ಅಂಕಣ ಸಂಗಾತಿ
ನೆನಪಿನದೋಣಿಯಲಿ
ಪತ್ರ ಪುರಾಣ
ದುಡಿದು ಬಂದರೆ ಮನೆಗೆ ನನ್ನ ಮೇಜಿನ ಮೇಲೆ
ನಿನ್ನದೇ ಪತ್ರ ಅದನೋದಿಕೊಂಡೆ
ಇದ್ದಕ್ಕಿದ್ದಂತೆಯೇ ಬೆಳಕಾಯ್ತು ನನ್ನ ಮನೆ
ದೂರ ನವಿಲಿನ ಕೇಕೆ ಕಿವಿಗೆ ಬಿತ್ತು
ಕೆ ಎಸ್ ನರಸಿಂಹಸ್ವಾಮಿ
(ಸಂಜೆಹಾಡು ಸಂಕಲನ_ನಿನ್ನ ಪತ್ರ)
ನಿಜ! ಕಾಗದ ಎಂಬ ಪದ ಕಿವಿಗೆ ಬಿದ್ದರೂ ಸಾಕು ಮನ ತುಂಟ ಕುದುರೆಯಂತೆ ಗತದ ಪಯಣಕ್ಕೋಡುತ್ತದೆ ..ತೀರ ಇತ್ತೀಚೆಗೆ ಅಂದರೆ ೨೦_೨೫ ವರ್ಷಗಳ ಹಿಂದಿನ ತನಕವೂ ನಮ್ಮ ಬದುಕಿನ ಪ್ರಮುಖ ಅಂಗವಾಗಿದ್ದ ಇದು ನೇಪಥ್ಯಕ್ಕೆ ಸರಿದು ಪಳೆಯುಳಿಕೆಗಳ ಸಾಲಿಗೆ ಬಂದಿರುವುದನ್ನು ಕಂಡರೆ ಯಾವುದೂ ಶಾಶ್ವತವಲ್ಲ ಎಂದನಿಸದೇ ಇರದು.
ತೀರ ಚಿಕ್ಕವರಿದ್ದಾಗ ಅಣ್ಣ ಮನೆಗೆ ಬಂದೊಡನೆ ಕೇಳ್ತಿದ್ದ ಪ್ರಶ್ನೆ ಯಾವುದಾದರೂ ಕಾಗದ ಬಂದಿದ್ಯಾ ಅಂತಾನೆ. ದೂರದೂರುಗಳಲ್ಲಿ ವಾಸವಾಗಿದ್ದ ಬಂಧುಮಿತ್ರರುಗಳು ಪರಸ್ಪರ ಯೋಗಕ್ಷೇಮ ತಿಳಿಯಲು ಇದ್ದ ಮಾಧ್ಯಮ ಪತ್ರವೊಂದೇ. ಅತ್ತಿಂದ ಇತ್ತ ಇತ್ತಿಂದ ಅತ್ತ ಸಂದೇಶವಾಹಕಗಳಾಗಿದ್ದ ಪತ್ರಗಳನ್ನು ಕಾಗದ ಅಂತಾನೇ ಕರೆಯುತ್ತಿದ್ದ ವಾಡಿಕೆ . ಬೇರೆ ಊರಿಗೆ ಮದುವೆ ಮಾಡಿಕೊಟ್ಟ ಮಗಳಿಗೆ ತಂದೆ ತಾಯಿ ಬರೆಯುವ ಪತ್ರಕ್ಕಾಗಿ ಇಲ್ಲಿ ಮಗಳು ಚಾತಕಪಕ್ಷಿಯಂತೆ ಕಾಯುತ್ತಿದ್ದದ್ದು. ಹೆಚ್ಚು ಸ್ವಾತಂತ್ರ್ಯವಿದ್ದರೆ ತಾನೇ ಉತ್ತರ ಬರೆಯುವುದು ಅಥವಾ ಮನೆಯ ಹಿರಿಯರು ಉತ್ತರ ಬರೆಯುತ್ತಿದ್ದುದು . ಮದುವೆಯೊಂದಕ್ಕೆ ಬಿಟ್ಟರೆ ಮಿಕ್ಕೆಲ್ಲಾ ಶುಭ ಕಾರ್ಯಕ್ರಮಗಳನ್ನು 1 ಕಾರ್ಡಿನಲ್ಲೇ ಬರೆಯುತ್ತಿದ್ದುದು. ಎಲ್ಲದಕ್ಕೂ ಆಹ್ವಾನ ಪತ್ರಿಕೆ ಇರುತ್ತಿರಲಿಲ್ಲ.ಮುಂಜಿ ನಾಮಕರಣ ಸೀಮಂತ ಆರತಿಗಳು ಗೃಹಪ್ರವೇಶ ಯಾವುದಕ್ಕಾದರೂ ಆಮಂತ್ರಣ ಪತ್ರ ಮುಖೇನ ವೇ.
ನಮ್ಮ ಮನೆಗೆ ಮುಖ್ಯವಾಗಿ ಬರ್ತಿದ್ದ ಕಾಗದಗಳು ನಮ್ಮ ತಾತ (ತಾಯಿಯ ತಂದೆ) ಮತ್ತು ದೊಡ್ಡಮ್ಮ ಚಿಕ್ಕಮ್ಮಂದಿರು . ಇನ್ನೊಬ್ಬ ಮಾವ ಮೈಸೂರಲ್ಲೇ ಇದ್ದರು . ತಂದೆಯ ಬಳಗ ಬೆಂಗಳೂರಾದರೂ ಅಣ್ಣನೇ ಆಗಾಗ ಹೋಗಿ ಬರುತ್ತಿದ್ದರಿಂದ ಉಭಯಕುಶಲೋಪರಿಯ ಕಾಗದಗಳ ವಿನಿಮಯ ಇರಲಿಲ್ಲ. ತಾತ ಮೋಡಿ ಅಕ್ಷರಗಳಲ್ಲಿ ಬರೆಯುತ್ತಿದ್ದ ಕಾಗದ ಓದಲು ಸಫಲಳಾದ ದಿನ ದೊಡ್ಡ ಸಾಧನೆ ಮಾಡಿದಂತೆ ಬೀಗಿದ್ದು ಇನ್ನೂ ನೆನಪಿನಲ್ಲಿದೆ. ಅಪ್ಪನ ಮದ್ರಾಸ್ ನಲ್ಲಿದ್ದ ಗೆಳೆಯರ ಪತ್ರಗಳು ಬರುತ್ತಿದ್ದವು. ನಾವೇನು ಓದುತ್ತಿರಲಿಲ್ಲ ವಿಶೇಷ ಸಂಗತಿಇದ್ದರೆ ಅವರೇ ಹೇಳಿಬಿಡುತ್ತಿದ್ದರು .ಹೀಗೆ ಬಂದ ಕಾಗದಗಳನ್ನು ದಿನಾಂಕ ಪ್ರಕಾರ ಜೋಡಿಸಿ 1ಕವರ್ ನಲ್ಲಿ ಇಡುತ್ತಿದ್ದರು. ಕೆಲವರ ಮನೆಯಲ್ಲಿ 1ಕಂಬಿಗೆ ಅದನ್ನು ಚುಚ್ಚಿ ನೇತುಹಾಕಿದ್ದು ನೋಡಿದ್ದೇನೆ. ತಿಂಗಳಿಗೆ 2 ಬಾರಿಯಂತೆ ಹೀಗೆ ತಾತ ಬರೆಯುತ್ತಿದ್ದುದು ಅಮ್ಮ ಉತ್ತರಿಸುತ್ತಿದ್ದುದು. ಅದುಬಿಟ್ಟು ಮಧ್ಯ ಬಂತೆಂದರೆ ಏನಾದರೂ ಕಾರ್ಯಕ್ರಮಕ್ಕೆ ಆಹ್ವಾನ . ತುಂಬಿದ ಮನೆ ತುಂಬ ಮಕ್ಕಳು ಏನಾದರೂ ಇದ್ದೇ ಇರುತ್ತಿತ್ತು . ಅದು ಬಿಟ್ಟರೆ 4 ಕಡೆ ಅರಿಶಿನ ಹಚ್ಚಿದ ಆಹ್ವಾನ ಪತ್ರಿಕೆಗಳು ಊರಿಗೆ ಹೋಗುವ ಕಾರ್ಯಕ್ರಮದ ಖುಷಿ ತರುತ್ತಿದ್ದರೆ, ಸುತ್ತ ಕಪ್ಪು ಶಾಯಿಯ ಸಾವಿನ ಸುದ್ದಿ ಹೊತ್ತ ಅಪರಕ್ರಿಯೆ ಆಹ್ವಾನ ಪತ್ರಿಕೆಗಳು ದುಃಖ ತರುತ್ತಿದ್ದವು. ದೂರದ ಸಂಬಂಧಿಗಳ ಸಾವಿನ ಸುದ್ದಿ ತಿಳಿಯುತ್ತಿದ್ದುದೇ ಆ ರೀತಿಯ ಪತ್ರಗಳಿಂದ .ಓದಿದ ಅವುಗಳನ್ನು ಹರಿದು ಹಾಕುವ ರೂಢಿ . ಹತ್ತಿರದವರ ಸಾವಿನ ಸುದ್ದಿ ಟೆಲಿಗ್ರಾಮ್ ಮೂಲಕ . ಆಗೆಲ್ಲಾ ಟೆಲಿಗ್ರಾಂ ಬಂದರೆ ಅದು ಸಾವಿನ ಸುದ್ದಿ ಅಂತನೇ ಖಚಿತ. ಸಾವು ಸಂಭವಿಸಿದ ಮನೆಯಲ್ಲಿ ಮೂರನೆಯ ದಿನದ ಅಸ್ತಿ ವಿಸರ್ಜನೆ ಕಾರ್ಯ ಮುಗಿದ ತಕ್ಷಣ ಕಾರ್ಡುಗಳನ್ನು ತರಿಸಿ ಎಲ್ಲಾ ಸಂಬಂಧಿಕರಿಗೆ ಸಾವಿನ ಸುದ್ದಿ, ಧರ್ಮೋದಕ, ಮಾಸಿಕ, ವೈಕುಂಠ ಸಮಾರಾಧನೆ ದಿನಾಂಕ ಸ್ಥಳ ವಿವರ ತಿಳಿಸಿ ಕಾಗದ ಬರೆಯುವ ಕೆಲಸ. 1ಕಾರ್ಡು ಬರೆದು ಅದರಂತೆ ಮಿಕ್ಕವನ್ನು ಮಕ್ಕಳ ಕೈಲಿ ಬರಿಸ್ತಿದ್ರು. ತಾತ ಅಜ್ಜಿ ಸತ್ತಾಗ ಹೀಗೆ ಕೂತು ಬರೆದ ನೆನಪು . ಕಪ್ಪು ಶಾಯಿಯಿಂದ ಮೂಲೆಗಳನ್ನು ಮಸಿ ಮಾಡಬೇಕಿತ್ತು .
ಇದ್ದೂರಲ್ಲೇ ಇದ್ದುದರಿಂದಲೇ ಗೆಳತಿಯರಿಗೆ ಪತ್ರ ಬರೆಯುವ ಪ್ರಸಂಗವೇ ಬರಲಿಲ್ಲ .ಆದರೆ ಕಾದಿದ್ದು ಮಾತ್ರ ಉದ್ಯೋಗಕ್ಕೆ ಅರ್ಜಿ ಗುಜರಾಯಿಸಿ ಪರೀಕ್ಷೆ ಕಾಲ್ ಲೆಟರ್ ಸಂದರ್ಶನದ ಕಾಲ್ ಲೆಟರ್ ನೇಮಕಾತಿ ಲೆಟರ್ ಗಳಿಗೆ. ಆದರೆ ಈಗ ಉದ್ಯೋಗಸ್ಥೆಯಾಗಿರುವ ಜೀವವಿಮಾ ನಿಗಮದ ಕೆಲಸ ಸಿಕ್ಕಿದ ಸುದ್ದಿಯ ಪತ್ರ ಮನೆ ಬದಲಿಸಿದ್ದರಿಂದ ಕೈಗೆ ಸಿಗಲೇ ಇಲ್ಲ ಕಛೇರಿಯಲ್ಲಿ ನಕಲುಪ್ರತಿ ತೆಗೆದುಕೊಳ್ಳಬೇಕಾಯಿತು .
ಕಾಗದ ಅಂದಮೇಲೆ ಅದನ್ನು ತರುವ ಅಂಚೆಯಣ್ಣನ ಬಗ್ಗೆ ಹೇಳಲೇ ಬೇಕು ತಾನೆ? ನಾವು ಚಿಕ್ಕವರಿದ್ದಾಗ ೧ ಪದ್ಯ ಇತ್ತು
ಅಂಚೆಯ ಅಣ್ಣ ಬಂದಿಹನಣ್ಣ
ಅಂಚೆಯ ಹಂಚಲು ಮನೆಮನೆಗೆ
ಸಾವಿರ ಸುದ್ದಿಯ ಬೀರುತ ಬರುವನು
ತುಂಬಿದ ಚೀಲವು ಹೆಗಲೊಳಗೆ
ಸಾಮಾನ್ಯ ಸೈಕಲ್ ಮೇಲೆ ಬರುತ್ತಿದ್ದ ಪೋಸ್ಟ್ಮನ್ ಎಲ್ಲರಿಗೂ ಆತ್ಮೀಯ . ಪ್ರತಿಯೊಬ್ಬರನ್ನೂ ಹೆಸರಿನಿಂದಲೇ ಪರಿಚಯ ಇರುತ್ತಿದ್ದವನು .ಓದಲು ಬರದಿದ್ದವರಿಗೆ ಕಾಗದ ಓದಿ ಹೇಳುತ್ತಿದ್ದ ಸಹೃದಯಿ ಸಹ .ಮನೆಗೆ ಬಂದ ನೆಂಟನಂತೆ ಬಿಸಿಲಿದ್ದಾಗ ಪಾನಕ ಮಜ್ಜಿಗೆ ಇಲ್ಲದಾಗ ಕಾಫಿ ಕೊಟ್ಟು ಸತ್ಕರಿಸುತ್ತಿದ್ದ ನೆನಪು .ಗೋಕುಲಾಷ್ಟಮಿ ತಿಂಡಿ ಸಂಕ್ರಾಂತಿ ಎಳ್ಳು ಅವರಿಗೆ ತಪ್ಪಿಸುತ್ತಲೇ ಇರಲಿಲ್ಲ. ಈಗ ವ್ಯಾನ್ ಗಳಲ್ಲಿ ಬಂದು ಪಾರ್ಸಲ್ ಸ್ಕೂಟರ್ ನಲ್ಲಿ ಬಂದು ಬಾಕ್ಸ್ ಗೆ ಟಪಾಲು ಹಾಕಿ ಹೋಗುವ ಪೋಸ್ಟ್ ಮ್ಯಾನ್ ಪೋಸ್ಟ್ ಉಮನ್ ಗಳನ್ನು ಕಂಡಾಗ ಕಾಲಪ್ರವಾಹದಲ್ಲಿ ಆತ್ಮೀಯತೆ ಹೇಳಹೆಸರಿಲ್ಲದಂತಾಗಿ ಮಾಯವಾಗುತ್ತಿರುವ ಬಾಂಧವ್ಯಗಳಲ್ಲಿ ಇದೂ ಒಂದು ಅನ್ನಿಸಿ ತುಂಬಾ ದುಃಖವಾಗುತ್ತದೆ. ಎಲ್ಲವೂ ಯಾಂತ್ರಿಕ ವ್ಯಾವಹಾರಿಕ ಈಗ.
ಗೌರಿಹಬ್ಬದ ಸಂದರ್ಭದಲ್ಲಿಯಂತೂ ತವರಿನ ಅರಿಶಿನ ಕುಂಕುಮದ ಮನಿಯಾರ್ಡರ್ ಗಳ ಭರಾಟೆ . ಆ ಮನಿ ಆರ್ಡರ್ ಫಾರ್ಮ್ ನ ಕೆಳಗಿನ ಚಿಕ್ಕ ಭಾಗವನ್ನು ಸಹ ಬಿಡದೆ ಬರೆದು ತುಂಬಿಸುತ್ತಿದ್ದರು. ಅಮ್ಮನಿಗೆ ತಾತನಿಂದ ಹತ್ತು ರೂ ನನಗೆ ನೆನಪಿದ್ದಂತೆ ಆಮೇಲೆ ನೂರು ರೂಗಳ ತನಕ ಜಾಸ್ತಿಯಾಗಿತ್ತು ತವರಿನ ಉಡುಗೊರೆ .ಅದರಲ್ಲಿ ಸ್ವಲ್ಪ ಪೋಸ್ಟ್ ಮನ್ ಗೆ ಕಾಣಿಕೆ ನೀಡುತ್ತಿದ್ದರು. ಅಷ್ಟಕ್ಕೆ ಎಷ್ಟು ಖುಷಿಪಡುತ್ತಿದ್ದರು. ಆ ಅನ್ಯೋನ್ಯತೆ ಈಗ ಎಷ್ಟು ಹಣ ಕೊಟ್ಟರೂ ಸಿಗದು.
ನನ್ನ ವಿಷಯಕ್ಕೆ ಬಂದರೆ ಮೊದಲ ಬಾರಿ ಮೈಸೂರು ಬಿಟ್ಟಿದ್ದು ಮೂವತ್ತೈದು ವರ್ಷಗಳ ಹಿಂದೆ ನನಗೆ ಚಿಕ್ಕಬಳ್ಳಾಪುರದಲ್ಲಿ ಮೊದಲ ಪೋಸ್ಟಿಂಗ್ ಆಗಾಗ. ಟೆಲಿಫೋನ್ ಗಳು ಇರದ ಕಾಲ . ಇನ್ ಲ್ಯಾಂಡ್ ಲೆಟರ್ ಗಳಲ್ಲಿ ಎಲ್ಲ ಸಂವಹನ. ನನ್ನ ಪತಿ, ತಂದೆ/ತಾಯಿ/ಒಬ್ಬ ತಂಗಿ, ಅರಸೀಕೆರೆಯಲ್ಲಿದ್ದ ಮತ್ತೊಬ್ಬ ತಂಗಿ, ನನ್ನ ನಾದಿನಿ, ಆಪ್ತ ಗೆಳತಿ ಶಶಿಕಲಾ, ಹಾಗೂ ನಮ್ಮದೇ ಇಲಾಖೆಯ ಬೇರೆ ಊರಿನಲ್ಲಿದ್ದ ಇಬ್ಬರು ಗೆಳತಿಯರು ಇಷ್ಟು ಜನರಿಗೂ ವಾರಕ್ಕೊಂದು ಪತ್ರ ಬರೆಯುತ್ತಿದ್ದೆ. ಸಮಯವೂ ತುಂಬಾ ಇರುತ್ತಿತ್ತು . ಅದೇ ಇಪ್ಪತ್ತು ವರ್ಷಗಳ ಹಿಂದೆ ಪದೋನ್ನತಿ ಹೊಂದಿ ಸಕಲೇಶಪುರಕ್ಕೆ ಹೋಗುವಷ್ಟರಲ್ಲಿ ಫೋನ್ ಇದ್ದಿದ್ದರಿಂದ ಪತ್ರ ಬರೆಯುವ ಗೋಜಿಗೇ ಹೋಗಲಿಲ್ಲ. ಪೋಸ್ಟ್ ಕಾರ್ಡ್ ಹತ್ತು ಪೈಸೆಯಿಂದ 1₹ಆಗುವವರೆಗೂ ಇನ್ಲ್ಯಾಂಡ್ಲೆಟರ್(ಚಿಕ್ಕವರಿದ್ದಾಗ ಇಂಗ್ಲೆಂಡ್ ಲೆಟರ್ ಎನ್ನುತ್ತಿದ್ದೆವು) ರು. ೨.೫೦ ಆಗುವವರೆಗೂ ಕಾಗದ ಬರೆಯುತ್ತಿದ್ದೆ . ಆಮೇಲೆ ಮತ್ತು ಈಗಿನ ದರ ಗೊತ್ತಿಲ್ಲ.
ಕಾಗದ ಅದೆಷ್ಟು ಜನಜೀವನದಲ್ಲಿ ಹಾಸುಹೊಕ್ಕಾಗಿತ್ತರಂದರೆ ಕವಿಕಾವ್ಯಗಳಲ್ಲಿಯೂ ಅದು ಹೊರಹೊಮ್ಮಿದೆ. ಮೇಲೆ ಹೇಳಿದ ಕವಿತೆಯ ಸಾಲುಗಳು ತವರಿಗೆ ಹೋದ ಪತ್ನಿಯಿಂದ ಕಾಗದ ಬಂದಾಗ ಪತಿ ಅನುಭವಿಸುವ ಭಾವನೆ . ಮತ್ತೆ ಕೆ ಎಸ್ ನ ಅವರ ಪ್ರಸಿದ್ಧ ಭಾವಗೀತೆ “ತವರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು” ಇದು ಹೆಂಡತಿ ತವರಿನಲ್ಲಿದ್ದುಕೊಂಡು ಗಂಡನಿಗೆ ಬರೆದ ಪತ್ರ . ಕೆ ಎಸ್ ನ ಅವರ ಹೃದಯ ತಟ್ಟುವಂತಹ “ತಂದೆ ಬರೆದರು ಮಗಳಿಗೊಂದು ಕಾಗದವನು” ಕವನದ 2 ಸಾಲುಗಳು ನಿಮಗಾಗಿ
ತಂದೆ ಬರೆದರು ಮಗಳಿಗಿಂಥ ಕಾಗದವನು
ನೊಂದು ಬರೆದರು ಮನದ ಒಳ ಬಾಗಿಲನು ತೆರೆದು
ತಂದೆ ಬರೆದರು ಮಗಳಿಗೊಂದು ಕಾಗದವನು
ವರ್ಷಕ್ಕೊಮ್ಮೆಯಾದರೂ ತವರಿಗೆ ಬಂದು ಮುಖ ತೋರಿಸು ಎಂದು ಮಗಳನ್ನು ಇಬ್ಬರೂ ಬನ್ನಿ ಎಂದು ಅಳಿಯನಿಗೆ ಕೊಡುವ ಆಹ್ವಾನವನ್ನು ಓದಿಯೇ ಅನುಭವಿಸಬೇಕು.
ಪತ್ರ ವ್ಯವಹಾರದ ಸುಖದ ಪುಳಕ ಮದುವೆ ನಿಶ್ಚಯವಾದ ಗಂಡು ಹೆಣ್ಣು ಮತ್ತು ಪ್ರೇಮಿಗಳ ನಡುವೆ ನಡೆಯುವ ವ್ಯವಹಾರಗಳು ತಿಳಿಸುತ್ತದೆ. ಗಂಡಿನ ಕಡೆಯವರ ಒಪ್ಪಿಗೆಯನ್ನು ಕಾಯುವ ಕನ್ಯಾಪಿತೃ ಹಾಗೂ ಸಂದರ್ಶನ ಕೊಟ್ಟು ಬಂದು ನೇಮಕಾತಿಗೆ ಕಾಯುವ ನಿರುದ್ಯೋಗಿಗಳ ಆತಂಕ ಭರಿತ ನಿರೀಕ್ಷೆ ,ತವರಿಗೆ ಹೋದ ಅಥವಾ ಬಾಣಂತನಕ್ಕೆ ಹೋದ ಪತ್ನಿಯ ಕಾಗದ ಕಾಯುವ ಪತಿ, ಪತಿಯ ಕಾಗದ ಕಾಯುವ ಪತ್ನಿ ಆ ಹಿತ ಈಗೆಲ್ಲಿ ಕಾಣಬೇಕು ಎಲ್ಲ ಕಡೆ ಫೋನ್ ವಾಟ್ಸ್ ಆ್ಯಪ್ ಮೆಸೇಜುಗಳೇ …..
ಕಾಗದಗಳು ವೈಯಕ್ತಿಕವೇ ಆದರೂ ಕೆಲವೊಮ್ಮೆ ಸಾರ್ವತ್ರಿಕತೆ ಪಡೆದು ಪ್ರಸಿದ್ಧವೂ ಪ್ರಕಟವಾಗಿ ಪುಸ್ತಕಗಳೂ ಆದ ಉದಾಹರಣೆಗಳು ಎಷ್ಟೋ. ಅಬ್ರಹಾಮ್ ಲಿಂಕನ್ ತನ್ನ ಮಗನ ಶಿಕ್ಷಕರಿಗೆ ಬರೆದ ಪತ್ರ ಅದರಲ್ಲಿಯ ವಸ್ತುವಿಶೇಷ ವೈಚಾರಿಕತೆಯ ಮೌಲ್ಯದಿಂದಾಗಿ ಗಮನೀಯವಾಗುತ್ತದೆ . ಜವಹರ್ ಲಾಲ್ ನೆಹರೂ ಅವರ “Letters from a father to his daughter “(ಕನ್ನಡಕ್ಕೆ ಕಪಟರಾಳ ಕೃಷ್ಣರಾಯರು) ತನ್ನ ವಿಷಯ ವಸ್ತು ವೈವಿಧ್ಯದಿಂದಾಗಿ ಮೌಲ್ಯಯುತವಾಗಿದೆ . ಕನ್ನಡದ ಪ್ರಸಿದ್ಧ ಲೇಖಕರಾದ ಕೃಷ್ಣಾನಂದ ಕಾಮತರು ತಮ್ಮ ಪತ್ನಿ ಜ್ಯೋತ್ಸ್ನಾ ಕಾಮತ್ ರವರಿಗೆ ಮದುವೆಗೆ ಮುಂಚೆ ಮತ್ತು ನಂತರ ಬರೆದ ಪತ್ರಗಳ ಸಂಗ್ರಹ ಪ್ರೇಯಸಿಗೆ ಬರೆದ ಪತ್ರಗಳು ಉಲ್ಲೇಖನೀಯ. ಎಷ್ಟೇ ಮೊಬೈಲು ಮೇಯಿಲ್ ಟೆಲಿಫೋನ್ ಮುಂತಾದ ಆಧುನಿಕ ಮಾಧ್ಯಮಗಳಿದ್ದರೂ ಖ್ಯಾತ ಪತ್ರಕರ್ತೆ ಹಾಗೂ ಲೇಖಕಿ ಶೋಭಾ ಡೇ ತಮ್ಮ ಆರೂ ಮಕ್ಕಳಿಗೆ ತಮ್ಮ ವೃತ್ತಿ ನಿಮಿತ್ತದ ಓಡಾಟದ ಪ್ರಯುಕ್ತ ಪ್ರಪಂಚದ ವಿವಿಧೆಡೆಗಳಿಂದ ಪತ್ರಗಳನ್ನು ಬರೆದು ಕಳುಹಿಸುತ್ತಿದ್ದರಂತೆ . ಅವುಗಳ ಸಂಗ್ರಹವೇ “ಸ್ಪೀಡ್ ಪೋಸ್ಟ್” ಪುಸ್ತಕ. ಇದರಿಂದ ಪತ್ರಮುಖೇನ ಸಂವಹನ ಎಷ್ಟು ಮುಖ್ಯ ಹಾಗೂ ಅನಿವಾರ್ಯವೆಂಬುದು ಸಾಬೀತಾಗಿದೆ. ಪತ್ರಗಳ ಮಹತ್ವ ಮತ್ತಷ್ಟು ಅರಿವಾದದ್ದು ಕವಿಶೈಲದಲ್ಲಿ ಕುವೆಂಪು ಅವರಿಗೆ ಬರೆದ ಪತ್ರಗಳನ್ನು ಅಲ್ಲಿ ಪ್ರದರ್ಶಿಸಿದ್ದು ನೋಡಿದಾಗ . ಈ ರೀತಿಯ 1ಪತ್ರದಿಂದಲೇ ತಾನೇ ಚಂದ್ರಹಾಸನ ಬದುಕು ಬದಲಾದದ್ದು .
ಎಂಭತ್ತು ತೊಂಭತ್ತರ ದಶಕದಲ್ಲಿ ಪತ್ರ ಮಿತ್ರತ್ವ ಎಂಬ 1 ಪದ್ಧತಿ ಇತ್ತು .ಸಾಂಪ್ರದಾಯಿಕ ಪರಿಚಯವಿರದ ಮುಖವೂ ನೋಡದ ಇಬ್ಬರು ವ್ಯಕ್ತಿಗಳ ಮಧ್ಯೆ ನಡೆಯುತ್ತಿದ್ದ ಪತ್ರವ್ಯವಹಾರಗಳು ಆಗಿನ ಕಾಲದ ವಿಶೇಷ.
ಮಂಗಳ ವಾರ ಪತ್ರಿಕೆಯ ಸಹ ಈ ರೀತಿಯ ಪತ್ರ ಮಿತ್ರತ್ವ ಪದ್ದತಿಯನ್ನು ನಡೆಸುತ್ತಿತ್ತು ಎಂದು ನೆನಪು .
ಪತ್ರಗಳೆಂದರೆ ಒಂತರಾ ತೀರಾ ಖಾಸಗಿತನದ ಅನುಭವ .ಒಂದೇ ಬಾರಿ ಮಾತ್ರವಲ್ಲ ಅದೆಷ್ಟೋ ಬಾರಿ ಓದಿದರೂ ತೀರದ ದಾಹದ ತುಡಿತ ಮಿಡಿತ . ಸ್ಪರ್ಶಮಾತ್ರದಿಂದಲೇ ಬರೆದವರ ಸಂವೇದನೆಗಳು ವ್ಯಕ್ತವಾಗುತ್ತಿವೆ ಏನೋ ಎಂಬಂತೆ ಅವು ಕೊಡುವ ಮಾನಸಿಕ ಉಲ್ಲಾಸ ಸ್ತರವೇ ವಿಭಿನ್ನ ವಿನೂತನ. ಅಮ್ಮ ಅಪ್ಪ ಹಸ್ತ ಬರಹದ ಆ ಕಾಗದಗಳು ಇನ್ನೂ ನನ್ನ ಬಳಿ ಜೋಪಾನವಾಗಿವೆ. ಒಂದರಲ್ಲಿ ಯಂತೂ ಆಗತಾನೆ ಕಣ್ಣ ಪೊರೆ ಬೆಳೆಯುತ್ತಿದ್ದರಿಂದ ಅಮ್ಮ ಸ್ವಲ್ಪ ದಪ್ಪಗೆ ಬರಿಯೇ ಸರಿಯಾಗಿ ಕಾಣಲ್ಲ ಎಂದಿದ್ದು ಈಗ ತಾನೆ ಕಣ್ಣಪೊರೆ ಶಸ್ತ್ರ ಕ್ರಿಯೆಗೆ ಒಳಪಟ್ಟ ನನಗೆ ಅವರ ಕಷ್ಟದ ಅರಿವುಂಟು ಮಾಡಿಸಿದೆ . ಹೆಚ್ಚು ಬರೆಯಲು ಸಣ್ಣಗೆ ಕೊರೆಯುತ್ತಿದ್ದ ಜಿಪುಣಿ ನಾನು. ಪ್ರತಿ ಪತ್ರದಲ್ಲೂ ಕಾಳಜಿ ವಹಿಸುವ ಊಟತಿಂಡಿ ಸರಿಯಾಗಿ ಮಾಡು ತಲೆಗೆ ಎಣ್ಣೆ ಹಚ್ಚಿಕೋ ಎಂದೆಲ್ಲ ಬರೀ ನನ್ನ ಒಳಿತನ್ನೇ ಬಯಸುತ್ತಿದ್ದ ಅವರ ಪತ್ರಗಳನ್ನು ಓದಿ ಮಾತ್ರವೇ ಈಗ ಸಮಾಧಾನಪಟ್ಟುಕೊಳ್ಳಬೇಕು. ಟೆಲಿಫೋನ್ ಕರೆಯ ಮಾತು ಕಿವಿಯಲ್ಲಿ ಉಳಿದಿಲ್ಲ. ಈಗಿನ ಮೊಬೈಲು ಮೆಸೇಜುಗಳಾದರೂ ಅದಕ್ಕೆ ಪರ್ಸನಲ್ ಟಚ್ ಇರಲ್ಲ. ಫೋನ್ ಮೆಮೊರಿ ಹೆಚ್ಚಾಗುತ್ತಾ ಇದ್ದಂತೆ ಡಿಲೀಟು ಭಾಗ್ಯ. ಪ್ರೀತಿ ವಾತ್ಸಲ್ಯ ಸ್ನೇಹ ವಿಶ್ವಾಸಗಳೂ ಕೂಡ ಮನಸ್ಸಿನಿಂದ ಬರಬರುತ್ತಾ ಡಿಲೀಟು ಆಗುತ್ತೇನೋ ಅಂತ ಸಂಶಯ ನನಗೆ .
ಕಡೆಯಲ್ಲಿ ಆಧ್ಯಾತ್ಮದ ಅರಿವುಂಟು ಮಾಡಿಸುವ ದಾಸರ ಪದದ ನೆನಪು . ದಾಸರು ಹೇಳುತ್ತಾರೆ “ಕಾಗದ ಬಂದಿದೆ ನಮ್ಮ ಕಮಲನಾಭನದು” ಎಂದು ಅರಿಷಡ್ವರ್ಗಗಳ ಬಿಡಿರೆಂದು ಸಜ್ಜನರ ಸಹವಾಸ ಮಾಡಿರೆಂದು ಗೆಜ್ಜೆ ಕಟ್ಟಿ ದೇವರ ಸ್ತುತಿ ಮಾಡುತ್ತಾ ಕುಣಿಯಿರೆಂದು ಕಮಲನಾಭ ತಾನೇ ಬರೆದಿದ್ದಾನೆ ಎನ್ನುತ್ತಾರೆ.
ಜೀವನವೂ ಅಷ್ಟೇ ತಾನೆ ಹೀಗೇ ಸಾಗಿ ಹಾಗೇ ಮುಗಿದು ಹೋಗುತ್ತದೆ . ಆದರೆ ತನ್ನಲ್ಲಿಗೆ ಕರೆಸಿಕೊಳ್ಳಲು ಮಾತ್ರ ಆ ದೇವರು ಮೊದಲೇ ತಿಳಿಸಿ ಕಾಗದ ಬರೆದು ಆಹ್ವಾನಿಸಲ್ಲ ಅಷ್ಟೇ.
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು.
ಸಂಪಾದಕರಿಗೆ ಧನಂಯವಾದಗಳು.
ಸುಜಾತಾ ರವೀಶ್