ಕಾವ್ಯ ಸಂಗಾತಿ
ಆದಪ್ಪ ಹೆಂಬಾ
ಅವ್ವ ಮತ್ತು ತಾಲಿಪಟ್ಟು

ಇಂದು
ಮಡದಿಯ ಕೈಯಿಂದ
ರುಚಿ ರುಚಿಯಾದ ತಾಲಿಪಟ್ಟು
ಪರಿಶುದ್ಧ ಆರೋಗ್ಯಕರ
ತರಕಾರಿ ಅಂಗಡಿಯೇ ಅದರೊಳಗಿತ್ತು
ಮೇಲೆ ಶುದ್ಧ ತುಪ್ಪದ ಘಮ
ಆದರೂ…..
ನಾಲಿಗೆ ಆಸ್ವಾಧಿಸುತ್ತಿಲ್ಲ
ಕಣ್ಣು ಮಂಜಾಗಿವೆ
ಕಾರಣ
ಅವ್ವನ ನೆನಪು…..
ಅವ್ವ ತಿನಿಸಿದ್ದ ತಾಲಿಪಟ್ಟು
ಒಂದು ಸಂಜೆ
ನಾ ಶಾಲೆಯಿಂದ ಬಂದಿದ್ದೆ
ನನ್ನ ಹಸಿವು ಗೊತ್ತಾಗಿತ್ತು
ಅವ್ವನಿಗೆ
ಮನೇಲಿ ಅಳಿದುಳಿದಿದ್ದ
ಜೋಳದ ಹಿಟ್ಟು
ಸಂಜೆ ಸಂತೆಯಲಿ ತಂದಿದ್ದ ಉಳ್ಳಾಗಡ್ಡಿ
ಖಾರ ರುಚಿಗೆ ತಕ್ಕಷ್ಟು ಉಪ್ಪು
ಸಾಕು ಬೇರೇನು ಬೇಕಿಲ್ಲ
ಉಸಿರಿರುವವರೆಗೆ ಮರೆಯಲಾಗದು
ಅವ್ವನ ಆ ತಾಲಿಪಟ್ಟಿನ ರುಚಿ
ಅವ್ವ ಕೈ ತಟ್ಟಿ ಮಾಡಿದ್ದ
ತಾಲಿಪಟ್ಟದು
“ರುಚಿಯಾಗ್ಯಾವಾಪ”
ಕೇಳಿದ್ದಳು ಅವ್ವ
ಬಡತನಕ್ಕೆ ಹಸಿವು, ರುಚಿ ಗೊತ್ತಾಗಲ್ಲ
ಆದರೆ ಮೈ ತುಂಬಾ ಕರುಳು
ನೆನಪಷ್ಟೇ ಆಗಿರುವ ಅವ್ವ
ಮತ್ತವಳ ಕೈರುಚಿ
ಕಣ್ಣ ಹನಿ ನಿಲ್ಲುತ್ತಿಲ್ಲ.
ಆದಪ್ಪ ಹೆಂಬಾ

ಆಪ್ತ ಕವಿತೆ