ಒಡೆದ ಹೃದಯ

ಕಾವ್ಯ ಸಂಗಾತಿ

ಒಡೆದ ಹೃದಯ

ಲಕ್ಷ್ಮಿ ಕೆ ಬಿ

ಒಡೆದ ಕನ್ನಡಿಯ ಕಣ್ಣುಗಳು
ತನ್ನ ಚೂರಾದ
ಹೃದಯವನ್ನು ಕಂಡು
ನೆಲಕಚ್ಚಿ ಬಿಕ್ಕುತ್ತಿವೆ….

ದೂರಾದ ಮನಸ್ಸುಗಳ ನಡುವೆ
ಹಮ್ಮುಬಿಮ್ಮುಗಳು
ಗಮ್ಯ ತಿಳಿಯದೆ
ಗಗನಕ್ಕೇರಿ ನಲಿಯುತ್ತಿವೆ

ಜಾಣ ಕಿವುಡನ್ನು
ಅಪ್ಪಿ ಮೆರೆಯುತ
ನೆನಪ ತೀರವು
ನೋವ ಮರೆಯುತ
ಇಚ್ಛಾಮರಣ ಬೇಡುತ್ತಿವೆ

ಒಡೆದ ಕನ್ನಡಿಯ ಕಣ್ಣುಗಳು
ಕಂಬನಿಯ ಮಳೆಯಲ್ಲಿ ನೆನೆಯುತ್ತ
ಕತ್ತಲ ಮನೆಯೊಳಗೆ
ದೀಪ ಹೊತ್ತಿಸಲು ಕಾತರಿಸುತ್ತಿವೆ

ನಾನು ನಾನಾಗಬಹುದೆ?
ಮತ್ತದೇ ನನ್ನದೇ
ಬಣ್ಣ, ರೂಪ, ಆಕಾರಗಳ
ಹಿಂದಿರುಗಿ ಪಡೆಯಬಹುದೇ?

ನೆನಪುಗಳ ತೀರದಲ್ಲಿ
ತಿರುವು ಹುಡುಕುತ್ತಾ
ಇತ್ತಿಂದತ್ತಗೆ ಅತ್ತಿಂದಿತ್ತಗೆ
ಚಲಿಸುತ್ತಾ ಮಿಡಿಯುತ್ತ

ಚಿಂತನಾ ಸಾಗರದಲ್ಲಿ
ಮುಳುಗಿ ಮೇಲೆದ್ದರು
ಉತ್ತರ ಸಿಗದೇ
ಪ್ರಶ್ನೆಯಾಗೇ ಉಳಿದುಹೋದ
ಕನ್ನಡಿಯ ಕಣ್ಣುಗಳು
ತನ್ನ ಚೂರಾದ
ಹೃದಯವನು ಕಂಡು
ನೆಲಕಚ್ಚಿ ಬಿಕ್ಕುತ್ತಿವೆ….


One thought on “ಒಡೆದ ಹೃದಯ

Leave a Reply

Back To Top