ಕಥೆ
ನಿರ್ಧಾರ
ಜ್ಯೋತಿ ಡಿ .ಬೊಮ್ಮಾ
ಕಾಲೇಜಿನಿಂದ ಬಂದ ವಿನುತ ವ್ಯಾನಿಟಿಬ್ಯಾಗನ್ನು ಮಂಚದ ಮೇಲೆ ಒಗೆದು ಹಾಗೆ ಒರಗಿದಳು.ಅಮ್ಮ ಎನ್ನುತ್ತ ಓಡಿ ಬಂದ ಮಗಳ ಮುದ್ದು ಮುಖ ನೋಡಿ ಮನಕ್ಕೆ ಅಹ್ಲಾದವಾಯಿತು. ಕಾಲೇಜಿನಲ್ಲಿಯ ಸಹೋದ್ಯೋಗಿ ಗಳ ಕುಹಕ ನುಡಿಗಳು ನೆನಪಿಗೆ ಬಂದು ಮನ ಮತ್ತೆ ಮಾನ್ಲವಾಯಿತು.ತನ್ನ ಬದುಕಿನ ಬಗ್ಗೆ ಮಾತಾಡಲು ಅವರಿಗೇನು ಹಕ್ಕಿದೆ..! ಮತ್ತೊಬ್ಬರ ಜೀವನದ ಬಗ್ಗೆ ಏಕಿಷ್ಟು ಕುತೂಹಲ ಜನರಿಗೆ. ಆಡಿಕೊಳ್ಳಲಿ , ಎಷ್ಟು ದಿನ ಆಡಿಕೊಳ್ಳುತ್ತಾರೆ . ಅವರಿಗೆ ಮಾತಾಡಿಕೊಳ್ಳಲು ದಿನಾ ಹೊಸ ಸರಕು ಬೇಕು.ಇವತ್ತು ನನ್ನ ವಿಷಯ ನಾಳೆ ಇನ್ನಾರೋ.. ಯಾರನ್ನು ಮೆಚ್ವಿಸಿ ಏನಾಗಬೇಕಿದೆ..! ನನ್ನ ಬದುಕು ನನ್ನಿಷ್ಷ . ಎಂದು ನಿರ್ದರಿಸಿದಳು.
ಗಂಡ ಇರುವವರೆಗೆ ಕಷ್ಟ ಎಂದರೇನು ಎಂಬ ಅರಿವೇ ಇರಲಿಲ್ಲ ವಿನುತಳಿಗೆ.ಚಿಕ್ಕಂದಿನಿಂದ ತಂದೆ ತಾಯಿ ತಮ್ಮ್ಂದಿರ ಅಕ್ಕರೆಯ ಲ್ಲಿ ಬೆಳೆದ ಅವಳು ಓದಿನಲ್ಲಿಯು ಜಾಣೆ. ಎಮ್ ಎಸ್ಸಿ ಮುಗಿಸಿದರು ತಂದೆ ಅವಳಿಗೆ ಉದ್ಯೋಗ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಹೆಣ್ಣು ಮಕ್ಕಳು ಮನೆಯಲ್ಲಿ ಗಂಡ ಮಕ್ಕಳನ್ನು ನೋಡಿಕೊಂಡು ಆರಾಮವಾಗಿರಬೇಕೆಂದು ಅವರ ಧೋರಣೆ. ಡಿಗ್ರಿ ಮುಗಿಸಿದ ವಿನುತಳಿಗೆ ಗಂಡು ಹುಡುಕತೊಡಗಿದರು.ನೋಡಲು ಸುಂದರ ವಾಗಿದ್ದ ಮತ್ತು ಆರ್ಥಿಕ ವಾಗಿ ಅನುಕೂಲಕರ ವಾಗಿದ್ದ ವಿನುತಳ ತಂದೆಗೆ ಅವಳಿಗೆ ಗಂಡು ಹುಡುಕುವದು ಕಷ್ಟವಾಗಲಿಲ್ಲ. ತಮ್ಮ ಊರಿನವರೆ ಆದ ಪರಶುರಾಮ ಅವರ ಮಗನಾದ ಕ್ರಷ್ಣ ಬೆಂಗಳೂರಿನ ಒಂದು ಸಾಪ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.ಹುಡುಗ ಹುಡುಗಿ ಎರಡು ಮನೆಯವರು ಒಪ್ಪಿ ಮದುವೆ ನಿಶ್ಚಯವಾಯಿತು.ಕೆಲ ದಿನಗಳಲ್ಲಿಯೇ ಮದುವೆಯು ಎರ್ಪಟ್ಟು ಕ್ರಷ್ಣನೊಂದಿಗೆ ಬೆಂಗಳೂರಿನಲ್ಲಿ ಮನೆ ಮಾಡಿದಳು ವಿನುತಾ.
ಮದುವೆಯಾದ ನಾಲ್ಕು ತಿಂಗಳಲ್ಲೆ ಗರ್ಭಿಣಿಯಾದ ವಿನುತಳಿಗೆ ಕೆಲಸ ಮಾಡಲು ಅವಕಾಶ ಒದಗಲೇ ಇಲ್ಲ.ಕೃಷ್ಣ ಕೂಡ ಉದ್ಯೋಗ ಮಾಡಲು ಅವಳಿಗೆ ಯಾವ ಒತ್ತಾಯವೂ ಹೇರಿರಲಿಲ್ಲ. ಅವನು ತನ್ನ ಸಂಬಳದಲ್ಲಿ ಸಂತೃಪ್ತ ನಾಗೆ ಇದ್ದ. ಹಾಗಾಗಿ ಹೆಂಡತಿ ಕೆಲಸಮಾಡಬೇಕೆಂಬ ಹಂಬಲ ಅವನಿಗಿರಲಿಲ್ಲ. ಕೆಲವೇ ತಿಂಗಳಲ್ಲಿ ವಿನುತ ಮುದ್ದು ಹೆಣ್ಣು ಮಗುವಿನ ತಾಯಿಯಾದಳು. ಮಗಳ ಲಾಲನೆ ಪಾಲನೆ ,ಗಂಡ ಮನೆ ಇದರಲ್ಲಿ ಮುಳುಗಿದಳು .ತನ್ನ ಓದು ಡಿಗ್ರಿ ಉದ್ಯೋಗ ಮಾಡುವ ಅಪೇಕ್ಷೆ ಎಲ್ಲವೂ ಮರೆತೆಹೋಯಿತವಳಿಗೆ.
ಮಗಳಿಗೆ ಮೂರು ವರ್ಷ ತುಂಬಿದಾಗ ಸ್ವಲ್ಪ ಬಿಡುವು ದೊರೆತಂತಾಗಿ ಮನೆಯಲ್ಲಿ ಸಮಯ ಹೋಗದೆ ಯಾವದಾದರು ಕೊಚಿಂಗ ಸೆಂಟರಿನಲ್ಲಿ ಶಿಕ್ಷಕಿಯಾಗಿ ಸೇರಬೆರಕೆಂದು ಆಲೋಚಿಸುತಿದ್ದಳು.
ಆದರೆ ಕರೋನಾ ಮಹಾಮಾರಿ ಎಲ್ಲೆಡೆ ವ್ಯಾಪಿಸಿ ಇಡೀ ದೇಶದಲೆಲ್ಲಾ ಲಾಕ್ ಡೌನ್ ಘೋಷಣೆಯಾಗಿತ್ತು. ಇಲಿಗಳು ಬಿಲ ಸೇರುವಂತೆ ಎಲ್ಲರೂ ತಮ್ಮತಮ್ಮ ಮನೆಗಳಲ್ಲಿ ಬಂಧಿಯಾದರು.
ಆಗಷ್ಟೆ ಮೌಂಟೆಸ್ಸರಿ ಸೇರಿದ ಮಗಳು ಮತ್ತು ಗಂಡ ಇಬ್ಬರು ಪೂರ್ಣಪ್ರಮಾಣದಲ್ಲಿ ಮನೆಯ ವಾಸಿಗಳಾದ ಮೇಲೆ ಮತ್ತೆ ಬಿಜಿಯಾದಳು ವಿನುತಾ.
ಮುಂಜಾನೆ ಹೋಗಿ ರಾತ್ರಿ ಬರುತಿದ್ದ ಗಂಡ ಈಗ ಮನೆಯಲ್ಲೆ ಇರುತಿದ್ದರಿಂದ ಅವಳಿಗೂ ಮಗಳಿಗೂ ಸಂತೋಷವೇ ಆಗಿತ್ತು.
ದಿನಾಲೂ ವಿಧವಿಧ ಬಗೆಯ ಅಡುಗೆ ಮಾಡಿ ಗಂಡ ಮಗಳಿಗೆ ತಿನಿಸಿ ಹಾಯಾಗಿ ಲಾಕ್ಡೌನಿನ ಆನಂದ ಅನುಭವಿಸುತಿದ್ದರು.
ಇಷ್ಟರಲ್ಲಾಗಲೇ ಸಾಂಕ್ರಾಮಿಕ ಎಲ್ಲೆಡೆ ಆವರಿಸಿತ್ತು.ಮನೆಯಲ್ಲೆ ಇದ್ದರೂ ಅದಾವ ಮಾಯದಲ್ಲೋ ಕೃಷ್ಣ ನಿಗೂ ಸೋಂಕು ತಗಲಿತು.ಕರೋನಾ ಎಂಬ ಹೆಸರಿಂದ ಅರ್ಧ ಅಂಜಿದ್ದ ವಿನುತಾ ಪತಿಗೆ ಸೋಂಕು ತಗುಲಿದ್ದು ಕೆಳಿ ಬೆಚ್ಚಿಬಿದ್ದಳು. ಮಗಳು ಚಿಕ್ಕವಳಿದ್ದುದ್ದರಿಂದ ಅವಳು ಮಗಳು ಒಂದು ಕೋಣೆಯಲ್ಲಿ ಮತ್ತು ಕೃಷ್ಣ ಇನ್ನೊಂದು ಕೋಣೆಯಲ್ಲಿ ಕ್ವಾರಂಟೈನ್ ಆದರು. ಕೃಷ್ಣನಿಗೆ ಮೊದಲೆರಡುದಿನ ಸೌಮ್ಯ ವಾಗಿದ್ದ ಕೆಮ್ಮು ಮೂರನೆ ದಿನ ಉಲ್ಬಣಗೊಂಡು ಉಸಿರಾಡದ ಸಮಸ್ಯೆ ತಲೆದೂರಿತು. ಗೆಳೆಯರ ಸಹಾಯದಿಂದ ಹರಸಾಹಸಪಟ್ಟು ಅವನಿಗೆ ಆಸ್ಪತ್ರೆಗ ಶಿಫ್ಟ್ ಮಾಡಬೇಕಾದರೆ ಪುನರ್ಜನ್ಮ ಎತ್ತಿದಂತಾಗಿತ್ತು ವಿನುತಳಿಗೆ. ಎಷ್ಟು ಜನ ಬಂಧುಬಾಂಧವರಿದ್ದರೂ ಯಾರು ಏನು ಮಾಡುವಂತಿರಲಿಲ್ಲ.ಯಾರು ಎಲ್ಲಿದ್ದರೋ ಅಲ್ಲೆ ಲಾಕ್ ಆಗಿದ್ದರು.
ಆಸ್ಪತ್ರೆಗೆ ಹೋಗುವಾಗ ಹೆಂಡತಿಗೆ ದೈರ್ಯ ತುಂಬಿ ಆರಾಮವಾಗಿ ಬರುವದಾಗಿ ಹೇಳಿಹೋಗಿದ್ದ ಕೃಷ್ಣ ಅಲ್ಲಿಂದಲೇ ಬಾರದ ಲೋಕಕ್ಕೆ ಹೋಗಿಬಿಟ್ಟ.
ಕನಸಿನಲ್ಲಿ ಘಟಿಸಿದಂತೆ ನಡೆದ ಘಟನೆಯಿಂದ ದಿಗ್ಭ್ರೆಮೆಗೆ ಒಳಪಟ್ಟಳು.ಇಂತಹ ಸಂದರ್ಭದಲ್ಲಿ ಕೃಷ್ಣನ ಹೆತ್ತವರು ತನ್ನ ಹೆತ್ತವರು ಯಾರು ಇಲ್ಲದೆ ಅಕ್ಷರಶ ಒದ್ದಾಡಿಬಿಟ್ಟಳು ವಿನುತ.
ಮಗಳನ್ನು ಕರೆದುಕೊಂಡು ತವರುಮನೆ ಸೇರಿದ ವಿನುತಳ ಭವಿಷ್ಯದ ಬಗ್ಗೆ ಎಲ್ಲರಿಗೂ ಚಿಂತೆಯಾಯಿತು. ಕೆಲದಿನಗಳು ಕಳೆದ ನಂತರ ಮಗಳು ಸದಾ ಮಂಕಾಗಿರುವದು ಸಹಿಸದೆ ಅವಳಿಗೆ ಯಾವದಾದರೂ ಒಂದು ಉದ್ಯೋಗ ದಲ್ಲಿ ವ್ಯಸ್ತವಾಗಿರುವಂತೆ ಸೂಚಿಸಿದರು. ವಿನುತಳಿಗೂ ಚಿಂತಿಸಿ ಸಾಕಾಗಿತ್ತು. ಮಗಳ ಭವಿಷ್ಯದೆಡೆ ಲಕ್ಷಕೊಟ್ಟು ಜೀವನ ಕಳೆಯಬೇಕೆಂದು ನಿರ್ಧರಿಸಲಿದಳು. ಎಮ್ ಎಸ್ಸಿ ಮಾಡಿದ ವಿನುತಾ ಒಂದು ಕಾಲೇಜಿನಲ್ಲಿ ಫಿಜಿಕ್ಸ ಲೆಕ್ಚರ್ ಆಗಿ ಸೇರಿಕೊಂಡಳು.
ಮಗಳನ್ನು ಅಮ್ಮನಿಗೊಪ್ಪಿಸಿ ್ಇನಾಲೂ ಕಾಲೇಜಿಗೆ ಹೋಗಿ ಬರತೊಡಗಿದಳು.ಸಮಯವೇ ಉತ್ತಮ ಮದ್ದು ಎಂಬಂತೆ ಕೃಮೇಣ ತನ್ನ ಹೊಸ ಬದುಕಿಗೆ ಹೊಂದಿಕೊಳ್ಳತೊಡಗಿದಳು.
ಅದೇ ಕಾಲೇಜಿನಲ್ಲಿ ಬಯಲಾಜಿ ಲೆಕ್ಚರ್ ಆದ ಸುಮಿತ್ರ ಅವಳ ಗೆಳತಿಯಾದಳು.ಇಬ್ಬರೂ ನೊಂದವರೆ.ಸುಮಿತ್ರ ಕೂಡ ಕರೋನಾ ಪಿಡುಗಿಗೆ ತನ್ನ ಪತಿ ಮತ್ತು ತಂದೆ ಇಬ್ಬರನ್ನೂ ಕಳೆದುಕೊಂಡಿದ್ದಳು. ಆದರೆ ಬಹು ಬೇಗ ವರ್ತಮಾನದ ಪರಿಸ್ಥಿತಿ ಒಪ್ಪಿಕೊಂಡು ಬದುಕುವದನ್ನು ರೂಢಿಸಿಕೊಂಡಿದ್ದಳು.
ಸುಮಿತ್ರ ವಿಧವೆ ಎಂಬುವದು ಎಷ್ಡೋ ಜನರಿಗೆ ಗೊತ್ತೆಇರಲಿಲ್ಲ. ಅವಳು ಯಾವಾಗಲೂ ಹೂ ,ಕುಂಕುಮ ಬಳೆಗಳಿಲ್ಲದೆ ಇರುತ್ತಿರಲಿಲ್ಲ. ಅವಳ ವಿಷಯ ಗೊತ್ತಿದ್ದವರು ಹಿಂದೆ ಮಾತಾಡಿಕೊಳ್ಳುತಿದ್ದರೆ ವಿನಃ ಮುಂದೆ ಯಾರು ಏನು ಅನ್ನುತ್ತಿರಲಿಲ್ಲ ,ಅವಳು ಅದಕ್ಕೆ ಅವಕಾಶವೂ ಕೊಡುತ್ತಿರಲಿಲ್ಲ.
ಆದರೆ ವಿನುತ ತದ್ವಿರುದ್ದ. ಅವಳಿಗೆ ಜನರ ಭಯ ಜಾಸ್ತಿ.ಯಾವಾಗಲೂ ಯಾರೆನನ್ನುವರೋ ಎಂಬ ಭಯದಲ್ಲೆ ಇರುತಿದ್ದಳು.ಅವಳ ಮನೆಯ ವಾತಾವರಣವೂ ಹಾಗೆ ಇತ್ತು.ಚಿಕ್ಕಂದಿನಿಂದಲೂ ತಂದೆಗೆ ಅಂಜಿ ನಡೆಯುವದೆ ರೂಢಿ.ಅವಳ ತಾಯಿ ಇಂದಿಗೂ ಯಾವ ನಿರ್ದಾರವೂ ಸ್ವತಃ ತೆಗೆದುಕೊಳ್ಳರು.ಎಲ್ಲದಕ್ಕೂ ಮನೆಯ ಗಂಡಸರಿಗೆ ಅವಲಂಬಿತರಾಗಿರಬೆಕು. ಹಾಗೆ ನೋಡಿದರೆ ವಿನುತಳಿಗೆ ಗಂಡನ ಮನೆಯಲ್ಲೆ ಹೆಚ್ಚು ಸ್ವಾತಂತ್ರ್ಯ ವಿತ್ತು.ಗಂಡ ಅತ್ತೆ ಮಾವ ಯಾವದಕ್ಕೂ ಅತೀ ಕಟ್ಟಪ್ಪಣೆ ಮಾಡುತ್ತಿರಲಿಲ್ಲ. ಒಬ್ಬರು ಮತ್ತೊಬ್ಬರ ಇಷ್ಟಗಳನ್ನು ಗೌರವಿಸುತಿದ್ದರು. ಆದರೆ ತವರು ಮನೆಯಲ್ಲಿ ಈಗ ಹಿಂದಿಗಿಂತಲೂ ಹೆಚ್ಚು ಕಟ್ಟುಪಾಡುಗಳಲ್ಲಿ ಬಂಧಿಯಾಗಿದ್ದಳು.
ಸುಮಿತ್ರ ವಿನುತಳನ್ನು ಯಾವಾಗಲೂ ಗೆಲುವಾಗಿಡಲು ಪ್ರಯತ್ನಿಸುತಿದ್ದಳು.ಅವಳ ವ್ಯಕ್ತಿತ್ವ ದಲ್ಲಿ ಬದಲಾವಣೆಗಾಗಿ ಪ್ರೇರೆಪಿಸುತಿದ್ದಳು. ವಿನುತ ಕುಂಕುಮವಿಡದೆ ಹೂ ಮುಡಿಯದೆ ಸದಾ ಶೋಕದಲ್ಲಿರುವದನ್ನೂ ನೋಡಲು ಅವಳಿಗಾಗುತ್ತಿರಲಿಲ್ಲ. ಅದರೆ ಗಂಡನಿಲ್ಲದ ಕುರುಹು ಮುಖದ ಮೇಲೆ ಹೊತ್ತು ತಿರುಗುವ ವಿನುತ ಎಲ್ಲರ ಅನುಕಂಪ ಕ್ಕೆ ಪಾತ್ರಳಾಗಿದ್ದರೆ , ಸದಾ ಅಲಂಕಾರಭರಿತಳಾಗಿರುತಿದ್ದ ಸುಮಿತ್ರ ಎಲ್ಲರ ನಿಂದೆಗೆ ಕಾರಣವಾಗಿದ್ದಳು.
ಗಂಡನೆಂಬ ಒಬ್ಬ ವ್ಯಕ್ತಿಯ ಇರುವು ನಮ್ಮ ವ್ಯಕ್ತಿತ್ವ ನಿರ್ದರಿಸಬೇಕೆ..! ಮದುವೆಗಿಂತ ಮೊದಲು ನಾವು ಹು ಕುಂಕುಮ ಇಡುತ್ತಿರಲಿಲ್ಲವೆ. . ಗಂಡನಿಲ್ಲದ ಕುರುಹು ಹೂ ಕುಂಕುಮ ಅಳಿಸಿ ತೋರಿಸಿಕೊಳ್ಳುವ ಅಗತ್ಯವೇನಿದೆ..! ಈ ಸಮಾಜದಲ್ಲಿ ಯಾರನ್ನು ಮೆಚ್ಚಿಸಲಾಗದು . ಜನರಿಂದ ಒಳ್ಳೆಯವರೆನಿಕೊಳ್ಳುವ ವಿಫಲ ಪ್ರಯತ್ನ ಮಾಡದಿರುವದೇ ಒಳಿತು. ಸದಾ ಸ್ತ್ರೀ ಪುರುಷ ರ ಸಂಬಂಧವನ್ನು ಅನುಮಾನದ ದೃಷ್ಟಿಯಿಂದ ನೋಡುವ ಈ ಸಮಾಜದಲ್ಲಿ ಎಷ್ಟು ಅಂತ ಅಂಜಿ ಬದುಕಬೇಕು..! ಸುಮಿತ್ರ ಳ ವಾದ ವಿನುತ ಒಪ್ಪದೆ ಇರಲಿಲ್ಲ.ಆದರೆ ಸಂಪ್ರದಾಯ ಮೀರುವದು ಹೇಗೆ. ಸಂಪ್ರದಾಯ ಮೀರಿದರೆ ಹೊರಗಿನವರಿರಲಿ ,ಮೊದಲು ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹೆತ್ತ ತಾಯಿ ವಿಧವೆಯಾದರೆ ಮಗಳೆ ಅವಳನ್ನು ಶುಭಕಾರ್ಯಗಳಿಗೆ ಕರೆಯುವಂತಿಲ್ಲ.ಮಗಳು ವಿಧವೆಯಾದರೆ ತಾಯಿಯಾದವಳು ತನ್ನ ಮನೆಯ ಶುಭಕಾರ್ಯಗಳಿಗೆ ಮಗಳನ್ನು ಮುಂದುಮಾಡುವಂತಿಲ್ಲ. ಛಿ.. ಇದೆಂಥ ಸಂಪ್ರದಾಯ..
ಇಂತಹ ಆಚರಣೆಗಳು ಸುಮಿತ್ರಳನ್ನು ರೊಚ್ಚಿಗೆಬ್ಬಿಸುತ್ತವೆ. ಆದರೆ ವಿನುತ ಸಹಿಸಿಕೊಳ್ಳುತ್ತಾಳೆ. ಸುಮಿತ್ರಳ ಒಡನಾಟದಿಂದ ವಿನುತಳಲ್ಲಿ ಹಿಂಜರಿಕೆ ಮಾಯವಾಗತೊಡಗುತ್ತದೆ.
ಹೀಗೆ ಕರೋನಾದೊಂದಿಗೆ ಒಂದು ವರ್ಷ ಕಳೆಯಿತು.ಕರೋನಾವು ಜನರ ಜೀವನದ ಒಂದು ಭಾಗವೆಂಬತೆ ಬೆರೆಯಿತು.ದಿನಾ ಸಾಯುವವರಿಗೆ ಅಳುವರಾರು ಎಂಬಂತೆ ಕರೋನಾದಿಂದಾದ ಸಾವುಗಳನ್ನು ಜನರು ಸಹಜವಾಗಿ ಸ್ವೀಕರಿಸತೊಡಗಿದರು.ಮತ್ತೆ ಬದುಕತೊಡಗಿದರು.
ಸುಮಿತ್ರಳ ದೂರದ ಸಂಬಂಧಿ ಯೋಗಿಯು ಅವರ ಕಾಲೇಜಿನಲ್ಲೆ ಅಥಿತಿ ಉಪನ್ಯಾಸಕನಾಗಿ ನೇಮಕಗೊಂಡರು. ಸುಮಿತ್ರ ವಿನುತಳೊಂದಿಗೆ ಆತ್ಮೀಯವಾಗಿ ಬೆರೆತನು.ಸುಮಿತ್ರ ಮತ್ತು ಯೋಗಿಯ ಸ್ನೇಹದಲ್ಲಿ ವಿನುತ ಈಗ ಗೆಲುವಾಗಿದ್ದಳು.ಭೂತಕಾಲವನ್ನು ಯಾವಗಲೂ ಬೆನ್ನಿಗಂಟಿದ ದೆವ್ವದಂತೆ ಹೊತ್ತುಕೊಂಡು ಓಡಾಡುವದರಲ್ಲಿ ಅರ್ಥವಿಲ್ಲ ಎಂದರಿತಳು.ಆದರೂ ಕೃಷ್ಣ ನ ನೆನಪುಗಳು ಅವಳಿಗೆ ಎಂದಿಗಗೂ ಮರೆಯದ ಮಾಣಿಕ್ಯ ಗಳೇ..
ದಿನಗಳೆದಂತೆ ಯೋಗಿಯೊಂದಿಗಿನ ಆತ್ಮೀಯತೆ ವಿನುತಳಲ್ಲಿ ಹೊಸ ಹುರುಪು ಮೂಡಿಸಿತ್ತು.ಯೋಗಿಯು ವಿನುತಳನ್ನು ಅನುರಾಗದ ಭಾವದಿಂದ ನೋಡುತಿದ್ದ.ಇಬ್ಬರಲ್ಲಿ ಮೂಡಿದ ಪ್ರೀತಿ ತೋರ್ಪಡಿಸದಿರಲು ಇಬ್ಬರು ಹೆಣಗುತಿದ್ದರು .ಆದರೆ ಇದರ ಅರಿವು ಮೋದಲಾದದ್ದು ಸುಮಿತ್ರಳಿಗೆ. ವಿನುತ ಜೀವನದಲ್ಲಿ ಮುಂದುವರೆಯುವದು ಸುಮಿತ್ರಳಿಗೆ ಖುಷಿಯ ವಿಷಯವಾಗಿತ್ತು.
ನಿರೀಕ್ಷಿಸಿದಂತೆ ಒಮ್ಮೆ ಯೋಗಿ ಸುಮಿತ್ರಳ ಸಮ್ಮುಖದಲ್ಲೆ ವಿನುತಳಿಗೆ ಮದುವೆಯ ಕೋರಿಕೆಯನ್ನಿಟ್ಟ.
ಯಾವ ಮಾತನ್ನು ಆಡದೆ ಶೂನ್ಯ ದಿಟ್ಟಿಸುತ್ತಿರುವ ಗೆಳತಿಯನ್ನು ವಿನೂ..ಎಂದೆಚ್ಚರಿಸಿದಳು ಸುಮಿತ್ರ.
ಸ್ವಗತದಲ್ಲೆಂಬಂತೆ ನುಡಿದಳು ವಿನುತ.
ಮದುವೆ ಇಷ್ಟೋಂದು ಅಮುಲ್ಯವೇ ಹೆಣ್ಣಿಗೆ..! ಮೊದಲ ಮದುವೆಯಲ್ಲಿ ಎಷ್ಟೊಂದು ಕನಸುಗಳು ,ಬಯಕೆಗಳು ಸಂಸಾರಿಯಾಗಿ ತಮ್ಮದೆ ಒಂದು ಪುಟ್ಟ ಕುಟುಂಬದಲ್ಲಿ ನೆಮ್ಮದಿಯಾಗಿ ಇರಲು ಬಯಸುವರು ,ಇಷ್ಟಪಟ್ಟಂತೆ ನೇರವೇರಿದರೆ ಸುಖ. ಇಲ್ಲದಿದ್ದರ
ಬಾಳೆಲ್ಲ ಹೊಂದಾಣಿಕೆಯಲ್ಲೆ ಕಳೆಯಬೇಕು. ಗಂಡನನ್ನು ಬಿಟ್ಟರೆ , ಗಂಡ ತೀರಿಕೊಂಡರೆ ಸಮಾಜದಲ್ಲಿ ಆ ಹೆಣ್ಣು ಅನುಭವಿಸುವ ಪಾಡು ವೀಪರೀತ. ತಾನು ಮದುವೆ , ಮುತೈದೆ ,ವಿಧವೆ ಎಲ್ಲವನ್ನೂ ನೋಡಿಯಾಗಿದೆ .ಮರುಮದುವೆ ತನಗೆ ಅನಿವಾರ್ಯವಲ್ಲ.
ಮತ್ತೆ ಅದೇ ಮದುವೆ ಎಂಬ ಬಂಧನದಲ್ಲಿ ಬಿಳಲು ತನಗೆ ಸಾದ್ಯವಿಲ್ಲ . ಎಂದು ಖಂಡಿತವಾಗಿ ಹೇಳಿದಳು. ಹಾಗೆಂದೂ ತಾನೇನು ಯೋಗಿಯ ಸ್ನೇಹ ನಿರಕರಿಸುತ್ತಿಲ್ಲ.
ಮದುವೆಯ ಮುದ್ರೆ ಇಲ್ಲದೆ ಜೀವಿಸುವ ಒಂದು ಗಂಡು ಹೆಣ್ಣಿನ ಬಗ್ಗೆ ಸಮಾಜದಲ್ಲಿ ಇರುವ ದೃಷ್ಟಿ ಕೋನದ ಅರಿವು ಅವರಿಗಿತ್ತು. ಅದೇ ಕದ್ದು ಸಂಬಂದ ಹೊಂದಿದರೆ ನಡೆಯುತ್ತದೆ.ಆದರ
ಮದುವೆಯಾಗದೆ ಒಂದು ಗಂಡು ಬದುಕುತಿದ್ದರೆ ತಪ್ಪು..,! ಅದೇಗೆ..!
ಆದರೆ ವಿನುತ ನಿರ್ದರಿಸಿಯಾಗಿತ್ತು ಯೋಗಿಗೂ ತಿಳಿಸಿದಳು . ಜನರಿಗಾಗಿ ಬಂಧನದಲ್ಲಿ ಬಿದ್ದು ಬದುಕಲಾಗದು. ನಮ್ಮಿಬ್ಬರ ಸ್ನೇಹ ತಮ್ಮಿಬ್ಬರಿಗೆ ಮಾತ್ರ ಸಂಬಂಧ ಪಟ್ಟದ್ದು. ಅವರಿವರಾಡುವ ಮಾತುಗಳಿಗೆ ಪ್ರತಿಕ್ರೀಯಿಸುವ ಅಗತ್ಯವೇನಿದೆ..!ಇನ್ನೂ ಮಕ್ಕಳ ವಿಷಯಕ್ಕೆ ಬಂದರೆ ಒಂದು ಸಂದರ್ಭದಲ್ಲಿ ಅವರಿಗೂ ಅರ್ಥ ವಾಗುತ್ತದೆ .ಇಲ್ಲದಿದ್ದರೆ ತಿಳಿಸಿ ಹೇಳಬೇಕು. ಒಂದು ಸಲ ಮದುವೆಯಾದಮೇಲೆ ಆಯಿತು. ಮತ್ತೊಮ್ಮೆ ಅದೇ ಬಂಧನದಲ್ಲಿ ಬಿಳಲು ವಿನುತಳ ಮನ ಒಪ್ಪಲಿಲ್ಲ .ಹಾಗಂತ ಜೀವನವಿಡಿ ಒಬ್ಬಂಟಿಯಾಗೆ ಕಳೆಯಬೇಕೆಂದೇನು ಅವಳ ನಿರ್ದಾರವಾಗಿರಲಿಲ್ಲ.
ಅವಳ ನಿರ್ದಾರ ಗೌರವಿಸುವ ವ್ಯಕ್ತಿಯೊಂದಿಗೆ ಲಿವ್ ಇನ್ ರೀಲೇಶನ್ ನಲ್ಲಿ ಬದುಕುವದು ಅವಳ ನಿರ್ಧಾರ ವಾಗಿತ್ತು.
ವಿವಾಹ ಮುದ್ರೆಯಡಿಯಲ್ಲಿ ಬದುಕುವವರಿಗೆ ದೊರಕುವ ಗೌರವ ಲಿವ್ ಇನ್ ರಿಲೇಶನ್ಸ್ ನಲ್ಲಿರುವವರಿಗೆ ದೊರಕಲಾರದು ನಮ್ಮ ಸಮಾಜದಲ್ಲಿ.ಇದರ ಅರಿವಿದ್ದೂ ಈ ನಿರ್ಧಾರ ತಳೆದ ವಿನುತಳ ದೈರ್ಯ ಮೆಚ್ಚುಗೆಯಾಯಿತು ಸುಮಿತ್ರಳಿಗೆ. ಇಬ್ಬರು ಯೋಗಿಯೆಡೆ ನೋಡಿದಾಗ ಅವನ ಕಣ್ಣಿನಲ್ಲಿ ಯಾವಾಗಲೂ ವಿನುತಳ ಪ್ರತಿ ಕಾಣುತಿದ್ದ ಪ್ರೀತಿಯೇ ಮಿಂಚುತಿತ್ತು.
.*************
ತುಂಬಾ ತುಂಬಾ ಒಳ್ಳೆಯ ಅಥ೯ಗಭಿ೯ತವಾದ ಕಥೆ ತುಂಬಾ ಚೆನ್ನಾಗಿದೆ.
Kathe ya Modern approach ishtavaaythu. Chennagi barediddeeri
ತುಂಬಾ ಸರಳವಾದ ವಿವರಗಳ ಕಾರಣ ಕತೆ ಚಂದ ಓದಿಸಿಕೊಂಡು ಹೋಗುತ್ತದೆ.
ಜಗತ್ತು ಹೆಣ್ಣನ್ನು ಹೇಗೆ ನಿಂದನೆ ಹಾಗೂ ಅನುಕಂಪದ ಕಣ್ಣುಗಳಿಂದ ನೋಡುತ್ತದೆ ಎಂಬುದನ್ನು ಸೂಕ್ಷ್ಮ ವಾಗಿ ಹೇಳಿದ್ದೀರಿ. ಥ್ಯಾಂಕ್ಸ್