ಧಾರಾವಾಹಿ
ಆವರ್ತನ
ಅದ್ಯಾಯ-44
ಏಕನಾಥರು ಒಂದು ಕಾಲದಲ್ಲಿ ತಮ್ಮನ್ನು ಕಾಡುತ್ತಿದ್ದಂಥ ದಟ್ಟದಾರಿದ್ರ್ಯವನ್ನು ಮೀರಿ ಬೆಳೆದಿದ್ದರು. ಹಾಗಾಗಿ ಅಂದು, ‘ಹೊಟ್ಟೆಪಾಡಿಗೊಂದು ಉದ್ಯೋಗ!’ ಎಂದಿದ್ದ ಅವರ ಆ ಬೀಜಮಂತ್ರದ ಅರ್ಥವು ಈಗ ಸಂಪೂರ್ಣ ಬದಲಾಗಿ, ‘ಆಗರ್ಭ ಶ್ರೀಮಂತಿಕೆ ಮತ್ತು ಸಾಮಾಜಿಕ ಪ್ರತಿಷ್ಠೆಯೇ ತಮ್ಮ ಜೀವನದ ಪರಮೋಚ್ಛ ಗುರಿ!’ ಎಂದಾಗಿತ್ತು. ಆದ್ದರಿಂದ ತಮ್ಮ ಹಠಯೋಗದಂಥ ಜೀವನಶೈಲಿಯಿಂದ ತಾವು ಅಂದುಕೊಂಡಂತೆಯೇ ಭರ್ಜರಿ ಯಶಸ್ಸು ಗಳಿಸಿದ್ದರು. ಆವತ್ತು ಒಂದು ಹೊತ್ತಿನ ತುತ್ತಿಗೂ ಗತಿಯಿಲ್ಲದ ಕಾಲದಲ್ಲಿ ಏನೇನು ಬಯಸಿದ್ದರೋ ಅವೆಲ್ಲವೂ ಇಂದು ಅವರ ಪಾದಗಳ ಬಳಿ ಬಂದು ಬಿದ್ದಿದ್ದವು. ಮುಖ್ಯವಾಗಿ ಲಕ್ಷ್ಮಿದೇವಿಯ ಕಟಾಕ್ಷವು ಅವರ ಮೇಲೆ ಇನ್ನಿಲ್ಲದಂತೆ ಆಗಿತ್ತು! ಹಾಗಾಗಿ ಈಗ ಅವರ ಬಳಿ ಲೆಕ್ಕವಿಲ್ಲದಷ್ಟು ಹಣವಿದೆ. ಅಳತೆಗೆ ಮೀರಿದಷ್ಟು ಆಸ್ತಿಯಿದೆ. ಎರಡೋ ಮೂರೋ ವಿದೇಶಿ ಕಾರುಗಳಿವೆ. ಶಂಕರನದಕ್ಕಿಂತಲೂ ದೊಡ್ಡ ಬಂಗಲೆಯಿದೆ. ಊರಿನ ಕೆಲವಾರು ಕಡೆ ಎಕರೆಗಟ್ಟಲೆ ಜಮೀನು ಕೊಂಡಿದ್ದಾರೆ. ಸಮಾಜ ಮತ್ತು ಸರಕಾರದ ಮಾನ್ಯತೆ ಪಡೆಯಲೆಂಬಂತೆ ಉಗ್ರಾಣಿಬೆಟ್ಟಿನಲ್ಲಿ ಕೊಂಡಿದ್ದ ಒಂದೂವರೆ ಎಕರೆ ತೋಟವನ್ನು ಕೋಮಲದೇವಿ ಎಂಬ ಸಮಾಜ ಸೇವಕಿಯ ‘ಕರುಣಾಳು ಬಾ ಬೆಳಕೇ!’ ಎಂಬ ವೃದ್ಧಾಶ್ರಮಕ್ಕೆ ಬಾಡಿಗೆಯಿಲ್ಲದೆ ಕೊಟ್ಟಿದ್ದಾರೆ.
ಊರ ಪರವೂರ ಜನಾಭಿವೃದ್ಧಿ ಮತ್ತು ಧಾರ್ಮಿಕಾಭಿವೃದ್ಧಿ ಚಟುವಟಿಕೆಗಳಿಗೆ ಮನಸೋಇಚ್ಛೆ ದಾನಧರ್ಮಗಳನ್ನು ಮಾಡುತ್ತ ಬಂದಿದ್ದಾರೆ. ಅಂದು ತಮ್ಮ ಪುಟಗೋಸಿ ಗೆಳೆಯ ಶಂಕರ, ‘ಗುರೂಜೀ!’ ಎಂದು ಕರೆದ ಹೆಸರಿಗೆ ತಕ್ಕಂತೆ ನಾಡಿನಾದ್ಯಂತ ಜನರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಹೀಗಿದ್ದ ಗುರೂಜಿಯವರ ಈ ಎಲ್ಲಾ ಚಟುವಟಿಕೆ ಮತ್ತು ಕಾರ್ಯಸಾಧನೆಗಳನ್ನು ಅಂತರ್ಜಾಲದ ಮೂಲಕವೇ ಕಣ್ಗಾವಲಿಟ್ಟು ಅಧ್ಯಯನ ಮಾಡುತ್ತ ಬಂದಿರುವ ಉತ್ತರ ಭಾರತದಾಚೆಗಿನ ಯಾವುದೋ ಅನಾಮಧೇಯ ವಿಶ್ವವಿದ್ಯಾಲಯವೊಂದು ತಮ್ಮ ವಿದ್ಯಾ ಸಂಸ್ಥೆಗೆ ಗುರೂಜಿಯವರು ಪ್ರೀತಿಯಿಂದ ನೀಡಿದ ಎರಡು ಲಕ್ಷ ರೂಪಾಯಿಗಳ ಉದಾರ ದೇಣಿಗೆಯ ಕೃತಜ್ಞಾರ್ಥವಾಗಿ ಅವರಿಗೆ ‘ಗೌರವ ಡಾಕ್ಟರೇಟ್’ ಪದವಿಯನ್ನೂ ನೀಡಿ ಗೌರವಿಸಿದೆ. ಹಾಗಾಗಿ ಈಗ ಜನರು ಅವರನ್ನು, ‘ಡಾಕ್ಟರ್ ಏಕನಾಥ ಗುರೂಜಿ!’ ಎಂದೂ ಕರೆಯುತ್ತಾರೆ. ಜನರ ಬಾಯಿಯಿಂದ ತಮ್ಮ ಹೆಸರನ್ನು ಆ ಮಾದರಿಯಲ್ಲಿ ಕೇಳುವಾಗ ಗುರೂಜಿಯವರಿಗೆ ತಮ್ಮ ಜನ್ಮ ಸಾರ್ಥಕವಾದಂತೆನ್ನಿಸುತ್ತದೆ. ತಾವೆಂದಾದರೂ ಈ ಮಟ್ಟದ ಯಶಸ್ಸಿನ ಶಿಖರವೇರುತ್ತೇವೆ ಎಂದು ಕನಸು ಮನಸಿನಲ್ಲಾದರೂ ಅಂದುಕೊಂಡಿದ್ದುಂಟಾ? ಇದೆಲ್ಲ ನಾವು ನಂಬಿದ ನಾಗ ಪರಿವಾರ ದೈವಗಳ ಅನುಗ್ರಹವಲ್ಲದೆ ಮತ್ತೇನು? ಎಂದು ತಮ್ಮ ಬಿಡುವಿನ ಸಮಯದಲ್ಲೆಲ್ಲ ಯೋಚಿಸುತ್ತ ಖುಷಿಯಿಂದ ತನ್ಮಯರಾಗುತ್ತಾರೆ.
ಗುರೂಜಿಯವರ ಇಂಥ ಯಶಸ್ಸಿಗೆ ಶಂಕರನಂಥ ಅನೇಕ ಬಿಲ್ಡರ್‍ಗಳು, ಗುತ್ತಿಗೆದಾರರು, ಸಾಫ್ಟ್‍ವೇರ್ ಇಂಜಿನೀಯರ್‍ಗಳು, ವಿವಿಧ ಉದ್ಯಮಿಗಳು, ಒಂದಷ್ಟು ಪ್ರಸಿದ್ಧ ವೈದ್ಯರು, ಮನೋದುರ್ಬಲರು, ಕೊಲೆಗಡುಕರು, ವಂಚಕರು ಮತ್ತು ಅಮಾಯಕ ಬಡ ಜನರಿಂದ ಹಿಡಿದು ನಾಡಿನ ಕೆಲವಾರು ಸಚಿವರು ಹಾಗೂ ಶಾಸಕರವರೆಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಿರಂತರ ಸಹಕಾರ ನೀಡುತ್ತಲೇ ಬಂದಿದ್ದಾರೆ. ಹಾಗಾಗಿ ಗುರೂಜಿಯವರಿಗೆ ಇವರೆಲ್ಲರ ಮೇಲೂ ಅಪಾರ ಅಭಿಮಾನವಿದೆ. ಆದರೆ ಆವತ್ತು ತಾವು ಪೆದುಮಾಳರಿಗೆ ವಿದಾಯ ಹೇಳಿ ಮುಂಬೈಯಿಂದ ಹಿಂದಿರುಗುವಾಗ, ‘ಇಂದಲ್ಲ ನಾಳೆ ನಿಮ್ಮ ಕಣ್ಣ ಮುಂದೆ ನಿಮಗಿಂತಲೂ ಎತ್ತರಕ್ಕೆ ಬೆಳೆದು ತೋರಿಸದಿದ್ದರೆ ನನ್ನ ಹೆಸರು ಏಕನಾಥನೇ ಅಲ್ಲ. ಆ ದಿನವನ್ನು ಎಣಿಸುತ್ತಿರಿ!’ ಎಂದು ನೋವಿನಿಂದ ಶಪಥ ಮಾಡಿ ಬಂದಿದ್ದು ಇವತ್ತಿಗೂ ಅವರನ್ನು ಕಾಡುತ್ತದೆ.
ಅದೇ ಕಾರಣಕ್ಕೋ ಏನೋ ಎಂಬಂತೆ ಅವರ ಹೆಸರು ಬಹಳ ಬೇಗನೇ ಮುಂಬೈ ನಗರಕ್ಕೂ ಹಬ್ಬಿತ್ತು. ಮುಂಬೈಯ ಖ್ಯಾತ ಉದ್ಯಮಿ ಯಶಪಾಲರ ಬಂಗಲೆಯಲ್ಲಿ ಕೆಲವು ವಿಶೇಷ ಹೋಮ ಹವನಗಳನ್ನು ನಡೆಸಿಕೊಡಲು ಗುರೂಜಿಯವರಿಗೆ ಆಹ್ವಾನ ಬಂದಿತು. ಅಂದು ಬೆಳಿಗ್ಗೆ ತಮ್ಮ ಕಛೇರಿಗೆ ಆಗಮಿಸಿದ ಯಶಪಾಲರನ್ನು ಕುಳ್ಳಿರಿಸಿಕೊಂಡ ಗುರೂಜಿಯವರು ನಿಧಾನವಾಗಿ ತಮ್ಮ ಪಂಚಾಂಗ ಮತ್ತು ಜ್ಯೋತಿಷ್ಯ ಪುಸ್ತಕಗಳನ್ನು ತಿರುವಿ ಹಾಕುತ್ತ ಮುಂಬೈ ಕಾರ್ಯಕ್ರಮಕ್ಕೆ ದಿನ ಗೊತ್ತುಪಡಿಸಲೂ ಮತ್ತು ಹಣಕಾಸಿನ ಚೌಕಾಶಿಗೂ ಒಂದು ಗಂಟೆ ಸಮಯವನ್ನು ವಿನಿಯೋಗಿಸಿಕೊಂಡರು. ಬಳಿಕ ಅವರನ್ನು ತೃಪ್ತಿಪಡಿಸಿ ಕಳುಹಿಸಿಕೊಟ್ಟವರು ತಮ್ಮೊಳಗೆ ಸುಪ್ತವಾಗಿ ಹೊಗೆಯಾಡುತ್ತಿರುವ ಪೆದುಮಾಳರ ಮೇಲಿನ ಸೇಡನ್ನು ಇನ್ನು ಕೆಲವೇ ದಿನಗಳಲ್ಲಿ ತೀರಿಸಿಕೊಳ್ಳಲಿಕ್ಕಿದೆ! ಎಂದುಕೊಂಡು ವಿಲಕ್ಷಣ ಖುಷಿಪಟ್ಟು ಉದ್ವೇಗಗೊಂಡರು.
ಆ ದಿನವೂ ಬಂದದುಬಿಟ್ಟಿತು. ಆವತ್ತು ಅತಿಯಾದ ಚಡಪಡಿಕೆಯಲ್ಲಿದ್ದ ಗುರೂಜಿಯವರು ವಿಮಾನದ ಮೂಲಕ ಮುಂಬೈಗೆ ಹಾರಿದರು. ಯಶಪಾಲರ ಪೂಜೆಗಳನ್ನು ತರಾತುರಿಯಲ್ಲಿ ಮುಗಿಸಿಕೊಟ್ಟರು. ಅಲ್ಲೇ ಸ್ವಲ್ಪ ಕಾಲ ವಿಶ್ರಾಂತಿ ಪಡೆದು ಕೂಡಲೇ ಪೆದುಮಾಳ ಗುರುಗಳ ಮನೆಗೆ ಧಾವಿಸಿದರು. ಅಂದು ನಿರ್ಗತಿಕ ಹುಡುಗನಿಂದ ಪ್ರಾಣಿಯಂತೆ ದುಡಿಸಿಕೊಂಡು ಉಟ್ಟ ಬಟ್ಟೆಯಲ್ಲೇ ಹೊರಗೆ ದಬ್ಬಿದ ವಂಚಕ ಗುರುವಿಗೆ ಇವತ್ತು ತಮ್ಮ ಸಾಧನೆ ಮತ್ತು ಶ್ರೀಮಂತಿಕೆ ಎಂಥದ್ದೆಂಬುವುದನ್ನು ತೋರಿಸಬೇಕು. ಅದನ್ನು ನೋಡಿ ಆ ಮುದುಕ ಹಾರ್ಟ್ ಅಟ್ಯಾಕ್ ಆಗಿ ನರಳುವುದನ್ನು ತಾವು ಕಣ್ಣಾರೆ ಕಂಡು ಒಳಗೆ ಧಗಧಗಿಸುವ ಸೇಡಿನ ಜ್ವಾಲೆಯನ್ನು ತಣಿಸಿಕೊಳ್ಳಬೇಕು ಎಂದು ಯೋಚಿಸುತ್ತ ಪೆದುಮಾಳರ ಮನೆಯ ಬಾಗಿಲಿಗೆ ಬಂದು ನಿಂತು ಕರೆಗಂಟೆ ಬಾರಿಸಿದರು. ತುಸುಹೊತ್ತಿನ ನಂತರ ಮುದುಕಿಯೊಬ್ಬಳು ಮೆಲ್ಲನೆ ಬಂದು ಬಾಗಿಲು ತೆರೆದಳು. ಗುರೂಜಿಯವರನ್ನು ಪ್ರಶ್ನಾರ್ಥಕವಾಗಿ ದಿಟ್ಟಿದಳು. ಆದರೆ ಗುರೂಜಿಯವರಿಗೆ ಆಕೆ ಪೆದುಮಾಳರ ಪತ್ನಿ ಅನಸೂಯಮ್ಮ ಎಂದು ತಟ್ಟನೆ ಗುರುತು ಸಿಕ್ಕಿತು. ಆದರೆ ಆಕೆ, ‘ಯಾರು ಬೇಕಾಗಿತ್ತು… ಎಲ್ಲಿಂದ ಬಂದಿರಿ…?’ ಎಂದು ಗುರೂಜಿಯ ಗುರುತು ಹತ್ತದೆ ಪ್ರಶ್ನಿಸಿದಳು. ಆಗ ಗುರೂಜಿಯವರ ಮುಖದಲ್ಲಿ ವ್ಯಂಗ್ಯ ನಗುವೊಂದು ಹೊಮ್ಮಿತು. ಆವತ್ತು ತನ್ನ ಗಂಡನೊಂದಿಗೆ ಸೇರಿ ಈ ಮುದುಕಿಯೂ ತಮ್ಮನ್ನು ಎಷ್ಟೊಂದು ಬಗೆಯಲ್ಲಿ ಹಿಂಸಿಸುತ್ತಿದ್ದಳು! ತಮ್ಮನ್ನು ಆಜನ್ಮ ಗುಲಾಮನಂತೆ ನಡೆಸಿಕೊಂಡು ಹೊಟ್ಟೆಬಟ್ಟೆಗೂ ಸರಿಯಾಗಿ ಕೊಡದೆ ನೋಯಿಸುತ್ತಿದ್ದಳಲ್ಲ ಇವಳು! ಎಂದುಕೊಂಡವರ ಮನಸ್ಸು ಕಹಿಯಾಯಿತು.
‘ಹೌದೌದು. ನಿಮಗೆ ಹೇಗೆ ಗುರುತು ಹತ್ತೀತು ಹೇಳಿ…? ನಮ್ಮ ಏಳಿಗೆಯೇ ಆ ಮಟ್ಟಕ್ಕಾಗಿಬಿಟ್ಟಿದೆಯಲ್ಲ! ಹಾಗಾಗಿ ಯಾರೀಗೂ ಪಕ್ಕನೆ ನಮ್ಮ ಪರಿಚಯವಾಗಲಿಕ್ಕಿಲ್ಲ ಬಿಡಿ. ನಮ್ಮ ಗುರುತನ್ನು ನಾವೇ ಹೇಳಿಕೊಳ್ಳುತ್ತೇವೆ ಕೇಳಿ!’ ಎಂದು ಅಸಡ್ಡೆಯಿಂದ ಅನ್ನುತ್ತ ಅನಸೂಯಮ್ಮನ ಹಿಂದೆಯೇ ಒಳಗೆ ನಡೆದರು. ಅಷ್ಟು ಕೇಳಿದ ಆಕೆ ತಟ್ಟನೆ ಹಿಂದಿರುಗಿ ಗುರೂಜಿಯವರನ್ನು ಅವಕ್ಕಾಗಿ ದಿಟ್ಟಿಸಿದರು. ಆಗ ಗುರೂಜಿ ಮರಳಿ ಹಮ್ಮಿನಿಂದ ನಕ್ಕವರು, ‘ಅರೆರೇ, ಗಾಬರಿಯಾಗಬೇಡಿ ಅನಸೂಯಮ್ಮಾ… ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಏಕನಾಥ ಎನ್ನುವ ಒಬ್ಬ ನತದೃಷ್ಟ ಹುಡುಗ ನಿಮ್ಮ ಈ ಮನೆಯಲ್ಲಿ ಚಾಕರಿಗಿದ್ದ ನೆನಪುಂಟಾ…?’ ಎಂದು ಅವರನ್ನು ಇರಿಯುವಂತೆ ದಿಟ್ಟಿಸುತ್ತ ಕೇಳಿದರು. ಆಗ ಗುರುಪತ್ನಿಗೆ ತಟ್ಟನೆ ನೆನಪಾಯಿತು. ಆದರೆ ಮರುಕ್ಷಣ ಗುರೂಜಿಯವರ ವೇಷಭೂಷಣವನ್ನೂ ಅವರ ಮೈಕೈಯಲ್ಲಿ ನೇತಾಡುತ್ತಿದ್ದ ಚಿನ್ನಾಭರಣವನ್ನೂ ಕಂಡ ಅನಸೂಯಮ್ಮನಿಗೆ ದಿಗಿಲಾಗಿಬಿಟ್ಟಿತು!
‘ಓ ದೇವ, ದೇವಾ…, ನೀನಾ ಮಾರಾಯಾ…! ನನಗೆ ಮೊದಲು ಗುರುತೇ ಸಿಕ್ಕಲಿಲ್ಲ ನೋಡು. ನೀನೆಂಥದು ಮಾರಾಯಾ ಇಷ್ಟೊಂದು ಬದಲಾಗಿದ್ದು! ಅದೆಂಥದು ವ್ಯವಹಾರ ನಿನ್ನದು…?’ ಎಂದು ಬೊಚ್ಚು ಬಾಯಿ ಬಿಟ್ಟುಕೊಂಡು ಪ್ರಶ್ನಿಸಿದರು.
‘ವ್ಯವಹಾರವೆಂಥದು, ನಾವು ಕಲಿತ ವಿದ್ಯೆಯೇ ನಮ್ಮನ್ನು ಈ ಮಟ್ಟಕ್ಕೇರಿಸಿತು. ಹ್ಞಾಂ! ಆದರೆ ನಿಮ್ಮ ಗಂಡನಿಂದ ಕಲಿತ ಆ ಪೊಟ್ಟು ಶಾಸ್ತ್ರವಲ್ಲ. ನಾವೇ ನಮ್ಮೂರಿನಲ್ಲಿ ಅನೇಕ ವರ್ಷಗಳ ಕಾಲ ಹಠ ಹಿಡಿದು ಕಲಿತ ವಿದ್ಯೆಯಿಂದಲೇ ಇಷ್ಟೆಲ್ಲ ಆದುದು! ಅದೇನು ನಿಮ್ಮ ಗಂಡನಿಗೆ ಮಾತ್ರ ದೇವರು ದಿಂಡರ ವೈಹಿವಾಟು ಮಾಡಲು ಬರುವುದಾ? ನಮಗೆ ಸಾಧ್ಯವಿಲ್ಲವಾ… ಎಲ್ಲಿದ್ದಾರೆ ಅವರು…? ಒಮ್ಮೆ ನೋಡಬೇಕಲ್ಲ ಅವರನ್ನು. ಹೊರಗೆ ಕರೆಯಿರಿ ನೋಡುವ!’ ಎಂದು ನಂಜು ಕಾರುತ್ತ ಹೇಳಿದರು. ಗುರೂಜಿಯವರ ಅಂಥ ಅಹಂಕಾರದ ಮಾತುಗಳನ್ನು ಕೇಳಿದ ಅನಸೂಯಮ್ಮನ ಜೋಲು ಮೋರೆ ತಟ್ಟನೆ ಕಳೆಗುಂದಿತು. ಆದರೂ ಸಂಭಾಳಿಸಿಕೊಂಡು, ‘ಅಯ್ಯೋ ಮಾರಾಯಾ…ಅವರ ಕಥೆ ಏನು ಹೇಳುವುದು. ಅವರು ಚಾಪೆ ಹಿಡಿದು ಐದು ವರ್ಷವಾಗುತ್ತ ಬಂತು…!’ ಎಂದರು ದುಃಖದಿಂದ. ಅಷ್ಟು ಕೇಳಿದ ಗುರೂಜಿಯವರಿಗೆ ಒಮ್ಮೆಲೇ ನಿರಾಶೆಯಾಯಿತು.
‘ಹೌದಾ,… ಏನಾಯ್ತು, ಯಾವುದಾದ್ರೂ ಕಾಯಿಲೆಯಾ…?’
‘ಕಾಯಿಲೆಯೋ ಕಸಾಲೆಯೋ ದೇವರೇ ಬಲ್ಲ. ಅದೊಂದು ದೊಡ್ಡ ಕಥೆ. ಹೇಳುತ್ತೇನೆ ಕುಳಿತುಕೋ. ಬಾಯಾರಿಕೆ ತಗೊಳ್ಳುತ್ತೀಯಾ…?’
‘ಸದ್ಯಕ್ಕೇನೂ ಬೇಡ. ಗುರುಗಳಿಗೇನಾಯ್ತು ಹೇಳಿ!’
‘ಹೇಳುತ್ತೇನೆ…’ ಎಂದ ಅನಸೂಯಮ್ಮ ಗುರೂಜಿಯೆರೆದುರು ಕುಳಿತುಕೊಳ್ಳುತ್ತ ವಿಷಯ ಆರಂಭಿಸಿದರು. ‘ಕೆಲವು ವರ್ಷಗಳ ಹಿಂದೆ ಬಾಂದ್ರಾದ ಲೇಡಿಸ್ ಬಾರೊಂದರಲ್ಲಿ ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆ ನಡೆಯಿತಲ್ಲ ಗೊತ್ತುಂಟಾ ನಿನಗೆ?’
‘ಹೌದಾ…? ಇಲ್ವಲ್ಲಾ. ಯಾರು ಮಾಡಿದ್ದು…?’
‘ಯಾರೂಂತ ಗೊತ್ತಿಲ್ಲ. ಅದನ್ನು ಮಾಡಿಸಿದ್ದು ಮಾತ್ರ ಅದೇ ಹೊಟೇಲು ಮಾಲಿಕ ಎಂಬ ಸುದ್ದಿ ಹಬ್ಬಿತ್ತು. ಅದು ಆ ಹೆಣ್ಣುಮಕ್ಕಳ ಹೆತ್ತವರಿಗೆ ತಿಳಿಯಿತು. ಅವರು ಅವನ ಮೇಲೆ ಕೇಸು ಹಾಕಿದರು. ಆದರೆ ಹೊಟೇಲು ಶೇಟಿನ ದುಡ್ಡಿನ ಬಲತ್ಕಾರದ ಮುಂದೆ ಅವರ ಕೇಸು ಪುಸ್ಕಾಯಿತು. ಅದರಿಂದ ಆ ಜನರು ಹತಾಶರಾದರು. ಆದರೂ ಹಠ ಬಿಡದೆ ಅವನನ್ನು ಯಾವುದಾದರೂ ರೀತಿಯಲ್ಲಿ ಸರ್ವನಾಶ ಮಾಡಲು ಹೊರಟವರು ಇಲ್ಲಿನ ಒಬ್ಬ ದೊಡ್ಡ ಮಂತ್ರವಾದಿಯನ್ನು ಹಿಡಿದು ಅವನಿಗೆ ಭಯಂಕರ ಮಾಟ ಮಾಡಿಸಿದರಂತೆ! ಅದು ಹೊಟೇಲು ಶೇಟಿಗೂ ಗೊತ್ತಾಯಿತು. ಅವನು ಕೂಡಲೇ ಇವರ ಹತ್ತಿರ ಓಡಿ ಬಂದು ದುಃಖವನ್ನು ತೋಡಿಕೊಂಡ. ಇವರಿಗೆ ಮೊದಲೇ ಆ ಮಂತ್ರವಾದಿಯ ಮೇಲೆ ಅಸಮಾಧಾನವಿತ್ತು. ಅದೇ ನೆಪದಿಂದ ಇವರು ಕೂಡಾ ಯಾವುದೋ ಭೀಕರ ತಾಂತ್ರಿಕವಿಧಿಯೊಂದನ್ನು ಆಚರಿಸಿ, ಆ ಹೆಣ್ಣು ಹೆತ್ತವರು ಹೊಟೇಲು ಮಾಲಿಕನ ಮೇಲೆ ಪ್ರಯೋಗಿಸಿದ್ದ ಕೃತ್ರಿಮವನ್ನು ಉಚ್ಛಾಟಿಸಿಬಿಟ್ಟರು!
ಆದರೆ ಈ ವಿಷಯವೂ ಅದು ಹೇಗೋ ಆ ಹೆಣ್ಣುಮಕ್ಕಳ ಹೆತ್ತವರಿಗೆ ತಿಳಿದುಬಿಟ್ಟಿತು. ಆದ್ದರಿಂದ ಆವತ್ತೊಮ್ಮೆ ಸೂರ್ಯ ಕಂತುವ ಹೊತ್ತಿನಲ್ಲಿ ಅವರು ಐದಾರು ಮಂದಿ ತಲೆಕೂದಲು ಕೆದರಿಸಿಕೊಂಡು ಮನೆಗೆ ಬಂದವರು ಅಂಗಳದಲ್ಲಿ ನಿಂತುಕೊಂಡು ನಮ್ಮನ್ನು ಹೊರಗೆ ಕರೆದು ಅಸಭ್ಯವಾಗಿ ಬೈಯ್ಯುತ್ತ ಬೊಬ್ಬೆಯಿಟ್ಟು ಅಳುತ್ತ, ‘ನಮ್ಮ ಮಕ್ಕಳ ಶೀಲವನ್ನೂ, ಅವರ ಬದುಕನ್ನೂ ಹಾಳು ಮಾಡಿದ ಆ ರಾಕ್ಷಸನೂ, ನೀನೂ ಸರ್ವನಾಶವಾಗಿ ಹೋಗುತ್ತಿರಾ ನೋಡುತ್ತಿರಿ!’ ಎಂದು ನೆಲಕ್ಕೆ ಕೈ ಅಪ್ಪಳಿಸಿ ಶಪಿಸುತ್ತ ಅಂಗಳವಿಡೀ ಹೊರಳಾಡಿ ಗಲಾಟೆಯೆಬ್ಬಿಸಿ ಹೊರಟು ಹೋದರು. ಆವತ್ತಿನಿಂದ ಇವರಿಗೇನಾಯಿತೋ? ಎಲ್ಲರೊಂದಿಗೂ ಮಾತುಕಥೆಯನ್ನು ನಿಲ್ಲಿಸಿಬಿಟ್ಟರು.
ಇದಾದ ಮೇಲೆ ಸ್ವಲ್ಪ ಸಮಯದ ನಂತರ ದಿನವಿಡೀ ಮಲಗಿಕೊಂಡೇ ಇರತೊಡಗಿದರು. ಹಾಗೆ ಒಮ್ಮೆ ಮಲಗಿದವರು ಮುಂದೆ ಮಲಗಿಯೇಬಿಟ್ಟರು. ಸುಮಾರು ಬಗೆಯ ಔಷಧಿ ಉಪಚಾರಗಳನ್ನೆಲ್ಲ ಮಾಡಿಸಿದ್ದಾಯಿತು. ಏನೂ ಪ್ರಯೋಜನವಾಗಲಿಲ್ಲ!’ ಎಂದು ಅನಸೂಯಮ್ಮ ನಿಟ್ಟುಸಿರುಬಿಟ್ಟರು. ಪೆದುಮಾಳರ ಕಥೆಯನ್ನು ಕೇಳಿದ ಗುರೂಜಿಯವರ ಮನಸ್ಸಿಗೇನೋ ಒಂಥರಾ ಹಿಂಸೆಯಾಯಿತು. ಅದರ ಬೆನ್ನಿಗೆ ಆವತ್ತು ಬುಕ್ಕಿಗುಡ್ಡೆಯ ದೇವರಕಾಡಿನಲ್ಲಿ ನಂದಿಮರದ ಕೊಂಬೆಯೊಂದು ತಲೆಯ ಮೇಲೆ ಮುರಿದು ಬೀಳಲಿದ್ದಾಗ ಕಾಣಿಸಿಕೊಂಡಂಥ ಹೆದರಿಕೆಯೂ ಮತ್ತದೇ ರೀತಿಯ ಎದೆ ತಿವಿದಂಥ ನೋವೂ ಮರಳಿ ಕಾಣಿಸಿಕೊಂಡಿದ್ದರೊಂದಿಗೆ ಮೈಕೈಯೆಲ್ಲ ತಣ್ಣಗೆ ಬೆವರಿ ಉಸಿರುಗಟ್ಟಿದಂತಾಯಿತು. ಆಗ ಮತ್ತಷ್ಟು ಭಯಪಟ್ಟರು. ಆದರೆ ಮರುಕ್ಷಣ, ‘ಅರೇರೇ, ನಾವೇನು ಇವರಂತೆ ಅಮಾಯಕರ ಮೇಲೆಲ್ಲ ಮಾಟಮಂತ್ರ ಪ್ರಯೋಗಿಸಿ ಮೇಲೆ ಬಂದವರಾ…? ಅಂಥದ್ದು ಒಂದೆರಡು ಘಟನೆಗಳು ನಮ್ಮಿಂದಲೂ ನಡೆದಿರಬಹುದಾದರೂ ಅದರ ಹತ್ತು ಪಟ್ಟು ದಾನಧರ್ಮಗಳನ್ನು ಮಾಡುತ್ತ ಬಂದಿದ್ದೇವೆ. ಮತ್ತ್ಯಾಕೆ ಹೆದರಬೇಕು!’ ಎಂದು ಧೈರ್ಯ ತಂದುಕೊಂಡರು. ಆಗ ಅವರ ಹೃದಯವು ಯಥಾಸ್ಥಿತಿಗೆ ಬಂತು.
‘ಅವರೀಗ ಎಲ್ಲಿದ್ದಾರೆ…?’ ಎಂದು ಅನಸೂಯಮ್ಮನನ್ನು ಕೇಳಿದರು.
‘ಒಳಗೆ ಮಲಗಿದ್ದಾರೆ ಮಾರಾಯಾ. ನೋಡುತ್ತೀಯಾ ಬಾ. ಆದರೆ ಅವರಿಗೆ ಪಕ್ಕನೆ ಯಾರ ಗುರುತೂ ಹತ್ತುವುದಿಲ್ಲ. ಹತ್ತಿದರೂ ಮಾತಾಡುವುದಿಲ್ಲ!’ ಎಂದು ಹತಾಶೆಯಿಂದ ಹೇಳಿದ ಅನಸೂಯಮ್ಮ ಎದ್ದು ಒಳಗೆ ನಡೆದರು. ‘ಮಾತನಾಡದಿದ್ದರೆ ತೊಂದರೆಯಿಲ್ಲ. ಅವರನ್ನು ನೋಡಲೇಬೇಕೆಂಬ ದೊಡ್ಡ ಆಸೆಯಿಂದ ಬಂದಿದ್ದೇವೆ!’ ಎನ್ನುತ್ತ ಗುರೂಜಿಯವರು ಅವರನ್ನು ಹಿಂಬಾಲಿಸಿದರು.
ಅಲ್ಲಿ ಒಳಕೋಣೆಯಲ್ಲಿ ಹಳೆಯ ಮಂಚದ ಮೇಲೆ ಮಲಗಿದ್ದ ಪೆದುಮಾಳರು ಎಲುಬಿನ ಚಕ್ಕಳವಾಗಿದ್ದರು. ಅವರ ಅವಸ್ಥೆಯನ್ನು ಕಂಡ ಗುರೂಜಿಯವರಿಗೆ ತೀವ್ರ ನಿರಾಶೆಯಾಯಿತು. ಏಕೆಂದರೆ ಅವರ ಯಶಸ್ಸು ಮತ್ತು ಶ್ರೀಮಂತಿಕೆಯನ್ನು ನೋಡಿ ಗುರುಗಳು ಹೊಟ್ಟೆ ಉರಿದುಕೊಂಡು ಕೊರಗಬೇಕು ಎಂದುಕೊಂಡಿದ್ದ ಸುಸಂದರ್ಭವೊಂದು ಅವರ ಪಾಲಿಗೆ ಒದಗಿ ಬರಲೇಇಲ್ಲ. ಆದರೂ, ‘ನಮಸ್ಕಾರ ಗುರುಗಳೇ ಹೇಗಿದ್ದೀರೀ…?’ ಎಂದು ಗತ್ತಿನಿಂದ ಕೇಳಿದರು. ಮುದುಕನಿಗೆ ಶಿಷ್ಯನ ಗುರುತು ಸಿಗಲು ಕೆಲವು ನಿಮಿಷಗಳೇ ಬೇಕಾದುವು. ಬುರುಡೆಯಾಳಕ್ಕಿಳಿದಿದ್ದ ಅವರ ಕಣ್ಣುಗಳು ಕೊನೆಗೂ ಶಿಷ್ಯನ ಬೆಳ್ಳಗಿನ, ಉಬ್ಬಿದ ಮುಖದಲ್ಲಿದ್ದ ಕಠೋರತೆಯನ್ನೂ ಮತ್ತವನ ಶ್ರೀಮಂತಿಕೆಯ ವರ್ಚಸ್ಸನ್ನೂ ಚೆನ್ನಾಗಿ ಗ್ರಹಿಸಿದವು. ಮರುಕ್ಷಣ ಅವರ ಮುಖದಲ್ಲಿ ಕೇವಲ ವ್ಯಂಗ್ಯ ಮತ್ತು ವಿಷಾದ ತುಂಬಿದ ಶುಷ್ಕ ನಗೆಯೊಂದು ಹೊರಟಿತಷ್ಟೆ. ಆದರೆ ಅದನ್ನು ತಟ್ಟನೆ ಅರ್ಥೈಸಿಕೊಂಡ ಗುರೂಜಿಯವರು ಅವಮಾನದಿಂದ ಒಳಗೊಳಗೇ ಹಲ್ಲು ಕಡಿದರು. ಹಾಗಾಗಿ ಮಂಚಕ್ಕಂಟಿ ಮಲಗಿದ್ದ ಗುರುಗಳನ್ನು ತಾತ್ಸಾರದಿಂದ ದಿಟ್ಟಿಸಿ, ತಮ್ಮ ಎಡಗೆನ್ನೆಯ ಮೇಲೆ ತಿರಸ್ಕಾರದ ನಗುವನ್ನು ಹೊಮ್ಮಿಸುತ್ತ ಕೋಣೆಯಿಂದ ರಪ್ಪನೆ ಹೊರಗೆ ಬಂದವರು ಮತ್ತಲ್ಲಿ ನಿಲ್ಲಲಾಗದೆ ಗುರುಪತ್ನಿಗೆ ಉಡಾಫೆಯಿಂದ ನಮಸ್ಕರಿಸಿ ಊರಿಗೆ ಹಿಂದಿರುಗಿದರು.
(ಮುಂದುವರೆಯುವುದು)
ಗುರುರಾಜ್ ಸನಿಲ್
ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ