ಧಾರಾವಾಹಿ
ಆವರ್ತನ
ಅದ್ಯಾಯ-41
ಸುಮಿತ್ರಮ್ಮ ಕೋಪದಿಂದ ಕೇಳಿದ ಪ್ರಶ್ನೆಗೆ ನರಹರಿ ತಾನು ಉತ್ತರಿಸಬೇಕೋ, ಬೇಡವೋ ಎಂಬ ಉಭಯಸಂಕಟಕ್ಕೆ ಸಿಲುಕಿದ. ಆದರೆ ಮರುಕ್ಷಣ,‘ನೀನೊಬ್ಬ ಜವಾಬ್ದಾರಿಯುತ ವೈದ್ಯನು ಹೇಗೋ ಹಾಗೆಯೇ ಪ್ರಜ್ಞಾವಂತ ನಾಗರೀಕನೂ ಹೌದು! ಆದ್ದರಿಂದ ನಿನ್ನ ಸುತ್ತಮುತ್ತದ ಅಮಾಯಕ ಜನರಲ್ಲಿ ನಿನ್ನ ಗಮನಕ್ಕೆ ಬರುವಂಥ ತಪ್ಪು ತಿಳುವಳಿಕೆಗಳನ್ನು ನಿವಾರಿಸುವುದೂ ನಿನ್ನ ಕರ್ತವ್ಯ ಎಂಬುದನ್ನು ಮರೆಯಬೇಡ!’ಎಂದು ಅವನ ವಿವೇಕವು ಎಚ್ಚರಿಸಿತು. ಹಾಗಾಗಿ ಕೂಡಲೇ ಚುರುಕಾದ.
‘ಸುಮಿತ್ರಮ್ಮ ನಿಮ್ಮ ಮತ್ತು ಊರಿನವರ ನಂಬಿಕೆಗಳು ಹಾಗೂ ಆ ಗುರೂಜಿಯವರ ಮಾತುಗಳು ಎಷ್ಟು ಸತ್ಯವೋ ಆ ಕುರಿತು ನಾನು ಮಾತಾಡುವುದಿಲ್ಲ. ಅದು ನಿಮಗೂ ಅವರಿಗೂ ಸಂಬಂಧಿಸಿದ ವಿಚಾರ. ಆದರೆ ನೀವೀಗ ಆಸಕ್ತಿಯಿಂದಲೋ, ಅಸಮಾಧಾನದದಿಂದಲೋ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವುದು ನನ್ನ ಧರ್ಮ. ಆ ಉದ್ದೇಶದಿಂದ ಹೇಳುತ್ತೇನೆ ಕೇಳಿ. ನಾಗರಹಾವೇ ಅಂತಲ್ಲ ಬೇರೆ ಯಾವುದೇ ಹಾವೊಂದು ನಮ್ಮ ಮನೆ ಮತ್ತು ವಠಾರದೊಳಗೆ ಪ್ರವೇಶಿಸಬೇಕಾದರೆ ಆ ಜೀವಿಗೆ ಹಸಿವು ಅಥವಾ ಬಾಯಾರಿಕೆಯಾಗಿದೆ ಮತ್ತದರ ಆಹಾರದ ಜೀವಿಗಳಾದ ಇಲಿ, ಹೆಗ್ಗಣ, ನಾಯಿಮರಿ, ಬೆಕ್ಕು, ಕೋಳಿ ಅಥವಾ ಇನ್ನಿತರ ಜೀವಿಗಳು ಹಾಗೂ ನೀರು ನಮ್ಮ ವಠಾರದಲ್ಲಿಯೇ ಇದೆ ಅಥವಾ ಆ ಹಾವು ಅಲ್ಲಿರಬಹುದಾದ ತನ್ನ ಸಂಗಾತಿಯನ್ನು ಅರಸುತ್ತಲೂ ಬಂದಿರಬಹುದು ಎಂದರ್ಥ. ಆದ್ದರಿಂದ ಯಾವುದೇ ಒಂದು ಬಡಾವಣೆಯೊಳಗೆ ಹಾವುಗಳಿಗೆ ಸಂಬಂಧಿಸಿದ ಇಂಥ ವಸ್ತುಗಳು ಇಲ್ಲವೇ ಇಲ್ಲವೆಂದಾದಲ್ಲಿ ಖಂಡಿತವಾಗಿಯೂ ಆ ಪ್ರದೇಶದಲ್ಲಿ ಯಾವ ಹಾವುಗಳೂ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೂ ಒಂದುವೇಳೆ ಕಾಣಿಸಿಕೊಂಡವೆಂದರೆ ಅದು ಪ್ರಪಂಚದ ಅದ್ಭುತಗಳಲ್ಲಿ ಒಂದೆನ್ನಬಹುದು. ನಾವೆಲ್ಲರೂ ಯೋಚಿಸಬೇಕಾದ ಇನ್ನೊಂದು ಮುಖ್ಯ ಸಂಗತಿಯೇನೆಂದರೆ ಕೇರೆಹಾವು ಅಥವಾ ಇನ್ನಿತರ ಯಾವುದೇ ಹಾವುಗಳು ನಮ್ಮ ಸುತ್ತಮುತ್ತ ಕಂಡು ಬಂದರೆ ಸ್ವಲ್ಪವೂ ತಲೆಕೆಡಿಸಿಕೊಳ್ಳದ ನಾವುಗಳು ಅದೇ ನಾಗರಹಾವೊಂದು ಕಾಣಿಸಿಕೊಂಡ ಕೂಡಲೇ ಏನೇನೋ ತಪ್ಪುನಂಬಿಕೆ ಮತ್ತು ಅರ್ಥವಿಲ್ಲದ ಭಯಕ್ಕೆ ಬಿದ್ದು ಸೋತು ಕುಗ್ಗುತ್ತೇವೆ ಯಾಕೆ…? ಈ ಪ್ರಶ್ನೆಯನ್ನು ಯಾವತ್ತಾದರೂ ನಮಗೆ ನಾವೇ ಕೇಳಿಕೊಂಡಿದ್ದುಂಟಾ…? ಇಲ್ಲ ಅಲ್ಲವೇ? ಬದಲಿಗೆ ನಾವೇನು ಮಾಡುತ್ತೇವೆಂದರೆ ಹಿಂದಿನವರು ಹೇಳುತ್ತ ಬಂದಿರುವ ಅಥವಾ ಯಾರೋ ಅಜ್ಞಾನಿಗಳು ಅಂಥ ಸಂದರ್ಭದಲ್ಲೇ ಹೆಣೆಯುವ ಕಟ್ಟುಕಥೆ ಮತ್ತು ಮೂಢನಂಬಿಕೆಗಳನ್ನೇ ನಂಬಿ ಭಯದಿಂದ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವಲ್ಲದೇ ಅದೇ ವಿಷಯವನ್ನು ಹಿಡಿದುಕೊಂಡು ಮುಂದಿನ ಜೀವನದ ಸಣ್ಣಪುಟ್ಟ ಸುಖಸಂತೋಷಗಳನ್ನೂ ಹಾಳು ಮಾಡಿಕೊಳ್ಳಲು ತೊಡಗುತ್ತೇವೆ!
ಹಾಗಾಗಿ ಸುಮಿತ್ರಮ್ಮಾ ಎಲ್ಲಿಯವರೆಗೆ ನಮ್ಮಲ್ಲಿ ಯಾವುದೇ ಒಂದು ವಿಷಯದ ಕುರಿತು ಸಾಮಾನ್ಯ ಜ್ಞಾನವೇ ಇರುವುದಿಲ್ಲವೋ ಅಲ್ಲಿಯತನಕ ಅದರ ಕುರಿತ ಅಜ್ಞಾನ ಮತ್ತು ಭಯಗಳೂ ನಮ್ಮನ್ನು ಕಾಡುವುದು ಸಹಜವೇ. ಅಂಥ ಭಯ ಪೀಡಿತರಾದವರಿಗೆ ನೀವು ಹೇಳಿದ ಹಾಗೆ ಹಾವಿನ ಸಮಸ್ಯೆಯೂ ಎದುರಾಯಿತೆಂದರೆ ಅವರು ಸಂಪೂರ್ಣ ಕಂಗೆಟ್ಟುಬಿಡುತ್ತಾರೆ. ಅಂಥ ಪರಿಸ್ಥಿತಿಯಲ್ಲಿಯೇ ಆ ಅಮಾಯಕರ ದೌರ್ಬಲ್ಯವನ್ನು ಸುತ್ತಮುತ್ತಲಿನ ಅರೆಬರೆ ಜ್ಞಾನಿಗಳೋ ಅಥವಾ ಪ್ರಕೃತಿಯ ಜೀವಜಾಲ ಪ್ರಕ್ರಿಯೆಯ ಬಗ್ಗೆ ಎಳ್ಳಷ್ಟೂ ತಿಳಿವಳಿಕೆಯಿಲ್ಲದ ಜ್ಯೋತಿಷ್ಯರುಗಳೋ ಅಥವಾ ಸ್ವಯಂಘೋಷಿತ ಗುರೂಜಿ, ಬಾಬಾಗಳೋ ತಮ್ಮ ಲಾಭಕ್ಕಾಗಿ ಬಳಸಿಕೊಂಡು ತಾವೇ ಸೃಷ್ಟಿಸಿದ ಮೂಢನಂಬಿಕೆಗಳನ್ನು ಅವರೊಳಗೆ ತುರುಕಿಸುತ್ತ ಜೀವನ ಪರ್ಯಂತ ಅವರನ್ನು ಶೋಷಿಸುತ್ತಾ ಬಂದಿರುವುದು ಈಗೀಗ ದೇಶದಾದ್ಯಂತ ಕಂಡು ಬರುವ ವಿಲಕ್ಷಣ ಸಮಸ್ಯೆಯಲ್ಲವೇ!’ ಎಂದು ನರಹರಿಯು ಸುಮಿತ್ರಮ್ಮನನ್ನು ಅನುಕಂಪದಿಂದ ನೋಡುತ್ತ ವಿವರಿಸಿದ. ಆದರೆ ಆರಂಭದಲ್ಲಿ ಅವನ ಮಾತುಗಳನ್ನು ಒಲ್ಲದ ಮನಸ್ಸಿನಿಂದ ಕೇಳಿಸಿಕೊಳ್ಳುತ್ತಿದ್ದ ಸುಮಿತ್ರಮ್ಮನಲ್ಲಿ ಬಳಿಕ ವಿಚಿತ್ರ ತಳಮಳವೂ ಗೊಂದಲವೂ ಆರಂಭವಾಗಿತ್ತು. ಹಾಗಾಗಿ ಅವರು ಮೌನವಾಗಿ ಅವನ ವಿಚಾರಧಾರೆಯನ್ನು ಆಲಿಸತೊಡಗಿದ್ದರು. ಅವರ ಸ್ಥಿತಿಯನ್ನು ಗಮನಿಸಿದ ನರಹರಿಯು ಮತ್ತೆ ಮಾತು ಮುಂದುವರೆಸಿದ.
‘ನಮ್ಮ ವಠಾರದಲ್ಲೂ ಸುತ್ತಾಡುತ್ತಿರುವ ಹಾವಿನ ಕಥೆಯೂ ಇದೇ ಸುಮಿತ್ರಮ್ಮ. ಹಸಿದ ಹಾವೊಂದಕ್ಕೆ ಅದರ ಆಹಾರದ ಜೀವಿಗಳು ನೇರವಾಗಿ ಬಾಯಿಗೆ ಬಂದು ಬೀಳುತ್ತವೆಯೇ ಹೇಳಿ…? ಆ ಹಾವು ಅವುಗಳನ್ನು ಹುಡುಕಾಡಿ ಬೆನ್ನುಹತ್ತಿ ಬೇಟೆಯಾಡಿಯೇ ತಿನ್ನಬೇಕಲ್ಲವೇ. ನಾನು ಸ್ವತಃ ಕಂಡ, ಓದಿದ ಮತ್ತು ಒಂದಷ್ಟು ಉರಗತಜ್ಞರಿಂದಲೂ ತಿಳಿದುಕೊಂಡ ಮಾಹಿತಿಯ ಪ್ರಕಾರ ಇನ್ನೊಂದೆರಡು ತಿಂಗಳಲ್ಲಿ ಹಾವುಗಳ ಸಂತಾನೋತ್ಪತ್ತಿ ಕಾಲ ಆರಂಭವಾಗಲಿದೆ. ಆ ಕಾಲಕ್ಕಿಂತ ಒಂದೆರಡು ತಿಂಗಳು ಮುಂಚಿತವಾಗಿ ಹೆಚ್ಚಿನ ಪ್ರಭೇದದ ಹಾವುಗಳೆಲ್ಲ ತೀವ್ರ ಆಹಾರದ ಹುಡುಕಾಟದಲ್ಲಿ ತೊಡಗುತ್ತವೆ. ಆ ಮೂಲಕ ಅವು ಮುಂದಿನ ಎರಡು, ಮೂರು ತಿಂಗಳಿಗೆ ಬೇಕಾಗುವಷ್ಟು ಆಹಾರವನ್ನು ತಿಂದು ಕೊಬ್ಬನ್ನಾಗಿ ಪರಿವರ್ತಿಸಿಕೊಂಡು ದಷ್ಟಪುಷ್ಟವಾಗಿ ಬೆಳೆದು ವಂಶೋತ್ಪತ್ತಿಗೆ ತಯಾರಾಗುತ್ತವೆ. ಅಂಥ ಕಾಲದಲ್ಲಿ ಹಾವುಗಳ ಓಡಾಟವೂ ಹೆಚ್ಚಾಗಿರುತ್ತದೆ. ಅದೇ ಸಮಯದಲ್ಲಿ ನಾಗನಿಗೆ ಸಂಬಂಧಿಸಿದ ನಮ್ಮ ನಂಬಿಕೆ, ಆಚರಣೆಗಳಿಗೂ ಜೀವ ಬರುತ್ತದೆ. ಹಾಗಾಗಿ ಆ ನಾಗರಹಾವಿನ ವಿಷಯದಲ್ಲೂ ಯಾರ್ಯಾರೋ ಏನೇನೋ ಹೇಳಿದ್ದನ್ನೂ ಮತ್ತು ನಿಮಗೆ ನೀವೇ ಒಂದಷ್ಟು ಕಲ್ಪಿಸಿಕೊಂಡದ್ದನ್ನೂ ಕಲಸುಮೇಲೊಗರ ಮಾಡಿಕೊಂಡು ಮನಸ್ಸನ್ನು ಕೆಡಿಸಿಕೊಂಡಿದ್ದೀರಷ್ಟೆ!’ ಎಂದು ಆಪ್ತವಾಗಿ ವಿವರಿಸಿದ.
ನರಹರಿಯ ಮಾತುಗಳನ್ನು ಪೂರ್ತಿಯಾಗಿ ಕೇಳಿಸಿಕೊಂಡ ಸುಮಿತ್ರಮ್ಮ ಕೊನೆಯಲ್ಲಿ ಅವನ ವಿಚಾರದಲ್ಲಿದ್ದ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಪೇಚಾಡತೊಡಗಿದರು. ಅತ್ತ ರಾಧಾಳಿಗೂ ತನ್ನ ನಂಬಿಕೆಯು ನಿಂತ ನಿಲುವಿನಲ್ಲೇ ಬುಡಮೇಲಾದುದು ಗೊಂದಲವನ್ನೂ ವಿಸ್ಮಯವನ್ನೂ ತರಿಸಿತ್ತು. ಆದರೆ ಡಾ. ನರಹರಿ ಅವರದೇ ಹಿತಚಿಂತಕನಾಗಿ ಕರುಣೆಯಿಂದ ಮಾತಾಡಿದ್ದ. ಅವಳು ಕೂಡಾ ಅವನ ಮಾತುಗಳನ್ನು ಯಾವುದೇ ವಿರೋಧವಿಲ್ಲದೆ ತಲ್ಲೀನತೆಯಿಂದ ಕೇಳಿಸಿಕೊಂಡಿದ್ದಳು. ಆದ್ದರಿಂದ ಅಷ್ಟರವರೆಗೆ ಅವಳನ್ನು ಪೀಡಿಸುತ್ತಿದ್ದ ನಾಗದೋಷವೆಂಬ ಭಯವು ಮೆಲ್ಲನೆ ಕಣ್ಮರೆಯಾಗಿ ಹಗುರ ಭಾವವು ಮೂಡಿತು. ಹಾಗಾಗಿ ಅವಳು, ‘ದೇವರೇ ನಮ್ಮನ್ನು ಕಾಪಾಡಿದೆಯಪ್ಪಾ…!’ ಎಂದು ಕಣ್ಣು ತುಂಬಿಕೊಂಡು ಮನದಲ್ಲೇ ಕೈಮುಗಿದವಳು,‘ಅಂದರೆ ಡಾಕ್ಟ್ರೇ, ನನ್ನ ಗಂಡನನ್ನು ಕಾಡುತ್ತಿರುವುದು ನಾಗದೋಷದ ತೊಂದರೆಯಲ್ಲವಾ…? ಎಂದು ಇನ್ನಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳುವ ಆತುರದಿಂದ ಪ್ರಶ್ನಿಸುತ್ತ ಕಣ್ಣೀರೊರೆಸಿಕೊಂಡಳು.
‘ಛೇ, ಛೇ! ಅಲ್ಲಮ್ಮಾ. ಇದೊಂದು ಯಾರಿಗೂ ಬರಬಹುದಾದ ಗಂಭೀರ ಕಾಯಿಲೆ! ಆದರೂ ಹೆದರಬೇಕಾಗಿಲ್ಲ. ಇದಕ್ಕೂ ಸರಿಯಾದ ಚಿಕಿತ್ಸೆಯಿದೆ! ಎಂದು ನರಹರಿ ಮೃದುವಾಗಿ ಹೇಳಿ ಅವಳನ್ನು ಸಂತೈಸಿದ. ಮರುಕ್ಷಣ ರಾಧಾ ಅವನನ್ನು ಧನ್ಯತೆಯಿಂದ ದಿಟ್ಟಿಸಿದವಳು ತಟ್ಟನೆ ಸುಮಿತ್ರಮ್ಮನತ್ತ ಹೊರಳಿ,‘ನಮ್ಮಂಥ ಬಡವರನ್ನು ಹೀಗೆಲ್ಲ ಶೋಷಿಸಬಾರದಿತ್ತು ಸುಮಿತ್ರಮ್ಮಾ ನೀವು…!’ ಎಂಬಂತೆ ವಿಷಾದದಿಂದ ದಿಟ್ಟಿಸಿದಳು. ಅವಳ ನೋಟವನ್ನು ಕಂಡ ಸುಮಿತ್ರಮ್ಮನಿಗೆ ಅವಮಾನದಿಂದ ನಿಂತ ನೆಲವೇ ಕುಸಿದಂತಾಯಿತು. ಆದ್ದರಿಂದ ಎತ್ತಲ್ಲೋ ನೋಡುತ್ತ ನಿಂತರು. ಅದನ್ನು ಗಮನಿಸಿದ ನರಹರಿಯು,‘ಸುಮಿತ್ರಮ್ಮಾ, ನಮ್ಮ ನಾಡಿನ ಒಂದಷ್ಟು ಅಮಾಯಕ ಜನರು, ನಾಗರ ಹಾವಿಗೆ ಸಂಬಂಧಿಸಿದೆ ಎಂದು ನಂಬಿರುವ ನಾಗದೋಷ ಎಂಬ ಸಂಗತಿ ಅಥವಾ ಅಂಥದ್ದೊಂದು ನಂಬಿಕೆಯ ಕುರಿತು ನಮ್ಮ ಸನಾತನವಾದ ಯಾವ ಶಾಸ್ತ್ರಗ್ರಂಥಗಳಲ್ಲೂ ಉಲ್ಲೇಖವಿಲ್ಲಮ್ಮಾ…! ಇದು ನಮ್ಮ ನಡುವೆಯೇ ಇರುವ ಕೆಲವು ಸ್ವಾರ್ಥ ಬುದ್ಧಿಗಳು ತಮ್ಮ ತಮ್ಮ ಲಾಭಕ್ಕೋಸ್ಕರ ಸೃಷ್ಟಿಸಿರುವ ವ್ಯಾಪಾರಿ ನಂಬಿಕೆಗಳಷ್ಟೆ!’ ಎಂದು ಒತ್ತಿ ಹೇಳಿದ.
ಅಷ್ಟು ಕೇಳಿದ ಸುಮಿತ್ರಮ್ಮ ಈಗ ತೀವ್ರ ಗೊಂದಲಕ್ಕೆ ಬಿದ್ದರು. ಆದರೂ ನರಹರಿಯೊಂದಿಗೆ ವಾದಿಸುವ ಶಕ್ತಿಯಾಗಲೀ, ಜ್ಞಾನವಾಗಲೀ ಇಲ್ಲದ ಅವರು,‘ಏನೋ ಡಾಕ್ಟ್ರೇ, ನನಗೊಂದೂ ಅರ್ಥವಾಗುವುದಿಲ್ಲ. ಆ ಗುರೂಜಿಯವರು ನೋಡಿದರೆ ನಾಗದೋಷದಿಂದಲೇ ನಾಗರಹಾವು ಸುತ್ತಾಡುವುದು. ಅದೇ ಕಾರಣಕ್ಕೆ ನಿಮ್ಮನ್ನು ಕಾಯಿಲೆ ಕಸಾಲೆಗಳೂ ಮತ್ತಿತರ ತೊಂದರೆಗಳೂ ಕಾಡುತ್ತಿರುವುದು. ಆ ದೋಷವನ್ನು ನಿವಾರಿಸಿಕೊಳ್ಳದಿದ್ದರೆ ಕೊನೆಯ ತನಕವೂ ನೀವೆಲ್ಲ ನರಳುತ್ತಲೇ ಸಾಯಬೇಕಾಗುತ್ತದೆ! ಅದಕ್ಕೆ ಆ ಶಾಸ್ತ್ರ ಮಾಡಿಸಿ, ಈ ಪೂಜೆ ಮಾಡಿಸಿ ಅಂತಾರೆ. ನೀವು ನೋಡಿದರೆ ಬೇರೇನೋ ಹೇಳುತ್ತಿದ್ದೀರಿ. ಯಾವುದನ್ನು ನಂಬಬೇಕೋ ಯಾವುದನ್ನು ಬಿಡಬೇಕೋ ಒಂದೂ ಅರ್ಥವಾಗುತ್ತಿಲ್ಲ. ಆದರೆ ಈಗ ಯೋಚಿಸಿದರೆ ಆ ಗುರೂಜಿಯನ್ನೂ ಊರ ಕೆಲವರ ಮಾತುಗಳನ್ನೂ ನಂಬಿಕೊಂಡು ನಾನೂ ಹೆದರಿದೆನಲ್ಲದೇ ಈ ಪಾಪದ ಹುಡುಗಿಯನ್ನೂ ಹೆದರಿಸಿಬಿಟ್ಟೆನೇನೋ ಅಂತನೂ ಅನ್ನಿಸುತ್ತದೆ. ಅಯ್ಯೋ ದೇವರೇ…!’ಎಂದು ಪಶ್ಚಾತ್ತಾಪಪಟ್ಟರು. ಅಷ್ಟು ಕೇಳಿದ ರಾಧಾಳಲ್ಲೂ ನೆಮ್ಮದಿಯ ಭಾವ ಮೂಡಿತು.
‘ಸುಮಿತ್ರಮ್ಮಾ, ಒಬ್ಬ ಮನುಷ್ಯನ ಬಹಳ ದೊಡ್ಡ ಗೆಲುವೆಂದರೆ ಅವನು ತನ್ನ ತಪ್ಪಿಗೆ ಪಡುವ ಪಶ್ಚಾತ್ತಾಪವಂತೆ! ಆದ್ದರಿಂದ ಯಾವುದೇ ಒಂದು ವಿಷಯವಿರಲಿ ಅದನ್ನು ಕುರುಡಾಗಿ ನಂಬುವುದಕ್ಕಿಂತ ಧೈರ್ಯದಿಂದ ಪ್ರಶ್ನಿಸುತ್ತ ಸ್ವಂತ ಬುದ್ಧಿ ಮತ್ತು ವಿವೇಕದಿಂದ ವಿಚಾರ ಮಾಡಿ ನೋಡಿ ಸ್ವೀಕರಿಸುವುದು ಒಳ್ಳೆಯದಲ್ಲವೇ. ನಾವೆಲ್ಲರೂ ಆ ಮನಸ್ಥಿತಿಯನ್ನು ಬೆಳೆಸಿಕೊಂಡೆವೆಂದರೆ ಆಮೇಲೆ ಯಾರೂ ನಮ್ಮನ್ನು ಮೋಸಗೊಳಿಸಲು ಸಾಧ್ಯವಿಲ್ಲ! ನಮ್ಮ ಗೋಪಾಲ ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿದ್ದಾನೆ. ಈ ರೋಗ ಭಾದಿಸುವ ಮನುಷ್ಯರು ಕೆಲವೊಮ್ಮೆ ಅದರ ತೀವ್ರತೆಗೆ ಸಂಪೂರ್ಣ ಸ್ವಾಧೀನವನ್ನು ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಾರೆ. ಅವನ ವರ್ತನೆಗಳನ್ನೂ, ನಿಮ್ಮೊಳಗಿನ ನಂಬಿಕೆಗಳನ್ನೂ ಒಂದಕ್ಕೊಂದು ತಾಳೆ ಹಾಕಿ ಭ್ರಮೆಗೆ ಬಿದ್ದು ಹೆದರಿಕೊಂಡಿದ್ದೀರಷ್ಟೆ!’ ಎಂದು ಹೇಳಿದ ನರಹರಿ ರಾಧಾಳತ್ತ ತಿರುಗಿ,‘ನೋಡಮ್ಮಾ ನಿಮ್ಮ ಬಂಧುಗಳು ಯಾರಾದರಿದ್ದರೆ ಬೇಗ ಕರೆಸಿಕೊಂಡು ಇವನನ್ನು ಆದಷ್ಟು ಬೇಗ ಆಸ್ಪತ್ರೆಗೆ ಸೇರಿಸಿ. ಹುಷಾರಾಗುತ್ತಾನೆ!’ಎಂದು ಹೇಳಿ ಹೊರಡಲನುವಾದ. ಆದರೆ ರಾಧಾಳಿಗೆ ಭಯವಾಯಿತು.‘ಅಯ್ಯಯ್ಯೋ ಡಾಕ್ಟ್ರೇ… ಇಲ್ಲಿ ಸಮೀಪದಲ್ಲಿ ನಮ್ಮವರು ಯಾರೂ ಇಲ್ಲವಲ್ಲ ಏನು ಮಾಡಲೀ…!’ಎಂದು ಅಳತೊಡಗಿದಳು. ನರಹರಿಗೆ ಕನಿಕರವೆನಿಸಿತು.‘ಆಯ್ತಮ್ಮ ಅಳಬೇಡಿ. ಕಾರು ತರುತ್ತೇನೆ. ಅಡ್ಮಿಟ್ ಮಾಡೋಣ!’ಎಂದವನು ಕೂಡಲೇ ಮನೆಗೆ ಹೋಗಿ ಕಾರು ತಂದು ರಾಧಾಳೊಂದಿಗೆ ಗೋಪಾಲನನ್ನು ಕೂರಿಸಿಕೊಂಡು ಆಸ್ಪತ್ರೆಗೆ ಹೊರಟ. ನರಹರಿಯ ಕಾರು ಕಣ್ಮರೆಯಾಗುವವರೆಗೂ ಮರಗಟ್ಟಿ ನಿಂತು ನೆಟ್ಟದೃಷ್ಟಿಯಿಂದ ನೋಡುತ್ತಿದ್ದ ಸುಮಿತ್ರಮ್ಮ ಆಮೇಲೆ ನಿಧಾನವಾಗಿ ಮನೆಯತ್ತ ಹೆಜ್ಜೆ ಹಾಕಿದರು. ಆದರೆ ಅರ್ಥವಾಗದ ಆಲೋಚನೆ ಮತ್ತು ದ್ವಂದ್ವ ತಾಕಲಾಟಗಳಿಗೆ ಸಿಲುಕಿದ್ದ ಅವರ ಮನಸ್ಸು ಗಿಡುಗನ ದಾಳಿಯಿಂದ ನೆಲೆ ತಪ್ಪಿದ ಹಕ್ಕಿಯಂತೆ ಒದ್ದಾಡುತ್ತಿತ್ತು. ಅವರು ಅದನ್ನು ಸಹಿಸಲಾಗದೆ ಅಶಾಂತರಾಗಿ ನಡೆಯುತ್ತಿದ್ದರು.
***
ಆಸ್ಪತ್ರಗೆ ಹೋಗುತ್ತಿದ್ದ ನರಹರಿಯು ರಾಧಾಳೊಡನೆ ಮಾತಿಗಾರಂಭಿಸಿದವನು, ನಮ್ಮ ಪ್ರಾಚೀನರಿಂದ ಸೃಷ್ಟಿಯಾದ ನಾಗಾರಾಧನೆ ಮತ್ತು ಅದರ ಮಹತ್ವದ ಕುರಿತು ಹಾಗೂ ಅಂಥದ್ದೊಂದು ನಿಸರ್ಗಾರಾಧನೆಯ ಆಚರಣೆಗೆ ಈಚೀಚೆಗೆ ಸೋಕಿರುವ ‘ದೋಷ’ ಎಂಬ ಹುಸಿನಂಬಿಕೆಯ ಕುರಿತೂ ಅವಳಿಗೆ ಸರಳವಾಗಿ ವಿವರಿಸಿ ಸ್ಪಷ್ಟವಾಗಿ ಮನವರಿಕೆ ಮಾಡಿಸುತ್ತ ಸಾಗಿದ. ಅದರಿಂದ ಅವಳಲ್ಲೂ ಆ ಕುರಿತ ಅಜ್ಞಾನ ಮತ್ತು ಭಯ ನಿಧಾನವಾಗಿ ಕಡಿಮೆಯಾಗುತ್ತ ಅವಳು ಮತ್ತಷ್ಟು ಗೆಲುವಾದಳು. ಆಗ ಅವಳಿಗೊಂದು ವಿಚಾರವೂ ನೆನಪಿಗೆ ಬಂತು. ಆದ್ದರಿಂದ ತಮ್ಮ ವಠಾರದಲ್ಲಿ ಸುತ್ತಾಡುತ್ತಿದ್ದ ನಾಗರಹಾವಿನ ಕಥೆಯನ್ನೂ ಮತ್ತದರ ಸಲುವಾಗಿ ಸುಮಿತ್ರಮ್ಮ ಬಂದು ತಮ್ಮನ್ನು ಹೆದರಿಸುತ್ತಿದ್ದುದನ್ನೂ, ಅದಕ್ಕೆ ಸಂಬಂಧಿಸಿ ಸಮೀಪದ ದೊಡ್ಡ ಕಾಡೊಂದು ಇನ್ನು ಕೆಲವೇ ತಿಂಗಳೊಳಗೆ ನೆಲಸಮವಾಗಿ ಜೀರ್ಣೋದ್ಧಾರವಾಗಲಿರುವುದನ್ನೂ, ಆ ಕೆಲಸವನ್ನು ಊರಿನವರೂ ಮತ್ತು ತಮ್ಮ ವಠಾರದವರೂ ಕೂಡಿಯೇ ಮಾಡಬೇಕೆಂದು ಏಕನಾಥ ಗುರೂಜಿಯವರು ಆಜ್ಞೆ ಮಾಡಿರುವುದನ್ನೂ ಸವಿವರವಾಗಿ ಅವನಿಗೆ ತಿಳಿಸಿದಳು. ಅಷ್ಟು ಕೇಳಿದ ನರಹರಿಗೆ ತನ್ನ ಹೃದಯವನ್ನು ಯಾರೋ ಬಲವಾಗಿ ಹಿಂಡಿದಂತಾಯಿತು! ಏಕೆಂದರೆ ಅವನು ಕೂಡಾ ಬುಕ್ಕಿಗುಡ್ಡೆಯ ಸುತ್ತಮುತ್ತಲಿನ ಕಾಡು ಗುಡ್ಡಗಳನ್ನೂ ಮುಖ್ಯವಾಗಿ ನಿತ್ಯ ಹರಿದ್ವರ್ಣದ ಆ ದೇವರಕಾಡನ್ನೂ, ಅದರ ಶುದ್ಧ ಆಮ್ಲಜನಕವನ್ನೂ ಹಾಗೂ ವರ್ಷವಿಡೀ ತುಂಬಿ ಹರಿಯುತ್ತ ಇಡೀ ಊರಿಗೆ ತಣ್ಣನೆಯ ನೀರನ್ನು ಪೂರೈಸುತ್ತಿದ್ದ ಅಲ್ಲಿನ ಬೃಹತ್ ಮದಗವನ್ನೂ ನೋಡಿಯೇ ಮನಸೋತು ಅಲ್ಲಿ ಜಾಗವನ್ನು ಕೊಂಡು ಮನೆ ಕಟ್ಟಿಸಿ ಬಾಳಲು ಮನಸ್ಸು ಮಾಡಿದ್ದವನು.
ಅಷ್ಟುಮಾತ್ರವಲ್ಲದೇ, ಅವನು ತನ್ನ ಬಿಡುವಿನ ಸಮಯವನ್ನು ಹಾಗೂ ರಜಾದಿನಗಳ ಬಹುಪಾಲನ್ನು ಸ್ವರ್ಗದಂಥ ಆ ಕಾಡಿನಲ್ಲೂ, ಅದರೊಳಗಿನ ಸರೋವರದ ದಡದಲ್ಲೂ ಕುಳಿತು ಕಳೆಯುತ್ತ ಅಲ್ಲಿನ ಪ್ರಾಣಿಪಕ್ಷಿಗಳ ಕಲವರವನ್ನೂ ಇತರ ಜೀವರಾಶಿಗಳ ವಿಸ್ಮಯ ಜಗತ್ತನ್ನೂ ಕಂಡು ಆಸ್ವಾದಿಸುತ್ತ ಬಂದಂಥ ಮನಸ್ಥಿತಿಯವನು. ಹಾಗಾಗಿ ಆ ಹಸಿರು ತಾಣವನ್ನು ಅವನು ತನ್ನ ಜೀವಕ್ಕಿಂತಲೂ ಮಿಗಿಲಾಗಿ ಪ್ರೀತಿಸುತ್ತಿದ್ದ. ಆದರೆ ಆ ಅಮೂಲ್ಯ ಪರಿಸರವು ಇನ್ನು ಕೆಲವೇ ಕಾಲದೊಳಗೆ ಸುಡುಗಾಡಾಗಿ ಬಿಡಲಿದೆ ಎಂಬ ಸತ್ಯವನ್ನು ಅವನಿಂದ ಅರಗಿಸಿಕೊಳ್ಳಲಾಗಲಿಲ್ಲ! ಅದೇ ನೋವಿನಿಂದ ಮೌನವಾಗಿ ಕಾರು ಚಲಾಯಿಸುತ್ತಿದ್ದ. ಅವನು ಸಾಗುತ್ತಿದ್ದ ದಾರಿಯುದ್ದಕ್ಕೂ ಕಣ್ಣ ಮುಂದೆ ಚಿತ್ರಪಟಗಳಂತೆ ಸರಿದು ಹೋಗುತ್ತಿದ್ದ ಬೆಟ್ಟಗುಡ್ಡಗಳೂ, ಗಿಡಮರ ಬಳ್ಳಿಗಳೂ ಅವನನ್ನು ಕಂಡು ಅಸಹಾಯಕತೆಯಿಂದ ಚೀರಿಡುವಂತೆ ಅವನಿಗೆ ಭಾಸವಾಗತೊಡಗಿತು. ಅರಿವಿಲ್ಲದೆಯೇ ಅವನ ಕೆನ್ನೆಯ ಮೇಲೆ ಕಣ್ಣೀರು ಹರಿಯಿತು. ಅತ್ತ ತನ್ನ ಗಂಡನ ತಲೆಯನ್ನು ಮಡಿಲಲ್ಲಿಟ್ಟುಕೊಂಡು ಆತಂಕದಿಂದ ಕುಳಿತಿದ್ದ ರಾಧಾಳಿಗೆ ನರಹರಿಯ ಕಣ್ಣೀರು ಕಾಣಿಸುತ್ತಿರಲಿಲ್ಲ. ಕಂಡರೂ ಅವಳಿಗದು ಅರ್ಥವಾಗುತ್ತಿತ್ತೋ ಇಲ್ಲವೋ? ಸ್ವಲ್ಪಹೊತ್ತಿನಲ್ಲಿ ನರಹರಿಗೆ ತಟ್ಟನೆ ವಿಶೇಷ ಯೋಚನೆಯೊಂದು ಹೊಳೆಯಿತು. ಹಾಗಾಗಿ ತಾಳ್ಮೆಯಿಂದ ಕಣ್ಣೀರೊರೆಸಿಕೊಂಡವನು, ಶತಶತಮಾನಗಳಿಂದಲೂ ಸರ್ವ ಜೀವರಾಶಿಗಳನ್ನೂ ಹೆತ್ತಮ್ಮನಂತೆ ಪೋಷಿಸುತ್ತ ಬಂದಂಥ ಯಾವುದೇ ಹಸಿರು ಪರಿಸರಕ್ಕೂ ಜೀರ್ಣೋದ್ಧಾರವಾಗಬೇಕಾದ ಅಗತ್ಯವಿಲ್ಲ. ಬದಲಿಗೆ ಪ್ರಕೃತಿಯ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತ ಮುಗ್ಧ, ಅಮಾಯಕ ಜನರನ್ನು ಬಗೆಬಗೆಯ ಅಂಧಶ್ರದ್ಧೆಗಳಿಗೆ ತಳ್ಳುತ್ತಿರುವ ಒಂದಷ್ಟು ದುರಾಸೆಪೀಡಿತ ಮನಸ್ಸುಗಳ ಉದ್ಧಾರವು ಆದಷ್ಟು ಬೇಗ ಆಗಲೇಬೇಕಾದ ಅನಿವಾರ್ಯತೆಯಿದೆ! ಎಂದುಕೊಂಡವನಲ್ಲಿ ಯಾವುದೋ ದೃಢ ನಿರ್ಧಾರವೊಂದು ಹರಳುಗಟ್ಟಿತು. ಅಷ್ಟೊತ್ತಿಗೆ ಆಸ್ಪತ್ರೆಯೂ ಎದುರಾಯಿತು. ಅದಾಗಲೇ ರಾಧಾಳ ಹೆತ್ತವರೂ ಬಂದು ಕಾಯುತ್ತಿದ್ದರು. ನರಹರಿಯು ಅವರ ಸಹಾಯದಿಂದ ಗೋಪಾಲನನ್ನು ಆಸ್ಪತ್ರೆಗೆ ದಾಖಲಿಸಿದ. ಅವನ ಕಾಯಿಲೆಯ ವಿವರವನ್ನು ಮುಖ್ಯ ವೈದ್ಯರಿಗೆ ತಿಳಿಸಿದವನು ರಾಧಾಳ ಕೈಗೆ ಸ್ವಲ್ಪ ಹಣವನ್ನು ತುರುಕಿಸಿ ಧೈರ್ಯ ತುಂಬಿ ಹಿಂದಿರುಗಿದ. ಅವನ ಮಾನವೀಯತೆಯನ್ನು ಕಂಡು ರಾಧಾಳ ಕಣ್ಣಲ್ಲಿ ನೀರಾಡಿತು. ತುಂಬಿದ ಕಣ್ಣುಗಳಿಂದ ಅವನನ್ನು ದಿಟ್ಟಿಸುತ್ತ ಕೃತಜ್ಞತೆ ಸಲ್ಲಿಸಿದಳು. ಅವನು ನಗುತ್ತ ಹೊರಟು ಹೋದ. ಅವಳು ಅವನ ಕಾರು ಕಣ್ಮರೆಯಾಗುವವರೆಗೆ ತದೇಕಚಿತ್ತದಿಂದ ನೋಡುತ್ತ ನಿಂತಳು!
***
ಇತ್ತ,‘ಹೊಟೇಲ್ ಕೊಡಕ್ಕೆನಾದವರು ನಿನ್ನ ಮೇಲೆ ಮಾಟ ಪ್ರಯೋಗಿಸಿದ್ದಾರೆ!’ಎಂದು ಗುರೂಜಿಯವರು ಹೇಮಚಂದ್ರನಿಗೆ ಹೇಳಿದ್ದ ಮತ್ತು ಆ ಕೃತ್ರಿಮವನ್ನು ನಿವಾರಿಸುವ ಪೂಜಾವಿಧಿಗೆ ಶುಭದಿನವೊಂದನ್ನು ಗೊತ್ತುಪಡಿಸಿದ್ದರು. ಆದ್ದರಿಂದ ಅಂದು ಒಂದು ಲಕ್ಷ ವೆಚ್ಚದಲ್ಲಿ ತಮ್ಮ ಮನೆಯಲ್ಲೇ ಆ ವಿಧಿಯನ್ನು ನೆರವೇರಿಸಿ ಹೇಮಚಂದ್ರನಲ್ಲಿ ಆತ್ಮವಿಶ್ವಾಸವನ್ನು ತುಂಬಿ ಕಳುಹಿಸಿದರು. ಇದಾದ ತಿಂಗಳ ನಂತರ ಹೇಮಚಂದ್ರ ಈಶ್ವರಪುರದ ಮುಖ್ಯ ಬಸ್ಸು ನಿಲ್ದಾಣದ ಸಮೀಪದಲ್ಲಿ ಸಣ್ಣದೊಂದು ಕ್ಯಾಂಟೀನ್ ತೆರೆದ. ಒಬ್ಬ ಸಹಾಯಕನನ್ನಿಟ್ಟುಕೊಂಡು ತಾನೇ ಬಾಣಸಿಗನಾಗಿ ವ್ಯಾಪಾರವನ್ನಾರಂಭಿಸಿದ. ಅವನ ಪರಿಶ್ರಮ ಮತ್ತು ಹುಮ್ಮಸ್ಸಿನ ಫಲವಾಗಿ ಕೆಲವೇ ಕಾಲದೊಳಗೆ ವ್ಯಾಪಾರವೂ ವೃದ್ಧಿಸತೊಡಗಿತು. ಆನಂತರದ ಕೆಲವೇ ಕಾಲದೊಳಗೆ, ಬಸ್ ನಿಲ್ದಾಣದ ಪಕ್ಕದ ತಿರುವಿನಲ್ಲಿದ್ದ ನಾಲ್ಕು ಕೋಣೆಗಳ ಸುಸಜ್ಜಿತ ಕಟ್ಟಡವೊಂದಕ್ಕೆ ತನ್ನ ವ್ಯಾಪಾರವನ್ನು ವರ್ಗಾಯಿಸಿದ. ಅಲ್ಲೂ ವ್ಯಾಪಾರ ಅವನ ಕೈಹಿಡಿದು ಉತ್ತಮ ಲಾಭ ಬರತೊಡಗಿತು.
ಹೀಗಾಗಿ ಮುಂದಿನ ಕೆಲವೇ ವರ್ಷದೊಳಗೆ ಹೇಮಚಂದ್ರನ ಆರ್ಥಿಕ ಸಮಸ್ಯೆಗಳೆಲ್ಲ ತೀರಿದ್ದರೊಂದಿಗೆ ಎರಡೆರಡು ಕಡೆ ದುಬಾರಿ ಸೈಟುಗಳನ್ನೂ ಕೊಂಡುಕೊಳ್ಳುವಷ್ಟರ ಮಟ್ಟಿಗೆ ಅವನು ಶ್ರೀಮಂತನಾದ. ಆದರೆ ಹಿಂದಿನಿಂದಲೂ‘ಜನಸೇವೆಯೇ ಜನಾರ್ದನ ಸೇವೆ!’ ಎಂದು ನಂಬಿ ರುಚಿಕಟ್ಟಾದ ತಾಜಾ ಆಹಾರಗಳಿಂದಲೂ, ಸಂದರ್ಭೋಚಿತವಾದ ಬೆಲೆಯಿಂದಲೂ ಗಿರಾಕಿಗಳ ಮನಸ್ಸನ್ನು ಗೆದ್ದುಕೊಂಡಿದ್ದ ‘ಕೊಡೆಕ್ಕೆನಾ’ ಹೊಟೇಲಿನ ಯಶಸ್ಸಿನ ಗುಟ್ಟನ್ನು ತಿಳಿಯಲಾಗದ ಹೇಮಚಂದ್ರ ಅಂಥವರಿಗೇ ಪೈಪೋಟಿ ನೀಡಲು ಹೋಗಿದ್ದೇ ತನ್ನ ವ್ಯಾಪಾರವು ನೆಲಕಚ್ಚಲು ಕಾರಣ ಎಂಬ ಸತ್ಯವನ್ನು ಕೊನೆಗೂ ಅರ್ಥಮಾಡಿಕೊಳ್ಳಲಿಲ್ಲ! ಬದಲಿಗೆ ತನ್ನ ಯಶಸ್ಸಿಗೆ ಗುರೂಜಿಯವರ ಕೃಪಾಕಟಾಕ್ಷವೇ ಕಾರಣ ಎಂದು ಬಲವಾಗಿ ನಂಬಿದ. ಹೀಗಾಗಿ ಕೊಡೆಕ್ಕೆನಾ ಹೊಟೇಲು ಮಾಲಕರ ಮೇಲೆ ಅವನಲ್ಲಿ ವಿಪರೀತ ದ್ವೇಷ ಹೊಗೆಯಾಡತೊಡಗಿತ್ತು. ಒಮ್ಮೆ ಅದನ್ನು ಗುರೂಜಿಯವರಲ್ಲೂ ಹೇಳಿಕೊಂಡವನು, ’ಆವತ್ತು ನನ್ನನ್ನು ಸರ್ವನಾಶ ಮಾಡಲು ಹೊರಟ ಆ ಬಡ್ಡೀಮಕ್ಕಳ ಮೇಲೆ ಇವತ್ತು ನಾನೂ ಸೇಡು ತೀರಿಸಿಕೊಳ್ಳಬೇಕು ಗುರೂಜೀ. ಆ ಕಾರ್ಯಕ್ಕೆ ಅದೆಷ್ಟು ಖರ್ಚಾದರೂ ಪರ್ವಾಗಿಲ್ಲ. ಅವರು ನನಗೆ ಮಾಡಿದ ಮಾಟಮಂತ್ರವನ್ನು ತಿರುಗಿಸಿ ಅವರಿಗೇ ಮಾಡಿಸಿ ಮಣ್ಣು ಮುಕ್ಕಿಸಬೇಕು! ಎಂದು ರೋಷದಿಂದ ಹಲ್ಲು ಕಡಿಯುತ್ತ ಹೇಳಿದ. ಗುರೂಜಿಯವರಿಗೂ ಅದೇ ಬೇಕಿತ್ತು. ಹಾಗಾಗಿ ತಾವೂ ಅವನ ಮೂರ್ಖತವನ್ನು ಪ್ರೋತ್ಸಾಹಿಸುತ್ತ ಅದನ್ನು ನೆರವೇರಿಸುವ ಭರವಸೆಯನ್ನೂ ಕೊಟ್ಟರು!
(ಮುಂದುವರೆಯುವುದು)
ಗುರುರಾಜ್ ಸನಿಲ್
ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ