ಅಂಕಣ ಸಂಗಾತಿ

ನೆನಪಿನದೋಣಿಯಲಿ

ಬಾಲ್ಯದ ಆಟ ಆ ಹುಡುಗಾಟ 

Image of Young Children Playing Board Games In Rural Indian  Villages-US978202-Picxy

ಬಾಲ್ಯವೆಂದರೆ ಆಟ. ಆಟದ ಮೂಲಕ ಪಾಠ. ಆಟವಿರದ ಬಾಲ್ಯ  ನಮ್ಮ ತಲೆಮಾರಿನವರಂತೂ ನೆನಸಿಕೊಳ್ಳಲೂ ಸಾಧ್ಯವಿಲ್ಲ .ಶಾಲೆಗೆ ಹೋಗಿ ಬಂದಮೇಲೆ ಕತ್ತಲಾಗುವ ತನಕವೂ ಆಟವೇ… ನಂತರ ಕೈಕಾಲು ತೊಳೆದು ದೇವರ ಸ್ತೋತ್ರ ಹೇಳಿ ಒಂದಷ್ಟು ಹೊತ್ತು ಓದಿ  ಊಟ 9 ಗಂಟೆಗೆಲ್ಲಾ ಮಲಗುವುದು ಅಂದಿನ ನಮ್ಮ ದಿನಚರಿ.ತೀರಾ ಮೊದಲ ಅರ್ಧವಾರ್ಷಿಕ ವಾರ್ಷಿಕ ಪರೀಕ್ಷೆಗಳ ಹಿಂದಿನ ದಿನವಷ್ಟೇ ಆಟಕ್ಕೆ ಬಿಡುವು.ಇನ್ನು ದಸರಾ ಕ್ರಿಸ್ಮಸ್ ಹಾಗೂ ಬೇಸಿಗೆ ರಜೆಗಳಲ್ಲೆಲ್ಲಾ ಬರಿ ಆಟವೇ. ಒಳಾಂಗಣ ಹೊರಾಂಗಣ ಆಟಗಳಿಗೆ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಬೀದಿಯ ಮಕ್ಕಳೆಲ್ಲ ಸೇರಿ ಆಡುತ್ತಿದ್ದುದು.

ಹೊರಾಂಗಣ ಆಟಗಳ ಆಗ ನಾವು ಆಡುತ್ತಿದ್ದ ಆಟಗಳೆಂದರೆ ಕುಂಟೆಬಿಲ್ಲೆ, ಲಗೋರಿ, ಚಾರ್ ಪತ್ತರ್,  ಪಾರ್ಟಿ ಕುಂಟಾಟ,ಐಸ್ ಪೈಸ್ ಕಣ್ಣಮುಚ್ಚಾಲೆ, ಮಳ್ಳಾ ಬಂದು ಗಿಲ್ಲಿ ಪೋಪೋ

ಕಡ್ಡಿಯಾಟ ಇನ್ನೂ ಮುಂತಾದುವುಗಳು.

ಕುಂಟೆಬಿಲ್ಲೆ ಹೆಸರೇ ಹೇಳುವಂತೆ ಮನೆಯನ್ನು ಬರೆದುಕೊಂಡು ಬಿಲ್ಲೆಗಳನ್ನು ಕಾಲಿನಿಂದ ಒದೆಯುತ್ತ ಒಂಟಿಕಾಲಿನಲ್ಲಿ ಆಡುವ ಆಟ ಇದರಲ್ಲೂ ಹತ್ತು ಚೌಕದ ಮನೆಗಳ ಮತ್ತೆ ಬೇರೆ ರೀತಿಯ ಮನೆಗಳನ್ನು ಹಾಕಿಕೊಂಡು 2ತರಹ ಆಡುತ್ತಿದ್ದೆವು . ಕಾಲಿಗೆ ಒಳ್ಳೆ ವ್ಯಾಯಾಮ ಚುರುಕು ಚಟುವಟಿಕೆಗಳ ಅನಾವರಣಕ್ಕೆ ಅವಕಾಶ .ಕಾಲಿಗೆ ಕಸುವನ್ನು ತಲೆಗೆ ಕಸರತ್ತನ್ನು ಕೊಡುತ್ತಿತ್ತು ಗೆಳತಿಯರ ತಪ್ಪನ್ನು ಕಂಡು ಹಿಡಿಯುವ ಹೊಂದಿಕೊಂಡು ಹೋಗುವ ಬುದ್ಧಿಯನ್ನು ಕಲಿಸುತ್ತಿತ್ತು .

ಲಗೋರಿ ಎಲ್ಲರಿಗೂ ಗೊತ್ತಿರುವಂತೆ 7ಅಥವಾ 5ಕಲ್ಲುಗಳನ್ನು ಒಂದರ ಮೇಲೊಂದು ಪೇರಿಸಿಟ್ಟು ಹೊಡೆದು ಬೀಳಿಸುವುದು. ಔಟಾಗಿರುವನ ಕೈಯಲ್ಲಿ ಚೆಂಡು ಇರುತ್ತದೆ . ಉಳಿದವರು ಅದನ್ನು  ಬಾಲಿನ ಏಟಿಗೆ ಗುರಿಯಾಗದೆ ಜೋಡಿಸುವ ಕೆಲಸ ಮಾಡಬೇಕು ಜೋಡಿಸಿದರೆ ಔಟಾದ ವನ್ನೇ ಮತ್ತೆ ಔಟು ಇಲ್ಲ ಬಾಲಿನ ಏಟು ತಿಂದವರು ಔಟ್.ಎಷ್ಟೋ ಬಾರಿ ಬಾಲು ಬೆನ್ನಿಗೆ ಚುರ್ರೆನ್ನುವಂತೆ ತಾಕಿ 2_ 3ದಿನ ಮುಟ್ಟಿನೋಡಿಕೊಳ್ಳುವಂತೆಯೂ ಆಗುತ್ತಿತ್ತು.  ಚಾರ್ ಪತ್ತರ್ 4ಕಲ್ಲುಗಳನ್ನು 4ಮನೆಗೆ ಬರುವಂತೆ ಔಟಾಗದೆ ಕೈಗೆ ಸಿಕ್ಕದಂತೆ ಚಾತುರ್ಯದಿಂದ ನಿಭಾಯಿಸುವ ಆಟ .   

ಪಾರ್ಟಿ ಕುಂಟಾಟದಲ್ಲಿ 2ತಂಡ ಮಾಡಿಕೊಂಡು 1ತಂಡದ ಒಬ್ಬೊಬ್ಬ ಸದಸ್ಯರು ಕುಂಟುತ್ತಾ ಉಳಿದ ಎದುರೂ ಪಾರ್ಟಿಯ ತಂಡದವರನ್ನು ಹಿಡಿಯುವುದು ಹಾಗೆ ಹಿಡಿಯುವಾಗ ಕಾಲು ಬಿಟ್ಟರೆ ಎದುರು ಪಾರ್ಟಿಗೆ ಅಂಕ ಕುಂಟುತ್ತಾ ಎದುರು ಪಾರ್ಟಿಯವರನ್ನು ಹಿಡಿದರೆ ಈ ಪಾರ್ಟಿಗೆ ಅಂಕ .ಇದಕ್ಕೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು 1ಹಾಡು ಹೇಳುತ್ತಾ ಆಯ್ಕೆ ಮಾಡಿಕೊಳ್ಳುತ್ತಿದ್ದುದು ವಿಶೇಷ .

ವಿಮಲ ಸೆಂಟು ನಾಶಮೀ ನಾಶಮಿ 

ವಿಮಲ ಸೆಂಟು ಬಿದರಮಿ ಬಿದರಮಿ  

ಆದಿ ಕಮಲ ಸುಲೋಚನಾ ಸುಲೋಚನಾ ನಿನಗೆ ಯಾರುಬೇಕಮಾ   

ಎಂದು ಹೇಳಿ 

ನನಗೆ ಇಂತಹವರು ಬೇಕೆಂದು ಪಾರ್ಟಿಯ ನಾಯಕರುಗಳು ಆಯ್ಕೆ ಮಾಡಿಕೊಳ್ಳುತ್ತಿದ್ದುದು ಉಳಿದವರೆಲ್ಲ ಕೋರಸ್ ನಲ್ಲಿ ಇದನ್ನು ಕೂಗುತ್ತಿದ್ದುದು 1ರೀತಿಯ ಮಜವಾಗಿರುತ್ತಿತ್ತು.

Pin on people...

ಐಸ್ ಪೈಸ್ ಎಲ್ಲರಿಗೂ ಗೊತ್ತಿರುವಂತೆ ಒಬ್ಬನು ಕಣ್ಣುಮುಚ್ಚಿ ನೂರರ ತನಕ ಎಣಿಸುವುದರಲ್ಲಿ ಸುತ್ತಮುತ್ತಲ ತಾಣಗಳಲ್ಲಿ ಮಿಕ್ಕವರು ಅಡಗುತ್ತಿದ್ದರು ಅವರನ್ನು ಕಂಡು ಹಿಡಿದು ಪತ್ತೆ ಹಚ್ಚಿದರೆ ಹಾಗೆ ಸಿಕ್ಕಿಕೊಂಡವರು ಔಟ್ ಇಲ್ಲದಿದ್ದರೆ ಒಬ್ಬರನ್ನು ಹಿಡಿಯಲಾಗದಿದ್ದರೆ ಅವನೇ ಮತ್ತೆ ಔಟ್ .  ಕೆಲವು ಬಾರಿ ಆಗದ ಗೆಳೆಯರು ಮತ್ತೆಮತ್ತೆ ಔಟಾಗಿ ಅಳುತ್ತಿದ್ದುದೂ ಉಂಟು .        

ಕಣ್ಣಾಮುಚ್ಚಾಲೆಯಲ್ಲಿ ಒಬ್ಬರು ಅಜ್ಜಿಯಾಗಿ ಕಣ್ಣುಮುಚ್ಚಿ ಬೇರೆಯವರು  ಅಡಗಿಕೊಳ್ಳುವ ತನಕ ಔಟಾದವರ ಕಣ್ಣಾ ಮುಚ್ಚೇ ಕಾಡೇ ಗೂಡೇ ಉದ್ದಿನ ಮೂಟೆ ಉರುಳೇ ಹೋಯ್ತು 

ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ ನಿಮ್ಮಯ ಹಕ್ಕಿ ಎಂದು ಹಾಡುತ್ತಾ ಕೈ ಬಿಟ್ಟರೆ ಉಳಿದವರು ಅಡಗಿಕೊಂಡಿರುವುದನ್ನು ಹುಡುಕುವ ಕೆಲಸ.

ಮೆಲ್ಲಾ ಬಂದು ಗಿಳ್ಳಿ ಪೋ ಪೋದಲ್ಲೂ ಅಷ್ಟೇ ಒಬ್ಬರು ಅಜ್ಜಿಯಾಗಿ ಕುಳಿತಿರುತ್ತಾರೆ. ಇನ್ನೊಬ್ಬರು ಔಟಾದವರ ಕಣ್ಣು ಮುಚ್ಚಿರುತ್ತಾರೆ ಗುಂಪಿನಲ್ಲಿ ನಿಂತಿರುವ ಇತರರು ಒಬ್ಬೊಬ್ಬರೇ ಬಂದು ಔಟಾದವರ ಮೂಗನ್ನು ಗಿಲ್ಲಿ ಮತ್ತೆ ಗುಂಪನ್ನು ಸೇರಿಕೊಳ್ಳುತ್ತಾರೆ ಗಿಲ್ಲಿಸಿಕೊಂಡವರು ಯಾರು ಬಂದು ಹೋದದ್ದು ಎಂದು ಸರಿಯಾಗಿ ಹೇಳಬೇಕು .ಒಬ್ಬೊಬ್ಬರಿಗೆ ಐದೈದು ಅವಕಾಶ ಯಾರು ಹೆಚ್ಚು ಸರಿಯಾಗಿ ಹೇಳುತ್ತಾರೋ ಅವರು ಗೆದ್ದ ಹಾಗೆ.  ಏಕಾಗ್ರತೆ ಹಾಗೂ ಸೂಕ್ಷ್ಮ ದೃಷ್ಟಿ ಅವಲೋಕನಗಳನ್ನು ಮಕ್ಕಳಲ್ಲಿ ಬೆಳೆಸುವ 1ಕಲೆ ಇದು . ಬರುವವರ ಬಟ್ಟೆಯ ಸದ್ದು ಬಳೆ ಗೆಜ್ಜೆಗಳ ಸದ್ದು ಮುಡಿದ ಹೂವಿನ ವಾಸನೆ ಕೈಯ ವಾಸನೆ ಇವುಗಳನ್ನು ಸೂಕ್ಷ್ಮವಾಗಿ ಗಮನ ಇಟ್ಟುಕೊಂಡರೆ ಸಾಕು ಬಂದು ಗಿಲ್ಲಿ ಹೋದವರು ಯಾರೆಂದು ತಿಳಿದು ಬಿಡುತ್ತಿತ್ತು 

ಕಡ್ಡಿ ಆಟದಲ್ಲೂ ಹಾಗೆ ಒಬ್ಬರು ಔಟಾಗಿರುತ್ತಾರೆ ಅವರು ಕಡ್ಡಿಯನ್ನು 2ಕೈಲಿ ಹಿಡಿದು ನಿಂತಾಗ ಇನ್ನು ಉಳಿದವರು ದೊಡ್ಡ ದೊಡ್ಡ ಕಡ್ಡಿಗಳನ್ನು ಹಿಡಿದುಕೊಂಡು ಅವರಿಂದ ಎಗರಿಸಿದ ಕಡ್ಡಿಯನ್ನು ತಳ್ಳುತ್ತಾ ಹೋಗುವುದು . ಹಿಡಿಯಲು ಬಂದಾಗ ನಮ್ಮ ಕಡ್ಡಿ ಕಲ್ಲಿನ ಮೇಲೆ ಇದ್ದರೆ ನಾವು  ಇಲ್ಲದಿದ್ದರೆ ನಾವು ಔಟ್ ಮತ್ತೆ ಆಟ ಮುಂದುವರಿಯುತ್ತದೆ . ಹೀಗೆ ಕಡ್ಡಿಯನ್ನು ತಳ್ಳುತ್ತಾ ತಳ್ಳುತ್ತಾ ಎಷ್ಟೋ ದೂರ ಹೋಗಿ ಬಿಟ್ಟಿರುತ್ತಿದ್ದೆವು ಆಮೇಲೆ ಅಮ್ಮನ ಕೈಲಿ ಬೈಸಿಕೊಳ್ಳುತ್ತಿದ್ದೆವು. ಹಗ್ಗಗಳನ್ನು ಇಟ್ಟುಕೊಂಡು ಒಬ್ಬರೇ ಆಡುವ ಇಬ್ಬರೂ ಆಡುವ ಹಾಗೂ ಗುಂಪಾಗಿ ಆಡುವ ಹಗ್ಗದಾಟ ಗಳನ್ನು ಸಹ ಆಡುತ್ತಿದ್ದೆವು ಕೆರೆ_ದಡ ಅಂತೂ ಸಾಮಾನ್ಯ .

ಇದಂತೂ ಶುದ್ಧ ಏಕಾಗ್ರತೆಯ ಪರೀಕ್ಷೆ .

ಗೋಲಿ ಚಿನ್ನಿ ದಾಂಡು ಹುಡುಗರ ಆಟವಾದರೂ ಅವುಗಳನ್ನೂ ಆಡಿದ್ದ ಗಂಡುಬೀರಿಯರು. 

ಜಾರುಬಂಡೆಯಂತೂ ಶಾಲೆಯಲ್ಲಿ ಅದೆಷ್ಟು ಬಾರಿ ಆಡಿದ್ದೆವೋ…ಪಾರ್ಕುಗಳಲ್ಲಿ ಬೃಂದಾವನ ಗಾರ್ಡನ್ಸ್ ಮತ್ತು ಝೂ ಗಾರ್ಡನ್ ಗೆ ಹೋದಾಗ ಎತ್ತರೆತ್ತರದ ಜಾರುಬಂಡೆಗಳನ್ನು ಆಡುವ ಖುಷಿ .

ಉಯ್ಯಾಲೆಯೂ ಹಾಗೆ ಪಾರ್ಕಿಗೆ ಹೋದಾಗ ಆಡುವುದು. ಒಮ್ಮೊಮ್ಮೆ ನಮ್ಮ ಮನೆಯ ಸೀಬೆಗಿಡಕ್ಕೆ ಹಗ್ಗ ಕಟ್ಟಿ ಅದರ ಮೇಲೊಂದು ಹಳೆಯ ಬೆಡ್ ಶೀಟ್ ಹಾಸಿ ತೂಗಿ ಕೊಳ್ಳುತ್ತಿದ್ದೆವು .ಸಾಕಷ್ಟು ಧಡೂತಿ ಇದ್ದ ನಾನು ಕೂತಾಗ ಕೊಂಬೆ ಮುರಿದು ಬಿದ್ದರೆ ಅದು ನನ್ನ ತಪ್ಪೆ?  ಕೊಂಬೆಯ ತುಂಬಾ ಹೀಚುಕಾಯಿ ಗಳಿದ್ದವೆಂದು ಅಮ್ಮನ ಕೈಲಿ ಬೈಸಿಕೊಂಡದ್ದು ಇನ್ನೂ ಹಸಿರಾಗಿದೆ . ಅದರಲ್ಲೂ ಈಗ ಪೋರ್ಟಿಕೋನಲ್ಲಿ ಉಯ್ಯಾಲೆ ಹಾಕಿಸಿಕೊಂಡು ಬಿಡುವಾದಾಗ ಅದರ ಮೇಲೆ ಕೂತಾಗಲೆಲ್ಲ ಅಂದಿನ ಕಚ್ಚಾ ಉಯ್ಯಾಲೆಯ ನೆನಪು ಬಾರದೆ ಇರುವುದೇ ಇಲ್ಲ.

ಮಳೆ ಬೀಳುತ್ತಿದ್ದಾಗ ಇಲ್ಲ ಮಧ್ಯಾಹ್ನದ ಉರಿಬಿಸಿಲಿನಲ್ಲಿ ಹೊರಗಡೆ ಆಡಲು ಬಿಡುತ್ತಿರಲಿಲ್ಲ. ಆಗೆಲ್ಲ ಒಳಾಂಗಣ ಆಟಗಳ ಸುಗ್ಗಿ ಚೌಕಾಬಾರ ಪಗಡೆ ಚೆಸ್  ಇವೆಲ್ಲ ಎಲ್ಲರಿಗೂ ತಿಳಿದದ್ದೇ ಆಗಿದೆ. ಅದರ ಜೊತೆಗೆ ಪರಮಪದ ಸೋಪಾನ ಪಟ ಆಡುತ್ತಿದ್ದೆವು. ವಿಶಿಷ್ಟವಾದುದೆಂದರೆ ಬಳೆಗಾಜಿನ ಆಟ ಕಲ್ಲಾಟ ಮತ್ತು ಕೈಮೇಲೆ ಕವಡೆ ಅಥವಾ ಕಾಶೀಕವಡೆ ಅನ್ನುತಿದ್ವಿ .  ಒಡೆದ ಗಾಜಿನ ಚೂರು ಗಳನ್ನೆಲ್ಲ ಚುಚ್ಚದಂತೆ ತುದಿ ಮೊಂಡು ಮಾಡಿ ಅದನ್ನು ಕೈ ಮೇಲೆ ಹಾಕಿಕೊಂಡು ಒಂದೇ 1ಗಾಜಿನ ತುಂಡನ್ನು ತೋರುಬೆರಳು ಮತ್ತು ಮಧ್ಯದ ಬೆರಳುಗಳ ಮಧ್ಯೆ ಸಿಕ್ಕಿಸಿಕೊಂಡು ಬೇರೆ ಗಾಜುಗಳಿಗೆ ತಗಲದಂತೆ ಕೆಳಗೆ ಬಿದ್ದ ಗಾಜುಗಳನ್ನು ಆರಿಸುವುದು .ತಗಲಿಸಿದಾಗ ನಮ್ಮ ಛಾನ್ಸ್ ಮುಗಿಯಿತು. ಹಾಗೆ ಎಷ್ಟು ಜನ ಆಡುತ್ತಿದ್ದೆವೋ ಎಲ್ಲರದೂ ಮುಗಿದ ನಂತರ 

ಮತ್ತೆ ಅವರವರ ಬಳಿಯಿದ್ದ ಗಾಜುಗಳನ್ನು ಹಾಕಿ ಮತ್ತೆ ಆಟ ಮುಂದುವರಿಯುತ್ತಿತ್ತು . ಕಲ್ಲಾಟವು ಅಷ್ಟೆ .ಕೆಳಗೆ ಕಲ್ಲುಗಳನ್ನು ಹಾಸಿ ಮೇಲೆ 1ಕಲ್ಲು ಎಸೆದು  ಕೆಳಗಿರುವ ಕಲ್ಲನ್ನು ಎತ್ತಿಕೊಂಡು ಅಷ್ಟರೊಳಗೆ ಮೇಲೆ ಎಸೆದ ಕಲ್ಲನ್ನು ಹಿಡಿದು 

ಕೊಳ್ಳುವುದು.  ಹೀಗೆ ಎಷ್ಟೋ ತರಹ ಹಾಡಿ ಮುಗಿಸಿದ ಮೇಲೆ 1 ಗಿಚ್ಚಿ ಎಂದು. ಕವಡೆಯ ಕವಡೆಗಳನ್ನು ಉಪಯೋಗಿಸಿಯೂ ಹೀಗೆ ಆಡುವುದಕ್ಕೆ  ಕೈಮೇಲೆ ಕಾಶಿ ಎನ್ನುತ್ತಿದ್ದೆವು . 

ನದಿ ದಡ ಗಳಿಗೆ ಅಥವಾ ಮರಳು ಹಾಕಿದ ಕಡೆ ಹೋಗಿ ನುಣುಪಾದ ಕಲ್ಲುಗಳನ್ನು ಇದಕ್ಕೆ ಆಚರಿಸಿಕೊಳ್ಳುತ್ತಿದ್ದೆವು ಅಲ್ಲದೆ ಜಲ್ಲಿಕಲ್ಲುಗಳನ್ನು ಬಂಡೆಯ ಮೇಲೆ ಉಜ್ಜಿ ಉಜ್ಜಿ ಗುಂಡಗೆ ಮಾಡಿಕೊಂಡು ಅವುಗಳನ್ನೂ ಕಲ್ಲಾಟಕ್ಕೆ ಉಪಯೋಗಿಸುತ್ತಿದ್ದೆವು . ಚೀಟಿಗಳನ್ನು ಬರೆದು ಆಯುವ ರಾಜಾರಾಣಿ ಕಳ್ಳ ಫುಲ್ ಮಂತ್ರಿ ಕಳ್ಳಾಪೋಲಿಸ್ ಆಟ, 1ಅಕ್ಷರವನ್ನು ಇಟ್ಟುಕೊಂಡು ಅದರಲ್ಲಿ ಬರುವ ಹೆಸರು ಊರಿನ ಹೆಸರು ಹಣ್ಣು ತಿಂಡಿ ಊರು ಇವುಗಳನ್ನು ಬರೆದು ಯಾರು ಹೆಚ್ಚು ಬರೆದಿರುತ್ತಾರೋ ಅವರಿಗೆ ಹೆಚ್ಚು ಅಂಕ ಎಂದು ಆಡುವ ಆಟ ಇದೆಲ್ಲಾ ಬುದ್ಧಿಮತ್ತೆಗೆ ಒಳ್ಳೆಯ ಸವಾಲನ್ನು ಒಡ್ಡುತ್ತಿದ್ದವು.

ಇನ್ನೂ ಬೀದಿಯಲ್ಲಿ ಅಥವಾ ಸುತ್ತಮುತ್ತ ಯಾವುದಾದರೂ ಮನೆ ಕಟ್ಟುವ ಕೆಲಸ ಆರಂಭವಾಗಿ ಮರಳು ರಾಶಿ ಹಾಕಿದರೆ ಅದರಲ್ಲಿ ಕಪ್ಪೆಗೂಡು ಕಟ್ಟುವುದು ಮತ್ತೆ ಇನ್ನೊಂದು ತರಹ ಬಳೆಗಾಜಿನ ಆಟ ಎಲ್ಲಾ ನಡೆಯುತ್ತಿತ್ತು . ಕೇರಂ ಬೋರ್ಡ್ ತೆಗೆದುಕೊಂಡ ಮೇಲಂತೂ ಅದು ಬಹಳ ಪ್ರಿಯವಾದ ಆಟವಾಗಿತ್ತು ಅಣ್ಣಾ ಹಾಗೂ ನಾವು ಮೂವರು ಸೋದರಿಯರು ಕೆಲವೊಮ್ಮೆ ಅಮ್ಮ ಸೇರಿ ರಾತ್ರಿ ಹತ್ತು ಗಂಟೆಯಾದರೂ (ಆಗ ಅದೇ ಲೇಟ್) ಕೇರಂ ಆಡುತ್ತಿದ್ದ ನೆನಪು ಈಗಲೂ ಕಾಡುತ್ತದೆ ಮೂಲೆಯಲ್ಲಿ ಒರಗಿಸಿದ್ದ ಕೇರಂಬೋರ್ಡ್ ಈಗ ನನ್ನ ಮೇಲೆ ಪ್ರೀತಿ ಇಲ್ಲವಾ ಎಂದು ಅಣಕಿಸುತ್ತಿದೆ. ಅಪ್ಪ ನಮಗೆ ಇಸ್ಪೀಟ್ ಆಟವನ್ನು ಕಲಿಸಿದ್ದರು. ಅದರಲ್ಲಿನ ಟ್ರಂಪ್ ಕಾರ್ಡ್ಎಂಬ ಆಟ ತಲೆಗೆ ಕೆಲಸವನ್ನು ಕೊಟ್ಟು ಬುದ್ಧಿವಂತಿಕೆಯನ್ನು ಬೇಡುತ್ತಿತ್ತು .ಅದನ್ನು ಮಾತ್ರ ಆಡಲು ಬಿಡುತ್ತಿದ್ದರು. ಕೆಲವೊಮ್ಮೆ ನಾವು ರಮ್ಮಿ ಸಹ ಆಡುತ್ತಿದ್ದೆವು  

ಶಾಲೆಗೂ ಅಷ್ಟೇ ಬೇಗ ಹೋಗಿ ಅಲ್ಲಿ ಸಹಪಾಠಿಗಳೊಂದಿಗೆ ಆಟ. ಮ್ಯಾಚ್ಗಳು ಇದ್ದಾಗ ತಂಡದಲ್ಲಿದ್ದ ನಾವು ಥ್ರೋಬಾಲ್ ಕೊಕ್ಕೊ ಟೆನಿಕಾಯ್ಟ್ ಗಳ ಅಭ್ಯಾಸ ಮಾಡುತ್ತಿದ್ದೆವು .

ಅಂದು ನಾನು ನನ್ನ  ತಂಗಿಯರಾದ ಛಾಯಾ ವೈಶಾಲಿ ಜೊತೆಗೆ ಆಟಕ್ಕೆ ಸೇರಿಕೊಳ್ಳುತ್ತಿದ್ದ ಎದುರುಮನೆಯ ಹರ್ಷ ಅವನ ತಮ್ಮಂದಿರು, ಆಶಾ ಅವಳ ತಂಗಿಯರು, ಸತ್ಯು ಮತ್ತು ಅವಳ ತಮ್ಮಂದಿರು ನಮ್ಮದೇ ಬೀದಿಯ ಉಮಾ ಆಶಾ ಅರುಣ್ ಸೋದರರು ಎಲ್ಲರಿಗೂ ನನ್ನ ಬಾಲ್ಯದ ನೆನಪುಗಳ ತುಣುಕುಗಳಾಗಿ ಉಳಿದಿರುವುದಕ್ಕೆ ಸುಂದರ ಬಾಲ್ಯಕ್ಕೆ ಸಹಚರರಾದದ್ದಕ್ಕೆ  ಈ ಮೂಲಕ ಧನ್ಯವಾದ ತಿಳಿಸುತ್ತೇನೆ .

ಇನ್ನೂ ಯಾವ ಯಾವ ಆಟಗಳನ್ನೋ ಆಡುತ್ತಿದ್ದೆವು.  ನೆನಪಿಲ್ಲುಳಿದಿರುವುದು ಇಷ್ಟೇ. ಆದರೂ ಅಂದಿನ ಆ ಆಟಗಳ ದೃಶ್ಯ ಇಂದಿಗೂ ಕಣ್ಣಮುಂದೆ ಬರುತ್ತದೆ .ದೇಹಕ್ಕೆ ಒಳ್ಳೆಯ ವ್ಯಾಯಾಮವನ್ನು ಕೊಡುವುದಷ್ಟೇ ಅಲ್ಲದೆ ಮಿಕ್ಕವರ ಜೊತೆ ಹೊಂದಿ ಬಾಳುವ ಬುದ್ಧಿಯನ್ನು ಕಲಿಸಿಕೊಡುತ್ತಿತ್ತು. ಸೋಲನ್ನು ಸ್ವೀಕರಿಸುವ ಮನೋಭಾವ ಬೆಳೆಸುತ್ತಿತ್ತು. 

ಸಹಕಾರ ಸಾಂಘಿಕ ಸ್ವಭಾವಗಳನ್ನು ಬೆಳೆಸಿ ಗುಂಪಿಗಾಗಿ ನಾನು ಗುಂಪು ಮೊದಲು ಮುಖ್ಯ ಎನ್ನುವ ಸಮಷ್ಟಿಯ ಭಾವ ಬೆಳೆಸುತ್ತಿತ್ತು. ಇದರಿಂದಲೇ ಹತಾಶೆ, ಬೇಗ ಖಿನ್ನರಾಗುವ ಸ್ವಭಾವಗಳು ನಮ್ಮ ವಯೋಮಾನದವರಲ್ಲಿ ಕಡಿಮೆ. ಏಕಾಂತ ಎನ್ನುವುದು ನಮಗೆ ತಿಳಿದೇ ಇರಲಿಲ್ಲ .ಏಕಾಂಗಿತನ ಎಂದಿಗೂ ಕಾಡಲೇ ಇಲ್ಲ.

ಸ್ವಚ್ಚಂದವಾಗಿ ಸ್ವತಂತ್ರ್ಯವಾಗಿ ನಮ್ಮ ಹಾಗೆ ಆಡುವ ಭಾಗ್ಯ ಈಗ ಮಕ್ಕಳಿಗೆ ಇಲ್ಲವೇ ಇಲ್ಲ. ಅಕ್ಕಪಕ್ಕದವರಲ್ಲೂ ಹೆಚ್ಚು ಬೆರೆಯದ ಕಾರಣ ಅಪ್ಪ ಅಮ್ಮಂದಿರ ಜೊತೆಗೇ ಆಡಬೇಕಾಗುತ್ತದೆ. .ಒಂದೇ ವಯೋಮಾನದ ಮಕ್ಕಳು ಬೆರೆತು ಆಡುವಾಗ ಆಗುವ ವಿಚಾರ ವಿನಿಮಯಗಳು ಸ್ವಭಾವ ಧೋರಣೆಗಳು ಹಿರಿಯರ ಜೊತೆ ಆಟವಾಡುವಾಗ ಬರುವುದಿಲ್ಲ .ವ್ಯಕ್ತಿತ್ವ ವಿಕಸನದ ಮೊದಲ ಪಾಠಗಳು ನಮಗೆ ಈ ರೀತಿಯ ಆಟಗಳಿಂದಲೇ ಬಂದದ್ದು ಎಂಬುದು ಈಗ ಹಿಂತಿರುಗಿ ನೋಡಿ ಅರ್ಥೈಸಿಕೊಂಡಾಗ ತಿಳಿಯುತ್ತದೆ .    

ಇಂದಿನ ಪೀಳಿಗೆಯವರು  ಟಿವಿ ಮೊಬೈಲುಗಳ ದಾಸರಾಗಿ ದೇಹಕ್ಕೆ ಶ್ರಮವನ್ನೇ ಕೊಡದೆ ಕೌಚ್ ಪೊಟಾಟೋಗಳಾಗುತ್ತಿರುವುದು, ಅನೇಕ ದೈಹಿಕ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಿರುವುದು ಕಂಡಾಗ ನಮ್ಮಂತೆಯೇ ಅವರಿಗೂ ಆಟವಾಡುವ ಅವಕಾಶಗಳನ್ನು ಒದಗಿಸಿ ಸುಂದರ ಬಾಲ್ಯವನ್ನು ಮರಳಿಸೋಣ ಅನ್ನಿಸುತ್ತದೆ .ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗೋಣ ಅಲ್ವಾ?


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top