ಶಾಸ್ತ್ರೀಜಿ ಎಂಬ ಧ್ರುವ ತಾರೆಯ ನೆನಪಿನಲ್ಲಿ…

ಲೇಖನ

ಶಾಸ್ತ್ರೀಜಿಎಂಬಧ್ರುವತಾರೆಯನೆನಪಿನಲ್ಲಿ…

ವಿಷ್ಣು ಆರ್. ನಾಯ್ಕ

 ಅದು 1965ನೇ ಇಸವಿಯ ಅಗಸ್ಟ್ 31ನೇ ತಾರೀಖು..!

ಸಾದಾರಣ ರೂಪು, ಸಾದಾರಣ ಉಡುಪಿನ, ಕುಳ್ಳಗಿನ ಆಕಾರದ ದೇಶದ ಪ್ರಧಾನಿಯೆನಿಸಿದ ವ್ಯಕ್ತಿಯೊಬ್ಬರೂ ತುಸು ದುಗುಡದಿಂದ ಮನೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಅವರ ಮನದಲ್ಲಿ ನೂರಾರು ಚಿಂತೆಗಳಿವೆ. ‘ ಹತ್ಯಾರೋಂ ಕಾ ಜವಾಬ್, ಹತ್ಯಾರೋಂಸೆ ದೇಂಗೆ..!’ 

ಅಂದು ಸ್ವಾತಂತ್ರ್ಯ ದಿನ ಅಗಸ್ಟ್ 15ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಿಂತು ತಾವೇ ಗುಡುಗಿದ ನುಡಿ ಮತ್ತೆ ಅವರ ಮನದಲ್ಲಿ ಮಾರ್ದನಿಸಿತು. ತನ್ನ ದೇಶವಾಸಿಗಳ ಸ್ಥಿತಿಗತಿ, ಉಂಟಾಗಿರುವ ವಿಷಮ ಪರಿಸ್ಥಿತಿ ಅವರ ಕಣ್ಣೆದುರು ಚಿತ್ರಗಳಂತೆ ಚಲಿಸಿ, ಪಾತರಗಿತ್ತಿಯಂತೆ ಕುಣಿದು ಕಣ್ಮರೆಯಾಯಿತು. ದೇಶ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಆ ವ್ಯಕ್ತಿ ಪ್ರಧಾನಿಯಾಗಿ ಸ್ವಂತ ಮನೆಯನ್ನೂ ಹೊಂದಿರಲಿಲ್ಲ. ತಮಗೆ ಸಿಗುತ್ತಿದ್ದ ವೇತನದ ಹಣವನ್ನು ಬಡವರು , ದೀನರಿಗೆ ದಾನ ಮಾಡುತ್ತಿದ್ದ ಇವರು, ಮನೆಯ ಖರ್ಚನ್ನು ನಿಭಾಯಿಸಲಾಗದೆ ಮನೆ ಕೆಲಸದಾಕೆಯನ್ನು ಕೆಲಸದಿಂದ ಬಿಡಿಸಿ, ತಾವೇ ಪತ್ನಿಗೆ ಸಹಾಯಕರಾಗಿದ್ದರು. ಮಕ್ರಳನ್ನೂ ಟ್ಯೂಷನ್ ಖರ್ಚು ಬರಿಸಲಾಗದೇ ಟ್ಯೂಷನ್ ನಿಂದ ಬಿಡಿಸುವ ನಿರ್ಧಾರಕ್ಕೆ ಬಂದಿದ್ದರು.  ಸರಳತೆಯ ಸಾಕಾರ ಮೂರ್ತಿಯಾದ, ಬದುಕಿನಲ್ಲಿ ಯಾವ ಸ್ವಾರ್ಥವನ್ನೂ ಹೊಂದದ ಆ ವ್ಯಕ್ತಿ “ಏನು ಘಟಿಸಿದರೂ ಧೈರ್ಯದಿಂದ ಎದುರಿಸೋಣ” ಎಂಬ ನಿರ್ಧಾರಕ್ಕೆ ಬಂದು  ಚಿಂತೆಯಿಂದ ಹೊರಬಂದು ಕೊನೆಗೆ ಊಟಕ್ಕೆ ಕೂರಲು ಸಿದ್ಧರಾದರು‌. 

ಇನ್ನೇನೂ  ಊಟಕ್ಕೆ ಕೂರಬೇಕು.. ಅವರ ಆಪ್ತ ಕಾರ್ಯದರ್ಶಿ ದಡಬಡಿಸಿ ಬಂದು ಅವರ ಕಿವಿಯಲ್ಲಿ ಏನನ್ನೋ ಉಸುರಿದರು. ತಕ್ಷಣ ಅವರ ಮೊಗದಲ್ಲಿ ಮತ್ತೆ ಚಿಂತೆಯ ಗೆರೆಗಳು ಮೂಡಿದವು. ಕರ್ತವ್ಯ ಪ್ರಜ್ಞೆ ಎಚ್ಚರಿಸಿತು. ಹಸಿವು ಮಾಯವಾಯಿತು. ದೇಶದ ಪ್ರಧಾನಿಯೆನಿಸಿದ ಆ ವ್ಯಕ್ತಿ ದೆಹಲಿಯ ’10 ಜನಪಥ್’ ರಸ್ತೆಯ ಪ್ರಧಾನಿ ಕಛೇರಿಯತ್ತ ನಡೆದೇ ಬಿಟ್ಟರು. ಭೂಸೇನೆ, ನೌಕಾ ಸೇನೆ, ವಾಯು ಸೇನೆಯ ಮೂವರು ಮುಖ್ಯಸ್ಥರು ಪ್ರಧಾನಿಯವರ ಹಾದಿಯನ್ನೇ ಎದುರು ನೋಡುತ್ತಿದ್ದರು. ಪ್ರಧಾನಿಯವರು ಬಂದಿದ್ದೇ ತಡ ವೈಸ್ ಅಡ್ಮಿರಲ್ ಭಾಸ್ಕರ್ ಸದಾಶಿವ ಸೋಮನ್ ಮತ್ತು ಏರ್ ಚೀಫ್

 ಮಾರ್ಷಲ್ ಅರ್ಜುನ ಸಿಂಗ್  ಪ್ರಧಾನಿಯವರ ಕೊಠಡಿಯನ್ನು ಸೇರಿದರು. ಸುಮಾರು ಐದು ನಿಮಿಷಗಳ ಚರ್ಚೆ ಅಷ್ಟೇ..! ಪ್ರಧಾನಿ ಹೊರಬಂದರು.  ಜಗತ್ತೇ ನಿಬ್ಬೆರಗಾಗುವಂತೆ,  ವಿರೋಧಿಗಳ ಎದೆಯಲ್ಲಿ ತಳಮಳ ಹುಟ್ಟಿಸುವ ನಿರ್ಧಾರಕ್ಕೆ ಅವರು ಬಂದಿದ್ದರು. ಪಾಕಿಸ್ತಾನದ ಮೇಲೆ ಯುದ್ಧ ಘೋಷಣೆಯಾಗಿತ್ತು.

ಹೀಗೆ ಕೆಲವೇ ನಿಮಿಷಕ್ಕೆ ಧೀಮಂತ ನಿರ್ಧಾರಕ್ಕೆ ಬಂದ ಆ ವ್ಯಕ್ತಿ ಬೇರಾರೂ ಅಲ್ಲ, ಭಾರತ ಕಂಡ ಅಪರೂಪದ ಪ್ರಧಾನಿ ದಿ. ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರು.

    **********************************

ಅಂದು 1962ರಲ್ಲಿ ಚೀನಾ ವಿರುದ್ಧದ ಯುದ್ಧದಲ್ಲಿ ಸೋತ ಭಾರತಕ್ಕೆ ಪಾಠ ಕಲಿಸಲು ಹೊಂಚು ಹಾಕಿದ್ದ      ಪಾಕ್ 1965ರ ಅಗಸ್ಟ್ 31ರಂದು  ನೂರಾರು ಯುದ್ಧ ಟ್ಯಾಂಕರ್ ಗಳೊಡನೆ ‘ ಛಾಂಬ್’ ಅಂತರಾಷ್ಟ್ರೀಯ ಗಡಿರೇಖೆಯನ್ನು ದಾಟಿ ಭಾರತದ ಮೇಲೆ ಮುಗಿಬಿದ್ದಿತು. ಇನ್ನು ಕೆಲವೇ ಗಂಟೆಗಳಲ್ಲಿ ಜಮ್ಮು ಕಾಶ್ಮೀರ ಭಾರತದ ಇತರ ಭಾಗಗಳೊಂದಿಗೆ ಸಂಪರ್ಕ ಕಡಿದು ಕೊಳ್ಳುವ ಅಪಾಯದಲ್ಲಿತ್ತು. 

” ಛಾಂಬ್ ಕೈ ಜಾರುವ ಮೊದಲು ಲಾಹೋರನ್ನು ವಶಪಡಿಸಿಕೊಳ್ಳಿ” ಶಾಸ್ತ್ರೀಜಿ ಸೈನ್ಯಕ್ಕೆ ನಿರ್ದೇಶನ ನೀಡಿಯೇ ಬಿಟ್ಟರು! ಅಮೇರಿಕಾ ದಾನ ಮಾಡಿದ್ದ ಎಂ.48 ಟ್ಯಾಂಕ್ ಗಳನ್ನು ಹೊಂದಿ, ಎರಡು ಸೇನಾ ತುಕಡಿಗಳೊಡನೆ ದಾಳಿಗಿಳಿದಿದ್ದ ಪಾಕ್ ಆರಂಭದಲ್ಲಿ ಮೇಲುಗೈ ಸಾಧಿಸಿತ್ತು. ಭಾರತದ ಒಂದೇ ತುಕಡಿ ಅವುಗಳನ್ನು ಹಿಮ್ಮೆಟ್ಟಿಸಲು ಹೋರಾಡುವ ಜೊತೆಗೆ ಪ್ರತಿದಾಳಿ ನಡೆಸಬೇಕಿತ್ತು. ಕದನ ಭೀಕರವಾಗಿ ಸಾಗಿತು. ಕೊನೆಗೂ ಸೆಪ್ಟಂಬರ್ 10ರಂದು ನಡೆದ ನಿರ್ಣಾಯಕ ಸಮರದಲ್ಲಿ ‘ಅಸಲ್ ಉತ್ತರ್’ ನಲ್ಲಿ  ಭಾರತ ಪಾಕ್ ನ 97 ಟ್ಯಾಂಕ್ ಗಳನ್ನು ವಶಪಡಿಸಿಕೊಂಡಿತು. ಪಾಕಿಸ್ತಾನದ ಜನರಲ್ ಅಯೂಬ್ ಖಾನ್ ಯುದ್ಧವನ್ನು ನಿಲ್ಲಿಸುವಂತೆ ಭಾರತಕ್ಕೆ ಸೂಚಿಸುವಂತೆ ಅಂತರಾಷ್ಟ್ರೀಯ ಸಮುದಾಯದೆದುರು ಗೋಗರೆದರು. ಚೀನಾ ಯುದ್ಧದಲ್ಲಿ ಮೂಗು ತೂರಿಸುವ ಮಾತಾಡಿತು.

“ಯುದ್ಧ ನಿಲ್ಲಿಸದಿದ್ದರೆ ಭಾರತಕ್ಕೆ ಗೋಧಿ ರಫ್ತು ಮಾಡಲಾಗದು. ನೀವು ಹಸಿವಿನಿಂದ ಸಾಯುತ್ತೀರಿ” ಅಮೆರಿಕಾ ಭಾರತಕ್ಕೆ ಎಚ್ಚರಿಕೆ ನೀಡಿತು. ಶಾಸ್ತ್ರೀಜಿ ಅಂಜಲಿಲ್ಲ.

” ನಿಮ್ಮ ಕಳಪೆ ಗುಣಮಟ್ಟದ ಗೋಧಿಯನ್ನು ಹಣ ಕೊಟ್ಟು ಖರೀದಿಸಿ , ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ಹಸಿವೆಯಿಂದ ಸಾಯುವುದೇ ಮೇಲು” ಎಂದು ಉತ್ತರಿಸಿದ ಶಾಸ್ತ್ರೀಜಿ ಅಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು.

” ಪಾಕಿಸ್ತಾನದೊಡನೆ ಯುದ್ಧ ನಡೆಯುತ್ತಿದೆ. ಅಮೆರಿಕಾ ಗೋಧಿ ರಫ್ತು ಮಾಡುವುದನ್ನು ನಿಲ್ಲಿಸಿದೆ.ದೇಶದ ಜನ ಸಹಕರಿಸಬೇಕು. ನೀವು ಸಾಧ್ಯವಾದಲ್ಲಿ ಸೈನಿಕರಿಗೆ ಧನ ಸಹಾಯ ಇಲ್ಲವೇ ಆಹಾರದ ಸಹಾಯವನ್ನು ಮಾಡಬಹುದು. ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು, ಆಹಾರದ ಸಮಸ್ಯೆಯನ್ನು ನೀಗಿಸಲು ಪ್ರತಿ ಸೋಮವಾರ ಉಪವಾಸ ವೃತವನ್ನು ಆಚರಿಸಬಹುದು” ಶಾಸ್ತ್ರೀಜಿಯ ಪ್ರೇರಕ ನುಡಿಗೆ ಇಡೀ ದೇಶ ತಲೆದೂಗಿತು. ಯುದ್ಧ ಮುಂದುವರಿಯಿತು. ಮುಂದಾಗುವ ಅಪಾಯವರಿತ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಫಲವಾಗಿ ಸೆಪ್ಟೆಂಬರ್ 21ರಂದು ಕದನ ವಿರಾಮ ಒಪ್ಪಂದವೇರ್ಪಟ್ಟಿತು. ರಷ್ಯಾದ ತಾಷ್ಕೆಂಟ್ ನಲ್ಲಿ ಸಂಧಾನ ಮಾತುಕತೆಗೆ ವೇದಿಕೆ ನಿರ್ಮಾಣವಾಯಿತು. ಪಾಕಿಸ್ತಾನದ 152 ಟ್ಯಾಂಕ್ ಗಳನ್ನು ಭಾರತ ವಶಪಡಿಸಿಕೊಂಡಿತ್ತು. ಅಂದು ವಿಶ್ವ ಸಮುದಾಯದೆದುರು ಭಾರತದ ಪ್ರಧಾನಿ ನಿಜ ಅರ್ಥದಲ್ಲಿ ‘ ಬಹದ್ದೂರ್’ ಎನಿಸಿದ್ದರು.

       *********************************

” Then you will have to find another PM”( ಹಾಗಾದರೆ ನನ್ನ ನಂತರದ ಪ್ರಧಾನಿ ಬರುವವರೆಗೆ ಕಾಯ ಬೇಕಾಗುತ್ತದೆ!) 

” ಮುಂದೆಂದೂ ಬಲ ಪ್ರಯೋಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋಗುವುದಿಲ್ಲ” ಎಂದು ತಾಷ್ಕೆಂಟ್ ಒಪ್ಪಂದದಲ್ಲಿ ಲಿಖಿತ ಭರವಸೆ ನೀಡಲು ಒಪ್ಪದ ಪಾಕ್ ಪ್ರಧಾನಿ ಅಯೂಬ್ ಖಾನ್ ರಿಗೆ ಶಾಸ್ತ್ರೀಜಿ ನೀಡಿದ ಖಡಕ್ ಉತ್ತರವಿದು. ಪಾಕ್ ಪ್ರಧಾನಿ ಕೊನೆಗೂ ತಲೆ ಬಾಗಲೇ ಬೇಕಾಯಿತು. ಜನೆವರಿ 10ರಂದು ತಾಷ್ಕೆಂಟ್ ಒಪ್ಪಂದವೇರ್ಪಟ್ಟಿತು.ಆದರೆ ಈ ಗೆಲುವಿನ ನಗೆ ಹೆಚ್ಚು ಕಾಲ ಉಳಿಯಲಿಲ್ಲ.‌ಅದೇನು ದುರ್ದೆಸೆಯೋ ಗೊತ್ತಿಲ್ಲ. ಭಾರತಕ್ಕೆ ರಾತ್ರಿ 1 ಗಂಟೆ 32 ನಿಮಿಷಕ್ಕೆ ಸರಿಯಾಗಿ ಬರಸಿಡಿಲು ಬಡಿಯಿತು. “ಶಾಸ್ತ್ರೀಜಿ ಇನ್ನಿಲ್ಲ ” ಎಂಬ ಸುದ್ದಿ ದೇಶವಾಸಿಗಳನ್ನು ದಂಗು ಬಡಿಸಿತು. ಹೃದಯಾಘಾತದಿಂದ ಶಾಸ್ತ್ರೀಜಿ ಅಸುನೀಗಿದ್ದರು.

ಇಡೀ ದೇಶ ಮಮ್ಮಲ ಮರುಗಿತು. ಭಾರತದ ಜನಮಾನಸದ ‘ಧ್ರುವ ತಾರೆ’ ಅಂದು ಕಣ್ಮರೆಯಾಗಿತ್ತು.

     *********************************

 ಬಡ ಶಿಕ್ಷಕನ ಮಗನಾಗಿ ಕಾಶಿ ಸಮೀಪದ ಮೊಘಲ್ ಸರಾಯ್ ನಲ್ಲಿ  1904 ಅಕ್ಟೋಬರ್ 2ರಂದು ಜನಿಸಿದ ಶಾಸ್ತ್ರೀಜಿ ತಂದೆಯಿಲ್ಲದೇ ಬಾಲ್ಯವನ್ನು ಕಳೆದವರು. ಅಂಬಿಗನಿಗೆ ನೀಡಲು ಹಣವಿಲ್ಲದೆ ವಿದ್ಯಾಭ್ಯಾಸದ ಅವಧಿಯಲ್ಲಿ ಗಂಗಾ ನದಿಯನ್ನು ಈಜಿದವರು. ಮಾವಿನ ಹಣ್ಣಿಗೋಸ್ಕರ ಬೇರೆಯವರ ತೋಟಕ್ಕೆ ನುಗ್ಗಿ, ಪೆಟ್ಟು ತಿಂದು ಬದುಕಿನ ಪಾಠ ಕಲಿತವರು.  ಬಾಲ ಗಂಗಾಧರ್ ತಿಲಕರಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದವರು.ಗಂಧೀಜಿಯವರ ಅನುಯಾಯಿಯಾಗಿ ಜೈಲುವಾಸ ಅನುಭವಿಸಿದವರು. ಹೀಗೆ ಬದುಕಿನುದ್ದಕ್ಕೂ ಏಳು ಬೀಳಿನ ಹಾದಿಯಲ್ಲೇ ಸಾಗಿದವರವರು. ಭಾರತಕ್ಕೆ  ಸ್ವಾತಂತ್ರ್ಯ ಬಂದ ನಂತರ ಕೇಂದ್ರದಲ್ಲಿ ಮಂತ್ರಿಯಾಗಿ, ಚಿಕ್ಕ ರೇಲ್ವೇ ಅವಘಡಕ್ಕೆ ಸ್ವಯಂ ಹೊಣೆಹೊತ್ತು ರೇಲ್ವೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ‘ ಬಹದ್ದೂರ್’ ವ್ಯಕ್ತಿತ್ವ ಅವರದು.

” ಸಾಮಾನ್ಯ ವ್ಯಕ್ತಿ ಇರುವ ಸನ್ನಿವೇಶಕ್ಕೆ ಹೊಂದಿಕೊಳ್ಳುತ್ತಾನೆ ಆದರೆ ವಿಶೇಷ ವ್ಯಕ್ತಿ ತನಗನುಕೂಲಕರವಾದ ವಾತಾವರಣವನ್ನು ನಿರ್ಮಿಸುವ ಜೊತೆಗೆ ಇತರರ ಬದುಕಿಗೆ ಬೆಳಕಾಗುತ್ತಾನೆ” ಎಂಬ ಮಾತಿಗೆ ಪೂರಕವಾಗಿ ಬದುಕಿದ್ದ ಶಾಸ್ತ್ರೀಜಿಯವರು. “ಜೈ ಜವಾನ್ ಜೈ ಕಿಸಾನ್” ಘೋಷಣೆಯ ಮೂಲಕ ದೇಶ ಕಾಯುವ ಯೋಧರನ್ನು, ದೇಹ ಮತ್ತು ಬದುಕಿನ ಚೈತನ್ಯಕ್ಕೆ ಅನ್ನ ನೀಡುವ ರೈತರನ್ನು ಹುರಿದುಂಬಿಸಿದವರು. ಹಸಿರು ಕ್ರಾಂತಿಗೆ ಪ್ರೇರಣೆ ನೀಡಿದವರು. ದುರ್ದೆಸೆಯ ಸಮಯದಲ್ಲಿ ಸಮಯೋಚಿತವಾಗಿ ದೇಶವನ್ನು ಮುನ್ನಡೆಸಿ ದೇಶವಾಸಿಗಳಿಗೆ ಸ್ಫೂರ್ತಿಯ ಸೆಲೆಯಾದವರು. ಕ್ಷಣಿಕ ಸಿರಿಗೆ ಆಸೆ ಪಡದೇ ವ್ಯಕ್ತಿತ್ವದಲ್ಲೇ ‘ಸಿರಿತನ’ ತೋರಿದವರು. ಅಂತಹ ಮಹಾತ್ಮರ ಜನ್ಮ ದಿನವಿಂದು..!  ಮಹಾತ್ಮಾ ಗಾಂಧಿಯವರ ಜೊತೆಗೆ  ಇಂದು ಈ ಮಹಾತ್ಮರನ್ನು ನೆನೆಯೋಣ. ಅವರ ಸದೃಢ ಶೀಲ ವ್ಯಕ್ತಿತ್ವ, ಪ್ರಾಮಾಣಿಕತೆ ಯಂತಹ ಆದರ್ಶ ಗುಣಗಳು ನಮ್ಮದಾಗಲಿ..! ಅವುಗಳನ್ನು ಮೈಗೂಡಿಸಿಕೊಳ್ಳೋಣ. “ಅಳಿದರೇನು ದೇಹವಿಂದು ಧ್ಯೇಯ ದೀಪ ಉರಿವುದು; ನವ ಜನಾಂಗ ನೆಗೆದು ಬಂದು ತೈಲವದಕೆ ಸುರಿವುದು” 

 ಮಹಾತ್ಮರೇ, ಮತ್ತೊಮ್ಮೆ ಹುಟ್ಟಿ ಬನ್ನಿ..! ನಿಮಗೆ ಕೋಟಿ ಕೋಟಿ ಭಾರತೀಯರ ಪರವಾಗಿ ಶತ ಶತ ಪ್ರಣಾಮಗಳು.


6 thoughts on “ಶಾಸ್ತ್ರೀಜಿ ಎಂಬ ಧ್ರುವ ತಾರೆಯ ನೆನಪಿನಲ್ಲಿ…

  1. ಶಾಸ್ತ್ರೀಜಿಯವರಂತಹ ರಾಜಕಾರಣಿಗಳು ಇಂದು ಬೇಕು…….ಲೇಖನ ಚಿಕ್ದದಾಗಿ ಚೊಕ್ಕದಾಗಿ ಅರ್ಥಪೂರ್ಣವಾಗಿದೆ. ಅಭಿನಂದನೆಗಳು

  2. ತುಂಬಾ ಅರ್ಥಪೂರ್ಣ, ಸಕಾಲಿಕ ಲೇಖನ. ಅಭಿನಂದನೆಗಳು ಸರ್

  3. sorry..unable to write in kannada..sir this article is posted in watsapp …more or less its same. But just they make some little changes …..

    1. ಸಾಧಾರಣವಾಗಿ ವ್ಯಕ್ತಿಗಳ ಜೀವನ ಮತ್ತು ಸಾಧನೆಗಳನ್ನು ತಿಳಿಸುವಾಗ ವಿಷಯಗಳು ಒಂದಕ್ಕೊಂದು ಹೊಂದಿಕೊಳ್ಳುತ್ತವೆ. ಅಲ್ಲಿ ನಿಖರವಾದ ವಿಷಯಗಳನ್ನು ಭಿನ್ನವಾಗಿ ಹೇಳಲಾಗುವುದಿಲ್ಲ. ಶಾಸ್ತ್ರೀಜಿ ಯವರ ಜೀವನ ಮತ್ತು ಸಾಧನೆಗಳನ್ನು ತಿಳಿಸುವಾಗ ಈ ಎಲ್ಲಾ ಪ್ಘಮುಖ ಘಟನೆಗಳನ್ನು ಬಿಟ್ಟು ಮಾತಾಡಲು ಹೊರಟರೆ ಅದು ಸಪ್ಪೆಯೆನಿಸುತ್ತದೆ. ನೀವು ಇನ್ನಷ್ಟು ಲೇಖನಗಳನ್ನು ಕಲೆ ಹಾಕಿ ಓದಿದರೂ ಮತ್ತೆ ಇದೆ, ಇಸ್ವಿಗಳು, ಪ್ರಮುಖ ಘಟನೆಗಳು ಪ್ರಸ್ತಾಪವಾಗಿರುತ್ತವೆ. ಧನ್ಯವಾದ.

Leave a Reply

Back To Top