ಗಜಲ್

ಗಜಲ್

ಅವ್ವ

ಸಿದ್ಧರಾಮ ಹೊನ್ಕಲ್

ವರ್ಷಗಳೇ ಗತಿಸಿದವು ಅಸ್ಪತ್ರೆಯಿಂದ ಆಸ್ಪತ್ರೆಗೆ ಓಡುತ್ತಲಿರುತ್ತಾನೆ
ಹೊಸ ಆಸ್ಪತ್ರೆ ವೈದ್ಯರು ಹೇಳಿದ್ದೆಲ್ಲ ಪರೀಕ್ಷಿಸಿ ಹೈರಾಣಾಗುತ್ತಾನೆ

ಹೊರಬಂದಾಗ ಅವನವ್ವ ಕೇಳುತ್ತಾಳೆ ಏನೆಂದರು ವೈದ್ಯರು ಅಂತ
ಅಳುವ ನುಂಗಿ ಯಾವ ತೊಂದ್ರೆ ಇಲ್ಲ ಅಂದ್ರು ಪ್ರತಿ ಬಾರಿಯು ನಗುತ್ತಲಿರುತ್ತಾನೆ

ಈ ಟ್ಯಾಕ್ಸಿ,ಅಲೆದಾಟ ಇಷ್ಟು ಪರೀಕ್ಷೆಗಳು ಏನಾಗಿದೆ ಹೇಳೋ ಅನ್ನುತ್ತಾಳೆ
ನಿಮ್ಮಪ್ಪನದು ಪುಣ್ಯದ ಸಾವು ಒಮ್ಮೆ ಹೃದಯ ಹಿಡಿದುಹೋದ ಮರುಗುತ್ತಾನೆ

ನಾನೇನು ಪಾಪ! ಮಾಡಿನೋ ಇಷ್ಟ್ಯಾಕ ತೊಂದ್ರಿ ತಗೋತಿ ಬಿಟ್ಟು ಬಿಡು ಮಗಾ
ಇನ್ನೂ ಸಾಕು ಬಿದ್ದೋಗೋ ಜೀವವಿದು ಎದ್ದೋಗಲಿ ಹಳಹಳಿಸುತ್ತಾನೆ

ಇದು ಕೊನೇ ಸಲ ದೇಶದಲ್ಲೆ ದೊಡ್ಡ ಆಸ್ಪತ್ರೆ ಇಲ್ಲಿ ಒಮ್ಮೆ ಹೋಗಿ ಬರೋಣ
ಕಾರಿಗೆ ಡಿಸೈಲ್ ತುಂಬಿಸಿ ತಂಗಿಯನ್ನು ಜೊತೆ ಕರೆದೊಯ್ಯುತ್ತಾನೆ

ನಾವೇನೋ ಸ್ವಲ್ಪ ಅನುಕೂಲಸ್ಥರು ದೀನರಿಗೆ ಬಂದ್ರೇನು ಮಾಡುತ್ತಾರೆ ಅಣ್ಣಾ
ಸುಮ್ಮನೆ ಸತ್ತು ಹೋಗುತ್ತಾರಮ್ಮ ! ಆಕಾಶ ದಿಟ್ಟಿಸಿ ಅವನಿಗೆ ಬಯ್ಯುತ್ತಾನೆ

ಹೊಸ ಆಸ್ಪತ್ರೆ ಹಳೆಯ ಪರೀಕ್ಷೆಗಳು ಜೇಬು ಕತ್ತರಿಸಲು ಅನ್ನಲಾಗದ ಅಸಹಾಯಕತೆ
ಇಲ್ಲಿ ಗುಣವಾದಿತೆಂದು ಬತ್ತದ ಸೆಲೆಯಾಗಿಸಿಕೊಳ್ಳುತ್ತಾನೆ

ಅಲ್ಲಿಯ ಗದ್ದಲ ರೋಗಿಯ ಜೊತೆಯವರ ಬಾಡಿದ ಮುಖಗಳು ಕಂಡು ನೊಯ್ಯುತ್ತಾನೆ
ನೋವು ದು:ಖ ತುಂಬಿದೆ ಇಲ್ಲಿ ನಮ್ಮದೇನು ಮಹಾ ವೇದಾಂತಿಯಾಗುತ್ತಾನೆ

ತಪಾಸಣೆಯ ಕರೆಗಾಗಿ ದಿನಗಟ್ಟಲೇ ಕಾದು ಕುಂತು ನಿಂತು ಚಡಪಡಿಸುತ್ತಾನೆ
ಪ್ರಪಂಚದಲ್ಲಿ ಮನೆಗೊಬ್ಬ ವೈದ್ಯಬೇಕು ಡಾಕ್ಟರ್ ಆಗಬೇಕಿತ್ತೆಂದುಕೊಳ್ಳುತ್ತಾನೆ

ಪೆಶೆಂಟ್ ನ ಕರೆದಾಗೊಮ್ಮೆ ಫ್ರೀ ಮೆಡಿಕಲ್ ಶೀಟ್ ಸಿಕ್ಕ ಪಾಲಕರ ಖುಷಿ ಮುಖದಲ್ಲಿ
ಕೈ ಹಿಡಿದು ಒಳ ಹೋಗುತ್ತಾನೆ ಮನದೊಳಗೆ ಬಿಕ್ಕುತ್ತಾ ಹೊರಬರುತ್ತಾನೆ

ಸಾಕು ಸತ್ತರೆ ಹಿಂಗೆ ಸಾಯುತ್ತೇನೆ ಇನ್ನೆಲ್ಲೂ ಬರಲಾರೆ ಅನ್ನುತ್ತಾಳೆ ಅವನಮ್ಮ
ಕಷ್ಟ ನೋಡಲಾಗದೆ ಆಯಿತು ಕೊನೆಯ ಸಾರಿ ಪ್ರತಿ ಸಾರಿಯು ಹೇಳುತ್ತಾನೆ

ಹೀಗೆ ಜನ್ಮಕೊಟ್ಟ ತಾಯಿಗಾಗಿ ಆಕೆಯ ಋಣ ತೀರಿಸಲಾಗದ ಈ ಜನ್ಮಕ್ಕಾಗಿ
ಬಾಲ್ಯದಿ ಕುಣಿದರೇನು ನೊಂದು ಬೆಂದರೇನು ತುತ್ತಿಟ್ಟ ಜೀವಕ್ಕೆ ಹಂಬಲಿಸುತ್ತಾನೆ

ಹೊನ್ನಸಿರಿ’ ನಿರಾಕಾರನೇ ನೀನೇ ಈ ಸುಂದರ ಪ್ರಪಂಚ ನಿರ್ಮಾಣ ಮಾಡಿದ್ದೆ ನಿಜವಾದರೆ
ಈ ಅನಂತ ರೋಗಗಳನ್ನೇಕೆ ಸೃಷ್ಠಿಸಿದೆ ಇವುಗಳಿಂದ ಜನತೆಗೆ ಮುಕ್ತಿಕೊಡೆಂದು ಕೋರುತ್ತಾನೆ

****************************.

2 thoughts on “ಗಜಲ್

Leave a Reply

Back To Top