ಅಂಕಣ ಬರಹ
ಗಜಲ್ ಲೋಕ
ಚೇತನಾರವರ ಚೈತನ್ಯಭರಿತ ಗಜಲ್ ಗಳು
ಹಲೋ ನನ್ನ ಗಜಲ್ ಪ್ರೇಮಿಗಳೆ…
ಗುರುವಾರದಿಂದ ಗುರುವಾರದ ವರೆಗೆ ಏಳು ದಿನಗಳು ಇರುತ್ತವೆಯಾದರೂ ಗಜಲ್ ಯಾನದಲ್ಲಿ ಆ ಏಳು ದಿನಗಳು ಉರುಳಿ ಹೋದದ್ದೆ ಗೊತ್ತಾಗುವುದಿಲ್ಲ. ಮತ್ತೆ ತಮ್ಮ ಮುಂದೆ ಬಂದಿರುವೆ ಗಜಲ್ ದೇವಿಯನ್ನು ಪ್ರೀತಿಸುವ, ಆರಾಧಿಸುವ ಗಜಲ್ ಭಕ್ತರೊಬ್ಬರೊಂದಿಗೆ…!!
“ಸಾವಿರಾರು ಕ್ರಿಯೆಗಳು ಮೋಜಿನಲ್ಲಿವೆ ಪ್ರೀತಿಯಲ್ಲಿ ‘ದಾಗ್’
ಏನನ್ನೂ ಮಾಡದ ಜನರೂ ಅದ್ಭುತಗಳನ್ನು ಮಾಡುತ್ತಾರೆ”
-ದಾಗ್ ದೇಹಲವಿ
'ತಪಸ್ಸು' ಎನ್ನುವ ಪದದ ಅರ್ಥ ಹುಡುಕಲು ನಾವು ಕಾಡಿಗೊ ಗುಹೆಗೊ ಅಥವಾ ಋಷಿಮುನಿಗಳತ್ತ ಹೋಗಬೇಕಾಗಿಲ್ಲ. ನಮ್ಮ ಮೆದುಳಿಗೆ ತುಸು ಕೆಲಸ ಹಚ್ಚಿದರೆ ಆವಾಗ ನಮಗೆ ಹೊಳೆಯುವುದು, ಒಂದು ವಸ್ತು ಅಥವಾ ಶಕ್ತಿ ಕುರಿತು ಚಿಂತಿಸುತ್ತ ಸದಾ ಅದರ ಬಗ್ಗೆಯೆ ದ್ಯಾನಿಸುತ್ತ, ಆ ಸಾಧನೆಗಾಗಿ ಸುಖ ಸಂತೋಷಗಳನ್ನು ನಿರಾಕರಿಸುತ್ತ, ಅದನ್ನು ಸೇರುವುದು ಒಂದೆ ಗುರಿ ಎಂಬ ಜೀವನ ಶ್ರದ್ಧೆ, ಛಲದೊಂದಿಗೆ ಸಾಗುವ ಮಾರ್ಗ. ತಾವು ಹಿಡಿದ ಗುರಿ ಒಂದನ್ನು ಸಾಧಿಸಲು ಜೀವನದ ಉಳಿದೆಲ್ಲವನ್ನು ತ್ಯಜಿಸಲು ಸಿದ್ದವಾಗಿರುವುದೇ ತಪಸ್ಸು. ಯಾವುದೆ ಒಂದು ಕೆಲಸವನ್ನು ಪ್ರಾರಂಭಿಸುವುದು ಸ್ವಲ್ಪ ಸುಲಭ, ಆದರೆ ಅದನ್ನು ನಂತರ ಮುಂದುವರೆಸಿಕೊಂಡು ಹೋಗುವ ಸವಾಲು ಬಂದಾಗ, ಅದು ಬರೀ ಆರಂಭದ ಅತಿ ಉತ್ಸಾಹವನ್ನಷ್ಟೆ ಅಲ್ಲ, ಅತ್ಯಂತ ತಾಳ್ಮೆ, ಜವಾಬ್ದಾರಿ, ಹಾಗೂ ಸಂಕಲ್ಪವನ್ನು ಬೇಡುತ್ತದೆ. ತಪಸ್ಸಿಗೆ ತಾಳ್ಮೆ ಬೇಕು, ಆ ತಾಳ್ಮೆ ಬರುವುದು ಹೊತ್ತ ಜವಬ್ದಾರಿಯ ಹೊರೆಯನ್ನು ದಡ ತಲುಪಿಸಬೇಕು ಎಂಬ ಬದ್ಧತೆ, ಸಂಕಲ್ಪ ಇದ್ದಾಗ. ಇದು ಅಲಬತ್ತಾ ನಮ್ಮ ಭಾವನೆಗಳ ಬಾಣಲೆ ಬರಹಕ್ಕೆ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ. ಇದು ಆರಂಭವಾಗುವುದು ವೈಯಕ್ತಿಕ ನೆಲೆಯಿಂದಾದರೂ ಪ್ರವರ್ಧಮಾನಕ್ಕೆ ದಾಪುಗಾಲಿಡುವುದು ಮಾತ್ರ ಸಮಷ್ಠಿಯ ಆಲಿಂಗನದಲ್ಲಿ. ಯಾವುದೇ ಭಾಷೆಯ ಸಾಹಿತ್ಯದ ಜನಪ್ರಿಯತೆ ಸುಶಿಕ್ಷಿತ ಮತ್ತು ಆಸಕ್ತ ಜನರಿಂದೆ ಪಡೆದ ಮನ್ನಣೆಯನ್ನು ಅವಲಂಬಿಸುತ್ತದೆ. ಆದರೆ ಕಾವ್ಯದ ನಿಜವಾದ ಜನಪ್ರಿಯತೆ ತಿಳಿದು ಬರುವುದು ಅದು ಸಾಮಾನ್ಯ ಜನರ ಬಾಯಲ್ಲಿ ನಲಿದಾಗ ಮಾತ್ರ. ಯಾವುದೇ ಸಾಹಿತ್ಯ ಪ್ರಕಾರಕ್ಕೆ ಸರ್ವಜನ ಮಾನ್ಯತೆ ದೊರೆಯುವುದು ಕಷ್ಟಸಾಧ್ಯ. ಈ ಕಷ್ಟಸಾಧ್ಯದಲ್ಲಿ 'ಸಾಧ್ಯ'ವಾಗಿಸಿಕೊಂಡವಳು 'ಗಜಲ್' ಎನ್ನುವ ಚಿರ ಯೌವ್ವನೆ. ಗಜಲ್ ಬರೆದಾಗಲಿ, ಓದಿಯಾಗಲಿ ಅಥವಾ ಕೇಳಿಯಾಗಲಿ ಬೇಸರಕ್ಕೆ ಗುರಿಯಾದವರು ಯಾರೂ ಇರಲಿಕ್ಕಿಲ್ಲ, ಯಾರೂ ಇಲ್ಲ. ಇಂತಹ ಗಜಲ್ ಮೈಖಾನದಲ್ಲಿ ಅಶಅರ್ ನ ಮಧುಬಟ್ಟಲು ಹಿಡಿಯದ ರಸಿಕರುಂಟೆ ಈ ಜಗದೊಳಗೆ...!! ಈ ಗಜಲ್ ಮಾಯೆಯಿಂದ ಶ್ರೀಮತಿ ಚೇತನಾ ಕುಂಬ್ಳೆಯವರು ತಾನೆ ಹೇಗೆ ಬಚಾವ್ ಆಗಲು ಸಾಧ್ಯ.
ಶ್ರೀಮತಿ ಚೇತನಾ ಭಟ್ ರವರು ರಾಜಗೋಪಾಲ ಓಕುಣ್ಣಾಯ ಮತ್ತು ಶ್ರೀಮತಿ ಸರಸ್ವತಿ ದಂಪತಿಗಳ ಮಗಳಾಗಿ ಕಾಸರಗೋಡಿನ ಕುಂಬ್ಳೆಯಲ್ಲಿ ಜನಿಸಿದ್ದಾರೆ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಬಿ.ಎಡ್ ಅನ್ನು ಮುಗಿಸಿ ಕಾಲೇಜು ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದ ಅನುಭವವೂ ಇವರಿಗಿದೆ. ತಮ್ಮ ಶೈಕ್ಷಣಿಕ ಹಂತದಿಂದಲೇ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುತಿದ್ದ ಚೇತನಾರವರು 'ಪಡಿನೆಳಲು' ಎಂಬ ವಿಮರ್ಶಾ ಸಂಕಲನವನ್ನು, 'ನಸುಕಿನಲ್ಲಿ ಬಿರಿದ ಹೂಗಳು" ಎಂಬ ಗಜಲ್ ಗುಚ್ಛವನ್ನು 'ಚೇತನಾ ಕುಂಬ್ಳೆ' ಎಂಬ ಕಾವ್ಯನಾಮದಿಂದ ಪ್ರಕಟಿಸಿದ್ದಾರೆ. ಇವರ ಸಾಹಿತ್ಯಿಕ ಕೃಷಿಯನ್ನು ಗಮನಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ. ಕರಾವಳಿಯ ಸಾಂಸ್ಕೃತಿಕ ಪ್ರತಿಷ್ಠಾನ ಕಾವ್ಯ ಪ್ರಶಸ್ತಿಯು ಇವರ ಸಾಹಿತ್ಯ ಸೇವೆಗೆ ಸಂದ ಗೌರವವಾಗಿದೆ. ಸದ್ಯ ಇವರು ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.
ಮನುಕುಲ ಎಂಬ ಬಂಡಿಯ ಎರಡು ಚಕ್ರಗಳೆಂದರೆ ಒಂದು ಗಂಡು, ಮತ್ತೊಂದು ಹೆಣ್ಣು. ಹೆಣ್ಣನ್ನು ಗುಲಾಬಿಯಾಗಿಯೂ, ಗಂಡನ್ನು ಆ ಗುಲಾಬಿ ರಕ್ಷಿಸುವ ಮುಳ್ಳಾಗಿಯೂ ಪರಿಭಾವಿಸಿಕೊಂಡು ಬರಲಾಗಿದೆ. ಮೃದು, ಕೋಮಲತೆಯ ಸಂಕೇತವಾಗಿ ಹೆಣ್ಣನ್ನು ಪೂಜಿಸುತ್ತಾ, ಪ್ರೇಮಿಸುತ್ತಾ ಬಂದಿದೆ ನಮ್ಮ ಸಮಾಜ. ಆ ಹೆಣ್ಣಿನೊಂದಿಗೆ ಮಾತಾಡುವ ಬಗೆಗೆ ಗಜಲ್ ಎಂದು ಹೇಳಲಾಗುತ್ತದೆ. ಪ್ರೀತಿ, ಪ್ರೇಮ, ಪ್ರಣಯ, ಮೋಹ, ಅನುರಾಗ, ವಿರಹವನ್ನು ಅಭಿವ್ಯಕ್ತಿಸುವ ಸುಂದರ ಸಾಧನವೇ ಈ ಗಜಲ್. ನವಿರಾದ ಭಾವನೆಗಳ ತೊಟ್ಟಿಲಾಗಿರುವ ಗಜಲ್ ಇಡೀ ಪರಪಂಚಕ್ಕೆ ಜೋಗುಳ ಹಾಡುತ್ತಿದೆ. ಇಂತಹ ಗಜಲ್ ಗಳಲ್ಲಿ ಚೇತನಾ ಕುಂಬ್ಳೆಯವರು ಪ್ರೀತಿ, ಪ್ರೇಮ, ಸಾಮಾಜಿಕ ವ್ಯವಸ್ಥೆಯ ಚಿತ್ರಣ, ಬಂಡವಾಳಶಾಹಿಯ ಆರ್ತನಾದ, ಮನುಷ್ಯನ ಎಡಬಿಡಂಗಿತನ, ದುರಾಸೆಯ ಪರಾಕಾಷ್ಠೆ, ಅಪ್ಪ-ಅಮ್ಮನ ಪ್ರೀತಿ, ಸಂಬಂಧಗಳ ಸವಕಲು, ವೈಚಾರಿಕ ಚಿಂತನೆ, ಆಧ್ಯಾತ್ಮಿಕತೆ, ಗುರು ಪರಂಪರೆ... ಮುಂತಾದ ವಿಷಯಗಳ ಕುರಿತು ಗಜಲ್ ಗಳನ್ನು ರಚಿಸಿದ್ದಾರೆ. ಇವರ ಗಜಲ್ ಗಳಲ್ಲಿ ದಟ್ಟವಾದ ಸಾಮಾಜಿಕ ಚಿಂತನೆಯ ಪರಿಮಳವಿದೆ. ಶರಣ ಸಾಹಿತ್ಯ, ಮಾರ್ಕ್ಸವಾದಿ ವಿಚಾರಗಳ ಪ್ರಭಾವ ಇವರ ಗಜಲ್ ಗಳಲ್ಲಿ ಕಾಣುತ್ತೇವೆ.
“ಕಾಣದಾ ದೇವರಿಗೆ ನಿತ್ಯವೂ ಕ್ಷೀರಾಭಿಷೇಕವೇಕೆ
ಕಣ್ಣೆದುರಿನ ದೇವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವರೇಕೆ”
ಈ ಷೇರ್ ಬಸವಣ್ಣನವರ ವಚನವನ್ನು ನೆನಪಿಸುತ್ತ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಬೇರೂರಿದ ಮೌಢ್ಯತೆಯನ್ನು ಖಂಡಿಸುತ್ತಿದೆ. ಇಂದಿನ ಬುದ್ಧಿವಂತ ಮನುಷ್ಯನ ಆವಿಷ್ಕಾರಗಳಲ್ಲಿ ಒಂದಾದ ವೃದ್ಧಾಶ್ರಮ ಹೇಗೆ ಮೌಲ್ಯಗಳ ಅಧಃಪತನಕ್ಕೆ ಸಾಕ್ಷಿಯಾಗಿದೆ ಎಂಬುದರ ಧ್ವನಿ ಈ ಮೇಲಿನ ಷೇರ್ ನಲ್ಲಿ ಅಡಗಿದೆ. ಕಣ್ಣಿಗೆ ಕಾಣುವ ದೇವರೆಂದರೆ ನಮ್ಮ ಹೆತ್ತವರು. ‘ಭಕ್ತಿ’ ಎಂಬುದು ಅಪ್ಪ -ಅಮ್ಮನ ಮೇಲಿರಬೇಕೆ ಹೊರತು ಕಲ್ಲು ಮಣ್ಣುಗಳ ಮೂರ್ತಿಯ ಮೇಲಲ್ಲ ಎಂಬ ವೈಚಾರಿಕ ಸಂದೇಶವಿದೆ ಈ ಷೇರ್ ನಲ್ಲಿ.
“‘ತನು’ ಗೋರಿಯೊಳಗೆ ನಿತ್ಯವೂ ಅಳುವುದು ಕೇಳಿಸುತ್ತಿದೆ
ಆಲಿಸಬೇಕಿದ್ದ ಕಿವಿ ಮಾತ್ರ ದೂರವಾಗಿ ಕಿವುಡಾಗಿದೆ ಸಖಿ”
‘ಗೋರಿ’ ಎನ್ನುವುದು ಇಲ್ಲಿ ಗಜಲ್ ನ ಸಿಗ್ನೀಚರ್ ಎಂಬಂತೆ ಮೂಡಿಬಂದಿದೆ. ಬಡತನ, ನೋವು, ಸೋಲು, ಹತಾಶೆ..ಇವೆಲ್ಲವುಗಳು ಮನುಷ್ಯನನ್ನು ಉಸಿರು ನಿಂತ ಮೇಲೂ ಕಾಡುವುದರ ಭೀಭತ್ಸವನ್ನು ಗಜಲ್ ಗೋ ಅವರು ತುಂಬಾ ಚೆನ್ನಾಗಿ ಇಲ್ಲಿ ದಾಖಲಿಸಿದ್ದಾರೆ. ಸಂತೈಸುವ ಜೀವವೊಂದು ಜೊತೆಗಿದ್ದರೆ ಅಳು ಕೂಡ ಆನಂದಭಾಷ್ಪವಾಗುತ್ತದೆ. ಇಲ್ಲದಿದ್ದರೆ ಬದುಕಿನಲ್ಲಿ ಸೂತಕದ ಛಾಯೆ ಆವರಿಸುತ್ತದೆ. ಜೀವನಶ್ರದ್ದೆಯ ಒಳನೋಟಗಳ ಕುರಿತು ಧ್ವನಿಪೂರ್ಣವಾದ ಚಿತ್ರಣ ಇಲ್ಲಿ ಮೂಡಿಬಂದಿದೆ.
ಭಾವನೆಗಳ ಭಘೀಚಾದಲ್ಲಿ ತರಹೇವಾರಿ ಲತೆಗಳಿವೆ. ಆ ಪುಷ್ಪಗಳಿಂದ ಮಾಲೆಯನ್ನು ಪೋಣಿಸಿ ಸಹೃದಯಿಗಳ ಹೃದಯಕೆ ತೊಡಿಸಿರುವ, ತೊಡಿಸುತ್ತಿರುವ ಶ್ರೀಮತಿ ಚೇತನಾ ಕುಂಬ್ಳೆಯವರ ಗಜಲ್ ಗಳಲ್ಲಿ ಸಾಮಾಜಿಕ ಸಂವೇದನೆಯಿದೆ, ಸಮ ಸಮಾಜದ ಕನಸಿದೆ ; ನೆಮ್ಮದಿಯ ನಿಟ್ಟುಸಿರಿದೆ. ಇವರಿಂದ ಇನ್ನೂ ಹೆಚ್ಚು ಹೆಚ್ಚು ಗಜಲ್ ಗಳು ರೂಪುಗೊಂಡು ಸಂಕಲನವಾಗಿ ಸಾರಸ್ವತ ಲೋಕಕ್ಕೆ ದಸ್ತಕ್ ನೀಡಲಿ ಎಂದು ಶುಭ ಕೋರುತ್ತೇನೆ.
“ಯೋಚಿಸಲಿಲ್ಲ, ಅರಿಯಲಿಲ್ಲ, ಕಲಿಯಲೂ ಇಲ್ಲ, ತಿಳಿಯಲೂ ಇಲ್ಲ
ನನಗೆ ಬಂದುಬಿಟ್ಟಿದೆ ಹೃದಯವನ್ನು ತಾನಾಗಿಯೇ ಕೊಡುವ ಕಲೆ”
-ಮೀರ್ ತಖೀ ಮೀರ್
ಸಮಯವಾಯ್ತು..
ನಾನು ಸುಮ್ಮನಿದ್ದರೂ ನನ್ನ ಗಡಿಯಾರ ಸದಾ ಎಚ್ಚರಿಸುತ್ತದೆ. ಹೋಗಿ ಬರಲಾ, ಖಂಡಿತ ಬರುವೆ ಜೀ, ಮುಂದಿನವಾರ. ಅಲ್ಲಿಯವರೆಗೆ ಶುಭಮಸ್ತು.. ಧನ್ಯವಾದಗಳು.
ಡಾ. ಮಲ್ಲಿನಾಥ ಎಸ್. ತಳವಾರ