ಅಂಕಣ ಬರಹ

ತೊರೆಯ ಹರಿವು

ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ’ಯೊಡನೆ.

Vaidehi (Kannada writer) - Alchetron, the free social encyclopedia

ಕನ್ನಡದ ಹಿರಿಯ ಹಾಗೂ ಹೆಮ್ಮೆಯ ಲೇಖಕಿ ವೈದೇಹಿ ಅವರ ಒಂದು ಕತೆಯ ಹೆಸರು- ‘ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ’. ಈ ಕತೆಯ ಹೆಸರಲ್ಲಿ ‘ಟಿಪ್ಪಣಿ’ಗೆ ಪದ ಪ್ರಯೋಗವಾಗಿದೆ ಎಂದುಕೊಂಡು, ಇದರಲ್ಲಿ ಕತೆಯ ಬದಲಿಗೆ ವರದಿ ಇದೆ ಎಂದು ಭಾವಿಸಬೇಕಿಲ್ಲ. ಅಥವಾ ಈ ಕತೆಯೊಳಗೆ ಭಾರತೀಯ ಸ್ತ್ರೀಲೋಕದ ರೂಢಿಗಳ ವರದಿ ಇದೆ ಎಂದೂ ಭಾವಿಸಬಹುದು. 

 ಕತೆಯ ಪ್ರವೇಶಿಕೆಯಲ್ಲಿಯೇ ಭಾರತದ ಹಿಂದೂ ಸಮುದಾಯದ ವೈವಾಹಿಕ ಆಚರಣೆಯೊಂದರ ವಿವರಣೆಯಿದೆ. ಸಂಪ್ರದಾಯಸ್ಥ ಸ್ತ್ರೀಯರ ವಾಸ್ತವ ಜೀವನ ನಿರೂಪಣೆಯಿದೆ. ಕಣ್ಮುಂದಿನ ಕೆಲವು ಘಟನಾವಳಿಗಳೊಂದಿಗೆ ಹಿಂದೆ ಆಗಿಹೋದ ಹಲವು ವಿಚಾರಗಳನ್ನು ವಿಮರ್ಶಿಸುತ್ತಾ  ಸಾಗುವ ಕತೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ ಕೆಲವಾರು ಉಪಕತೆಗಳನ್ನು ಮಿಳಿತಗೊಳಿಸಿ ಸಾಗುತ್ತದೆ. ಒಂದು ಮದುವೆ ಸಮಾರಂಭದ ಸಂಭ್ರಮ ಸಡಗರ ಗಡಿಬಿಡಿಯೊಳಗೆ ನಡೆಯುವ ಈ ಕತೆಯು ಹಲವು ವೈರುಧ್ಯಗಳ ಸಂಗಮ ಎನಿಸುತ್ತದೆ. ಪ್ರಶ್ನೆಯಿಂದ ಆರಂಭವಾಗಿ ಪ್ರಶ್ನೆಗಳಿಂದಲೇ ಮುಕ್ತಾಯ ಆಗುವುದು ಅಂತಹ ವೈರುಧ್ಯಗಳಲ್ಲೊಂದು.

          ಹೆಸರಿನಲ್ಲಿ ‘ಸಮಾಜಶಾಸ್ತ್ರಜ್ಞೆ’ ಎಂದು ಇರುವುದರಿಂದ ಆಕೆ ಯಾರು? ಎಂಬ ಕುತೂಹಲದೊಡನೆ ಕತೆಗೆ ಪ್ರವೇಶ ಪಡೆದರೆ, ‘ನನ್ನ ಕಾಲದಲ್ಲಿ ಹೀಗಿತ್ತೆ? ನಾಲ್ಕು ದಿನದ ಮದುವೆ. ಈಗಿನದೆಲ್ಲಾ ಎಂತದು, ಬರೀ ನಾಟಕದ ಹಾಗೆ’ ಎಂದು ಗೊಣಗುತ್ತಾ ಸಮಾಜದ ಬದಲಾವಣೆಯ ಬಗ್ಗೆ ತಮ್ಮ ಟೀಕೆ-ಟಿಪ್ಪಣಿಗೆ ತೊಡಗುವುದರಿಂದ ಎದುರಾಗುವ ವಾಗತ್ತೆಯೇ ಸಮಾಜಶಾಸ್ತ್ರಜ್ಞೆ ಇರಬಹುದೇ ಎಂದು ಸಂಶಯಪಡಬೇಕಾಗುತ್ತದೆ. ಆದರೆ ವಾಗತ್ತೆ ಹಾಗೆ ಸಂಶಯಪಡಲು ಒಂದು ನಿಮಿತ್ತ ಜೀವ.  

       ಹಾಗೆಂದು ಕತೆಯಲ್ಲಿ ವಾಗತ್ತೆಯದು ಕಡೆಗಣಿಸುವ ಪಾತ್ರವಲ್ಲ. ಏಕೆಂದರೆ, ಆಕೆಯ ಮೊಮ್ಮಗಳ ಮದುವೆಯಾದ್ದರಿಂದ ಬಂದವರನ್ನು ಹೋದವರನ್ನು ಕಂಡು ಮಾತನಾಡಿಸುವ, ಉಪಚರಿಸುವ, ಗೊಂದಲ ಗದ್ದಲ ಎದ್ದಾಗ ಸರಿದೂಗಿಸುವ ಜವಾಬ್ದಾರಿಯೆಲ್ಲಾ ಈಕೆಯದ್ದೇ.

ನಡುನಡುವೆ ಮಾತಿನ ಮೂಲಕ ಹೊರಹಾಕುವ ಭಾವಗಳಲ್ಲಿ ತನ್ನ ಕಾಲದ ಹಾಗೂ ಈಗಿನ ಜನರ ರೂಢಿ ಬದಲಾವಣೆಗಳನ್ನು ವಿಮರ್ಶಿಸುವ ವಾಗತ್ತೆ ‘ಸಮಾಜಶಾಸ್ತ್ರಜ್ಞೆ’ ಅಲ್ಲದಿದ್ದರೂ ಸಾಧಾರಣ ಸಾಮಾಜಿಕಳಾಗಿ ವಹಿಸುವ ಪಾತ್ರವನ್ನು ಅತೀ  ಸಾಧಾರಣ ಎಂದು ಪರಿಗಣಿಸುವಂತಿಲ್ಲ. 

 ಮದುವೆ ಮನೆಯಲ್ಲಿ ನಡೆಯುವ ಕತೆಯಾದ್ದರಿಂದ ಅಲಂಕಾರ, ವೈಭವ,ಆಚರಣೆ, ಆದರೋಪಚಾರ, ಮದುವೆಯ ವಯಸ್ಸಿಗೆ ಬಂದವರಿಗೆ ಅಲ್ಲೇ ತಕ್ಕುದಾದ ಸಂಬಂಧ ಕುದುರಿಸುವುದು ಇತ್ಯಾದಿ ಜೊತೆಗೆ ಹಲವು ಹಿರಿಯ ಹೆಂಗಳೆಯರಿಗೆ ಅವರ ಮದುವೆಯ ದಿನಗಳನ್ನು ನೆನಪಿಸಿ ಮಾತಿನ ಮುನ್ನೆಲೆಗೆ ಆ ನೆನಪುಗಳನ್ನು ತರುವುದು ಸಹಜವೇ ಆಗಿದೆ. ಹಾಗೆಯೇ ಆ ಮಾತುಗಳೂ ಸಹ ಮದುವೆಯ ಭಾಗವೇ ಆಗಿ; ಕೊಂಕು, ವ್ಯಂಗ್ಯ, ಹೊಗಳಿಕೆ, ಹುಶಾರಿ ಮೊದಲಾದವುಗಳ ದಿಬ್ಬಣವನ್ನೂ ಹೊರಡಿಸುತ್ತವೆ. 

     ಮುತ್ತೈದೆತನದ ಸೀರೆ-ಒಡವೆಗಳ ವೈಭವದ ಜರಿಯ ನಡುವಲ್ಲೇ ವೈಧವ್ಯದ ನೋವಿನ ಸಾದಾ ಎಳೆಯನ್ನು ಕತೆಗಾರ್ತಿ ತುಸು ಬಿರುಸಾಗಿ ಬೆರೆಸಿ ಕತೆ ನೇಯ್ದಿದ್ದಾರೆ. ಚೆಂದದ ಅಲಂಕಾರದ ಸಂಭ್ರಮದ ಎದುರು ನಿರಾಡಂಬರದ ಕಠೋರತೆಯನ್ನು ಮುಖಾಮುಖಿಯಾಗಿಸಿ, ನೊಂದವರು ನೋಯದವರತ್ತ ನಂಜಿನ ಕಿಡಿ ನುಡಿಗಳ ಹುಡಿ ಹಾರಿಸುವುದನು ಕಾಣಿಸುತ್ತಾರೆ. ಮಾನವ ಸಹಜ ಸ್ವಭಾವದ ಅನಾವರಣ ಮಾಡಿದ್ದಾರೆ.

           ತೋಳಿಲ್ಲದ ರವಿಕೆ ತೊಟ್ಟ ಬಿಡುಬೀಸಿನ ಹುಡುಗಿಯೊಬ್ಬಳು ‘ಬೋಳು ತಲೆಯ ಮೇಲೆ ಕೆಂಪು ಸೆರಗು’ ಹಾಕಿಕೊಂಡವರ ಕಣ್ಣಿನ ಒರಳೆಯೊಳಗೆ ಸಿಲುಕಿ ನರಕ್ ನರಕ್ ಎಂದು ನಜ್ಜುಗುಜ್ಜಾಗುತ್ತಾರೆ. ಇಂಥಾ ಆಧುನಿಕರೂ ಗಟ್ಟಿಗಿತ್ತಿಯರೂ ಆದ ಹೊಸ ತಲೆಮಾರಿನವರು-  ಸ್ವಾತಂತ್ಯ್ರ, ಸೌಭಾಗ್ಯ ಕಳೆದುಕೊಂಡ ಹಳೆಯ ಕಾಲದವರ ಬಾಯಲ್ಲಿ ‘ಹಸಿ ಕೆಸರು’, ‘ಕೋಡಂಗಿ’ ‘ಒಡಕು ಬಾಯಿ’ ಎಂಬಿತ್ಯಾದ ಬಿರುದು ಪಡೆಯುತ್ತಾರೆ. ಅದೇ ಹುಡುಗಿ ಓರಗೆಯವರ ಆಕರ್ಷಣಾ ಕೇಂದ್ರವಾಗಿರುವುದು ಯಾವ ಕಾಲಕ್ಕೂ ಸುಳ್ಳಲ್ಲ.

  ವಾರಿಜೆಯಂತಹ ಅಪ್ಪ ಹೇಳಿದವರಿಗೆ ‘ಬುಡ್ಡೆಂತ ಅಡ್ಡ ಬೀಳುವ’ ಹುಡುಗಿಗೆ ಒಳ್ಳೆಯ ಗಂಡ ಸಿಗಲೆಂಬ ಆಶೀರ್ವಾದ ದೊರೆತರೆ; ಗಂಡಂದಿರನ್ನು ಸಹಜವಾಗಿ ದೈನಂದಿನ ಆಗುಹೋಗುಗಳ ಬಗ್ಗೆ ಪ್ರಶ್ನಿಸಿದರೆ ತಪ್ಪೇನೆಂದು ಕೇಳುವ ಧೈರ್ಯ ತೋರುವ ‘ಸಮಾಜಶಾಸ್ತ್ರಜ್ಞೆ’ಗೆ ಸುಬ್ಬಕ್ಕನಿಗೆ ಸಿಕ್ಕ ‘ಪೀಂಪ್ರೀ’ಯಂತಹ ಗಂಡ ಸಿಗಲೆಂಬ ಶಾಪದ ನುಡಿಗಳು ಧಾರಾಳವಾಗಿ ಸಿಗುತ್ತವೆ.

       ಇಷ್ಟರ ಮೇಲೂ ಹೆಣ್ಣಿಗೆ ಮದುವೆ ವಯಸ್ಸು ಇಪ್ಪತೈದು ಮೀರಬಾರದು ಎಂದು ತಾಕೀತು ಮಾಡುತ್ತಾ ಆಕೆಗೆ ಬೇಗ ಮದುವೆ ಆಗಬೇಕು; ಜಾತಕ – ಹಣೆಬರಹ ಇತ್ಯಾದಿಗಳ ಮೇಲೆ ಒಳ್ಳೆಯ ಗಂಡ ಸಿಗಬೇಕು ಎನ್ನುವ ಮನೋಭಾವವು ಶೇಕಡಾ ನೂರರಷ್ಟು ಪುರುಷ ಪಕ್ಷಪಾತಿಯಾಗಿದೆ.   ಗಂಡು ಹುಡುಗರಿಗೆ ‘ಆತ ದೊಡ್ಡ ಆಫೀಸರಾಗಲಿ’ ಎಂಬ ಸುಯೋಗದ ಕೃಪಾಶೀರ್ವಾದವನ್ನು ಆತ ಬಯಸದಿದ್ದರೂ ನೀಡುತ್ತಾ ಬಂದಿರುವುದನ್ನು ಕತೆಯಲ್ಲಿ ಕಾಣಿಸಿರುವುದು ವ್ಯವಸ್ಥೆಯ ವಾಸ್ತವದ ವಿಡಂಬನೆ. 

  ವಾಗತ್ತೆಯಂಥವರ ದೃಷ್ಟಿಯಲ್ಲಿ ಹೆಣ್ಣಿನ ಬದುಕು ಹಸನಾಗುವುದು ಆಕೆ ಬೇಗ ಮದುವೆ ಆಗುವುದರಿಂದ, ಮೈಮೇಲೆ ಹೇರಿಕೊಂಡ ಸಾಕಷ್ಟು ಚಿನ್ನದಿಂದ, ಎಷ್ಟು ವಿಧೇಯಳು ಎಂದು ಸಮಾಜದಲ್ಲಿ ಗುರುತಿಸಿಕೊಳ್ಳುವುದರಿಂದ. ಆದ್ದರಿಂದಲೇ ಇಂತಹದ್ದಕ್ಕೆ ಹೊರತಾದವರನ್ನು ಕಂಡು ‘ಈಗಿನದು.. ಒಂದು ಶಾಸ್ತ್ರವೇ ಕ್ರಮವೇ!?’ ಎಂದು ಆಕೆ ಮೂಗುಮುರಿದರೆ, ಜೊತೆಗಿರುವ ಮಂದಿ ಹುಬ್ಬೇರಿಸಿ ಹೂಗುಟ್ಟುತ್ತಾರೆ. 

     ಜಾತಕ ನೋಡಿಯೇ ಮದುವೆಯಾಗಿದ್ದರೂ ಹದಿನಾಲ್ಕಕ್ಕೇ ವಿಧವೆಯಾಗಿರುವ ಹೆಬ್ಬಾಗಿಲಜ್ಜಿ, ‘ಈಗಿನವರಿಗೆ ಮದುವೆಗೆ ಜಾತಕವೇ ಬೇಡವಂತೆ!’  ಎನ್ನುವುದನ್ನು ಹಾಸ್ಯವೆಂದು ಸ್ವೀಕರಿಸುವುದು ಹೇಗೆ? ಸ್ವತಃ ಅನ್ಯಾಯಕ್ಕೊಳಗಾಗಿಯೂ ಅದನ್ನು ಅರ್ಥ ಮಾಡಿಕೊಳ್ಳದಿರುವ ಆ ಜೀವದ ಮುಗ್ಧ ಮೌಢ್ಯಕ್ಕೆ ಅಯ್ಯೋ ಎಂದು ವಿಚಾರವಂತ ಓದುಗರ ಮನ ಮರುಗುತ್ತದೆ. 

      ವಾಗತ್ತೆ, ಹೆಬ್ಬಾಗಿಲಜ್ಜಿ, ಕಾಟಜ್ಜಿಯಂತಹವರು ತಮ್ಮಂತೆ ವಿಧವೆಯಾದ ಇತರ ಕೆಲವರು ಕಠೋರ ಬಾಳನ್ನು ಬಾಳದೆ ಅಲ್ಲಲ್ಲಿ ಬದುಕಿನ ಸುಖ ಉಂಡು ಕ್ರಮ ತಪ್ಪಿದರೆ ಸಹಿಸುವುದಿಲ್ಲ. ಜೊತೆಗೆ ಬಾಳುವೆ ನಡೆಸಿ ಏನೊಂದನೂ ಕಾಣಿಸದೇ ಹೋದ ಗಂಡ ಎಂಬ ಹೆಸರಿದ್ದವನಿಗಾಗಿ ತಮ್ಮ ಬದುಕನ್ನು ಬರಡಾಗಿಸಿಕೊಳ್ಳುವುದು ಇವರ ದೃಷ್ಟಿಯಲ್ಲಿ ಮಾನವ ಜನ್ಮದ ಹೆಣ್ಣಿನ ಬಾಳಿನ ಪರಮೋದ್ದೇಶ. ಧರ್ಮಕರ್ಮದ ಹೆಸರಲ್ಲಿ  ನಡೆಯುತ್ತಿರುವ ನಿತ್ಯ ನರಕ ಎಂಬ ಸತ್ಯ ದರ್ಶನ ಅವರಿಗೆ ಯಾವ ಕಾಲಕ್ಕೂ ಆಗಿಬರದೇನೋ…

    ‘ಈಗೆಲ್ಲಾ ಕೂದಲು ತೆಗೆಸದೆ ಇರುವ ಕ್ರಮವೂ ಸರಿಯಲ್ಲವೇ ಅಲ್ಲ. ಗಂಡ ಸತ್ತ ಮೇಲೆ ಯಾಕಿದೆಲ್ಲಾ? ಹಾಗೆ ಕೂದಲಿಟ್ಟುಕೊಂಡರೆ, ಹೆಂಡತಿ ತಲೆ ಮಿಂದ ದಿನ ಒದ್ದೆ ಕೂದಲಿಂದ ಒಂದೊಂದು ಬೊಟ್ಟು ನೀರು ಉದುರಿದ ಹಾಗೂ ನರಕದಲ್ಲಿ ಗಂಡನೆಂಬುವನನ್ನು ಹಿಂಸೆ ಮಾಡುತ್ತಾರಂತೆ..’ ಎಂದೆಲ್ಲಾ ಮಾತನಾಡುವ  ಇವರ ಬದುಕಿನ ಎಲ್ಲಾ ನಡೆ-ನುಡಿಗಳು ಸತ್ತ ಗಂಡನಿಗೆ ಸ್ವರ್ಗ/ನರಕದ ನಿರ್ಧಾರಕಗಳೇ ಆಗಿರುವಂತೆ ತೋರುತ್ತವೆ. ಸಾಯುವವರೆಗೂ ಧರ್ಮ ಬಿಟ್ಟು ಬಾಳಲಾಗದಂತೆ ವಿಧಿಸಿಲಾದ ಘೋರ  ನಿರ್ಬಂಧಗಳು. ಇದನ್ನೇನೆನ್ನುವುದು?!

       ‘ಆ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಚಿನ್ನವೆಲ್ಲಿ ಹಾಕುತ್ತಿದ್ದರು? ಸೊಂಟಕ್ಕೊಂದು ಪಟ್ಟಿ ಹಾಕಿದರೆ ಆಯಿತು….’ ‘ಗಂಡನ ಮನೆಯಲ್ಲಿ ಗೇಯಲಿಕ್ಕೆ ಸೊಂಟಕ್ಕೊಂದು ಪಟ್ಟಿ ಬೇಕೇ ಬೇಕಿತ್ತಲ್ಲ’ ಎನ್ನುವುದೇ ಕಡೆಯ ತೀರ್ಮಾನ ಎಂಬರ್ಥದ ಮಾತುಗಳು ಕತೆಯಲ್ಲಿ ಆಗಾಗ್ಗೆ ಮಾರ್ದನಿಸುತ್ತವೆ.

     ಸುಬ್ಬಕ್ಕನ ಪ್ರಸ್ತಾಪದೊಂದಿಗೆ ಕತೆಯು ಬೇರೆ ದಿಕ್ಕಿಗೆ ಹೊರಳಿದಂತೆ ಕಂಡರೂ ಹೆಚ್ಚಿನದೇನೂ ಬದಲಾವಣೆ ಕಾಣದೆ ಮದುವೆ, ಸ್ತ್ರೀ ಧರ್ಮ, ವೈಭವ-ಒಣಾಡಂಬರ, ಹುಳುಕು ಮುಚ್ಚುವ ಡೌಲು, ಅಸೂಯೆಗಳ ನಡುವೆಯೇ ಸುತ್ತುತ್ತಿರುತ್ತದೆ. ಸುಬ್ಬಕ್ಕನ ಶ್ರೀಮಂತಿಕೆಯು ಆಕೆಯ ಬೇಜವಾಬ್ದಾರಿ ಗಂಡ ಹಾಗೂ ಆತನ ಅಪಾಪೋಲಿ, ಬೇವರ್ಸಿ ಗೆಳೆಯರ ಗುಂಪನ್ನು ಮರೆಮಾಚಿದಂತೆ ಮಾಡಿದರೂ ಇತರರು ಶ್ರೀಮಂತಿಕೆಯ ಮೇಲಿನ ಅಸೂಯೆಯಂತೆ ಒಂದು ಸಣ್ಣ ಈರ್ಷ್ಯೆಯೊಂದಿಗೆ ಇದನ್ನೂ ಎತ್ತಾಡುತ್ತಾ ತಮಗೆ ತಾವೇ ಸಮಾಧಾನ ಮಾಡಿಕೊಳ್ಳುವುದು ಸ್ತ್ರೀಯರ ಅಸಹಾಯಕತೆಯ ಮತ್ತೊಂದು ಮಗ್ಗಲು. ತನ್ನ ಸಂಸಾರದ ಊನವನ್ನು ಶ್ರೀಮಂತಿಕೆಯ ಡೌಲಿನಲ್ಲಿ ಮರೆಮಾಚುವ ಸುಬ್ಬಕ್ಕನ ಬಾಳು ಕತೆಯಲ್ಲದ ವ್ಯಥೆ. ಆದರೆ ಅದನ್ನು ವ್ಯಥೆ ಎಂದು ಮಾತ್ರ ಸ್ವತಃ ಸುಬ್ಬಕ್ಕ  ಒಪ್ಪಿಕೊಳ್ಳುವವಳಲ್ಲ.  

    ಮದುವೆ ಮನೆಯಲ್ಲಿ ಉಡುಗೊರೆ ರೂಪದಲ್ಲಿ ಉಚಿತ ಜವಳಿ ಹಂಚುವ ಪ್ರಸಂಗವೂ ಸಹ ‘ಸರಿಸರಿ ಇದ್ದರೆ ಪರಿಪರಿ ನೆಂಟರು’ ಎಂಬ ಕಠೋರ ಸತ್ಯವನ್ನು ಹೆಣ್ಣಿನ ಸೆರಗಿಗೇ ಗಂಟುಹಾಕುತ್ತದೆ. ಬಾಣಂತನ ಮಾಡಿದ್ದಕ್ಕೆ ಅಳಿಯನ ಮನೆಯ ಕಡೆಯಿಂದ ಮಗಳು ಎಷ್ಟು ಬೆಲೆಯ ಸೀರೆ ಉಡಿಸಿದಳೆನ್ನುವಲ್ಲಿಗೂ ಇದು ತಾಳೆಯಾಗುತ್ತದೆ.  

   ಶ್ರೀಮಂತಿಕೆ ಕಾರಣಕ್ಕಾಗಿಯೇ ಗುರುತಿಸಲ್ಪಡುವ ಸುಬ್ಬಕ್ಕನ ಮೈದುನನ ಮಗಳೇ ಕತೆಯಲ್ಲಿ ಟಿಪ್ಪಣಿಗೆ ಬರೆಯುವ ಸಮಾಜಶಾಸ್ತ್ರಜ್ಞೆ. ಆಕೆ ಓದಿನಲ್ಲೂ ಸಮಾಜಶಾಸ್ತ್ರವನ್ನೇ ಆರಿಸಿಕೊಂಡು  ಓದಿದವಳು. ಈಕೆ ಪುಸ್ತಕದ ಓದಿನಿಂದ ಕಲಿತದ್ದಕ್ಕಿಂತಲೂ ಸುತ್ತಲಿನ ಸಮಾಜ ಗ್ರಹಿಸಿ ತಿಳಿವಳಿಕೆ ಪಡೆದುದು  ಹೆಚ್ಚಿರಬೇಕು. ಹಾಗೆಂದೇ ಈಕೆ ಎಲ್ಲವನ್ನೂ ಟಿಪ್ಪಣಿ ಮಾಡಿಕೊಳ್ಳುತ್ತಾ ತನಗೆ ಅನಿಸಿದ್ದನ್ನು ಹೇಳುತ್ತಾ, ಪ್ರಸಂಗ ಬಂದಾಗ ಪ್ರಶ್ನಿಸುತ್ತಾ ಬರುತ್ತಾಳೆ.  

    ಸುಬ್ಬಕ್ಕ, ವಾಗತ್ತೆಯಂತಹ ಹಳೆಯ ಕಾಲದ, ಹಳೆಯ ಮೌಲ್ಯ ನಂಬಿದವರು ಗಂಡಸರ ನಿರ್ಲಕ್ಷ್ಯವನ್ನು ಒಂದು ಗೌರವದ ನಡೆ ಎಂದು ಪ್ರಶಂಸಿಸುವಾಗ ಈಕೆ ಅದನ್ನು ಪ್ರಶ್ನಿಸುತ್ತಾಳೆ. ಹಾಗಾಗಿಯೇ ಅವಳದ್ದು ‘ಒಡಕು ಬಾಯಿ’; ಆಕೆಯೊಂದು ‘ಹರಾಮಿ ಕುದುರೆ’;  ಹಾಗೂ ಆಕೆ ‘ತಲೆತುಂಬಾ ಮಾತನಾಡುವವಳು’ ಎಂದು ಗುರುತಾಗಿರುತ್ತಾಳೆ. ಈ ಸಮಾಜಶಾಸ್ತ್ರಜ್ಞೆ ತಮ್ಮ ಪರವಾಗಿಯೇ ಮಾತನಾಡುತ್ತಾಳೆ, ಪ್ರಶ್ನಿಸುತ್ತಾಳೆ ಎಂಬ ಅರಿವು ಇದ್ದರೂ ಶೋಷಿತ ಸ್ತ್ರೀವರ್ಗ ಅವಳನ್ನು ವಿರೋಧಿಸುವುದು ವಿಪರ್ಯಾಸ.

  ಕೊನೆಗೆ ‘ಗಂಡು ಸಾಪಾಗಿದ್ದಾನೆ, ಬೇಕಾದಷ್ಟಿದೆ..’ ಎನ್ನುವುದರ ಮೇಲೆ, ಬುಡ್ಡೆಂತ ಕಾಲಿಗೆ ಬೀಳುತ್ತಾ  ಯಂತ್ರಕ್ಕೆ ಕೀಲಿ ಕೊಟ್ಟಂತೆ ನಡೆದುಕೊಳ್ಳುವ ವಾರಿಜೆಯಂತಹ ಹೆಣ್ಣಿನ ಬಾಳಿನ ಅದೃಷ್ಟ ನಿಲ್ಲುತ್ತದೆ. ಎಲ್ಲದಕ್ಕೂ ಒಪ್ಪಿ ತಲೆಯಾಡಿಸುವುದರ ಎಡೆಯಲ್ಲೇ ತನಗೆ ಮದುವೆ ನಿಶ್ಚಯವಾದ ಮಾತುಗಳನು ಕೇಳಿಯೂ ವಾರಿಜಾಳ ಮುಖದಲ್ಲಿ, ಕಣ್ಣಲ್ಲಿ ಸಂತೋಷದ ಕಳೆ ಕಾಣದೇ ಇರುವುದನ್ನು ಸಮಾಜಶಾಸ್ತ್ರಜ್ಞೆಗೆ ಕಾಣುತ್ತಾಳೆ. ತನ್ನ ಸಕಲಾಲಂಕೃತ ದೇಹದೊಡನೆ ಅಪ್ಪ ತೋರಿದ ದಾರಿಯಲ್ಲಿ ದಾಪುಗಾಲು ಹಾಕುತ್ತಾ ಹೋಗುವ ವಾರಿಜೆಯು ಭವಿಷ್ಯದಲ್ಲಿ ಮತ್ತೊಬ್ಬ ವಾಗತ್ತೆಯೋ, ಸುಬ್ಬಕ್ಕನೋ, ಕಾಟಜ್ಜಿಯೋ ಆಗಬಹುದೇನೋ ಎನಿಸುತ್ತದೆ. ಇವಳು ಅವರ ಪ್ರಾಸಂಗಿಕ ಪ್ರತಿನಿಧಿಯಾಗಿರುವುದನ್ನು ಸಮಾಜಶಾಸ್ತ್ರಜ್ಞೆ ಗುರುತಿಸುತ್ತಾಳೆ. 

  ಇಂಥಾ ಎಲ್ಲಾ ಗೊಂದಲ-ಹತಾಶೆಗಳ ನಡುವಲ್ಲೇ, ಲತಾ ಎಂಬ ಕನಸುಗಣ್ಣಿನ ಪ್ರಶ್ನೆಗಾರ್ತಿ ಹಾಗೂ ಸಮಾಜಶಾಸ್ತ್ರಜ್ಞೆ ಎಂಬ ಅರಿವನ್ನು ಕಡೆಯಲ್ಲಿ  ಮುಖಾಮುಖಿಯಾಗಿಸುತ್ತಾರೆ. ಕತೆಯು ಪ್ರಶ್ನೆಯ ಒಳಗೆ, ಪ್ರಶ್ನೆಯು ಕತೆಯ ಒಳಗೆ ಅಂತ್ಯವಾಗುತ್ತದೆ. ಇದು ಕತೆಯ ಅಂತ್ಯವನ್ನು ಮಾತ್ರ ಹೇಳದೆ, ಸಮಾಜಶಾಸ್ತ್ರಜ್ಞೆಯ ಮೂಲಕ ಹಳೆ ಕಾಲದ ಹಳೆಮೌಲ್ಯಗಳ ಅಂತ್ಯವನ್ನೂ ಹೇಳುತ್ತಿರುವಂತಿದೆ. ಒಟ್ಟಾರೆಯಾಗಿ, ‘ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ’ಯು ಭವಿಷ್ಯದಲ್ಲಿ ಸಮಾಜ ಬದಲಾಗುತ್ತಿರುವುದನ್ನು ಸೂಚಿಸುವ ಮುನ್ನುಡಿಯಂತಿದೆ.

-************_

ವಸುಂಧರಾ ಕದಲೂರು

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

Leave a Reply

Back To Top