ಕಾವ್ಯ ಸಂಗಾತಿ
ಅನುರಾಧಾ ರಾಜೀವ್
ಎಲ್ಲಿರುವೇ ಭಾವವೇ

ಒತ್ತಡದ ಬದುಕಲಿ ಓ ಬರಹವೇ ಎಲ್ಲಿರುವೆ
ಕತ್ತಲಿನ ಲೋಕದಲಿ ಮೌನಿಯಾಗಿ
ಸುತ್ತಲೂ ಹುಡುಕಾಡಿ ಬಸವಳಿದು ನೊಂದಿರುವೆ
ಗೊತ್ತಿಲ್ಲದೆ ಚಿಂತೆಯಲಿ ಹಣ್ಣಾಗಿ
ಒಮ್ಮೆ ಬಿಳಿಮೋಡ ಅರೆಕ್ಷಣ ಕಾರ್ಮುಗಿಲು
ಸುಮ್ಮನೆ ಹೀಗೇಕೆ ಕಾಡುತಿರುವೆ
ಹಮ್ಮು ಬಿಟ್ಟು ನೋಡೆನ್ನ ಅಳಲು
ದುಮ್ಮಾನವ ಹೊತ್ತು ನಿಂತಿರುವೆ
ಪದಗಳ ಹೇಗೆ ಜೋಡಿಸಲಿ ಹೇಳು
ಮಧುರ ಭಾವಗಳು ಉಕ್ಕದಿರಲು
ಹೃದಯ ಬರಿದು ಬಿಳಿಯ ಹಾಳೆಯಂತೆ
ಕದವ ಮುಚ್ಚಿರುವೆ ಲೇಖನಿ ಕಳೆದಿರಲು
ತಪ್ಪುಗಳು ಸಹಜ ತಿದ್ದಬೇಕು ಮತ್ತೊಮ್ಮೆ
ಒಪ್ಪುವಂತೆ ಭಾವನೆ ಮೂಡಲು
ಅಪ್ಪಿಕೊಂಡು ಬರಹವ ಭಾವಗಳ ಬೆರೆಸಿ
ಮುಕ್ತಾಯದ ಚುಕ್ಕಿಯ ಇಡಲು
ಅನುರಾಧಾ ರಾಜೀವ್
