ಅಂಕಣ ಸಂಗಾತಿ

ಗಜಲ್ ಲೋಕ

ಸುನಂದಾ ಅವರ ಇನಿದನಿ ಆಲಿಸುತ್ತಾ…

ಹಲೋ.

ನನ್ನ ಎಲ್ಲ ಕನ್ನಡದ ಮನಸುಗಳಿಗೆ ಈ ಮಲ್ಲಿಯ ಮಲ್ಲಿಗೆಯಂತ ಶುಭಕಾಮನೆಗಳು. ಪ್ರತಿ ಗುರುವಾರದಂತೆ ಇಂದೂ ಸಹ ಒಬ್ಬ ವಿಶಿಷ್ಟ ಗಜಲ್ ಸಾಧಕರ ಹೆಜ್ಜೆ ಗುರುತುಗಳೊಂದಿಗೆ ನಿಮ್ಮ ಮುಂದೆ ಪ್ರತ್ಯಕ್ಷನಾಗಿದ್ದೇನೆ.

ಆಹಾ ಸುಖವೇ! ಅವಳು ನನ್ನಲ್ಲಿಗೆ ಬರುವ ಸುದ್ದಿಯೊಂದು ಸುತ್ತೆಲ್ಲ ಹಬ್ಬಿದೆಯಲ್ಲ!

ಅಯ್ಯೋ ನೋವೆ ಅವಳಿಗಾಗಿ ಹಾಸಲು ಮನೆಯೊಳಗೆ ಚಾಪೆಯೂ ಇಲ್ಲವಲ್ಲ!”

                                   -ಮಿರ್ಜಾ ಗಾಲಿಬ್

          ಮನುಷ್ಯನ ಅನುಪಮವಾದ ಸೃಜನಶೀಲ ಕಲೆಯೆಂದರೆ ಅದು ಕಾವ್ಯದ ರಚನೆ. ಈ ಕಾವ್ಯವೆ ಅವನನ್ನು ಪ್ರೀತಿಪೂರ್ಣ ಹೃದಯದವನನ್ನಾಗಿ ಮಾಡಿದ್ದು. ಈ ಹಿನ್ನೆಲೆಯಲ್ಲಿ ಕವಿಯಾದವನು ಸವಿನುಡಿಯ ಸಿರಿಗುಡಿ ಕಟ್ಟುವ ಶಿಲ್ಪಿ. ಇದು ಸಾಧ್ಯವಾಗಬೇಕಾದರೆ ಕಾವ್ಯ ಸೃಜನಾತ್ಮಕವಾಗಿರಬೇಕೇ ಹೊರತು ಕೇವಲ ಶಬ್ದಾಡಂಬರದಿಂದ ಕೂಡಿರಬಾರದು. ಉದಾತ್ತ ಚಿಂತನೆಗಳು, ಉಪಮಾನಗಳ ಅಪೂರ್ವತೆ ಮತ್ತು ನವೀನತೆ, ಮೃದುಹಾಸ್ಯ, ಶ್ಲೇಷೆ, ವಸ್ತುವಿನ ನೂತನತೆ, ಅನುಭಾವಿಕತೆ, ಮೃದು ಮಧುರ ಶೈಲಿ, ಪ್ರತಿಮಾ ಯೋಜನೆ, ಸೂಕ್ಷ್ಮ ಪರಿವೀಕ್ಷಣೆ, ಜೀವನದ ಕಟು ಅನುಭವಗಳ ನೈಜನಿರೂಪಣೆ, ಸರಳತೆ, ಅಭಿವ್ಯಕ್ತಿಯ ಪರಿಣಾಮ ರಮಣೀಯತೆ, ಪ್ರೇಮದ ತೀವ್ರತೆ….ಇವೆಲ್ಲವುಗಳನ್ನು ಕಾವ್ಯದಲ್ಲಿ ಕಾಣುತ್ತೇವೆ. ಈ ಕಾರಣಕ್ಕಾಗಿಯೇ ಇರಬೇಕು ಇಂದಿಗೂ ಕಾವ್ಯ ಪ್ರಕಾರ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದೆ! ಈ ಸಂಸಾರದಲ್ಲಿ ಹಲವಾರು ಧರ್ಮಗಳಿವೆ, ಅವುಗಳನ್ನು ಪಾಲಿಸುವ ಅಸಂಖ್ಯಾತ ಬೇರೆ ಬೇರೆ ಧರ್ಮೀಯರು ಇದ್ದಾರೆ. ಅವರವರ ಧರ್ಮಗಳು ಅವರವರಿಗೆ ಅಥವಾ ಇನ್ನಿತರರಿಗೆ ಎಷ್ಟರಮಟ್ಟಿಗೆ ಹಿತವನ್ನುಂಟು ಮಾಡಿವೆ, ಮಾಡುತ್ತಿವೆಯೆಂದು ಹೇಳಲಿಕ್ಕಾಗದು. ಆದರೆ ಕವಿಯ ಧರ್ಮ ಮಾತ್ರ ಜೀವನವನ್ನು ವಿಕಾಸಗೊಳಿಸಿದೆ, ಗೊಳಿಸುತ್ತಿದೆ ಮತ್ತು ಗೊಳಿಸುತ್ತದೆ! ಈ ನೆಲೆಯಲ್ಲಿ ‘ಗಜಲ್’ ಎನ್ನುವ ಎಳೆನೀರು ಹೃದಯದ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬರುತ್ತಿದೆ. ಪ್ರತಿ ಬರಹಗಾರನ ಅಕ್ಷರಗಳು ಷೇರ್ ನ ಸಾಕ್ಷಾತ್ಕಾರದಲ್ಲಿ ಮಿಂದು ಏಳುತ್ತಿರುವುದೇ ಇದಕ್ಕೊಂದು ಉತ್ತಮ ನಿದರ್ಶನ. ಇಲ್ಲಿ ಅನುಭಾವಿ ಶಬ್ಧಗಳು ಪ್ರತಿ ಅಶಅರ್ ಗೆ ಜೀವ ನೀಡುತ್ತವೆ. ಶಬ್ಧವೆಂದರೆ ಅರ್ಥವನ್ನು ಮೆರೆಸುವ ಕೌಶಲ್ಯವಾಗಿದೆ. ಶಬ್ಧಗಳನ್ನು ಆಯುವುದರಲ್ಲಿ ಮತ್ತು ಅರ್ಥಗಳನ್ನು ಹೊಳೆಯಿಸುವುದರಲ್ಲಿ ಗಜಲ್ ಗೋ ನಿರತನಾಗಿರುತ್ತಾನೆ, ನಿರತನಾಗಿರಬೇಕು.‌ ಇದೆಲ್ಲವನ್ನೂ ತಮ್ಮ ಗಜಲ್ ಗಳ ಮುಖಾಂತರ ಕಟ್ಟಿಕೊಟ್ಟವರೆಂದರೆ ವಿಜಯಪುರದ ಕೆ.ಸುನಂದಾ ಎಂಬ ಗಜಲ್ ಕಾರ್ತಿ!!

       ಶ್ರೀ ಕಲ್ಮೇಶಪ್ಪ ವಿಶ್ವಕರ್ಮ ಹಾಗೂ ಶ್ರೀಮತಿ ಸುಶೀಲಾಬಾಯಿ ವಿಶ್ವಕರ್ಮ ದಂಪತಿಗಳ ಮಗಳಾಗಿ ಕೆ. ಸುನಂದಾ ಅವರು 1968 ರ ಫೆಬ್ರುವರಿ 15 ರಂದು ಜನಿಸಿದ್ದಾರೆ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶ್ರೀಯುತರು ಸದ್ಯ ವಿಜಯಪುರದ ವಿವೇಕನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೇ ಸಂಗೀತ, ಹಾಡುಗಾರಿಕೆ ಮತ್ತು ಕಾವ್ಯದಲ್ಲಿ ಆಸಕ್ತಿ ಹೊಂದಿದ್ದ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಮೌಲಿಕ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ‘ಶ್ರೀ ಕಲ್ಮೇಶ್ವರ ಭಕ್ತಿಗೀತೆಗಳು’, ‘ಗೀಜಗ’, ಎನ್ನುವ ಕಥಾಸಂಕಲನ ‘ದಾರಿದೀಪ’, ‘ನೀ ನಕ್ಕಾಗ’, ‘ನಾವು ಯಾರಿಗೇನು ಕಮ್ಮಿ’ ಎನ್ನುವ ಮಕ್ಕಳ ಕವನ ಸಂಕಲನಗಳು ಹಾಗೂ ‘ಇನಿದನಿ’ (2011) ಎಂಬ ಗಜಲ್ ಸಂಕಲನ… ಪ್ರಮುಖವಾಗಿವೆ. ಸದಾ ಕ್ರಿಯಾಶೀಲರಾಗಿರುವ ಇವರು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಯೋಗ ಶಿಕ್ಷಕಿಯಾದ ಇವರು ಹಲವಾರು ಸಂಘ-ಸಂಸ್ಥೆಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತರಾಗಿ ಹಲವಾರು ಗೌರವ ಸನ್ಮಾನ, ಪುರಸ್ಕಾರ, ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವುಗಳಲ್ಲಿ ಬೆಂಗಳೂರಿನ ಅತ್ತಿಮಬ್ಬೆ ಪ್ರಶಸ್ತಿ, ಶಿವಶರಣೆ ಅಕ್ಕಮಹಾದೇವಿ ಪ್ರಶಸ್ತಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ… ಮುಂತಾದವುಗಳು ಮಹತ್ವವನ್ನು ಪಡೆದುಕೊಂಡಿವೆ.

      ಗಜಲ್ ಅಂತರಂಗದಲ್ಲಿ ಅರಳುವ ಕಲಾ ಕುಸುಮ. ಹೊರಗೆ ಪ್ರಕಟವಾಗುವ ಪೂರ್ವದಲ್ಲಿ ಗಜಲ್ ಗೋ ಅವರ ಮನಸ್ಸು ಭಾವಗಳಿಂದ ತುಂಬಿಕೊಂಡಿರುತ್ತದೆ, ತುಂಬಿಕೊಂಡಿರಬೇಕು. ಇದರಿಂದ ಗಜಾಲ್ ಗೊಂದು ಮಹೆಕ್ ಪ್ರಾಪ್ತವಾಗುತ್ತದೆ. ಈ ಜಗತ್ತು ವಿಶಾಲವಾಗಿದೆ. ಅದರ ಮುಖಗಳು ಕೋಟ್ಯಾನುಕೋಟಿ. ಜಗತ್ತಿನ ಭೂಮಿಕೆಯಿಂದ ವಸ್ತುವನ್ನು ಆಯ್ಕೆ ಮಾಡಿಕೊಳ್ಳುವ ಗಜಲ್ ಜಗತ್ತಿನಗಿಂತಲೂ ಚಿರಕತನವಾಗಿರುತ್ತದೆ. ಜೀವ, ದೇವ ಇದು ನಮ್ಮ ಭಾರತೀಯ ಪರಂಪರೆಯ ಕುರುಹು. ಜೀವ ದೇವನ ಹುಡುಕಾಟದಲ್ಲಿ ಬಳಲಿ, ವಿರಹ ವೇದನೆಯಲ್ಲಿ ಬೆಂದು, ದೇವನ ಕರುಣೆಗಾಗಿ ಹಂಬಲಿಸಿ ಅವನ ಒಲುಮೆಗಾಗಿ ಬಯಸುವುದು, ದೇವನಲ್ಲಿ ಒಂದಾಗುವ ವಾಂಛೆಯನ್ನು ಪಿಸುಮಾತಿನಲ್ಲಿ ಹೇಳುವುದು ಸುನಂದಾರವರ ಗಜಲ್ ಗಳಲ್ಲಿ ಸುಂದರವಾಗಿ ಅಭಿವ್ಯಕ್ತಗೊಂಡಿವೆ. ಇವರ ‘ಇನಿ ದನಿ’ಯ ಆರಂಭವೇ ‘ವಿಘ್ನನಾಶಕ’ನಿಂದ ಆರಂಭವಾಗಿದೆ. ಅಂದರೆ ಗಣೇಶನ ಸ್ತುತಿ. ಭಾರತೀಯ ಪರಂಪರೆಯಲ್ಲಿ ಪ್ರಾರಂಭದಲ್ಲಿ ತಮ್ಮ ಇಷ್ಟ ದೇವರ ಪ್ರಾರ್ಥನೆ ಸಲ್ಲಿಸುವ ಪರಿಪಾಠವಿದೆ. ಅದನ್ನು ಗಜಲ್ ಗೋ ಅವರು ತುಂಬಾ ಚೆನ್ನಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ‘ಗಜಲ್’ ಎನ್ನುವ ಮಳೆಬಿಲ್ಲು ಭಾರತೀಯ ಸಂಸ್ಕೃತಿಯಲ್ಲಿ ಪರಕಾಯ ಪ್ರವೇಶ ಮಾಡಿರುವ ರೀತಿ ಅನನ್ಯವಾಗಿದೆ.‌

ನೀನಿಲ್ಲದ ಬದುಕು ಪಲ್ಲವಿ ಇಲ್ಲದ ಚರಣದಂತೆ

ನೀ ಕಾಣದ ಕ್ಷಣ ನೇಸರ ನಿರದ ತಾವರೆಯಂತೆ

ಈ ಮೇಲಿನ ಷೇರ್ ಸೂಫಿ ನೆಲೆಯ ಪ್ರೇಮವನ್ನು ತನ್ನೊಳಗೆ ಗರ್ಭಿಕರಿಸಿಕೊಂಡಿದೆ. ದೇವರ ಧ್ಯಾನದಲ್ಲಿ ಮುಳುಗುವ ವ್ಯಕ್ತಿಯ ಹೃದಯದಲ್ಲಿ ಪ್ರೇಮ ಭಾಷೆಯಲ್ಲದೆ ಬೇರೇನೂ ಉದಯಿಸದು. ಸೂಫಿಗಳು ದೇವರನ್ನು ಮತ್ತು ತಮ್ಮ ಗುರುಗಳನ್ನು ಪ್ರಿಯತಮೆಗೆ ಹೋಲಿಸಿ ಪ್ರೇಮ ಕಾವ್ಯ ಬರೆಯುತಿದ್ದರು ಎಂಬುದು ಸರ್ವವಿಧಿತ. ಇದರ ಛಾಯೆ ಗಜಲ್ ಗೋ ಸುನಂದಾ ಅವರ ಗಜಲ್ ಗಳಲ್ಲಿ ಕಾಣುತ್ತೇವೆ.‌ ದೇವರು ಮತ್ತು ಭಕ್ತನ ನಡುವಿನ ಅವಿನಾಭಾವ ಸಂಬಂಧಗಳನ್ನು ಪ್ರಿಯತಮೆಯ ಪ್ರೇಮದ ಪ್ರತಿಮೆಗಳಾಗಿ ಬಳಸಿಕೊಂಡಿರುವುದು ಮನದಟ್ಟಾಗುತ್ತದೆ.

             ಮನುಷ್ಯ ಹಾಗೂ ಸಾಮಾಜಿಕ ವ್ಯವಸ್ಥೆ ಹಲವು ಸಂವೇದನೆಗಳ ತವರೂರು. ಈ ಹಿನ್ನೆಲೆಯಲ್ಲಿ ಇಂದು ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿರುವ ಸಂವೇದನೆ ಎಂದರೆ ಸ್ತ್ರೀ ಸಂವೇದನೆ. ಮೂಲಭೂತವಾಗಿ ಸ್ತ್ರೀ ಸಂವೇದನೆಯೆಂದರೆ ಸಾಮಾಜಿಕ ಸಂವೇದನೆ. ದುರಂತವೆಂದರೆ ಪುರುಷರಲ್ಲಿ ಸ್ತ್ರೀ ಸಂವೇದನೆ ಕಾಣೆಯಾಗುತ್ತಿರುವುದರಿಂದಲೇ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರಗಳು ನಡೆಯುತ್ತಿರುವಂತಹ ಅಂತಃಕರಣವಿಲ್ಲದ ಸಮಾಜದಲ್ಲಿ ನಾವು ಉಸಿರಾಡುತಿದ್ದೇವೆ. ಈ ನೆಲೆಯಲ್ಲಿ ಕೆಳಗಿಳಿಸಿ ಷೇರ್ ಅತಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.

ಗಂಡು ಹೆಣ್ಣಿನ ಸಮಾಗಮದಿಂದಲೇ ಬಂದವಳು ಸ್ತ್ರೀ

ಜರಿಯುವಿರೇಕೆ ಹೆಣ್ಣನ್ನು ಮಾತ್ರವೇ ಎಂದವಳು ಸ್ತ್ರೀ

ಪ್ರಕೃತಿಯ ಮಡಿಲಲ್ಲಿ ಸ್ತ್ರೀ-ಪುರುಷರೀರ್ವರೂ ಸಮಾನರು. ಆದರೆ ಸೃಷ್ಟಿಯ ವಿರುದ್ಧವಾಗಿ ಸಾಗುವುದೇ ತನ್ನ ಬೌದ್ಧಿಕ ವಿಕಾಸವೆಂದು ಭಾವಿಸುತ್ತಿರುವ ಮನುಕುಲವು ಲಿಂಗ ತಾರತಮ್ಯದಿಂದ ಬಾಂಧವ್ಯದ ಅಸಮತೋಲನಕ್ಕೆ ಮುನ್ನುಡಿ ಬರೆಯುತಿದ್ದಾನೆ. ಈ ಕಾರಣಕ್ಕಾಗಿಯೇ ಗಜಲ್ ಗೋ ಅವರು ಸ್ತ್ರೀ-ಪುರುಷರು ಜನಿಸುವ ಮೂಲದ ನೆಲೆಯ ಕುರಿತು ಚಿಂತನೆ ರೂಪದಲ್ಲಿ ದಾಖಲಿಸಿದ್ದಾರೆ.

         ನಾವು ಇಂದು ಗಜಲ್ ನ ವಸಂತಕಾಲದಲ್ಲಿ ಇದ್ದೇವೆ. ಉರ್ದು ಸಾಹಿತ್ಯದಲ್ಲಿ ಕಾವ್ಯ ಎಂದರೆ ‘ಗಜಲ್’ ಎನ್ನುವಷ್ಟರ ಮಟ್ಟಿಗೆ ಪಸರಿಸಿದೆ.‌ ಕನ್ನಡದಲ್ಲಿಯೂ ಸಹ ಕಾವ್ಯ ಎಂದರೆ ‘ಗಜಲ್ಲಾ’ ಎಂದು ಕೇಳುವ ಹಂತಕ್ಕೆ ಗಜಲ್ ಸಾಗುವಳಿ ಜರುಗುತ್ತಿದೆ.‌ ಗಜಲ್ ಸಂವೇದನೆ ನಿರಂತರವಾಗಿ ನಮ್ಮನ್ನು ಹರಿತಗೊಳಿಸುವ ಕ್ರಿಯೆ ಆಗಿದ್ದು, ‘ನಾನು’ ಎಂಬ ಅಹಂಕಾರದಿಂದ ಬಿಡುಗಡೆಗೊಳಿಸುವ ಸಾಧನವಾಗಿದೆ. ‘ಗಜಲ್’ ಎನ್ನುವುದು ಭಾಷೆಯ ಜೊತೆ ನಡೆಸುವ ಸಜೀವ ಹುಡುಕಾಟದ ಅನುಸಂಧಾನವಾಗಿದೆ. ನೇರವಾಗಿ ಹೇಳಲು ಸಾಧ್ಯವಾಗದೆ ಇರುವುದನ್ನು ಹೇಳಲು ಸಾಧ್ಯವಿರುವ ಸಲಕರಣೆಗಳ ಮೂಲಕ ಧ್ವನಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಗೋ ಅವರ ಗಜಲ್ ಗಳಲ್ಲಿ ಭಾವದೀಪ್ತಿಯ ನೂರ್ ಸಹೃದಯ ಓದುಗರ ಹಾಗೂ ಕೇಳುಗರ ಹೃದಯದೊಂದಿಗೆ ಸಂವಾದ ಮಾಡುತ್ತಿವೆ. ಇವರಿಂದ ಇನ್ನೂ ಹೆಚ್ಚು ಹೆಚ್ಚು ಗಜಲ್ ಗಳು, ಗಜಲ್ ಸಂಕಲನಗಳು ಪ್ರಕಟವಾಗಲಿ ಎಂದು ಶುಭ ಕೋರುತ್ತೇನೆ.

ಸಾಧನೆಯ ಪಥದ ಕಣಿವೆಯಲ್ಲಿ ಬೆಂಕಿಯಲ್ಲದೆ ಯಾರೂ ಪ್ರವೇಶಿಸಬಾರದು

ಅಗ್ನಿಯಂತೆ ಉರಿಯದವನಿಗೆ ಒಲುಮೆ ದಕ್ಕಲಾರದು

              –ಉಮರ್ ಖಯ್ಯಾಮ್

ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಮ್ಮೆ ನಿಮ್ಮ ನೆಚ್ಚಿನ ಗಜಲ್ ಉಸ್ತಾದರೊಂದಿಗೆ ನಿಮ್ಮ ಮುಂದೆ ಪ್ರತ್ಯಕ್ಷನಾಗುವೆ. ಅಲ್ಲಿಯವರೆಗೂ ಧನ್ಯವಾದಗಳು..

—————————.

ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top