ಗಝಲ್

ಗಝಲ್

ತೂತು ಬಿದ್ದ ಹಚ್ಚಡದಲ್ಲಿ ಒದ್ದಾಡುತಿದೆ
ದೇವನಿಟ್ಟ ಕನಸು
ಕಾದ ಹೆಂಚಿನ ರೊಟ್ಟಿಯಂತೆ ಸುಡುತಿದೆ
ದೇವನಿಟ್ಟ ಕನಸು

ನಿಗಿನಿಗಿ ಕೆಂಡವಾಗಿ ಮನವು ಕಂಪನೆ
ಕಾಯ್ದು ಹೋಯಿತೇ
ಬನದ ಸುಮದ ಆಸೆಯ ಕಮರಿಸುತಿದೆ
ದೇವನಿಟ್ಟ ಕನಸು

ತುತ್ತು ಕೂಳಿಗೂ ನಾನಾ ಬಗೆಯಲಿ
ವೇಷ ತೊಡಿಸಿತೆ
ಢಂಢಂಯೆಂದು ವಾದ್ಯ ಬಾರಿಸುತಿದೆ
ದೇವನಿಟ್ಟ ಕನಸು

ಶಾಪಗ್ರಸ್ತ ಅಹಲ್ಯೆಯಂತೆ ಹೃದಯ
ಮುಕ್ತಿ ಬೇಡುತಿದೆ
ಬಡತನದ ಬಾಣಲೆಯಲಿ ಬೇಯುತಿದೆ
ದೇವನಿಟ್ಟ ಕನಸು

ಸನ್ಯಾಸಿಯಂತೆ ಸನ್ಮಾರ್ಗ ಅರಸುತಿದೆ
ಅಭಿನವನ ಕಾವ್ಯ
ವಿದೂಷಕನ ತೆರದಿ ಹಾಸ್ಯ ಮಾಡುತಿದೆ
ದೇವನಿಟ್ಟ ಕನಸು


ಶಂಕರಾನಂದ ಹೆಬ್ಬಾಳ

Leave a Reply

Back To Top