ಕಾವ್ಯಯಾನ
ಅವಳು ನಗುತ್ತಾಳೆ
ನಾಗರೇಖಾ ಗಾಂವಕರ್


ಅವಳು ನಗುತ್ತಾಳೆ
ಹೃದಯದ ಕವಾಟದಲ್ಲಿ
ಹುದುಗಿದ ಹತಾಶೆ ಪಲ್ಲವಿಸುತ್ತದೆ
ಎದೆಹಾಡಿನ ಚರಣವಾಗುತ್ತದೆ.
ಅವಳು ನಗುತ್ತಾಳೆ
ಕಣ್ಣಿನಲ್ಲಿ ಹೂತ
ಆಕ್ರೋಶ ಸ್ಪೋಟಿಸುತ್ತದೆ
ನಕ್ಷತ್ರವಾಗಿ ರಾತ್ರಿಯ ಜೊತೆಯಾಗುತ್ತದೆ.
ಅವಳು ನಗುತ್ತಾಳೆ
ಮನದಾಳದ ಚಿಂತೆ ಚಿಗುರೊಡೆಯುತ್ತದೆ
ಸುತ್ತ ಬಿಗಿದ ಬೇಲಿಗೂ ಹಬ್ಬಿ
ಹೂ ಬಿಡುವ ಮೋಜಿಗೆ
ಬಳ್ಳಿ ಬಳಕುತ್ತದೆ.
ಅವಳು ನಗುತ್ತಾ
ಭಯದ ನಾಲಿಗೆ ಪಠಿಸುತ್ತದೆ
ಯಾರೂ ಓದಲಾಗದ ಗೀತೆಯೊಂದು
ಶೃತಿ ತಪ್ಪದಂತೆ ಲಯಬದ್ಧ
ರಾಗವಾಗಿ ಮೈತಾಳುತ್ತದೆ.
ಅವಳು ನಗುತ್ತಾಳೆ
ಆ ತುಟಿಗಳಲ್ಲಿ ಮೂಡಿದ ಬಿರುಕಿಗೆ
ಗುಡ್ಡಬೆಟ್ಟಗಳು ಕುಸಿಯುತ್ತವೆ
ನೆಲವೊಡೆದು ಲಾವಾ ಉಕ್ಕುತ್ತದೆ
ಆಕಾಶ ನೆಲಕ್ಕುರುಳುತ್ತದೆ
ಉಲ್ಕೆಗಳು ಪತನವಾಗುತ್ತವೆ
ಅವಳ ನಗುವೆಂದರೆ
ಹತಾಶೆ, ಆಕ್ರೋಶ,
ಚಿಂತೆ, ಭಯ,
ಅವಳ ನಗುವೆಂದರೆ
ಬ್ರಹ್ಮಾಂಡವನ್ನೆ ವ್ಯಾಪಿಸುವ ಮಹಾಸ್ಪೋಟ
*****
ಒಳ್ಳೆ ಪದ್ಯ.ಇಷ್ಟವಾಯಿತು ರೇಖಾ
ಚೆನ್ನಾಗಿದೆ ಮೇಡಂ
ಹೆಣ್ಣು ಮತ್ತು ಪ್ರಕೃತಿ (ಅಥವಾ ಭೂಮಿ ಅಂದುಕೊಳ್ಳುವುದೇ ಸರಿಯೇನೋ….?) ಬದಲಾವಣೆ ಹಾಗೂ ಹೆಣ್ಮನದ ತಲ್ಲಣಗಳ ಹೊರಸೂಸುವಿಕೆ… ಚೆಂದದ ಕಾವ್ಯದ ಪ್ರತಿಮೆಗಳಿಂದ ಮನಸನ್ನಾವರಿಸಿತು ಕವಿತೆ … ಅವಳ ನಗುವೆಂದರೆ ಬ್ರಹ್ಮಾಂಡವನ್ನೇ ವ್ಯಾಪಿಸುವ ಮಹಾಸ್ಪೋಟ… ಅರ್ಥಗರ್ಭಿತ ಸಾಲುಗಳು ಚೆಂದದ ಕವಿತೆ ನಾಗರೇಖ…. ಅಭಿನಂದನೆಗಳು