ಲೇಖನ
ಹಿಂದಿ ಹೇರಿಕೆ ಹಿಂದಿರುವ ಭಾಷಾ ರಾಜಕಾರಣ
ಹಾರೋಹಳ್ಳಿ ರವೀಂದ್ರ
ಹಿಂದಿ ಹೇರಿಕೆಯ ಹಿಂದೆ ಭಾಷಾ ರಾಜಕಾರಣದ ನಂಟಿದೆ. ಒಟ್ಟಾರೆಯಾಗಿ ಒಂದೇ ಏಟಿಗೆ ಭಾರತದ ಮೂಲ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲೆಯಾಳಿ ಹಾಗೂ ಮರಾಠಿ ಸೇರಿದಂತೆ ಅನೇಕ ಪ್ರಾದೇಶಿಕ ತಾಯ್ತನದ ಭಾಷೆಗಳನ್ನು ಮುಗಿಸುವ ಹುನ್ನಾರವಿದೆ.
ಸಂಸ್ಕೃತ ಭಾಷೆಯು ಭಾರತದ ಭಾಷೆಯಲ್ಲ. ಅದು ಭಾರತಕ್ಕೆ ಆಗಮನವಾಗಿದ್ದೆ ಆರ್ಯರ ಮೂಲಕ. ತಮ್ಮ ಸಾಹಿತ್ಯಗಳ ಮೂಲಕ ಸಂಸ್ಕೃತ ಭಾಷೆಯನ್ನು ಪರಿಚಯಿಸಿ ಅದು ನೆಲೆಗೊಳ್ಳುವಂತೆ ಮಾಡಿದರು. ಈ ನೆಲದಲ್ಲಿ ಅಂದು ಪಾಲಿ ಮತ್ತು ಮರ್ಹತಿ ಭಾಷೆಗಳು ಮಾತ್ರ ಮೂಲ ಭಾಷೆಗಳಾಗಿದ್ದವು. ಈ ಎರಡೂ ಭಾಷೆಗಳು ಭಾರತದಲ್ಲಿನ ಮೂಲ ಜನರ ಪ್ರಧಾನ ಜನ ಭಾಷೆಗಳಾಗಿದ್ದವು. ಅಶೋಕ ಚಕ್ರವರ್ತಿಯ ಕಾಲಗಟ್ಟದ ವರೆವಿಗೂ ಈ ಭಾಷೆಗಳು ರಾಜಾಶ್ರಯ ಪಡೆದುಕೊಂಡಿದ್ದವು. ಆದರೆ ಮೌರ್ಯ ಸಾಮ್ರಾಜ್ಯದ ಪತನದ ನಂತರ ಈ ಎರಡೂ ಭಾಷೆಗಳು ಅವನತಿಗೊಂಡವು. ಅನಂತರದಲ್ಲಿ ಬಂದ ರಾಜರು ಸಂಸ್ಕೃತ ಭಾಷೆಗೆ ರಾಜಾಶ್ರಯ ನೀಡಿದ ಪರಿಣಾಮವಾಗಿ ಮೂಲ ಭಾಷೆಗಳು ನಶಿಸಿ ಸಂಸ್ಕೃತವು ಹೆಚ್ಚು ಪ್ರವರ್ಧಮಾನಕ್ಕೆ ಬಂತು.
ಪ್ರಾಚೀನ ಕಾಲದಲ್ಲಿದ್ದ ಪಾಲಿ ಮತ್ತು ಮರ್ಹತಿ ಭಾಷೆಗಳನ್ನು ಕೊಂದವರು, ಇಂದು ಕನ್ನಡ, ತಮಿಳು, ತೆಲುಗು, ಮಲೆಯಾಳಿ ಹಾಗೂ ಮರಾಠಿ ಸೇರಿದಂತೆ ಅನೇಕ ದ್ರಾವಿಡ ಭಾಷೆಗಳನ್ನು ಕೊಲ್ಲಲು ಹೊರಟಿದ್ದಾರೆ. ಇಲ್ಲಿ ಹಿಂದಿ ಹೇರಿಕೆಯಷ್ಟೇ ಅಲ್ಲ ಅದರೊಳಗೆ ಭಾಷಾ ರಾಜಕೀಯದ ಗುಟ್ಟಾದ ಷಡ್ಯಂತ್ರವಿದೆ. ಹಿಂದಿ ಮತ್ತು ಸಂಸ್ಕೃತ ಈ ಎರಡೂ ಭಾಷೆಗಳು ಭಾರತದ ಮೂಲ ಭಾಷೆಗಳಲ್ಲ. ಹೊರಗಿನಿಂದ ಬಂದ ಸಂಸ್ಕೃತ ಭಾಷೆಯ ಉಪಶಾಖೆಯೇ ಈ ಹಿಂದಿ. ಈ ಎರಡೂ ಭಾಷೆಗೂ ಒಂದಕ್ಕೊಂದು ಸಂಬಂಧವಿದೆ. ಹಿಂದಿ ಕಲಿತರೆ ಬಹುತೇಕ ಸಂಸ್ಕೃತ ಪದಗಳು ರೂಢಿಗೊಳ್ಳುತ್ತವೆ, ಹಾಗೆಯೇ ಸಂಸ್ಕೃತ ಕಲಿತರೆ ಬಹುತೇಕ ಹಿಂದಿ ಪದಗಳು ರೂಢಿಗೊಳ್ಳುತ್ತವೆ. ಈ ನೆಲೆಯಲ್ಲಿ ಮೊದಲು ಹಿಂದಿ ಹೇರಿಕೆ ಮಾಡಿ ಅನಂತರ ಸಂಸ್ಕೃತ ಭಾಷೆಯನ್ನು ಹೇರಿಕೆ ಮಾಡುವುದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹುನ್ನಾರವಾಗಿದೆ. ವಿದೇಶಿ ಭಾಷೆಗಳನ್ನು ಬೆಳೆಸಿ ದೇಶಿ ಭಾಷೆಗಳನ್ನು ನಿರ್ವಿರ್ಯಗೊಳಿಸಲು ಮುಂದಾಗಿರುವ ಪ್ರಭುತ್ವಕ್ಕೆ ನನ್ನ ಬಲವಾದ ಪ್ರತಿರೋಧ ಇದೆ.
ನನ್ನ ಭಾಷೆ
ನನ್ನ ಹೆಮ್ಮೆ
******************************