ಪತ್ರಕರ್ತ ಗಾಂಧೀಜಿ

ಲೇಖನ

ಪತ್ರಕರ್ತ ಗಾಂಧೀಜಿ

ಶಾಂತಿವಾಸು

Revealed: Gandhi's secret Public Relations techniques. You can use them  too, to become a PR superstar! - Atharva Marcom %

    ಪುರಸೊತ್ತಿಲ್ಲದೆ ಸದಾ ಹೋರಾಟಗಳಲ್ಲಿ ಭಾಗಿಯಾಗಿದ್ದ ಮಹಾತ್ಮ ಗಾಂಧೀಜಿಯವರು ತಮ್ಮ ಸಂಪೂರ್ಣ ಬದುಕನ್ನು ಪ್ರಯೋಗಕ್ಕೆ ಒಡ್ಡಿಕೊಂಡವರು. ಆ ನಿಟ್ಟಿನಲ್ಲಿ ಅವರ ಪ್ರಯೋಗಶೀಲತೆಗೆ ಒಂದು ಉತ್ತಮ ಉದಾಹರಣೆ ಎಂದರೆ ಅವರು ಪತ್ರಕರ್ತರಾಗಿ ಹಲವಾರು ಪತ್ರಿಕೆಗಳನ್ನು ನಡೆಸಿದರು ಎನ್ನುವುದು. ಅವರು ಸ್ಥಾಪಿಸಿದ ಎಲ್ಲ ಪತ್ರಿಕೆಗಳೂ ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ತಮ್ಮ ಭಾವನೆಯನ್ನು ಅಭಿವ್ಯಕ್ತಿಗೊಳಿಸುವ, ಜನರನ್ನು ಚಿಂತನೆಯೆಡೆಗೆ ಕೊಂಡೊಯ್ದು ಅವರ ಬದುಕನ್ನು ರೂಪಿಸುವ ಒಂದು ಅಪೂರ್ವ ಸಾಧನವಾಗಿತ್ತು.

     ಪತ್ರಿಕೋದ್ಯಮ ನನಗೆ ಶಿಕ್ಷಣ ಇದ್ದಂತೆ. ನನ್ನೊಳಗೆ ಇಣುಕಿ ನೋಡಿ ನನ್ನ ದೌರ್ಬಲ್ಯಗಳನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಚುರುಕಾದ ಪದಪ್ರಯೋಗ, ಕಠಿಣ ವಿಶೇಷಣ ಬಳಸಬೇಕೆಂದು ನನ್ನ ಕೋಪ ಹಾಗೂ ಪ್ರತಿಷ್ಠೆ ಆಜ್ಞಾಪಿಸುತ್ತದೆ. ಕಳೆಯನ್ನೆಲ್ಲಾ ಕಿತ್ತುಹಾಕಲು ಬರವಣಿಗೆ ಒಂದು ಸಾಧನ ಎನ್ನುತ್ತಿದ್ದ ಗಾಂಧೀಜಿ ಒಬ್ಬ ಮಹಾಗದ್ಯ ಶಿಲ್ಪಿ.

 ಯಂಗ್ ಇಂಡಿಯಾ, ಇಂಡಿಯನ್ ಒಪಿನಿಯನ್, ನವಜೀವನ್, ಹರಿಜನ ಹೀಗೆ ತಮ್ಮ ಬದುಕಿನ ಬೇರೆ ಬೇರೆ ಘಟ್ಟಗಳಲ್ಲಿ ಬೇರೆ ಬೇರೆ ಹೆಸರಿನ ಪತ್ರಿಕೆಗಳನ್ನು ಕಟ್ಟಿಬೆಳೆಸಿದ ಗಾಂಧೀಜಿಯವರು, ನಾನು ಪತ್ರಿಕೋದ್ಯಮದಲ್ಲಿ ತೊಡಗಿರುವುದು ಪತ್ರಿಕೋದ್ಯಮಕ್ಕಾಗಿ ಅಲ್ಲ. ನನ್ನ ಬಾಳಿನ ಮುಖ್ಯೋದ್ದೇಶ ಸಾಧನೆಗಾಗಿ ಎನ್ನುತ್ತಿದ್ದರು. ಗಾಂಧೀಜಿಯ ಪ್ರಥಮ ವಾರಪತ್ರಿಕೆ ಇಂಡಿಯನ್ ಒಪಿನಿಯನ್ 1903 ರ ಜೂನ್ 4ರಂದು ಡರ್ಬಾನಿನಲ್ಲಿ ಆರಂಭವಾಯಿತು. ದಕ್ಷಿಣ ಆಫ್ರಿಕಾದಲ್ಲಿದ್ದ ಭಾರತೀಯರ ಭಾವನೆಗಳಿಗೆ ಮಾತು ಕೊಡುವುದು ಇಂಡಿಯನ್ ಒಪಿನಿಯನ್ ಪತ್ರಿಕೆಯ ಉದ್ದೇಶವಾಗಿತ್ತು. ಹಿಂದಿ, ಗುಜರಾತಿ, ಇಂಗ್ಲಿಷ್ ಭಾಷೆಗಳಲ್ಲಿ ಆರಂಭವಾಗಿ ವಾರವಾರವೂ ತಮ್ಮ ಆತ್ಮದ ಮಾತುಗಳನ್ನು ಈ ಪತ್ರಿಕೆಗಳ ಅಂಕಣಗಳಲ್ಲಿ ತೋಡಿಕೊಳ್ಳುತ್ತಿದ್ದರು. ಗಾಂಧೀಜಿಯವರನ್ನು ಉತ್ತುಂಗಕ್ಕೇರಿಸಿದ ಸತ್ಯಾಗ್ರಹ ಎಂಬ ಪದವು ಹುಟ್ಟಿಕೊಂಡ ಸಂದರ್ಭವೇ ಒಂದು ರೋಚಕ ಕಥೆ ಇಂಗ್ಲಿಷಿನ passive resistance ಎಂಬುದಕ್ಕೆ ಭಾರತೀಯ ಪದವೊಂದು ಬೇಕೆಂದು ಇದೇ ಪತ್ರಿಕೆಯ ಮೂಲಕ ಓದುಗರಿಗೆ ಕರೆ ನೀಡಿ, ಉತ್ತರವಾಗಿ ಬಂದ ಸದಾಗ್ರಹ ಎಂಬ ಪದವನ್ನು ಗಾಂಧೀಜಿಯವರು ಸತ್ಯಾಗ್ರಹ ಎಂದು ಮಾರ್ಪಡಿಸಿದರು. ಈ ಪತ್ರಿಕೆಯ ಮೂಲಕ ಸತ್ಯಾಗ್ರಹದ ತತ್ವ ಆಚರಣೆಗಳನ್ನು ತಮಗೆ ತಿಳಿದಂತೆ ಪ್ರತಿಪಾದಿಸುತ್ತಿದ್ದರು. ಇದರ ಪರಿಣಾಮ ಗಾಂಧೀಜಿಯವರು ಸತ್ಯಾಗ್ರಹಕ್ಕಾಗಿಯೇ ಹೆಸರುವಾಸಿಯಾದರು.  ಇಂಡಿಯನ್ ಒಪಿನಿಯನ್ ಪತ್ರಿಕೆ ಇಲ್ಲದಿದ್ದರೆ ಸತ್ಯಾಗ್ರಹವೇ ಅಸಾಧ್ಯವಾಗುತ್ತಿತ್ತು ಎಂದು ಅವರು ಆಗಾಗ ಹೇಳುತ್ತಿದ್ದರು.

 ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸಂಪಾದಕೀಯ, ವಾಚಕರ ಪತ್ರ, ವಾರದ ದಿನಚರಿಯ ಜೊತೆ ಆದರ್ಶ ವ್ಯಕ್ತಿಗಳ ಜೀವನ ಚಿತ್ರಗಳು ಹಾಗೂ ಸತ್ಯಾಗ್ರಹದ ತತ್ವಸಾರವನ್ನು ಹೊತ್ತ ಸರಳ ಹಾಗೂ ಸಂಭಾಷಣ ಶೈಲಿಯ “ಹಿಂದ್ ಸ್ವರಾಜ್” ಧಾರವಾಹಿಯು ಗಾಂಧೀಜಿಯವರನ್ನು ಜನರಿಗೆ ಹತ್ತಿರವಾಗಿಸಿತು. ಇಂದಿನ  ಪತ್ರಿಕೆಗಳಿಗೆ ಹೋಲಿಸಿದರೆ ಗಾಂಧೀಜಿಯವರ ಪತ್ರಿಕೆಗಳ ಪ್ರಸಾರ ಬಹಳ ಕಡಿಮೆ. ಆದರೆ ಒಬ್ಬ ಆದರ್ಶ ಪತ್ರಕರ್ತರಾಗಿದ್ದ ಬಾಪು ಅವರ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು ಯಾವ ಪತ್ರಿಕೆಯಾದರೂ ಪ್ರಕಟಿಸಬಹುದಿತ್ತು. ಹಾಗಾಗಿ ಅನೇಕ ಪತ್ರಿಕೆಗಳು ಅವನ್ನು ಅಚ್ಚು ಮಾಡುತ್ತಿದ್ದವು.

    1933 ರಲ್ಲಿ ಯಂಗ್ ಇಂಡಿಯಾ ಪತ್ರಿಕೆಯ ಮೇಲೆ ಸರ್ಕಾರದ ಗದಾ ಪ್ರಹಾರವಾದ ಸಂದರ್ಭ ಆರಂಭವಾದ ಹರಿಜನ ಪತ್ರಿಕೆಯು ಕನ್ನಡದಲ್ಲಿ ಕೂಡ ಪ್ರಕಟವಾಗುತ್ತಿತ್ತು. ನಾನಾ ವಿಚಾರಗಳ, ಪ್ರಯೋಗಗಳ ಹಾಗೂ ಅಭಿವ್ಯಕ್ತಿಯ ಮಾಧ್ಯಮವಾಗಿದ್ದ ಹರಿಜನ ಪತ್ರಿಕೆಯ ಮೂಲಕವೇ ಗಾಂಧೀಜಿಯವರು 1942ರ ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ನೀಡಿದರು. ಗಾಂಧೀಜಿಯವರು ಸೆರೆಯಾದರು. ಹರಿಜನ ಪತ್ರಿಕೆ ಮುಚ್ಚಿಹೋಯಿತು. ಮೂರೂವರೆ ವರ್ಷಗಳ ನಂತರ ಹರಿಜನ ಪತ್ರಿಕೆ ಮತ್ತೆ ಪ್ರಕಟವಾಗತೊಡಗಿತ್ತು. ಅಷ್ಟರಲ್ಲಿ ಗಾಂಧೀಜಿಯವರ ಮನಸ್ಸಿನ ನೆಮ್ಮದಿ ಕಳೆದುಹೋಗಿತ್ತು. ಅವರು ನೆನೆಸಿದಂತೆ ನಾಯಕರು ನಡೆದುಕೊಳ್ಳಲಿಲ್ಲ. ದೇಶದ ಆಗುಹೋಗುಗಳಿಂದ ಅವರು ಬಹಳ ನೊಂದಿದ್ದರು. “ಅಭಿಪ್ರಾಯಗಳು ಜನರಿಗೆ ತಲುಪಿದೆ ಹಾಗಾಗಿ ಹರಿಜನ ಪತ್ರಿಕೆ ನಿಲ್ಲಿಸೋಣ” ಎನ್ನುತ್ತಿದ್ದವರು ಹಲವರ ಒತ್ತಾಯದ ಮೇರೆಗೆ ಪತ್ರಿಕೆಯನ್ನು ನಡೆಸುತ್ತಿದ್ದರು.

   ತಮ್ಮ ಕೊಲೆಯಾದ ದಿನವೂ ಕೂಡ ಹರಿಜನ ಪತ್ರಿಕೆಗೆ ಲೇಖನವನ್ನು ಬರೆದಿದ್ದನ್ನು ವಿಶ್ಲೇಷಿಸುತ್ತಾ “ಗಾಂಧೀಜಿಯವರ ದೇಹವನ್ನು ಅಗ್ನಿಗೆ ಒಪ್ಪಿಸಿದ ಮೇಲೆ ಇನ್ನು ಹರಿಜನವೂ ಸತ್ತಂತೆಯೇ” ಎಂದಿದ್ದರು ರಾಜಾಜಿಯವರು. ಅಷ್ಟರ ಮಟ್ಟಿಗೆ ಬರವಣಿಗೆಯನ್ನು ಪ್ರೀತಿಸುತ್ತಿದ್ದ ಗಾಂಧೀಜಿಯವರು ಕೊನೆಯವರೆಗೂ ಪತ್ರಕರ್ತರಾಗಿಯೇ ಇದ್ದರು.  ಎಂಥವರನ್ನೂ ಒಲಿಸಿಕೊಳ್ಳುವ ತದೇಕ ಪ್ರಜ್ಞೆ, ಪ್ರಮಾಣಿಕತೆ, ಚಾಟಿಯಿಂದ ಬಾರಿಸಿದಂಥ ಮಾತಿನ ಓಘವಿದ್ದರೂ ಅದರಲ್ಲಿ ನೋವಿರುತ್ತಿರಲಿಲ್ಲ. ಹಿಂಸೆಯಿರಲಿಲ್ಲ. ಬದಲಿಗೆ ಮಿಂಚಿನ ಹೊಳಪಿತ್ತು. ಅಲಂಕಾರಭೂಷಿತವಾದ ಆಡಂಬರದ ಬರಹದ ಶೈಲಿಯೇ ಮೆರೆಯುತ್ತಿದ್ದ ಆ ಕಾಲದಲ್ಲಿ, ನಿರಾಭರಣ ಸುಂದರಿಯಂತೆ ಸುಂದರವೂ, ಶಕ್ತವೂ, ವಿಚಾರನಿಷ್ಟವೂ ಆಗಿದ್ದು, ಎಲ್ಲ ವರ್ಗದ ಜನರನ್ನೂ ತಲುಪುವಂತಿದ್ದ ಸರಳ ಬರಹದ ಶೈಲಿ ಗಾಂಧೀಜಿಯವರ ದೊಡ್ಡ ಸಾಧನೆ. ಪತ್ರಿಕೆಯ ಬರಹವನ್ನು ಅವಸರದ ಸಾಹಿತ್ಯ ಎಂದು ಹೀಗಳೆಯುವ ಹಾಗೂ ಪತ್ರಿಕಾ ಸಾಹಿತ್ಯ ಸಾಹಿತ್ಯವೇ ಅಲ್ಲ ಎಂದು ಹೀಗಳೆಯುವ ಮಂದಿಯ ಮಧ್ಯೆ, ಆಳವಾದ ಚಿಂತನೆ, ವಿಶಾಲವಾದ ಅನುಭವದ ಬಲವಿದ್ದರೆ ಅದು ಶಾಶ್ವತವಾಗಿ ಉಳಿಯುತ್ತವೆ ಎಂಬುದಕ್ಕೆ ಗಾಂಧೀಜಿಯವರ ವಿಚಾರಗಳು ಇಂದಿಗೂ ಪ್ರಸ್ತುತವಿರುವುದೇ ಸಾಕ್ಷಿ.


2 thoughts on “ಪತ್ರಕರ್ತ ಗಾಂಧೀಜಿ

  1. ಕೋಲಾರದ ಮಾಣಿಕ್ಯ ಜೈ ಜವಾನ್ ಜೈ ಕಿಸಾನ್ ವೇದವಾಕ್ಯ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಜೈ ಜವಾನ್ ಜೈ ಕಿಸಾನ್ ಅಮೋಘ ರತ್ನ

  2. ಮರೆಯಲಾಗದ ಮಾಣಿಕ್ಯ ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಹಾರ್ದಿಕ ಶುಭ ಹಾರೈಕೆಗಳು ಜಯಮಂಗಳ ಜವಳಿ ಬೆಂಗಳೂರು ರಾಮಮೂರ್ತಿನಗರ ಅಧ್ಯಕ್ಷ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಶಿರಬಾಗುವೆ ಕನ್ನಡ ತಾಯಿ ಭುವನೇಶ್ವರಿ ದೇವಿಗೆ ಜಯ ಕರ್ನಾಟಕ ಮಾತೆ ಜಯ ಜಯ ಜಯ ಜಯ ಮಂಗಳ ಜವಳಿ ಬೆಂಗಳೂರು ಗ್ರಾಮಾಂತರ

    ‌.

Leave a Reply

Back To Top