತರಿಸಿ ಗ್ಲಾಸಿಗೆ ಸುರಿದಂತಾಯಿತು.. ಎತ್ತರದ ಗೋಡೆಗೆ ಏಣಿಯಾಯಿತು. ಹತ್ತಿರವಲ್ಲದ ಜಲದಾರಿಗೆ ದೋಣಿಯಾಯಿತು. ಒಟ್ಟಿನಲ್ಲಿ ಕವಿತೆ ರಸಗವಳವಾಯಿತು ವಿಶಿಷ್ಟ ವಿಶ್ಲೇಷಣೆಯಿಂದ. ಧನ್ಯವಾದಗಳು ವಿಶ್ಲೇಷಕಿ ಯವರಿಗೆ . ಅಭಿನಂದನೆಗಳು ಗೆಳೆಯ ಕಂಬಿಮಠ ಅವರಿಗೆ.

Leave a Reply

Back To Top